ಉಪ್ಪಿನ ತೇವದ ಗಾಳಿ
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪಳಿಕೆಯ ಉಮರ್ ಎಸ್ (ಸಂಪ್ಯ)ಮತ್ತು ಖತೀಜಾ ದಂಪತಿಯ ಪುತ್ರ ಮಹಮ್ಮದ್ ಫೈಝಲ್, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ
ಪದವಿ ಪಡೆದಿದ್ದಾರೆ. ಸದ್ಯ ‘ದಿ ಫೆಡರಲ್ಕರ್ನಾಟಕ’ದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಫೈಝಲ್, ಹೊಸ ಸಂವೇದನೆಯ ಕತೆ, ಕವಿತೆಗಳ ಮೂಲಕ ಗುರುತಿಸಲ್ಪಡುತ್ತಿದ್ದಾರೆ.
ಕಲ್ಲಂಗಡಿಯ ಹೋಳುಗಳನ್ನು ಅಚ್ಚುಕಟ್ಟಾಗಿ ತುಂಡರಿಸಿ ಖಾರ ಮತ್ತು ಕಡಲಿನಿಂದಲೇ ಹೆಕ್ಕಿದ ಉಪ್ಪನ್ನು ಹಾಕಿ ಕಡಲು ನೋಡಲು ಬಂದವರಿಗೆ ಮಾರುತ್ತಿದ್ದ ಹದಿನೇಳೋ ಹದಿನೆಂಟೋ ಹರೆಯದ ಆ ಹುಡುಗನನ್ನು ಕಳೆದ ಒಂದು ವಾರದಿಂದ ನಾನು ಇಲ್ಲಿಯೇ ನೋಡುತ್ತಿದ್ದೇನೆ. ಕಡಲು ನೋಡಲು ಬಂದ ಎಲ್ಲರೂ ಅವನಿಂದ ತಂಪಾದ ಹಣ್ಣುಗಳನ್ನು ಕೊಳ್ಳುತ್ತಾರೆ ಎಂದೇನಲ್ಲ. ಆದರೆ, ಅವನ ರಿಝ್ಖ್ ಯಾರ ಜೇಬಿನ ಮೂಲಕ ಬರುತ್ತದೋ ಅವರು ಕೊಳ್ಳುತ್ತಾರೆ ಅವನು ತುಂಡರಿಸಿಟ್ಟ ಕಲ್ಲಂಗಡಿಯನ್ನು.
ಹೊಂಬಣ್ಣದ ಸೂರ್ಯನ ಕಿರಣಗಳು ಅವನ ಮೇಲೂ, ಕಡಲ ನೋಡಲು ಬಂದವರ ಮೇಲೂ, ಅಲೆ ಮತ್ತು ಮರಳ ಮೇಲೂ ಹರಡಿ ಕಣ್ಕಾಣುವ ನೋಟದುದ್ದಕ್ಕೂ ಬೆಲೆ ಕಟ್ಟಲಾಗದ ಸೌಂದರ್ಯವನ್ನು ಸೃಷ್ಟಿಸಿ ನಿಂತಿದೆ. ಸಂಜೆಯ ಥಂಡಿ ಗಾಳಿ ಬೀಸುವಾಗ ಅಲ್ಲೆಲ್ಲೋ ಒಣಗಲು ಹಾಕಿರುವ ಮೀನಿನ ಸುವಾಸನೆ ಮೂಗಿಗೆ ಬಡಿಯುತ್ತದೆ. ಸರಕಾರದವರು ಹಾಕಿದ ಭಾರೀ ಸೈಜುಗಲ್ಲುಗಳ ಆ ಕಡೆ ಎಲ್ಲೋ ಬಯಲು ಶೌಚ ಮಾಡಿದವರ ಒಣ ಹೇಲಿನ ವಾಸನೆಯೂ ಈ ಗಾಳಿಯೊಳಗೆ ಎಲ್ಲೋ ತಾವು ಪಡೆದುಕೊಂಡು ಬರುತ್ತದೆ. ಇದೆಲ್ಲಾ ಸಹ್ಯವೆನಿಸಿದರೆ ಕಡಲಿನ ಒಂದು ಬದುವಿನ ಅತ್ಯಂತ ಸುಂದರ ಜಾಗವನ್ನು ಕಣ್ಣಿನ ಮೂಲಕ ಅನುಭವಿಸಬಹುದು. ಸಂಜೆ ಹೊತ್ತಿನಲ್ಲಿ ಈ ಸೌಂದರ್ಯದೊಂದಿಗೆ ದೈವಿಕ ಬೆಳಕು ಜೊತೆಗೂಡಿ ಇನ್ನಷ್ಟು ಮಜಬೂತಾದ ವಾತಾವರಣ ನಿರ್ಮಿಸುತ್ತದೆ. ಈ ಹೊತ್ತಿನಲ್ಲಿ ಇಲ್ಲಿ ತೆಗೆಯುವ ಚಿತ್ರಗಳೂ ಕೂಡಾ ಅತ್ಯಂತ ಆಕರ್ಷಣೀಯ. ಇಲ್ಲಿನ ಮರಳು, ಕಡಲು, ಮನುಷ್ಯರು, ನಾಯಿ ಮತ್ತು ಗೂಡಿಗೆ ಮರಳುವ ಹಕ್ಕಿಗಳು ಎಲ್ಲೂ ಹೋಗದ ಮರಗಳು ಚಿನ್ನದ ಲೇಪಗಳನ್ನು ಕಡ ಪಡೆದಂತೆ ಧರಿಸಿ ಚಂದದ ಫ್ರೇಮನ್ನು ತುಂಬುತ್ತವೆ.
