ಮರ್ಯಾದಸ್ಥ ಮೂರ್ಖರು
‘ಪ್ಯಾರಾನಾಯ್ಡ್ ಸ್ಕ್ರೀಜೋಫ್ರೀನಿಯಾ’! ಮನಶ್ಯಾಸ್ತ್ರ ತಿಳಿದವರಿಗೆ ಈ ಪದದ ಪರಿಚಯವಿರುತ್ತದೆ. ಇದೊಂದು ವಿಲಕ್ಷಣ ಮಾನಸಿಕ ವ್ಯಾಧಿ. ಗ್ರಸ್ತರಿಗೆ ಈ ಮನೋವ್ಯಾಧಿಯ ಅರಿವು ಇರುವುದಿಲ್ಲ. ಅದೇನೆಂದು ತಿಳಿದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಒಂಚೂರು ಕಾಮನ್ಸೆನ್ಸ್ ಇದ್ದವರು ಅಂಥವರನ್ನು ಉಪೇಕ್ಷಿಸಬಾರದು. ಅವರನ್ನು ಮನೋ ಸಾಂತ್ವನ ಕೇಂದ್ರಗಳಿಗೆ ಸೇರಿಸಬೇಕು, ಅವರಿಗೆ ಸೂಕ್ತ ಸಲಹೆ ಸೂಚನೆ ನೀಡಬೇಕು. ಅವರಿಗೆ ಸರಿ ತಪ್ಪುಗಳ ಅರಿವು ಮೂಡಿಸಬೇಕು. ಆಶ್ಚರ್ಯಕರ ಸಂಗತಿ ಅಂದರೆ ಇಂಥ ಭ್ರಮಾಧೀನರಲ್ಲಿ ಸಾಮಾನ್ಯ ಜನರಿಲ್ಲ, ಇರುವವರೆಲ್ಲರೂ ಪ್ರಧಾನಿಗಳು, ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ಸೋಕಾಲ್ಡ್ ಗಣ್ಯಾತಿಗಣ್ಯರು. ಇಂಥವರ ಸಂಖ್ಯೆಯೇ ಅಧಿಕ.
ಈ ವಿವಿಐಪಿಗಳು ಭ್ರಮಾಧೀನರು, ಭ್ರಮೆಗಳ ರೂವಾರಿ ಗಳು. ವಸ್ತುಸ್ಥಿತಿಯನ್ನು ವಿರೂಪಗೊಳಿಸುವವರು, ಆರನ್ನು ಮೂರನ್ನಾಗಿ, ಮೂರನ್ನು ಆರನ್ನಾಗಿ ಪರಿವರ್ತಿಸುವ ಜಾದೂಗಾರರು. ಇವರು ವಾಸ್ತವ ವೈಚಾರಿಕ ವೈಜ್ಞಾನಿಕವಾಗಿ ಯೋಚಿಸುವುದಿಲ್ಲ. ಇವರಿಗೆ ಹೃದಯವೈಶಾಲ್ಯ ಇರುವುದಿಲ್ಲ. ವರ್ತಮಾನವನ್ನು ಭೂತಕಾಲದ ಕಾಳ್ಗತ್ತಲ ಕೂಪಕ್ಕೆ ತಳ್ಳುವ ನಿರ್ದಯಿಗಳು.
