ಪತ್ರಕರ್ತರು ಈಗ ಹಿಂದುತ್ವದ ಅತ್ಯಂತ ಪ್ರಭಾವಶಾಲಿ ಕಾಲಾಳುಗಳಾಗಿದ್ದಾರೆ
ಸಂದರ್ಶನ : ಟಿ.ಎ. ಅಮೀರುದ್ದೀನ್
- ಅರ್ಫಾ ಖಾನುಮ್ ಶೇರ್ವಾನಿ
ತಾವು ನಡೆಸಿಕೊಡುವ ಸಂದರ್ಶನಗಳಿಂದಾಗಿ ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿರುವ ಅರ್ಫಾ ಖಾನುಮ್ ಶೇರ್ವಾನಿ ಉತ್ತರ ಪ್ರದೇಶದವರು. ಈಗ ದಿ ವೈರ್ ಸುದ್ದಿತಾಣದಲ್ಲಿ ಹಿರಿಯ ಸಂಪಾದಕಿ. ಪಿ.ಎಚ್.ಡಿ ಪದವಿ ಪಡೆದಿರುವ ಅರ್ಫಾ ಈ ಹಿಂದೆ ಎನ್.ಡಿ.ಟಿ .ವಿ, ರಾಜ್ಯಸಭಾ ಟಿವಿ ಹಾಗೂ ಆಮಿರ್ ಖಾನ್ ಅವರ ಸತ್ಯಮೇವ ಜಯತೆ ಕಾರ್ಯಕ್ರಮ ಗಳಲ್ಲಿ ಒಟ್ಟು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಾಶ್ಮೀರದ ಸ್ವಾಯತ್ತೆ ರದ್ದು ಪಡಿಸಿದ ಬಳಿಕ ಅಲ್ಲಿಗೆ ತೆರಳಿ ಅಲ್ಲಿನ ಜನರು ಎದುರಿಸುತ್ತಿರುವ ಸಂಕಷ್ಟಗಳ ಕುರಿತ ವರದಿಗಾರಿಕೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಬಗ್ಗೆ ದಿಲ್ಲಿ, ಉತ್ತರ ಪ್ರದೇಶಹಾಗೂ ಹರ್ಯಾಣಗಳಿಂದ ಮಾಡಿರುವ ಗ್ರೌಂಡ್ ರಿಪೋರ್ಟ್ ಗಳು ವ್ಯಾಪಕವಾಗಿ ಜನರಿಗೆ ತಲುಪಿದ್ದವು.
2022 ರಲ್ಲಿ ಕುಲದೀಪ್ ನಯ್ಯರ್ ಪತ್ರಿಕೋದ್ಯಮ ಪ್ರಶಸ್ತಿ, 2019 ರಲ್ಲಿ ವರ್ಷದ ಶ್ರೇಷ್ಠ ಮಹಿಳಾ ಪತ್ರಕರ್ತೆ ಚಮೇಲಿ ದೇವಿ ಅವಾರ್ಡ್, ಅದೇ ವರ್ಷ ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆಗಾಗಿ ರೆಡ್ ಇಂಕ್ ಅವಾರ್ಡ್ ಪಡೆದಿದ್ದಾರೆ. 2017 ರಲ್ಲಿ ರಾಬರ್ಟ್ ಬಾಷ್ ಮೀಡಿಯಾ ಅಂಬಾಸಡರ್ಸ್ ಫೆಲೋಶಿಪ್ ಹಾಗೂ 2018 ರಲ್ಲಿ ಅಮೆರಿಕದಲ್ಲಿ ನಡೆದ ಸೀನಿಯರ್ ಜರ್ನಲಿಸ್ಟ್ಸ್ ಸೆಮಿನಾರ್ ಫೆಲೋಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹಾರ್ವರ್ಡ್ ಇಂಡಿಯಾ ಕಾನ್ಫರೆನ್ಸ್ , ಗ್ಲೋಬಲ್ ಮೀಡಿಯಾ ಫೋರಂ ಜರ್ಮನಿ, ಸ್ಟಾನ್ ಫೋರ್ಡ್ ವಿವಿ, ಯುಸಿ ಬರ್ಕ್ಲಿ, ಯು ಮಾಸ್ ಹಾಗೂ ಮಿಚಿಗನ್ ವಿವಿಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಪಬ್ಲಿಕ್ ಲೀಡರ್ ಶಿಪ್ ಭಾರತೀಯ ಮುಸ್ಲಿಮ್ ಮಹಿಳೆಯರಿಗಾಗಿ ಸ್ಥಾಪಿಸಿರುವ ನಾಯಕತ್ವ ಕಾರ್ಯಕ್ರಮದ ನಿವಾಸಿ ಸಲಹೆಗಾರರೂ ಆಗಿದ್ದಾರೆ.
ಭಾರತದಲ್ಲಿ ಪತ್ರಿಕೋದ್ಯಮ ಹಾಗೂ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಈ ಸಂದರ್ಶನದಲ್ಲಿ ಅವರು ಮುಕ್ತವಾಗಿ ಮಾತನಾಡಿದ್ದಾರೆ.
► ದೇಶದ ನಿರ್ಭೀತ ಪತ್ರಕರ್ತರಲ್ಲಿ ನೀವು ಒಬ್ಬರು. ನೀವು ಪತ್ರಕರ್ತರಾದದ್ದು ಹೇಗೆ? ನಿಮ್ಮ ವೃತ್ತಿಜೀವನದ ಬಗ್ಗೆ ದಯವಿಟ್ಟು ತಿಳಿಸಿ
ನಾನು ಉತ್ತರ ಪ್ರದೇಶದ ಸಣ್ಣ ಪಟ್ಟಣವೊಂದರಿಂದ ಬಂದವಳು. ನನ್ನ ಕುಟುಂಬದಲ್ಲಿ ಯಾರೂ ಪತ್ರಕರ್ತರಿಲ್ಲ. ಹಾಗಾಗಿ ನಾನು ಪತ್ರಕರ್ತೆಯಾಗುವುದಾಗಿ ಹೇಳಿದಾಗ ನನ್ನ ಪೋಷಕರಿಗೆ ಅದು ತುಂಬಾ ಹೊಸದೆನ್ನಿಸಿತ್ತು. ನನ್ನ ತಂದೆ ‘ಸರಿ. ನಿನಗೋಸ್ಕರ ಒಂದು ಪತ್ರಿಕೆ ಶುರು ಮಾಡೋಣ’ ಎಂದರು. ನಮ್ಮದು ಜಮೀನ್ದಾರರ ಕುಟುಂಬವಾಗಿದ್ದರಿಂದ ನಾನು ಯಾರದೋ ಕೈಕೆಳಗೆ ಕೆಲಸ ಮಾಡುವುದು ನನ್ನ ತಂದೆಗೆ ಇಷ್ಟವಿರಲಿಲ್ಲ. ನಂತರ ನಾನು ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯಕ್ಕೆ ಹೋದೆ. ಆಗ ಇದೇ ನಿಜವಾಗಿಯೂ ಸೂಕ್ತ ವೃತ್ತಿಯಾಗಬಹುದು ಎಂದು ಮನವರಿಕೆಯಾಯಿತು. ನನಗೆ ಬರವಣಿಗೆಯಲ್ಲಿ ಆಸಕ್ತಿ ಇತ್ತು. ನನ್ನ ಕಾಲೇಜು ಮ್ಯಾಗಝಿನ್‌ನ ಸಂಪಾದಕಿಯಾಗಿದ್ದೆ. ಜನರ ಕಥೆಗಳನ್ನು ಕೇಳುವುದು ಮತ್ತು ಹೇಳುವುದು ನನಗೆ ಯಾವಾಗಲೂ ಇಷ್ಟವಾಗುತ್ತಿತ್ತು. ಸಣ್ಣ ಪಟ್ಟಣದಿಂದ ಬಂದವಳಾದ್ದರಿಂದ ದನಿಯಿರದ ಮತ್ತು ತೀವ್ರ ಅಸಮಾನತೆ, ದಮನ ಮತ್ತು ಅನ್ಯಾಯವನ್ನು ಎದುರಿಸುತ್ತಿದ್ದ ಅಂಚಿನಲ್ಲಿರುವ ಸಮುದಾಯಗಳ ಜನರನ್ನು, ಅದರಲ್ಲೂ ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಗಮನಿಸಿದ್ದೆ. ಅಂಚಿನಲ್ಲಿರುವ ಸಮುದಾಯಗಳ ಪರ ಧ್ವನಿಯಿಲ್ಲದಿರುವುದು ಗೊತ್ತಾಯಿತು.
