ಅರಾಜಕತೆಯನ್ನೇ ವ್ಯವಸ್ಥೆ ಎಂದು ನಂಬಿದ ಜನ !
ರವೀಶ್ ಕುಮಾರ್
ಕನ್ನಡಕ್ಕೆ : ಆಬಿದಾ ಬಾನು
ನಿಮಗೆ ಭಾರತದ ಸಂಸ್ಥೆಗಳ ಮೇಲೆ ಇನ್ನೂ ಭರವಸೆ ಉಳಿದಿದೆಯೇ? ನೀವೊಬ್ಬ ನಾಗರಿಕನಾಗಿ ಒಬ್ಬರೇ ಪೊಲೀಸ್ ಠಾಣೆಗೆ, ಅಥವಾ ಜಿಎಸ್ಟಿ ಕಚೇರಿಗೆ ಹೋಗಿ ಜಿಎಸ್ಟಿ ಅಧಿಕಾರಿ ಎದುರು ಕೂತು ಯಾವುದೇ ಅಧಿಕಾರಿ, ರಾಜಕಾರಣಿ ಅಥವಾ ಪತ್ರಕರ್ತನ ಶಿಫಾರಸು ಇಲ್ಲದೆ, ನಿಮ್ಮ ವಿವರಣೆಗಳನ್ನು ನೀಡಿ ಲಂಚ ಕೊಡದೆ ಕಾನೂನು ಪ್ರಕ್ರಿಯೆ ನಿಷ್ಪಕ್ಷವಾಗಿ ನಡೆಯಲಿದೆ ಅಥವಾ ನಿಮ್ಮ ಪರವಾಗಿ ತೀರ್ಪು ಬರಲಿದೆ ಎಂದು ಭರವಸೆ ಇಡಬಲ್ಲಿರಾ? ನೀವು ಅಗತ್ಯ ಬಿದ್ದಾಗ ಏನಾದರೂ ಸರಕಾರಿ ಕೆಲಸ ಮಾಡಿಸಿಕೊಳ್ಳಲು ನೆರವಾಗುತ್ತಾನೆ ಅಥವಾ ಯಾವುದಾದರೂ ಯೋಜನೆಯಲ್ಲಿ ನಿಮ್ಮ ಹೆಸರು ಸೇರಿಸಲು ನೆರವಾಗಬಹುದು ಎಂಬ ಕಾರಣಕ್ಕೇ ರಾಜಕಾರಣಿಯ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತೀರಾ? ಇಲ್ಲಿರುವ ಮೂಲ ಪ್ರಶ್ನೆ ಏನೆಂದರೆ ಒಬ್ಬ ನಾಗರಿಕ ಮತ್ತು ಯಾವುದೇ ಸರಕಾರಿ ಸೇವೆಯ ನಡುವೆ ಬೇರೆ ಬೇರೆ ರೀತಿಯ ಏಜೆಂಟ್ ಗಳು ಯಾಕೆ ಬೇಕಾಗುತ್ತಾರೆ ? ಹಲವು ಪೀಳಿಗೆಗಳಿಂದ ಇದೇ ನಡೀತಾ ಬಂದಿದೆ ಅಂತಾದ್ರೆ ಅದು ಇವತ್ತಿಗೂ ನಡೆಯುತ್ತಿರಬೇಕಾದಷ್ಟು , ಇನ್ನು ಮುಂದೆಯೂ ಹೀಗೇ ಇರಬೇಕಾದಷ್ಟು ಒಳ್ಳೆಯ ವ್ಯವಸ್ಥೆಯೇ ?
