ಅಜ್ಜಿ ಪೀಸ್..!
ಅದೊಂದು ರಮಝಾನಿನ ರಾತ್ರಿ. ತರಾವೀಹ್ ನಮಾಝಿಗೆಂದು ಮನೆಯಿಂದ ಮಸೀದಿಗೆ ಹೊರಡುವಾಗ ಗುಡುಗು ಮಿಂಚು ಬಿರುಗಾಳಿಯೊಂದಿಗೆ ಬುರ್ರನೆ ಮಳೆ ಸುರಿಯತೊಡಗಿತು.ಮನೆ ಪಕ್ಕದ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬ ಸುರು ಸುರು ಕಡ್ಡಿ ಪಟಾಕಿ ಹೊತ್ತಿಸಿದಂತೆ ಬೆಂಕಿ ಮಳೆ ಸುರಿಸತೊಡಗಿತು. ಕರೆಂಟ್ ಟಾಟಾ ಹೇಳಿ ಹೊರಟೇ ಬಿಟ್ಟಿತು. ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿ ಕಡೆ ಮಾಮೂಲಿ ವಿಚಾರ. ಕೃಷಿ ಪ್ರಧಾನವಾದ ನನ್ನೂರಲ್ಲಿ ಸ್ವಲ್ಪ ಗಾಳಿ ಬೀಸಿದಾಕ್ಷಣ ಕರೆಂಟ್ ಹೇಳದೇ ಕೇಳದೇ ಹೋಗುವುದು ಸರ್ವೇ ಸಾಮಾನ್ಯ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನನ್ನಂತಹ ಅರೆಕಾಲಿಕ ಕೃಷಿಕನೂ ಒಳಗೊಂಡಂತೆ ಕೃಷಿಕರು ವಿದ್ಯುತ್ ತಂತಿಯ ಮೇಲೆ ನಮ್ಮ ಮರದ ಕೊಂಬೆಗಳೋ, ತೆಂಗು ಕಂಗಿನ ಸೋಗೆಗಳೋ ಮಲಗಿ ಆರಾಮಪಡುತ್ತಿದ್ದರೂ ಅವನ್ನು ಕಡಿಯುವ ಗೋಜಿಗೆ ಹೋಗುವುದೇ ಇಲ್ಲ. ನಮ್ಮ ಮರದ ರೆಂಬೆ ಕೊಂಬೆಗಳು, ಸೋಗೆಗಳ ದೆಸೆಯಿಂದ ಕರೆಂಟ್ ಕೈ ಕೊಟ್ಟರೆ ನಾವದನ್ನು ಗುಪ್ತವಾಗಿಡುತ್ತೇವೆ. ಆದರೆ ಬಿರುಗಾಳಿ ಮಳೆಯ ದೆಸೆಯಿಂದ ಹೈಟೆಂಶನ್ ತಂತಿಗೆ ಮರದ ಕೊಂಬೆಯೋ, ತುದಿಯೋ ತಾಗಿ ಅವುಗಳ ಮೇಲೆ ವಿದ್ಯುತ್ ಪ್ರವಹಿಸಿ ನಮ್ಮ ಅಡಿಕೆ,ತೆಂಗಿನ ತುದಿ ಸುಟ್ಟು ಹಾನಿಯಾದರೆ ಮರುದಿನ ಸೂರ್ಯ ಉದಯಿಸಲು ಪುರುಸೊತ್ತಿಲ್ಲ ಸುಟ್ಟ ತೆಂಗಿನದೋ, ಕಂಗಿನದೋ ಅಡಿಯಲ್ಲಿ ನಿಂತು ಲಬೋ ಲಬೋ ಎಂದು ಊರಿಡೀ ಕೇಳುವಂತೆ ಬಾಯಿ ಬಡಿದುಕೊಳ್ಳುತ್ತೇವೆ. ತಪ್ಪು ನಮ್ಮದೇ ಇದ್ದರೂ ಲೈನ್ಮೆನ್ಗೆ, ವಿದ್ಯುತ್ ಇಲಾಖೆಗೆ, ಗ್ರಾಮ ಪಂಚಾಯತ್ಗೆ, ಕೊನೆಗೆ ನಮ್ಮ ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯನಿಗೆ ಹೀಗೆ ಸಿಕ್ಕ ಸಿಕ್ಕವರಿಗೆಲ್ಲಾ ಹಿಡಿ ಶಾಪ ಹಾಕುತ್ತೇವೆ. ಬ್ಯಾರಿ ಭಾಷೆಯಲ್ಲೊಂದು ಗಾದೆ ಮಾತಿದೆ. ‘ಚತ್ತೆ ಪೈಗ್ ಪಾಲ್ ಯಾರ’ ಅಂದರೆ ಸತ್ತ ದನ ಜಾಸ್ತಿ ಹಾಲು ಕೊಡುತ್ತಿತ್ತು ಎಂಬಂತೆ ನಾಲ್ಕು ಚೆಂಡಾಳೆಯಿರುವ ತೆಂಗೋ, ನಾಲ್ಕು ಕೊಳೆರೋಗ ಹಿಡಿದ ಅಡಿಕೆ ಇರುವ ಕಂಗೇ ಆದರೂ ತುದಿಯೇ ಕಾಣದಂತೆ ಕಾಯಿ ಕೊಡುತ್ತಿದ್ದ ತೆಂಗೆಂದೋ, ಅಡಿಕೆಯ ಭಾರಕ್ಕೆ ತುದಿ ಬಾಗಿದ್ದ ಕಂಗೆಂದೋ ಅದಕ್ಕೆ ಇಲ್ಲದ ವಿಶೇಷಣ ಕಟ್ಟಿ ಊರಿಡೀ ಟಾಂ ಟಾಂ ಮಾಡುತ್ತೇವೆ. ಗ್ರಾಮ ಪಂಚಾಯತಿಯ ಸಿಬ್ಬಂದಿ ಬಾಗಿಲು ತೆರೆಯುವ ಮುನ್ನವೇ ನಮ್ಮ ಅಹವಾಲು ಹಿಡ್ಕೊಂಡು ಅಲ್ಲಿಗೆ ಹಾಜರಾಗುತ್ತೇವೆ.ಅಲ್ಲಿನ ಜವಾನನೋ, ಕಾರ್ಯದರ್ಶಿಯೋ, ಪಂಚಾಯತ್ ಸದಸ್ಯನೋ ನಮ್ಮ ಕಂಗು, ತೆಂಗು ಸುಟ್ಟು ಹೋಗಲು ಕಾರಣ ಎಂಬಂತೆ ಯಾರು ಸಿಗುತ್ತಾರೋ ಅವರಲ್ಲಿ ದನಿಯೆತ್ತರಿಸಿ ಮಾತನಾಡಿ ಜಗಳಕ್ಕೆ ನಿಂತು ಬಿಡುತ್ತೇವೆ. ಗ್ರಾಮ ಸಭೆಯಲ್ಲಿ, ವಾರ್ಡ್ ಸಭೆಯಲ್ಲಿ, ಜಮಾ ಬಂದಿಯಲ್ಲಿ ಹೀಗೆ ಇದ್ದ ಬದ್ಧ ಗ್ರಾಮಾಡಳಿತ ಸಭೆಯಲ್ಲಿ ನಮ್ಮದು ಅದೇ ದೂರು. ವರ್ಷ ಕಳೆದರೂ ಸುಟ್ಟು ಹೋದ ಮರವನ್ನು ನೆನೆದೂ ನೆನೆದು ಅಳುವುದನ್ನು, ಗುಣಗಾನ ಮಾಡುವುದನ್ನು, ನಿಲ್ಲಿಸುವುದಿಲ್ಲ.
ಇಂತಹದ್ದೊಂದು ನಷ್ಟ ಸಂಭವಿಸುವುದಕ್ಕಿಂತ ಮುಂಚೆ ಲೈನ್ಮೆನ್ ಬಂದು ಹತ್ತಾರು ಬಾರಿ ನೋಡಿ ಸಾಹೇಬ್ರೆ, ನಿಮ್ಮ ಮರದ ಸೋಗೆ ರೆಂಬೆ ವಿದ್ಯುತ್ ತಂತಿಗೆ ತಾಗುತ್ತಿದೆ. ಬಿರುಗಾಳಿ ಮಳೆಗೆ ಅದೇನಾದರೂ ಬಿದ್ದರೆ ತಂತಿ ತುಂಡಾಗಬಹುದು, ಕರೆಂಟ್ ಕೈ ಕೊಡಬಹುದು, ಹೈ ಟೆಂಶನ್ ತಂತಿ ತಾಗಿದರೆ ನಿಮ್ಮ ಮರಕ್ಕೆ ಅಪಾಯ ಸಂಭವಿಸಬಹುದು ಎಂದರೆ ‘ಹಾಂ ಬುದ್ಧಿ ಹೇಳಲು ನೀನೊಬ್ಬ ಬಾಕಿಯಿದ್ದೆ, ನಿನಗ್ಯಾರು ಗಾಳಿ ಹಾಕಿ ಕಳುಹಿಸಿದ್ದು’ ಎಂದು ಲೈನ್ಮೆನ್ನನ್ನೇ ತರಾಟೆಗೆ ತೆಗೆದುಕೊಳ್ಳುತ್ತೇವೆ. ಕೊನೆಗೆ ಬಡಪಾಯಿ ಲೈನ್ಮೆನ್ ನನಗೇನಾಗಬೇಕು ಎಂದು ಮನದಲ್ಲೇ ಹಿಡಿ ಶಾಪ ಹಾಕಿಕೊಂಡು ಹೋಗುತ್ತಾನೆ.