ಕತೆಗಳಿಗಾಗಿ ಅಲೆದಾಡುವ ನಾನು ಇಲ್ಲಿರುವ ಜೀವಂತ ಪುಸ್ತಕಗಳನ್ನು ಸುಮ್ಮನೇ ಕುಳಿತು ಓದಲು ಪ್ರಯತ್ನಿಸುತ್ತೇನೆ. ಪ್ರತಿಯೊಬ್ಬರ ಕತೆಗಳು ವಿಭಿನ್ನವೆನಿಸಿದರೂ ಎಲ್ಲದಕ್ಕೂ ಒಂದೇ ಸಾಮ್ಯತೆ ಇದೆ. ನನ್ನ ಅರಿವಿನ ಮಿತಿ ಎಷ್ಟೋ ಅಷ್ಟೇ ದಕ್ಕುತ್ತದೆ ಕತೆಗಳು.
ಇಲ್ಲಿನ ಬಹುತೇಕ ದಿನಚರಿ ನನಗೆ ಅರ್ಥವಾಗತೊಡಗಿದೆ.
ಮಗ್ರಿಬ್ನ ಹೊತ್ತು ಯಾವುದು, ಮತ್ತು ಸೂರ್ಯ ಇನ್ನೂ ಎಷ್ಟು ಹೊತ್ತು ಇಲ್ಲಿ ಇರಬಹುದೆಂದು ಮರಳ ಬಣ್ಣದಿಂದಲೇ ಗುರುತಿಸುವ ಪಕ್ವತೆ ನನ್ನಲ್ಲಿ ಬಂದಿದೆಯಾದರೂ, ಪ್ರತಿದಿನ ಮಗ್ರಿಬ್ನ ಹೊತ್ತಿನವರೆಗೂ ಎತ್ತರದ ಕಲ್ಲಿನ ಮೇಲೆ ನಿಂತು ಗಾಳ ಹಾಕಿ ಕೂರುವ, ಬೀಡಿ ಸೇದುವ ಬ್ಯಾರಿ ಮುದುಕಿಯನ್ನು ಮಾತಾಡಿಸುವ ಧೈರ್ಯ ಇನ್ನೂ ಬಂದಿರಲಿಲ್ಲ.
ಒಂದು ಕೈಯಲ್ಲಿ ಗಾಳದ ಕೋಲನ್ನು ಹಿಡಿದು, ತುಟಿಗಳ ನಡುವೆ ಬೀಡಿ ಇಟ್ಟು ಬೀಸುವ ಗಾಳಿಗೆ ಸವಾಲೊಡ್ಡುವಂತೆ ಒಂದೇ ಕೈಯಲ್ಲಿ ಬೆಂಕಿಯ ಕಡ್ಡಿ ಗೀರಿ ಬೀಡಿ ಉರಿಸುವ ಈ ಮುದುಕಿ ಹೇಳಿಕೊಳ್ಳುವಂತಹ ಪ್ರಾಯದವಳೇನಲ್ಲ. ಬಹುಶಃ ೬೦-೬೫ ಪ್ರಾಯದ ಈಕೆ ಕಡಲನ್ನು ದಿಟ್ಟಿಸಿಯೇ ನೆತ್ತಿಯಲ್ಲಿ ಅಸಂಖ್ಯ ನೆರಿಗೆ ಮೂಡಿಸಿಕೊಂಡವಳು ಅನಿಸುತ್ತದೆ.