ಇವರು ಪೌರಾಣಿಕ ಕಲ್ಪಿತ ಪಾತ್ರಗಳನ್ನು ವೈಭವೀಕರಿಸು ವುದಕ್ಕೆ ಚಿಕ್ಕ ಉದಾಹರಣೆ ಎಂದರೆ ಆಂಜನೇಯ. ಇದೊಂದು ಕಪೋಲ ಕಲ್ಪಿತ ಪಾತ್ರ. ಈ ಪಾತ್ರ ಕುರಿತು ಕೆಲವು ಗಣ್ಯರ ಹೇಳಿಕೆಗಳನ್ನು ಪರಿಶೀಲಿಸೋಣ. ಉತ್ತರ ಪ್ರದೇಶದ ಪ್ರಥಮ ಪ್ರಜೆಯ ದೃಷ್ಟಿಯಲ್ಲಿ ಈತ ದಲಿತರ ಪ್ರತಿನಿಧಿ (27/11/2018), ಇನ್ನು ಎಸ್ಸಿ-ಎಸ್ಟಿ ಅಧ್ಯಕ್ಷ ನಂದಕುಮಾರ್ ಸಾಯ್ ಲೆಕ್ಕಾಚಾರದಲ್ಲಿ ಈತ ಆದಿವಾಸಿ (29/11/18), ಕೇಂದ್ರ ಸರಕಾರ ಸಚಿವ ಸತ್ಯಪಾಲ್ ಸಿಂಗ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈತ ಆರ್ಯ ಎಂದು ಘೋಷಿಸಿದ್ದಾರೆ. ವಿಚಿತ್ರವೆಂದರೆ ದ್ವಾರಕಾ ಪೀಠಾಧಿಪತಿ ಶ್ರೀಶಂಕರಾಚಾರ್ಯರು ‘ಹನುಮಂತ ಬ್ರಾಹ್ಮಣ ಸಂಜಾತ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲವನ್ನು ಇವರು ತಮ್ಮ ವೈಯಕ್ತಿಕ ನಂಬಿಕೆಗಳೆಂದು ಭಾವಿಸುವುದಿಲ್ಲ, ಆದರೆ ಈ ಕಲ್ಪಿತ ವಾಸ್ತವ ಸಂಗತಿಗಳಿಂದ ಸಾಮಾನ್ಯ ಜನರನ್ನು ಮರುಳು ಮಾಡುತ್ತಾರಲ್ಲ ಈ ವರ್ತನೆ ಕುರಿತು ಚರ್ಚಿಸಬೇಕಾದ್ದೆ!
ಎತ್ತು ಕರು ಹಾಕಿತೆಂದರೆ ಕೊಟ್ಟಿಗೆಯಲ್ಲಿ ಕಟ್ಟು ಎಂದು ಹೇಳುವ ಈ ಅವಿವೇಕಿಗಳನ್ನು ಅವಿವೇಕಿಗಳೆಂದರೆ ಈ ಪ್ಯಾರಾನಾಯ್ಡ್ ಸ್ಕ್ರೀಜೋಫ್ರೀನಿಯಾ ವ್ಯಾಧಿಗ್ರಸ್ತರು ಮನಸ್ಸಿಗೆ ನೋವು ಮಾಡಿಕೊಳ್ಳಬಹುದು, ಅಕ್ಷರಸ್ಥ ಅವಿದ್ಯಾವಂತರು ಎಂದರೆ ಬೇಸರ ಮಾಡಿಕೊಳ್ಳಲಾರರೇನೊ! ಇವರ ವ್ಯಾಪ್ತಿ ಈ ದೇಶಕ್ಕೆ ಮಾತ್ರ ಸೀಮಿತವಿಲ್ಲ, ಇವರ ಸಂತತಿ ದೇಶಾತೀತ ಮತ್ತು ಕಾಲಾತೀತ. ಕೂಪರ್ನಿಕಸ್ನ ‘ಆನ್ ದಿ ರೆವೆಲ್ಯೂಷನ್ ಆಫ್ ದಿ ಹೆವೆನ್ಲಿ ಸ್ಪಿಯರ್ಸ್’ ಪ್ರಕಟವಾದಾಗ ಚರ್ಚ್ಗಳ ಬುನಾದಿ ಕಲ್ಲುಗಳು ಅಲುಗಾಡಿದವು, ಮತಬೋಧಕರು ಹುಚ್ಚು ಹಿಡಿದವರಂತೆ ವರ್ತಿಸಿದರು. ಅದಕ್ಕಿದ್ದ ಕಾರಣ ಆ ಖಗೋಳ ಶಾಸ್ತ್ರಜ್ಞ ಸೂರ್ಯನ ಸುತ್ತ ಭೂಮಿ ಪ್ರದಕ್ಷಿಣೆ ಹಾಕುವುದು ಎಂದು ಸಾಕ್ಷ್ಯಾಧಾರಗಳ ಸಹಿತ ನಿರೂಪಿಸಿದ. ಅದುವರೆಗೆ ಆ ಗೌರವಾನ್ವಿತ ಮುಠ್ಠಾಳರು ಸೂರ್ಯ ಭೂಮಿ ಸುತ್ತ ಪರಿಭ್ರಮಿಸುವನೆಂದು ನಂಬಿದ್ದರು. ಶತಮಾನಗಳ ನಂತರವೂ ಅವರ ಸಂತತಿ ಜೀವಂತವಿದೆ. ಅವರ ಮನಃಸ್ಥಿತಿ ಬದಲಾಗಿಲ್ಲ. ಅವರು ಏಕಕಾಲಕ್ಕೆ ಭೂತ ಮತ್ತು ವರ್ತಮಾನಗಳೆಂಬ ಎರಡು ನಾವೆಗಳಲ್ಲಿ ಪ್ರಯಾಣಿಸುವುದನ್ನು ರೂಢಿಸಿಕೊಂಡಿದ್ದಾರೆ. ಇಂಥ ಧಾರ್ಮಿಕ ಗೋಸುಂಬೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೆ ಪ್ರಸಿದ್ದ ವಿಜ್ಞಾನಿ ಮತ್ತು ಲೇಖಕ ಕಾರ್ಲಸಾಗಸ್ ‘ನೀವೆಷ್ಟು ಪ್ರಯತ್ನಿಸಿದರೂ ಮತಾಂಧರ ಸನಾತನ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ. ವೈಜ್ಞಾನಿಕ ಸತ್ಯಗಳು ಸಂಶೋಧನಾ ಫಲಶೃತಿಗಳು ಅವರಲ್ಲಿನ ಅಂಧಶ್ರದ್ಧೆಯನ್ನು ಬದಲಿಸುವುದಿಲ್ಲ’ ಎಂದು ಹೇಳಿದ. ಇದು ಅಕ್ಷರಶಃ ಸತ್ಯ.
