ಜನರು ಸುದ್ದಿಗೆ ಹಣ ನೀಡಿದರೆ ಮಾಧ್ಯಮಗಳು ಜನರಿಗಾಗಿಯೇ ಕೆಲಸ ಮಾಡುತ್ತವೆ: ಧನ್ಯಾ ರಾಜೇಂದ್ರನ್
ಒಳ್ಳೆಯ ಕೆಲಸ ಮಾಡುವ ಟಿವಿ, ಪತ್ರಕರ್ತರು ಮತ್ತು ಸಂಪಾದಕರೂ ಇದ್ದಾರೆ. ಆದರೂ, ಹೆಚ್ಚಿನ ಟಿವಿ ಚಾನೆಲ್ಗಳು ತೀರಾ ಸಾಧಾರಣವಾದುದರಲ್ಲೇ ತೃಪ್ತಿಪಡುತ್ತಿವೆ ಮತ್ತು ಯಾವುದೇ ವಿಷಯದ ಆಳಕ್ಕೆ ಅವು ಇಳಿಯುವುದಿಲ್ಲ. ಆರೊ ಎಂಟೊ ಮಂದಿಯನ್ನು ಕೂರಿಸಿಕೊಂಡು ಮಾಡುವ ಚರ್ಚಾ ಕಾರ್ಯಕ್ರಮಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ರಂಜಿಸಲು ಅವಕ್ಕೆ ತೀರಾ ಸುಲಭ ಮತ್ತು ಅಗ್ಗದ ಮಾರ್ಗವಾಗಿದೆ.
ಟಿವಿ ಮಾಧ್ಯಮದಲ್ಲಿ ಹಲವಾರು ವರ್ಷ ಕೆಲಸ ಮಾಡಿದ ನಂತರ, ಡಿಜಿಟಲ್ ಮಾಧ್ಯಮಕ್ಕೆ ಬರಲು ನಿಮಗೆ ಪ್ರೇರಣೆ ಏನು? ಈ ಹೊಸ ಮಾಧ್ಯಮ ಪ್ರಕಾರದಲ್ಲಿನ ನಿಮ್ಮ ಪ್ರಯಾಣವನ್ನು ವಿವರಿಸಬಹುದೆ?
► ನಾನು 2005ರಲ್ಲಿ ಟಿವಿ ಚಾನೆಲ್ಗೆ ಸೇರಿದಾಗ, ಭಾರತದಲ್ಲಿ ಇಂಗ್ಲಿಷ್ ಸುದ್ದಿ ಉದ್ಯಮದ ಏರುಗತಿ ಶುರುವಾಗಿತ್ತು. ಅದು ರೋಚಕ ಸಮಯವಾಗಿತ್ತು. ಆದರೂ, ಟಿವಿ ಪತ್ರಕರ್ತೆಯಾಗಿ ಎಂಟು ವರ್ಷಗಳನ್ನು ಕಳೆದ ನಂತರ, ಮಾಧ್ಯಮ ನಿಂತಲ್ಲೇ ನಿಂತಿದೆ ಮತ್ತು ದಿಲ್ಲಿ, ಮುಂಬೈ ಆಚೆಗಿನ ಪ್ರದೇಶಗಳನ್ನು ಅದು ಗಣನೆಗೇ ತೆಗೆದುಕೊಳ್ಳುತ್ತಿಲ್ಲ ಎಂಬುದರ ಅರಿವಾಯಿತು. ಭಾರತದ ದಕ್ಷಿಣ ಭಾಗದ ಸುದ್ದಿಗಳು ಮತ್ತು ವಿದ್ಯಮಾನಗಳು ರಾಷ್ಟ್ರೀಯ ಬುಲೆಟಿನ್ಗಳಲ್ಲಿ ಬರುವಂತಾಗಲು ನಿರಂತರ ಬೆನ್ನು ಬೀಳಬೇಕಾಗಿದ್ದ ಸ್ಥಿತಿಯಿಂದ ಸಾಕುಸಾಕೆನ್ನಿಸಿಬಿಡುತ್ತಿತ್ತು ಮತ್ತು ಅನೇಕ ಬಾರಿ ಹತಾಶೆ ಉಂಟಾಗುತ್ತಿತ್ತು. ಕೇವಲ ಸಂಚಲನ ಉಂಟುಮಾಡ ಬಯಸುವ ಮಾಧ್ಯಮದ ಗುಣದಿಂದಾಗಿ ನಾನು ಕೂಡ ಕ್ರಮೇಣ ದಣಿದುಬಿಟ್ಟಿದ್ದೆ. ಒಂದು ಟಿವಿ ಚಾನೆಲ್ ತೊರೆದಾಗ, ಇನ್ನೊಂದು ಟಿವಿ ಚಾನೆಲ್ಗೆ ಹೋಗುವುದು ಅಥವಾ ಮುದ್ರಣ ಮಾಧ್ಯಮದಲ್ಲಿನ ಅವಕಾಶ ನನ್ನ ಮುಂದಿದ್ದ ಆಯ್ಕೆಯಾಗಿತ್ತು. ಆಗ ನನ್ನ ೩೦ರ ಆರಂಭದಲ್ಲಿದ್ದೆ. ಬಹುಶಃ ಪ್ರಯೋಗಕ್ಕೆ ಅದೇ ಸೂಕ್ತ ಕಾಲ ಎನ್ನಿಸಿತು. ಹೇಗಿರುತ್ತದೆ ಎಂಬುದರ ಬಗ್ಗೆ ಗೊತ್ತಿಲ್ಲದೆಯೂ ಡಿಜಿಟಲ್ ಸುದ್ದಿ ಮಾಧ್ಯಮವನ್ನು ಶುರುಮಾಡಲು ನಿರ್ಧರಿಸುವುದಕ್ಕೆ ಅದೇ ಕಾರಣವಾಯಿತು. ಏನಾದರೂ ಆಗಲಿ, ಕಣ್ಣುಮುಚ್ಚಿ ಧುಮುಕಿಬಿಡುವುದು ಎಂದು ನಿರ್ಧರಿಸಿದೆ. ಆ ಹೊತ್ತಿನಲ್ಲಿ ಡಿಜಿಟಲ್ ಉದ್ಯಮಕ್ಕೆ ಅಗತ್ಯವಿರುವ ಸಿಬ್ಬಂದಿ, ಸಮಯ ಮತ್ತು ಆರ್ಥಿಕ ಸಂಪನ್ಮೂಲ ಸೇರಿದಂತೆ ಯಾವುದರ ಬಗ್ಗೆಯೂ ನನಗೆ ತಿಳಿದಿರಲಿಲ್ಲ. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸಿದ್ದ ಒಬ್ಬ ಟಿವಿ ಪತ್ರಕರ್ತೆ ಮಾತ್ರ ಆಗಿದ್ದೆ. ಆದರೆ ನನ್ನ ಪ್ರಯೋಗ ಯಶಸ್ವಿಯಾಯಿತು.
ನೀವು ಟಿವಿ ಚಾನೆಲ್ನಲ್ಲಿದ್ದ ಸಮಯದ ಕಥನಗಳನ್ನು ಹೇಳಿಕೊಂಡಿದ್ದಿದೆ. ಎಕ್ಸ್ ಕ್ಲೂಸಿವ್ ವರದಿಗಳು ಮತ್ತು ಸಂದರ್ಶನಗಳಿಗಾಗಿ ಅನುಭವಿಸಿದ್ದ ಒತ್ತಡದ ಬಗ್ಗೆ ಹೇಳಿದ್ದಿದೆ. ಚಾನೆಲ್ಗಳ ಆ ಅಗತ್ಯಗಳನ್ನು ಪೂರೈಸುವುದು ಎಷ್ಟು ಸವಾಲಿನದ್ದಾಗಿತ್ತು?