ನಾನು ಬೆಳೆದದ್ದು 80 ಮತ್ತು 90ರ ದಶಕದಲ್ಲಿ. ಅದು ಉತ್ತರ ಪ್ರದೇಶದ ಎಲ್ಲೆಡೆ ಹಿಂದುತ್ವದ ಅಲೆ ಇದ್ದ ಸಮಯ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳ ಮತ್ತು ಮಹಿಳೆಯರ ಪ್ರಾತಿನಿಧ್ಯ ಇರಲಿಲ್ಲ. ಹಾಗಾಗಿ, ಧ್ವನಿಯಿಲ್ಲದವರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡೆ. ಅವರ ಧ್ವನಿ ಕೇಳಿಸುವಂತಾಗಲು ನೆರವಾಗಬೇಕೆಂದು, ಪತ್ರಿಕೋದ್ಯಮ ಎಂದರೇನು ಎಂದು ತಿಳಿಯುವ ಮೊದಲೇ ಯೋಚಿಸಿದ್ದೆ. ಅದನ್ನೇ ವೃತ್ತಿಯಾಗಿ ತೆಗೆದುಕೊಂಡು ನಿಜವಾಗಿಯೂ ಅವರ ದನಿಯನ್ನು ತಲುಪಿಸುವವಳಾಗಬಹುದೆಂದು ಅನ್ನಿಸಿದ್ದು ಹದಿ ಹರೆಯದ ಕಡೆಯ ವರ್ಷಗಳಲ್ಲಿ. ಹಾಗೆ ಇದೆಲ್ಲವೂ ಶುರುವಾಯಿತು. ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷದ ಪತ್ರಿಕೋದ್ಯಮ ಕೋರ್ಸ್ ಮಾಡಿ ನಂತರ ದಿಲ್ಲಿಗೆ ಬಂದೆ. ಒಂದೆರಡು ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಇಂಟರ್ನ್‌ಶಿಪ್ ಮಾಡಿದೆ. ಆದರೆ ನಾನಿರಬೇಕಾದದ್ದು ಮುದ್ರಣ ಮಾಧ್ಯಮದಲ್ಲಲ್ಲ, ಟಿವಿ ಮಾಧ್ಯಮದಲ್ಲಿ ಎಂಬುದು ಬಹಳ ಬೇಗ ಮನವರಿಕೆಯಾಯಿತು. ಸಹಾರಾ ಟಿವಿಯಲ್ಲಿ ಕೆಲಸ ಶುರು ಮಾಡಿದೆ. ಸಹಾರಾ ಟಿವಿಯಲ್ಲಿ 2000ದ ದಶಕದ ಆರಂಭದಲ್ಲಿ ಕೆಲವು ಸುದ್ದಿ ಬುಲೆಟಿನ್‌ಗಳಿದ್ದವು. ಬಹಳ ಬೇಗ ಟಿವಿ ಸುದ್ದಿಯ ವ್ಯಾಪ್ತಿ ಹೆಚ್ಚಿತು. ಅದೃಷ್ಟವಶಾತ್, ಟಿವಿ ಸುದ್ದಿಯಲ್ಲಿ ಪೂರ್ಣ ಪ್ರಮಾಣದ ಉದ್ಯೋಗ ಪಡೆದ ಮೊದಲಿಗರಲ್ಲಿ ನಾನೂ ಒಬ್ಬಳಾಗಿದ್ದೆ. 2003ರಲ್ಲಿ ಎನ್‌ಡಿಟಿವಿ ಸೇರಿದೆ. ಆಮಿರ್ ಖಾನ್ ಅವರ ಸತ್ಯಮೇವ ಜಯತೆ ಸೀಸನ್ ಒನ್‌ಗೆ ಸೇರುವ ಮೊದಲು ಹಲವಾರು ವರ್ಷ ಎನ್‌ಡಿಟಿವಿಗೆ ಕೆಲಸ ಮಾಡಿದ್ದೆ. ಅಲ್ಲಿಂದ ರಾಜ್ಯಸಭಾ ಟಿವಿ ಮತ್ತು ದಿ ವೈರ್. ಇದು ಪತ್ರಿಕೋದ್ಯಮದಲ್ಲಿ ನನ್ನ ಈತನಕದ ಹಾದಿ.
► ಅಧಿಕಾರಸ್ಥರನ್ನು ಎದುರು ಹಾಕಿಕೊಳ್ಳುವ ಧೈರ್ಯ ನಿಮಗೆ ಎಲ್ಲಿಂದ ಬರುತ್ತದೆ?