ತನ್ನನ್ನು ನೋಡಲು ಬಂದವರ ಬಗ್ಗೆ ವಿಶೇಷ ಗಮನ ಹರಿಸದೆ ಗಾಳಿಯು ಎಬ್ಬಿಸುವ ಅಲೆಗಳನ್ನು ಮರಳಿ ತನ್ನೊಳಗೆ ಸೆಳೆದುಕೊಳ್ಳುವ ಕಡಲಿನಂತೆ ಈಕೆ ತನ್ನ ಕಾಯಕವನ್ನಷ್ಟೇ ಮಾಡುತ್ತಿದ್ದಾಳೆ, ಯಾವುದೋ ಕೀಲಿ ಬೊಂಬೆಯಂತೆ.
ನಾನು ದಿಟ್ಟಿಸುವುದು, ಮಕ್ಕಳು ಗಾಳಿಪಟ ಹಾರಿಸುವುದು, ಹುಡುಗ ಕಲ್ಲಂಗಡಿ ಮಾರುವುದು, ಜೋಡಿಗಳು ಪ್ರೇಮಿಸುವುದು.. ಯಾವುದೂ ಆಕೆಯ ಗಮನವನ್ನು ಸೆಳೆಯುವುದೇ ಇಲ್ಲ. ಹಾಗೆ ನೋಡಿದರೆ ಇಲ್ಲಿ ಎಲ್ಲರೂ ಇರುವುದು ಮತ್ತು ಇರಬೇಕಾದುದೂ ಹಾಗೆಯೇ ಆದರೂ ನನ್ನಂತಹವರು ಕೆಟ್ಟ ಕುತೂಹಲದಿಂದ ಆಗಾಗ್ಗೆ ತಮ್ಮ ಖುಷಿಯ ಕೆಲಸದಿಂದ ಹೊರತಾದ ಇತರರನ್ನು ಅನಗತ್ಯವಾಗಿ ಗಮನಿಸುತ್ತಾರೆ. ಕಲ್ಲಂಗಡಿ ಮಾರುವ ಹುಡುಗನೂ ಗ್ರಾಹಕರಿಂದ ಹಣ ಪಡೆದು ಗಲ್ಲಾಗೆ ಹಾಕುವ ಮುನ್ನ ನನ್ನೆಡೆಗೆ ಒಂದು ಕಿರುನಗೆಯ ನೋಟ ಬೀರಿ ತನ್ನ ಕೆಲಸವನ್ನು ಮುಂದುವರಿಸುತ್ತಾನೆ.
ರಾತ್ರಿಯಾಗುವಾಗ ಬರುವ ಬೀಟ್ ಪೊಲೀಸರ ಬಗೆಗೆ ಪ್ರೇಮಿಗಳು ಆತಂಕಿತರಾಗುತ್ತಲೇ ಪ್ರೇಮಿಸುವುದನ್ನು ಮುಂದುವರಿಸುತ್ತಿರುತ್ತಾರೆ. ಗಾಳಿಪಟ ಹಾರಿಸುವ ಮಕ್ಕಳ ತಂದೆ ತಾಯಿಯರೂ ಕಡಲಿಗೆ ಮಕ್ಕಳು ಇಳಿಯುತ್ತಿಲ್ಲ ಎಂಬುದನ್ನು ಖಾತರಿಪಡಿಸುತ್ತಲೇ ಇರುತ್ತಾರೆ ಆಗಾಗ್ಗೆ. ದಾರ ತುಂಡಾಗುವ ಆತಂಕದಲ್ಲಿ ಮಕ್ಕಳು ಗಾಳಿಪಟ ಹಾರಿಸುತ್ತಿದ್ದಾರೆ. ಕುಡಿದು ಮಗುಮ್ಮಾಗಿ ಬಿದ್ದಿರುವ ಆ ನಡು ವಯಸ್ಕ ಮಾತ್ರ ಇವೆಲ್ಲದರಿಂದ ಪಾರಾಗಿ ಶಾಂತತೆಯನ್ನು ಅನುಭವಿಸುತ್ತಿದ್ದಾನೆ. ಎಚ್ಚರದಲ್ಲಿ ಇದ್ದೂ ಅಂತಹ ಶಾಂತತೆಯಲ್ಲಿ ಆ ಮುದುಕಿ ಮಾತ್ರ ಬದುಕುತ್ತಿದ್ದಾಳೆ ಎಂದನಿಸುತ್ತದೆ.