ಒಂದು ವೇಳೆ ನಮ್ಮದಲ್ಲದೆ ಬೇರೆ ಯಾರದೋ ಕಂಗು,ತೆಂಗಿನ ಸೋಗೆಯೋ, ಮರದ ಗೆಲ್ಲೋ ವಿದ್ಯುತ್ ತಂತಿಗೆ ತಾಗುವಂತಿದ್ದರೆ ನಾವು ಬಹಳ ಸಾಚಾಗಳಾಗಿ ಬಿಡುತ್ತೇವೆ. ಊರವರಿಗೆ ಅದರಿಂದ ಆಗಬಹುದಾದ ತೊಂದರೆ ಬಗ್ಗೆ ನಮಗೆ ತೀರದ ಚಿಂತೆ.ಊರಲ್ಲೆಲ್ಲಾದರೂ ಲೈನ್ಮೆನ್ನನ್ನು ಕಂಡರೆ ಅವನಿಗೆ ನಮಸ್ಕಾರ ಹೊಡೆದು ಎಲ್ಲಿಗೆ..ಎಲ್ಲಿ ಕೆಲ್ಸ ಇದೆ ಎಂದು ಆತನನ್ನು ಮಾತಿಗೆಳೆಯುತ್ತೇವೆ. ಆತ ಯಾವುದೋ ಸಮಸ್ಯೆಯ ಕುರಿತಂತೆ ನಮ್ಮಲ್ಲಿ ಬಾಯಿಬಿಡಲು ಪುರುಸೊತ್ತಿಲ್ಲ ಹಾಗೂ ಹೀಗೂ ಸುತ್ತಿ ಬಳಸಿ ವಿದ್ಯುತ್ ತಂತಿಗೆ ತಾಗುತ್ತಿರುವ ಅಥವಾ ತಾಗಬಹುದಾದ ಮರದ ಬಗ್ಗೆ ಹೇಳಿಯೇ ಬಿಡುತ್ತೇವೆ. ಮತ್ತೆ ಅರ್ಧದಲ್ಲೇ ಮಾತು ತುಂಡರಿಸಿದಂತೆ ನಾಟಕವಾಡಿ ನನಗೇಕೆ ಊರ ಉಸಾಬರಿ..ಕರೆಂಟ್ ಹೋದರೇನು ನನಗೊಬ್ಬನಿಗೆ ಹೋಗುತ್ತಾ..? ಇಡೀ ಊರಿಗೆ ಹೋಗುತ್ತಲ್ವಾ..? ಇನ್ನು ಚಾಡಿ ಹೇಳಿದೆನೆಂಬ ಅಪವಾದ ನಾನು ಯಾಕೆ ಹೊತ್ತುಕೊಳ್ಳಬೇಕು ಬಿಡಿ ಸ್ವಾಮಿ ಎನ್ನುತ್ತಾ ಜಾಗ ಖಾಲಿ ಮಾಡುತ್ತೇವೆ.
ಲೈನ್ಮೆನ್ನ ತಲೆಗೆ ಹುಳ ಬಿಟ್ಟರೆ ಮುಂದೆ ಆತನಿಗೆ ಅದರ ಹಿಂದೆ ಬೀಳದೇ ಅನ್ಯ ದಾರಿಯಿರುವುದಿಲ್ಲ.