► ಟಿವಿ ಮಾಧ್ಯಮ ಪ್ರತಿದಿನವೂ ಹೊಸ ಅನುಭವವನ್ನು ಕೊಡುತ್ತಿತ್ತು. ಒಂದು ದಿನ ಕಟ್ಟಡ ಕುಸಿತದ ವರದಿ ಮಾಡಿದರೆ, ಮರುದಿನ ಪ್ರಮುಖ ರಾಜಕಾರಣಿಯ ಸಂದರ್ಶನ, ವಿಮಾನ ಅಪಘಾತ, ಪ್ರತಿಭಟನೆ, ರೈಲು ಅಪಘಾತ, ಸೆಲೆಬ್ರಿಟಿಯ ಮದುವೆ ಅಥವಾ ಕ್ರಿಕೆಟ್ ಪಂದ್ಯ ಯಾವುದೂ ಆಗಿರಬಹುದಿತ್ತು. ಯಾವುದೇ ವಿರಾಮವಿಲ್ಲದೆ ಮತ್ತು ತಯಾರಿಗೆ ಹೆಚ್ಚು ಸಮಯವಿಲ್ಲದೆ ಒಂದು ಸ್ಟೋರಿಯಿಂದ ಇನ್ನೊಂದಕ್ಕೆ ಹೊರಳಬೇಕಿತ್ತು. ಅತ್ಯುತ್ಸಾಹದ ಮನಃಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೆವು. ವರ್ಷಗಳು ಕಳೆಯುತ್ತಾ, ಹೆಚ್ಚು ಟಿವಿ ಚಾನೆಲ್ಗಳು ಪೈಪೋಟಿಗೆ ಇಳಿಯುತ್ತಿದ್ದಂತೆ ಒತ್ತಡಗಳು ಹೆಚ್ಚಾದವು. ಪ್ರತಿ ದಿನವೂ ವಿಶೇಷವಾದದ್ದನ್ನೇ ತರಬೇಕೆಂಬ ಒತ್ತಡ ನ್ಯೂಸ್ ರೂಮ್ನಿಂದ ಬರುವುದೂ ಹೆಚ್ಚಿತು. ಕೆಲಸದ ಗೀಳಿಗೆ ಬಿದ್ದವರಂತೆ ವಾರಕ್ಕೆ ಹಲವಾರು ಗಂಟೆಗಳ ಕಾಲ ದುಡಿಯಲಾರದವರಿಗೆ ಟಿವಿಯಲ್ಲಿ ವರದಿಗಾರರಾಗಿ ಉಳಿಯುವುದು ಕಷ್ಟವಾಗತೊಡಗಿತ್ತು. ಅಷ್ಟೆಲ್ಲ ಕೆಲಸ ಮಾಡಿಯೂ, ಅತ್ಯುತ್ತಮ ವರದಿಯನ್ನು ಕೊಟ್ಟ ಮೇಲೂ, ದಕ್ಷಿಣ ರಾಜ್ಯದ ಆ ವರದಿ ಹೆಚ್ಚೆಂದರೆ ೬ರಿಂದ ೭ ವಿದ್ಯಮಾನಗಳಿಗೇ ಸೀಮಿತವಾಗಿರುತ್ತಿದ್ದ ಬುಲೆಟಿನ್ನಲ್ಲಿ ಜಾಗ ಪಡೆಯುವಂತಾಗಲು ದುಂಬಾಲು ಬೀಳಬೇಕಾಗುತ್ತಿತ್ತು. ನಾನು ಟಿವಿ ವರದಿಗಾರ್ತಿಯಾಗಿದ್ದಾಗ, ಎಲ್ಲಾ ಒತ್ತಡಗಳ ಹೊರತಾಗಿಯೂ ನನ್ನ ಕೆಲಸವನ್ನು ಸಂಪೂರ್ಣವಾಗಿ ಆನಂದಿಸಿದೆ ಎಂದು ಒಪ್ಪಿಕೊಳ್ಳಲೇಬೇಕು. ನಾವು ಸ್ವವಿಮರ್ಶಕರಾಗಿರದೇ ಇದ್ದುದೂ ಅದಕ್ಕೆ ಕಾರಣವಾಗಿತ್ತು. ಇಂದು ನಾನು ನನ್ನ ಟಿವಿ ಕೆಲಸದ ದಿನಗಳತ್ತ ಹಿಂದಿರುಗಿ ನೋಡಿದಾಗ, ಮಾಧ್ಯಮ ನಮ್ಮನ್ನು ಎಷ್ಟು ಸೀಮಿತ ತಿಳುವಳಿಕೆಯಲ್ಲಿ ಇರಿಸಿತ್ತು ಎಂಬುದು ಅರ್ಥವಾಗುತ್ತದೆ.
ಭಾರತದ ದಕ್ಷಿಣ ಭಾಗದ ಸುದ್ದಿಗಳು ಮತ್ತು ವಿದ್ಯಮಾನಗಳು ರಾಷ್ಟ್ರೀಯ ಬುಲೆಟಿನ್ಗಳಲ್ಲಿ ಬರುವಂತಾಗಲು ನಿರಂತರ ಬೆನ್ನು ಬೀಳಬೇಕಾಗಿದ್ದ ಸ್ಥಿತಿಯಿಂದ ಸಾಕುಸಾಕೆನ್ನಿಸಿಬಿಡುತ್ತಿತ್ತು ಮತ್ತು ಅನೇಕ ಬಾರಿ ಹತಾಶೆ ಉಂಟಾಗುತ್ತಿತ್ತು. ಕೇವಲ ಸಂಚಲನ ಉಂಟುಮಾಡ ಬಯಸುವ ಮಾಧ್ಯಮದ ಗುಣದಿಂದಾಗಿ ನಾನು ಕೂಡ ಕ್ರಮೇಣ ದಣಿದುಬಿಟ್ಟಿದ್ದೆ.
ಅಂದು ಟಿವಿ ಚಾನೆಲ್ ತೊರೆದಾಗ, ಇನ್ನೊಂದು ಟಿವಿ ಚಾನೆಲ್ಗೆ ಹೋಗುವುದು ಅಥವಾ ಮುದ್ರಣ ಮಾಧ್ಯಮದಲ್ಲಿನ ಅವಕಾಶ ನನ್ನ ಮುಂದಿದ್ದ ಆಯ್ಕೆಯಾಗಿತ್ತು. ಆಗ ನನ್ನ ೩೦ರ ಆರಂಭದಲ್ಲಿದ್ದೆ. ಬಹುಶಃ ಪ್ರಯೋಗಕ್ಕೆ ಅದೇ ಸೂಕ್ತ ಕಾಲ ಎನ್ನಿಸಿತು.
ಅನೇಕ ಟಿವಿ ಚಾನೆಲ್ಗಳು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದರೂ, ನೈಜ ವರದಿಗಾರಿಕೆ ಬಿಟ್ಟು ಏಕೆ ಗಿಮಿಕ್ಗಳಲ್ಲಿಯೇ ತೊಡಗಿವೆ?
