ಬಿಡುಗಡೆಯ ಬೇಡಿ ಭಾರತದ ಮತಾಂತರ ಕಥನ
ಈ ಶತಮಾನ ಭಾರತೀಯರಿಗೆ ಸಂಘರ್ಷದ ಶತಮಾನ. ಹಿಂದೆಯೂ ಧಾರ್ಮಿಕ ಸಂಘರ್ಷಗಳು ಈ ದೇಶದಲ್ಲಿ ಸಂಭವಿಸಿವೆ. ಶೈವ, ವೈಷ್ಣವ, ವೈದಿಕ, ಬೌದ್ಧ, ಜೈನ ಸಂಘರ್ಷಗಳು ಬಹುಕಾಲ ನಮ್ಮ ಚರಿತ್ರೆಯನ್ನು ರೂಪಿಸಿವೆ. ಆದರೆ ಕಳೆದ ಶತಮಾನದ ಅಂತ್ಯದಲ್ಲಿ ಆರಂಭವಾದ ಹಿಂದುತ್ವ ವರ್ಸಸ್ ಇಸ್ಲಾಂ ಸಂಘರ್ಷ ಇಂದು ದೇಶದ ಪ್ರತಿ ಬೀದಿಯನ್ನು ಮನೆಯನ್ನು, ಮನಸ್ಸುಗಳನ್ನು ಆಕ್ರಮಿಸಿದೆ. ಅದು ಎಷ್ಟರ ಮಟ್ಟಿಗೆ ನಮ್ಮ ಅಭಿಪ್ರಾಯಗಳನ್ನು ರೂಪಿಸುತ್ತಿದೆ ಎಂದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಮಾಸ್ ಇಸ್ರೇಲ್ಗಳ ಸಂಘರ್ಷ ಇಲ್ಲಿ ಮಾನವೀಯ ಸಂವೇದನೆಗಳನ್ನು ಬೆಳೆಸುವ ಬದಲು ಇಸ್ಲಾಂ ಪರ-ವಿರೋಧದ ನಿಲುವು ಗಳನ್ನು ಹುಟ್ಟು ಹಾಕಿದೆ. ಇಷ್ಟಾಗಿ ಒಂದು ಪ್ರಮುಖ ಸಂಗತಿಯನ್ನು ಯಾರೂ ಗಮನಿಸಿರುವ ಹಾಗೆ ಕಾಣುತ್ತಿಲ್ಲ. ಈ ದೇಶದಲ್ಲಿ ಇಷ್ಟು ಬೃಹತ್ ಸಂಖೆಯಲ್ಲಿ ಇಸ್ಲಾಂ ಬೆಳೆಯಲು ಹೇಗೆ ಸಾಧ್ಯವಾಯಿತು?
ಅದನ್ನು ಕುರಿತು ಮೂರು ಸಂಗತಿಗಳನ್ನು ಪ್ರತಿಪಾದಿಸಲಾಗುತ್ತದೆ,
1.ಮುಸ್ಲಿಮ್ ರಾಜರು ಕತ್ತಿಯನ್ನು ಹಿಡಿದುಕೊಂಡು ಭೀತಿಯನ್ನು ಹುಟ್ಟಿಸಿ ಸಮೂಹಗಳನ್ನು ಧಾರ್ಮಿಕವಾಗಿ ಪರಿವರ್ತಿಸಿದ್ದು.
2.ಇಲ್ಲಿರುವ ಧರ್ಮದಿಂದ ಹೊರಗಿದ್ದ ಅಸ್ಪಶ್ಯ ಜನಾಂಗ ಅದನ್ನು ಸ್ವೀಕರಿಸಿದ್ದು.
3.ಅರಬ್ ಹಾಗೂ ಪರ್ಷಿಯನ್ ದೇಶಗಳಿಂದ ಬಂದ ಸೂಫೀ ಸಂತರು ಸಾಮಾನ್ಯ ಜನರನ್ನು ಒಲಿಸಿಕೊಂಡು ಅವರನ್ನು ಪರಿವರ್ತಿಸಿದ್ದು.
