ಬದುಕಿಗೆ ತಿರುವು ನೀಡಿದ ಡ್ರೈವಿಂಗ್ ಕಲಿಕೆ!
ಬಾಲ್ಯದಲ್ಲಿ ನಮಗೆ ಸುಮ್ಮನೆ ಕೂರಲು ಸಮಯವೇ ಸಿಗ್ತಾ ಇರಲಿಲ್ಲ. ಯಾಕಂದ್ರೆ ಬೆಳಗ್ಗೆ 6 ಗಂಟೆಯಿಂದ 8 ರ ತನಕ ಮದ್ರಸ, ಅಲ್ಲಿಂದ ಬಂದು ಗಡಿಬಿಡಿಯಲ್ಲಿ ತಿಂಡಿ ತಿಂದು ಶಾಲೆಗೆ ಓಡಿದ್ರೆ ಸಂಜೆ ೪ರ ತನಕ ಶಾಲೆ. ಮತ್ತೆ ಮನೆಗೆ ಬಂದು ಸ್ನಾನ ತಿಂಡಿ ಆಗಿ ಸಂಜೆ ೬ಕ್ಕೆ ಮತ್ತೆ ಮದ್ರಸ ೯ರವರೆಗೆ. ಅಲ್ಲಿಂದ ಕತ್ತಲೆಯಲ್ಲಿಯೇ ದೊಡ್ಡವರ ಜೊತೆ ಇಲ್ಲದೆ ಮನೆಗೆ ಓಡೋಡಿ ಬಂದು ರಾತ್ರಿ ಊಟ ಮಾಡಿದ್ರೂ ಆಯಿತು ಇಲ್ಲವೆಂದರೂ ಆಯಿತು. ಮಲಗಿದರೆ ಗಾಢ ನಿದ್ದೆ. ಟಿವಿ ಆಗಲಿ, ಮೊಬೈಲ್ ಆಗಲಿ ಇಲ್ಲ. ಇದ್ದಿದ್ದು ಒಂದು ರೇಡಿಯೊ. ಹಾಡು, ವಾರ್ತಾಪ್ರಸಾರ, ಪ್ರದೇಶ ಸಮಾಚಾರ, ರೈತರ ಕಾರ್ಯಕ್ರಮ, ಕಿಸಾನ್ ವಾಣಿ, ವನಿತಾ ವಾಣಿ, ರೇಡಿಯೊ ನಾಟಕ, ಹಿಂದಿ ಕಾರ್ಯಕ್ರಮ, ಸಿಬಾಕಾ ಗೀತ್ಮಾಲಾ, ಕೋರಿಕೆ ಕಾರ್ಯಕ್ರಮ, ಕೇಳುಗರ ಪತ್ರ, ಹಲವಾರು ಕಾರ್ಯಕ್ರಮಗಳನ್ನು ರೇಡಿಯೊದಲ್ಲಿ ಕೇಳುತ್ತಿದ್ದ ನೆನಪು.
ವಾರಕ್ಕೊಂದು ಸಲ ತರಂಗ ಪತ್ರಿಕೆಯನ್ನು ಕೊಂಡು ಓದುತ್ತಿದ್ದೆ. ಅಂಗಡಿಯಿಂದ ಸಕ್ಕರೆ, ಮೆಣಸು ಕಟ್ಟಿ ತಂದ ಪೇಪರ್ಗಳನ್ನು ಬಿಡದೆ ಓದುತ್ತಿದ್ದ ನೆನಪು. ಉದಯವಾಣಿಯ ಶ್ರದ್ಧಾಂಜಲಿ ಪುಟ ತುಂಬಾ ಇಷ್ಟ. ಯಾಕೆಂದರೆ ಮೃತರ ಪೋಟೋದ ಕೆಳಗಿರುವ ಅವರ ಹುಟ್ಟಿದ ದಿನ ಮತ್ತು ಸತ್ತ ದಿನದ ದಿನಾಂಕ ಹಿಡಿದು ಅವರೆಷ್ಟು ಕಾಲ ಬದುಕಿದ್ರು ಅಂತ ಲೆಕ್ಕ ಹಾಕುತ್ತಿದ್ದೆ.
ಇಂದಿರಾ ಗಾಂಧಿಯವರು ಹುತಾತ್ಮರಾದ ದಿನ ತಂದೆ ರೇಡಿಯೊ ಆಲಿಸುತ್ತಾ ಇದ್ದು ಬಹಳ ದುಃಖಿತರಾಗಿದ್ದರು. ಅವರ ಅಂತ್ಯಕ್ರಿಯೆಯ ನೇರಪ್ರಸಾರವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು. ಆಗ ಆಸುಪಾಸಿನಲ್ಲಿ ಯಾರ ಮನೆಯಲ್ಲೂ ಟಿವಿ ಇರಲಿಲ್ಲ. ಬಹಳ ದೊಡ್ಡ ಶ್ರೀಮಂತರು ಮಾತ್ರ ಟಿವಿ ಇಟ್ಟುಕೊಂಡಿದ್ದರು. ಆ ಪ್ರಸಾರವನ್ನು ಸಾರ್ವಜನಿಕರಿಗೆ ವೀಕ್ಷಿಸಲು ನಮ್ಮ ಊರಿನ ಸಾರ್ವಜನಿಕ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂದು ಆ ಊರಿನ ಎಲ್ಲರೂ ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರು ಅನಿಸುತ್ತೆ. ಆಗ ನಾನು ಬಹಳ ಸಣ್ಣವಳು. ಸಂಜೆ ಆರು ಗಂಟೆಯ ಮದ್ರಸಕ್ಕೆ ಹೊರಟು ಬಂದಿದ್ದ ನನ್ನನ್ನು ತಂದೆ ಆ ಅಂತ್ಯಕ್ರಿಯೆ ವೀಕ್ಷಿಸಲು ಕರ್ಕೊಂಡು ಹೋಗಿದ್ದು ಇಂದಿರಾ ಗಾಂಧಿ ಯವರ ಅಭಿಮಾನ,ಪ್ರೀತಿ ಗೌರವದಿಂದ ಎಂದು ಬೇರೆ ಹೇಳಬೇಕಾಗಿಲ್ಲ. ಅಂದು ಮುಸ್ಲಿಮ್ ಮಕ್ಕಳಲ್ಲಿ ನಾನೊಬ್ಬಳೇ ಅಲ್ಲಿ ಇದ್ದಿದ್ದು. ಆ ಊರಿನ ಬೇರಾವ ಮಕ್ಕಳು ಆ ಕಾರ್ಯಕ್ರಮ ವೀಕ್ಷಿಸಲು ಬಂದಿರಲಿಲ್ಲ. ಮಕ್ಕಳನ್ನು ಬೆಳೆಸುವ ಇಂತಹಾ ನನ್ನ ತಂದೆಯ ಕೆಲವು ನಿರ್ಧಾರಗಳು ನನ್ನನ್ನು ಹೆಣ್ಣು ಗಂಡೆಂಬ ಭೇದ ಇಲ್ಲದಂತೆ ಬೆಳೆಯುವುದಕ್ಕೆ ಸಹಾಯ ಮಾಡಿತ್ತು.
ನನ್ನ ಮಟ್ಟಿಗೆ ಹೇಳುವುದಾದರೆ ನಮ್ಮದು ಪುರುಷ ಪ್ರಧಾನ ಸಮಾಜ ಮತ್ತು ಕುಟುಂಬವೇ ಆಗಿತ್ತು. ಆದ್ರೆ ನಮ್ಮ ತಂದೆಯವರು ಯಾವುದೇ ಕಲಿಕೆಗೆ ಬೇಡ ಎಂದವರಲ್ಲ. ಸಣ್ಣ ಪ್ರಾಯದಲ್ಲಿ ಈಜು ಕಲಿಸಲು ಮನೆಪಕ್ಕದ ಕೆರೆ, ಕಟ್ಟ ಕಟ್ಟಿ ನಿಲ್ಲಿಸಿದ ಭಾರೀ ನೀರನ್ನೇ ಉಪಯೋಗಿಸುತ್ತಾ ಇದ್ದು, ಯಾವುದೇ ರೀತಿಯ ಉಪಕರಣ ಬಳಸದೆ ಈಜು ಕಲಿಸಿದ ನೆನಪು. ನಮ್ಮನ್ನು ಎತ್ತಿ ನೀರಿಗೆ ಎಸೆದು ತಂದೆಯು ನೀರಿಗೆ ಹಾರಿ ನಮ್ಮನ್ನು ಎತ್ತಿ ಮುಳುಗಿಸೋರು. ಆ ಮೂಲಕ ನೀರಿನ ಭಯ ಓಡಿಸೋರು. ಈಜು ಕಲಿಯುವುದು ಬಹಳ ಸುಲಭ ಮತ್ತು ಆ ಕಲಿಕೆ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ನಿಜ ಹೇಳಬೇಕೆಂದರೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹೆಣ್ಣಾದರೂ ನಾನು ಭಾಗ್ಯಶಾಲಿ ಹೆಣ್ಣು ಎಂದೇ ಭಾವಿಸುತ್ತೇನೆ. ಜೊತೆಗೆ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿದ್ದರೂ ನಾನು ಯಾವತ್ತೂ ಅವಕಾಶದಿಂದ ವಂಚಿತಳಾಗಿದ್ದಿಲ್ಲ. ಕಾರಣ ಹುಡುಗಿಯರು ಶಾಲೆಗೆ ಹೋಗಬಾರದು ಎಂದು ವಾದಿಸುತ್ತಿದ್ದ ಕಾಲದಲ್ಲಿ ನನ್ನ ತಂದೆ ತಾಯಿ ನನ್ನನ್ನು ಡಿಗ್ರಿ ತನಕ ಓದಿಸುವ ಧೈರ್ಯ ಮಾಡಿದ್ದರು. ಊರಿಡೀ ನನ್ನ ಬಗ್ಗೆ, ತಂದೆಯ ಬಗ್ಗೆ ಆಡಿಕೊಂಡು ಇರುವ ಜನರ ಮಧ್ಯೆ ನಾವು ನಮ್ಮದೇ ಬದುಕು ಎಂಬಂತೆ ಜೀವಿಸಿದ್ದು ಒಂದೆಡೆಯಾದರೆ, ಶಾಲಾ ಕಾಲೇಜು ದಿನಗಳಲ್ಲಿ ಎಲ್ಲಾ ರೀತಿಯ ಆಟೋಟ, ಸ್ಪರ್ಧೆ, ಒಳಾಂಗಣ ಕ್ರೀಡೆ ಹೊರಾಂಗಣ ಕ್ರೀಡೆ ಎಲ್ಲದರಲ್ಲೂ ನಾನು ಮೊದಲ ಸ್ಥಾನದಲ್ಲಿದ್ದೆ. ಬೇರೆ ಬೇರೆ ಶಾಲೆ ಕಾಲೇಜುಗಳಿಗೆ ಸ್ಪರ್ಧಿಸಲು ನನ್ನ ತಂದೆ ಕಳಿಸಿಕೊಡುತ್ತಿದ್ದ ನೆನಪು ಇನ್ನೂ ಮಾಸಿಲ್ಲ. ಸ್ಪೋರ್ಟ್ಸ್, ಗೇಮ್ಸ್ಗೆ ಬೇಕಾದ ಎಲ್ಲಾ ತರದ ಉಡುಪುಗಳನ್ನು ತಂದು ಕೊಟ್ಟು ಪ್ರೋತ್ಸಾಹ ಕೊಡುತ್ತಿದ್ದ ನನ್ನ ತಂದೆ ಬೆಳಗ್ಗೆ ೪ ಗಂಟೆಗೆ ಎಬ್ಬಿಸಿ ಶಾಲೆಯ ಗ್ರೌಂಡ್ ನಲ್ಲಿ ಓಡಿಸುವ ಅಭ್ಯಾಸ ಮಾಡಿಸುತ್ತಿದ್ದರು. ಓದಿ,ಕಲಿತು ನೀನು ಒಂದಾ ಪೊಲೀಸ್ ಆಗಬೇಕು ಇಲ್ಲ ಲಾಯರ್ ಆಗಬೇಕು ಎಂದು ಹೇಳುತ್ತಾ ಇದ್ದರು. ನಾನು ಓದಿದ್ದು ಸರಕಾರಿ ಶಾಲೆಯಲ್ಲಿ. ಸಾವಿರದ ಐನೂರಕ್ಕಿಂತಲೂ ಹೆಚ್ಚು ಮಕ್ಕಳು ಅಲ್ಲಿ ಓದುತ್ತಿದ್ದರು. ಹಿಂದೂ, ಮುಸ್ಲಿಮ್, ಕ್ರೈಸ್ತ ಎಲ್ಲಾ ಜಾತಿಯ ಮಕ್ಕಳು ಅಲ್ಲಿದ್ದರು. ಶಾರದಾ ಪೂಜೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಎಲ್ಲದರ ಖುಷಿಯನ್ನ್ನು ಪಡೆದು ಬೆಳೆದವಳು. ಗಾಂಧಿ, ನೆಹರೂ ಸುಭಾಶ್ಚಂದ್ರ ಬೋಸ್, ತಿಲಕ್, ಅಂಬೇಡ್ಕರ್ ಇವರೆಲ್ಲರ ಬಗೆಗೆ ಗರಿಷ್ಠವಾಗಿ ತಿಳಿದು ಕೊಂಡಿದ್ದು ಅದೇ ಶಾಲಾ ಕಾಲೇಜು ದಿನಗಳಲ್ಲಿ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಕೋಲಾಟ, ಟಮ್ಕಿ, ರಾಷ್ಟ್ರಭಕ್ತಿ ಗೀತೆ ಎಲ್ಲದರಲ್ಲೂ ಭಾಗವಹಿಸುತ್ತಿದ್ದೆ. ಶಾಲೆಯಲ್ಲಿ ದಿನಾ ಬೆಳಗ್ಗೆ ಮತ್ತು ಸಂಜೆ ರಾಷ್ಟ್ರಗೀತೆ ಜನಗಣಮನ ಹಾಡುತ್ತಿದ್ದ ನಾಲ್ವರೂ ಹುಡುಗಿಯರ ಸ್ವರ ಇಡೀ ಶಾಲಾ ವಠಾರದಲ್ಲಿ ಮಾರ್ಧನಿಸುತ್ತಿತ್ತು. ಈ ಸಂದರ್ಭ ನನಗೂ ಆ ನಾಲ್ವರಲ್ಲಿ ಒಬ್ಬಳಾಗಬೇಕು ಎಂಬ ಆಸೆ ಇತ್ತು. ಆದರೆ ಅದು ಈಡೇರಿದ್ದು ಬಿಎಡ್ ಮಾಡುವ ಸಂದರ್ಭದಲ್ಲಿ. ಇಡೀ ದಿನ ಆಟ ಓಟದಲ್ಲೇ ಕಳೆಯುತ್ತಿದ್ದ ನನಗೆ ಓದಿನಲ್ಲಿ ಆಸಕ್ತಿ ಕಡಿಮೆ ಏನೂ ಇರಲಿಲ್ಲ. ಆದರೆ ಪರೀಕ್ಷೆ ಬಂದಾಗ ಯಾವ ಪಾಠ ಓದಬೇಕು, ಎಷ್ಟು ಓದಬೇಕು ಎಂದು ಗೊತ್ತೇ ಇರುತ್ತಿರಲಿಲ್ಲ. ಜಸ್ಟ್ ಪಾಸ್ ಮಾರ್ಕ್ ಬಂದರೆ ನನಗೆ ಅದುವೇ ಖುಷಿ. ಆದರೆ ಹತ್ತನೇ ತರಗತಿಗೆ ಬರುವಾಗ ಆಟ ಓಟವನ್ನು ಶಿಕ್ಷಕರು ಕಡಿಮೆ ಮಾಡಿಸಿದ್ರು. ಆದರೂ ನಾನು ಓದಿನಲ್ಲಿ ತೊಡಗಿಕೊಳ್ಳಲು ಹೋಗಿರಲಿಲ್ಲ. ಪಬ್ಲಿಕ್ ಪರೀಕ್ಷೆ ಹತ್ತಿರ ಬಂದಾಗ ಉಳಿದವರೆಲ್ಲ ಪರೀಕ್ಷೆಗೆಂದು ಗಂಭೀರವಾಗಿ ಓದಲು ಶುರು ಹಚ್ಚಿದಾಗ, ವಿಧಿಯಿಲ್ಲದೆ ನಾನೂ ಓದಬೇಕು ಅಂತ ನಿರ್ಧರಿಸಿದೆ. ಆದರೆ ಒಂದು ನೋಟ್ಸ್ ಕೂಡ ಸಂಪೂರ್ಣ ಇಲ್ಲ. ಬರೀ ಪಠ್ಯಪುಸ್ತಕ ಮಾತ್ರ ಇತ್ತು. ಗಣಿತವನ್ನು ಮೊದಲು ಕಲಿಯಲು ಆರಂಭಿಸಿದೆ. ಬರೀ ಪಠ್ಯ ಇಟ್ಟುಕೊಂಡು ಬರೆದು ಕಲಿತೆ. ಪರೀಕ್ಷೆ ಬರೆಯಬಹುದು ಎಂಬ ಧೈರ್ಯ ಬಂತು. ಬಳಿಕ ಉಳಿದ ವಿಷಯ ಅಭ್ಯಾಸ ಮಾಡಿದೆ. ಪರೀಕ್ಷೆ ಬರೆದೆ, ಪಾಸಾದೆ. ಗಣಿತದಲ್ಲಿ ಹೆಚ್ಚು ಅಂಕ ಪಡೆದೆ. ಹೇಗೆ ಓದಬೇಕು, ಯಾವಾಗ ಓದಬೇಕು ಎಂದು ಗೈಡ್ ಮಾಡಲು ಅಪ್ಪ ಅಮ್ಮನಿಗೆ ಗೊತ್ತಿರಲಿಲ್ಲ. ಅಮ್ಮ ಶಾಲೆಗೆ ಹೋಗಿಲ್ಲ ಅಪ್ಪ ದುಡಿಮೆಯ ಹಿಂದೆ. ಹೀಗಾಗಿ ವ್ಯವಸ್ಥಿತವಾಗಿ ತರಬೇತಿ ಆ ಕಾಲದಲ್ಲಿ ಸಿಗದೆ ಜೀವನದ ದಿಕ್ಕನ್ನು ರೂಪಿಸಲು ಸಾಧ್ಯವಾಗದೆ ಹೋಯಿತೆ ಎಂದು ಆಗಾಗ ಅನ್ನಿಸುವುದಿದೆ. ನನಗೆ ಸಹಪಾಠಿಗಳಾಗಿ ಎಲ್ಲಾ ಜಾತಿಯ ಹುಡುಗಿಯರು ಇದ್ದರು. ಅವರೆಲ್ಲರೂ ಮನೆವಾರ್ತೆ ನೊಡುತ್ತಾ ಮಕ್ಕಳನ್ನು ನೋಡುತ್ತಾ ಮನೆಯಲ್ಲೇ ಇದ್ದಾರೆ. ಒಂದಿಬ್ಬರಷ್ಟೇ ಸರಕಾರಿ ಕೆಲಸದಲ್ಲಿ ಇದ್ದಾರೆ. ನಮ್ಮದು ಹಳ್ಳಿ ಪ್ರದೇಶ, ಅಲ್ಲಿ ಹುಟ್ಟಿ ಬೆಳೆದ ಕಾರಣ ಸಾಕಷ್ಟು ಕೆರೆ, ತೋಡು, ನೀರು, ನೆರೆ ಎಲ್ಲವನ್ನೂ ಕಂಡು ಬೆಳೆದವಳು. ನೀರನ್ನು ನೋಡುವಾಗ ಭಯಪಡುವುದಕ್ಕಿಂತಲೂ ನೀರಿನೊಂದಿಗೆ ಆಟವಾಡಲು ಹೆಚ್ಚು ಇಷ್ಟಪಡುತ್ತಿದ್ದೆವು. ಅಮ್ಮನಿಗೆ ಕದ್ದುಮುಚ್ಚಿ ತೋಡಿನ ನೀರಿನಲ್ಲಿ ಆಡಲು ಹೋಗುತ್ತಿದ್ದ ನೆನಪು ಮತ್ತು ಅಲ್ಲಿ ಈಜಾಡಿ ಮಜಾ ತೆಗೆದುಕೊಳ್ಳುತ್ತಿದ್ದೆವು.