ಈ ದೇಶದಲ್ಲಿ ಅಂಚಿನಲ್ಲಿರುವವರಿಗೆ ಮಾತನಾಡಲು ಅವಕಾಶವಿಲ್ಲ. ನೀವು ಮಾತನಾಡದಿದ್ದರೆ, ನಿಮ್ಮ ಧ್ವನಿ ಅಡಗಿಸಲಾಗುತ್ತದೆ. ಅಂಚಿನಲ್ಲಿರುವವರಿಗೆ ನನ್ನ ಧ್ವನಿ ಬೇಕು ಎಂದು ನಾನು ಭಾವಿಸುತ್ತೇನೆ. ನಾನು ಮಾತನಾಡುವಾಗ, ಕಾರ್ಮಿಕರು, ರೈತರು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು, ಗ್ರಾಮೀಣ ಭಾರತದ ಜನರು ಮತ್ತು ಮುಖ್ಯವಾಹಿನಿಯ ರಾಜಕೀಯ, ಮುಖ್ಯವಾಹಿನಿಯ ಸುದ್ದಿಗಳ ಭಾಗವಲ್ಲದ ಎಲ್ಲರೂ ಸೇರಿರುವ ಭಾರತದ ಶೇಕಡಾ 80ಕ್ಕಿಂತಲೂ ಹೆಚ್ಚು ಮಂದಿಯ ಪ್ರತಿನಿಧಿಯಾಗಿರುತ್ತೇನೆ. ಹಾಗಾಗಿ ನನ್ನಲ್ಲೊಂದು ಅಸಮಾಧಾನವಿರುತ್ತದೆ. ನಾನು ಹೊರಗೆ ಹೋದಾಗ ಮತ್ತು ಜನರೊಂದಿಗೆ ಮಾತನಾಡುವಾಗ, ಅವರ ಸಮಸ್ಯೆಗಳು ಕಡೆಗಣಿಸಲ್ಪಟ್ಟಿರುವುದರ ಅರಿವಾಗುತ್ತದೆ. ಇದೆಲ್ಲವೂ ನನ್ನ ಪತ್ರಿಕೋದ್ಯಮದಲ್ಲಿ ಕಾಣಿಸಿಕೊಳ್ಳುತ್ತದೆ.
► ನೀವು ಆ ರೀತಿಯ ಪತ್ರಿಕೋದ್ಯಮದಲ್ಲಿ ತೊಡಗಿರುವಾಗ, ಪ್ರತಿನಿತ್ಯವೂ ಬಹಳಷ್ಟು ಬೆದರಿಕೆ ಮತ್ತು ನಿಂದನೆಗಳನ್ನು ಎದುರಿಸುತ್ತೀರಿ. ‘ಬುಲ್ಲಿ ಬಾಯಿ’ ಮತ್ತು ‘ಸುಲ್ಲಿ ಡೀಲ್ಸ್’ ಅಂಥ ಎರಡು ಪ್ರಕರಣಗಳು . ಈ ನಿಂದನೆಗಳನ್ನು ನೀವು ಹೇಗೆ ಎದುರಿಸುತ್ತೀರಿ?
ಇದು ಕಷ್ಟದ ಪ್ರಶ್ನೆ. ನನ್ನನ್ನು ಆನ್‌ಲೈನ್‌ನಲ್ಲಿ ಬೆದರಿಸುತ್ತಿದ್ದುದು ಮತ್ತು ಟ್ರೋಲ್ ಮಾಡುತ್ತಿದ್ದುದು 2020ರವರೆಗೆ ನನ್ನ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈ ಆನ್‌ಲೈನ್ ವಿಷಯ ಬಹುಬೇಗ ವಾಸ್ತವಕ್ಕೆ ತಿರುಗಿದೆ. ಆನ್‌ಲೈನ್‌ನಲ್ಲಿ ಜನರು ನನ್ನ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದು ಈಗ ನನ್ನ ಮೊದಲ ಕಳವಳವಲ್ಲ. ಅಧಿಕಾರಸ್ಥರು ನನ್ನನ್ನು ಜೈಲಿಗೆ ಕಳಿಸಲು ಬಯಸುವ ನಿಜವಾದ ಸಾಧ್ಯತೆ ಇದೆ. ಇದು ನನ್ನ ಮೊದಲ ಚಿಂತೆ. ಅಧಿಕಾರದಲ್ಲಿರುವ ಜನರು ನನ್ನಂತಹ ಎಲ್ಲಾ ಜನಧ್ವನಿಗಳನ್ನು ಜೈಲಿಗೆ ಕಳಿಸಲು ಬಯಸುತ್ತಾರೆ. ಇದು ಈಗ ನನ್ನ ಆತಂಕಕ್ಕಿರುವ ದೊಡ್ಡ ಕಾರಣವಾಗಿದೆ.
► ಜನರು ನಿಮ್ಮನ್ನು ನಿಂದಿಸಲು ನಿಮ್ಮ ಹೆಸರೇ ಕಾರಣ ಎಂದು ನೀವು ಭಾವಿಸುತ್ತೀರಾ? ಅಂದರೆ, ನೀವು ಸೇರಿರುವ ಧರ್ಮ..
ಅವರಿಗೆ ಸಾಮಾನ್ಯವಾಗಿ ಪತ್ರಕರ್ತರೆಂದರೆ, ಅದರಲ್ಲೂ ಅಧಿಕಾರಸ್ಥ ಮಂದಿಯನ್ನು ಪ್ರಶ್ನಿಸುವ ಪತ್ರಕರ್ತರೆಂದರೆ ಆಗುವುದಿಲ್ಲ. ಜೊತೆಗೆ ಅವರು ನನ್ನನ್ನು ಇಷ್ಟಪಡುವುದಿಲ್ಲ ಅಥವಾ ವಿಶೇಷವಾಗಿ ನನ್ನ ಧರ್ಮದ ಕಾರಣಕ್ಕಾಗಿ ನನ್ನನ್ನು ದ್ವೇಷಿಸುತ್ತಾರೆ. ಹಾಗಾಗಿ ಈ ಪ್ರಶ್ನೆಯಲ್ಲಿ ಎರಡು ಭಾಗಗಳಿವೆ. ಒಂದು, ಆನ್‌ಲೈನ್‌ನಲ್ಲಿ ನನ್ನನ್ನು ಟ್ರೋಲ್ ಮಾಡಿದಾಗ ಮತ್ತು ದಾಳಿ ಮಾಡಿದಾಗ, ಅದಕ್ಕೆ ನನ್ನ ಕೆಲಸ ಕಾರಣವಾಗಿರುವಂತೆಯೆ, ನಾನು ಯಾರೆಂಬುದು ಕೂಡ ಕಾರಣ. ನನ್ನ ಧಾರ್ಮಿಕ ಅಸ್ಮಿತೆಯ ಮೇಲೆ ದಾಳಿ ಮಾಡುವ ಅವರು, ನಾನು ಪತ್ರಕರ್ತೆಯಲ್ಲ, ಹಿಂದೂ ಪ್ರಧಾನಿಯನ್ನು ವಿರೋಧಿಸುತ್ತಿರುವ ಇನ್ನೊಬ್ಬ ಮುಸ್ಲಿಮ್ ಅಷ್ಟೇ ಎಂದು ಜನರಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಮೇತರ ಹಿನ್ನೆಲೆಯವರಿಗೆ ಹೇಳಲು ಪ್ರಯತ್ನಿಸುತ್ತಾರೆ. ಹಾಗಾಗಿ ಅವರು ನನ್ನ ವಿರುದ್ಧ ಅಪಪ್ರಚಾರಕ್ಕೆ ಮತ್ತು ನನ್ನ ಕೆಲಸದ ಪರಿಣಾಮವನ್ನು ಕಸಿಯುವುದಕ್ಕೆ ಪ್ರಯತ್ನಿಸುತ್ತಾರೆ. ನನ್ನ ಕೆಲಸದ ಪರಿಣಾಮವನ್ನು ತಗ್ಗಿಸಲು ನೋಡುತ್ತಾರೆ. ಈ ಹಿಂದುತ್ವ ಸರಕಾರವು ಪ್ರತ್ಯಕ್ಷವಾಗಿ ಮತ್ತು ಸ್ಪಷ್ಟವಾಗಿ ಮುಸ್ಲಿಮ್ ವಿರೋಧಿಯಾಗಿದೆ. ಮುಸ್ಲಿಮ್ ಪತ್ರಕರ್ತರ ವಿರುದ್ಧ ಕ್ರಮ ಕೈಗೊಂಡಾಗ, ಸರಕಾರವು ತನ್ನ ರಾಜಕೀಯ ಬೆಂಬಲಿಗರ ಇಚ್ಛೆ ಪೂರೈಸುತ್ತಿರುವುದಾಗಿ ಭಾವಿಸುತ್ತದೆ. ಹಾಗಾಗಿ ಮುಸ್ಲಿಮ್ ಪತ್ರಕರ್ತರ ಮೇಲೆ ದಾಳಿ ಮಾಡುವುದರಿಂದ ಅದಕ್ಕೆ ಲಾಭವಿದೆ.