► ನೈಜ ವರದಿ ಮಾಡದಿರುವುದಕ್ಕೆ ಹಣಕಾಸಿನ ಕೊರತೆಯ ನೆಪ ಯಾವಾಗಲೂ ಒಂದು ಸಮರ್ಥನೆಯಾಗುತ್ತಿದೆ. ಆದರೆ ಇದು ನಿಜವಲ್ಲ. ಟಿವಿ ಚಾನೆಲ್ಗಳು ಚುನಾವಣೆಗಳ ವರದಿಗಾರಿಕೆಗೆ, ಮತಗಟ್ಟೆ ಸಮೀಕ್ಷೆಗಳಿಗೆ ಮತ್ತು ಅದ್ದೂರಿ ಕಾರ್ಯಕ್ರಮಗಳಿಗೆ ಹಾಕುವ ಹಣವನ್ನು ನೋಡಿ. ದೇಶದಲ್ಲಿನ ಪ್ರಸಕ್ತ ಸಾಮಾಜಿಕ ವಿದ್ಯಮಾನಗಳ ವಿಚಾರವನ್ನು ಹೇಳಲು ಈ ಚಾನಲ್ಗಳು ಹೂಡಿಕೆ ಮಾಡಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಲು ನಾನು ಬಯಸುವುದಿಲ್ಲ. ಒಳ್ಳೆಯ ಕೆಲಸ ಮಾಡುವ ಟಿವಿ, ಪತ್ರಕರ್ತರು ಮತ್ತು ಸಂಪಾದಕರೂ ಇದ್ದಾರೆ. ಆದರೂ, ಹೆಚ್ಚಿನ ಟಿವಿ ಚಾನೆಲ್ಗಳು ತೀರಾ ಸಾಧಾರಣವಾದುದರಲ್ಲೇ ತೃಪ್ತಿಪಡುತ್ತಿವೆ ಮತ್ತು ಯಾವುದೇ ವಿಷಯದ ಆಳಕ್ಕೆ ಅವು ಇಳಿಯುವುದಿಲ್ಲ. ಆರೊ ಎಂಟೊ ಮಂದಿಯನ್ನು ಕೂರಿಸಿಕೊಂಡು ಮಾಡುವ ಚರ್ಚಾ ಕಾರ್ಯಕ್ರಮಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ರಂಜಿಸಲು ಅವಕ್ಕೆ ತೀರಾ ಸುಲಭ ಮತ್ತು ಅಗ್ಗದ ಮಾರ್ಗವಾಗಿದೆ. ಮೊದಲು ಚರ್ಚಾ ಕಾರ್ಯಕ್ರಮಗಳು ರಾತ್ರಿಯ ಪ್ರೈಂ ಟೈಮ್ನಲ್ಲಿ ಮಾತ್ರ ನಡೆಯುತ್ತಿದ್ದವು. ಇದು ದುಬಾರಿಯದ್ದಲ್ಲ ಮತ್ತು ಹೆಚ್ಚು ಸಂಶೋಧನೆಯೂ ಬೇಕಿಲ್ಲ ಎನ್ನಿಸಿದ ಬಳಿಕ ಬೇರೆ ಬೇರೆ ಸಮಯಗಳಲ್ಲಿಯೂ ನಡೆಸುವುದು ಶುರುವಾಯಿತು. ತುಂಬಾ ಸಂಶೋಧನೆಯ ಅಗತ್ಯವಿರುವ ವರದಿಯನ್ನು ಮಾಡಲು ಹೆಚ್ಚು ಸಮಯ ಮತ್ತು ಹೂಡಿಕೆ ಬೇಕು. ನಾನು ಹೂಡಿಕೆ ಎಂದು ಹೇಳುತ್ತಿರುವುದು ಹಣ ಎಂಬ ಅರ್ಥದಲ್ಲಲ್ಲ. ಎತ್ತಿಕೊಳ್ಳುವ ವಿಷಯವಾಗಿ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಅಗತ್ಯವಾದ ತೊಡಗಿಸಿಕೊಳ್ಳುವಿಕೆ ಎಂಬ ಅರ್ಥದಲ್ಲಿ ಹೇಳುತ್ತಿದ್ದೇನೆ. ಇದು ಪೂರ್ತಿಯಾಗಿ ಕಾಣೆಯೇ ಆಗಿಬಿಟ್ಟಿದೆ.
ಭಾರತೀಯ ಟಿವಿ ಚಾನೆಲ್ಗಳು ದೊಡ್ಡ ಸಂಖ್ಯೆಯ ವೀಕ್ಷಕರನ್ನು ಹೊಂದಿವೆ. ಆದರೆ ನೈಜ ವರದಿಗಾರಿಕೆ ಟಿಎನ್ಎಂ ಮತ್ತು ದಿ ವೈರ್ನಂತಹ ಡಿಜಿಟಲ್ ಮೀಡಿಯಾ ವೇದಿಕೆಗಳಿಗೆ ಸ್ಥಳಾಂತರಗೊಂಡಿದೆ. ಪತ್ರಕರ್ತರೇ ನಡೆಸುವ ಡಿಜಿಟಲ್ ಮಾಧ್ಯಮದ ಪ್ರಭಾವಶಾಲಿ ವರದಿಗಳು ಹೆಚ್ಚು ಜನರನ್ನು ತಲುಪುವುದಿಲ್ಲ ಎಂಬ ಗ್ರಹಿಕೆ ಇದೆ. ಇದು ನಿಜವೇ? ಹಾಗಿದ್ದಲ್ಲಿ ನಾವು ಈ ಅಂತರವನ್ನು ಹೇಗೆ ಸರಿಪಡಿಸಬಹುದು?
► ಈ ಪರಿಸ್ಥಿತಿ ಇರುವುದು ದುರದೃಷ್ಟಕರವಾದರೂ, ಹೊಸ ಸಂಸ್ಥೆಯಾಗಿ ನಾವು ಈ ನಿಟ್ಟಿನಲ್ಲಿ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಸುದ್ದಿ ಪ್ರಸಾರ ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ಎಕ್ಸ್ನಂತಹ ಪ್ಲಾಟ್ಫಾರಂಗಳನ್ನು ಅವಲಂಬಿಸಿದೆ. ನಾವು ಗೂಗಲ್ ಅಲ್ಗಾರಿದಮ್ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದೇವೆ. ಈ ವೇದಿಕೆಗಳು ಕೆಲವೊಮ್ಮೆ ಚಿಕ್ಕ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತವೆ. ಆದರೆ, ದೊಡ್ಡ ಮಾಧ್ಯಮಗಳ ಬರಹಗಳು, ವೀಡಿಯೊಗಳ ಭಾರೀ ಹರಿವಿನ ಕಾರಣದಿಂದಾಗಿ ಇದು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ನಾವು ಹೆಚ್ಚು ಜನರನ್ನು ತಲುಪುವುದು ಹೇಗೆ? ಒಂದೇ ರೀತಿಯ ಮೌಲ್ಯಗಳನ್ನು ನಂಬುವ ಮತ್ತು ಹಂಚಿಕೊಳ್ಳುವ ಮಾಧ್ಯಮ ಸಂಸ್ಥೆಗಳು ಪರಸ್ಪರರನ್ನು ಬೆಳೆಸಬೇಕು. ಇಂಗ್ಲಿಷ್ ಡಿಜಿಟಲ್ ಮಾಧ್ಯಮದಿಂದ ಬಹಳಷ್ಟು ಕೆಲಸಗಳು ನಡೆಯುತ್ತಿರುವುದರಿಂದ, ಸ್ಥಳೀಯ ಭಾಷೆಗಳಲ್ಲಿನ ಮಾಧ್ಯಮ ಸಂಸ್ಥೆಗಳೊಂದಿಗೆ ಕೂಡಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಸಣ್ಣ ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ ಎಂದು ನಂಬುವವರು ಅವುಗಳ ವರದಿಗಳನ್ನು ಹಂಚಿಕೊಳ್ಳಲು, ಪ್ರಸಾರ ಮಾಡಲು ಮತ್ತು ಆ ಮಾಧ್ಯಮ ಸಂಸ್ಥೆಗಳಿಗೆ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಬೆಂಬಲಿಸಲು ಮುಂದಾಗಬೇಕು.
ಜನರು ತಮ್ಮ ಚುನಾಯಿತ ಪ್ರತಿನಿಧಿಗಳು ಅಥವಾ ಸರಕಾರದ ಭ್ರಷ್ಟಾಚಾರ ಮತ್ತು ಅನೈತಿಕ ನಡವಳಿಕೆಯ ಬಗ್ಗೆ ಅಸಡ್ಡೆ ತೋರಿಸುತ್ತಾ, ನೈಜ ವರದಿಗಳು ಮತ್ತು ಕಟು ವಾಸ್ತವಗಳನ್ನು ಕಡೆಗಣಿಸುತ್ತಾರೆ ಎಂಬ ದೂರು ಸಾಮಾನ್ಯ. ಬದಲಾಗಿ ಅವರು ಗಿಮಿಕ್ಗಳು, ನಾಟಕೀಯತೆ, ಟಿವಿ ಚಾನೆಲ್ಗಳಲ್ಲಿನ ಸಂಚಲನ ಮೂಡಿಸುವ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಗ್ರಹಿಕೆ ಎಷ್ಟು ನಿಜವೆಂದು ನಿಮಗೆ ಅನ್ನಿಸುತ್ತದೆ?
