ವಾಕ್ ಸ್ವಾತಂತ್ರ್ಯ ಹಿನ್ನಡೆಯ ಹೆಜ್ಜೆಗಳು?
ಅಂಕಣಗಾರ್ತಿ, ಪತ್ರಕರ್ತೆ, ಸ್ತ್ರೀ ಸಂವೇದನೆಯಂತಹ ಹಲವು ಆಯಾಮಗಳ ಪ್ರಮುಖ ಬರಹಗಾರ್ತಿ ಸಿ.ಜಿ. ಮಂಜುಳಾ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ‘ಪ್ರಜ್ಞಾ’, ‘ಕಡೆಗೋಲು’ ಇವರ ಅಂಕಣ ಬರಹಗಳು. ಇವರಿಗೆ ‘‘ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, UNFPAಲಾಡ್ಲಿ ಮೀಡಿಯಾ ಪ್ರಶಸ್ತಿ, ಕೆಪಿಸಿಸಿಯ ಇಂದಿರಾ ಗಾಂಧಿ ಸೇವಾ ಪ್ರಶಸ್ತಿ’’ಗಳು ಲಭಿಸಿವೆ. ಮಹಿಳೆಯರ ಆಸ್ತಿ ಹಕ್ಕು ಕುರಿತಾದ ಲೇಖನವು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.
ಇತ್ತೀಚೆಗೆ ತಮ್ಮ ತಿಂಗಳ ‘ಮನ್ ಕಿ ಬಾತ್’ ರೇಡಿಯೊ ಪ್ರಸಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತುಗಳಿವು : ‘ಭಾರತದ ಸಂವಿಧಾನದ ಮೊದಲ ತಿದ್ದುಪಡಿಯು ವಾಕ್ ಸ್ವಾತಂತ್ರ್ಯ ಕಡಿತ ಮಾಡುವುದಕ್ಕೆ ಸಂಬಂಧಿಸಿದ್ದಾಗಿದ್ದುದು ದುರದೃಷ್ಟ’
ವಾಕ್ ಸ್ವಾತಂತ್ರ್ಯವನ್ನು ಬಿಜೆಪಿ ಸರಕಾರ ಹತ್ತಿಕ್ಕುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಸಂದರ್ಭದಲ್ಲಿ ಮೋದಿಯವರ ಈ ಹೇಳಿಕೆ ಮುಖ್ಯವಾಗುತ್ತದೆ. 1951ರ ಮೊದಲ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂದಿನ ಪ್ರಧಾನಿ ನೆಹರೂ ಅವರೇ ಮಂಡಿಸಿದ್ದರು. 19(1) ವಿಧಿಯಲ್ಲಿ ಖಾತರಿ ಪಡಿಸಲಾದ ವಾಕ್ ಸ್ವಾತಂತ್ರ್ಯದ ಹಕ್ಕಿಗೆ ನಿರ್ಬಂಧಗಳನ್ನು ವಿಧಿಸುವ 19(2) ವಿಧಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು. ತಿದ್ದುಪಡಿ ಮಸೂದೆಯು, ‘ಸಾರ್ವಜನಿಕ ವ್ಯವಸ್ಥೆಯ ಹಿತ’, ‘ವಿದೇಶಿ ರಾಷ್ಟ್ರಗಳ ಜೊತೆಗೆ ಸ್ನೇಹಮಯ ಸಂಬಂಧ’, ‘ರಾಷ್ಟ್ರದ ಭದ್ರತೆ’ , ‘ಅಪರಾಧಕ್ಕೆ ಪ್ರಚೋದನೆ’ ಯಂತಹ ವರ್ಗಗಳನ್ನು ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿವೇಚನಾಯುಕ್ತ (ರೀಸನಬಲ್) ನಿರ್ಬಂಧಗಳಾಗಿ ಸೇರ್ಪಡೆ ಮಾಡಿತು. ವಾಕ್ ಸ್ವಾತಂತ್ರ್ಯದ ಸಂದರ್ಭದಲ್ಲಿ ‘ರೀಸನಬಲ್’ ಪದವು ನ್ಯಾಯಾಂಗದ ವ್ಯಾಖ್ಯಾನದ ವ್ಯಾಪ್ತಿಯನ್ನು ವಿಸ್ತರಿಸುವಂತಹದ್ದಾಗಿದೆ ಎಂಬ ಅಭಿಪ್ರಾಯವೂ ಇದೆ. ಹೊಸದಾಗಿ ರಾಷ್ಟ್ರವು ಸ್ವಾತಂತ್ರ್ಯ ಗಳಿಸಿದ ಸಂದರ್ಭದಲ್ಲಿ ಆ ಕಾಲದಲ್ಲಿ ಸೃಷ್ಟಿಯಾದ ಸವಾಲುಗಳೂ ಈ ತಿದ್ದುಪಡಿಗೆ ಕಾರಣಗಳಾಗಿದ್ದವು ಎಂಬ ಅಭಿಪ್ರಾಯವಿದ್ದು ಸರಳವಾದ ನೆಲೆಯಲ್ಲಿ ಇದನ್ನು ತಳ್ಳಿ ಹಾಕುವುದೂ ಕಷ್ಟ.