► ನೀವು ಕಳೆದ 23 ವರ್ಷಗಳಿಂದ ಪತ್ರಕರ್ತರಾಗಿದ್ದೀರಿ. ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ವಿನಾಶವನ್ನು ನೋಡಿದ್ದೀರಿ. ಈ ಪತನಕ್ಕೆ ನಿಮಗನ್ನಿಸುವ ಕಾರಣಗಳೇನು?
ಇದು ಒಂದು ಪ್ರಮುಖ ಪ್ರಶ್ನೆ. ಜನರು ನನ್ನನ್ನು ದಿಟ್ಟೆ ಎಂದು ಕರೆದಾಗ, ಅದರಲ್ಲಿ ಮಹಾ ಅನ್ನುವಂಥದ್ದೇನೂ ಇಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಏಕೆಂದರೆ ನಾನು ಇದನ್ನು ಕಳೆದ 23 ವರ್ಷಗಳಿಂದ ಮಾಡುತ್ತಿದ್ದೇನೆ ಅಥವಾ ನರೇಂದ್ರ ಮೋದಿ ಪ್ರಧಾನಿಯಾದ ನಂತರದ ಕಳೆದ ಒಂಬತ್ತು ವರ್ಷಗಳಿಂದ ಎಂದು ಹೇಳುತ್ತೇನೆ. ನಾನು ರಾಜ್ಯಸಭಾ ಟಿವಿಗೆ ಕೆಲಸ ಮಾಡಿದ್ದೆ ಮತ್ತು ಆ ಸಮಯದಲ್ಲಿ ಸರಕಾರದ ಪ್ರತಿಯೊಂದು ನೀತಿಯನ್ನೂ ಟೀಕಿಸಿದ್ದೆ ಎಂದು ತಿಳಿದರೆ ನಿಮ್ಮ ಓದುಗರು ಆಶ್ಚರ್ಯ ಪಡಬಹುದು. ಅಂದಿನ ಸರಕಾರ ನನ್ನ ಯಾವ ಮಾತನ್ನೂ ಸೆನ್ಸಾರ್ ಮಾಡಿರಲಿಲ್ಲ. ಹಾಗಾಗಿ ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡಿದ ಮತ್ತು ಬಯಸಿದ್ದನ್ನು ಹೇಳಲು ಮತ್ತು ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದ್ದ ಅದೃಷ್ಟವಂತರಲ್ಲಿ ನಾನೂ ಒಬ್ಬಳು. ಹಾಗಾಗಿ ಸರಕಾರಿ ಸ್ವಾಮ್ಯದ, ಸಂಸತ್ತಿನ ಸ್ವಾಮ್ಯದ ಸುದ್ದಿ ಸಂಸ್ಥೆಯ ಭಾಗವಾಗಬಹುದಾಗಿದ್ದ ಮತ್ತು ಅಂದಿನ ಸರಕಾರವನ್ನು ಟೀಕಿಸಬಹುದಾಗಿದ್ದ ಆ ವರ್ಷಗಳನ್ನು ಕೂಡ ಕಂಡಿದ್ದೇನೆ.
ಅದನ್ನು ಇವತ್ತಿನ ಸನ್ನಿವೇಶದೊಂದಿಗೆ ಹೋಲಿಸಿ ನೋಡಿ. ಆಗಿನ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಪ್ರಶ್ನಿಸುತ್ತಿದ್ದ ಅನೇಕ ಪತ್ರಕರ್ತರು ಸಂಪೂರ್ಣವಾಗಿ ಮಣಿದಿರುವುದನ್ನು ನಾನು ನೋಡಿದ್ದೇನೆ. ಈ ಬದಲಾವಣೆಗೆ ನಾನು ಎರಡು ಕಾರಣಗಳನ್ನು ಗಮನಿಸುತ್ತೇನೆ. ಒಂದು, ಭಾರತೀಯ ಮಾಧ್ಯಮ ಯಾವಾಗಲೂ ಮೇಲ್ಜಾತಿ ಮಾಧ್ಯಮವಾಗಿದೆ. ಸಹಜವಾಗಿ, ಹೆಚ್ಚಿನವರು ಬಹುಸಂಖ್ಯಾತ ಸಮುದಾಯದಿಂದ ಬಂದವರು. ಆದರೆ ಈ ಬಹುಸಂಖ್ಯಾತರ ಬಹುತೇಕರು ಮೇಲ್ಜಾತಿ ಹಿನ್ನೆಲೆಯಿಂದ ಬಂದವರು. ಅವರು ಯಾವಾಗಲೂ ಆರೆಸ್ಸೆಸ್ ಮತ್ತು ಬಿಜೆಪಿಯ ಸಿದ್ಧಾಂತದ ಬೆಂಬಲಿಗರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅವರು ಚೂರು ಪಾರು ಪತ್ರಿಕೋದ್ಯಮ ಮಾಡಿಕೊಂಡಿದ್ದರು. ನಾನು ವಿಶೇಷವಾಗಿ ಹಿಂದಿ ನ್ಯೂಸ್ ರೂಮ್‌ಗಳ ಬಗ್ಗೆ ಮಾತನಾಡುತ್ತಿದ್ದೇನೆ. ಏಕೆಂದರೆ ಈಗ ಅತ್ಯಂತ ಪ್ರಬಲ ಮಾಧ್ಯಮವಾಗಿರುವ ಹಿಂದಿ ಟಿವಿ ನ್ಯೂಸ್ ರೂಮ್‌ಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಅವು ಕೋಮುವಾದಿ, ಜಾತಿವಾದಿ, ಮಹಿಳಾ ವಿರೋಧಿ ಮತ್ತು ಬಡವರ ವಿರೋಧಿಗಳು. ಈಗ ಮೋದಿ ಸರಕಾರ ಅಧಿಕಾರದಲ್ಲಿರುವುದರೊಂದಿಗೆ, ಅವೇ ಮನಸ್ಸುಗಳು ಒಂದಾಗಿವೆ. ಸೈದ್ಧಾಂತಿಕ ಬಾಂಧವ್ಯದಿಂದಾಗಿ ಮಾಧ್ಯಮ ಮತ್ತು ಸರಕಾರದ ನಡುವಿನ ಸುಖೀ ದಾಂಪತ್ಯ ಇದು.
