ದೋಸ್ತರಾಹೋದೀನ್ ಸಂಸ್ಕೃತಿಯ ಪ್ರತೀಕ ಹೈದರಾಬಾದ್ ಕರ್ನಾಟಕ
ಹೈದರಾಬಾದ್ ಕರ್ನಾಟಕವೆಂದರೆ ತೀವ್ರ ಅನಕ್ಷರತೆ, ಬಡತನ, ನಿರುದ್ಯೋಗ, ವಲಸೆ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಭೂರಹಿತರು, ಮಿಸಳಭಾಜಿಯಂತೆ ಕನ್ನಡ ಭಾಷೆ ಮುಂತಾದ ಚಿತ್ರಣಗಳು ಬಹುತೇಕರ ಮನಸಿನಲ್ಲಿ ಅಚ್ಚೊತ್ತಿದ್ದು ಹೌದು. ಇವುಗಳಲ್ಲಿ ಯಾವುದನ್ನೂ ಅಲ್ಲಗಳೆಯಲಾಗದು. ಇವೆಲ್ಲವಕ್ಕೂ ತನ್ನದೇ ಆದ ಆರ್ಥಿಕ, ರಾಜಕೀಯ ಕಾರಣಗಳು ಇದ್ದೇ ಇವೆ. ಆದರೆ ಇದೇ ಸಂದರ್ಭದಲ್ಲಿ ಹೈದರಾಬಾದ ಕರ್ನಾಟಕವೆಂದರೆ ಮೊಹರಂ, ಸೂಫಿ ಸಂತ ಶರಣರ ತಾಣ, ಕೂಡಿ ಬದುಕುವ ಮಣ್ಣ ಗುಣ ಇವೆಲ್ಲವೂ ಅತ್ಯಂತ ಶ್ರೀಮಂತಿಕೆಯಲ್ಲಿ ನೆಲದಗಲಕ್ಕೂ ಚಿರಪರಿಚಿತವಾಗಿವೆ. ಒಂದೇ ಒಂದು ಮುಸ್ಲಿಮ್ ಮನೆಯಿಲ್ಲದ ಹಳ್ಳಿಯಲ್ಲಿಯೂ ಮೊಹರಂ ನಡೆಸಲಾಗುತ್ತದೆ. ಕರ್ಬಲಾ ಮೈದಾನದಲ್ಲಿ ಮೋಸದಿಂದ ಕೊಲೆಯಾದ ಹಸನ್-ಹುಸೇನ್ ಸಹೋದರರ ಬಲಿದಾನದ ದುಃಖವು ಕೇವಲ ಮುಸ್ಲಿಮರದ್ದು ಆಗಿರುವುದಿಲ್ಲ. ಮೊಹರಂ ಸಂದರ್ಭದಲ್ಲಿನ ದೇವರುಗಳು ಅದೇ ಊರಿನ ಮುಸ್ಲಿಮೇತರ ದೇವರ, ಮಠಗಳಿಗೆ ಭೇಟಿ ಮಾಡಿ ಊರೆಲ್ಲ ಸುತ್ತಾಡಿ ಸರ್ವರಿಂದ ಧಟ್ಟಿ ಹೊದಿಸಿಕೊಂಡು, ಸಕ್ಕರೆ ಗುಲಾಬಿ ಹಂಚಿಸಿಕೊಂಡು ಸ್ವಸ್ಥಾನ ಸೇರುತ್ತವೆ. ಮೊಹರಂ ದೇವರುಗಳ ಎದಿರುಭೇಟಿಯಲ್ಲಿ ಸಾವಿರಾರು ಜನರು ರಾತ್ರಿಯಿಡೀ ನೆರೆದು ಅಲೈ ಪೀರ ಕುಣಿತ, ಹುಲಿಕುಣಿತ ಇತ್ಯಾದಿ ನಡೆಸಿಕೊಡುತ್ತಾರೆ. ಕೋಲಾಟ, ಲೇಜಿಮ್ಮಾಟ ಹೀಗೆ ವಿವಿಧ ತೆರನಲ್ಲಿ ಗ್ರಾಮದ ಜನರು ಸಾಂಸ್ಕೃತಿಕವಾಗಿ ತೊಡಗಿಕೊಂಡಿರುತ್ತಾರೆ. ಮೊಹರಂ ಹಾಡುಗಳನ್ನು ಸಾದರಪಡಿಸುವವರು ಮುಸ್ಲಿಮ್ ಅಲ್ಲದ ಜನಸಮುದಾಯವೇ ಆಗಿರುತ್ತಾರೆ. ಗ್ರಾಮಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ಈ ಮೊಹರಂ ಹಾಡುಗಳು ಹರಿದು ಬರುತ್ತಿವೆ.
ಇದೆಲ್ಲವೂ ಒಂದೆಡೆಯಾದರೆ, ಇನ್ನೊಂದೆಡೆ ರಮಝಾನ್ ನಂತಹ ಹಬ್ಬಗಳು ಸಹ ಎಲ್ಲ ಸಮುದಾಯದವರು ಸೇರಿಯೇ ಪರಸ್ಪರ ಕೊಡುಕೊಳ್ಳುವಿಕೆಯ ಹಿನ್ನೆಲೆಯಲ್ಲಿ ಸಂಭ್ರಮ ಕಾಣುತ್ತೇವೆ. ಮೊಹರಂ ದುಃಖದ ದಿನದಲ್ಲಿಯೂ ಎಲ್ಲರೂ ಭಾಗಿ, ಪೈಗಂಬರ್ ಜನ್ಮ ದಿನದ ಸಂಭ್ರಮದಲ್ಲಿಯೂ ಎಲ್ಲರೂ ಭಾಗಿ. ಹಂಚಿದಷ್ಟು ಪ್ರೀತಿ ಬೆಳೆಯುವ ಮತ್ತು ಸಮೂಹದಲ್ಲಿ ಕಷ್ಟ ಕರಗುವ ನಿಜದ ಮಾನವೀಯ ತುಡಿತಗಳಿಗೆ ಹೈದರಾಬಾದ ಕರ್ನಾಟಕವು ಸಾಕ್ಷಿಯಾಗಿ ನಿಲ್ಲುತ್ತದೆ.