ಹಾಂ.. ಅಂದ ಹಾಗೆ ಅಜ್ಜಿ ಪೀಸ್ನ ಕತೆ ಮರೆತೇ ಬಿಟ್ಟೆ. ತರಾವೀಹ್ ನಮಾಝಿಗೆಂದು ಮಸೀದಿ ತಲುಪಿದ್ದೆ. ನಮಾಝ್ಗೆ ಇನ್ನೂ ಐದು ನಿಮಿಷವಿತ್ತು. ಕರೆಂಟ್ ಹೋದ ಬಗ್ಗೆ ಅಲ್ಲಿ ದೇಶಾವರಿ ಚರ್ಚೆ ನಡೆಯುತ್ತಿತ್ತು. ಇನ್ವರ್ಟರ್ ಚಾಲೂ ಇದ್ದುದರಿಂದ ಮಸೀದಿಯ ಫ್ಯಾನ್ಗಳನ್ನು ಆಫ್ ಮಾಡಿ ಅಗತ್ಯದ ಬರೇ ನಾಲ್ಕಾರು ಬಲ್ಬ್ಗಳನ್ನು ಮಾತ್ರ ಉರಿಸಿದ್ದರು.
ಅಷ್ಟೊತ್ತಿಗೆ ಮಸೀದಿ ಪಕ್ಕದ ಅದ್ರಾಮ ಬ್ಯಾರಿಯೂ ಚರ್ಚೆಗೆ ಸೇರಿಕೊಂಡರು. ಕರೆಂಟ್ ಬಂತು ಮಾರ್ರೆ.. ಆದರೆ ಡಿಮ್ಮು. ಅಜ್ಜಿ ಪೀಸ್ ಹೋಗಿರಬೇಕು ಎಂದರು. ಎಲ್ಲರೂ ಹೌದು ಅಜ್ಜಿ ಪೀಸೇ ಹೋಗಿರಬೇಕು ಎಂದರು. ಈ ಅಜ್ಜಿ ಪೀಸ್ ಹೋದರೆ ಅದೊಂದು ದೊಡ್ಡ ತಲೆನೋವು ಮಾರ್ರೆ ಎಂದು ಅಲ್ಲೇ ಇದ್ದ ಮೋನು ಬ್ಯಾರಿ ದನಿಗೂಡಿಸಿದರು. ಮೋನು ಬ್ಯಾರಿ ಹೇಳಿದ್ದರಲ್ಲಿ ಸತ್ಯವೂ ಇದೆ. ಅದೊಂದು ತ್ರಿಶಂಕು ಸ್ವರ್ಗದಂತಹ ಸ್ಥಿತಿ. ಅತ್ತ ಪೂರ್ತಿ ಕರೆಂಟ್ ಹೋಗಿರುವುದೂ ಇಲ್ಲ. ಇದ್ದ ಅರೆ ಬರೆ ಕರೆಂಟಲ್ಲಿ ಏನೂ ಮಾಡುವಂತಿಲ್ಲ. ಡಿಮ್ಮಾಗಿ ಬಲ್ಬು ಉರಿಯುತ್ತಿದ್ದರೆ ವೋಲ್ಟೇಜ್ ಒಮ್ಮೆ ಏರುವುದು, ಮತ್ತೆ ಕಡಿಮೆಯಾಗುವುದು ಆಗುತ್ತಲೇ ಇರುವುದರಿಂದ ಕೆಲ ವಿದ್ಯುತ್ ಉಪಕರಣಗಳು ಕೆಟ್ಟು ಬಿಡುವ ಅಪಾಯವೂ ಇದೆ. ನನ್ನ ಮನೆಯಿರುವ ಪ್ರದೇಶದಲ್ಲಿ ಮೂರು ದಿಕ್ಕಿಗೆ ಎತ್ತರದಲ್ಲಿ ಕಾಡು. ಇನ್ನೊಂದು ದಿಕ್ಕಿಗೆ ತಗ್ಗಿನಲ್ಲಿ ಅಡಿಕೆ, ತೆಂಗಿನ ತೋಟಗಳು. ಆದುದರಿಂದ ಮಳೆ ಮತ್ತು ಚಳಿಗಾಲದಲ್ಲಿ ಮಲೆನಾಡಿನಂತಹ ಚಳಿಯಿರುತ್ತದೆ. ನನಗೊಂದು ಅಭ್ಯಾಸವಿದೆ, ಎಂತಹ ಚಳಿಯಿರಲಿ ಫ್ಯಾನ್ ಆನ್ ಮಾಡದೇ ನಿದ್ರೆ ಹತ್ತುವುದಿಲ್ಲ. ನನ್ನ ಮನಸ್ಸು ಫ್ಯಾನ್ನ ಸದ್ದಿಗೆ ಅದೆಷ್ಟು ಒಗ್ಗಿ ಹೋಗಿದೆಯೆಂದರೆ ಗಾಳಿಯ ಅಗತ್ಯವಿಲ್ಲದಿದ್ದರೂ ಫ್ಯಾನಿನ ಗೂಂ..