ಸ್ವಾತಂತ್ರ್ಯ ಬಂದ 25 ವರ್ಷಗಳಲ್ಲೇ ಪತ್ರಿಕಾ ಸ್ವಾತಂತ್ರ್ಯ ಹರಣದ ಕರಾಳ ಅಧ್ಯಾಯವನ್ನು ಸ್ವತಂತ್ರ ಭಾರತ ಕಾಣುವಂತಹ ಸ್ಥಿತಿ ಉಂಟಾದದ್ದು ವಿಪರ್ಯಾಸ. 1975ರ ಜೂನ್ 25ರಿಂದ 21 ತಿಂಗಳ ಕಾಲ ಸೆನ್ಸಾರ್ ಆದ ಸುದ್ದಿಗಳನ್ನು ನೋಡುವ ದುರ್ದೆಶೆಯನ್ನು ದೇಶ ಅನುಭವಿಸಿತು. ತುರ್ತು ಪರಿಸ್ಥಿತಿಯ ನೆನಪುಗಳು ಮರೆಯಾಗುತ್ತಿರುವಂತೆಯೇ ತನಗೆ ಬೇಕಾದಂತೆ ಮಾಧ್ಯಮವನ್ನು ಬಗ್ಗಿಸಬಹುದು ಎಂಬ ವಿಶ್ವಾಸದ ಬಲಿಷ್ಠ ಸರಕಾರದ ಭೀತಿ ಈಗ ಎದುರಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಾದ ಬೆಳವಣಿಗೆಗಳ ಸ್ಥೂಲ ಅವಲೋಕನ, ಇದಕ್ಕೆ ಪುಷ್ಟಿ ನೀಡುತ್ತದೆ.
ಧರ್ಮಾಧಾರಿತ ಅಪರಾಧಗಳ ದಾಖಲೀಕರಣಕ್ಕಾಗಿ ‘ಹೇಟ್ ಟ್ರ್ಯಾಕರ್’ ಎಂಬ ಅಂಕಣವನ್ನು ಆರಂಭಿಸಿದ್ದ ‘ಹಿಂದೂಸ್ತಾನ್ ಟೈಮ್ಸ್’ ಪ್ರಧಾನ ಸಂಪಾದಕ ಬಾಬಿ ಘೋಷ್ ಅವರು 2017ರ ಸೆಪ್ಟಂಬರ್ ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತಾಯಿತು. ‘ಆಧಾರ್’ ಕಾರ್ಡ್ ವಿನ್ಯಾಸದಲ್ಲಿ ಬೃಹತ್ ಡೇಟಾ ಸೋರಿಕೆ ಕುರಿತಾದ ವರದಿಗಳ ಪ್ರಕಟಣೆಗೆ ಅವಕಾಶ ನೀಡಿದ್ದ ಹರೀಶ್ ಖರೆ ಅವರು ‘ದಿ ಟ್ರಿಬ್ಯೂನ್’ ಪತ್ರಿಕೆಯ ಸಂಪಾದಕತ್ವದಿಂದ 2018ರಲ್ಲಿ ಹೊರ ಬರಬೇಕಾಯಿತು. ಎಬಿಪಿ ವ್ಯವಸ್ಥಾಪಕ ನಿರ್ದೇಶಕ ಮಿಲಿಂದ್ ಖಂಡೇಕರ್ ಹಾಗೂ ಎಬಿಪಿ ಟಿವಿಯ ಮಾಸ್ಟರ್ ಸ್ಟ್ರೋಕ್ ಆ್ಯಂಕರ್ ಪುಣ್ಯ ಪ್ರಸೂನ್ ಬಾಜ್ ಪೈ ಅವರು 2018ರ ಆಗಸ್ಟ್ ನಲ್ಲಿ ರಾಜೀನಾಮೆ ನೀಡಿದರು. ಅದೇ ವರ್ಷ ಸೆಪ್ಟಂಬರ್ ನಲ್ಲಿ ಎಬಿಪಿ ನ್ಯೂಸ್ ನ ಅಭಿಸಾರ್ ಶರ್ಮ ರಾಜೀನಾಮೆ ನೀಡಿದರು. ಇವು ಕೆಲವು ಉದಾಹರಣೆಗಳಷ್ಟೇ. ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ವ್ಯಾಪಕ ಹಲ್ಲೆಗಳಿಗೆ ಸಾಂಕೇತಿಕ.