ಹೈದರಾಬಾದ ಕರ್ನಾಟಕದಲ್ಲಿ ಕನ್ನಡ ಭಾಷೆ ಇದೆಯೇ? ಇಲ್ಲಿ ಗಂಭೀರವಾದ ಸಾಹಿತ್ಯ ರಚನೆ ಆಗಿದೆಯೇ? ಅಂತೆಲ್ಲ ಇತ್ತೀಚೆಗಿನವರೆಗೂ ಚರ್ಚಿಸುವುದನ್ನು ನೋಡಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ ಈ ಪ್ರದೇಶ ಬಹು ಶ್ರೀಮಂತವಾಗಿದ್ದು ಸೌಹಾರ್ದದಲ್ಲಿ. ಈ ನೆಲದ ಸಾಮರಸ್ಯ ಬದುಕಿನ ಪಲಕುಗಳು ಪಠ್ಯಗಳಾಗಿ ಎಲ್ಲ ಜನಸಮುದಾಯಗಳಲ್ಲಿಯೂ ಜೀವಂತ ಝರಿಯಾಗಿ ಪ್ರವಹಿಸಿವೆ. ದಿನವೆಲ್ಲ ದುಡಿದು ಸಂಜೆ ಹೊತ್ತಿನಲ್ಲಿ ಮಠದ ಪ್ರಾಂಗಣದಲ್ಲಿ, ಗುಡಿಗಳ ಅಂಗಳದಲ್ಲಿ, ಜಾತ್ರೆಗಳಲ್ಲಿ ಎಲ್ಲ ಸಮುದಾಯದ ಜನರು ಒಂದೆಡೆ ಸೇರಿ ತತ್ವಪದಗಳನ್ನು ಹಾಡುತ್ತಾರೆ. ಭಜನೆಗಳಲ್ಲಿ ಹರಿದು ಬರುವ ಹಾಡುಗಳು ಭಾವೈಕ್ಯ ಸಾರುವ ಪಠ್ಯಗಳಾಗಿವೆ. ‘ಅಜ್ಞಾನೆಂಬುದು ಅಮವಾಸಿ/ ಸುಜ್ಞಾನೆಂಬುವ ಚಂದ್ರನ ಉದಿಸಿ/ ರಹಿಮಾಮ್ ರಹಿಮಾಮ್ ಉಚ್ಚರಿಸಿ/ ಪರಭ್ರಹ್ಮಕ ದೋಸ್ತರ ಹೌದೆನಿಸಿ’ ಚನ್ನೂರು ಜಲಾಲ್ ಸಾಹೇಬ್ ಶರಣ ಬರೆದ ತತ್ವಪದಗಳು ಜನರ ಬದುಕಿನೊಂದಿಗೆ ಮಿಳಿತಗೊಂಡಿವೆ. ಅಕ್ಷರ ಬಲ್ಲವರು ಬರೆದಿಟ್ಟರು. ಅಕ್ಷರ ಬಾರದವರು ಬಾಯಿಂದ ಬಾಯಿಗೆ ಸಾಗಿಸಿ ಹೃದಯಗಳ ಬೆಸುಗೆ ಮಾಡಿದರು. 14ನೇ ಶತಮಾನದಲ್ಲಿ ದಿಲ್ಲಿಯಿಂದ ಕಲಬುರಗಿಗೆ ಬಂದಿದ್ದು ಸೂಫಿ ಖ್ವಾಜಾ ಬಂದೇ ನವಾಝ ಗೇಸುದರಾಜ್. ಇವರಿಗೂ ಮೊದಲು ಬಂದಿದ್ದು ರುಕ್ಮುದ್ದೀನ್ ತೋಲಾ ಎಂಬ ಸೂಫಿ. 15ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರಗೆ ಬಂದ ಮುಹಮ್ಮದ್ಗವಾನ್ ಎಂಬ ಪರ್ಷಿಯನ್ ವ್ಯಾಪಾರಿಯು ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ಮದ್ರಸ ಕಟ್ಟಿದ್ದನ್ನು ಈಗಲೂ ನೋಡಬಹುದು. ಕ್ರಮೇಣ ಸೂಫಿಗಳ ಪರಂಪರೆಯು ಹೈದರಾಬಾದ ಕರ್ನಾಟಕದುದ್ದಕ್ಕೂ ಪಸರಿಸಿದ್ದು ಕಾಣುತ್ತೇವೆ. ಸೂಫಿ ಇದ್ದೆಡೆ ಸಂತನೂ ಇರುವನು. ರುಕ್ಮುದ್ದೀನ್ ತೋಲಾನ ಗೆಳೆಯ ರಾಣೋಜಿ. ಕಲಬುರಗಿಯ ಶರಣಬಸಪ್ಪ ಅಪ್ಪನ ಜಾತ್ರೆಗೆ ಖ್ವಾಜಾ ಬಂದೇ ನವಾಝ್ ದರ್ಗಾದಿಂದ ನೈವೇದ್ಯ ಬರುವುದು. ಬಂದೇ ನವಾಝ್ ಉರೂಸ್ಗೆ ಶರಣಬಸಪ್ಪ ಅಪ್ಪನ ಗುಡಿಯಿಂದ ಗಂಧ ಬರುವುದು. ಈ ತೆರನ ಪರಂಪರೆಯು ಬಹುತೇಕ ಎಲ್ಲ ಗ್ರಾಮಗಳಲ್ಲಿ, ನಗರಗಳಲ್ಲಿ ಕಾಣುತ್ತೇವೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ಅಲ್ಲಮಪ್ರಭು ಪಾಲಕಿಯು ಪಾದ ಯಾತ್ರೆಯ ಮೂಲಕ ತಲುಪುವುದು ಬೀದರ ಜಿಲ್ಲೆಯ ಅಷ್ಟೂರ ಗ್ರಾಮದಲ್ಲಿನ ಹಝ್ರತ್ ಸೈಯದ್ ದರ್ಗಾಕ್ಕೆ. ಇಲ್ಲಿನ ಶರಣ ಅಲ್ಲಿನ ಸೂಫಿಯಾಗಿ ಪೂಜೆಗೊಳ್ಳುವ ಬೆರಗೇ ಇಲ್ಲಿನ ಬದುಕಿನ ಜೀವಾಳವಾಗಿದೆ. ಅಷ್ಟೂರ ದರ್ಗಾದಲ್ಲಿ ಈಗಲೂ ಪೂಜಾ ವಿಧಿಗಳನ್ನು ನಡೆಸಿಕೊಡುವವರು ಮುಸ್ಲಿಮ್ ಅಲ್ಲದ ಸಮುದಾಯದವರು. ಈ ರೀತಿಯ ಶರಣ ಸೂಫಿ ಸಂತ ಪರಂಪರೆಯ ಆಚರಣೆಗಳು ನಂಬಿಕೆಗಳು ಹೈದರಾಬಾದ ಕರ್ನಾಟಕದ ಉದ್ದಕ್ಕೂ ಹಾಸು-ಹೊಕ್ಕಾಗಿವೆ.
ಈ ಶರಣ ಸೂಫಿ ಸಂತ ಪರಂಪರೆಯಲ್ಲಿ ಕೊಡುಕೊಳ್ಳುವಿಕೆ ಹೇಗಿತ್ತೋ ಹಾಗೆಯೇ ಒರೆಗೆ ಹಚ್ಚಿಕೊಳ್ಳುವ ಪ್ರವೃತ್ತಿಯಿತ್ತು. ಇಲ್ಲಿ ಸೌಹಾರ್ದತೆ ಎಂಬುದು ಎಲ್ಲ ಮಿತಿಗಳನ್ನು ದಾಟಿ ಮಾನವೀಯ ನೆಲೆ ತಲುಪುತ್ತದೆ. ‘ಹಿಂದೂ ಮುಸ್ಲಮಾನ್ ಶಾಸ್ತ್ರ ಪಢತೆ ಹೈ ಗುರುಮನಿ ಕೀಲ ಸಿಗಲಿಲ್ಲ’.ಕಡಕೋಳ ಮಡಿವಾಳಪ್ಪನ ಈ ತತ್ವಪದ ಇದಕ್ಕೆ ಸಾಕ್ಷಿಯಾಗಿದೆ. ಅಂತರಂಗದ ಅರಿವಿನೊಳಗೆ ತನ್ನ ತಾ ಹುಡುಕಿಕೊಳ್ಳುವ ಪ್ರಕ್ರಿಯೆಯಲ್ಲಿ ಅವರು ಮನುಷ್ಯರು ಮಾತ್ರರಾಗಿ ನಿಲ್ಲುತ್ತಿದ್ದರು. ಸಬ್ ಕೆಹತೆ ಹೈ ಈಶ್ವರ ಅಲ್ಲಾ ಅಲ್ಲಾ/ ಇದರ ಭೇದ ಯಾರಿಗೂ ತಿಳಿದಿಲ್ಲ/ ನಿರಾಕಾರ ಸೆ ಆಕಾರ್ ಹುವೆ/ ವೇದ ಶಾಸ್ತ್ರಕ್ಕೆ ಸಿಗಲಿಲ್ಲ/ ಹಮ್ ಭಿ ಕೆಹತೆ ತುಮ್ ಭೀ ಕೆಹತೆ/ ಮಾಡಬ್ಯಾಡರಿ ಮ್ಯಾಲಿನ ಶೀಲ/ ಗುರು ಮಡಿವಾಳನ ಹೋಕರ್/ ತೊಳೆಯಬೇಕ್ರಿ ಒಳಗಿನ ಮೈಲಾ/ ಹಾಡು ಅಂತರಂಗದ ಸೂತಕ ಕಳೆಯುವುದು.