ಗೆಳತಿಯರ ಜೊತೆಗೂಡಿ ಈಜಾಡುವುದು, ಈಜು ಕಲಿಸುವುದು ಆಟದ ಒಂದು ಭಾಗವೇ ಆಗಿತ್ತು. ಹೀಗೆ ಒಂದು ಬಾರಿ ಕಟ್ಟ ಕಟ್ಟಿದ ಭಾರೀ ನೀರಿನಲ್ಲಿ ನಾಲ್ಕೈದು ಹುಡುಗಿಯರು ಈಜು ಸ್ಪರ್ಧೆಗಾಗಿ ನೀರಿಗಿಳಿದು ಈಜುವಾಗ (ಅವರಿಗೆ ಈಜು ಸರಿ ಗೊತ್ತಿರಲಿಲ್ಲ) ಇಬ್ಬರೂ ಈಜುವ ಬದಲು ನೀರಿನಲ್ಲಿ ಮೇಲೆ ಕೆಳಗೆ ಆಗುವುದನ್ನು ನೀರಿಗಿಳಿಯದೆ ದಂಡೆಯಲ್ಲಿ ಕೂತ ನನಗೆ ಕಂಡಿತು. ಕೂಡಲೇ ಅಪಾಯದ ಸೂಚನೆ ಅರಿತ ನಾನು ಹಿಂದೆ ಮುಂದೆ ನೋಡದೆ ನೀರಿಗೆ ಹಾರಿ ಅವರನ್ನು ಬಚಾವು ಮಾಡಿದ್ದೆ. ಬಳಿಕ ಈಜು ಸ್ಪರ್ಧೆ ನಿಂತು, ಈಜು ಗೊತ್ತಿದ್ದವರು ಮಾತ್ರ ನೀರಿಗಿಳಿಯಬೇಕು ಎಂದು ನಿಯಮ ಮಾಡಿಕೊಂಡೆವು. ಇದೆಲ್ಲಕ್ಕೂ ಕಾರಣ ತಂದೆ ಕೊಟ್ಟ ಪ್ರೋತ್ಸಾಹ, ಧೈರ್ಯ. ಇದು ಜೀವನಕ್ಕೆ ದಕ್ಕಿದ ಅತ್ಯಮೂಲ್ಯ ಸಂಪತ್ತು.
ಈಜು ಮತ್ತು ಡ್ರೈವಿಂಗ್ ಒಮ್ಮೆ ಕಲಿತೆವು ಅಂದರೆ ಅದು ಸಾಯುವ ತನಕ ಮರೆಯದ ಜೀವನ ಕೌಶಲ್ಯ. ಈಜು ಸ್ವರಕ್ಷಣೆಗೆ ಸಹಾಯಕ ಆದರೆ ಡ್ರೈವಿಂಗ್ ಬದುಕು ಕಟ್ಟಿಕೊಳ್ಳಲು ಸಹಾಯಕವಾಗುವ ಕಲೆ. ಓದಲು ಬರೆಯಲು ಬಾರದವರು ಕೂಡ ಈ ಎರಡೂ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಡ್ರೈವಿಂಗ್ ಕಲಿತು ಅದೆಷ್ಟೋ ಕುಟುಂಬಗಳನ್ನು ಸಲಹುವ ಪುರುಷರನ್ನು ನಾವು ಕಾಣಬಹುದು. ಈ ಕ್ಷೇತ್ರಕ್ಕೆ ಈಗ ಮಹಿಳೆಯರು ಧುಮುಕುತ್ತಿದ್ದಾರೆ.
ನಮ್ಮ ಮನೆಗೆ ಆ ದಿನಗಳಲ್ಲಿ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ಕಾಲುದಾರಿ ಮಾತ್ರ ಇತ್ತು. ಯಾವುದೇ ವಾಹನ ಮನೆತನಕ ಬರುವ, ವ್ಯವಸ್ಥೆ ಇರಲಿಲ್ಲ. ನಿತ್ಯ ರಾತ್ರಿ ಕನಸಿನಲ್ಲಿ ಮನೆ ಎದುರಿನಿಂದ ರಿಕ್ಷಾ ಹೋಗೋದು, ಮನೆ ಹಿಂಬದಿಯಿಂದ ಲಾರಿ, ಕಾರು ಹೋಗೋದು ಕಾಣುತ್ತಿತ್ತು. ಕನಸಿನ ಆ ಖುಷಿ ವರ್ಣಿಸಲು ಅಸಾಧ್ಯ.ಆದರೆ ಈಗ ಮನೆಯ ಮೆಟ್ಟಿಲವರೆಗೂ ಕಾರು ಕೊಂಡೊಯ್ಯುವ ನನಗೆ, ನಿಜವಾಗಿಯೂ ನಾನೊಂದು ದಿನ ಮನೆವರೆಗೂ ಕಾರು ತರಬಲ್ಲೆ ಎಂಬ ಕನಸೇ ಕಂಡಿರಲಿಲ್ಲ. ಎಲ್ಲವೂ ಸಹಜವೆಂಬಂತೆ ನಡೆದು ಹೋಯಿತು. ಅಲ್ಲದೆ ಈಗ ಮಹಿಳೆಯರು ಕಾರು ಚಲಾಯಿಸುವುದು ಅಂದರೆ ಅದೊಂದು ಪ್ರತಿಷ್ಠೆಯೋ, ಅಹಂಕಾರ ಪಡುವ ವಿಷಯವೋ ಅಲ್ಲ. ಅದೀಗ ಜೀವನದ ಅನಿವಾರ್ಯತೆ.