ಕೋವಿಡ್ -19 ಸಾಂಕ್ರಾಮಿಕವು ಸ್ವತಂತ್ರ ವರದಿಗಾರಿಕೆ ಹತ್ತಿಕ್ಕಲು ತಾನಾಗಿಯೇ ಒದಗಿ ಬಂದ ಅವಕಾಶವಾದದ್ದು ದುರಂತ. ಲಾಕ್ಡೌನ್ ಹಾಗೂ ವಲಸಿಗ ಕಾರ್ಮಿಕರ ಬಿಕ್ಕಟ್ಟು ನಿರ್ವಹಣೆ ಕುರಿತಾಗಿ ಆಡಳಿತ ಯಂತ್ರದ ವಿರುದ್ಧದ ಟೀಕೆಗಳು, ಪತ್ರಕರ್ತರ ಮೇಲೆ ಚಾಟಿ ಬೀಸುವುದಕ್ಕೆ ಅನುವು ಮಾಡಿಕೊಟ್ಟಿದ್ದು ವಿಪರ್ಯಾಸ. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ವಿಶೇಷ ಅಧಿಕಾರಗಳ ದುರ್ಬಳಕೆಯು ಪತ್ರಕರ್ತರ ಬಂಧನಗಳಿಗೆ ಕಾರಣವಾದವು. ಪ್ರಶ್ನೆಗಳನ್ನು ಕೇಳುವ ವೃತ್ತಿಧರ್ಮ ಪಾಲನೆಯೇ ಅಪರಾಧವಾಗಿ ಸಂದೇಶವಾಹಕರಿಗೇ ಗುಂಡಿಡುವಂತಹ ಸ್ಥಿತಿ ಇದು.
ಲಾಕ್ಡೌನ್ ಸಂದರ್ಭದಲ್ಲಿ 12 ಮಹಿಳಾ ಪತ್ರಕರ್ತರು ಸೇರಿದಂತೆ ಕನಿಷ್ಠ 228 ಪತ್ರಕರ್ತರು ಹಾಗೂ ಎರಡು ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಎಫ್ಐಆರ್ಗಳು, ಶೋಕಾಸ್ ನೋಟಿಸ್ಗಳು, ಯಾವುದೇ ಅಧಿಕೃತ ಪ್ರಕರಣ ನೋಂದಾಯಿಸದೆ ಪೊಲೀಸರಿಂದ ವಿಚಾರಣೆ, ವಶಕ್ಕೆ ಪಡೆಯುವಂತಹ ಪ್ರಕರಣಗಳು ನಡೆದಿವೆ ಎಂದು ರೈಟ್ಸ್ ಆ್ಯಂಡ್ ರಿಸ್ಕ್ಸ್ ಅನಾಲಿಸಿಸ್ ಗ್ರೂಪ್ನ
ದಿ ಇಂಡಿಯಾ ಪ್ರೆಸ್ ಫ್ರೀಡಂ ರಿಪೋರ್ಟ್ 2020 ದಾಖಲಿಸಿದೆ.
ಕೋವಿಡ್ ತಡೆ ನೆಪದಲ್ಲಿ ಮಾಡಲಾದ ಕೋಮು ಹಿಂಸೆ ವರದಿ ತಡೆಯಲು, ಸಿಎಎ ವಿರುದ್ಧ ಟೀಕೆ, ವಲಸಿಗ ಕಾರ್ಮಿಕರಿಗೆ ಆಹಾರ ಧಾನ್ಯ ನಿರಾಕರಣೆ , ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಸಮಸ್ಯೆ, ನಿರ್ಲಕ್ಷ್ಯಗಳ ಕುರಿತಾದ ವರದಿಗಳನ್ನು ತಡೆಯಲು ಇಂತಹ ಒತ್ತಡ ಕ್ರಮಗಳನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನೂ ಇಂಡಿಯಾ ಪ್ರೆಸ್ ಫ್ರೀಡಂ ರಿಪೋರ್ಟ್ 2020 ಬಹಿರಂಗ ಪಡಿಸಿದೆ. ಪೊಲೀಸ್ ಕ್ರಮ ಜಾರಿಗೊಳಿಸಲು, ಸಂಬಂಧಿಸಿದ ವರದಿ ‘ಫೇಕ್ ನ್ಯೂಸ್’ ಎಂದು ಆರೋಪಿಸಿದರೆ ಸಾಕಾಗುತ್ತಿತ್ತು ಅಷ್ಟೆ ಎಂದೂ ವರದಿಗಳಾಗಿವೆ.
‘ಎಡಿಟರ್ ಮಿಸ್ಸಿಂಗ್’ - ಇದು, ‘ಔಟ್ ಲುಕ್’ ವಾರ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ರುಬೆನ್ ಬ್ಯಾನರ್ಜಿ ಅವರ ಪುಸ್ತಕದ ಹೆಸರು. ಕಳೆದ ವರ್ಷ ಬಿಡುಗಡೆಯಾದ ಈ ಪುಸ್ತಕದಲ್ಲಿ, ಪ್ರಸಕ್ತ ಭಾರತದಲ್ಲಿ ಮಾಧ್ಯಮಲೋಕ ಎದುರಿಸುವ ಹಿತಾಸಕ್ತಿಗಳ ಸಂಘರ್ಷದ ವಿವರಣೆ ಇದೆ.
