ಫೆಲೆಸ್ತೀನ್ ಕವಿತೆಗಳು
ನನ್ನ ನಿತ್ಯದ ತುತ್ತು ಕಿತ್ತು ಹೋಗಬಹುದು
ನನ್ನ ನಿತ್ಯದ ತುತ್ತು ಕಿತ್ತು ಹೋಗಬಹುದು,
ನಾನು ಗಂಟುಮೂಟೆ ಕಟ್ಟಬೇಕಾಗಬಹುದು,
ಹೊರೆ ಹೊರಬೇಕಾಗಬಹುದು,
ಬೀದಿ ಗುಡಿಸಬೇಕಾಗಬಹುದು,
ಸೆಗಣಿಯಲ್ಲಿ ಆಹಾರ ಹುಡುಕಬೇಕಾಗಬಹುದು,
ಹೊಟ್ಟೆಗಿಲ್ಲದೆ, ಬಟ್ಟೆ ಇಲ್ಲದೆ ನಾನು ಕುಸಿದು ಬೀಳಬಹುದು.
ಏನೇ ಆದರೂ ರಾಜಿ ಮಾತ್ರ ಮಾಡಲಾರೆ,
ಬೆಳಕಿನ ಶತ್ರುಗಳ ಜೊತೆ.
ಹೋರಾಡುತ್ತಲೇ ಇರುವೆನು ನಾನು,
ಅಂತಿಮ ಉಸಿರ ತನಕ.
ನನ್ನ ನೆಲದ ಕೊನೆಯ ತುಂಡನ್ನೂ ನೀವು ಕಬಳಿಸಿಕೊಳ್ಳಬಹುದು,
ಕಾರಾಗೃಹದ ಕತ್ತಲಗುಹೆಯೊಳಗೆ ನೀವು ನನ್ನ ಯವ್ವನವನ್ನು ಕೊಲ್ಲಬಹುದು,
ನನ್ನಜ್ಜ ನನಗೆಂದು ಬಿಟ್ಟು ಹೋದ ಎಲ್ಲವನ್ನೂ ನೀವು ನನ್ನಿಂದ ಕಿತ್ತುಕೊಳ್ಳಬಹುದು.
ಕುರ್ಚಿ, ಮೇಜು, ವಸ್ತ್ರ, ಪಾತ್ರೆಗಳನ್ನು ಎತ್ತೊಯ್ಯಬಹುದು,
ನನ್ನ ಕವನಗಳನ್ನು, ಪುಸ್ತಕಗಳನ್ನು ಸುಟ್ಟು ಹಾಕಬಹುದು,
ನನ್ನ ಮಾಂಸವನ್ನು ನಿಮ್ಮ ನಾಯಿಗಳಿಗೆ ತಿನ್ನಿಸಬಹುದು,
ಪರಮ ಚಿತ್ರ ಹಿಂಸೆಗಳನ್ನು ನೀವು ದುಸ್ವಪ್ನಗಳಾಗಿ ನನ್ನ ಮೇಲೆ ಹೇರಬಹುದು,
ನನ್ನೂರ ಮೇಲೆ ಹೇರಬಹುದು.
ಆದರೂ ಬೆಳಕಿನ ಶತ್ರುಗಳೇ,
ನಾನು ರಾಜಿ ಮಾತ್ರ ಮಾಡಿಕೊಳ್ಳಲಾರೆ,
ಹೋರಾಡುತ್ತಲೇ ಇರುವೆನು ನಾನು,
ಅಂತಿಮ ಉಸಿರ ತನಕ.