ಡ್ರೈವಿಂಗ್ ಅಥವಾ ವಾಹನ ಚಲಾಯಿಸುವ ಕಲೆ ಕೌಶಲ ಮಹಿಳೆಗೆ ಒಲಿದರೆ ಅದು ಸ್ವಾತಂತ್ರ್ಯದ ಭಾವವನ್ನು ತೀವ್ರವಾಗಿ ಆಕೆಯೊಳಗೆ ಸ್ಪುರಿಸುತ್ತದೆ. ಆ ಸ್ವಾತಂತ್ರ್ಯದ ಭಾವ ಆತ್ಮಸುಖವನ್ನು ನೀಡಬಲ್ಲುದು. ನನ್ನ ಡ್ರೈವಿಂಗ್ ಕಲಿಕೆಗೆ ಪ್ರೇರಕ ಶಕ್ತಿ ನನ್ನ ತಂದೆ. ತಂದೆ ಬಹಳ ಅನುಭವಿ ಚಾಲಕ. ತಂದೆಯ ದುಡಿಮೆ ಮತ್ತು ಹೊಟ್ಟೆ ಪಾಡು ಡ್ರೈವರ್ ಕೆಲಸದಿಂದಲೇ. ಆಗಾಗ ನನಗೆ ಸ್ಟಿಯರಿಂಗ್ ಮೇಲೆ ಕೈಯಿಡಿಸಿ ಕಲಿಸುವ ಪ್ರಯತ್ನ ಮಾಡುತ್ತಿದ್ದ ನೆನಪು. ತಂದೆ ತನ್ನ ಮರಣದವರೆಗೂ ಡ್ರೈವಿಂಗ್ ಮಾಡುತ್ತಿದ್ದು ಅವರ ಮರಣವೂ ಕೂಡ ದುಡಿಯುತ್ತಿದ್ದ ಲಾರಿಯಲ್ಲಿ ಆಗಿತ್ತು. ತಂದೆಗೆ ಡ್ರೈವಿಂಗ್ ಒಂದು ಜೀವನ ಶೈಲಿಯೇ ಆಗಿ ಹೋಗಿತ್ತು. ತಾನು ದುಡಿಯುತ್ತಿದ್ದ ಲಾರಿಯನ್ನು ಬೆಳಗ್ಗೆದ್ದು ತೊಳೆಯದೆ ಸ್ಟಾರ್ಟ್ ಮಾಡುತ್ತಿರಲಿಲ್ಲ. ‘ಯಾಕೆ ಲಾರಿಗೆ ನೀರು ಹಾಕುತ್ತೀರಿ?’ ಅನ್ನುವ ನನ್ನ ಪ್ರಶ್ನೆಗೆ ‘ನಾವು ಬೆಳಗ್ಗೆದ್ದು ಮುಖ ತೊಳೆಯದೆ ಬ್ರಶ್ ಮಾಡದೆ ಹೊರಗೆ ಹೋಗ್ತೀವಾ? ಇಲ್ವಲ್ಲ ಹಾಗೆ ಈ ಗಾಡಿ ಕೂಡ. ಅದರ ಮುಖ ತೊಳೆಯದೆ ನಾವು ಇರಬಾರದು. ನಮಗೆ ಅನ್ನ ಕೊಡುವ ಜೀವ ಅದು. ಅದನ್ನು ತೊಳೆಯದೆ ಇದ್ದರೆ ಬರ್ಕತ್ ಇರುವುದಿಲ್ಲ ’ ಎಂದು ಹೇಳಿದ ಮಾತು ಇಂದಿಗೂ ನೆನಪಿದೆ. ತಂದೆ ಬರೀ ಡ್ರೈವಿಂಗ್ ಕಲಿಸಲು ಮಾತ್ರ ಪ್ರೇರಕ ಶಕ್ತಿ ಅಲ್ಲ ನಾವು ಬಳಸುವ ವಾಹನವನ್ನು ಹೇಗೆ ಪ್ರೀತಿಸಬೇಕು ಎಂದು ಕೂಡ ಕಲಿಸಿಕೊಟ್ಟಿದ್ದಾರೆ.
ಟಯರ್ ಅನ್ನು ಕೈಯಲ್ಲಿ ಬಡಿದು ಗಾಳಿ ಬೇಕಾದಷ್ಟು ಇದೆಯೇ, ಪಂಕ್ಚರ್ ಆಗಿದೆಯೇ? ಎಂದು ನೋಡುವುದನ್ನು ತದೇಕಚಿತ್ತದಿಂದ ಗಮನಿಸುತ್ತಿದ್ದೆ. ಲಾರಿಯ ಆಯಿಲ್ ಚೆಕ್ ಮಾಡುವ ರೀತಿಯನ್ನು ಸೂಕ್ಷ್ಮ ವಾಗಿ ಗಮನಿಸುತ್ತಿದ್ದೆ. ಲೋಡು ಹೊತ್ತು ತರುತ್ತಿದ್ದ ಲಾರಿಗೆ ಹಗ್ಗದಲ್ಲಿ ಲೋಡ್ ಕಟ್ಟುತ್ತಿದ್ದ ರೀತಿಯನ್ನು ಪ್ರಶ್ನಿಸುತ್ತಾ, ಮರಗಳನ್ನು ಲಾರಿಗೆ ಎತ್ತಿ ಹಾಕುವ ಆನೆಯ ಬಗೆಗೆ ತಂದೆ ಹೇಳುತ್ತಿದ್ದ ಕಥೆಯನ್ನು ಕೇಳಿ ರೋಮಾಂಚನ ಗೊಳ್ಳುತ್ತಿದ್ದೆ.
ಸಣ್ಣ ವಯಸ್ಸಿಗೆ ಸಂಪೂರ್ಣ ಡ್ರೈವಿಂಗ್ ಕಲಿಯಲು ಸಾಧ್ಯವಾಗದೆ ಇದ್ದರೂ ಮೂವತ್ತೈದನೇ ವಯಸ್ಸಿನಲ್ಲಿ ಡ್ರೈವಿಂಗ್ ಕಲಿಯಲೇಬೇಕು ಎಂಬ ಅದಮ್ಯ ಉತ್ಸಾಹಕ್ಕೆ ವಿವಾಹದ ಬಳಿಕ ದೊಡ್ಡ ಪ್ರೋತ್ಸಾಹ ಸಿಗಲಿಲ್ಲ. ಬಹಳಷ್ಟು ವಿನಂತಿ ಬಳಿಕವೂ ಅನುಮತಿ ಸಿಗಲಿಲ್ಲ. ಈ ಅನುಮತಿ ನಿರಾಕರಣೆಗೆ ಕಾರಣ ‘ನಮ್ಮಲ್ಲಿ ಯಾವುದೇ ವಾಹನ ಇಲ್ಲವಲ್ಲ. ಕಾರು ಖರೀದಿಸಿದ ಬಳಿಕ ಕಲಿತರೆ ಸಾಕು’ ಎನ್ನುವುದು ಪತಿಯ ನಿರ್ಧಾರ ಮತ್ತು ಅಭಿಪ್ರಾಯ ಆಗಿತ್ತು. ಅಲ್ಲದೆ ಅವರಿಗೆ ಡ್ರೈವಿಂಗ್ ಗೊತ್ತಿರಲಿಲ್ಲ. ಕೊನೆಗೆ ಏನು ಬೇಕಾದರೂ ಮಾಡು ಎಂಬ ಮಾತು ಹೇಳಿದಾಗ ಅದನ್ನೇ ಅನುಮತಿಯಾಗಿಸಿ ಡ್ರೈವಿಂಗ್ ಕಲಿತೆ. ಪರವಾನಿಗೆ ಪತ್ರ, ಕಲಿಕೆಗೆ ಮೂರುವರೆ ಸಾವಿರ ಹೊಂದಿಸಲು ಬಹಳ ಕಷ್ಟಪಟ್ಟಿದ್ದೆ. ೪೦ ದಿನಗಳ ಕಲಿಕೆಯನ್ನು ಪೂರ್ಣಗೊಳಿಸಲು ೩ ತಿಂಗಳು ಬೇಕಾಗಿತ್ತು. ಕಾರಣ ಈ ಮಧ್ಯೆ ಬ್ರೈನ್ ಟ್ಯೂಮರ್ ಬಂದು ಆರೋಗ್ಯ ಕೈಕೊಟ್ಟಿತ್ತು. ಔಷಧಿ ಸೇವಿಸುತ್ತಾ ಮಧ್ಯೆ ಮಧ್ಯೆ ಕಲಿಕೆ ಪೂರ್ತಿ ಮಾಡಿದೆ. ಕಲಿತ ಹೊಸತರಲ್ಲಿ ತವರು ಮನೆಗೆ ಬಂದ ಹೊಸ ಓಮ್ನಿ ಕಾರನ್ನು ತಂದೆಗೆ ಕದ್ದು ಮುಚ್ಚಿ ಮನೆ ಕಾಂಪೌಂಡ್ ನಿಂದ ಹೊರಗೆ ತೆಗೆಯುವುದು ಇಡುವುದು ಮಾಡುತ್ತಿದ್ದೆ. ಕೆಲವು ಸಾರಿ ಸ್ವಲ್ಪ ದೂರದವರೆಗೆ ಒಬ್ಬಳೇ ಡ್ರೈವ್ ಮಾಡುತ್ತಾ ಮಾಡುತ್ತಾ ಅನುಭವ ಗಳಿಸಿದೆ. ಒಂದು ಹಂತದವರೆಗೆ ಓಮ್ನಿ ಕಾರಿನಲ್ಲಿಯೇ ನಾನು ಸರಿಯಾಗಿ ಡ್ರೈವಿಂಗ್ ಕಲಿತೆ ಎಂದು ಹೇಳಬಹುದು.
ಈ ಮಧ್ಯೆ ಕುಟುಂಬದಲ್ಲಿ ಮನಸ್ತಾಪ ವಿಚ್ಛೇದನದವರೆಗೂ ಬಂದು ನಿಂತಿತು. ವಿಚ್ಛೇದನವೂ ಆಯಿತು. ಮದುವೆ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ವಿದ್ಯಾಭ್ಯಾಸ ವಿಚ್ಛೇದನದ ನಂತರ ಮತ್ತೆ ಮುಂದುವರಿಯಿತು. ಜೊತೆಗೆ ಜೀವನ ನಿರ್ವಹಣೆ ಆಗುವುದಾದರೂ ಹೇಗೆ ಅನ್ನೋ ಪ್ರಶ್ನೆಯೂ ಮುಂದಿತ್ತು. ಆಗ ನನ್ನ ಸಹಾಯಕ್ಕೆ ಬಂದಿದ್ದೇ ನಾನು ಕಲಿತ ಡ್ರೈವಿಂಗ್. ಓದಬೇಕು, ಉನ್ನತ ವಿದ್ಯಾಭ್ಯಾಸ ದ ಕನಸು ಮತ್ತೆ ಜೀವ ವಾಗುವುದರ ಜೊತೆಗೆ ಬದುಕು ಹೇಗೆ ಎಂದು ಆಲೋಚಿಸಲು ಹೋಗಲಿಲ್ಲ. ಬದಲಾಗಿ ಓದುವ ಕನಸಿನ ಜೊತೆಗೆ ಡ್ರೈವಿಂಗ್ ಮೂಲಕ ಆರ್ಥಿಕ ಸ್ವಾವಲಂಬನೆ ಪಡೆಯುತ್ತೇನೆ ಎಂಬ ನನ್ನ ಒಳಗಿನ ಕರೆಗೆ ಕಿವಿಯಾದೆ. ಹಾಗೆ ಮಾಡಿದೆ ಕೂಡ. ವಿಚ್ಛೇದನ ಆಯಿತೆಂದು ತಲೆಬಿಸಿ ಮಾಡದೆ ಬಿಡುಗಡೆ ಸಿಕ್ಕಿತು ಎಂದು ಸಕಾರಾತ್ಮಕವಾಗಿ ಚಿಂತಿಸಿದೆ.
ನಡುವೆ ಡ್ರೈವಿಂಗ್ ಸ್ಕೂಲ್ ಒಂದರಲ್ಲಿ ಕೆಲಸ ಅರಸಿ ಹೋದಾಗ ನಿರಾಸೆಯಾಗಲಿಲ್ಲ. ಅವರಿಗೂ ಒಬ್ಬ ಮಹಿಳಾ ಡ್ರೈವಿಂಗ್ ಶಿಕ್ಷಕಿ ಬೇಕಾಗಿತ್ತು. ಕೆಲಸಕ್ಕೆ ಸೇರಿದೆ. ಕಲಿಯುವ ಅದಮ್ಯ ಬಯಕೆಯೂ ಬತ್ತಲಿಲ್ಲ. ಕೆಲಸ ಮಾಡುತ್ತಲೇ ಸ್ನಾತಕೋತ್ತರ ಪದವಿ ಮಾಡಲು ವಿಶ್ವವಿದ್ಯಾನಿಲಯದತ್ತ ಹೋದೆ. ಅರ್ಜಿ ಹಾಕಿದೆ. ಮೀಸಲಾತಿ ಮೇಲೆ ಸೀಟು ಸಿಕ್ಕಿತು. ಶುಲ್ಕವು ಕಡಿಮೆ ಇತ್ತು. ಡ್ರೈವಿಂಗ್ ಸ್ಕೂಲ್ ಮಾಲಕ ಮಾನವೀಯ ಗುಣವುಳ್ಳ ವ್ಯಕ್ತಿ ಆಗಿದ್ದರು. ನನ್ನ ಕಲಿಕೆಯ ಆಸೆಯ ಬಗ್ಗೆ ಹೇಳಿದೆ. ಕಲಿಕೆಗೆ ಸಮಯಾವಕಾಶ ಕೇಳಿದೆ. ಪಾರ್ಟ್ ಟೈಂ ಕೆಲಸಕ್ಕೆ ಒಪ್ಪಿಕೊಂಡರು. ಸಂಬಳ ಪೂರ್ಣ ಕೊಟ್ಟು ಸಹಾಯ ಮಾಡಿದರು. ಕಲಿಸುವವರು ಮಹಿಳೆ ಆದ ಕಾರಣ ಕಲಿಯಲು ಬರುವ ಮಹಿಳೆಯರ ಸಂಖ್ಯೆಯು ಹೆಚ್ಚಿ ಮಾಲಕರ ಆದಾಯ ಹೆಚ್ಚಾಗಿತ್ತು. ಬಹಳಷ್ಟು ಮಹಿಳೆಯರಿಗೆ ಕಲಿಸಿದೆ. ಕೈಗೆ ಹಣವೂ ಬಂತು, ದುಡಿಮೆ ಮತ್ತು ಕಲಿಕೆ ಜೊತೆಯಾಗಿ ಸಾಗಿತು. ಬೇರೆ ಏನನ್ನೂ ಆಲೋಚಿಸಲು ಸಮಯವಿಲ್ಲದಂತೆ ಬದುಕು ಸಾಗಿತು. ಕಲಿಕೆಯಲ್ಲಿ ಎರಡು ವರ್ಷ ಹೇಗೆ ಹೋಯಿತು ಎಂದೇ ಗೊತ್ತಾಗಲಿಲ್ಲ. ಪತ್ರಿಕೋದ್ಯಮದಲ್ಲಿ ಮಾಸ್ಟರ್ಸ್ ಪದವಿ ಪ್ರಥಮ ಶ್ರೇಣಿಯಲ್ಲಿ ದಕ್ಕಿಸಿಕೊಂಡೆ. ೨೦೧೪ರಲ್ಲಿ ಪದವಿ ಮುಗಿಸಿ ವಾರ್ತಾಭಾರತಿ ದಿನ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದೆ. ಟಿವಿ, ವೆಬ್ಸೈಟ್ನಲ್ಲಿಯು ಕೆಲಸ ಮಾಡಿದೆ. ಇದೆಲ್ಲವೂ ನನ್ನ ತಂದೆ ಕೊಟ್ಟ ಧೈರ್ಯ ಮತ್ತು ಪ್ರೋತ್ಸಾಹದಿಂದ ಆಗಿತ್ತು ಅಂತ ಹೇಳಲು ಖುಷಿಯೆನಿಸುತ್ತದೆ.
ಉನ್ನತ ಶಿಕ್ಷಣವನ್ನು ೩೭ನೇ ವಯಸ್ಸಿನಲ್ಲಿ ಮಾಡಬೇಕಾಗಿ ಬಂದಿದ್ದು ನನಗೆ ಆದ ಅವಮಾನದಿಂದ. ಕಾಲೇಜೊಂದರಲ್ಲಿ ಲೆಕ್ಚರರ್ ಕೆಲಸ ಮಾಡುವಾಗ ವೇತನ ತಾರತಮ್ಯವನ್ನು ಪ್ರಶ್ನಿಸಿದ್ದೆ. ಆಗ ಆದ ಅವಮಾನ ನನ್ನಲ್ಲಿ ಪದವಿ ಇಲ್ಲ (ಪದವಿ ಇರಲಿಲ್ಲ)ಎಂದು. ಹೇಗಾದರೂ ಪದವಿಯನ್ನು ಮಾಡಬೇಕು ಎಂದು ಒಳಗೆ ತಿಕ್ಕಾಟ ನಡೆಯುತ್ತಲೇ ಇತ್ತು. ಆಗ ಕುಟುಂಬದಲ್ಲಿ ಕಲಿಕೆಗೆ ಅನುಮತಿ ಸಿಗುವ ಯಾವ ಧೈರ್ಯವೂ ಇರಲಿಲ್ಲ. ಹಾಗಾಗಿ ಕಾಲೇಜಿನಲ್ಲಿ ಆದ ಅವಮಾನ ಮತ್ತು ವಿಚ್ಛೇದನ ಸಿಕ್ಕಿದ ಸಮಯ ಒಂದಾಗಿ ಪದವಿ ಮಾಡಲು ಸಹಾಯ ಮಾಡಿತು. ಪದವಿಯನ್ನು,ಮನೆವಾರ್ತೆ, ಮಗನನ್ನು ನೋಡಿಕೊಳ್ಳುತ್ತಾ, ಅರೆ ಕಾಲಿಕ ಶರತ್ತಿನಲ್ಲಿ ದುಡಿಯುತ್ತಾ (ಡ್ರೈವಿಂಗ್ ಕಲಿಸುವಿಕೆ) ಜೀವನ ಸಾಗಿಸಿದೆ. ಆಗ ಆ ದುಡಿಮೆ ನನಗೆ ಬಹಳಷ್ಟು ಅನುಭವವನ್ನು ಕೊಟ್ಟಿತ್ತು. ನನ್ನದೇ ಡ್ರೈವಿಂಗ್ ಸ್ಕೂಲ್ ತೆರೆದರೆ ಹೇಗೆ ಎಂಬ ಆಸೆ ಚಿಗುರೊಡೆಯಿತು. ಹಣಕಾಸಿನ ತೊಂದರೆಯಿಂದ ಚಿಗುರು ಕೆಲವು ವರುಷ ಬೆಳವಣಿಗೆಯನ್ನೇ ಕಾಣಲಿಲ್ಲ. ಲೆಕ್ಚರರ್ ಆಗಬೇಕಂಬ ಕನಸು ನನಸಾಗುವ ಲಕ್ಷಣ ಕಾಣದೆ ಮಾಧ್ಯಮಗಳಲ್ಲಿ ದುಡಿದೆ. ಮತ್ತೆ ಶಿಕ್ಷಕಿಯಾಗುವ ಅದಮ್ಯ ಬಯಕೆ ಬಂದು ಬಿಎಡ್ ಮಾಡಲು ಮನಸ್ಸು ಮಾಡಿದೆ. ಸರಕಾರಿ ಸೀಟ್ ಸಿಕ್ಕಿತು, ಸ್ಕಾಲರ್ಶಿಪ್ ಸಿಕ್ಕಿತು. ಗೆಳೆಯರೊಬ್ಬರ ಸಹಾಯವು ದೊರೆತು ೨೦೨೧ರಲ್ಲಿ ಆ ಪದವಿಯನ್ನು ನನ್ನದಾಗಿಸಿದ ಆನಂದ ಇದೆ. ಈ ಮಧ್ಯೆ ಕೊರೋನ ಬಂದು ಬದುಕು ಅಸ್ತವ್ಯಸ್ತ ಆಯಿತು. ಮತ್ತೆ ಡ್ರೈವಿಂಗ್ ಸ್ಕೂಲ್ ಹಾಕುವ ಕನಸನ್ನು ಗಟ್ಟಿ ಮಾಡಿದೆ. ಹಣಕಾಸಿನ ಸಹಾಯವನ್ನು ಪಡೆದು ನನ್ನದೇ ಸ್ಕೂಲ್ ತೆರೆದೆ. ಮತ್ತೆ ಡ್ರೈವಿಂಗ್ ಕಲಿಸುವ ಕಾಯಕಕ್ಕೆ ಇಳಿದೆ. ನನ್ನ ಸ್ವಾವಲಂಬಿ ಬದುಕಿಗೆ ಪೋಷಕಿಯಾಗಿ ಬಂದವಳು ನನ್ನ ಸಹೋದರಿ. ನಾವಿಬ್ಬರೂ ಜೊತೆಯಾಗಿ ಈ ಡ್ರೈವಿಂಗ್ ಸ್ಕೂಲ್ ಸ್ಥಾಪಿಸಿದೆವು ಮತ್ತು ಜೊತೆಯಾಗಿ ದುಡಿಯಲು ಧುಮುಕಿದೆವು. ನಮ್ಮ ಸಂಸ್ಥೆಯಲ್ಲಿ ಮೂರು ಮಂದಿ ನಮಗಿಬ್ಬರಿಗೂ ಸಹಾಯಕರಾಗಿ ದುಡಿಯುತ್ತಿದ್ದಾರೆ. ಅವರಿಗೆ ಉತ್ತಮ ಸಂಭಾವನೆ ಕೊಡುತ್ತಿದ್ದು, ನಮ್ಮ ಸಂಸ್ಥೆ ಮಹಿಳೆಯರಿಂದ ಸ್ಥಾಪಿತವಾಗಿ ಮಹಿಳಾ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದೆ. ಸೇವೆ ಮಾಡುವವರು ಮಹಿಳೆಯರೇ ಆಗಿರುವುದರಿಂದ ಸೇವೆ ಪಡೆಯಲು ಬರುವ ಮಹಿಳೆಯರಿಗೆ ಭದ್ರತೆ ಮತ್ತು ಸುರಕ್ಷಿತ ಭಾವ ಹೆಚ್ಚು ಸಿಗುತ್ತಿದೆ.