ಧರ್ಮಗಳನ್ನು ಸ್ವೀಕರಿಸುವುದು, ಹೊಸ ಧರ್ಮಗಳಿಗೆ ಹಾತೊರೆಯುವುದು ಇಂಡಿಯಾ ದೇಶಕ್ಕೆ ಅಪರೂಪದ ಸಂಗತಿಯಾಗಿರಲಿಲ್ಲ. ಈ ದೇಶದಲ್ಲಿ ಯಾವುದೇ ಧರ್ಮ ಅಧಿಕೃತವಾಗಿ ಸ್ಥಾಪಿತವಾಗುವ ಮೊದಲೇ, ಗೌತಮ ಬುದ್ಧ ಮತ್ತು ಮಹಾವೀರರು ಧರ್ಮವನ್ನು ಆರಂಭಿಸಿದರು. ಅಷ್ಟು ಹೊತ್ತಿಗಾಗಲೇ ವೈದಿಕ ಧರ್ಮ ಅಸ್ತಿತ್ವದಲ್ಲಿದ್ದರೂ ಅದು ಸಾಮಾನ್ಯರನ್ನು ಸೆಳೆದಿರಲಿಲ್ಲ, ಅವರನ್ನು ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ. ಅದೇನಿದ್ದರೂ ಜ್ಞಾನಿಗಳ! ಅಂದರೆ ಬ್ರಾಹ್ಮಣರ ಧರ್ಮವಾಗಿತ್ತು. ಬ್ರಾಹ್ಮಣರು ತಮ್ಮನ್ನು ತಾವೇ ಜ್ಞಾನಿಗಳೆಂದು ಕರೆದು ಕೊಳ್ಳುತ್ತಿದ್ದರು. ಆ ಜ್ಞಾನಿಗಳಿಗೆ ಬೆಂಬಲವಾಗಿ ಅವರನ್ನು ರಕ್ಷಿಸುವ ಕ್ಷತ್ರಿಯರು ಮತ್ತು ಅವರ ವ್ಯವಹಾರಗಳನ್ನು ನಿಯಂತ್ರಿಸುವ ವೈಶ್ಯರುಗಳನ್ನು ಅವರು ಒಳಕ್ಕೆ ಬಿಟ್ಟುಕೊಂಡಿದ್ದರು. ಅವರೆಲ್ಲರು ಸೇರಿ ಎಂದಿಗೂ ಸಹ ನೂರಕ್ಕೆ ಇಪ್ಪತ್ತಕ್ಕಿಂತಲೂ ಹೆಚ್ಚಿರಲಿಲ್ಲ. ಬೃಹತ್ ಜನಸ್ತೋಮ ಅವರಿಂದ ಹೊರಗಿತ್ತು. ಹೊರಗಿದ್ದವರನ್ನು ಶೂದ್ರರೆಂದು ಕರೆಯುತ್ತಿದ್ದರು. ಆ ಶೂದ್ರರಿಗೆ ಎಂದೂ ಸಹ ವೇದಗಳನ್ನು ಓದಲು ಸಾಧ್ಯವಿರುತ್ತಿರಲಿಲ್ಲ ಮತ್ತು ಉಪನಯನ ಪದ್ಧತಿಯಿರಲಿಲ್ಲ. ಅವರು ಒಂದೇ ಬಾರಿ ಹುಟ್ಟುತ್ತಿದ್ದರು, ಒಂದೇ ಬಾರಿ ಸಾಯುತ್ತಿದ್ದರು ಆದರೆ ಈ ಮೂರು ಜನಾಂಗಗಳು ಎರಡೆರಡು ಬಾರಿ ಹುಟ್ಟುತ್ತಿದ್ದರು, ಉಪನಯನ ಧರಿಸಿದಾಗ ಅದು ಎರಡನೇ ಜನ್ಮವೆನ್ನುತ್ತಿದ್ದರು ಅಂದರೆ ಅರಿವಿಗೆ ಬಂದಿದ್ದೀಯ ಧರ್ಮವನ್ನು ಬಳಸಿಕೊಂಡು ಹೋಗು ಧರ್ಮವನ್ನು ಕಾಪಾಡು ಧರ್ಮವನ್ನು ನಡೆ. ಆ ಧರ್ಮವನ್ನು ಹೇಗೆ ಕಾಪಾಡಬೇಕೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಧರ್ಮದ ಪ್ರಮುಖ ಅಂಗಗಳು. ಆತ ತಲೆ, ಈತ ಭುಜ, ಮತ್ತೊಬ್ಬ ಉದರ ಮತ್ತು ಇವರಿಗೆ ಸೇವೆ ಸಲ್ಲಿಸಲು ಒಂದು ಗುಂಪು ಬೇಕಿತ್ತು, ಆ ಬೃಹತ್ ಜನಸ್ತೋಮವೇ ಶೂದ್ರ. ಆ ಶೂದ್ರರನ್ನು ಧರ್ಮದ ಒಳಗೆ ಬಿಟ್ಟುಕೊಳ್ಳುವಹಾಗಿರಲಿಲ್ಲ. ಆತ ಏನಿದ್ದರೂ, ಎಲ್ಲಾ ಜನ್ಮಗಳಲ್ಲಿಯೂ ಶಾಶ್ವತ ಗುಲಾಮ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರುಗಳ ಅಗತ್ಯಗಳನ್ನು ಪೂರೈಸುವುದು, ಅವರ ಸೇವೆ ಮಾಡುವುದು ಅವನ ಕರ್ತವ್ಯವಾಗಿತ್ತು. ಎಷ್ಟೇ ಜನ್ಮಗಳನ್ನು ಹೊತ್ತು ಬಂದರೂ ಬ್ರಾಹ್ಮಣ, ಬ್ರಾಹ್ಮಣನಾಗಿಯೇ ಇರುತ್ತಾನೆ. ಶೂದ್ರ ಶೂದ್ರನಾಗಿಯೆ ಇರುತ್ತಾನೆ ಎಂದು ಅವರು ಪ್ರತಿಪಾದಿಸುತ್ತಿದ್ದರು. ಅವರು ಇಡೀ ಶೂದ್ರ ಜನಸ್ತೋಮವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ, ಮುಟ್ಟುತ್ತಲೂ ಇರಲಿಲ್ಲ ಅಕಸ್ಮಾತ್ ಮುಟ್ಟಿದರೂ ಸ್ನಾನ ಮಾಡಿ ಮಡಿಯನ್ನು ಪಾಲಿಸುತ್ತಿದ್ದರು. ಶೂದ್ರರು ಅವರಿಗೆ ಅಸ್ಪಶ್ಯರಾಗಿದ್ದರು.
ಆ ಸಮಯದಲ್ಲಿ ಬಂದ ಬುದ್ಧ್ದ ಸಮಾನತೆಯನ್ನು ಭೋದಿಸಿದ. ಬುದ್ಧ ವಿಶೇಷವಾದ ಏನನ್ನೂ ಹೇಳಲಿಲ್ಲ, ಮಾನವೀಯ ಸಂವೇದನೆಗಳಿಗೆ ಒತ್ತು ಕೊಟ್ಟ, ಮಾನವೀಯ ಸಂವೇದನೆಗಳನ್ನು ಪಾಲಿಸಲು ಎಲ್ಲರೂ ಸಮಾನರು ಎಂದು ಸಾರಿದ. ಬ್ರಾಹ್ಮಣ ಅಬ್ರಾಹ್ಮಣ, ಶೂದ್ರ ವೈದಿಕ ಅವು ತಪ್ಪು, ಅವು ಅವೈಚಾರಿಕ ಎಂದು ಸಾರಿದ. ಹಿಂದೆ ಶಾಸ್ತ್ರಗಳನ್ನು ಓದುತ್ತಿದ್ದವರು ಪ್ರಶ್ನಿಸಬಹುದಿತ್ತು ಆ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದಾಗಿತ್ತು, ಆದರೆ ಶೂದ್ರರಿಗೆ ಓದುವ ಅಧಿಕಾರವೇ ಇರಲ್ಲಿಲ್ಲ ಅಂದರೆ ಪ್ರಶ್ನಿಸುವ ಸಮಸ್ಯೆಯೆ ಉಂಟಾಗುತ್ತಿರಲ್ಲಿಲ್ಲ. ಆದರೆ ಆ ಪ್ರಶ್ನೆ ಮಾಡುವ ಅಂಶವನ್ನು ಅವರ ತಲೆಗೆ ತುಂಬಿದವನು ಗೌತಮ ಬುದ್ಧ. ನಾವು ಹೇಳುವುದನ್ನೂ ಕೇಳಿಸಿಕೊಳ್ಳಿ, ವೈದಿಕರು ಹೇಳುವುದನ್ನೂ ಕೇಳಿಸಿಕೊಳ್ಳಿ ಆದರೆ ಪ್ರಶ್ನಿಸಿ ಎಂದು ಹೇಳುತ್ತಿದ್ದ. ಅಶೋಕನ ಕಾಲಕ್ಕೆ ಆ ಧರ್ಮ ವ್ಯಾಪಕವಾಗಿ ಹರಡಿತ್ತು. ನಮ್ಮ ಕೆಲವು ವಿದ್ವಾಂಸರು ಹೇಳುವ ಹಾಗೆ ನಮ್ಮ ರಾಜ್ಯದಲ್ಲೇ ನಿರ್ವಾಣಪ್ಪ, ನಿರ್ವಾಣೇಗೌಡ ಇಂತಹ ಪದಗಳು ಎಲ್ಲಿಂದ ಬಂದವು? ನಿರ್ವಾಣ ಎನ್ನುವುದು ಬುದ್ಧನ ಬಹು ಮುಖ್ಯ ತತ್ವ. ಅಂತಹ ಹೆಸರುಗಳನ್ನು ಇಟ್ಟುಕೊಳ್ಳಬೇಕಾದರೇ ಶೂದ್ರ ಜನಾಂಗದಿಂದಲೇ ಆ ಧರ್ಮ ಸ್ಥಾಪನೆಯಾಗಿತ್ತು ಎನ್ನುವ ನಂಬಿಕೆ ಇತ್ತು. ಆದರೆ ವೈದಿಕರು ಬುದ್ಧ್ಧಿವಂತಿಕೆಯಿಂದ ಅವನ್ನು ಕ್ಷತ್ರಿಯ ಗುಂಪಿಗೆ ಸೇರಿಸಿದರು. ವೈದಿಕರು ಸಾಮಾನ್ಯ ಬುದ್ಧಿವಂತರಲ್ಲ ಸಾಮಾಜಿಕ ವ್ಯವಹಾರಗಳಲ್ಲಿ ಎಲ್ಲ ಜನಾಂಗಗಳಿಗಿಂತಲೂ ಹೆಚ್ಚು ಆಳವಾಗಿ ಯೋಚಿಸುವವರು, ಆಳವಾಗಿ ತೊಡಗುವವರು ಮತ್ತು ತಮ್ಮ ನಿಲುವುಗಳನ್ನು