ಎರಡು, ಈ ಸರಕಾರ ಪ್ರತೀಕಾರ ತೀರಿಸಿಕೊಳ್ಳುತ್ತದೆ ಮತ್ತು ಅದನ್ನು ಪ್ರಶ್ನಿಸುವ ಪತ್ರಕರ್ತರನ್ನು ಅದು ಇಷ್ಟಪಡುವುದಿಲ್ಲ. ಇಲ್ಲಿರುವುದು ಭಯದಲ್ಲಿಡುವ ಅಂಶ.
ಇದಕ್ಕೆ ಮೂರನೇ ಕಾರಣ, ದುರಾಸೆ. ನೀವು ಸರಕಾರದ ಪರವಾಗಿ ನಿಂತಾಗ, ಸಂಬಳ ಮತ್ತು ಭಡ್ತಿಗಳ ರೂಪದಲ್ಲಿ ನಿಮ್ಮನ್ನು ಪುರಸ್ಕರಿಸಲಾಗುತ್ತದೆ. ನಾನು ಈಗ ಹೇಳಲು ಪ್ರಯತ್ನಿಸುತ್ತಿರುವುದು ವಿವಾದಾತ್ಮಕವಾಗಿರಬಹುದು, ಆದರೆ ಈಗಿನ ಹಿಂದಿ ಟಿವಿ ನ್ಯೂಸ್ ರೂಮ್‌ಗಳಲ್ಲಿ ಉನ್ನತ ಸಂಪಾದಕೀಯ ಹುದ್ದೆಗಳು ರಾಜಕೀಯ ನೇಮಕಾತಿಗಳಾಗಿವೆ ಎಂಬುದರಿಂದಾಗಿ ನಾನಿದನ್ನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಅವರ ಪತ್ರಿಕೋದ್ಯಮದ ಗುಣಮಟ್ಟದ ಕಾರಣಕ್ಕೆ ಆಗುವ ತೀರ್ಮಾನವಲ್ಲ ಇದು. ನಾನು ಇದನ್ನು ಸಂಪೂರ್ಣ ವಿಶ್ವಾಸದಿಂದ ಹೇಳುತ್ತಿದ್ದೇನೆ. ಅಧಿಕಾರದಲ್ಲಿರುವವರಿಗೆ ಬೇಕಾದವರು ಮುಖ್ಯ ಸಂಪಾದಕರು, ಸಿಇಒಗಳು ಮತ್ತು ಟಿವಿ ಸುದ್ದಿಗಳ ನಿರೂಪಕರಾಗುತ್ತಾರೆ.
ನೀವು ಟಿವಿಯಲ್ಲಿ ಹಿಂದುತ್ವ ಮಾಧ್ಯಮದ ಪ್ರತಿನಿಧಿಗಳನ್ನು ನೋಡುತ್ತೀರಿ. ಹಿಂದುತ್ವ ರಾಷ್ಟ್ರವಿದ್ದಾಗ ಹಿಂದುತ್ವ ಮಾಧ್ಯಮಗಳೂ ಇರುತ್ತವೆ. ಚರ್ಚೆಯ ಕೇಂದ್ರದಲ್ಲಿ ಹಿಂದುತ್ವ ಮಾಧ್ಯಮವಿಲ್ಲದೆ ಹಿಂದುತ್ವ ರಾಷ್ಟ್ರ ಸಾಧ್ಯವಿಲ್ಲ. ಜನರಿಗೆ ಉತ್ತರದಾಯಿಗಳಾಗಿರ ಬೇಕಾದ ಮತ್ತು ಜನರ ಧ್ವನಿಯಾಗಬೇಕಾದ ಪತ್ರಕರ್ತರು ವಾಸ್ತವವಾಗಿ ಸರಕಾರದ ಧ್ವನಿಯಾಗಿದ್ದಾರೆ. ಅವರು ಆರೆಸ್ಸೆಸ್ ಮತ್ತು ಬಿಜೆಪಿಯ ಹಿಂದುತ್ವ ಸಿದ್ಧಾಂತದ ಕಾಲಾಳುಗಳಾಗಿದ್ದಾರೆ. ಅವರೀಗ ಹಿಂದುತ್ವ ರಾಷ್ಟ್ರದ ಅತ್ಯಂತ ದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಕಾಲಾಳುಗಳಾಗಿದ್ದಾರೆ.
► ಬಲಪಂಥೀಯರನ್ನು ಬೆಂಬಲಿಸುವ ಮಾಧ್ಯಮಗಳ ಹೊರತಾಗಿ, ಸುದರ್ಶನ್ ಚಾನೆಲ್‌ನಂತಹ ಸಂಪೂರ್ಣ ಹಿಂದುತ್ವ ಮಾಧ್ಯಮಗಳು ಜನಪ್ರಿಯತೆ ಗಳಿಸುತ್ತಿವೆ, ಅಲ್ಲವೆ?
ಅದು ಸತ್ಯ. ವಾಸ್ತವವಾಗಿ, ಇದು ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಈ ಸಂಪೂರ್ಣ ಹಿಂದುತ್ವ ವಾಹಿನಿಗಳ ನಡುವಿನ ಪೈಪೋಟಿ. ಅವು ಭಾರತದಲ್ಲಿ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿಬಿಟ್ಟಿವೆ. ಇದು ಸಾಕಾಗದೇ ಇದ್ದಾಗ ಮುಸ್ಲಿಮರು, ದಲಿತರು, ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಬಂದಿದ್ದಾರೆ. ದಕ್ಷಿಣ ಭಾರತವನ್ನು ಗುರಿಯಾಗಿಸುವ ಈ ಅಜೆಂಡಾವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂದು ಕೆಲವೊಮ್ಮೆ ನಿಮಗೆ ಆಶ್ಚರ್ಯವಾಗುತ್ತದೆ. ಉದಾಹರಣೆಗೆ, ಕೇರಳವನ್ನು ಯಾವಾಗಲೂ ಅವರು ಗುರಿ ಮಾಡುತ್ತಾರೆ. ಕೇರಳವು ಭಾರತದ ಭಾಗವೇ ಅಲ್ಲ ಮತ್ತು ಅದು ಬೇರೆಯದೇ ಕಾನೂನುಗಳನ್ನು ಹೊಂದಿದೆ ಎಂದು ಜನರು ಭಾವಿಸುವ ಮಟ್ಟಿಗೆ ಅವರು ಕೇರಳವನ್ನು ರಾಕ್ಷಸೀಕರಿಸಿದ್ದಾರೆ. ಇತ್ತೀಚೆಗೆ ಮುಖ್ಯವಾಹಿನಿಯ ಟಿವಿ ಸುದ್ದಿ ವಾಹಿನಿಯೊಂದು, ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕಾರಣ ಕೇರಳದಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂದು ಹೇಳಿತು. ಹಾಗಾಗಿ ಸುಳ್ಳು ಸುದ್ದಿಗಳನ್ನು ಹರಡುವಲ್ಲಿ, ಮುಸ್ಲಿಮ್-ವಿರೋಧಿ, ಕ್ರಿಶ್ಚಿಯನ್ ವಿರೋಧಿ ಅಜೆಂಡಾದ ವಿಷಯದಲ್ಲಿ ಯಾರು ಯಾರನ್ನು ಮೀರಿಸುತ್ತಾರೆ ಎಂಬುದಕ್ಕೆ ಈಗ ಸಂಪೂರ್ಣ ಧರ್ಮಾಂಧ ಬಲಪಂಥೀಯ ವಾಹಿನಿಗಳು ಮತ್ತು ಮುಖ್ಯವಾಹಿನಿಯ ಚಾನೆಲ್‌ಗಳ ನಡುವೆ ಪೈಪೋಟಿ ನಡೆಯುತ್ತಿದೆ.