- ಸಮೀಹ್ ಅಲ್ ಖಾಸಿಮ್
ಸಮೀಹ್ ಅಲ್ ಖಾಸಿಮ್ (1939 - 2014)
ಇಸ್ರೇಲ್‌ನ ಪೌರರಾಗಿದ್ದವರು. ಅರಬ್ ರಾಷ್ಟ್ರೀಯವಾದದಿಂದ ಪ್ರಭಾವಿತರಾದವರು. 1948ರಲ್ಲಿ ಫೆಲೆಸ್ತೀನ್ ಅನ್ನು ಆಕ್ರಮಿಸಿಕೊಳ್ಳುವ ಕಾರ್ಯಾಚರಣೆ ನಡೆದಾಗ ಅವರಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದರು. ಅಂದಿನ ಘಟನೆಗಳನ್ನು ನೆನಪಿಸಿಕೊಂಡಾಗಲೆಲ್ಲಾ ಅವರು ಆಘಾತಗೊಳ್ಳುತ್ತಿದ್ದರು. ಆ ವರ್ಷವನ್ನೇ ನಾನು ನನ್ನ ಜನ್ಮವರ್ಷವೆಂದು ಪರಿಗಣಿಸುತ್ತೇನೆಂದು ಘೋಷಿಸಿದರು. 1967ರಲ್ಲಿ ನಡೆದ ‘ಆರು ದಿನಗಳ ಯುದ್ಧ’ದ, ಆ ವರ್ಷವು ತಮ್ಮ ಬದುಕಿನ ಮೇಲೆ ಬೀರಿದ ಅಪಾರ ಪ್ರಭಾವವನ್ನು ಪರಿಗಣಿಸಿ, ಆ ವರ್ಷವನ್ನೇ ತಮ್ಮ ಜನನದ ವರ್ಷವೆಂದು ಘೋಷಿಸಿದರು. ಕಾವ್ಯದ ಮೂಲಕ ಅವರು ದಾಖಲಿಸಿರುವ ನೋವು ಮತ್ತು ಆಕ್ರೋಶ ಸಂಪೂರ್ಣ ಅರಬ್ ಜಗತ್ತಿನ ಸಾಹಿತ್ಯ ವಲಯಗಳಲ್ಲಿ ಮಾರ್ದನಿಸುತ್ತಲೇ ಇರುತ್ತವೆ.
************************
ಮೌನ
ಮೌನವು ಹೇಳಿತು:
ಸತ್ಯಕ್ಕೆ ಮಾತುಗಾರಿಕೆಯ ಅಗತ್ಯವಿರುವುದಿಲ್ಲ.
ಕುದುರೆ ಸವಾರರೆಲ್ಲಾ ಹತರಾದ ಮೇಲೆ,
ಊರಿಗೆ ಮರಳುವ ಖಾಲಿ ಕುದುರೆಗಳು,
ಏನನ್ನೂ ಹೇಳದೆಯೇ,
ಎಲ್ಲವನ್ನೂ ತಿಳಿಸಿಬಿಡುತ್ತವೆ.
ಗೂಡು
ಮಾನವನು ಹೇಳುತ್ತಾನೆ:
ಭಾಗ್ಯವಂತರು, ಈ ಗೂಡಿನೊಳಗೆ
ಬಂದಿಯಾಗಿರುವ ಹಕ್ಕಿಗಳು,
ಕನಿಷ್ಠ ಪಕ್ಷ ಅವುಗಳಿಗೆ ತಿಳಿದಿದೆ,
ತಮ್ಮ ಗೂಡಿನ ಮಿತಿ,ವ್ಯಾಪ್ತಿ ಎಷ್ಟೆಂದು.
- ಮೌರಿದ್ ಬರ್ ಘೋತಿ
ಮೌರಿದ್ ಬರ್ ಘೋತಿ (1944 - 2021)
ಫೆಲೆಸ್ತೀನ್ ನ ಪಶ್ಚಿಮ ದಂಡೆಯಲ್ಲಿ ಜನಿಸಿದವರು. ಹಲವರು ಅವರನ್ನು ‘ಗಡೀ ಪಾರು ಕವಿ’ ಎಂದು ಗುರುತಿಸುವುದುಂಟು. ಶಿಕ್ಷಣಕ್ಕಾಗಿ ಈಜಿಪ್ಟ್ ಗೆ ತೆರಳಿದ್ದ ಬರ್ ಘೋತಿ ಮರಳಿ ಬರುವ ಹೊತ್ತಿಗೆ ಪಶ್ಚಿಮ ದಂಡೆಯನ್ನು ಇಸ್ರೇಲ್ ಆಕ್ರಮಿಸಿಕೊಂಡಿತ್ತು. ಪಶ್ಚಿಮ ದಂಡೆಗೆ ಅವರ ಪ್ರವೇಶವನ್ನು ನಿಷೇಧಿಸ ಲಾಗಿತ್ತು. ಹೀಗೆ ಅವರು ಈಜಿಪ್ಟ್ ನಲ್ಲೇ ಉಳಿಯಬೇಕಾಯಿತು. ಇಸ್ರೇಲ್ ಸರಕಾರದ ವಿರುದ್ಧ ಸಕ್ರಿಯರಾಗಿದ್ದ ಕಾರಣಕ್ಕಾಗಿ ಮೊದಲು ಈಜಿಪ್ಟ್ ನಿಂದ ಮತ್ತು ಮುಂದೆ ಲೆಬನಾನ್ ಮತ್ತು ಜೋರ್ಡಾನ್ ಗಳಿಂದಲೂ ಅವರನ್ನು ಹೊರಹಾಕಲಾಯಿತು. 30ವರ್ಷಗಳ ಕಾಲ ನಾಡಿಲ್ಲದೆ ವಿವಿಧೆಡೆ ಬದುಕಿದ್ದ ಬರ್ ಘೋತಿಗೆ 1996ರಲ್ಲಿ ತಮ್ಮ ನಾಡಿಗೆ ಮರಳಲು ಸಾಧ್ಯವಾಯಿತು.