ಪ್ರತಿಪಾದಿಸುವವರು. ಶೂದ್ರ ಸಮುದಾಯದಲ್ಲಿ ತಳ ಸಮುದಾಯ, ಮೇಲ್ಸಮುದಾಯ ಎನ್ನುವ ಪ್ರಶ್ನೆಯೇ ಇರಲಿಲ್ಲ ಎಲ್ಲರೂ ಶೂದ್ರರು. ಆ ಶೂದ್ರರಲ್ಲಿ ಯಾರಾದರೂ ತಮ್ಮ ಭುಜಬಲದಿಂದ, ಪರಾಕ್ರಮದಿಂದ ತನ್ನ ಗುಂಪಿನ ಬೆಂಬಲದಿಂದ ರಾಜನಾದರೆ ಅದು ಕ್ಷತ್ರಿಯ ಎಂದು ಸಾರಿಬಿಡುತಿದ್ದರು. ಇಂದಿಗೂ ನೋಡಿ ತಳ ಸಮುದಾಯಕ್ಕೆ ಸೇರಿದ ತಿಗಳರು ತಮ್ಮನ್ನು ತಾವು ಕ್ಷತ್ರಿಯ ಎಂದು ಕರೆದುಕೊಳ್ಳಲು ಬಯಸುತ್ತಾರೆ, ಹಾಗೆಯೇ ಗಂಗರು ರಾಜರಾಗಿದ್ದರು ಎನ್ನುವ ಕಾರಣಕ್ಕೆ ಗಂಗಟಕರ ಒಕ್ಕಲಿಗರು ಸಹ ಇತ್ತೀಚೆಗೆ ನಾವು ಕ್ಷತ್ರಿಯ ಗುಂಪಿಗೆ ಸೇರಿದವರು ಎಂದು ಹೇಳಿಕೊಳ್ಳಲು ಬಯಸುತ್ತಾರೆ. ಖಂಡಿತವಾಗಿಯೂ ಅವರೆಲ್ಲ ಶೂದ್ರ ಜನಾಂಗಗಳೇ. ಶೂದ್ರ ಜನಾಂಗಗಳು ಈ ದೇಶವನ್ನು ಬಹಳಷ್ಟು ಆಳಿವೆ. ವಿಜಯನಗರವನ್ನು ಆಳಿದವರು ನಾಯಕ ಜನಾಂಗದವರು. ಆದರೆ ಅವರೂ ಕ್ಷತ್ರಿಯರೆಂದು ಹೇಳುತ್ತಾರೆ. ಹಾಗೆಯೇ ಬಿಜ್ಜಳ ಕ್ಷೌರಿಕ ಜನಾಂಗಕ್ಕೆ ಸೇರಿದವನು ಆದರೂ ಅವನನ್ನು ಕ್ಷತ್ರಿಯ ಎಂದು ಹೇಳುತ್ತಾರೆ. ಇವರಿಗೆ ಜನರ ಮನಸ್ಸನ್ನು ಯಾವ ರೀತಿ ಆಕರ್ಷಿಸುವುದು ಎಂದು ಗೊತ್ತಿತ್ತು. ಅದೇ ಆಕರ್ಷಣೆಯಲ್ಲೇ ರಾಮನನ್ನು ಆ ಉತ್ತುಂಗಕ್ಕೆ ಎಳೆದುಕೊಂಡು ಹೋಗಿ ರಾಮ ಜನ್ಮಭೂಮಿಯ ವಿಷಯದಲ್ಲಿ ಇಲ್ಲದ ಸಮಸ್ಯೆಯನ್ನು ಇಟ್ಟು ಅಧಿಕಾರವನ್ನು ಹಿಡಿದುಕೊಂಡಿರುವ ಜನಾಂಗ ಅದು. ಅದನ್ನು ನಾವು ಏನೇ ವಿರೋಧಿಸಲಿ ಆದರೆ ಆ ಬುದ್ದವಂತಿಕೆಯನ್ನು ಮೆಚ್ಚಲೇ ಬೇಕು. ಅದು ಜನ ವಿರೋಧಿಯಾಗಿದ್ದರೂ ಸಹ ಅದನ್ನು ಯಾವ ರೀತಿ ಅವರು ಅನುಷ್ಠಾನಕ್ಕೆ ತರುತ್ತಾರೆ ಮತ್ತು ತರಲು ಹೇಗೆ ಶ್ರಮಿಸುತ್ತಾರೆ ಎನ್ನುವುದು ನಮಗೆ ಅಧ್ಯಯನದ ವಸ್ತುವಾಗಬೇಕು.