ಆಕೆ ಮೀನನ್ನು ಹಿಡಿಯಲು ಬಂದಂತೆ ತೋರುವುದಿಲ್ಲ. ಕಡಲಿನಲ್ಲಿ ಕಳೆದು ಹೋದ ಏನನ್ನೋ ಹುಡುಕುವಂತೆ ಅವಳು ಕಾಣುತ್ತಾಳೆ ಕೆಲವೊಮ್ಮೆ. ಅದು ಸಿಕ್ಕರೆ ಅದರ ಜಾಡು ಹಿಡಿದು ಆಕೆ ಹೊರಟೇ ಬಿಡುತ್ತಾಳೇನೋ ಕಡಲಿನಾಳಕ್ಕೆ.. ಕತೆಗಳಲ್ಲಿ ಬರುವ ಸಮುದ್ರ ಕನ್ಯೆಯಾಗಿ ಆಕೆ ಮರಳಿ ಬರುತ್ತಾಳೇನೋ.. ಎಂದೋ ಕಡಲಿಗಿಳಿದ ಆಕೆಯ ಗಂಡನೋ, ಅಪ್ಪನೋ, ಮಗನೋ ಮರಳಿ ಬಾರದಿದ್ದಾಗ ಆಕೆ ಇಲ್ಲಿ ಕೂರುವುದು ಅಭ್ಯಾಸವಾಗಿರಬಹುದು.. ಎಂದೂ ಮರಳಿ ಬಾರದವರಿಗೆ ಕಾಯುವುದಷ್ಟೇ ತನ್ನ ಕಾಯಕವೆಂಬಂತೆ ಆಕೆ ಬದುಕುತ್ತಿದ್ದಾಳೇನೋ.. ಹೀಗೆ ಏನೇನೋ ಯೋಚನೆಗಳು.. ಆಕೆಯ ಕತೆಯನ್ನು ಓದಲು, ದಕ್ಕಿಸಿಕೊಳ್ಳಲು ನಾನು ಪ್ರಯತ್ನ ಪಡುತ್ತೇನಾದರೂ ಆಕೆ ರಹಸ್ಯ ಭಾಷೆಯಲ್ಲಿ ಎಲ್ಲವನ್ನೂ ಅಡಗಿಸಿಟ್ಟುಕೊಂಡಂತೆ ತೋರುತ್ತಿತ್ತು.
ಆಕೆಯ ಕುರಿತ ಕುತೂಹಲ ನನ್ನನ್ನು ಆಕೆಯೆಡೆಗೆ ಸೆಳೆಯುತ್ತಿದ್ದಂತೆ, ನನ್ನ ಕಟ್ಟುಪಾಡು ಗಳನ್ನು ಒಡೆದು ಆಕೆಯ ಬಳಿಗೆ ಮೆಲ್ಲನೇ ಹೆಜ್ಜೆ ಹಾಕಿದೆ. ಜೇಬಿನಿಂದ ತೆಗೆದು ಸಿಗರೇಟು ತುಟಿಗಳಿಗಿಟ್ಟು ದೈನ್ಯತೆಯಿಂದ ಬೆಂಕಿ ಕಡ್ಡಿಯನ್ನು ಕೇಳಿದರೆ, ತಿರುಗಿಯೂ ನೋಡದೆ ಬೆಂಕಿ ಪೊಟ್ಟಣ ಇರುವ ಕೈಯನ್ನು ನನ್ನತ್ತ ಚಾಚಿದಳು ಮುದುಕಿ. ಒಂದು, ಎರಡು, ಮೂರು.. ಐದಾರು ಕಡ್ಡಿ ಗೀರಿದರೂ ಯಾವೊಂದರಿಂದಲೂ ನನ್ನ ಸಿಗರೇಟನ್ನು ಉರಿಸುವ ಕಿಡಿ ಬಾರದಿದ್ದಾಗ, ಆಕೆ ತಾನು ಸೇದುತ್ತಿದ್ದ ಬೀಡಿಯನ್ನೇ ನನ್ನೆಡೆಗೆ ಚಾಚಿದಳು. ಶೂನ್ಯ ಭಾವದಿಂದ ಅದನ್ನು ಪಡೆದ ನಾನು ಹೃದಯವನ್ನು ಮುಂದುವರಿದಿರುವ ಪಪ್ಪುಸಕ್ಕೆ ಇಳಿಸಿಕೊಂಡೆ.