ದುಡಿಮೆ ಸಾಗುತ್ತಾ ಇದೆ. ದುಡಿಮೆ, ವ್ಯಾಪಾರ ಅಂದ ಮೇಲೆ ತ್ಯಾಗ, ಸಹನೆ, ಬದ್ಧತೆ ಇದ್ದರೆ ಮಾತ್ರ ಗೆಲುವು ನಮ್ಮದಾಗುತ್ತದೆ. ಹೆಣ್ಣಿಗೆ ದುಡಿಮೆ ಮತ್ತು ಕುಟುಂಬವನ್ನು ಜೊತೆ ಜೊತೆಯಾಗಿ ಸಾಗಿಸುವುದು ಎಂದರೆ ಅಷ್ಟು ಸುಲಭವಲ್ಲ. ಆ ಕಾರ್ಯಕ್ಷೇತ್ರಕ್ಕೆ ಇಳಿದವರಿಗಷ್ಟೇ ಗೊತ್ತು ಅದರ ಆಳ ಅಗಲ.
ಡ್ರೈವಿಂಗ್ ಅಥವಾ ವಾಹನ ಚಲಾಯಿಸುವ ಕಲೆ ಕೌಶಲ ಮಹಿಳೆಗೆ ಒಲಿದರೆ ಅದು ಸ್ವಾತಂತ್ರ್ಯದ ಭಾವವನ್ನು ತೀವ್ರವಾಗಿ ಆಕೆಯೊಳಗೆ ಸ್ಪುರಿಸುತ್ತದೆ. ಆ ಸ್ವಾತಂತ್ರ್ಯದ ಭಾವ ಆತ್ಮಸುಖವನ್ನು ನೀಡಬಲ್ಲುದು. ನನ್ನ ಡ್ರೈವಿಂಗ್ ಕಲಿಕೆಗೆ ಪ್ರೇರಕ ಶಕ್ತಿ ನನ್ನ ತಂದೆ. ತಂದೆ ಬಹಳ ಅನುಭವಿ ಚಾಲಕ. ತಂದೆಯ ದುಡಿಮೆ ಮತ್ತು ಹೊಟ್ಟೆ ಪಾಡು ಡ್ರೈವರ್ ಕೆಲಸದಿಂದಲೇ. ಆಗಾಗ ನನಗೆ ಸ್ಟಿಯರಿಂಗ್ ಮೇಲೆ ಕೈಯಿಡಿಸಿ ಕಲಿಸುವ ಪ್ರಯತ್ನ ಮಾಡುತ್ತಿದ್ದ ನೆನಪು. ತಂದೆ ತನ್ನ ಮರಣದವರೆಗೂ ಡ್ರೈವಿಂಗ್ ಮಾಡುತ್ತಿದ್ದು ಅವರ ಮರಣವೂ ಕೂಡ ದುಡಿಯುತ್ತಿದ್ದ ಲಾರಿಯಲ್ಲಿ ಆಗಿತ್ತು. ತಂದೆಗೆ ಡ್ರೈವಿಂಗ್ ಒಂದು ಜೀವನ ಶೈಲಿಯೇ ಆಗಿ ಹೋಗಿತ್ತು.
ಮದುವೆ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ವಿದ್ಯಾಭ್ಯಾಸ ವಿಚ್ಛೇದನದ ನಂತರ ಮತ್ತೆ ಮುಂದುವರಿಯಿತು. ಜೊತೆಗೆ ಜೀವನ ನಿರ್ವಹಣೆ ಆಗುವುದಾದರೂ ಹೇಗೆ ಅನ್ನೋ ಪ್ರಶ್ನೆಯೂ ಮುಂದಿತ್ತು. ಆಗ ನನ್ನ ಸಹಾಯಕ್ಕೆ ಬಂದಿದ್ದೇ ನಾನು ಕಲಿತ ಡ್ರೈವಿಂಗ್. ಓದಬೇಕು, ಉನ್ನತ ವಿದ್ಯಾಭ್ಯಾಸದ ಕನಸು ಮತ್ತೆ ಜೀವ ವಾಗುವುದರ ಜೊತೆಗೆ ಬದುಕು ಹೇಗೆ ಎಂದು ಆಲೋಚಿಸಲು ಹೋಗಲಿಲ್ಲ. ಬದಲಾಗಿ ಓದುವ ಕನಸಿನ ಜೊತೆಗೆ ಡ್ರೈವಿಂಗ್ ಮೂಲಕ ಆರ್ಥಿಕ ಸ್ವಾವಲಂಬನೆ ಪಡೆಯುತ್ತೇನೆ ಎಂಬ ನನ್ನ ಒಳಗಿನ ಕರೆಗೆ ಕಿವಿಯಾದೆ. ಹಾಗೆ ಮಾಡಿದೆ ಕೂಡ. ವಿಚ್ಛೇದನ ಆಯಿತೆಂದು ತಲೆಬಿಸಿ ಮಾಡದೆ ಬಿಡುಗಡೆ ಸಿಕ್ಕಿತು ಎಂದು ಸಕಾರಾತ್ಮಕವಾಗಿ ಚಿಂತಿಸಿದೆ.