► ಅದು ಮನುಷ್ಯ ಸ್ವಭಾವ. ನಾವು ಹೆಚ್ಚು ಸಂಚಲನ ಮೂಡಿಸುವ, ಸರಳ ಅಥವಾ ಅತ್ಯಂತ ಮತಾಂಧ ವಿಚಾರಗಳನ್ನು ನಂಬುತ್ತೇವೆ. ಏಕೆಂದರೆ ಅವು ನಮ್ಮ ಪೂರ್ವ ಗ್ರಹಗಳಿಗೆ ಬಲವಾಗುತ್ತವೆ ಮತ್ತು ಸಾಮಾಜಿಕ ವಾಸ್ತವ, ಅಸಮಾನತೆ ಮತ್ತು ನಮ್ಮದೇ ಪಕ್ಷಪಾತ ಧೋರಣೆಯನ್ನು ಪ್ರಶ್ನಿಸುವುದರಿಂದ ತಪ್ಪಿಸಿಕೊಳ್ಳಲು ನಮಗೆ ನೆರವಾಗುತ್ತವೆ. ಉದಾಹರಣೆಗೆ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಅಥವಾ ಮುಸ್ಲಿಮ್ ಜನಸಂಖ್ಯೆಯು ಅಗಾಧವಾಗಿ ಬೆಳೆಯುತ್ತಿದೆ ಅಥವಾ ಲವ್ ಜಿಹಾದ್ ನಿಜ ಎಂದು ಸುಲಭವಾಗಿ ಹೇಳುವ ಅನೇಕ ಭಾರತೀಯರಿದ್ದಾರೆ. ಅವರ ಈ ವಾದಗಳನ್ನು ಬೆಂಬಲಿಸುವ ಡೇಟಾ ಕುರಿತು ನೀವು ಪ್ರಶ್ನಿಸಿದಾಗ, ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಏನೂ ಇರುವುದಿಲ್ಲ. ಅವರ ವಾದಗಳಿಗೆ ವಿರುದ್ಧವಾದ ಡೇಟಾವನ್ನು ನೀವು ಅವರಿಗೆ ನೀಡಿದಾಗ, ಅವರು ಅದನ್ನು ತಪ್ಪೆಂದು ತಳ್ಳಿಹಾಕುವ ಸಾಧ್ಯತೆಯೇ ಹೆಚ್ಚು. ಅವರ ನಿಜ ಜೀವನದ ಅನುಭವಗಳಿಂದ ಅವರು ಮಾತನಾಡುತ್ತಾರೆಯೇ ಎಂದು ನೋಡಹೊರಟರೆ, ಅಂತಹ ಯಾವ ಅನುಭವವನ್ನೂ ಬಹುಶಃ ಅವರು ಹೊಂದಿರುವುದಿಲ್ಲ. ಆದರೆ ಇದೆಲ್ಲದರ ಹೊರತಾಗಿಯೂ, ಅವರು ತಮ್ಮ ಅಭಿಪ್ರಾಯಗಳಿಗೆ ಅಂಟಿಕೊಳ್ಳುತ್ತಾರೆ. ಇದಕ್ಕೆ ಪ್ರಾಥಮಿಕವಾಗಿ ಎರಡು ಕಾರಣಗಳಿವೆ. ಒಂದು, ಜನರು ಒಂದೇ ತರಹದ ಮಾತುಗಳು ಅಥವಾ ತಮ್ಮದೇ ಮಾತುಗಳಿಂದ ಪ್ರಭಾವಿತವಾಗುವಂತಹ ಸೀಮಿತ ವಲಯದಲ್ಲಿ ಇರುತ್ತಾರೆ ಮತ್ತು ಅವರು ತಮ್ಮದೇ ಆದ ಪಕ್ಷಪಾತವನ್ನು ದೃಢಪಡಿಸಲು ಬಳಸುವ ಅಂಶವು ತಪ್ಪು ಮಾಹಿತಿಯೂ ಆಗಿರಬಹುದು. ಎರಡನೇಯ ಕಾರಣವೆಂದರೆ, ಧರ್ಮಾಂಧತೆ, ಅಸಹಿಷ್ಣುತೆ ಅಥವಾ ಕೋಮುವಾದಗಳು ಈಗ ಕೀಳು ಸಂಗತಿಯಾಗಿ ಉಳಿದಿಲ್ಲ. ಅದಕ್ಕೆ ವಿರುದ್ಧವಾಗಿ, ಅಂತಹ ದೃಷ್ಟಿಕೋನವನ್ನು ಅನಾಯಾಸವಾಗಿ ಹಂಚಿಕೊಳ್ಳುವವರನ್ನು ಅನುಸರಿಸುವ ಸಾವಿರಾರು ಜನರಿದ್ದಾರೆ. ಸಾಮಾನ್ಯ ಜನ ಮಾತ್ರವಲ್ಲದೆ ರಾಜಕಾರಣಿಗಳು ಮತ್ತು ಅಧಿಕಾರದಲ್ಲಿರುವ ಸರಕಾರವೂ ಅಂಥದೇ ದೃಷ್ಟಿಕೋನವನ್ನು ಒಪ್ಪಿಕೊಂಡಿರುವಾಗ ಜನರನ್ನು ತಡೆಯಲು ಆಗುವುದಿಲ್ಲ.
ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿದೆ. ೨೦೧೯ರ ಚುನಾವಣೆಯ ಹೊತ್ತಿನಲ್ಲಿ ಮುಖ್ಯವಾಹಿನಿಯ ಪತ್ರಿಕೆಗಳು ಮತ್ತು ಟಿವಿ ಸುದ್ದಿ ವಾಹಿನಿಗಳು ತೋರಿದ್ದ ನಡವಳಿಕೆಯನ್ನು ಗಮನಿಸಿದರೆ, ಮುಂಬರುವ ಚುನಾವಣೆಯ ವೇಳೆ ಭಾರತೀಯ ಮಾಧ್ಯಮಗಳು ಎದುರಿಸುವ ಸವಾಲುಗಳು ಎಂಥವು ?
► ದುರದೃಷ್ಟವಶಾತ್, ಮಂಕು ಕವಿದಂಥ ಸನ್ನಿವೇಶ ನಮ್ಮೆದುರುಗಿದೆ. ಸರಕಾರದ ಪ್ರತಿಯೊಂದು ಅಪೇಕ್ಷೆಯನ್ನೂ ಪೂರೈಸುವ ಅಥವಾ ಅದು ಹೇಳುವುದನ್ನು ಉತ್ಪ್ರೇಕ್ಷಿಸುವ ಮಾಧ್ಯಮ ವರ್ಗದ ಶಕ್ತಿ ಮತ್ತು ವ್ಯಾಪ್ತಿ ದೊಡ್ಡದಾಗಿದೆ. ಸಣ್ಣ ಮಾಧ್ಯಮ ಸಂಸ್ಥೆಗಳು ಮತ್ತು ಬೆರಳೆಣಿಕೆಯಷ್ಟು ಪತ್ರಿಕೆಗಳು ಪ್ರಶ್ನಿಸುವುದನ್ನು ಮುಂದುವರಿಸಿದ್ದರೂ, ಅದು ಸಾಕಾಗುವುದಿಲ್ಲ. ನಮಗೆ ಬೇಕಾಗಿರುವುದು, ಜನರು ವಸ್ತುಸ್ಥಿತಿ ಅರಿತುಕೊಳ್ಳುವಂತೆ ಖಾತರಿ ಪಡಿಸುವ ನಾಗರಿಕ ಸಮಾಜದ ಒಕ್ಕೂಟ. ವಕೀಲರು, ಹೋರಾಟಗಾರರು, ಶಿಕ್ಷಕರು, ವಿದ್ಯಾರ್ಥಿಗಳು, ಪ್ರಭಾವಿಗಳು, ಚಿಂತಕರು ಸೇರಿದಂತೆ ಸಮಾಜದ ಹಲವು ಕ್ಷೇತ್ರಗಳ ಜನರು ಒಗ್ಗೂಡಬೇಕಾಗಿದೆ.
ನೈಜ ವರದಿಗಾರಿಕೆಯಲ್ಲಿ ತೊಡಗಿರುವ ಪತ್ರಕರ್ತರು ಮತ್ತು ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ ಸಾಮಾನ್ಯವಾಗಿ ಎದುರಾಗುವುದು ಹಣಕಾಸಿನ ಸಮಸ್ಯೆ. ಓದುಗರಿಂದ ಸದಸ್ಯತ್ವ ಪಡೆಯುವಂತಹ ಯತ್ನಕ್ಕೆ ಈವರೆಗೆ ಪ್ರತಿಕ್ರಿಯೆ ಹೇಗಿದೆ? ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಇದು ಸಾಕೇ?