ತಿಂಥಣಿ ಮೋನಪ್ಪಯ್ಯನ ಸ್ಥಾನದಲ್ಲಿ ಈಗಲೂ ಜಗಾಯಿಸುವ ದೀನ್ ‘ಏಕ ಲಾಕ್ ಪಾಚೋ ಪೀರ ಪೈಗಂಬರ್ ಕಾಶಿಪತಿ ಗಂಗಾಧರ ಹರಹರ ಮೌನಧೀನ್’. ಮೌನೇಶ್ವರನೆಂದು ಮುಸ್ಲಿಮ್ ಅಲ್ಲದ ಸಮುದಾಯ ನಡೆದುಕೊಂಡರೆ ಮುಸ್ಲಿಮ್ ಸಮುದಾಯವು ಮೌನಧೀನ್ ಎಂದು ಕರೆಯುತ್ತಾರೆ. ಎರಡೂ ಸಮುದಾಯವರು ಆರಾಧಿಸುವ ಸ್ಥಾನವಿದು. ಈ ಆರಾಧನೆಯು ಕೇವಲ ಆಚರಣೆಗೆ ಸೀಮಿತವಾಗಿರುವುದಿಲ್ಲ. ಸೌಹಾರ್ದ, ಸಾಮರಸ್ಯ ಎಂಬುದು ಜನಬದುಕಿನ ಭಾಗವೇ ಆಗಿಸಿದೆ.
ಕಲಬುರಗಿಯ ಬಬಲಾದ ಮುತ್ಯಾನ ಉಡುಗೆಯು ಹಸಿರಿನಿಂದ ಕೂಡಿದೆ. ಪ್ರಜ್ಞಾಪೂರ್ವಕವಾಗಿಯೇ ಎಲ್ಲ ಸಮುದಾಯದವರನ್ನು ಒಂದುಗೂಡಿಸುವ ಸಾಂಸ್ಕೃತಿಕ ವಿವೇಕವಾಗಿದೆ. ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಇಂತಹ ಭಾವೈಕ್ಯ ತಾಣಗಳು ಪ್ರತಿ ಗ್ರಾಮಗಳಲ್ಲಿ ಸಿಗುತ್ತವೆ ಮತ್ತು ಜನರು ಸಹಜವಾಗಿ ಪರಸ್ಪರ ಬೆರೆತು ಬಾಳುತ್ತಾರೆ. ಬಸವಕಲ್ಯಾಣದ ಫೈಮುದಾ ಫಾತಿಮಾ ಎಂಬ ಮಹಿಳೆಯು ತತ್ವಪದ ಬರೆದಿರುವಳು. ಮನೆಗೆಲಸ ಮಾಡುವ ಅವಳು ಬರೆದ ಹಾಡುಗಳು ಮನಕ್ಕಂಟಿದ ಸೂತಕವನ್ನು ತೊಳೆದು ಹಾಕುತ್ತವೆ. ‘ನಾ ನೀ ಅಂಬ ಭೇದ ಅಂದಿಲ್ಲ ಇಂದಿಲ್ಲ/ ಭೇದ ಮಾಡಿದರ ಶಾಂತಿ ನಿನಗಿಲ್ಲ/ ಶಾಂತಿ ನಿನಗಿಲ್ಲ ಖುದಾನ ಹಾದಿ ತಿಳಿದಿಲ್ಲ’ ಎನ್ನುತ್ತಾಳೆ. ಪಂಚಭೂತ, ಪಂಚೇಂದ್ರಿಯಗಳಲ್ಲಿ ಇಲ್ಲದ ಭೇದ ನಿನ್ನೊಳಗ ಯಾಕೋ ತಮ್ಮ ಎಂದು ಪ್ರಶ್ನಿಸುತ್ತಾಳೆ. ಬಸವಣ್ಣನೆಂಬುವನೇ ಅಲ್ಲಾ ನೋಡು ಎನ್ನುತ್ತಾಳೆ. ‘ಅಲ್ಲಾ ಹೊರಗಿಲ್ಲ ಒಳಗ್ಹಾನಾ ಅಂದ/ ಮಂದಿರ ಮಸೀದಿ ಒಡಕೋತ ನಡದ/ದ್ಯಾಹಕ ಮಂದಿರ ಮಾಡಿಯೇ ಬಿಟ್ಟ/ ಅಲ್ಲಾಹಗ ಅದರೊಳಗ ಹುಡುಕಿ ಕೊಟ್ಟ/ ಎಂಬ ಅವಳ ಹಾಡು ಬಾಹ್ಯದಲ್ಲಿರುವ ಭೌತಿಕ ಕಟ್ಟಡಗಳಲ್ಲಿ ಅಲ್ಲಾ ಮತ್ತು ದೇವರಿಲ್ಲ. ದೇಹವೇ ದೇವಾಲಯ ಎಂದು ಹೇಳಿದ ಬಸವಣ್ಣನು ಅದರಲ್ಲಿಯೇ ಅಲ್ಲಾಹನಿಗೆ ಹುಡುಕಿಕೊಟ್ಟ ಎಂಬ ಫೈಮುದಾ ಫಾತಿಮಾಳ ಜ್ಞಾನವು ಎಂದೂ ಬತ್ತದ ಝರಿಯಾಗಿದೆ.
ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಭಾಷೆ ಇದೆಯೇ? ಇಲ್ಲಿ ಗಂಭೀರವಾದ ಸಾಹಿತ್ಯ ರಚನೆ ಆಗಿದೆಯೇ? ಅಂತೆಲ್ಲ ಇತ್ತೀಚೆಗಿನವರೆಗೂ ಚರ್ಚಿಸುವುದನ್ನು ನೋಡಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ ಈ ಪ್ರದೇಶ ಬಹು ಶ್ರೀಮಂತವಾಗಿದ್ದು ಸೌಹಾರ್ದದಲ್ಲಿ. ಈ ನೆಲದ ಸಾಮರಸ್ಯ ಬದುಕಿನ ಪಲಕುಗಳು ಪಠ್ಯಗಳಾಗಿ ಎಲ್ಲ ಜನಸಮುದಾಯಗಳಲ್ಲಿಯೂ ಜೀವಂತ ಝರಿಯಾಗಿ ಪ್ರವಹಿಸಿವೆ. ದಿನವೆಲ್ಲ ದುಡಿದು ಸಂಜೆ ಹೊತ್ತಿನಲ್ಲಿ ಮಠದ ಪ್ರಾಂಗಣದಲ್ಲಿ, ಗುಡಿಗಳ ಅಂಗಳದಲ್ಲಿ, ಜಾತ್ರೆಗಳಲ್ಲಿ ಎಲ್ಲ ಸಮುದಾಯದ ಜನರು ಒಂದೆಡೆ ಸೇರಿ ತತ್ವಪದಗಳನ್ನು ಹಾಡುತ್ತಾರೆ. ಭಜನೆಗಳಲ್ಲಿ ಹರಿದು ಬರುವ ಹಾಡುಗಳು ಭಾವೈಕ್ಯ ಸಾರುವ ಪಠ್ಯಗಳಾಗಿವೆ.
ಹೀಗೆ ಸೌಹಾರ್ದ ಎಂಬುದು ಜನಬದುಕಿನ ಸಹಜ ಬದುಕಾಗಿ ಅರಳಿಸುವಲ್ಲಿ ಶರಣ ಸೂಫಿ ಸಂತ ಪರಂಪರೆಯು ಬಹುದೊಡ್ಡ ಕೊಡುಗೆ ಕೊಟ್ಟಿದೆ. 10ನೇ ಶತಮಾನದ ಉತ್ತರಾರ್ಧದಲ್ಲಿ ಆರಂಭಗೊಂಡ ವಚನ ಚಳವಳಿಯ ಆಶಯಗಳನ್ನು ಪ್ರಖರವಾಗಿ ಪ್ರಜ್ವಲಿಸಿದ್ದು ಚಿಂತನೆ ಮತ್ತು ಚಳವಳಿಯ ಸ್ವರೂಪದಲ್ಲಿ ಎಂದರೆ ಅದು ಬಸವಣ್ಣನ ಕಾಲಘಟ್ಟದಲ್ಲಿ. ಅಂತರ ಜಾತಿ ವಿವಾಹದ ನಂತರ ನಡೆದ ವಿಪ್ಲವವು ವರ್ಗ-ವರ್ಣ-ಲಿಂಗ-ಜಾತಿ ತಾರತಮ್ಯವನ್ನು ಅಳಿಸಿ ಹಾಕುವ ಆಶಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದು ಹೌದು. ನಂತರದಲ್ಲಿ ಅದು ಅಂತರ್ ಧಾರೆಯಾಗಿ ಪ್ರವಹಿಸಿ ಕೊಡೆಕಲ್ಲ ಪರಂಪರೆ, ಮಂಟೆಸ್ವಾಮಿ ಪರಂಪರೆ, ಅವಧೂತ-ಆರೂಢ ಪರಂಪರೆಯಾಗಿ ಮುಂದುವರಿದವು. ಮತ್ತು ಈ ಆಶಯಗಳ ಮುಂದುವರಿದ ಭಾಗವೇ ತತ್ವಪದಗಳು ಭಜನೆಗಳಲ್ಲಿ ಝೇಂಕರಿಸಿದವು. ಹನ್ನೆರಡನೆಯ ಶತಮಾನದ ವಿಪ್ಲವದ ನಂತರ ಅಷ್ಟೊಂದು ಪ್ರಖರವಾಗಿ ವೈದಿಕ ವ್ಯವಸ್ಥೆಯನ್ನು, ರಾಜಶಾಹಿಯನ್ನು ಅಂದರೆ ಆಳುವ ವರ್ಗವನ್ನು ಎದುರು ಹಾಕಿಕೊಂಡು ಸಂಘರ್ಷಕ್ಕೆ ಒಡ್ಡಿಕೊಂಡಿದ್ದು ಕಾಣುವುದಿಲ್ಲ ಮತ್ತು ಅದೊಂದು ಮೌನಕ್ಕೆ ಸಂದ ಯುಗವಾಗಿತ್ತು ಎಂದು ಅನ್ನಿಸಬಹುದು. ಆದರೆ ಅಲ್ಲಿಂದ ಇಲ್ಲಿವರೆಗೆ ವಿಭಿನ್ನ ಸ್ವರೂಪದಲ್ಲಿ ಸೌಹಾರ್ದ ಬದುಕಿನ ಬೇರುಗಳನ್ನು ಗಟ್ಟಿಗೊಳಿಸುವ ಪಲಕುಗಳಾಗಿ ಮೈದಾಳಿವೆ ಮತ್ತು ಅವುಗಳು ಸಾಮರಸ್ಯದ, ಸಮಾನತೆಯ ಆಶಯಗಳನ್ನು ಮುಕ್ಕಾಗದಂತೆ ಮುಂದುವರಿಸಿಕೊಂಡು ಬಂದಿವೆ. ಇವೇ ಜನಮಾನಸದ ನಡುವಿನ ಬಹುದೊಡ್ಡ ಪಠ್ಯಗಳು.