ಧರ್ಮದಿಂದ ಹೊರಗಿದ್ದ ಶೂದ್ರ ಜನಾಂಗ ಹೆಚ್ಚು ಆಕರ್ಷಿತವಾಗತೊಡಗಿದ್ದು ಬೌದ್ಧ ಧರ್ಮಕ್ಕೆ. ಅಲ್ಲಿನ ಸಮಾನತೆ ಅವರನ್ನು ಆಕರ್ಷಿಸಿತು. ಜೈನ ಧರ್ಮ ಒಂದು ಮುಚ್ಚಿದ ಬಾಗಿಲು, ಹಲವು ಗುಂಪುಗಳನ್ನು ಬಿಟ್ಟು ಯಾರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಹಾಗಾಗಿ ಸಾಕಷ್ಟು ಬೌದ್ಧ ಧರ್ಮಕ್ಕೆ ವಾಲಿದರು. ಬೌದ್ಧ ಧರ್ಮ ಎರಡು ಸಾವಿರ ವರ್ಷಗಳ ಹಿಂದೆ ಸಾಕಷ್ಟು ಉತ್ತುಂಗದಲ್ಲಿತ್ತು. ಅದನ್ನು ಶಂಕರಾಚಾರ್ಯರುಗಳನ್ನು ಸೇರಿಸಿಕೊಂಡು ಬ್ರಾಹ್ಮಣ ಆಚಾರ್ಯರುಗಳು ಹಳ್ಳಕ್ಕೆ ತಳ್ಳಿಬಿಟ್ಟರು. ಯಾವ ರೀತಿ ತಳ್ಳಿದರು ಎನ್ನುವುದು ಬಹಳಷ್ಟು ಪುಸ್ತಕಗಳಲ್ಲಿ ಬಂದಿವೆ. ಅಧ್ಯಯನದ ವಸ್ತುವಾಗಿವೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಈ ವೈದಿಕ ಧರ್ಮಕ್ಕೆ ಅದು ಹೆಚ್ಚು ಪೆಟ್ಟು ಕೊಡಲು ಸಾಧ್ಯವಾಗಲಿಲ್ಲ. ಸಾಮಾನ್ಯ ಜನ ವೈದಿಕ ಧರ್ಮವನ್ನು ಒಪ್ಪಿಕೊಂಡುಬಿಟ್ಟರು. ಶೂದ್ರ ತನ್ನ ಗುಲಾಮಗಿರಿಯನ್ನು ಒಪ್ಪಿಕೊಂಡುಬಿಟ್ಟ. ಮತ್ತು ಶೂದ್ರರನ್ನೇ ಬಳಸಿಕೊಂಡು ಇವರು ಬೌದ್ಧ ಧರ್ಮೀಯರನ್ನು ಹತ್ತಿಕ್ಕತೊಡಗಿದರು. ಆಗ ದೇಶವನ್ನು ಪ್ರವೇಶಿಸಿದ್ದೇ ಮೊಗಲರು. ಮೊಗಲರು ಧರ್ಮವನ್ನು ಹರಡಲು ಖಂಡಿತ ಪ್ರವೇಶಿಸಲಿಲ್ಲ. ಅವರಿಗೆ ಗೊತ್ತಿತ್ತು ಹೆಚ್ಚು ಯುದ್ಧಗಳಲ್ಲಿ ತೊಡಗದ ಮತ್ತು ಒಗ್ಗಟ್ಟಿಲ್ಲದ ಈ ಭಾರತವನ್ನು ಆಳಬಹುದು ಎಂದು ಅರ್ಥ ಮಾಡಿಕೊಂಡು ಪ್ರವೇಶಿಸಿದರು, ಆಳಲು ತೊಡಗಿದರು. ಅವರು ಕತ್ತಿಗಳನ್ನು ಹಿಡಿದುಕೊಂಡು ಜನರನ್ನು ಪರಿವರ್ತಿಸುವುದಕ್ಕೆ ಸಾಮಾನ್ಯ ಜನ ಹಿಂದೂಗಳಾಗಿರಲೇ ಇಲ್ಲ. ಅಥವಾ ವೈದಿಕರಾಗಿರಲಿಲ್ಲ, ಯಾವ ಧರ್ಮಕ್ಕೂ ಸೇರಿರಲಿಲ್ಲ. ಬಹು ಸಂಖ್ಯೆಯ ಬೌದ್ಧ ಧರ್ಮೀಯರು ಆಗ ಆತುಕೊಳ್ಳತೊಡಗಿದ್ದು ಇಸ್ಲಾಂ ಧರ್ಮವನ್ನು, ಏಕೆಂದರೆ ಬೌದ್ಧ ಧರ್ಮಕ್ಕಿಂತಲೂ ಇಸ್ಲಾಂ ಧರ್ಮದ ಮೂಲಕ ಇವರಿಗೆ ನಾವು ವೈದಿಕರನ್ನು ವಿರೋಧಿಸಬಹುದು, ಕಣ್ಣಿಗೆ ಕಣ್ಣಿಟ್ಟು ದೃಷ್ಟಿಸಬಹುದು ಮತ್ತವರನ್ನು ಬಗ್ಗುಬಡಿಯಬಹುದು ಎನ್ನುವ ಒಂದು ನಂಬಿಕೆ ಸಾಮಾನ್ಯರಲ್ಲಿ ಬೆಳೆಯಿತು. ಆ ಸಾಮಾನ್ಯರೇ ಗುಲಾಮರು. ಇಸ್ಲಾಂ ಧರ್ಮದಲ್ಲಿ ಬಹಳಷ್ಟು ಜನ ಗಮನಿಸದ ಒಂದು ಸಂಗತಿಯೆಂದರೆ ಈ ಧರ್ಮ ಗುಲಾಮರ ಪರ ಶೋಷಿತರ ಪರ. ಮಧ್ಯಪ್ರಾಚ್ಯದಲ್ಲಿ ಆರಂಭವಾದ ಇತರ ಎರಡು ಧರ್ಮಗಳಾದ ಯಹೂದಿ ಮತ್ತು ಕ್ರಿಶ್ಚಿಯನ್ ಧರ್ಮಗಳು ತೀರ ಶೋಷಿತರನ್ನು ಬಿಟ್ಟುಕೊಳ್ಳುತ್ತಿರಲಿಲ್ಲ, ಗುಲಾಮಗಿರಿಯನ್ನು ಒಪ್ಪಿಕೊಂಡಿದ್ದವು. ಇಸ್ಲಾಂ ಧರ್ಮ ಕೂಡ ಗುಲಾಮಗಿರಿಯನ್ನು ಒಪ್ಪಿಕೊಂಡರೂ ಆ ಗುಲಾಮ ಇಸ್ಲಾಂ ಧರ್ಮಕ್ಕೆ ಸೇರಿದರೆ ಸಮಾನನಾಗುತ್ತಾನೆ ಎಂದು ನಂಬಿದ್ದರು, ಸಹೋದರತ್ವವನ್ನು ಪಾಲಿಸಬಹುದು ಎಂದು ಸಾರಿದರು.
ಇಸ್ಲಾಂಗೆ ಮುಂಚೆ ಕ್ರಿಶ್ಚಿಯನ್ನರಾಗಲಿ ಅಥವಾ ಯಹೂದಿಗಳಾಗಲಿ ಗುಲಾಮಗಿರಿಯ ಹೆಂಗಸರನ್ನು ದೈಹಿಕ ಬಯಕೆಗಳಿಗೂ ಬಳಸಬಹುದಾಗಿತ್ತು. ಆದರೆ ಅವಳು ಗುಲಾಮಳಾಗಿಯೇ ಇರುತ್ತಿದ್ದಳು. ಅವಳಿಗೆ ಅವಳನ್ನು ಬಳಸುತ್ತಿದ್ದ ಗಂಡಸಿನ ಮೇಲಾಗಲಿ ಅಥವಾ ಅವನ ಕುಟುಂಬದ ಮೇಲಾಗಲಿ ಯಾವ ಹಕ್ಕೂ ಇರುತ್ತಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಆ ಗುಲಾಮ ಮಹಿಳೆಗೆ ಆ ಹಕ್ಕನ್ನು ಕೊಟ್ಟಿದ್ದು ಇಸ್ಲಾಂ ಧರ್ಮ. ಅವಳು ಮುಸ್ಲಿಮನನ್ನು ಮದುವೆಯಾದ ತಕ್ಷಣ, ಲೈಂಗಿಕವಾಗಿ ಸಂಪರ್ಕ ಬೆಳೆಸಿಕೊಂಡ ತಕ್ಷಣ ಅವಳ ಹೊಣೆಗಾರಿಕೆ ಸಹ ಆ ಗಂಡಸಿಗೆ ಸಿಗುತ್ತಿತ್ತು. ಅವಳು ಗುಲಾಮಳಾಗಿಯೇ ಉಳಿದರೂ ಸಂಪತ್ತಿನಲ್ಲಿ ಆಕೆಗೆ ಸ್ವಲ್ಪ ಭಾಗ ಹಕ್ಕಿರುತ್ತಿತ್ತು. ಆದರೆ ಅವಳನ್ನು ಆ ಗಂಡಸಾಗಲೀ ಅಥವಾ ಅವಳೇ ಸ್ವಯಂ ಪ್ರೇರಿತಳಾಗಿ ಇಸ್ಲಾಂ ಧರ್ಮಕ್ಕೆ ಬಂದರೆ ಅವಳ ಗುಲಾಮಗಿರಿ ಕೊನೆಯಾಗುತ್ತಿತ್ತು, ಅವಳು ಮುಸ್ಲಿಮಳಾಗಿರುತ್ತಿದ್ದಳು.