► ಇದಕ್ಕೆ ಏಕರೂಪದ ಉತ್ತರವಿಲ್ಲ. ಕೆಲವು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಇತರ ಸಂಸ್ಥೆಗಳಿಗಿಂತ ಹೆಚ್ಚು ಯಶಸ್ವಿಯಾಗಿವೆ. ಹಾಗೆ ಯಶಸ್ವಿಯಾದ ಸಂಸ್ಥೆಗಳು ತಾವು ಉಳಿದು ಬೆಳೆಯುವುದಕ್ಕೆ ಈ ಹಣವನ್ನು ಬಳಸಲು ಸಮರ್ಥವಾಗಿವೆ. ಆದರೆ, ಅಂಥವುಗಳ ಸಂಖ್ಯೆ ತೀರಾ ಕಡಿಮೆ. ಹೆಚ್ಚಿನ ಸಂಸ್ಥೆಗಳು ತಮ್ಮ ಓದುಗರಿಂದ ಸಾಕಷ್ಟು ಹಣವನ್ನು ಸಂಗ್ರಹಿಸಲು ಹೆಣಗಾಡುತ್ತಿವೆ. ಕೆಲವು ಸವಾಲುಗಳ ಬಗ್ಗೆ ನಾನು ಪ್ರಸ್ತಾಪಿಸುತ್ತೇನೆ.
ಮೊದಲನೇಯದಾಗಿ, ಆದಾಯದ ಮಾರ್ಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಜನರು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಹೆಚ್ಚಿನ ಮಾಧ್ಯಮಗಳು ಸರಕಾರ ಅಥವಾ ಕಾರ್ಪೊರೇಟ್ ಜಾಹೀರಾತುಗಳನ್ನು ಅವಲಂಬಿಸಿವೆ. ಅದರಿಂದ ಸಾಮಾನ್ಯವಾಗಿ ತಮಗೆ ತಾವೇ ಕಡಿವಾಣ ಹಾಕಿಕೊಳ್ಳಬೇಕಾದ ಅಪಾಯವಿದೆ. ಕೆಲವು ನಿರ್ದಿಷ್ಟ ವರದಿಗಳನ್ನು ಮಾಡುವಂತೆ ಒತ್ತಡವೂ ಬರುತ್ತದೆ. ಹಾಗಾಗಿ, ಸಾರ್ವಜನಿಕರನ್ನು ಆರ್ಥಿಕ ನೆರವಿಗಾಗಿ ಕೇಳುವುದು ಶುದ್ಧವಾದ ಮಾರ್ಗ. ಸಾರ್ವಜನಿಕರು ಹಣ ನೀಡಿದಾಗ ಅವರಿಗಾಗಿ ಕೆಲಸ ಮಾಡಬಹುದು. ಈ ರೀತಿಯ ನಿಧಿಯ ಅಗತ್ಯವನ್ನು ಜನರು ಅರ್ಥಮಾಡಿಕೊಳ್ಳದಿದ್ದಾಗ, ನಮ್ಮ ಕೋರಿಕೆಯನ್ನು ಅವರು ಬದಿಗೆ ತಳ್ಳುತ್ತಾರೆ.
ಎರಡನೇಯದು, ಸ್ವತಂತ್ರ ಮಾಧ್ಯಮಗಳಿಗೆ ಯಾರೂ ಹಣ ನೀಡದಂತೆ ಮಾಡಲು ಸರಕಾರ ಉದ್ದೇಶಪೂರ್ವಕ ಪ್ರಯತ್ನ ನಡೆಸುವುದು ಜನರಿಗೆ ಅರ್ಥವಾಗುವುದಿಲ್ಲ. ಸುದ್ದಿ ಸಂಸ್ಥೆ ಗಳನ್ನು ಬೆದರಿಸುವುದು, ಮಾಧ್ಯಮಗಳಿಗೆ ಹಣ ಒದಗಿಸುವ ಪ್ರತಿಷ್ಠಾನಗಳ ಮೇಲೆ ದಾಳಿ ಮಾಡುವುದು ಇಂಥ ಹಲವಾರು ರೀತಿಯಲ್ಲಿ ಅವೆಲ್ಲ ನಡೆಯುತ್ತವೆ.
ನಾವು ಯಾವಾಗಲೂ ಪತ್ರಿಕೆಗಳಿಗೆ ಹಣ ಕೊಟ್ಟಿದ್ದೇವೆ, ಟಿವಿ ಚಂದಾದಾರಿಕೆಗೆ ಹಣ ಕೊಟ್ಟಿದ್ದೇವೆ. ಈ ಮೊದಲು ನಾವು ಸುದ್ದಿಗಳಿಗಾಗಿ ಹಣ ನೀಡಿದ್ದೇವೆ. ಆದರೆ ಇಂಟರ್ನೆಟ್ ಎಂದೊಡನೆ ಆರಂಭದಲ್ಲಿ ಎಲ್ಲವೂ ಉಚಿತ ಎಂದು ನಾವು ಭಾವಿಸುತ್ತೇವೆ. ಇಂಟರ್ನೆಟ್ನಲ್ಲಿ ಸುದ್ದಿಗಾಗಿ ಹಣ ಪಾವತಿಸಬೇಕಾಗಿಲ್ಲ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಹಣ ಕೊಡಬೇಕಾಗಿರುವುದರ ಮತ್ತು ಉಚಿತವಾಗಿ ಮಾಹಿತಿ ಪಡೆಯುವುದರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ.
ಕೊನೆಯ ಕಾರಣವೆಂದರೆ, ಮಾಧ್ಯಮಗಳಿರುವುದು ಸುದ್ದಿಯನ್ನು ಕೊಡುವುದಕ್ಕೆ ಮಾತ್ರ ಎಂದು ಜನರು ಭಾವಿಸುತ್ತಾರೆ. ಹೊಸ ರೈಲು ಘೋಷಣೆಯಾಯಿತೆ? ಚುನಾವಣೆಯಲ್ಲಿ ಯಾರು ಗೆದ್ದರು? ದೇಶ ಆಯೋಜಿಸಿದ ಅಂತರ್ರಾಷ್ಟ್ರೀಯ ಸಮಾರಂಭದಲ್ಲಿ ಅತಿಥಿಗಳು ಯಾರು? ಸುದ್ದಿ ಗ್ರಾಹಕರು ಈ ಮೂರು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ ಎಂದುಕೊಂಡರೆ, ನೂರಾರು ಪತ್ರಿಕೆಗಳು, ಟಿವಿ ಚಾನೆಲ್ಗಳು ಮತ್ತು ವೆಬ್ ಪೋರ್ಟಲ್ಗಳು ನಿಮಗೆ ಉಚಿತವಾಗಿ ಮಾಹಿತಿಯನ್ನು ನೀಡುತ್ತವೆ. ಹಾಗಾಗಿ, ಈ ಸುದ್ದಿಯನ್ನು ಬೇರೆಡೆ ಉಚಿತವಾಗಿ ಪಡೆಯಬಹುದಾದಾಗ ನಾನು ಒಂದು ಮಾಧ್ಯಮಕ್ಕೆ ಏಕೆ ಹಣ ಕೊಡಬೇಕು ಎಂದು ಅವರು ಭಾವಿಸುತ್ತಾರೆ? ಆದರೆ ನಾವು ಇಲ್ಲಿ ಕೇವಲ ಸುದ್ದಿಯನ್ನು ಕೊಡುವ ಬಗ್ಗೆ ಮಾತನಾಡುತ್ತಿಲ್ಲ. ಹೊಸ ರೈಲು ಘೋಷಣೆಯಾಯಿತೆ ಎಂಬುದನ್ನು ಹೇಳುವುದಷ್ಟೇ ಅಲ್ಲ, ರೈಲ್ವೆ ಮಾರ್ಗ ನಿರ್ವಹಣೆ ಮತ್ತು ಸುರಕ್ಷತೆಗಾಗಿ ಬಜೆಟ್ ಬಳಕೆಯಾಗುತ್ತಿದೆಯೆ, ಸೂಪರ್ ಫಾಸ್ಟ್ ರೈಲು ಇತರ ರೈಲುಗಳ ವೇಗ ತಗ್ಗಿಸಲು ಕಾರಣವಾಗಲಿದೆಯೆ, ಚುನಾವಣೆ ನ್ಯಾಯಯುತವಾಗಿ ನಡೆಯಿತೆ, ಅಂತರ್ರಾಷ್ಟ್ರೀಯ ಸಮಾರಂಭಕ್ಕಾಗಿ ಯಾವ ಕೊಳೆಗೇರಿಯನ್ನು ಮುಚ್ಚಿಡಲಾಯಿತು ಎಂಬುದರ ಮಾಹಿತಿಯನ್ನೂ ನಿಮಗೆ ಕೊಡುವ ಸಂಸ್ಥೆಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ.