ಬ್ಯಾನರ್ಜಿ ಅವರು ಮೂರು ವರ್ಷಗಳ ಕಾಲ ‘ಔಟ್ ಲುಕ್’ ವಾರಪತ್ರಿಕೆಯ ನೇತೃತ್ವ ವಹಿಸಿದ್ದರು. 2021ರ ಮೇ 24 ರ ಸಂಚಿಕೆಯ ಮುಖಪುಟವು ಖಾಲಿ ಬಿಳಿ ಪುಟವಾಗಿತ್ತು. ಆ ಪುಟದ ಮೇಲೆ ‘ಮಿಸ್ಸಿಂಗ್’ - ಎಂಬ ಪದವನ್ನು ಕೆಂಪು ಅಕ್ಷರದಲ್ಲಿ ದೊಡ್ಡದಾಗಿ ಮುದ್ರಿಸಲಾಗಿತ್ತು . ಅದರ ಕೆಳಗೆ ಸಬ್ ಹೆಡ್ಡಿಂಗ್ ರೀತಿಯಲ್ಲಿ ವಿವರಗಳನ್ನು ಹೀಗೆ ಪಟ್ಟಿ ಮಾಡಲಾಗಿತ್ತು.
ನೇಮ್ : ಗವರ್ನ್ ಮೆಂಟ್ ಆಫ್ ಇಂಡಿಯಾ
ಏಜ್ : 7 ಯಿಯರ್ಸ್
ಇನ್ ಫಾರ್ಮ್ - ಸಿಟಿಜನ್ಸ್ ಆಫ್ ಇಂಡಿಯಾ.
ಎಂದು ಬರೆಯಲಾಗಿತ್ತು.
ಎರಡನೇ ಕೋವಿಡ್ ಅಲೆ ಸಂದರ್ಭದಲ್ಲಿ ಗವರ್ನ್ ಮೆಂಟ್ ಆಫ್ ಇಂಡಿಯಾ ‘ಮಿಸ್ಸಿಂಗ್’ ಎಂದರೆ ‘ಕಾಣೆಯಾಗಿದೆ’; ಯಾರಿಗಾದರೂ ಕಂಡು ಬಂದಲ್ಲಿ ಭಾರತದ ನಾಗರಿಕರಿಗೆ ‘ಇನ್ ಫಾರ್ಮ್’ ಮಾಡಬೇಕು (ತಿಳಿಸಬೇಕು) ಎಂಬುದನ್ನು ಈ ಮುಖಪುಟ ನಿರ್ದಿಷ್ಟವಾಗಿ ಹೇಳಿತ್ತು. ಆದರೆ ಈ ಮುಖಪುಟದ ಕಾರಣಕ್ಕಾಗಿ ರುಬೆನ್ ಬ್ಯಾನರ್ಜಿ ಅವರು ಉದ್ಯೋಗವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಸೃಷ್ಟಿಯಾಯಿತು.
ಈ ಹಿಂದೆ, ಅಸ್ಸಾಮ್ನಿಂದ ಪಂಜಾಬ್ ಹಾಗೂ ಗುಜರಾತ್ ಗೆ 31 ಆದಿವಾಸಿ ಬಾಲಕಿಯರನ್ನು ಹಿಂದೂಗಳನ್ನಾಗಿಸಲು ಅಕ್ರಮ ಸಾಗಣೆ ಮಾಡಲಾಗಿದ್ದು ಇದರಲ್ಲಿ ಆರೆಸ್ಸೆಸ್ಗೆ ಸಂಪರ್ಕವಿರುವ ಸಂಘಟನೆಗಳು ತೊಡಗಿಕೊಂಡಿವೆ ಎಂಬ ಬಗ್ಗೆ ಪತ್ರಕರ್ತೆ ನೇಹಾ ದೀಕ್ಷಿತ್ ಅವರು ಬರೆದ ತನಿಖಾ ವರದಿಯ ಪ್ರಕಟಣೆಗಾಗಿ 2016ರಲ್ಲಿ ‘ಔಟ್ ಲುಕ್’ ಸಂಪಾದಕ ಕೃಷ್ಣಪ್ರಸಾದ್ ಅವರೂ ಹುದ್ದೆ ಕಳೆದುಕೊಂಡಿದ್ದುದನ್ನು ಸ್ಮರಿಸಬಹುದು.