ಹಾಗೆಯೇ ಗುಲಾಮಗಿರಿಯಲ್ಲಿ ಗುಲಾಮ ಸಂತತಿ ಎನ್ನುವುದೇ ದೊಡ್ಡದು. ಗುಲಾಮಿ ಸಂತತಿಯವರು ಇಂಡಿಯಾ ದೇಶದಲ್ಲಿ ರಾಜರಾಗಿದ್ದರು, ಕಾರಣ ಗುಲಾಮಿ ಮಕ್ಕಳಿಗೆ ಆ ಹಕ್ಕನ್ನು ಇಸ್ಲಾಂ ಧರ್ಮ ನೀಡಿತ್ತು. ಮತ್ತೆ ಯಾವುದೇ ಗುಲಾಮನು ಸಹ ಮುಸ್ಲಿಮನಾದರೆ ಮತ್ತು ಮುಸ್ಲಿಮ್ ಧರ್ಮವನ್ನು ಹರಡಲು ಹೊರಟರೆ ಅವನು ಮುಸ್ಲಿಮ್ ಎಂದು ಪರಿಗಣಿಸುತ್ತಿತ್ತು ಮತ್ತು ಗುಲಾಮಗಿರಿ ಕೊನೆಯಾಗುತ್ತಿತ್ತು. ಇದು ಎಲ್ಲ ವಿದ್ವಾಂಸರಿಗೂ ಗೊತ್ತಿರುವ ಸಂಗತಿ. ಕಂಪರೇಟಿವ್ ರಿಲೀಜಿನ್ಸ್ ಅನ್ನು ಅಧ್ಯಯನ ಮಾಡುವ ಎಲ್ಲರು ಹೇಳುವ ಸಂಗತಿ. ಇಂಡಿಯಾ ದೇಶದಲ್ಲಿ ಬಹುತೇಕ ಶೇ.೮೫ಕ್ಕಿಂತಲೂ ಹೆಚ್ಚು ಅಸ್ಪಶ್ಯ, ಶೂದ್ರರು ಗುಲಾಮ ಸ್ಥಿತಿಯನ್ನು ಒಪ್ಪಿಕೊಂಡುಬಿಟ್ಟಿದ್ದರು ಮತ್ತು ಆ ಗುಲಾಮ ಸ್ಥಿತಿಯಲ್ಲಿಯೇ ಇವರನ್ನು ಓಲೈಸುತ್ತಿದ್ದರು ಆದರೆ ಅಸ್ಪಶ್ಯರು ಅದರಿಂದ ಹೊರಗಡೆ ಇದ್ದರು. ಗುಲಾಮಗಿರಿಗೂ ಸಹ ಅವರು ಗುಲಾಮಿಯಾಗಿದ್ದರು. ಅವರು ಯಾವ ಘನತೆ ಇರುವ ಕುಟುಂಬವಾಗಲಿ, ಮನುಷ್ಯರಾಗಲಿ ಮಾಡಲು ಇಷ್ಟಪಡದ ಕೆಲಸಗಳನ್ನು ಮಾಡುತ್ತಿದ್ದರು. ಅದರಲ್ಲಿ ತಲೆಯ ಮೇಲೆ ಮಲ ಹೊರುವುದು, ಚಪ್ಪಲಿ ಹೊಲೆಯುವುದು, ಸತ್ತ ದನದ ಮಾಂಸಗಳ ಚರ್ಮವನ್ನು ಸುಲಿಯುವುದು ಇಂತಹ ಕಾಯಕಗಳು ತುಂಬಿರುತ್ತಿದ್ದವು. ಅವರನ್ನು ಗುಲಾಮ ಎನ್ನುವ ಪದ ನಮ್ಮ ದೇಶದಲ್ಲಿ ಬಳಕೆಯಾಗಿಲ್ಲ. ಶೂದ್ರ ಅಥವಾ ಅಸ್ಪಷ್ಯ ಆದರೆ ಅವರು ಅಕ್ಷರಶಃ ವಾಸ್ತವದಲ್ಲಿ ಗುಲಾಮರಾಗಿದ್ದರು. ಆ ಗುಲಾಮಗಿರಿಯಿಂದ ಹೊರಬರಲು ಅವರು ಬೌದ್ಧ ಧರ್ಮಕ್ಕೆ ಹೋಗುತ್ತಿದ್ದರು. ಆದರೆ ಬೌದ್ಧ ಚಿಂತನೆಗಳು ಅವರಿಗೆ ಎಟುಕುತ್ತಿರಲಿಲ್ಲ, ಆಳವಾಗಿದ್ದವು. ಜೈನ ಧರ್ಮ ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ ಮತ್ತು ವೈದಿಕ ಧರ್ಮಕ್ಕೆ ಬೇರೆ ಯಾವ ಧರ್ಮದಿಂದಲೂ ಯಾರೂ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ, ಅದರ ಬಾಗಿಲು ಮುಚ್ಚಿತ್ತು.