ನೀವು ದೇಶದ ಸಂಸ್ಥೆಗಳ ಮೇಲೆ ಎಷ್ಟು ನಂಬಿಕೆ ಹೊಂದಿದ್ದೀರಿ ಎಂಬುದು ಇಲ್ಲಿ ಮುಖ್ಯ ಪ್ರಶ್ನೆ. ನೀವು ಒಬ್ಬರೇ ಮನೆಯಿಂದ ಹೊರಟು ಯಾವುದೇ ಸರಕಾರಿ ಅಧಿಕಾರಿ ಎದುರು ಹೋಗಿ ಮಾತಾಡಿದಾಗ ಆ ಅಧಿಕಾರಿ ಯಾರೊಬ್ಬರಿಂದಲೂ ಫೋನ್ ಮಾಡಿಸದೆಯೇ ನಿಮ್ಮ ಸಮಸ್ಯೆಯನ್ನು ಪರಿಹರಿಸಿ ಕೊಡುತ್ತಾನೆ ಎಂಬ ಭರವಸೆ ನಿಮಗೆ ಇದ್ದಾಗ ಮಾತ್ರ ನೀವು ನಾಗರಿಕರಾಗಿ ಸಮರ್ಥರು ಎಂದಾಗುತ್ತೀರಿ. ನನ್ನ ಪ್ರಶ್ನೆಗೆ ಉತ್ತರಿಸಲು ನೀವು ಯಾವುದಾದರೂ ಸರಕಾರಿ ಸಂಸ್ಥೆಯನ್ನು ಊಹಿಸಿಕೊಳ್ಳಿ. ವಿಧಾನಸಭೆ, ಸಂಸತ್ತು, ನ್ಯಾಯಾಲಯ, ಪೊಲೀಸ್, ಆಸ್ಪತ್ರೆ, ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ನಗರ ನಿಗಮಗಳು, ಜಿಎಸ್ಟಿ ಇಲಾಖೆ ಮತ್ತಿತರ ನಿಮಗೆ ಸಂಬಂಧಿಸಿದ ಯಾವುದೇ ವಿಭಾಗವಾದರೂ ಸರಿ. ಇದರಲ್ಲಿ ಶಾಲಾ ಕಾಲೇಜುಗಳನ್ನೂ ಖಂಡಿತ ಸೇರಿಸಿಕೊಳ್ಳಿ. ಈ ಇಲಾಖೆಗಳು ಅಥವಾ ವಿಭಾಗಗಳಲ್ಲಿ ನಿಮಗೆ ಯಾವ ಗುಣಮಟ್ಟದ ಸೇವೆ ಸಿಕ್ಕಿದೆ ? ನಿಮ್ಮ ಗ್ರಾಮ ಅಥವಾ ನಗರದ ಸರಕಾರಿ ಕಾಲೇಜುಗಳು ಇಷ್ಟು ಕೆಟ್ಟದಾಗಿ ಯಾಕಿವೆ ಎಂದು ಕೊನೆಯ ಬಾರಿ ಚಿಂತಿಸಿದ್ದು ಯಾವಾಗ ? ಇನ್ನು ಖಾಸಗಿ ಕಾಲೇಜುಗಳ ಕಟ್ಟಡಗಳ ವೈಭವಕ್ಕೆ ಮಾರು ಹೋಗಬೇಡಿ. ನಿಮ್ಮಿಂದ ದುಬಾರಿ ಶುಲ್ಕ ವಸೂಲಿ ಮಾಡುವ ಖಾಸಗಿ ಶಿಕ್ಷಣದ ಗುಣಮಟ್ಟ ಇಷ್ಟು ಕೆಟ್ಟದಾಗಿ ಯಾಕಿದೆ ಎಂದು ನೀವು ಚಿಂತಿಸಿ ನೋಡಿ. ಆಸ್ಪತ್ರೆ ಹಾಗೂ ಕಾಲೇಜುಗಳ ಸಹಿತ ಹಲವಾರು ಸೇವೆಗಳು ಸರಕಾರಿ ಹಾಗೂ ಖಾಸಗಿ ಎರಡೂ ಕಡೆ ಲಭ್ಯ ಇವೆ. ಎರಡರ ನಡುವೆ ಶುಲ್ಕದಲ್ಲಿ ವ್ಯತಾಸವಿದೆ. ಆದರೆ ಹೆಚ್ಚು ಶುಲ್ಕ ಕಟ್ಟಿದರೆ ನಿಮಗೆ ಅಷ್ಟೇ ಉತ್ತಮ ಗುಣಮಟ್ಟ ಸಿಗುತ್ತಿದೆಯೇ?
ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಯಾವಾಗಲೂ ರಾಶಿ ರಾಶಿ ಅಸಹಾಯಕ ಜನರು ಕಾಣಸಿಗುತ್ತಾರೆ. ಒಬ್ಬ ರೋಗಿಯ ಜೊತೆ ಹಲವರು ಬರುತ್ತಾರೆ. ನಮ್ಮ ಕೆಲಸ ಸರಿಯಾಗಿ ಆಗುತ್ತದೆ ಎಂಬ ಭರವಸೆ ಅವರಿಗೆ ಇಲ್ಲ. ಹಾಗಾಗಿ ಇಷ್ಟೊಂದು ಮಂದಿ ರೋಗಿಯ ಜೊತೆ ಬರುತ್ತಾರೆ. ರೋಗಿಯ ಜೊತೆ ಬಂದಿರುವ ಒಬ್ಬ ಬಿಲ್ಲಿಂಗ್ ಕೌಂಟರ್ನಲ್ಲಿದ್ದರೆ ಇನ್ನೊಬ್ಬ ವೈದ್ಯರು ಯಾವಾಗ ಯಾವ ಮಾಳಿಗೆಯಲ್ಲಿರುತ್ತಾರೆ ಎಂದು ಹುಡುಕಲು ಹೋಗುತ್ತಾನೆ. ಮೂರನೆಯವನು ರೋಗಿ ಇರುವ ವಾರ್ಡ್ನ ಬಾಗಿಲಲ್ಲಿ ನಿಂತು ಅವರಿಗೆ ಸೂಕ್ತ ಆರೈಕೆ ಸಿಗುತ್ತಿದೆಯೇ ಎಂದು ನೋಡುತ್ತಿರುತ್ತಾನೆ. ನಾಲ್ಕನೇ ವ್ಯಕ್ತಿ ರೋಗಿಯ ರಿಪೋರ್ಟ್ ಹಿಡಿದುಕೊಂಡು ಇನ್ನೊಂದು ಆಸ್ಪತ್ರೆಯ ವೈದ್ಯರ ಬಳಿ ಹೋಗಿ ತಾನು ಲಕ್ಷಾಂತರ ರೂಪಾಯಿ ಈಗಾಗಲೇ ಕಟ್ಟಿರುವ ಮೊದಲನೇ ಆಸ್ಪತ್ರೆಯಲ್ಲಿ ರೋಗಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿದೆಯೇ ಎಂದು ಖಾತರಿ ಪಡಿಸುತ್ತಿರುತ್ತಾನೆ. ಈ ಸ್ಥಿತಿ ಖಾಸಗಿ ಆಸ್ಪತ್ರೆಯಲ್ಲೂ ಇದೆ, ಸರಕಾರಿ ಆಸ್ಪತ್ರೆಯಲ್ಲೂ ಇದೆ. ಎಲ್ಲ ಕಡೆಗಳಲ್ಲೂ ಗುಣಮಟ್ಟ ಚೆನ್ನಾಗಿಲ್ಲ ಎಂದು ದೂರುವವರು ಸಿಗುತ್ತಾರೆ. ಒಂದು ಆಸ್ಪತ್ರೆ ಅಂದರೆ ಒಂದು ವ್ಯವಸ್ಥೆ. ಆ ವ್ಯವಸ್ಥೆಯೆದುರು ಇಷ್ಟೊಂದು ಜನ ಅಸಹಾಯಕರಾಗಿ ಓಡಾಡುತ್ತಿರುತ್ತಾರೆ. ಅವರಿಗೆ ಅಲ್ಲಿ ಘನತೆಯ ಪ್ರಶ್ನೆಯೇ ಇಲ್ಲ. ಹೇಗಾದರೂ ಚಿಕಿತ್ಸೆ ಸಿಕ್ಕಿದರೆ ಸಾಕು ಎಂದು ಬಯಸುವವರೇ ಎಲ್ಲರೂ. ಅದರಿಂದಲೇ ಅವರು ತೃಪ್ತರು.
ಆಸ್ಪತ್ರೆಗಳಲ್ಲಿ ವೈದ್ಯರು ಕಡಿಮೆ ಇದ್ದಾರೆ. ವೈದ್ಯರ ಕ್ಲಿನಿಕ್ನ ಹೊರಗೆ ಜನರು ಗುಂಪು ಸೇರಿದ್ದಾರೆ. ಪ್ರತಿಯೊಬ್ಬರೂ ವೈದ್ಯರ ಸಹಾಯಕರ ಬಳಿ ನಮ್ಮ ಸರದಿ ಯಾವಾಗ ಬರುತ್ತೆ ಅಂತ ಕೇಳುತ್ತಿರುತ್ತಾರೆ. ವೈದ್ಯರೇನೂ ಖಾಲಿ ಕೂತಿಲ್ಲ. ಆ ವೈದ್ಯರಿಗೆ ಅಲ್ಲಿಂದ ಇನ್ನೊಂದು ಕ್ಲಿನಿಕ್ ಗೆ ಹೋಗಬೇಕಾಗಿದೆ. ರೋಗಿ ಹಾಗೂ ಅವರ ಜೊತೆ ಬಂದಿರುವವರಿಗೆ ವೈದ್ಯರು ಮಾತಾಡಲು ಸಿಗುತ್ತಿಲ್ಲ. ಪೊಲೀಸ್ ಠಾಣೆಯಲ್ಲೂ ಇದೇ ಗತಿ. ಠಾಣಾಧಿಕಾರಿಯ ಎದುರು ಜನ ಸೇರಿದ್ದಾರೆ. ಕೆಲವರು ರಾಜಕಾರಣಿಯಿಂದ ಇನ್ನು ಕೆಲವರು ಠಾಣಾಧಿಕಾರಿಯ ಮೇಲಧಿಕಾರಿಯಿಂದ ಫೋನ್ ಮಾಡಿಸಿದ್ದಾರೆ. ಯಾರಿಗೂ ತಮ್ಮ ಕೆಲಸ ಆಗುವ ಭರವಸೆಯಿಲ್ಲ. ಯಾವುದೋ ರಾಜಕಾರಣಿಯ ಭರವಸೆ ಮೇಲೆ ಠಾಣಾಧಿಕಾರಿಯಿಂದ ತಪ್ಪು ಕೆಲಸ ಮಾಡಿಸಲು ಬಂದವರೂ ಎದೆ ಉಬ್ಬಿಸಿಕೊಂಡೇ ಬರುತ್ತಾರೆ. ಭಾರತದಲ್ಲಿ ಸರಕಾರಿ ಅಧಿಕಾರಿಗಳಿಂದ ಸರಿಯಾದ ಕೆಲಸ ಮಾಡಿಸುವ ನಿರೀಕ್ಷೆ ಮಾತ್ರವಲ್ಲ, ತಪ್ಪು ಕೆಲಸ ಮಾಡಿಸಿಕೊಳ್ಳುವ ನಿರೀಕ್ಷೆಯೂ ಜನರಲ್ಲಿ ಇರುತ್ತದೆ. ಆ ಅಧಿಕಾರಿ ತಪ್ಪು ಕೆಲಸ ಮಾಡುವ ಭಾಗವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾನೆ ಮತ್ತು ತನ್ನ ಇಪ್ಪತ್ತು ವರ್ಷಗಳ ಉದ್ಯೋಗದಲ್ಲಿ ಕೋಟ್ಯಂತರ ರೂಪಾಯಿಯ ಮಾಲಕನಾಗುತ್ತಾನೆ. ಮತ್ತೆ ಅದೇ ದುಡ್ಡನ್ನು ಬಳಸಿಕೊಂಡು ಹಿರಿಯ ಅಧಿಕಾರಿಗಳ ಒಂದು ನೆಟ್ವರ್ಕ್ ಮಾಡಿಕೊಂಡು ಅದರ ಮೂಲಕ ಸಿಕ್ಕಿ ಬೀಳದೆ ಸುರಕ್ಷಿತನಾಗಿರುತ್ತಾನೆ.
ನಾನೇನು ಹೊಸ ವಿಷಯ ಹೇಳುತ್ತಿಲ್ಲ. ಎಲ್ಲರಿಗೂ ಗೊತ್ತಿರುವ ವಿಷಯ ಇದು. ಆದರೆ, ನಮ್ಮ ಜನರು ಈ ವಿಷಯಗಳ ಕಡೆ ಯಾವಾಗ ಗಮನ ಕೊಡುತ್ತಾರೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಜನರು ತಾವು ನಾಗರಿಕರಾಗಿರುವ ಮಹತ್ವವನ್ನು ಯಾವಾಗ ತಿಳಿದುಕೊಳ್ಳುತ್ತಾರೆ ? ನಾಗರಿಕರಿಗೆ ಎಲ್ಲೆಡೆ ಸಮಾನ ಅಧಿಕಾರ ಇದೆ. ಆದರೆ, ಆ ಸಮಾನತೆ ನಾಗರಿಕರಿಗೆ ಸಿಕ್ಕಿದೆಯೇ ? ಸಮಾನ ಗೌರವ ಸಿಕ್ಕಿದೆಯೇ ? ನಿನ್ನ ಸ್ಥಾನಮಾನ ಏನೂ ಇಲ್ಲ ಎಂದು ನಾಗರಿಕನಿಗೆ ಪ್ರತಿಯೊಂದು ಹಂತದಲ್ಲೂ ತಿಳಿಸಿಕೊಡಲಾಗುತ್ತದೆ. ಆ ನಾಗರಿಕನ ಬಡಾವಣೆಯಲ್ಲಿ ಮಕ್ಕಳಿಗೆ ಆಡಲು ಪಾರ್ಕ್ ಇಲ್ಲ, ರಸ್ತೆ ಸರಿಯಿಲ್ಲ, ಅಲ್ಲಿ ಸ್ವಚ್ಛತೆಯೂ ಇಲ್ಲ, ಆಸ್ಪತ್ರೆಯೂ ಇಲ್ಲ. ಶಾಲೆಗೆ ಹತ್ತು ವರ್ಷ ಹೋಗಿ ಬಂದಿರುವ ಮಕ್ಕಳಿಗೆ ಸರಿಯಾಗಿ ಓದಲು ಬರುವುದಿಲ್ಲ. ಕಾಲೇಜುಗಳಲ್ಲೂ ಇದೇ ಸ್ಥಿತಿ. ಏನೂ ಬದಲಾವಣೆ ಆಗೋದಿಲ್ಲ ಎಂದು ಎಲ್ಲರಿಗೂ ಗೊತ್ತು. ಎಲ್ಲರೂ ಹೋಗಿ ದಾಖಲಾತಿ ಮಾಡಿಸುತ್ತಾರೆ, ಶುಲ್ಕ ಕಟ್ಟುತ್ತಾರೆ, ಬಿಲ್ ಕಟ್ಟುತ್ತಾರೆ. ಕೊನೆಗೆ ಹತಾಶರಾಗಿ ಮನೆಗೆ ಮರಳುತ್ತಾರೆ.