ಆಡಳಿತದ ವಿರುದ್ಧ ಟೀಕೆಗಳನ್ನು ಮಾಡುವ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳನ್ನು ಛೂ ಬಿಡುವುದಕ್ಕೂ ಕೋವಿಡ್ ಸಾಂಕ್ರಾಮಿಕ ನೆಲೆ ಒದಗಿಸಿತು. ಕೋವಿಡ್ -19 2ನೇ ಅಲೆ ಸಂದರ್ಭದಲ್ಲಿ ಸತ್ತವರಿಗೆ ಸರಿಯಾದ ಅಂತ್ಯ ಸಂಸ್ಕಾರ ಮಾಡಲೂ ಆಗದ ಸ್ಥಿತಿಯಲ್ಲಿದ್ದ ಕುಟುಂಬಗಳಿಂದಾಗಿ ಗಂಗಾ ನದಿಯಲ್ಲಿ ತೇಲಿದ ಹೆಣಗಳು ಹಾಗೂ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ನದಿ ತೀರದ ಮರಳುಗಳಲ್ಲಿ ಹೂತು ಹೋಗಿದ್ದ ಸಾವಿರಾರು ಹೆಣಗಳ ಬಗ್ಗೆ ವರದಿಗಳನ್ನು ಪ್ರಕಟಿಸಿದ ಅತಿ ಹೆಚ್ಚು ಪ್ರಸರಣವಿರುವ ಹಿಂದಿ ಪತ್ರಿಕಾ ಗುಂಪು ‘ದೈನಿಕ್ ಭಾಸ್ಕರ್’ ಆದಾಯ ತೆರಿಗೆ ದಾಳಿಗಳಿಗೆ ಗುರಿಯಾಗಬೇಕಾಯಿತು. ಏಕೆಂದರೆ ಈ ವರದಿಗಳು, ಸಾಂಕ್ರಾಮಿಕವನ್ನು ಜಯಿಸಿದ ಬಗ್ಗೆ ಸರಕಾರ ಪ್ರತಿಪಾದಿಸಿಕೊಳ್ಳುತ್ತಿದ್ದಂತಹ ವಿಜಯದ ಕಥನಗಳಿಗೆ ತದ್ವಿರುದ್ಧವಾಗಿದ್ದವು.
ಸ್ವತಂತ್ರ ಮಾಧ್ಯಮ ಉಪಕ್ರಮಗಳನ್ನು ಪ್ರತಿಪಾದಿಸುತ್ತಿದ್ದ ಕೆಲವು ಸಂಸ್ಥೆಗಳನ್ನೂ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ , ತೆರಿಗೆ ಅಧಿಕಾರಿಗಳು ಹಾಗೂ ಇತರ ಕೇಂದ್ರೀಯ ಸಂಸ್ಥೆಗಳ ಮೂಲಕ ಗುರಿಯಾಗಿಸಿಕೊಂಡು ಕ್ರಮ ಜರುಗಿಸಲಾಯಿತು. ಬಿಬಿಸಿಯ ಮೇಲೂ ಗುಜರಾತ್ ಕುರಿತಾದ ಎರಡು ಸಾಕ್ಷ್ಯ ಚಿತ್ರಗಳಿಗಾಗಿ ಇದೇ ಮಾದರಿ ಅನುಸರಿಸಿದ್ದನ್ನು ನೆನಪಿಸಿಕೊಳ್ಳಬಹುದು 2017ರ ಸೆಪ್ಟಂಬರ್ 5ರಂದು ನಡೆದ ಗೌರಿ ಲಂಕೇಶ್ ಹತ್ಯೆಯೂ ಪ್ರತ್ಯೇಕ ಘಟನೆ ಅಲ್ಲ. ಪತ್ರಕರ್ತರಿಗೆ ಐದು ಅತಿ ಅಪಾಯಕಾರಿ ದೇಶಗಳಲ್ಲಿ ಭಾರತವೂ ಒಂದೆಂದು 2021ರವೇಳೆಗೆ, ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ‘ (ಆರ್ ಎಸ್ಎಫ್) ವರದಿ ಮಾಡಿತ್ತು.
ಅಕ್ರಮ ಮೂಲಗಳಿಂದ ಹಣ ಪಡೆದು ತೆರಿಗೆ ತಪ್ಪಿಸಲಾಗಿದೆ ಎಂಬ ಆರೋಪದ ತನಿಖೆಗಾಗಿ 2022ರ ಮಾರ್ಚ್ನಲ್ಲಿ ಪತ್ರಿಕೋದ್ಯಮದ ಕಾರ್ಯಕ್ರಮವೊಂದಕ್ಕೆ ವಿದೇಶಕ್ಕೆ ಹೋಗುವುದನ್ನು ‘ದಿ ವಾಶಿಂಗ್ಟನ್ ಪೋಸ್ಟ್’ ಅಂಕಣಕಾರ್ತಿ ರಾಣಾ ಅಯ್ಯೂಬ್ಗೆ ತಡೆಯಲಾಯಿತು. ಸಾಬೀತು ಪಡಿಸಲಾಗದ ಆರೋಪದ ಆಧಾರದ ಮೇಲೆ ಆರು ತಿಂಗಳ ಅವಧಿಯಲ್ಲಿ ಎರಡು ಬಾರಿ ಅಯ್ಯೂಬ್ ಅವರ ಬ್ಯಾಂಕ್ ಖಾತೆ ಮತ್ತಿತರ ಆಸ್ತಿಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಆದರೆ, ‘ಗಂಡಾಳಿಕೆ ಹಾಗೂ ಧರ್ಮಾಧಾರಿತ ದಾಳಿಗಳಿವು’ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ವಿಶೇಷ ವರದಿಗಾರರಾದ ಐರೀನ್ ಖಾನ್ ಹಾಗೂ ಮೇರಿ ಲಾಲೊರ್ ಅವರು ಅಯ್ಯೂಬ್ರನ್ನು ಆಗ ಸಮರ್ಥಿಸಿದ್ದರು.
ಫೇಕ್ ಹರಾಜು ಆ್ಯಪ್ (ಬುಲ್ಲಿ ಬಾಯ್) ಮೂಲಕ ಅವಮಾನಿಸುವ, ಅಪಮೌಲ್ಯ ಗೊಳಿಸುವ ಉದ್ದೇಶದ ದಾಳಿಗಳು ಹಾಗೂ ಅತ್ಯಾಚಾರ ಬೆದರಿಕೆಗಳನ್ನು ಮುಸ್ಲಿಮ್ ಮಹಿಳಾ ಪತ್ರಕರ್ತರು ಎದುರಿಸಬೇಕಾದ ಸ್ಥಿತಿಯೂ ಸೃಷ್ಟಿಯಾಯಿತು.
ನ್ಯೂಸ್ ಕ್ಲಿಕ್ ವೆಬ್ಸೈಟ್ ಹಾಗೂ ಆ ಸಂಸ್ಥೆಗೆ ಸಂಬಂಧಪಟ್ಟವರ ಮೇಲೆ ಇತ್ತೀಚೆಗೆ ನಡೆಸ
ಲಾದ ದಾಳಿಗಳ ರೀತಿಗಳು ಹಾಗೂ ಪತ್ರಕರ್ತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದ ರೀತಿಗಳು ಮಾಧ್ಯಮಗಳ ಮೇಲಿನ ದಾಳಿಗಳ ಸ್ವರೂಪವನ್ನು ತಾರಕಕ್ಕೆ ಒಯ್ದಿದೆ.
ದೊಡ್ಡ ಮಾಧ್ಯಮ ಸಂಸ್ಥೆಗಳ ಸ್ವಾಧೀನ, ಮಿತ್ರ ಬಂಡವಾಳಗಾರರಿಂದ ಖರೀದಿ, ಮಾಲಕರ ಮೇಲೆ ನೇರ ಒತ್ತಡಗಳಿಗಷ್ಟೇ ಸಂತೃಪ್ತವಾಗದೆ ಆನ್ಲೈನ್ ಲೋಕದಲ್ಲಿ ಕೆಲಸ ಮಾಡುತ್ತಿರುವ ಸಣ್ಣ ಪ್ಲೇಯರ್ ಗಳನ್ನು ನಿಯಂತ್ರಿಸಲೂ ಸರಕಾರ ಹೊರಟಿದೆ ಎಂಬುದು ಈಗ ಸ್ಪಷ್ಟ. ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಡಿಜಿಟಲ್ ಮೀಡಿಯಾ, ಇಂಟರ್ ನೆಟ್ ನ್ಯೂಸ್ ಸರ್ವೀಸಸ್, ಯೂಟ್ಯೂಬ್ ಸರ್ವೀಸಸ್, ಪಾಡ್ ಕಾಸ್ಟ್ ನಿರ್ಮಾಪಕರು - ಹೀಗೆ ಎಲ್ಲರ ಮೇಲೂ ತನ್ನ ಹಿಡಿತ ಹೆಚ್ಚಿಸಲು ವ್ಯವಸ್ಥಿತ ಪ್ರಯತ್ನಗಳಾಗುತ್ತಿವೆ.