► ನೀವೂ ಸೇರಿದಂತೆ ಬಹಳಷ್ಟು ಪತ್ರಕರ್ತರು ಈ ನಿರಂಕುಶ ಆಳ್ವಿಕೆ ಅಥವಾ ಬಲಪಂಥೀಯ ಆಳ್ವಿಕೆಯನ್ನು ನಿರಂತರವಾಗಿ ಬಯಲು ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಯಾವ ಬದಲಾವಣೆಗಳೂ ಆಗುತ್ತಿಲ್ಲ. ನೀವು ಅದನ್ನು ಒಪ್ಪುತ್ತೀರಾ?
ಇಲ್ಲ, ನಾನು ಒಪ್ಪುವುದಿಲ್ಲ. ಏಕೆಂದರೆ ನಾನು ಹೊರಗೆ ಹೋದಾಗ ಮತ್ತು ನಾನು ಜನರನ್ನು ಭೇಟಿಯಾದಾಗ, ಕೇವಲ ಹತ್ತೊ ಹನ್ನೆರಡೊ ಜನರು ನಡೆಸುವ ಒಂದು ಸಣ್ಣ ಸುದ್ದಿ ಸಂಸ್ಥೆಯು ಅಂತಹ ಪ್ರಭಾವವನ್ನು ಹೊಂದಿರುವುದರ ಅರಿವಾಗುತ್ತದೆ. ಹಳ್ಳಿಯ ಜನರು ದಿ ವೈರ್ ನೋಡುವುದಾಗಿ, ನನ್ನ ಕಾರ್ಯಕ್ರಮಗಳನ್ನು ಹಿಂದಿಯಲ್ಲಿ ನೋಡುವುದಾಗಿ ಹೇಳುತ್ತಾರೆ. ನಾವು ದೊಡ್ಡ ಮಾಧ್ಯಮಗಳೊಂದಿಗೆ ಸ್ಪರ್ಧಿಸುತ್ತಿದ್ದೇವೆ ಎಂದು ನಾನು ಹೇಳುತ್ತಿಲ್ಲ. ಆದರೆ ದಿ ವೈರ್‌ನಂತಹ ಸುದ್ದಿ ಸಂಸ್ಥೆಗಳು ತಮ್ಮದೇ ಆದ ಪ್ರಭಾವವನ್ನು ಹೊಂದಿವೆ. ವಿಧೇಯವಾಗಿರುವ ಮುಖ್ಯವಾಹಿನಿಯ ಮಾಧ್ಯಮ ಮತ್ತು ಪರ್ಯಾಯ ಮಾಧ್ಯಮಗಳ ನಡುವಿನ ಸ್ಪಷ್ಟ ವ್ಯತ್ಯಾಸ ಜನರಿಗೆ ಗೊತ್ತಾಗುತ್ತದೆ ಎಂದು ನಾನು ಭಾವಿಸುತ್ತೇನೆ.
► ಆದರೆ ಜನರು ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ, ಅಲ್ಲವೇ?
ಅದು, ನೀವು ಹೇಗೆ ನೋಡುತ್ತೀರಿ ಎಂಬುದರ ಮೇಲಿದೆ. ಭಾರತದಲ್ಲಿ ಇತ್ತೀಚಿನ ಎರಡು ಪ್ರಮುಖ ಜನಾಂದೋಲನಗಳಾದ ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ಮತ್ತು ರೈತರ ಚಳವಳಿಗಳು ಪರ್ಯಾಯ ಮಾಧ್ಯಮಗಳಿಲ್ಲದಿದ್ದರೆ ನಡೆಯುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು - ಅದು ಒಳ್ಳೆಯದೊ ಕೆಟ್ಟದೊ ಹೇಗೆ ಬೇಕಾದರೂ ಕರೆಯಿರಿ- ಅತ್ಯಂತ ಪ್ರಭಾವಿ ಮತ್ತು ಪ್ರಬಲರಾಗಿದ್ಧಾಗ, ಈ ಸಾಮೂಹಿಕ ಚಳವಳಿಗಳು ನಡೆದವು. ತಮಗಾಗಿ ರೂಪಿಸಿದ ನೀತಿಗಳು ವಾಸ್ತವದಲ್ಲಿ ತಮ್ಮ ಪಾಲಿಗೆ ಕೆಡುಕಿನವು ಎಂಬುದು ಜನರಿಗೆ ತಿಳಿದಿರುವುದಿಲ್ಲ.
ಎರಡನೆಯದಾಗಿ, ಪರ್ಯಾಯ ಮಾಧ್ಯಮಗಳಿಲ್ಲದಿದ್ದರೆ ಭಾರತದಲ್ಲಿ ಚಳವಳಿ ನಡೆಯುತ್ತಿದೆ ಎಂದು ಅವರಿಗೆ ತಿಳಿದಿರುವುದಿಲ್ಲ. ಮೂರನೆಯದಾಗಿ, ಬದಲಿ ಮಾಧ್ಯಮಗಳಿಂದಾಗಿಯೇ ಪ್ರತಿಭಟನಾಕಾರರು ಬದುಕುಳಿದರು. ಪರ್ಯಾಯ ಮಾಧ್ಯಮಗಳಿಂದಾಗಿ ರೈತರ ಚಳವಳಿ ವರ್ಷಕ್ಕೂ ಹೆಚ್ಚು ಕಾಲ ನಡೆಯಿತು.
► ಪತ್ರಿಕೋದ್ಯಮ ತನ್ನ ಗತ ವೈಭವವನ್ನು ಮರಳಿ ಪಡೆಯುತ್ತದೆ ಎಂಬ ಭರವಸೆ ನಿಮಗಿದೆಯೇ?