ಭಾರತದ ಜನರು ಅರಾಜಕತೆಯನ್ನೇ ವ್ಯವಸ್ಥೆ ಅಂದುಕೊಂಡಿದ್ದಾರೆ. ಈ ಅರಾಜಕತೆಯಲ್ಲಿ ಎಲ್ಲ ರೀತಿಯ ಜನರಿಗೂ ಅವಕಾಶ ಸಿಕ್ಕಿದೆ. ಆದರೆ ವ್ಯವಸ್ಥೆಯಲ್ಲಿ ಕೆಲವೇ ಆಯ್ದ ಜನರಿಗೆ ಅವಕಾಶ ಸಿಗುತ್ತದೆ. ಈ ಅರಾಜಕತೆಯನ್ನೇ ಸುದೀರ್ಘ ಕಾಲ ನೋಡಿದ ಬಳಿಕ ನಾಗರಿಕ ತನಗೆ ಸಿಕ್ಕಿದ ಜಾಗದ ಅಕ್ಕಪಕ್ಕದಲ್ಲಿರುವುದನ್ನೇ ವ್ಯವಸ್ಥೆ ಅಂದುಕೊಳ್ಳುತ್ತಾನೆ. ಯಾವುದಾದರೂ ಮಾರುಕಟ್ಟೆಯಲ್ಲಿ ತನಗೊಂದು ಅಂಗಡಿ ಹಾಕುವ ಜಾಗ ಸಿಕ್ಕಿದರೆ ಅದರ ಸುತ್ತಮುತ್ತ ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳುತ್ತಾನೆ. ಆದರೆ ಅದರ ಪಕ್ಕದ ಜಾಗದಲ್ಲೇ ಕಸ ಬಿಸಾಡಿ ಬಿಡುತ್ತಾನೆ. ರೈಲಿನಲ್ಲಿ ಸೀಟು ಸಿಗದಿದ್ದರೆ ಒಂದು ಮೂಲೆಯಲ್ಲಿ ನಿಂತುಕೊಂಡು ನನಗೊಂದು ಜಾಗ ಸಿಕ್ಕಿತು ಎಂದು ಅದನ್ನೇ ವ್ಯವಸ್ಥೆ ಅಂದುಕೊಳ್ಳುತ್ತಾನೆ. ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರೆ ಅಲ್ಲಿಗೆ ತಲುಪಿದ್ದೇ ಪುಣ್ಯ ಎಂದುಕೊಳ್ಳುತ್ತಾನೆ. ಅಲ್ಲಿ ಬೆಡ್ ಸಿಗೋದು, ವೈದ್ಯರ ಭೇಟಿ ಆಗೋದೇ ಆತನ ಪಾಲಿಗೆ ಮುಂದಿನ ದೊಡ್ಡ ಭರವಸೆ. ಮೂರು ವರ್ಷ ಕಾಲೇಜಿಗೆ ಹೋದ ಮೇಲೆ ಆತನ ಮಗನಿಗೆ ಪುಸ್ತಕ ಏನೆಂದೇ ಗೊತ್ತಿಲ್ಲ, ಓದಲು, ಬರೆಯಲು ಗೊತ್ತಿಲ್ಲ. ಆದರೆ ಬಿ ಎ ಡಿಗ್ರಿ ಸಿಕ್ಕಿದೆ ಎಂಬುದೇ ಆತನಿಗೆ ದೊಡ್ಡ ಹೆಮ್ಮೆ. ಮಗನಿಗೆ ಓದಿಕೊಂಡವನು ಎಂಬ ಲೇಬಲ್ ಸಿಕ್ಕಿದ್ದೇ ಆತನಿಗೆ ಖುಷಿ. ಗುಣಮಟ್ಟದ ಬಗ್ಗೆ ಆತನಿಗೆ ಗೊತ್ತೂ ಇಲ್ಲ, ಅದರ ಬೇಡಿಕೆಯೂ ಇಲ್ಲ. ತನ್ನ ಪಾಲಿಗೆ ಸಿಕ್ಕಿದ್ದೇ ತನ್ನ ವಿಧಿ ಎಂದುಕೊಂಡು ಬಿಡುತ್ತಾನೆ.