************************
ನಾನು ಬರೆಯುವ ನಾಡು
ನಾನು ನಾಡನ್ನು ಬರೆಯಬೇಕು,
ನನಗೆ ಪದಗಳು ಬೇಕು -
ಸಾಕ್ಷಾತ್ ನಾಡಾಗಲು.
ನಾನೀಗ ಒಂದು ಶಿಲ್ಪ ಮಾತ್ರ,
ರೋಮನರು ಕೆತ್ತಿದ, ಅರಬರು ಮರೆತ ಶಿಲ್ಪ.
ವಸಾಹತುಶಾಹಿಗಳು ನನ್ನ ಕೈ ಕಡಿದರು,
ಒಂದು ಸಂಗ್ರಹಾಲಯದಲ್ಲಿ ನೇತುಹಾಕಿದರು.
ಆದರೇನಂತೆ? ನನಗಿನ್ನೂ ಬರೆಯಬೇಕು,
ಅದನ್ನು-ನಾಡನ್ನು.
ನನ್ನ ಪದಗಳು ಎಲ್ಲೆಲ್ಲೂ ಇವೆ
ಮತ್ತು ನನ್ನ ಮೌನವೇ ನನ್ನ ಕಥೆಯಾಗಿದೆ.
ನಜ್ವಾನ್ ದರ್ವೇಶ್
ನಜ್ವಾನ್ ದರ್ವೇಶ್ 1978ರಲ್ಲಿ ಜೆರುಸಲೇಮ್ನಲ್ಲಿ ಹುಟ್ಟಿದವರು. ಇಂದು ಅವರನ್ನು ಅರಬ್ಸಾಹಿತ್ಯಲೋಕದಲ್ಲಿ, ಹೊಸ ತಲೆಮಾರಿನ ಅತ್ಯಂತ ಪ್ರಭಾವಿ ಕವಿಗಳಲ್ಲೊಬ್ಬರೆಂದು ಗುರುತಿಸಲಾಗುತ್ತದೆ.
*********************************
ಸದಾ ಜೀವಂತ
ನನ್ನ ಪ್ರೀತಿಪಾತ್ರ ತಾಯಿನಾಡು!
ದಬ್ಬಾಳಿಕೆಯ ದಟ್ಟ ಅಡವಿಯಲ್ಲಿ
ಹಿಂಸೆ ಮತ್ತು ಸಂಕಟದ ಗಾಣವು
ನಿನ್ನನ್ನು ಎಷ್ಟು ಸುತ್ತು ತಿರುಗಿಸಿದರೂ
ಅವರಿಗೆ ಸಾಧ್ಯವಾಗದು,
ನಿನ್ನ ಕಣ್ಣುಗಳನ್ನು ಕೀಳಲು,
ನಿನ್ನ ಆಶಾವಾದ ಮತ್ತು ಕನಸುಗಳನ್ನು ಕೊಲ್ಲಲು,
ನಮ್ಮ ಮಕ್ಕಳ ನಗುವನ್ನು ಕದ್ದೊಯ್ಯಲು,
ಎಲ್ಲವನ್ನೂ ಸುಟ್ಟು ನಾಶಮಾಡಲು
ಅವರಿಗೆ ಸಾಧ್ಯವಾಗದು.
ಏಕೆಂದರೆ ನಮ್ಮ ಗಾಢವಾದ ದುಖಃದೊಳಗಿಂದ
ಚೆಲ್ಲಿ ಹೋದ ನಮ್ಮ ನೆತ್ತರ ಬಿಸಿಯಿಂದ,
ಜೀವನ ಮತ್ತು ಮರಣಗಳ ಕಂಪನದಿಂದ
ನಿನ್ನಲ್ಲಿ ಮತ್ತೆ ಉಕ್ಕಿ ಹೊಮ್ಮಲಿದೆ ಜೀವ..