ಇದರ ಫಲಿತವು 1947-48ರ ಸಂದರ್ಭದಲ್ಲಿ ಕಾಣುತ್ತೇವೆ. ಆಳುವ ವರ್ಗವು ಯಾವುದಾದರೇನು? ಅದರ ಹರಿತಕ್ಕೆ ಕೊರಳು ಸಿಗುವುದು ಶ್ರಮಿಕರದ್ದು ಮಾತ್ರ. ಅಧಿಕಾರ ಉಳಿಸಿಕೊಳ್ಳಲು ಅದು ಯಾವಾಗಲೂ ಕೋಮು ನೆಲೆಯ ಅಸ್ತ್ರವನ್ನು ಬಳಸುತ್ತ ಬಂದಿದೆ. ಅಂತಹದ್ದೇ ಒಂದು ಸಂದರ್ಭ ಬಂದಿದ್ದು 1947-48ರಲ್ಲಿ. ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಕೊಟ್ಟ ಅವಕಾಶದ ಪ್ರಕಾರ ಜುನಾಗಢ್, ಕಾಶ್ಮೀರ, ಮೈಸೂರು ಮತ್ತು ಹೈದರಾಬಾದ ನಿಝಾಮ್ ಸಂಸ್ಥಾನಗಳು ಸ್ವತಂತ್ರವಾಗಿ ಉಳಿಯಲು ತೀರ್ಮಾನ ಮಾಡುತ್ತವೆ. ಈ ಸಂದರ್ಭವನ್ನು ಬಳಸಿಕೊಂಡು ಖಾಸಿಂ ರಝ್ವಿ ಎಂಬ ವಕೀಲನು ತನ್ನದೇ ಖಾಸಗಿ ಪಡೆಯನ್ನು ಕಟ್ಟಿಕೊಂಡನು. ಅದಕ್ಕೆ ರಜಾಕಾರ್(ಸ್ವಯಂ ಸೇವಕರು) ಎಂದು ಹೆಸರಿಟ್ಟುಕೊಂಡು ಎಲ್ಲೆಡೆ ದೊಂಬಿ ಲೂಟಿ, ಕರವಸೂಲಿ ಸಂದರ್ಭದಲ್ಲಿ ಪ್ರತಿರೋಧ ಬಂದಾಗ ಹಲ್ಲೆ ಕೊಲೆಗಳು ನಡೆಸಲಾಯಿತು. ರಜಾಕಾರ ಹೆಸರಿನಲ್ಲಿ ಪುಂಡು ಪೋಕರಿಗಳು ಇಂತಹ ಕೃತ್ಯ ಎಸಗಿದ್ದರು ಎಂಬುದು ಸುಂದರಲಾಲ್ ಕಮಿಟಿಯ ವರದಿ ಹೇಳುತ್ತದೆ. ನಂತರ ಕೇಂದ್ರ ಸರಕಾರವು ಪೊಲೀಸ್ ಕಾರ್ಯಾಚರಣೆ ಆರಂಭಿಸುತ್ತದೆ. ಮಿಲಿಟರಿ ಕಾರ್ಯಾ ಚರಣೆಗೆ ಬಹುಮುಖಿ ಉದ್ಧೇಶವಿದ್ದಿದ್ದು ಹೌದು. ಇತ್ತ ರಜಾಕಾರರನ್ನು ಸದೆಬಡಿಯುವುದು ಮತ್ತು ಅತ್ತ ಆಂಧ್ರ ಪ್ರದೇಶದಲ್ಲಿ ಬೆಳೆದ ಸಮಾಜವಾದಿ ಚಳವಳಿಯನ್ನು ಹತ್ತಿಕ್ಕುವುದು. ಜಮೀನ್ದಾರರ ಕ್ರೌರ್ಯದ ವಿರುದ್ಧ, ನಿಝಾಮ್, ರಜಾಕಾರರ ವಿರುದ್ಧ ಪ್ರಬಲವಾಗಿ ಹೋರಾಟ ಮಾಡುತ್ತಿದ್ದ ಸಾವಿರಾರು ಕಮ್ಯುನಿಸ್ಟರನ್ನು ಮಿಲಿಟರಿಯು ಹತ್ಯೆ ಮಾಡಿದ್ದು ಚರಿತ್ರೆಯಲ್ಲಿದೆ. ಇರಲಿ. ವಿಷಯಾಂತರ ಬೇಡ. ನಿಝಾಮನು ಬ್ರಿಟಿಷರು ನೇಮಕ ಮಾಡಿದ್ದ ಅಧಿಕಾರಿಯಾಗಿದ್ದ. ಅವನಿಗೂ ಅಧಿಕಾರ ಉಳಿಯಲೆಂಬ ಆಸೆ. ಖಾಸಿಂ ರಝ್ವಿಗೆ ಬೆಂಬಲಿಸಿದ. ಮಿಲಿಟರಿ ಬಂದು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ನಿಝಾಮನು ಭಾರತ ಸರಕಾರದಲ್ಲಿ ವಿಲೀನವಾಗುವುದಾಗಿ ಘೋಷಿಸಿದ. ಸೆಪ್ಟಂಬರ್ 17 ವಿಲೀನೀಕರಣದ ದಿನವಾಗಿದೆ. ಆದರೆ ಇದನ್ನು ವಿಮೋಚನಾ ದಿನವನ್ನಾಗಿ ಮಾಡಿದ್ದು ಕೋಮುವಾದಿ ಪಕ್ಷವಾದ ಬಿಜೆಪಿ. ಮೊದಲ ಹಂತದ ರಜಾಕಾರರ ದಾಳಿ ಕೊಲೆಯ ನೂರು ಪಟ್ಟರಷ್ಟು ಮುಸ್ಲಿಮ್ ಸಮುದಾಯದ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳು ನಡೆದವು. ಇದಕ್ಕೆ ಚರಿತ್ರೆ ಸಾಕ್ಷಿಯಾಗಿ ಹೋಯಿತು. ಅಧಿಕಾರದ ದಾಹಕ್ಕಾಗಿ ನಡೆದ ಈ ದಂಗೆ, ಕೊಲೆಗಳು ನಂತರದಲ್ಲಿ ಕೋಮು ಧ್ರುವೀಕರಣಕ್ಕೆ ಮತ್ತು ಕೋಮುಉದ್ದೇಶಕ್ಕೆ ಬಳಸಿಕೊಳ್ಳುವ ರಾಜಕಾರಣ ಆರಂಭವಾಯಿತು. ಆಸಕ್ತಿದಾಯಕವಿರುವುದು ಏನೆಂದರೆ ರಜಾಕಾರರು ಮುಸ್ಲಿಮೇತರರ ಮೇಲೆ ನಡೆಸಿದ ಕೊಲೆ ಅತ್ಯಾಚಾರ ಹಿಂಸೆಯ ಸಂದರ್ಭದಲ್ಲಿಯೂ ಮತ್ತು ನಂತರದಲ್ಲಿ ನಡೆದ ಮುಸ್ಲಿಮ್ ಮೇಲಿನ ಇಂತಹದೇ ಕೊಲೆ ಹಲ್ಲೆ ಅತ್ಯಾಚಾರ ರಕ್ತಪಾತದ ಸಂದರ್ಭದಲ್ಲಿ ಸಾಮಾನ್ಯ ಜನತೆಯ ಪಾತ್ರ ಏನಿತ್ತು ಎಂಬುದು. ಮುಸ್ಲಿಮ್ ಮತ್ತು ಮುಸ್ಲಿಮೇತರ ಸಮುದಾಯಗಳೂ ಎರಡೂ ಸಂದರ್ಭದಲ್ಲಿ ಪರಸ್ಪರ ರಕ್ಷಣೆ ಮಾಡಿಕೊಂಡಿದ್ದಕ್ಕೆ ಅಸಂಖ್ಯ ಪ್ರಕರಣಗಳು ದೊರೆಯುತ್ತವೆ. ರಜಾಕಾರರನ್ನು ಊರಲ್ಲಿ ಕಾಲಿಡದಂತೆ ನೋಡಿಕೊಂಡಿದ್ದು ಮುಸ್ಲಿಮ್ ಬಾಂಧವರು. ಹಾಗೆಯೇ ನಂತರ ಮುಸ್ಲಿಮರನ್ನು ರಕ್ಷಣೆ ಮಾಡಿದ್ದು ಮುಸ್ಲಿಮೇತರ ಸಮುದಾಯವೇ ಎನ್ನುವುದಕ್ಕೆ ಸುಂದರಲಾಲ್ ವರದಿಯಲ್ಲಿಯೂ ಮತ್ತು ಅಂದಿನ ಅಸಂಖ್ಯ ಹಿರಿಯರ ಬಾಯಿಯಿಂದಲೂ ಕೇಳಬಹುದು ಮತ್ತು ಓದಬಹುದು. ಈ ಪ್ರಕರಣಗಳು ಮೈನವಿರೇಳಿಸುವಂತಹವು. ಸೌಹಾರ್ದದಿಂದ ಬಾಳುವ ಬೀಜ ನೆಟ್ಟ ಕಾರಣ ಎಷ್ಟೆಲ್ಲ ದಾಳಿ ಬಂದರೂ ವಿವೇಕವೆಂಬುದು ಮುನ್ನೆಲೆಯಲ್ಲಿಯೇ ಬಂದು ಜನರನ್ನು ಒಗ್ಗೂಡಿಸಿದೆ. ಆಳುವ ವರ್ಗವು ಜನರಬದುಕಿನ ಸೌಹಾರ್ದವನ್ನು ಕದಡಿ ಅಧಿಕಾರ ಕಬಳಿಸುವ ಹುನ್ನಾರಕ್ಕೆ ಜನಸಾಮಾನ್ಯರು ಬಲಿಯಾಗಲಿಲ್ಲ.
ಆದರೆ ಕೋಮುವಾದಿ ಪ್ರಭುತ್ವವು ಸೌಹಾರ್ದ ಪರಂಪರೆಯನ್ನು ಕೆಡಿಸುವ ಷಡ್ಯಂತ್ರ ತೀವ್ರಗೊಳಿಸಿದೆ. ಅಂಜನಾದ್ರಿ ಬೆಟ್ಟವನ್ನು ಅಯೋಧ್ಯೆಗೆ ಹೆಣೆದು ಕೋಮುಸಂಸ್ಕೃತಿಗೆ ವ್ಯಾಪಾರೀಕರಣ ಜೋಡಿಸಿ ಕೋಮುವಿಷ ಹರಡಲಾಗುತ್ತಿದೆ. ಜನಪದರ ಆರಾಧನೆಯ ಕೇಂದ್ರಗಳನ್ನು ಕೋಮುವ್ಯಾಧಿಯತ್ತ ಸೆಳೆಯಲಾಗುತ್ತಿದೆ. ಆಳಂದನ ಸೌಹಾರ್ದ ಕೇಂದ್ರ ಲಾಡ್ಲೆ ಮಷಾಕ್ ದರ್ಗಾವನ್ನು ಗುರಿಯಾಗಿಸಲಾಗಿದೆ. ಒಟ್ಟೂ ಹೈದರಾಬಾದ ಕರ್ನಾಟಕವನ್ನು ಕೋಮುತೆಕ್ಕೆಗೆ ಜಾರಿಸಲು ಬಹುದೊಡ್ಡ ಯೋಜನೆ ಹೆಣೆಯಲಾಗಿದೆ.