ನಾವು ಯಾವಾಗಲೂ ಪತ್ರಿಕೆಗಳಿಗೆ ಹಣ ಕೊಟ್ಟಿದ್ದೇವೆ, ಟಿವಿ ಚಂದಾದಾರಿಕೆಗೆ ಹಣ ಕೊಟ್ಟಿದ್ದೇವೆ. ಈ ಮೊದಲು ನಾವು ಸುದ್ದಿಗಳಿಗಾಗಿ ಹಣ ನೀಡಿದ್ದೇವೆ. ಆದರೆ ಇಂಟರ್ನೆಟ್ ಎಂದೊಡನೆ ಆರಂಭದಲ್ಲಿ ಎಲ್ಲವೂ ಉಚಿತ ಎಂದು ನಾವು ಭಾವಿಸುತ್ತೇವೆ. ಇಂಟರ್ನೆಟ್ನಲ್ಲಿ ಸುದ್ದಿಗಾಗಿ ಹಣ ಪಾವತಿಸಬೇಕಾಗಿಲ್ಲ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಹಣ ಕೊಡಬೇಕಾಗಿರುವುದರ ಮತ್ತು ಉಚಿತವಾಗಿ ಮಾಹಿತಿ ಪಡೆಯುವುದರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಊಟ ಪುಗಸಟ್ಟೆ ಬರಲ್ಲ ಅನ್ನುತ್ತಾರೆ, ಅಲ್ಲವೆ? ನಾವು ಮಾಹಿತಿ ಸಂಗ್ರಹಿಸಲು ಬಹಳ ಕಷ್ಟ ಪಡುತ್ತೇವೆ. ಗ್ರಹಿಕೆ ರೂಪುಗೊಳ್ಳಲು ವರ್ಷಗಟ್ಟಲೆ ಕಠಿಣ ಪರಿಶ್ರಮ, ಸಂಶೋಧನೆ ಬೇಕಿರುತ್ತದೆ. ಇವೆಲ್ಲವೂ ಉಚಿತವಾಗಿ ಬರಲು ಸಾಧ್ಯವಿಲ್ಲ. ಪತ್ರಿಕೋದ್ಯಮ ಉಳಿಯಬೇಕೆಂದರೆ ತಾವು ಅದಕ್ಕೆ ಬೆಂಬಲವಾಗಿ ನಿಲ್ಲಬೇಕೆಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ.
ಎಲ್ಲಾ ಡಿಜಿಟಲ್ ಸುದ್ದಿಗಳನ್ನು ಪೇವಾಲ್ ಹಿಂದೆ ಇರಿಸುವ ಪರಿಕಲ್ಪನೆಯ ಕುರಿತು ನಿಮ್ಮ ಆಲೋಚನೆಗಳು ಏನು? ಅಂತಹ ಮಾದರಿಗೆ ಭಾರತ ಸಿದ್ಧವಾಗಿದೆ ಎಂದು ನೀವು ಭಾವಿಸುತ್ತೀರಾ?
► ಎಲ್ಲಾ ಸುದ್ದಿಗಳು ಪೇವಾಲ್ ಹಿಂದೆ ಇರಬಹುದೇ? ಬಹುಶಃ ಇಲ್ಲ. ಓದುಗರು ಸುದ್ದಿಯ ಮೌಲ್ಯವನ್ನು ಅರಿತುಕೊಳ್ಳುವುದು ಮುಖ್ಯವಾಗಿರುವಾಗಲೇ, ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಟೆಕ್ ದೈತ್ಯ ಕಂಪೆನಿಗಳು ಹೆಚ್ಚೇನನ್ನೂ ಮಾಡದಿರುವ ಕಾರಣ, ಈ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುವ ವಿಷಯಗಳಿಗೆ ಅಡೆತಡೆಯೇ ಇರುವುದಿಲ್ಲ ಎಂಬುದನ್ನು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಅರಿತುಕೊಳ್ಳುವುದು ಕೂಡ ಮುಖ್ಯವಾಗಿದೆ. ಸಾಕಷ್ಟು ಹಣವುಳ್ಳವರು ಮತ್ತು ರಾಜಕೀಯ ಪಕ್ಷಗಳು ಆಟವಾಡಬಹುದಾದ ಇದೇ ವೇದಿಕೆಗಳಿಂದಲೇ ಜನರು ಸುದ್ದಿಯನ್ನೂ ಮಾಹಿತಿಯನ್ನೂ ಪಡೆಯುತ್ತಾರೆ.
ಈ ಟೆಕ್ ದೈತ್ಯರು ತಮ್ಮ ಪ್ಲಾಟ್ಫಾರ್ಮ್ನಲ್ಲಿನ ವಿಷಯವು ಹಾನಿ, ಹಿಂಸಾಚಾರ ಅಥವಾ ಕೋಮು ದ್ವೇಷವನ್ನು ಪ್ರಚೋದಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳ ಬೇಕಾದಾಗ ತಮ್ಮ ಪಾತ್ರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ನಾವು ಬಹಳಷ್ಟು ವಿಷಲ್ ಬ್ಲೋವರ್ ಗಳ ಮೂಲಕ ಕಂಡಿದ್ದೇವೆ. ತಮ್ಮ ಪ್ಲಾಟ್ಫಾರ್ಮ್ಗಳು ಜನರಿಗೆ ಸುರಕ್ಷಿತವಾಗಿವೆ ಎಂದು ದೃಢಪಡಿಸಿಕೊಳ್ಳುವ ಕೆಲಸವನ್ನು ಅವರು ಮಾಡುತ್ತಿಲ್ಲ. ಹಾಗಾಗಿ, ಅದು ಆಗುವವರೆಗೆ ನಮ್ಮಲ್ಲಿ ಹೆಚ್ಚಿನವರು ನಮ್ಮ ವಿಷಯವನ್ನು ಉಚಿತವಾಗಿ ಸಿಗುವಂತೆ ಇಡಬಹುದು ಮತ್ತು ನಾವು ಮಾಡುವ ಕೆಲಸ ಮೌಲಿಕವಾದುದು ಎಂಬುದನ್ನು ಅರ್ಥ ಮಾಡಿಕೊಳ್ಳುವ ನಮ್ಮ ಚಂದಾದಾರರು ಅದಕ್ಕಾಗಿ ಹಣ ಪಾವತಿಸುತ್ತಾರೆ ಎಂದು ಆಶಿಸಬಹುದು.
ಪ್ರತಿಯೊಬ್ಬರಿಗೂ ಲಭ್ಯವಿರಬಲ್ಲ ರೀತಿಯಲ್ಲಿನ ಸಾರ್ವಜನಿಕ ಹಿತಾಸಕ್ತಿ ಮತ್ತು ಅದೇ ವೇಳೆ, ಪತ್ರಕರ್ತರು ತಮ್ಮ ಬಿಲ್ಗಳನ್ನು ಪಾವತಿಸುವುದನ್ನು - ಬಾಡಿಗೆ ಕಟ್ಟುವುದು, ಜೀವನ ನಿರ್ವಹಣೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದು? ನಿಭಾಯಿಸಬೇಕಿರುವುದು ಇವೆರಡರ ನಡುವಿನ ಸಮತೋಲನ ಬಹಳ ಕಷ್ಟದ್ದು. ಅವರಿಗೆ ಸಂಬಳವಿಲ್ಲದಿದ್ದರೆ, ಅವರ ಬಳಿ ಹಣವಿಲ್ಲದಿದ್ದರೆ ಅವರು ಅದನ್ನು ಹೇಗೆ ಮಾಡಲು ಸಾಧ್ಯ? ಸುದ್ದಿ ಸಂಸ್ಥೆಗಳು ಆರ್ಥಿಕ ಬಲ ಪಡೆಯುವವರೆಗೂ ಪತ್ರಕರ್ತರ ಬಳಿಯೂ ಹಣವಿರುವುದಿಲ್ಲ.