ಕೇವಲ ಇಪ್ಪತ್ತೊಂಭತ್ತು ವರ್ಷಗಳು ಮಾತ್ರ ಜೀವಿಸಿದ್ದ ಇಂಗ್ಲಿಷ್ ಸಾಹಿತ್ಯದ ಪ್ರಖ್ಯಾತ ಕವಿ ಶೆಲ್ಲಿ ವೈಚಾರಿಕವಾಗಿ ಆಲೋಚಿಸಿದ, ಅಚಲ ನಿರೀಶ್ವರವಾದಿಯಾಗಿದ್ದ. ನೈತಿಕ ಸ್ಥೈರ್ಯವುಳ್ಳ ಮನುಷ್ಯನಿಗೆ ಧರ್ಮ ದೇವರುಗಳ ಅಗತ್ಯವಿಲ್ಲವೆಂದು ತನ್ನ ಜೀವನದುದ್ದಕ್ಕೂ ಪ್ರತಿಪಾದಿಸಿದ.
ತೀರ್ಥ ಪ್ರಸಾದ ನಿತ್ಯ ಸೇವಿಸುವ ದೇವರುಗಳಿರುವ ಗುಡಿಗಳಲ್ಲಿ ಟಾಯ್ಲೆಟ್ ಯೂರಿನಲ್ಸ್ ಗಳ್ಯಾಕಿಲ್ಲವೆಂದು ಪ್ರಶ್ನಿಸಿದ ಪೆರಿಯಾರ್, ದೇವಸ್ಥಾನಗಳನ್ನು ಪಾಠಶಾಲೆಗಳನ್ನಾಗಿ ಪರಿವರ್ತಿಸಿದ ನಾರಾಯಣಗುರು, ವೈಚಾರಿಕವಾಗಿ ಜಾತ್ಯತೀತವಾಗಿ ನಿರೀಶ್ವರವಾಗಿ ಬದುಕಿದ ನೆಹರೂಗಳಂಥವರಿದ್ದ ಈ ದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರತಿನಿಧಿ ಸಂಬಿತ್ ಪಾತ್ರ ಹಸುವಿನ ಸೆಗಣಿ ಕೊಹಿನೂರ್ ವಜ್ರಕ್ಕಿಂತ ಅತ್ಯಮೂಲ್ಯವೆಂದು ಸಾರ್ವಜನಿಕವಾಗಿ ಹೇಳುತ್ತಾನೆ. ಪಾತ್ರಗೆ ಇರುವ ಈ ಬ್ರಹ್ಮಾಂಡ ತಿಳುವಳಿಕೆ ದೇಶವನ್ನಾಳಿದ ಬ್ರಿಟಿಷರಿಗ್ಯಾಕೆ ಇರಲಿಲ್ಲ! ಕಿಂಚಿತ್ ಇದ್ದಿದ್ದರೆ ಅವರು ದೇಶದ ಸಮಸ್ತ ಹಸುಗಳ ಸೆಗಣಿ ಗಂಜಲವನ್ನು ಬಂಕಿಂಗ್ ಹ್ಯಾಮ್ ಅರಮನೆಗೆ ಸಾಗಿಸಬಹುದಿತ್ತಲ್ಲವೆ! ಕಳೆದೊಂದು ದಶಕದಲ್ಲಿ ಈ ದೇಶದ ದೌರ್ಭಾಗ್ಯವೆಂದರೆ ಇನ್ಡೈರೆಕ್ಟಾಗಿ ನಮ್ಮನ್ನು ಆಳುತ್ತಿರುವುದು ಬಾಬಾಗಳು, ಸನ್ಯಾಸಿಗಳು, ಸಾಧು ಸಂತರು. ಇದಕ್ಕೆ ಚಿಕ್ಕ ಉದಾಹರಣೆ, ಅಂತರ್ ರಾಷ್ಟ್ರೀಯವಾಗಿ ಸ್ವಕುಚಕ ಮರ್ಧಕನೆಂದೇ ಹೆಸರಾದ ಬಾಬಾ ರಾಮ್ದೇವ್ಗೆ ಇದುವರೆಗೆ ತನ್ನ ಮೆಳ್ಳೆಗಣನ್ನು ಸರಿಪಡಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಈತ ಕ್ಯಾನ್ಸರ್ ರಿಸರ್ಚ್ ಸಮಾವೇಶದಲ್ಲಿ ಭಾಗವಹಿಸಿ ದೈತ್ಯೋಪನ್ಯಾಸ ನೀಡುತ್ತಾನೆ, ಆತನ ನಿರರ್ಥಕ ಮಾತುಗಳನ್ನು ಸಮಾವೇಶದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ಮೆಡಿಕೊ ವ್ಯಕ್ತಿಗಳು ಶ್ರದ್ಧೆಯಿಂದ ಆಲಿಸುತ್ತಾರೆ. ಪತ್ನಿ ಕೊಲೆಗಾರರು ಈ ದೇಶದ ಕೌಟುಂಬಿಕ ವ್ಯವಸ್ಥೆ ಕುರಿತು ಪ್ರವಚನ ನೀಡುತ್ತಾರೆ. ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತ ಹಿಂದೂಗಳು ಆದರ್ಶ ಎಂದು ಕರೆ ನೀಡಿದ್ದು ಈ ದೇಶದ ಪ್ರಧಾನಿ.
ಇನ್ನೊಂದು ನಗೆಪಾಟಲು ಸಂಗತಿ ಅಂದರೆ ಅಜಯ್ಭಟ್ ಹೆಸರಿನ ರಾಜಕಾರಣಿ ಇದ್ದಾನೆ. ಈ ಪುಣ್ಯಾತ್ಮ ಉತ್ತರಾಖಂಡ ರಾಜ್ಯದ ಬಿಜೆಪಿ ಅಧ್ಯಕ್ಷ, ಅಲ್ಲದೆ ಉದಮ್ ನಗರದ ಚುನಾಯಿತ ಲೋಕಸಭಾ ಸದಸ್ಯ. ಈತ ಕುಹಾನ್ ಭಾಗೇಶ್ವರ್ ಜಿಲ್ಲೆಯಲ್ಲಿನ ಗರುಡ್ ಎಂಬಲ್ಲಿ ಉಪನ್ಯಾಸ ನೀಡಿದ. ಅದರಲ್ಲಿ ತುಂಬು ಗರ್ಭಿಣಿಯರು ಗಂಗಾ ನದಿಯ ನೀರು ಸೇವಿಸಿದರೆ ಸಿಸೇರಿಯನ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕರೆ ನೀಡಿದ. ಕಡಿದ ಜಾಗದಲ್ಲಿ ಗಂಗಾ ನದಿ ಮರಳನ್ನು ಕಟ್ಟಿದರೆ ಹಾವಿನ ನಂಜು ದೇಹಕ್ಕೆ ವ್ಯಾಪಿಸುವುದಿಲ್ಲವೆಂದು ಹೇಳಿದ. ಕೇಂದ್ರ ಸರಕಾರ ತತ್ಕ್ಷಣ ದೇಶದ ಸಮಸ್ತ ಪ್ರಸೂತಿ ಗೃಹಗಳಿಗೆ ಗಂಗಾ ನದಿ ನೀರನ್ನು ಉಚಿತವಾಗಿ ಪೂರೈಸುವುದರ ಕಡೆ ಗಮನ ಹರಿಸಿದರೆ ಹೇಗೆ! ‘ವಿಷ ನಿರೋಧಕ ಶಕ್ತಿಗೆ ಗಂಗಾನದಿ ಮರಳನ್ನು ಉಪಯೋಗಿಸಿ’ ಎಂದು ಕರೆ ನೀಡಿದರೆ ಹೇಗೆ!