ಗೂಂ..ಗುರ್ರ್ ಸದ್ದು ನನಗೊಂಥರಾ ಇಂಪಾದ ಸಂಗೀತದಂತೆ. ಆ ಸದ್ದಿಲ್ಲದಿದ್ದರೆ ನಿದ್ರೆ ಹತ್ತುವುದೇ ಇಲ್ಲ. ಹಾಗೆಂದು ಫ್ಯಾನಿನ ಸದ್ದಿನ ಸಂಗೀತ ಆಲಿಸುತ್ತಾ ನಿದ್ರೆಗೆ ಜಾರೋಣವೆಂದು ವೋಲ್ಟೇಜ್ ಏರಿಳಿತವಾಗುವಾಗ ಫ್ಯಾನ್ ಆನ್ ಮಾಡಿದ್ರೆ ಅದರ ವೈಂಡಿಂಗ್ ಹೋಗುವ ಅಪಾಯವಿದೆ.ಉಗುಳಲೂ ಆಗದ ನುಂಗಲೂ ಆಗದ ಬಿಸಿ ತುಪ್ಪ ಬಾಯಲ್ಲಿಟ್ಟ ಸ್ಥಿತಿ.
ಈ ಡಿಮ್ ಇರುವ ಬಲ್ಬ್ ಉರಿಸಿದರೆ ಅದೇನೋ ಸೂತಕದಂತಹ ಸ್ಥಿತಿ. ಹಿಂದೆಲ್ಲಾ ಈಗಿನಂತೆ ಸಿಎಫ್ಎಲ್ ನಂತಹ ಅತೀ ಬೆಳಕಿನ ಬಲ್ಬೋ, ಟ್ಯೂಬೋ ಇರಲಿಲ್ಲ. ಸಾದಾ ಟ್ಯೂಬು ಇತ್ತಾದರೂ ಅದು ಆಗಾಗ ಕೆಟ್ಟು ನಿಲ್ಲುವುದು ಸರ್ವೇ ಸಾಮಾನ್ಯ. ಮಂದ ಬೆಳಕಾದರೂ ನಲ್ವತ್ತು ವ್ಯಾಟಿನ ಬಲ್ಬ್ ಮಾತ್ರ ಅತ್ಯಂತ ನಂಬಿಕೆಗರ್ಹ ಬೆಳಕಿನ ಸಾಧನ. ಆದರೇನು ಮಾಡುವುದು ಈ ನಲ್ವತ್ತು ವ್ಯಾಟ್ನ ಬಲ್ಬ್ ಉರಿಯುತ್ತಿದ್ದರೆ ಅದೇನೋ ಸೂತಕದ ಛಾಯೆ ಇರುವಂತೆ ಕಾಣುತ್ತಿತ್ತು. ಆಗಿನ ಬಲ್ಬ್ಗಳಲ್ಲಿ ಅತೀ ಹೆಚ್ಚು ಬೆಳಕು ನೀಡುತ್ತಿದ್ದ ಬಲ್ಬ್ ವಾಂಟೆ ಬಲ್ಬ್..ವಾಂಟೆ ಎಂದರೆ ಬ್ಯಾರಿ ಭಾಷೆಯಲ್ಲಿ ಕೊಳವೆ ಎಂದರ್ಥ. ನಾನು ಎಳೆಯ ವಯಸ್ಸಿನಲ್ಲಿ ಕಂಡ ವಾಂಟೆ ಕಟ್ಟಿಗೆ ಇಟ್ಟು ಉರಿಸುವ ಒಲೆಗೆ ಅಮ್ಮ ಫೂ ಫೂ ಎಂದು ಊದಿ ಬೆಂಕಿಯ ತೀವ್ರತೆ ಹೆಚ್ಚಿಸುತ್ತಿದ್ದ ವಾಂಟೆ ಮಾತ್ರ. ಆಗೆಲ್ಲಾ ಈ ವಾಂಟೆಗೂ ವಾಂಟೆ ಬಲ್ಬಿಗೂ ಏನಪ್ಪಾ ಸಂಬಂಧ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದೆ. ಹೈಸ್ಕೂಲ್ಗೆ ಬರುವಷ್ಟು ಹೊತ್ತಿಗೆ ಅದು ವಾಂಟೆ ಅಲ್ಲ ಒನ್ ಟೆನ್ ವ್ಯಾಟ್ನ ಬಲ್ಬ್ ಎಂದು ಗೊತ್ತಾಯಿತು.ಈ ಟ್ಯೂಬ್ ಲೈಟ್ ವಾಂಟೆಯಾಕಾರವಿದ್ದುದರಿಂದ ಕೆಲವರು ಅದಕ್ಕೆ ವಾಂಟೆ ಬಲ್ಬ್ ಎನ್ನುತ್ತಿದ್ದುದೂ ಉಂಟು.