ಭಾರತದಲ್ಲಿ ವ್ಯವಸ್ಥೆಯಲ್ಲಿ ಪರಿವರ್ತನೆಯ ಆಗ್ರಹ ಹಾಗೂ ಅದಕ್ಕಾಗಿ ಹೋರಾಟ ಸಂಪೂರ್ಣ ನಿಂತು ಹೋಗಿದೆ. ರಾಜಕೀಯದಲ್ಲಿ ಧರ್ಮ ಇಷ್ಟೊಂದು ರಾರಾಜಿಸುವ ಮುನ್ನ ಪತ್ರಿಕೆಗಳಲ್ಲಿ ಆಸ್ಪತ್ರೆಗಳು ಹಾಗೂ ಶಾಲೆಗಳ ಅವಸ್ಥೆಯ ಬಗ್ಗೆ ವರದಿಗಳು ಪ್ರಕಟವಾಗುತ್ತಿದ್ದವು. ಜನರೂ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದರು. ರಾಜಕಾರಣಿಗಳೂ ಇಂತಹ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಭಯದಲ್ಲಿರುತ್ತಿದ್ದರು. ಆದರೆ ಈಗ ಆ ಭಯ ಸಂಪೂರ್ಣ ಮಾಯವಾಗಿದೆ. ಚುನಾವಣೆ ಬಂದಾಗ ರಾಜಕಾರಣಿ ತನ್ನ ಸರಕಾರ ಕಟ್ಟಿರುವ ಯಾವುದಾದರೂ ಟಾಪ್ ಕ್ಲಾಸ್ ಕಾಲೇಜಿಗೆ ಹೋಗುವುದಿಲ್ಲ, ಬದಲಾಗಿ ನೇರವಾಗಿ ದೇವಾಲಯಕ್ಕೆ ಹೋಗುತ್ತಾನೆ. ಯಾವುದಾದರೂ ಮಹಾಪುರುಷರ ಪ್ರತಿಮೆಗೆ ಹಾರ ಹಾಕಿ ಅವರ ಹೆಸರಲ್ಲಿ ಪ್ರಮಾಣ ಮಾಡುತ್ತಾನೆ. ವ್ಯವಸ್ಥೆಯನ್ನು ಬದಲಾಯಿಸುವ ಚುನಾವಣೆ ಇದಲ್ಲ ಎಂಬಂತೆ ಕಾಣುತ್ತದೆ. ಬದಲಾಗಿ ದೇವಾಲಯಕ್ಕಾಗಿ ನಡೆಯುತ್ತಿರುವ ಚುನಾವಣೆಯ ಹಾಗೆ ಕಾಣುತ್ತದೆ.
ಯಾವುದೋ ಮಹಾಪುರುಷರ ಜಯಂತಿ ಆಚರಿಸಲು ಚುನಾವಣೆ ನಡೆಯುತ್ತಿರುವ ಹಾಗೆ ಕಾಣಿಸುತ್ತದೆ. ಪ್ರತೀ ಚುನಾವಣೆಯಲ್ಲಿ ಇಂತಹ ಹಲವು ಮಹಾಪುರುಷರನ್ನು ಹೊಗಳಿ ಮಾತಾಡಲಾಗುತ್ತದೆ. ಆದರೆ ಅದೇ ಮಹಾಪುರುಷರ ಜಾತಿ ಹಾಗೂ ಧರ್ಮದ ಜನರಿಗೆ ಯಾವ ಮಹತ್ವವೂ ಇಲ್ಲ, ಅವರಿಗೆ ಘನತೆಯೂ ಇಲ್ಲ. ವ್ಯವಸ್ಥೆಯ ಎದುರು ಅವರಿಗೆ ಯಾವ ಮರ್ಯಾದೆಯೂ ಇಲ್ಲ. ಅವರ ಜೀವನದಲ್ಲಿ ಗುಣಮಟ್ಟ ಎಂಬುದು ಇಲ್ಲವೇ ಇಲ್ಲ. ಆದರೆ ಮಹಾಪುರುಷರನ್ನು ಗೌರವಿಸುವ ರಾಜಕೀಯ ಮಾತ್ರ ನಡೆಯುತ್ತಲೇ ಇರುತ್ತದೆ. ಇದೇ ಹೆಸರಲ್ಲಿ ಒಂದು ವೃತ್ತದಲ್ಲಿ ಒಂದು ಪ್ರತಿಮೆ ಇಡಲಾಗುತ್ತದೆ. ಅದನ್ನು ಸ್ಟೀಲ್ ಫ್ರೇಮ್ನಿಂದ ಸುತ್ತುವರಿದು ಸುಂದರಗೊಳಿಸಲಾಗುತ್ತದೆ. ಆ ಇಡೀ ವೃತ್ತದಲ್ಲಿ ನಿಮಗೆ ಭಾರೀ ಅರಾಜಕತೆ ಎದ್ದು ಕಾಣುತ್ತದೆ. ಆದರೆ ಮಹಾಪುರುಷನ ಮೂರ್ತಿಯ ಸುತ್ತ ಮಾತ್ರ ಒಂದು ವ್ಯವಸ್ಥೆ ನಿರ್ಮಾಣವಾಗಿರುತ್ತದೆ. ಅಂದರೆ ಆ ಪ್ರದೇಶದ ಬಹುತೇಕ ಜನರನ್ನು ವ್ಯವಸ್ಥೆಯಿಂದ ಹೊರಗೆ ಅಟ್ಟಲಾಗಿರುತ್ತದೆ. ಒಂದು ಸಣ್ಣ ಚೌಕಟ್ಟಿನಲ್ಲಿ ಆಯ್ದ ಕೆಲವೇ ಜನರಿಗಾಗಿ ಮಾತ್ರ ವ್ಯವಸ್ಥೆ ಉಳಿದಿರುತ್ತದೆ. ಆ ವೃತ್ತದ ಒಂದು ಮೂಲೆಯಲ್ಲಿ ಅದೇ ಮಹಾಪುರುಷರ ಜಾತಿಗೆ ಸೇರಿದವರೊಬ್ಬರು ಹೇಗಾದರೂ ಸಂಪಾದಿಸಿ ಜೀವನ ಸಾಗಿಸಲು ಒಂದು ಅಂಗಡಿ ಹಾಕಿರುತ್ತಾರಲ್ಲ ಹಾಗೆ.