ಈ ಪಕ್ಷ ಎರಡನೇ ಸಲ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶದ ಹಸುಗಳು ಈ ಒಂದು ನಿರ್ಣಯಕ್ಕೆ ಬಂದರೆ ಹೇಗೆ! ತಮ್ಮ ಉತ್ಪನ್ನಗಳಲ್ಲಿ ಪ್ರಮುಖವಾಗಿ ಮೂತ್ರ, ಸೆಗಣಿಯನ್ನು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿ ಎಂದು ಕರೆ ನೀಡಿದರೆ ಹೇಗೆ!
ಇತಿಹಾಸವನ್ನು ವಕ್ರೀಕರಿಸುವ ದಂಧೆ ವ್ಯವಸ್ಥಿತವಾಗಿ ನಡೆದಿದೆ. ಹತ್ತೊಂಭತ್ತನೆ ಶತಮಾನದ ಅಂತಿಮ ಚರಣದಲ್ಲಿ ಕೆಲವು ಸಮಾಜ ಸುಧಾರಕರು, ಜನಪ್ರತಿನಿಧಿಗಳು ಮುಸ್ಲಿಮರನ್ನು ದುಷ್ಟರೆಂದು ಚಿತ್ರಿಸಿದರು. ಆ ಕಾಲದಲ್ಲಿ ಅದು ಪೈಪೋಟಿ ಮೇಲೆ ನಡೆಯಿತು. ಉದಾಹರಣೆಗೆ ದಯಾನಂದ ಸರಸ್ವತಿ (1824- 83) ವಿರಚಿತ ‘ಸತ್ಯಾರ್ಥ ಪ್ರಕಾಶ್’ ಕೃತಿಯಲ್ಲಿನ ಎರಡು ಅಧ್ಯಾಯಗಳನ್ನು ಮುಸ್ಲಿಮ್ ಕ್ರಿಶ್ಚಿಯನ್ ಧರ್ಮಗಳನ್ನು ಹೀಯಾಳಿಸಲೆಂದೇ ಮೀಸಲಿರಿಸಿದ್ದಾರೆ. ಇನ್ನು ವಿವೇಕಾನಂದ ತಮ್ಮ ಒಂದು ಲೇಖನದಲ್ಲಿ ‘ಫೆಸಿಪಿಕ್ನಿಂದ ಆರಂಭಿಸಿ ಅಟ್ಲಾಂಟಿಕ್ ವಹಾಸಮುದ್ರದವರೆಗೆ ಐದು ನೂರು ವರ್ಷಗಳ ಸುದೀರ್ಘ ಕಾಲ ನೆತ್ತರು ಪ್ರವಹಿಸಿತು, ಆ ನೆತ್ತರೇ ಮಹ್ಮದೀಯ ರಕ್ತ’ ಎಂದು ಉಲ್ಲೇಖಿಸಿದ್ದಾರೆ. ಇದು ನಿಜವೇ ಆಗಿದ್ದಲ್ಲಿ ರಾಷ್ಟ್ರದ ಅಂತರ್ರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರರಾದ ತಾರಾಚಂದ್, ಹಬೀಬ್, ಇರ್ಫಾನ್, ಷಿರೀನ್ ಮೂಸ್ವಿ ಇವರೇ ಮೊದಲಾದವರು ತಕರಾರೆತ್ತದೆ ಸುಮ್ಮನಿರಬಹುದಿತ್ತಲ್ಲವೆ!