ನಾನು ಚಿಕ್ಕವನಿದ್ದಾಗಲೂ ಅಷ್ಟೇ. ಈ ಅಜ್ಜಿ ಪೀಸ್ ಹೋದರೆ ರಾತ್ರಿ ಹೊತ್ತು ಟ್ರಾನ್ಸ್ ಫಾರ್ಮರ್ ಕಂಬದ ಬಳಿಗೆ ಒಂದು ಉದ್ದದ ಬಿದಿರಿನ ದೋಂಟಿ ಹಿಡ್ಕೊಂಡು ಊರ ಹಿತಚಿಂತಕರು ಓಡುತ್ತಿದ್ದರು. ಚಿಕ್ಕವನಿದ್ದಾಗ ನಾನೂ ಅವರ ಹಿಂದೆ ಓಡುತ್ತಿದ್ದೆ. ಹಾಗೆ ಹೋಗಿ ಲೋ ಟೆನ್ಶನ್ ತಂತಿಗೆ ಆ ದೋಂಟಿಯಿಂದ ಮೆತ್ತಗೆ ಹೊಡೆಯುತ್ತಿದ್ದರು. ಏನಾದರೂ ಲೂಸ್ ಕಾಂಟ್ಯಾಕ್ಟ್ ಇದ್ದರೆ ಹಾಗೆ ತಂತಿಗೆ ಬಡಿದಾಗ ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ಸಿಗುವುದೂ ಇತ್ತು. ಇನ್ನು ಕೆಲವೊಮ್ಮೆ ಸಮಸ್ಯೆ ಬಿಗಡಾಯಿಸುವುದೂ ಇತ್ತು. ನಮ್ಮ ಲೈನಿನ ತಂತಿಗೆ ಹೊಡೆಯುವ ರಭಸ ತುಸು ಹೆಚ್ಚಾಗಿ ಪಕ್ಕದಲ್ಲೇ ಇರುವ ಬೇರೆ ಲೈನಿನ ತಂತಿಗೆ ಪೆಟ್ಟು ಬಿದ್ದರೆ ಆ ಲೈನಿನ ಕರೆಂಟ್ ಹೋಗುವುದೂ ಇತ್ತು. ಆಗ ಅನೇಕರಿಗೆ ಸಮಾಧಾನವೂ ಆಗುತ್ತಿತ್ತು. ಅಕ್ಕ ಪಕ್ಕದ ಮನೆಯ ಲೈನ್ ಬೇರೆ ಬೇರೆಯಾಗಿದ್ದರೆ ಒಂದು ಮನೆಯಲ್ಲಿ ಕರೆಂಟ್ ಇದ್ದು ಇನ್ನೊಂದು ಮನೆಯಲ್ಲಿ ಕರೆಂಟ್ ಇಲ್ಲಾಂದ್ರೆ ಕರೆಂಟ್ ಇಲ್ಲದ ಮನೆಯವರ ಹೊಟ್ಟೆಯುರಿಯ ತೀವ್ರತೆ ನೋಡಿದವರಿಗೇ ಗೊತ್ತು. ಹಾಗೆಯೇ ಕರೆಂಟ್ ಇದ್ದ ಮನೆಯವರ ಸಂಭ್ರಮದ ತೀವ್ರತೆಯೂ ಅಷ್ಟೇ. ಒಟ್ಟಿನಲ್ಲಿ ಇದು ನಿಜಕ್ಕೂ ಅಜ್ಜಿ ಪೀಸ್ ಹೋಗಿ ಆಗುತ್ತಿದ್ದ ಸಮಸ್ಯೆಯೋ ಅಲ್ಲವೋ ಎನ್ನುವುದು ನನಗೆ ಇಂದಿಗೂ ಗೊತ್ತಿಲ್ಲ. ಆದರೆ ಹೀಗಾದಾಗೆಲ್ಲಾ ನಮ್ಮ ಹಿರಿಯರು ಅಜ್ಜಿ ಪೀಸ್ ಹೋಗಿದೆಯೆಂದೇ ಹೇಳುತ್ತಿದ್ದರು.