ಇದು ನಾವು ಮುಂದುವರಿಸುವ ಹೋರಾಟ. ಪ್ರಜಾಪ್ರಭುತ್ವದ ಹೋರಾಟದ ಜೊತೆಗೇ ನಾವು ಮಾಡಬೇಕಿರುವ ಸಮಾನಾಂತರ ಹೋರಾಟ ಇದೆಂದು ನಾನು ಭಾವಿಸುತ್ತೇನೆ. ಇವೆರಡೂ ಒಂದಕ್ಕೊಂದು ಪೂರಕ ಮತ್ತು ಒಂದರ ಹೊರತು ಇನ್ನೊಂದು ಸಾಧ್ಯವಿಲ್ಲ. ಭಾರತದಲ್ಲಿ ಈಗ ನೂರಾರು ಮತ್ತು ಸಾವಿರಾರು ಪತ್ರಕರ್ತರಿದ್ದಾರೆ. ನೂರಾರು ಸುದ್ದಿ ವಾಹಿನಿಗಳಿವೆ, ಸಾವಿರಾರು ಪತ್ರಿಕೆಗಳಿವೆ. ಇಷ್ಟಾಗಿಯೂ ಸರಕಾರದ ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳು ಜನರಿಗೆ ಮಾಹಿತಿ ತಲುಪದಂತೆ ತಡೆಯುವುದರಲ್ಲಿ ತೊಡಗಿವೆ. ಆ ನಿರ್ಣಾಯಕ ಮಾಹಿತಿ ಜನರಿಗೆ ತಲುಪುವುದು ಅವರಿಗೆ ಬೇಕಿಲ್ಲ. ಟಿವಿ ಚಾನೆಲ್‌ಗಳು ಜನರಿಗೆ ತಿಳಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವು ಹಗಲೂ ರಾತ್ರಿ ಜನರಿಗೆ ಮಾಹಿತಿ ಮುಟ್ಟದಂತೆ ತಡೆಯುವುದನ್ನೇ ಮಾಡುತ್ತವೆ. ಇಲ್ಲಿಯೇ ನನ್ನಂತಹವರ ಪಾತ್ರ ಬರುವುದು. ಅವು ಮಾಹಿತಿಯ ಹರಿವನ್ನು ತಡೆಯಲು ಪ್ರಯತ್ನಿಸಿದಾಗ, ನನ್ನಂತಹವರು ಜನರನ್ನು ತಲುಪುತ್ತಿದ್ದಾರೆ. ನಾನು ಟಿವಿಯಲ್ಲಿ ಇಲ್ಲ, ಪತ್ರಿಕೆಗಳಲ್ಲಿಯೂ ಇಲ್ಲ. ಆದರೆ ಜನರು ನಿಜವಾಗಿಯೂ ನನ್ನ ಹೆಸರು, ನನ್ನ ಚಾನಲ್‌ನ ಹೆಸರನ್ನು ಹುಡುಕುತ್ತಿದ್ದಾರೆ ಮತ್ತು ನನ್ನನ್ನು ಪತ್ತೆ ಮಾಡುತ್ತಿದ್ದಾರೆ, ನಾನು ಹೇಳುವುದನ್ನು ಕೇಳುತ್ತಿದ್ದಾರೆ. ಏಕೆಂದರೆ ಅವರು ನಿಮ್ಮನ್ನು ವಿಶ್ವಾಸಾರ್ಹತೆಯ ಮುಖ ಮತ್ತು ವಿಶ್ವಾಸಾರ್ಹತೆಯ ಧ್ವನಿ ಎಂದು ಭಾವಿಸುತ್ತಾರೆ. ಇದು ಪತ್ರಕರ್ತ ಕೇಳಬಹುದಾದ ದೊಡ್ಡ ಬಹುಮಾನ.
► ನೀವು ಛತ್ರಪತಿ ಸಮ್ಮಾನ್ ಅನ್ನು ಫೆಲೆಸ್ತೀನ್ ಪತ್ರಕರ್ತರಿಗೆ ಅರ್ಪಿಸಿದ್ದೀರಿ. ಹಾಗೆ ಮಾಡಲು ನಿಮಗೆ ಪ್ರೇರಣೆ ಏನು?
ಫೆಲೆಸ್ತೀನ್‌ನಲ್ಲಿ 50ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ಕೆಲಸ ಮಾಡುತ್ತಲೇ ಸಾಯುವುದನ್ನು ನೋಡಿದಾಗ, ನನ್ನ ಹೃದಯ ಒಡೆದು ಹೋಗುತ್ತದೆ. ತೀವ್ರ ದುಃಖವಾಗುತ್ತದೆ. ಮತ್ತು ಕನಿಷ್ಠ ಪಕ್ಷ ನಾನು ಮಾಡಬಹುದಾದುದೆಂದರೆ ಆ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುವುದು. ಹಾಗೆ ಮಾಡಿದಾಗ, ನಾನು ಫೆಲೆಸ್ತೀನ್ ಪರವಾಗಿ, ಫೆಲೆಸ್ತೀನ್ ಜನರ ಪರವಾಗಿ ನಿಲ್ಲುತ್ತೇನೆ. ಅಲ್ಲಿ ನಡೆಯುತ್ತಿರುವುದು ನಮ್ಮ ಕಣ್ಣೆದುರಿನ ಅತ್ಯಂತ ಕ್ರೂರ ಅನ್ಯಾಯವಾಗಿದೆ. ಅದು ನನ್ನ ಹೃದಯವನ್ನು ಛಿದ್ರ ಮಾಡುತ್ತದೆ.
► ನಿಮಗೆ ಬಿಡುವಿಲ್ಲದಷ್ಟು ಕೆಲಸ. ಅದರ ನಡುವೆಯೂ ಇತ್ತೀಚೆಗೆ ನಿಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದೀರಿ. ಹೇಗೆ ನಿಮ್ಮ ಸಮಯವನ್ನು ನೀವು ನಿಭಾಯಿಸುತ್ತೀರಿ?
ನಾನು ಆಮಿರ್ ಖಾನ್ ಅವರ ‘ಸತ್ಯಮೇವ ಜಯತೆ’ಗಾಗಿ ಕೆಲಸ ಮಾಡುತ್ತಿದ್ದಾಗ, ದಲಿತರ ಸಮಸ್ಯೆಗಳ ಕುರಿತು ಒಂದು ಸಂಚಿಕೆ ಮಾಡುವ ಜವಾಬ್ದಾರಿ ನನ್ನದಾಗಿತ್ತು. ಆಗ ನಾನು ಭಾರತದಾದ್ಯಂತದ ಜನರ ಕಥೆಗಳು ಮತ್ತು ಹೇಳಿಕೆಗಳನ್ನು ಸಂಗ್ರಹಿಸಲು ಹಲವಾರು ರಾಜ್ಯಗಳಿಗೆ ಪ್ರಯಾಣಿಸಿದೆ. ಪತ್ರಿಕೋದ್ಯಮಕ್ಕಿಂತ ಆಚೆಗೆ ಹೋಗಬೇಕು ಮತ್ತು ಇದೆಲ್ಲವನ್ನೂ ಅಧ್ಯಯನ ಮಾಡಲು ಪ್ರಯತ್ನಿಸಬೇಕು ಎಂಬ ಆಸಕ್ತಿ ನನ್ನಲ್ಲಿ ಮೂಡಿತು. ಪಿಎಚ್‌ಡಿ ಪ್ರಬಂಧಕ್ಕೆ ಕೇಸ್ ಸ್ಟಡಿಯಾಗಿ ಅಲಿಗಡವನ್ನು ಆಯ್ಕೆ ಮಾಡಿಕೊಂಡೆ. ಇದು ಭಾರತದಲ್ಲಿನ ದಲಿತರು ಮತ್ತು ಮುಸ್ಲಿಮರ ಬಗ್ಗೆ ತೌಲನಿಕ ಅಧ್ಯಯನದ ಪ್ರಬಂಧವಾಗಿದೆ.