ಸದ್ಯ ತಮ್ಮ ಮೊಬೈಲ್ ಫೋನ್ಗಳಲ್ಲಿಯೇ ಸುದ್ದಿ ಮತ್ತು ವಿಷಯವನ್ನು ಉಚಿತವಾಗಿ ಪಡೆಯುತ್ತಿರುವ ಜನರು ಯಾವಾಗ ಸುದ್ದಿ ಸಂಗ್ರಹಣೆಯ ಮೌಲ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಳ್ಳುತ್ತಾರೆ ಮತ್ತು ಸುದ್ದಿಗಾಗಿ ಹಣ ಪಾವತಿಸಲು ಮನಸ್ಸು ಮಾಡುತ್ತಾರೆ ಎಂದು ನೀವು ಭಾವಿಸುತ್ತೀರಿ? ಪತ್ರಿಕೋದ್ಯಮವನ್ನು ಆರ್ಥಿಕವಾಗಿ ಬೆಂಬಲಿಸುವುದರ ಮಹತ್ವವನ್ನು ಅವರಿಗೆ ಅರ್ಥ ಮಾಡಿಸಲು ತೆಗೆದುಕೊಳ್ಳಬೇಕಾದ ಹೆಜ್ಜೆಗಳೇನು?
► ಸಂಪೂರ್ಣವಾಗಿ ನಿರಾಶಾವಾದದೊಂದಿಗೆ ಹೇಳುವುದಾದರೆ, ಪ್ರಜಾಪ್ರಭುತ್ವದ ಕೊನೆಯ ಸ್ತಂಭಗಳು ಕುಸಿಯುವವರೆಗೂ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಇಡೀ ಉದ್ಯಮಕ್ಕೆ ಸೆಡ್ಡುಹೊಡೆಯುವ ಪ್ರಶ್ನೆಯಾಗಿದೆ ಎಂದುಕೊಳ್ಳಬೇಕು. ನಮ್ಮ ಸ್ವಂತ ಕೆಲಸಕ್ಕೆ ನಾವೇ ಸಾಕಷ್ಟು ಬೆಲೆ ಕಟ್ಟುತ್ತೇವೆ ಎಂದು ಉದ್ಯಮ ನಿರ್ಧರಿಸಬೇಕು. ಎಲ್ಲವನ್ನೂ ಉಚಿತವಾಗಿ ನೀಡುವುದಿಲ್ಲ ಎಂದು ನಿಶ್ಚಯಿಸಬೇಕು. ಉದಾಹರಣೆಗೆ, ಬ್ರೇಕಿಂಗ್ ನ್ಯೂಸ್ ಅನ್ನು ಉಚಿತವಾಗಿ ಸಿಗುವಂತೆ ಕೊಡಬಹುದು. ಆದರೆ ನಮ್ಮ ವರದಿಗಾರರು ಸಾಕಷ್ಟು ಕೆಲಸ ಮಾಡಿದ, ಆಳವಾದ ತನಿಖೆಯಿರುವ ವರದಿಗಳನ್ನು, ಹಲವು ಸಮಯದ ಜ್ಞಾನ ಮತ್ತು ಪಾಂಡಿತ್ಯದಿಂದ ರೂಪುಗೊಂಡ ಗ್ರಹಿಕೆಗಳಿರುವ ಬರಹಗಳನ್ನು ಪೇವಾಲ್ಗಳ ಹಿಂದೆ ಇಡಬೇಕು. ಉದ್ಯಮವೇ ಇಂಥ ಮಾನದಂಡ ತಂದಾಗ ಮಾತ್ರ ಜನರು ಅದರ ಮೌಲ್ಯವನ್ನು ತಿಳಿಯಲು ಶುರು ಮಾಡುತ್ತಾರೆ.
ಎಲ್ಲವನ್ನೂ ಮುಕ್ತ ಮತ್ತು ಉಚಿತವಾಗಿರಿಸಿದ ಒಂದು ಸುದ್ದಿ ಸಂಸ್ಥೆಯನ್ನು ನೀವು ನಡೆಸಲು ಸಾಧ್ಯವಿಲ್ಲ. ಇತರ ಸುದ್ದಿ ಸಂಸ್ಥೆಗಳು ಎಲ್ಲವನ್ನೂ ಪೇವಾಲ್ ಹಿಂದೆ ಇರಿಸುತ್ತವೆ. ಮತ್ತೆ ಕೆಲವು ಸುದ್ದಿ ಸಂಸ್ಥೆಗಳು ತಮ್ಮ ಚಂದಾದಾರಿಕೆಯನ್ನು ಯಾರಿಗೂ ನಿಲುಕದಷ್ಟು ಏರಿಸುವ ಮೂಲಕ, ಶ್ರೀಮಂತ ವ್ಯಕ್ತಿಗೆ ಮಾತ್ರ ತಮ್ಮ ವಿಷಯ ಲಭ್ಯವಿದೆ ಎಂದು ಹೇಳುತ್ತವೆ. ಹಾಗೆ ಮೌಲ್ಯ ಪ್ರತಿಪಾದನೆಯನ್ನು ಉದ್ಯಮದಾದ್ಯಂತ ಸ್ಪಷ್ಟಪಡಿಸಬೇಕು. ಇದು ನಾವು ಅನುಸರಿಸುವ ಮಾನದಂಡ ಎಂದು ಪ್ರತಿ ಸುದ್ದಿ ಸಂಸ್ಥೆಯೂ ತನ್ನ ಓದುಗರು ಅಥವಾ ವೀಕ್ಷಕರಿಗೆ ಸ್ಪಷ್ಟಪಡಿಸಬೇಕು. ಒಮ್ಮೆ ಇಡೀ ಉದ್ಯಮ ಈ ದಿಕ್ಕಿನಲ್ಲಿ ಚಲಿಸಿದರೆ, ನಿಜವಾದ ಸುದ್ದಿ ಗ್ರಾಹಕರು ಪಾವತಿಸಲು ಮುಂದಾಗುವುದನ್ನು ನಾವು ಕಾಣುತ್ತೇವೆ. ಏಕೆಂದರೆ ನಾವು ಅನೇಕ ಚಂದಾದಾರಿಕೆಗೆ ಪಾವತಿಸುತ್ತೇವೆ. ನೆಟ್ಫ್ಲಿಕ್ಸ್, ಅಮೆಝಾನ್ ಪ್ರೈಂ, ಸ್ಪೋರ್ಟಿಫೈ ಅಥವಾ ಯೂಟ್ಯೂಬ್ ಮ್ಯೂಸಿಕ್ಗಾಗಿ ಹಣ ಪಾವತಿಸುತ್ತೇವೆ. ದೈನಂದಿನ ಅನೇಕ ಸೇವೆಗಳಿಗೂ ಪಾವತಿಸುತ್ತೇವೆ. ಏಕೆಂದರೆ ಈ ಸೇವೆಗಳು ನಮಗೆ ಮೌಲಿಕವಾದವುಗಳೆಂದು ನಮಗೆ ಗೊತ್ತು. ಸುದ್ದಿ ಕೂಡ ಅಮೂಲ್ಯವಾದ ಸೇವೆಯಾಗಿದೆ ಮತ್ತು ಅದು ಖಂಡಿತವಾಗಿಯೂ ಜನರ ಕೈಗೆಟುಕುವಂತಿರುತ್ತದೆ. ಏಕೆಂದರೆ ನಾವು ಬಹಳ ಹಣ ಕೇಳುತ್ತಿಲ್ಲ. ನಾವು ಕೇಳುತ್ತಿರುವುದು ತಿಂಗಳಲ್ಲಿ ಕೆಲವು ಸಲ ಕಾಫಿ ಕುಡಿಯುವುದಕ್ಕಾಗುವಷ್ಟು ಹಣವನ್ನು ಮಾತ್ರ.