ಪ್ರೊ. ದ್ವಿಜೇಂದ್ರ ನಾರಾಯಣ್ ಝಾ ಭಾರತದ ಪ್ರಾಚೀನ ಮಧ್ಯಯುಗ ಇತಿಹಾಸ ಕುರಿತು ಸಂಶೋಧನೆ ನಡೆಸಿದ ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿದ ಅದ್ವಿತೀಯ ವಿದ್ವಾಂಸ. ಅವರ ‘ಮಿಥ್ ಆಫ್ ದಿ ಹೋಲಿ ಕೌ’ ವಿವಾದಾಸ್ಪದ ಮೌಲಿಕ ಸಂಶೋಧನ ಕೃತಿ. ಅವರು ತಮ್ಮೊಂದು ಕೃತಿಯಲ್ಲಿ ಇತರ ಮತಗಳ ಪ್ರಧಾನ ಶತ್ರುವರ್ಗವೆಂದರೆ ಹಿಂದೂ ಮತ್ತು ಬ್ರಾಹ್ಮಣ ಎಂದು ಪತಂಜಲಿ ಅದೂ ಕ್ರಿ.ಪೂ..ದಲ್ಲೆ ಹೇಳಿರುವನೆಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದೊಂದು ದಶಕದಲ್ಲಿ ಸತ್ಯ ಸಿಂಹಾಸನದ ಮೇಲೆ ಸುಳ್ಳು ವಿರಾಜಮಾನವಾಗಿದೆ. ಅಪಪ್ರಚಾರಕ್ಕೆ ಮಾಧ್ಯಮಗಳನ್ನು ಎಗ್ಗಿಲ್ಲದೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ನಕಲಿ ಫೋಟೊಶಾಪ್ಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರ, ದೇಶಭಕ್ತರ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗುತ್ತಿದೆ. ಯಾರು ಯಾರನ್ನೋ ಚುಂಬಿಸುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಗಾಂಧೀಜಿ ನೆಹುರೂರವರನ್ನು ಕಳಂಕಿತರ ಕಪ್ಪುಪಟ್ಟಿಗೆ ಸೇರಿಸಲಾಗುತ್ತಿದೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ವಿಷ್ಣು ವಿಗ್ರಹ ವಿಯಟ್ನಾಂನಲ್ಲಿ ದೊರಕಿರುವುದೆಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. india Divine org ಹೆಸರಿನ ಸಂಸ್ಥೆ ಇಂಥ ಫೇಕ್ ಸುದ್ದಿಗಳನ್ನು ಹಬ್ಬಿಸುವುದಕ್ಕೆ ಮೀಸಲಿದೆ. ‘ಜೈಹಿಂದ್’ ಎಂಬ ಜನಾದರಣೀಯ ಸ್ಲೋಗನ್ ಸೃಷ್ಟಿಕರ್ತ ಜೈನುಲ್ ಆಬಿ ದೀನ್ ಎಂಬ ಮುಸ್ಲಿಮ್ ದೇಶಭಕ್ತ ಎಂಬ ಸಂಗತಿಯನ್ನು ವ್ಯವಸ್ಥಿತವಾಗಿ ಮರೆಮಾಚಲಾಗಿದೆ. ಒಂದು ಭಾರೀ ಗಾತ್ರದ ಗದೆ ಸೃಷ್ಟಿಸಿ ಅದು ಶ್ರೀಲಂಕಾದಲ್ಲಿ ದೊರಕಿರುವುದೆಂದೂ, ಅದು ರಾಮಾಯಣ ಕಾಲದ ಆಂಜನೇಯನದ್ದೆಂದೂ ಪುಕಾರು ಹಬ್ಬಿಸಲಾಗಿದೆ.
ಸ್ವಲ್ಪ ಕಾಲದ ಹಿಂದೆ ಯುಜಿಸಿ ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ಒಂದು ಸರ್ಕ್ಯುಲರ್ ಜಾರಿ ಮಾಡಿತು. ವಿದ್ಯಾರ್ಥಿಗಳಿಗೆ ಹಸು ಕುರಿತ ಒಂದು ಪರೀಕ್ಷೆ ನಿರ್ವಹಿಸಬೇಕು, ಆ ಪಾಠ್ಯಾಂಶದಲ್ಲಿ ದೇಶೀಯ ಹಸುಗಳ ಕುರಿತು, ಅವುಗಳ ಆಹಾರಾಭ್ಯಾಸ ಕುರಿತು, ಪರಿಸರಕ್ಕೂ ಹಸುವಿಗೂ ಇರುವ ಸಂಬಂಧ ಕುರಿತು ಮಾಹಿತಿ ಇರಬೇಕೆಂದು ಅದರಲ್ಲಿ ಸೂಚಿಸಿದೆ. ಈ ಪರೀಕ್ಷೆಯನ್ನು ನಿರ್ವಹಿಸುವುದಕ್ಕೆಂದೇ ರಾಷ್ಟ್ರೀಯ ಕಾಮಧೇನು ಆಯೋಗ ಎಂಬ ಸಂಸ್ಥೆಯನ್ನು ಏರ್ಪಾಡು ಮಾಡಲಾಗಿದೆ. ಬೆಂಗಾಲ್ನ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹಸುವಿನ ಹಾಲಲ್ಲಿ ಚಿನ್ನದ ಅಂಶವಿದೆ ಎಂದು ಘೋಷಿಸಿದರು.
ಇಂಥ ಮರ್ಯಾದಸ್ಥ ಮೂರ್ಖರ ಸಂಖ್ಯೆ ಈ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.