► ಪಿಎಚ್‌ಡಿ ಪ್ರಬಂಧದ ಬಗ್ಗೆ ಸ್ವಲ್ಪ ವಿವರಿಸಬಹುದೇ?
ಇದು ಮೂಲಭೂತವಾಗಿ ಅಂಚಿನಲ್ಲಿರುವ ಎರಡು ಸಮುದಾಯಗಳ ಅಧ್ಯಯನವಾಗಿದೆ. ನಾವು ಅಲಿಗಢ ಜಿಲ್ಲೆಯನ್ನು ಆಯ್ಕೆ ಮಾಡಿದ್ದೇವೆ. ಏಕೆಂದರೆ ಅಲ್ಲಿ ಮುಸ್ಲಿಮರು ಮತ್ತು ದಲಿತರು ಜನಸಂಖ್ಯೆಯ ತಲಾ ಶೇ.20ರಷ್ಟಿದ್ದಾರೆ. ತಾರತಮ್ಯದ ಮೂಲ, ಹಿಂಸೆಯ ಮೂಲ, ಅದು ಎಲ್ಲಿಂದ ಬರುತ್ತದೆ ಮತ್ತು ಸರಕಾರದ ಯೋಜನೆಗಳು ಅವರನ್ನು ಹೇಗೆ ತಲುಪುತ್ತವೆ ಅಥವಾ ತಲುಪುವುದಿಲ್ಲ ಎಂಬುದನ್ನು ಅಧ್ಯಯನ ಮಾಡಲು ನಾನು ಬಯಸಿದೆ. ಈ ಅಧ್ಯಯನವು ಮೂಲತಃ ಸರಕಾರದ ಪಾತ್ರ, ಸ್ವಯಂಸೇವಾ ಸಂಘಟನೆಗಳ ಪಾತ್ರ, ಸಾಮುದಾಯಿಕ ವಕಾಲತ್ತು ಮತ್ತು ಸಮುದಾಯಗಳಿಗಾಗಿ ಯಾವುದು ನಿಜವಾಗಿಯೂ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾವುದು ಕಾರ್ಯನಿರ್ವಹಿಸುವುದಿಲ್ಲ ಎಂಬುದರ ಬಗ್ಗೆ ಇದೆ. ಇದು ನನಗೆ ಪತ್ರಿಕಾ ವೃತ್ತಿಗಿಂತ ಹೆಚ್ಚು ಆಳವಾಗಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಯಿತು.
► ಕಡೆಯದಾಗಿ, ಭವಿಷ್ಯದ ಪತ್ರಕರ್ತರಿಗೆ ನಿಮ್ಮ ಸಲಹೆ ಏನು?
ಈಗಿನ ಸರಕಾರ ಮತ್ತು ಪ್ರಧಾನ ಮಂತ್ರಿಯನ್ನು ನೀವು ಯಾವಾಗಲೇ ನೋಡಿ. ಭಾರತವನ್ನು ವಿಶ್ವಗುರುವನ್ನಾಗಿ, ವಿಶ್ವ ನಾಯಕನನ್ನಾಗಿ ಮಾಡಲು ಹೊರಟಿರುವ ಒಬ್ಬ ನಾಯಕ
ನಿದ್ದಾನೆ ಎಂದು ಅವರು ಹೇಳುತ್ತಾರೆ. ದೇಶವನ್ನು ಮುನ್ನಡೆಸುತ್ತಿರುವವರು ಕೇವಲ ಒಬ್ಬ ಪ್ರಧಾನಿಯಲ್ಲ ಎಂದು ನಾನು ಯಾವಾಗಲೂ ನಂಬುತ್ತೇನೆ. ಮಂತ್ರಿಗಳು, ಸಂಸತ್
ಸದಸ್ಯರು, ಅಧಿಕಾರಿಗಳು ಮತ್ತು ವೈದ್ಯರು, ಇಂಜಿನಿಯರ್‌ಗಳು, ಪತ್ರಕರ್ತರು ಎಲ್ಲರೂ ಇದರ ಭಾಗವಾಗಿದ್ದಾರೆ. ಅದೇ ರೀತಿ, ರಾಷ್ಟ್ರ ನಿರ್ಮಾಣದ ವಿಷಯಕ್ಕೆ ಬಂದಾಗ,
ನಾನು ತುಂಬಾ ದೇಶಭಕ್ತಿಯುಳ್ಳವಳು ಮತ್ತು ನನ್ನ ದೇಶಭಕ್ತಿಯು ಬಿಜೆಪಿ ಮತ್ತು ಆರೆಸ್ಸೆಸ್
ಪ್ರತಿಪಾದಿಸುವುದಕ್ಕಿಂತ ತುಂಬಾ ಭಿನ್ನವಾಗಿದೆ. ಹಾಗಾಗಿ ನನ್ನ ಪತ್ರಿಕೋದ್ಯಮವು ನನ್ನ ದೇಶಕ್ಕೆ ನನ್ನ ಪ್ರೇಮ ನಿವೇದನೆಯಾಗಿದೆ. ನನ್ನ ಜನರಿಗಾಗಿ ನಾನು ಯೋಚಿಸಿದಾಗೆಲ್ಲ ನಾನು ಪತ್ರಿಕಾ ಬರಹ ಬರೆಯುತ್ತೇನೆ ಅಥವಾ ವೀಡಿಯೊ ಮಾಡುತ್ತೇನೆ.
ನಮಗೆ ಈಗ ಹಿಂದೆಂದಿಗಿಂತ ಇನ್ನಷ್ಟು ಮತ್ತಷ್ಟು ಪತ್ರಕರ್ತರ ಅಗತ್ಯವಿದೆ. ಕಥನಗಳನ್ನು ಹೇಳುವ, ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚು ಕೊಡುಗೆ ನೀಡಬಲ್ಲ ಪತ್ರಕರ್ತರು ಬೇಕು. ಈ ಬಹು
ಸಂಖ್ಯಾತ, ದ್ವೇಷಪೂರಿತ, ಧಾರ್ಮಿಕ ಮೂಲಭೂತವಾದದ ಹಿಂದೂ ರಾಷ್ಟ್ರಕ್ಕೆ ಏಕೈಕ ಪ್ರತಿತಂತ್ರವಾಗಿ, ಜಾತ್ಯತೀತ, ಉದಾರವಾದಿ, ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಜನರ ಕಥನಗಳನ್ನು ಪತ್ರಕರ್ತರು ಹೇಳಬೇಕಾಗುತ್ತದೆ.