- ಫದ್ವಾ ತುಖಾನ್
ಫದ್ವಾ ತುಖಾನ್ 1917-2003
ಪ್ರಖ್ಯಾತ ೆಲೆಸ್ತೀನಿ ಕವಯಿತ್ರಿ. ಇಸ್ರೇಲ್ನ ಅಕ್ರಮಗಳ ವಿರುದ್ಧ ಹಾಗೂ ಫೆಲೆಸ್ತೀನ್ ಜನತೆಯ ಹಕ್ಕುಗಳ ಪರವಾಗಿ ಸ್ಥಿರವಾಗಿ ಹಲವು ದಶಕಗಳ ಕಾಲ ಹೋರಾಡಿದವರು. ಆಕೆಯ ಒಂದೊಂದು ಕವನದಲ್ಲೂ ಹತ್ತು ಫೆಲೆಸ್ತೀನ್ಗಳನ್ನು ಸೃಷ್ಟಿಸುವ ಸಾಮರ್ಥ್ಯ ಇದೆ ಎಂದು ಆಕೆಯ ಕುರಿತು, 20ನೇ ಶತಮಾನದ ಕುಖ್ಯಾತ ಇಸ್ರೇಲ್ ದಂಡನಾಯಕ ಮೋಶೆ ದಯಾನ್ ಹೇಳಿದ್ದರು.
*********************************
ಅಸಾಧ್ಯ
ನಿಮಗಿದು ತುಂಬಾ ಸುಲಭ,
ಸೂಜಿಯ ರಂಧ್ರದಿಂದ ಆನೆಯನ್ನು ದಾಟಿಸುತ್ತೀರಿ,
ಆಕಾಶಗಂಗೆಯಲ್ಲಿ ಮೀನು ಹಿಡಿಯುತ್ತೀರಿ,
ಸೂರ್ಯನನ್ನು ನಂದಿಸಿಬಿಡುತ್ತೀರಿ,
ಗಾಳಿಯನ್ನು ಕಟ್ಟಿಡುತ್ತೀರಿ,
ಮೊಸಳೆಯನ್ನು ಮಾತನಾಡಿಸುತ್ತೀರಿ.
ಆದರೆ ಅಷ್ಟೇನೂ ಸುಲಭವಲ್ಲ,
ದಮನದ ಮೂಲಕ ಇಲ್ಲವಾಗಿಸುವುದು,
ನಂಬಿಕೆಯ ಉಜ್ವಲ ಬೆಳಕನ್ನು ನಂದಿಸುವುದು,
ಅಥವಾ ಗುರಿಯೆಡೆಗಿನ ನಮ್ಮ ನಡಿಗೆಯನ್ನು ತಡೆಯುವುದು,
ಕೇವಲ ಒಂದು ಹೆಜ್ಜೆಯನ್ನು ಕೂಡಾ.
- ತೌಫೀಕ್ ಝಯ್ಯಾದ್
ತೌಫೀಕ್ ಝಯ್ಯಾದ್ (1929 - 1994)
ತಮ್ಮ ಬಂಡಾಯ ಕಾವ್ಯಗಳಿಗಾಗಿ ಖ್ಯಾತರು. ಫೆಲೆಸ್ತೀನ್ನಲ್ಲಿ ಅವರೊಬ್ಬ ರಾಜಕಾರಣಿಯೂ ಹೌದು. ಹಲವಾರು ಬಾರಿ ಇಸ್ರೇಲಿ ಮಿಲಿಟರಿ ಆಡಳಿತದಲ್ಲಿ ಸೆರೆ ಸೇರಿ ಕಂಬಿ ಎಣಿಸಿದವರು.
1975ರಲ್ಲಿ ಅವರು ಇಸ್ರೇಲ್ನ ಐತಿಹಾಸಿಕ ನಗರ ನಝರೆತ್ನ ಮೇಯರ್ ಆಗಿ ಆಯ್ಕೆಯಾದರು. ಅವರು ಮುಂದಿನ 19ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. ತಮ್ಮ ಕೊನೆಯುಸಿರ ತನಕವೂ ಫೆಲೆಸ್ತೀನ್ ಜನತೆಯ ಹಿತಾಸಕ್ತಿಗಳಿಗಾಗಿ ಕೆಚ್ಚೆದೆಯಿಂದ ಹೋರಾಡಿದ್ದರು ಮತ್ತು ಸದಾ ಜನಸಾಮಾನ್ಯರಿಗೆ ತುಂಬಾ ನಿಕಟರಾಗಿದ್ದರು.
*********************************
ದೇಶಭ್ರಷ್ಟತೆ
ಸೂರ್ಯನು ಗಡಿ ದಾಟಿ ಹೋಗುತ್ತಾನೆ
ಬಂದೂಕುಗಳು ಮೌನವಾಗಿರುತ್ತವೆ.