ನಿಷ್ಠಾವಂತ ಚಂದಾದಾರರ ನೆಲೆಯನ್ನು ನಿರ್ಮಿಸಲು ಸ್ಥಿರವಾದ ಮೌಲಿಕತೆ ಅಗತ್ಯವಿದೆ. ಪಾವತಿಸುವ ಚಂದಾದಾರರಿಗೆ ವಿಶೇಷವಾದ, ಪ್ರೀಮಿಯಂ ವಿಷಯವನ್ನು ನೀಡುವ ಹೊತ್ತಿನಲ್ಲಿ, ವ್ಯಾಪಕ ತಲುಪುವಿಕೆಗಾಗಿ ಉಚಿತ ವಿಷಯ ಒದಗಿಸುವುದನ್ನು ನೀವು ಹೇಗೆ ಸಮತೂಗಿಸುತ್ತೀರಿ?
► ನಾವು ಸದ್ಯ ಅದನ್ನು ನೋಡುತ್ತಿರುವ ವಿಧಾನವೆಂದರೆ, ನಮಗೆ ಸಾಕಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುವ ಯಾವುದೇ ವಿಷಯ ನಮ್ಮ ಚಂದಾದಾರರಿಗೆ ಮಾತ್ರ ಸಿಗಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗೂ ಉಚಿತವಾಗಿರುತ್ತದೆ. ಇದು ಹೆಚ್ಚಿನ ಸಂಸ್ಥೆಗಳು ತಪ್ಪುಗಳನ್ನು ಮಾಡುವ, ಕೆಟ್ಟದಾಗಿ ವರದಿ ಮಾಡುವ, ಗೊತ್ತಿಲ್ಲದೆಯೆ ಸುಳ್ಳು ಮಾಹಿತಿ ಹಬ್ಬಿಸುವ ಮತ್ತು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲೆಂದೇ, ಪಕ್ಷಪಾತದ, ತಿರುಚಿದ ತಪ್ಪು ಮಾಹಿತಿಯನ್ನು ಹರಡುವ ವಿಭಾಗವಾಗಿದೆ. ನಾವು ಸಂದರ್ಭದೊಂದಿಗೆ ಸುದ್ದಿಯನ್ನು ವರದಿ ಮಾಡುವುದರತ್ತ ಕಾಳಜಿ ವಹಿಸುತ್ತೇವೆ. ಉದಾಹರಣೆಗೆ, ಒಬ್ಬ ನಾಯಕ ಏನು ಹೇಳಿದ್ದಾನೆ ಎಂಬುದರ ಕುರಿತು ವರದಿ ಮಾಡುವುದು ಮುಖ್ಯ. ಆದರೆ ಅದರ ಸಂದರ್ಭ ಮತ್ತು ಇತಿಹಾಸವೂ ಅಷ್ಟೇ ಮುಖ್ಯ. ಹಾಗಾಗಿ ಇಲ್ಲಿ ನಾವು ಉಚಿತ ನೀಡುವುದು, ಪ್ರತಿಯೊಬ್ಬರೂ ಬಂದು ನೈಜ ಮಾಹಿತಿಯನ್ನು ಪರಿಶೀಲಿಸಲು ತೆರೆದುಕೊಂಡಿರುವುದು ಮುಖ್ಯವಾಗಿದೆ ಎಂದುಕೊಳ್ಳುತ್ತೇವೆ. ಸದ್ಯಕ್ಕೆ ಬ್ರೇಕಿಂಗ್ ನ್ಯೂಸ್ಅನ್ನು ಪೇವಾಲ್ ಹಿಂದೆ ಹಾಕುವ ಆಲೋಚನೆಯನ್ನು ನಾವು ಹೊಂದಿಲ್ಲ.
ಆದರೆ ನಮ್ಮ ವರದಿಗಾರರಿಗೆ ನಿಜವಾಗಿ ಸತ್ಯ ತಿಳಿಯಲು ಮತ್ತು ಎಲ್ಲಾ ಮಾಹಿತಿಗಳನ್ನು ಪಡೆಯಲು ವಾರಗಟ್ಟಲೆ, ತಿಂಗಳುಗಟ್ಟಲೆ ತೆಗೆದುಕೊಳ್ಳುವ ನಮ್ಮ ವಿಶೇಷ ವರದಿಗಳನ್ನು ನಾವು ಪೇವಾಲ್ ಹಿಂದೆ ಇಡುತ್ತಿದ್ದೇವೆ.
ನಾವು ಪೇವಾಲ್ ಹಿಂದಿಡಲಿರುವ ಇತರ ರೀತಿಯ ವಿಷಯವೆಂದರೆ ಸುದ್ದಿಪತ್ರಗಳು. ಇದು ಸುದ್ದಿ ಉದ್ಯಮದಲ್ಲಿ ವರ್ಷಗಳು ಮತ್ತು ದಶಕಗಳಿಂದ ನಿರ್ಮಿಸಿಕೊಂಡು ಬರಲಾದ ಮೂಲಗಳನ್ನು ಆಧರಿಸಿದೆ. ನಮ್ಮ ಸುದ್ದಿಪತ್ರಗಳಲ್ಲಿ ಒಂದು, ಪವರ್ ಟ್ರಿಪ್. ಕಳೆದ ಕೆಲವು ತಿಂಗಳುಗಳ ಹಿಂದೆ ಪವರ್ ಟ್ರಿಪ್ ಅನ್ನು ಶುರು ಮಾಡಿದಾಗಿನಿಂದ ರಾಜಕೀಯದಲ್ಲಿ ಆಸಕ್ತಿ ಹೊಂದಿರುವವರಿಗೆ, ರಾಜಕೀಯ ಮತ್ತು ನೀತಿ ಪ್ರತಿಪಾದನೆಯ ಜಾಗದಲ್ಲಿರುವವರಿಗೆ ಉಪಯುಕ್ತವಾದ ಅನೇಕ ವಿಶೇಷ ರಾಜಕೀಯ ವರದಿಗಳು ಮತ್ತು ಮಾಹಿತಿಯ ತುಣುಕುಗಳು ನಮಗೆ ದೊರಕಿವೆ.
ಯಾರು ಸತ್ಯ ಹೇಳುತ್ತಿದ್ದಾರೆ ಮತ್ತು ಯಾರು ಹೇಳುತ್ತಿಲ್ಲ ಎಂಬುದು ನಮಗೆ ಗೊತ್ತಿದೆ. ಹಾಗೂ ಕೆಲವು ಸಾಧ್ಯವಿದೆ ಮತ್ತು ಕೆಲವು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿದೆ. ಈ ಮೂಲಕ ನಮಗೆ ವಿಶೇಷ ರಾಜಕೀಯ ಸುದ್ದಿಗಳು ಸಾರ್ವಜನಿಕರನ್ನು ತಲುಪುವ ಮೊದಲೇ ಸಿಗುತ್ತವೆ. ಮತ್ತಿದು ನಾವು ನಮ್ಮ ಚಂದಾದಾರರಿಗೆ ಕೊಡಲು ಬಯಸುವ ಮೌಲ್ಯವಾಗಿದೆ. ನಮ್ಮ ಚಂದಾದಾರರು ತಮ್ಮ ವೈಯಕ್ತಿಕ, ಸಾಮಾಜಿಕ ಇಲ್ಲವೇ ವೃತ್ತಿಜೀವನದಲ್ಲಿ ಬೇರೆಯವರಿಗಿಂತ ಮುಂದಿರಬೇಕೆಂದು ನಾವು ಬಯಸುತ್ತೇವೆ. ಜನರು ನಮಗೆ ಈ ನಿಟ್ಟಿನಲ್ಲಿ ಸಹಕರಿಸಿ ಅವರೂ ಮಾಹಿತಿ ಪಡೆಯಬೇಕು.