ವಚನ ಚಳವಳಿಯು ಸೌಹಾರ್ದದ ಕೇಂದ್ರ. ಆದರೆ ಲಿಂಗಾಯತ ಸಮುದಾಯಕ್ಕೆ ಕೋಮುವ್ಯಾಧಿ ತಗಲಿಸಲಾಗುತ್ತಿದೆ. ಲಿಂಗಾಯತ ತತ್ವದ ಕಾಯಕ ಸಮುದಾಯಗಳನ್ನು ಗುರಿಯಾಗಿಸಿ ಸೌಹಾರ್ದ ಬದುಕಿಗೆ ಧಕ್ಕೆ ತರಲಾಗುತ್ತಿದೆ.
ಹಾಗೆ ನೋಡಿದರೆ ಹೈದರಾಬಾದ ಕರ್ನಾಟಕವು ಜಮೀನ್ದಾರಿ ಪಾಳೇಗಾರಿ ಹಿಡಿತದಲ್ಲಿರುವ ನಾಡು. ಇಂದಿಗೂ ಭೂರಹಿತರ ಪ್ರಮಾಣವು ಬೇರೆಲ್ಲ ಪ್ರದೇಶಗಳಿಗಿಂತ
ಇಲ್ಲಿ ಹೆಚ್ಚಿದೆ. ಭೂಸುಧಾರಣೆಯ ಕಾಯ್ದೆಯ ಜಾರಿಯು ಅಂತಹ ದೊಡ್ಡ ಬದಲಾವಣೆಯೇನು ತರಲಿಲ್ಲ. ನೀತಿ ನಿರೂಪಣೆಯ ಆಳುವ ಸ್ಥಾನದಲ್ಲಿ ಇವರು ಜಮೀನ್ದಾರರೆ. ಪಾಳೆ ಪಟ್ಟುಗಳೆ. ಹೀಗಿದ್ದಾಗ ಹಿಂಬಾಗಿಲಿನಿಂದ ಭೂಮಿಯನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವ ತಾಂತ್ರಿಕ ವ್ಯವಸ್ಥೆ ಮಾಡಿಕೊಂಡು ಕಾಯ್ದೆ ತಂದಿದೆ. ಇದರಿಂದಾಗಿ ಭೂವಂಚಿತರು ಈಗಲೂ ಉಳುಮೆಗೈದ ಭೂಮಿಗಾಗಿ ಕಾದಿದ್ದಾರೆ. ಈ ಕಾರಣದಿಂದ ಇಲ್ಲಿ ಬಡತನ, ನಿರುದ್ಯೋಗ, ವಲಸೆ, ಮಹಿಳೆ ಮತ್ತು ದಲಿತ-ದಮನಿತರ ಮೇಲೆ ಪಾಳೇಗಾರಿ ಹಿಡಿತ ಇದ್ದೇ ಇದೆ. ಆದ್ದರಿಂದಲೇ ಇಲ್ಲಿ ಬಾಲ್ಯ ವಿವಾಹ, ಮೂಢನಂಬಿಕೆಗಳು ವೆಗ್ಗಳವಾಗಿವೆ.
ಕೋಮುವಾದಿ ಪ್ರಭುತ್ವವು ಮತ್ತು ಅಂತರಂಗದ ಕೋಮುವಾದಿ ಪ್ರಭುತ್ವವು ಒಟ್ಟಾಗಿ ಜನರನ್ನು ಯಥಾಸ್ಥಿತಿಯಲ್ಲಿಟ್ಟು ಸಂಕಟಕ್ಕೆ ದೂಡಿ ಅವರನ್ನು ಆರ್ಥಿಕ ಸಂಕಟಗಳಿಂದ ವಿಮುಖಗೊಳಿಸುವ ಹುನ್ನಾರದ ಭಾಗವಾಗಿ ಕೋಮುದಂಗೆಯನ್ನು ಹಬ್ಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಜನರನ್ನು ಭಾವನಾತ್ಮಕಗೊಳಿಸುವಲ್ಲಿ ಕೋಮು-ಕಾರ್ಪೊರೇಟಿಕರಣವು ಸೌಹಾರ್ದ ಜನಬದುಕಿನ ಮೇಲೆ ದಾಳಿ ಮಾಡುತ್ತಿದೆ. ಇಂತಹ ಹೊತ್ತಿನಲ್ಲಿ ನಮ್ಮ ಮುಂದಿರುವ ಸವಾಲೆಂದರೆ ಜನರನ್ನು ಆರ್ಥಿಕ ಸಂಕಟಗಳಿಗೆ ಎದುರಾಗಿ ಸಂಘಟಿಸಬೇಕು. ಇದೇ ಸಂದರ್ಭದಲ್ಲಿ ಈ ನೆಲದ ಸೌಹಾರ್ದದ ಬೇರುಗಳನ್ನು ಗಟ್ಟಿಗೊಳಿಸಲೂ ಶ್ರಮಿಸಬೇಕು. ಧರ್ಮ ಮತ್ತು ರಾಜಕಾರಣ ಬೆರೆಸುವ ಷಡ್ಯಂತ್ರವನ್ನು ಹಿಮ್ಮೆಟ್ಟಿಸಬೇಕು.