ಚುನಾವಣೆಯಲ್ಲಿ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಚರ್ಚೆಯಾಗುವುದಿಲ್ಲ. ಅಲ್ಲಿ ಮಹಾಪುರುಷರ ಗೌರವದ ಕುರಿತು ಚರ್ಚೆ ನಡೆಯುತ್ತದೆ. ಪ್ರತೀ ಜಾತಿಯೊಳಗೂ ಅದರ ಹೋರಾಟವನ್ನು ಮುಗಿಸಿಬಿಡಲಾಗಿದೆ. ಜನರು ನಾಗರಿಕರಾಗಿ ಹೋರಾಡುವ ಪ್ರತಿಯೊಂದು ಸಾಧ್ಯತೆಯನ್ನೂ ಮುಗಿಸಿ ಬಿಡಲಾಗಿದೆ. ಅದರ ಬದಲು ಆ ಜಾತಿಯ ಮಹಾಪುರುಷರ ಗೌರವಕ್ಕಾಗಿ ಹೋರಾಡುವ ಉದ್ದೇಶವನ್ನು ತುಂಬಿಬಿಡಲಾಗಿದೆ. ಈಗ ಜನ ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವುದಕ್ಕಾಗಿ ಹೋರಾಡುವುದಿಲ್ಲ. ಮಹಾಪುರುಷರ ಹೆಸರಲ್ಲಿ ಕಾಲೇಜು, ಆಸ್ಪತ್ರೆ ಹಾಗೂ ದ್ವಾರಗಳನ್ನು ಮಾಡಿಸುವುದಕ್ಕಾಗಿ ಹೋರಾಡುತ್ತಿದ್ದಾರೆ. ಅದೇ ಈಗ ಜನರ ಹೊಸ ಕನಸಾಗಿದೆ. ಆದರೆ, ಹಾಗೆ ಸ್ಥಾಪನೆಯಾಗುವ ಶಾಲೆ, ಕಾಲೇಜು ಎಷ್ಟು ಕಳಪೆಯಾಗಿದೆ, ಆಸ್ಪತ್ರೆ ಎಷ್ಟು ಕೆಟ್ಟದಾಗಿದೆ - ಈ ಎಲ್ಲ ಪ್ರಶ್ನೆಗಳು ಜನರ ಹೋರಾಟದಿಂದ ಹೊರಗಿವೆ. ಈ ಕಾಲೇಜುಗಳಲ್ಲಿ ಎಂತಹ ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂಬ ಬಗ್ಗೆ ಜನರಿಗೆ ಯಾವುದೇ ಕಳಕಳಿಯೇ ಇಲ್ಲ. ಮೊದಲು ರಾಜಕಾರಣಿಗಳು ರಾತ್ರಿ ನೋಟು ಹಂಚುತ್ತಿದ್ದರು. ಈಗ ಚುನಾವಣೆಗೆ ಮೊದಲು ಸರಕಾರಿ ಖಜಾನೆಯಿಂದಲೇ ನೋಟುಗಳನ್ನು ಜನರ ಖಾತೆಗೆ ಕಳಿಸಿಬಿಡಲಾಗುತ್ತದೆ. ಜನರು ವ್ಯವಸ್ಥೆ ಅದೆಷ್ಟು ಚೆನ್ನಾಗಿದೆ, ಎಷ್ಟು ಸುಧಾರಿಸಿದೆ ಎಂದು ಖುಷಿಪಡುತ್ತಾರೆ.