ನಾನು ಚಿಕ್ಕವನಿದ್ದಾಗ ಅನೇಕ ಬಾರಿ ನಮ್ಮ ಲೈನಿನ ಕರೆಂಟ್ ಕೈ ಕೊಡದೇ ನಮ್ಮ ಮನೆ ಪಕ್ಕದ ಇನ್ನೊಂದು ಲೈನಿನ ಕರೆಂಟ್ ಆಗಾಗ ಕೈ ಕೊಡುವುದಿತ್ತು. ನನ್ನಜ್ಜ ಹಳ್ಳಿಯ ಬ್ಯಾರಿ ಪ್ರಮುಖ, ಚಿಕ್ಕಪ್ಪ ನಮ್ಮ ಪರಿಸರದ ಪ್ರಭಾವಿ ರಾಜಕಾರಣಿಯಾಗಿದ್ದರು. ಆಗ ನಮ್ಮ ಓರಗೆಯ ಕೆಲವರ ತಲೆಯಲ್ಲಿ ಏನೇನೋ ಯೋಚನೆ. ಇವರು ರಾಜಕೀಯದಲ್ಲಿ ಪ್ರಭಾವಿಯಾದುದರಿಂದ ಇವರು ವಿದ್ಯುತ್ ಇಲಾಖೆಯಲ್ಲಿ ಪ್ರಭಾವ ಬೀರಿ ಇವರ ಮನೆಯ ಕರೆಂಟ್ ಹೋಗದಂತೆ ಮಾಡಿರಬಹುದು. ಹಾಗೆ ಏನೇನೋ ಕಲ್ಪಿಸಿ ಕೆಲ ಮನೆಯವರು ಲೈನ್ಮೆನ್ಗೆ ಒಂದಿಷ್ಟು ಭಕ್ಷೀಸು ಕೊಟ್ಟು ಅವರ ವಿದ್ಯುತ್ ಸಂಪರ್ಕವನ್ನು ನಮ್ಮ ಲೈನಿಗೆ ವರ್ಗಾಯಿಸಿದ್ದೂ ಇದೆ.
ನಾನು ಚಿಕ್ಕವನಿದ್ದಾಗ ಈ ಅಜ್ಜಿ ಪೀಸ್ ಕುರಿತ ನನ್ನ ಊಹೆ ವಿಚಿತ್ರವಾಗಿತ್ತು. ಅಜ್ಜಿ ಪೀಸ್ ಎಂದರೆ ಎಲ್ಲಕ್ಕಿಂತಲೂ ಹಿರಿಯ ಪೀಸ್.. ಅದು ತಾಯಿ ಪೀಸ್ಗಿಂತಲೂ ಹಿರಿಯ ಪೀಸ್. ಹಾಗಾದ್ರೆ ಅಜ್ಜ ಪೀಸ್ ಯಾಕಿಲ್ಲ ಎಂದು ನೀವು ಕೇಳಬಹುದು. ನಮ್ಮ ಕುಟುಂಬದಲ್ಲಿ ಅಜ್ಜ ಅಜ್ಜಿಯ ಕಾಲದಲ್ಲಿ ಕುಟುಂಬದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಅಜ್ಜಿಯ ತೀರ್ಮಾನವೇ ಫೈನಲ್. ನನ್ನ ಅಜ್ಜ ಪಳ್ಳಿಬ್ಯಾರಿ ತಕ್ಕ ಮಟ್ಟಿನ ಜಮೀನುದಾರರೂ,ಊರ ಮಸೀದಿಯ ಆಡಳಿತ ಸಮಿತಿಯ ಪ್ರಮುಖರೂ ಆಗಿದ್ದರು. ಅಲ್ಲೆಲ್ಲಾ ಅವರ ಮಾತೇ ಫೈನಲ್ ಆಗಿರುತ್ತಿತ್ತು. ಈ ಅಜ್ಜ ಊರಲ್ಲಿ ಎಷ್ಟೇ ಪ್ರಭಾವಿಯಾಗಿದ್ದರೂ ಮನೆಯಲ್ಲಿ ಅಜ್ಜಿಯ ಮಾತಿನ ಮುಂದೆ ಅಜ್ಜನದು ಏನೇನೂ ನಡೆಯುತ್ತಿರಲಿಲ್ಲ. ವ್ಯಾಪಾರ ವಹಿವಾಟು,ಕೃಷಿ ಇವೆಲ್ಲವನ್ನು ನಡೆಸುತ್ತಿದ್ದುದು ಅಜ್ಜನಾದರೂ ಮನೆಯಲ್ಲಿ ಮೌಲೂದು,ರಾತೀಬು ಏನೇ ಸಮಾರಂಭವಿದ್ದರೂ ಯಾವಾಗ ಮಾಡಬೇಕು, ಏನೇನು ಅಡಿಗೆ ಮಾಡಬೇಕು, ಯಾರ್ಯಾರನ್ನು ಕರೆಯಬೇಕು ಹೀಗೆ ಎಲ್ಲದರಲ್ಲೂ ಅಂತಿಮ ತೀರ್ಮಾನ ಅಜ್ಜಿಯದ್ದೇ ಆಗಿರುತ್ತಿತ್ತು. ಒಟ್ಟಿನಲ್ಲಿ ಅಜ್ಜಿಯ ಮಾತು ಮೀರಿ ಕುಟುಂಬದೊಳಗೆ ಏನೂ ನಡೆಯುತ್ತಿರಲಿಲ್ಲ. ಬಾಲ್ಯದಲ್ಲಿ ನನಗೆ ಚೆನ್ನಾಗಿ ಗೊತ್ತಿದ್ದ ಜಗತ್ತೆಂದರೆ ನನ್ನ ಕುಟುಂಬ. ಹಾಗೆ ಮನೆಯಲ್ಲಿ ಅಜ್ಜಿಯ ಮಾತೇ ಫೈನಲ್ ಆಗಿದ್ದುದರಿಂದ ಕರೆಂಟ್ ವಿಚಾರದಲ್ಲೂ ಅಜ್ಜಿ ಪೀಸೇ ಫೈನಲ್ ಎಂದೂ ನಾನು ನಂಬಿದ್ದೆ. ಹೈಸ್ಕೂಲ್ಗೆ ಬರುತ್ತಾ ಅಲ್ಪ ಸ್ವಲ್ಪ ಇಂಗ್ಲಿಷ್ ಕಲಿತ ಬಳಿಕ ಅದು ಅಜ್ಜಿ ಪೀಸ್ ಆಗಿರಲಿಕ್ಕಿಲ್ಲ ಅದು ಎಡ್ಜ್ ಫ್ಯೂಸ್ ಆಗಿರಬಹುದೆಂಬ ತೀರ್ಮಾನಕ್ಕೆ ಸ್ವತಃ ನಾನೇ ಬಂದು ಬಿಟ್ಟಿದ್ದೆ. ಆಗೆಲ್ಲಾ ಈ ಅಜ್ಜಿ ಪೀಸ್ ಎನ್ನುವವರನ್ನು ನೋಡಿದರೆ ಮರುಕವಾಗುತ್ತಿತ್ತು. ಅವರು ಅಜ್ಜಿ ಪೀಸ್ ಎನ್ನುವಾಗೆಲ್ಲಾ ನಾನು ಒಳಗೊಳಗೇ ನಗುತ್ತಿದ್ದೆ. ಇದೂ ಕೂಡಾ ತಪ್ಪು, ನಾನಿನ್ನೂ ಅಜ್ಞಾನದಲ್ಲೇ ಇದ್ದೇನೆ ಎಂದು ಮನವರಿಕೆಯಾಗಿ ಬಹಳ ವರ್ಷಗಳೇನೂ ಆಗಿಲ್ಲ. ಕೇವಲ ಎರಡು ವರ್ಷಗಳ ಹಿಂದೆ ಎಲ್ಲೋ ಎಚ್.ಜಿ.ಫ್ಯೂಸ್ ಎಂದು ಬರೆದುದನ್ನು ಓದಿದಾಗ ಅಯ್ಯೋ ನನ್ನ ಬುದ್ಧಿವಂತಿಕೆಯ ಮಟ್ಟವೇ ಎಂದು ನನಗೆ ನಾನೇ ಮರುಕಪಟ್ಟಿದ್ದೆ. ಆಗ ಗೂಗಲ್ಗೆ ಹೋಗಿ ಹುಡುಕಾಡಿದಾಗ ಅದು ಅಜ್ಜಿ ಪೀಸೂ ಅಲ್ಲ, ಎಡ್ಜ್ ಫ್ಯೂಸೂ ಅಲ್ಲ..ಅದು ಹಾರ್ನ್ ಗ್ಯಾಪ್ ಫ್ಯೂಸ್ ಎಂದು ತಿಳಿದದ್ದು.