ರಾಜಕೀಯ, ರಾಜ್ಯ ಅವೂ ಸಹ ಧರ್ಮದ ಭಾಗಗಳಲ್ಲ, ಧರ್ಮವು ಅವುಗಳ ಭಾಗ. ಇಂದಿಗೂ ಸಹ ಪ್ರಪಂಚದ ಎಲ್ಲ ದೇಶಗಳಲ್ಲಿ ರಾಜಕೀಯ ಅದನ್ನು ಆವರಿಸಿಯೇ ಮುಂದುವರಿಸಿದೆ. ಅಂದರೆ ರಾಜಕೀಯ ಧರ್ಮವನ್ನು ಮೀರಿದ್ದು. ಒಬ್ಬ ರಾಜ, ಒಬ್ಬ ಪ್ರಧಾನಮಂತ್ರಿ, ಒಬ್ಬ ಸರ್ವಾಧಿಕಾರಿ, ಅವನಿಗಿಷ್ಟವಿಲ್ಲವೆಂದಾಗ ಯಾವುದೇ ಧರ್ಮವನ್ನು ಧಿಕ್ಕರಿಸಿ ಬಿಡಬಹುದು. ಅದನ್ನು ಕುಂಟಿತಗೊಳಿಸಬಹುದು. ಹಾಗಾಗಿಯೇ ರಾಜರು ಇದ್ದ ಸಮಯದಲ್ಲಿ, ಮೊಗಲರು ಇದ್ದ ಸಮಯದಲ್ಲಿ ವ್ಯಾಪಕವಾಗಿ ಸಾಮೂಹಿಕವಾಗಿ ಅಸ್ಪಶ್ಯರು ಆ ಧರ್ಮವನ್ನು ಸೇರಿ ಭದ್ರತೆಯನ್ನು ಪಡೆಯಲು ಸಾಧ್ಯವಾಯಿತು. ಮತ್ತು ಆ ಧರ್ಮದಲ್ಲಿರುವ ಭ್ರಾತೃತ್ವ ಮತ್ತು ಗುಲಾಮಗಿರಿಯ ವಿರುದ್ಧ್ದದ ಮನಸ್ಥಿತಿ ಅವರನ್ನು ಆಕರ್ಷಿಸಿತು. ಇಂದು ಯಾರು ಏನೇ ಹೇಳಲಿ, ಆ ಸೇವಕ ಮನಸ್ಥಿತಿಯ, ಗುಲಾಮ ಮನಸ್ಥಿತಿಗೆ ವಿರುದ್ಧವಾಗೆಯೇ ಜನ ಸಿಡಿದೆದ್ದು ಆ ಧರ್ಮವನ್ನು ಸೇರಿದರು. ಕ್ರಿಶ್ಚಿಯನ್ನರು ಬರುವ ಹೊತ್ತಿಗಾಗಲೇ ಸಾಕಷ್ಟು ಜನ ಸೇರಿದ್ದರು. ಅದರಲ್ಲಿ ಬಹಳಷ್ಟು ಮಂದಿ ಹೊರಗಡೆ ಉಳಿದುಬಿಟ್ಟರು. ಆ ಹೊರಗಡೆ ಉಳಿದುಬಿಟ್ಟ ವ್ಯಕ್ತಿಗಳೇ, ಆ ಜನ ಸಮೂಹವೇ ದಲಿತ ಸಮೂಹ. ಇಂದು ಈ ದೇಶದಲ್ಲಿ ತನ್ನತನವನ್ನು ಉಳಿಸಿಕೊಂಡಿರುವ ನಿಜವಾದ; ಅದು ನಾನು ಪೊಲಿಟಿಕಲಿ ಕರೆಕ್ಟ್, ರಾಜಕೀಯ ಕಾರಣಕ್ಕಾಗಿ ಈ ಪದವನ್ನು ಹೇಳುತ್ತಿಲ್ಲ. ನಾನು ನಂಬಿರುವ ಸಿದ್ಧ್ದಾಂತ ಅದು. ಈ ದೇಶದಲ್ಲಿ ತಾಜಾತನವನ್ನು ಉಳಿಸಿಕೊಂಡಿರುವ ಏಕೈಕ ಸಮೂಹವೆಂದರೆ ದಲಿತ ಸಮೂಹ. ದಲಿತರಲ್ಲಿಯೂ ಸಹ ಎಲ್ಲ ರೀತಿಯ ದುಷ್ಟರಿದ್ದಾರೆ ಭ್ರಷ್ಟರಿದ್ದಾರೆ, ಎಲ್ಲ ರೀತಿಯ ಜನಗಳಿದ್ದಾರೆ. ಆದರೆ ಸಮೂಹವಾಗಿ ತನ್ನತನವನ್ನು ಕಾಯ್ದುಕೊಂಡು ತಾನು ಎಷ್ಟೇ ಸಂಕಷ್ಟವನ್ನು ಅನುಭವಿಸುತ್ತಿದ್ದರೂ ಇತರ ಯಾವ ಧರ್ಮಗಳ ಹಂಗಿಗೂ ಹೋಗದೆ ತನ್ನತನವನ್ನು ಉಳಿಸಿಕೊಂಡು, ಆ ತನ್ನತನವನ್ನು ಉಳಿಸಿಕೊಳ್ಳುವಲ್ಲಿಯೇ ಅದು ಸಹ ಒಂದು ಧರ್ಮವೇನೋ ಎನ್ನುವ ಒಂದು ಬೆಳಕನ್ನು ಬೀರಿದ್ದು ದಲಿತ ಸಮೂಹ.