‘ಸಾರ್ವಭೌಮತೆ, ಸಮಗ್ರತೆ, ಭಾರತದ ರಕ್ಷಣೆ ಹಾಗೂ ರಾಷ್ಟ್ರದ ಭದ್ರತೆ ಅಥವಾ ಕಾಗ್ನೈಸಬಲ್ ಅಪರಾಧ ತಡೆ’ಗಾಗಿ ಇಂಟರ್ನೆಟ್ ಕಂಟೆಂಟ್ ತಡೆದು ಪರಿಣಾಮಕಾರಿಯಾಗಿ ಅದನ್ನು ಸೆನ್ಸಾರ್ ಮಾಡಲು 2000ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ 69ಎ ಸೆಕ್ಷನ್ ಅಡಿ ಇರುವ ಸರಕಾರದ ಅಧಿಕಾರಗಳನ್ನು 2021ರ ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳ ಮೂಲಕ ವಿಸ್ತರಿಸಿಕೊಳ್ಳಲಾಗಿದೆ. 2022ರಲ್ಲಿ ಸುಮಾರು 100 ಯೂಟ್ಯೂಬ್ ಚಾನೆಲ್ಗಳನ್ನು ಬ್ಲಾಕ್ ಮಾಡಲು ಸರಕಾರ, ಈ ಅಧಿಕಾರಗಳನ್ನು ಬಳಸಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೇಕಾದ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.
2022ರಲ್ಲಿ ಮಾಡಲಾದ ಇನ್ನಷ್ಟು ತಿದ್ದುಪಡಿಗಳು, ಸಾಮಾಜಿಕ ಮಾಧ್ಯಮದ ಮೇಲೆ ಸರಕಾರದ ಹಿಡಿತವನ್ನು ಬಿಗಿಗೊಳಿಸಲು ಐಟಿ ರೂಲ್ಸ್ ಗಳನ್ನು ಮತ್ತಷ್ಟು ಬಿಗಿಗೊಳಿಸುವುದಕ್ಕೆ ನಾಂದಿಯಾಯಿತು.
ಈ ವರ್ಷ ಎಪ್ರಿಲ್ 6ರಂದು ಅಧಿಸೂಚನೆ ಹೊರಡಿಸಲಾದ, ‘2021ರ ಐಟಿ ನಿಯಮಗಳಿಗೆ 2023ರ ತಿದ್ದುಪಡಿ’ಯು, ‘ಕೇಂದ್ರ ಸರಕಾರದ ಯಾವುದೇ ವ್ಯವಹಾರಕ್ಕೆ ‘ಸಂಬಂಧಿಸಿದಂತೆ ‘ಫೇಕ್ ಅಥವಾ ತಪ್ಪು ಅಥವಾ ತಪ್ಪು ದಾರಿಗೆಳೆಯುವ’ ಮಾಹಿತಿಯನ್ನು ಗುರುತಿಸಲು ಕೇಂದ್ರ ಸರಕಾರದ ಫ್ಯಾಕ್ಟ್ಚೆಕ್ ಯೂನಿಟ್ ಗೆ ಅಧಿಕಾರ ನೀಡುತ್ತದೆ. ಆ ಮೂಲಕ ಯಾವ ಸುದ್ದಿ ಪ್ರಕಟಿಸಬಹುದು, ಬಾರದು ಎಂಬ ಬಗ್ಗೆ ಕೇಂದ್ರ ಸರಕಾರವೇ ಏಕೈಕ ತೀರ್ಪುಗಾರನನ್ನಾಗಿ ಮಾಡಲಾಗಿದೆ.
‘ಫ್ಯಾಕ್ಟ್ಚೆಕ್ ಯೂನಿಟ್’, ಸರಕಾರದ ಪ್ರಚಾರ ಯಂತ್ರವಾಗಿರುವ ‘ಪ್ರೆಸ್
ಇನ್ಫಾರ್ಮೇಷನ್ ಬ್ಯೂರೊ’ ಆಗಿರುತ್ತದೆ ಎಂಬುದು ದೊಡ್ಡ ಅಣಕ. ಇದು ನಿಜಕ್ಕೂ ಕಾರ್ಯಾಂಗದ ಮೇರೆ ಮೀರಿದ ಅಧಿಕಾರ. ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಿತಿ ಮೀರಿದ ಅಧಿಕಾರ ನೀಡಲು ಕಾರಣವಾಗಲಿದೆ ಇದು. ಏಕೆಂದರೆ ಇಲ್ಲಿ ಯಾವುದೇ ಮಾರ್ಗದರ್ಶಿ ಸೂತ್ರಗಳಿಲ್ಲ.ಅಧಿಕಾರ ಕೇಂದ್ರೀಕರಣ ತಡೆಯುವ ಯಾವುದೇ ಸಮತೋಲನದ ಸಾಧನಗಳಿಲ್ಲ. ಇದನ್ನು ಪತ್ರಿಕಾ ಸೆನ್ಸಾರ್ಷಿಪ್ ಎಂದೇ ಕರೆಯಬೇಕಾಗುತ್ತದೆ. ಸಂವಿಧಾನದ 19 (1) (ಎ) ವಿಧಿಯ ಉಲ್ಲಂಘನೆ ಇದು ಎಂಬಂಥ ವ್ಯಾಪಕ ಟೀಕೆಗಳು ಈ ಬಗ್ಗೆ ವ್ಯಕ್ತವಾಗಿವೆ.