ಭಾರತದ ರಾಜಕಾರಣಕ್ಕೆ ಈ ಮಹಾಪುರುಷರಿಂದ ಭಯಂಕರ ಅಪಾಯವಿದೆ. ಧರ್ಮ ಇಲ್ಲಿ ರಾಜಕಾರಣದ ಮೊನಚನ್ನೇ ಮುಗಿಸಿಬಿಟ್ಟಿದೆ. ಧರ್ಮ ಇಲ್ಲಿ ರಾಜಕೀಯದ ಮೂಲಕ ಕನಸು ಕಾಣುವ ಸಾಧ್ಯತೆಯನ್ನೇ ಮುಗಿಸಿದೆ. ಆದರೆ ರಾಜಕೀಯದಲ್ಲಿ ಕನಸುಗಳು ಜೀವಂತವಾಗಿರಲು ಮಹಾಪುರುಷರನ್ನು ಆಹ್ವಾನಿಸಲಾಗುತ್ತದೆ. ಮಹಾಪುರುಷರ ವಿಚಾರಗಳ ಮೇಲೆ ರಾಜಕೀಯ ನಡೆಯುತ್ತಿದೆ ಎಂಬಂತೆ ತೋರಿಸಲಾಗುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಭಾರತದ ರಾಜಕೀಯವನ್ನು ಮಹಾಪುರುಷರ ಪ್ರತಿಮೆಗಳು ಹಾಗೂ ಅವರ ಗೌರವದಿಂದ ಬಚಾವ್ ಮಾಡಬೇಕಿದೆ. ನೀವು ಧರ್ಮದಿಂದ ರಾಜಕೀಯ ಹಾಳಾಗುವುದರಿಂದ ರಕ್ಷಿಸಲು ವಿಫಲವಾಗಿದ್ದೀರಿ ಅಂದರೆ ಮಹಾಪುರುಷರ ಪೋಸ್ಟರ್ ಹಾಗೂ ಪ್ರತಿಮೆಗಳಿಂದ ರಾಜಕೀಯದ ಉಳಿದ ಭಾಗವನ್ನು ಅಳಿದು ಹೋಗದಂತೆ ಉಳಿಸುವುದು ಹೇಗೆ? ಭಾರತದ ರಾಜಕೀಯವನ್ನು ಧರ್ಮ ಹಾಗೂ ಬೇರೆ ಬೇರೆ ಮಹಾಪುರುಷರ ಅತಿರೇಕಗಳಿಂದ ಬಚಾವ್ ಮಾಡಬೇಕಿದೆ. ಅದರ ಬಳಕೆ ಈಗ ಅಗತ್ಯಕ್ಕಿಂತ ಬಹಳ ಹೆಚ್ಚಾಗಿದೆ. ಯಾರು ವ್ಯವಸ್ಥೆ ಹಾಗೂ ಸಮಾಜದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರೋ, ಅವರದೇ ಪ್ರತಿಮೆ ಹಾಗೂ ಜಯಂತಿಯ ಹೆಸರಲ್ಲಿ ಪ್ರಜಾಪ್ರಭುತ್ವ ಹಾಗೂ ವ್ಯವಸ್ಥೆ ಎರಡನ್ನೂ ಮುಗಿಸಿಬಿಡಲಾಗುತ್ತಿದೆ. ಈಗ ಚುನಾವಣೆಯಲ್ಲಿ ನಾಗರಿಕ ಅಥವಾ ಮತದಾರ ಕೇವಲ ಮತ ಚಲಾಯಿಸುವ ರೋಬೊಟ್ ಆಗಿ ಬಿಟ್ಟಿದ್ದಾನೆ. ಜನರಿಗೆ ಅರಾಜಕತೆಯ ಚಟ ಹಿಡಿದು ಬಿಟ್ಟಿದೆ. ಈಗ ಯಾವುದಾದರೂ ರಾಜಕೀಯ ಪಕ್ಷ ಹೊಸ ಪರ್ಯಾಯ ಕೊಡಬಯಸಿದರೆ ಅದು ಈಗಿರುವ ವ್ಯವಸ್ಥೆಯನ್ನು ಬದಲಾಯಿಸಿ ತೋರಿಸಬೇಕು. ವಿಪಕ್ಷದ ರಾಜಕೀಯ ಒಂದು ಒಳ್ಳೆಯ ಪರ್ಯಾಯವಾಗಬೇಕಾಗಿದೆ. ಈಗ ನಡೆಯುತ್ತಿರುವುದನ್ನೇ ತಮ್ಮ ರೀತಿಯಲ್ಲಿ ಮುಂದುವರಿಸಿ ವಿಪಕ್ಷಕ್ಕೆ ಯಾವುದೇ ಪ್ರಯೋಜನ ಆಗದು. ಅರಾಜಕತೆ ಎದುರು ವ್ಯವಸ್ಥೆಯೊಂದೇ ಸರಿಯಾದ ಜವಾಬು.