ಬಾನಗುಬ್ಬಚ್ಚಿಯೊಂದು ಬೆಳಗಿನ ಹಾಡು ಹಾಡತೊಡಗುತ್ತದೆ,
ತುಲ್ ಕರೀಮ್ ಪಟ್ಟಣದಲ್ಲಿ,
ಆ ಬಳಿಕ ಅದು ನೀರು ಹೀರಲು ಹಾರಿ ಹೋಗುತ್ತದೆ,
ಕಿಬ್ಬುಟ್ಸ್ ನ ಇತರ ಹಕ್ಕಿಗಳ ಜೊತೆಗೆ.
ಒಂಟಿ ಕತ್ತೆಯೊಂದು ಅಡ್ಡಾಡುತ್ತಿದೆ,
ಗುಂಡಿಕ್ಕಲು ಕಾಯುತ್ತಿರುವ ಯೋಧರ ಸಾಲುಗಳ ಮುಂದೆ,
ಜಾಗೃತ ದಳಗಳನ್ನು ಸ್ವಲ್ಪವೂ ಲೆಕ್ಕಿಸದೆ.
ಆದರೆ ನನ್ನ ಪಾಲಿಗೆ, ನೀವು ಹೊರದಬ್ಬಿದ ಈ ಪುತ್ರನ ಪಾಲಿಗೆ,
ನನ್ನ ತಾಯಿನಾಡು,
ನಿಮ್ಮ ಬಾನು ಮತ್ತು ನನ್ನ ಕಣ್ಣುಗಳ ನಡುವೆ
ಗಡಿಗೋಡೆಗಳ ಸತತ ಸರಣಿ,
ದೃಶ್ಯವನ್ನು ಕತ್ತಲಾಗಿಸುತ್ತಿವೆ.
- ಸಾಲಿಮ್ ಜುಬ್ರಾನ್
ಸಾಲಿಮ್ ಜುಬ್ರಾನ್ (1941 - 2011)
ಅರಬ್ ಮೂಲದ ಇಸ್ರೇಲಿ ಪ್ರಜೆಯಾಗಿದ್ದರು. ಎಡ ಪಂಥೀಯರಾಗಿದ್ದ ಸಾಲಿಮ್ ಜುಬ್ರಾನ್, ಒಬ್ಬ ಯಶಸ್ವಿ ಪತ್ರಕರ್ತ, ಲೇಖಕ ಮತ್ತು ಸಾಹಿತಿಯಾಗಿದ್ದರು.
*********************************
ಕೀರ್ತನೆಗಳು - ಮೂರು
ಭೂಮಿಯೇ ನನ್ನ ಮಾತಾಗಿದ್ದ ದಿನ,
ನಾನು ಗೋಧಿಯ ರಾಶಿಗಳ ಮಿತ್ರನಾಗಿದ್ದೆ,
ಆಕ್ರೋಶವೇ ನನ್ನ ಮಾತಾದ ದಿನ,
ನಾನು ಸರಪಣಿಗಳ ಮಿತ್ರನಾಗಿದ್ದೆ.
ನನ್ನ ಮಾತು ಕಲ್ಲುಗಳಾದ ದಿನ,
ನಾನು ಹರಿವ ಧಾರೆಗಳ ಮಿತ್ರನಾಗಿದ್ದೆ.
ಬಂಡಾಯವೇ ನನ್ನ ಮಾತಾದ ದಿನ,
ನಾನು ಭೂಕಂಪಗಳ ಮಿತ್ರನಾಗಿದ್ದೆ.
ಕಹಿ ಸೇಬುಗಳೇ ನನ್ನ ಮಾತಾದ ದಿನ,
ನಾನು ಆಶಾವಾದಿಯ ಮಿತ್ರನಾಗಿದ್ದೆ.
ಆದರೆ, ಜೇನು ನನ್ನ ಮಾತಾದ ದಿನ,
ಆವರಿಸಿಕೊಂಡವು ನನ್ನ ತುಟಿಗಳನ್ನು, ನೊಣಗಳು
- ಮಹಮೂದ್ ದರ್ವೇಶ್
ಮಹಮೂದ್ ದರ್ವೇಶ್ (1941 - 2008)
ಇವರು ಫೆಲೆಸ್ತೀನ್ನವರು. ದಾಸ್ಯ ಮತ್ತು ಪ್ರತಿರೋಧದ ವಿವಿಧ ಮಜಲುಗಳನ್ನು ತೀರಾ ಹತ್ತಿರದಿಂದ ಖುದ್ದಾಗಿ ಕಂಡವರು, ಅನುಧವಿಸಿದವರು. ಅವರ ಹಲವು ಕೃತಿಗಳು ವ್ಯಾಪಕ ಜನಪ್ರಿಯತೆ ಗಳಿಸಿವೆ.