ಫ್ಯಾಕ್ಟ್ -ಚೆಕ್ಕಿಂಗ್ (ಸುಳ್ಳು ಸುದ್ದಿ ಪತ್ತೆ) ಘಟಕಗಳನ್ನು ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾ ಗುತ್ತಿದೆ. ಇದು ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆಯಾಗಬಹುದು ಎಂಬುದು ಆ್ಯಕ್ಟಿವಿಸ್ಟ್ ಗಳ ವಾದ . ಕರ್ನಾಟಕವೂ ಸೇರಿದಂತೆ ಕೇರಳ, ತೆಲಂಗಾಣ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದ ಫ್ಯಾಕ್ಟ್- ಚೆಕ್ಕಿಂಗ್ ಘಟಕಗಳ ಸ್ಥಾಪನೆಯ ವಿಚಾರ ವಿವಿಧ ಹಂತಗಳಲ್ಲಿದೆ. ಈ ಪಟ್ಟಿಗೆ ಕಳೆದ ನವೆಂಬರ್ನಲ್ಲಿ ತಮಿಳುನಾಡು ರಾಜ್ಯವೂ ಸೇರ್ಪಡೆಯಾಗಿದೆ.
ಸ್ವತಂತ್ರ ಫ್ಯಾಕ್ಟ್ -ಚೆಕ್ಕಿಂಗ್ ಸುದ್ದಿ ಸಂಸ್ಥೆಗಳೂ ಅಸ್ತಿತ್ವದಲ್ಲಿದ್ದು ಅವು ರಾಜಕೀಯ ಒತ್ತಡಗಳನ್ನು ಎದುರಿಸುತ್ತಿದ್ದು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಆತಂಕ ಹುಟ್ಟು ಹಾಕಿದೆ.
ಈ ಸಂದರ್ಭದಲ್ಲಿ, ‘ಮೀಡಿಯಾ ಒನ್’ ಟಿವಿ ಚಾನೆಲ್ ಮೇಲೆ ಕೇಂದ್ರ ಸರಕಾರದ ಬಹಿಷ್ಕಾರವನ್ನು ರದ್ದು ಮಾಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪತ್ರಿಕಾ ಸ್ವಾತಂತ್ರ್ಯದ ಅಗತ್ಯವನ್ನು ಎತ್ತಿ ಹಿಡಿದಿರುವುದನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಬಹುದು: ‘‘ ಪ್ರಜಾಸತ್ತಾತ್ಮಕ ಗಣರಾಜ್ಯದ ದೃಢವಾದ ಕಾರ್ಯನಿರ್ವಹಣೆಗೆ ಸ್ವತಂತ್ರ ಮಾಧ್ಯಮ ಮುಖ್ಯವಾದದ್ದು. ಪ್ರಜಾಸತ್ತಾತ್ಮಕ ಸಮಾಜದಲ್ಲಿ ಅದರ ಪಾತ್ರ ಮಹತ್ವದ್ದು. ಏಕೆಂದರೆ, ಅದು ಸರಕಾರದ ಕಾರ್ಯನಿರ್ವಹಣೆಯ ಮೇಲೆ ಬೆಳಕು ಚೆಲ್ಲುತ್ತದೆ.ಅಧಿಕಾರಸ್ಥರಿಗೆ ಸತ್ಯವನ್ನು ಹೇಳುವ ಕರ್ತವ್ಯ ಪತ್ರಿಕೆಗಳಿಗಿದೆ. ಜೊತೆಗೆ ಸರಿಯಾದ ದಿಕ್ಕಿನಲ್ಲಿ ಪ್ರಜಾಪ್ರಭುತ್ವ ಸಾಗುವಂತಾಗಲು ನಾಗರಿಕರಿಗೆ ಆಯ್ಕೆಗಳನ್ನು ಮಾಡಲು ಅನುವಾಗುವಂತೆ ವಾಸ್ತವಾಂಶಗಳನ್ನು ಮಾಧ್ಯಮಗಳು ಪ್ರಸ್ತುತಪಡಿಸಬೇಕಾಗುತ್ತದೆ. ಮಾಧ್ಯಮ ಸ್ವಾತಂತ್ರ್ಯದ ನಿರ್ಬಂಧವು ಒಂದೇ ರೀತಿಯ ಗೆರೆಯಲ್ಲಿ ಆಲೋಚಿಸುವಂತೆ ನಾಗರಿಕರನ್ನು ನಿರ್ಬಂಧಿಸುತ್ತದೆ. ಸಮಾಜೋ-ಆರ್ಥಿಕ ನೀತಿಗಳಿಂದ ಸಿದ್ಧಾಂತಗಳವರೆಗೆ ಏಕರೂಪದ ದೃಷ್ಟಿಕೋನವು ಪ್ರಜಾಪ್ರಭುತ್ವಕ್ಕೆ ತೀವ್ರವಾದ ಅಪಾಯವನ್ನು ಒಡ್ಡುತ್ತವೆ’.