ನಿರಂತರ ಉಪ್ಪಿನ ತೇವದ ಗಾಳಿ ಸೋಕಿ ನನ್ನ ಮುಖದ ಚರ್ಮ ಬಿಗಿಗೊಂಡವು. ಥಂಡಿ ಗಾಳಿಯು ಬೇಯುತ್ತಿರುವ ನನಗೆ ತಂಪೆರಲು ಸಾಧ್ಯವಾಗದೆ ಸೋಲುವಂತೆ ಕಂಡವು. ನಾನು ಕುಳಿತ ಕಲ್ಲಿಗೆ ವಿಪರೀತ ಗುರುತ್ವ ಬಲ ಬಂದಂತೆ ಅದು ನನ್ನನ್ನು ಆಳಕ್ಕೆ ಸೆಳೆಯುತ್ತಲೇ ಇತ್ತು. ನನ್ನ ಮಾಂಸಗಳು ಭಾರಗೊಂಡವು. ಕಣ್ಣ ರೆಪ್ಪೆ ತೆರೆಯಲೂ ಆಗದಷ್ಟು ನಿಶ್ಯಕ್ತಿಯಿಂದ ಬಳಲಿದೆ.
ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಮುದುಕಿ ಬೀಡಿ ಸೇದುತ್ತಿರುವ ಹೊಗೆ ಕಾಣಿಸತೊಡಗಿತು. ಹತ್ತಿರಗೊಳ್ಳುತ್ತಿದ್ದಂತೆ ನಾನು ಎಲ್ಲಿ ಕೂತಿದ್ದೇನೋ ಅಲ್ಲೇ ಕೂತಿದ್ದೆ. ಮುದುಕಿಯ ಬಳಿ ಏನೋ ಮಾಯಾಜಾಲ ಇದೆ ಅನಿಸಿತು. ನನ್ನ ತಾರ್ಕಿಕತೆ ಪವಾಡಗಳನ್ನು ಒಪ್ಪಲು ಹಿಂದೇಟು ಹಾಕುತ್ತಿತ್ತು. ಆಕೆಯನ್ನು ಸಂದೇಹದಿಂದ ನೋಡುತ್ತಿರುವಾಗಲೇ ಆಕೆ ತಣ್ಣನೆ ಮಾತು ಶುರು ಮಾಡಿದಳು.
‘ಎಷ್ಟು ಕತೆ ಓದಿದೆ?’
ಬ್ಯಾರಿಯಲ್ಲಿ ಕೇಳಿದಳು ಮುದುಕಿ.
ತಕ್ಷಣಕ್ಕೆ ಬೆಚ್ಚಿದ ನಾನು ಅಲ್ಲಿಂದ ಎದ್ದು ನಿಲ್ಲಬೇಕೆಂದುಕೊಂಡೆ. ಸಾಧ್ಯವಾಗದಾಗ ಕೂತಲ್ಲಿಂದಲೇ, ‘ದಕ್ಕಿದಷ್ಟು’ ಎಂದೆ.
ಆಕೆಯೇನೂ ಮಾತಾಡಲಿಲ್ಲವಾದರೂ, ಒಂದು ಕ್ಷಣ ನನ್ನನ್ನು ದಿಟ್ಟಿಸಿ, ಮತ್ತೆ ತನ್ನ ಕಾಯಕದಲ್ಲಿ ಮೌನವಾದಳು.
ಕೇಳುವುದೋ ಬೇಡವೋ ಎಂಬ ಹಿಂಜರಿಕೆಯಿಂದಲೇ, ‘ನೀವು?’ ಎಂದು ಕೇಳಿದೆ.
ಇನ್ನೊಂದು ಬೀಡಿಗೆ ಬೆಂಕಿ ಹಚ್ಚಿದ ಆಕೆ ‘ಒಂದೇ’ ಎಂದು ತನ್ನ ಬೆರಳುಗಳಲ್ಲಿಯೇ ಉತ್ತರಿಸಿದಳು.
ಒಗಟಿನಂಥ ಮುದುಕಿ, ರಹಸ್ಯ ಭಾಷೆಯನ್ನು ನನಗೆ ಹೇಳಿಕೊಡುತ್ತಾಳೇನೋ ಎಂದು ಅಲ್ಲಿಯೇ ಕುಳಿತುಕೊಂಡೆ. ಏನನ್ನೂ ಕೇಳಲು ಮನಸ್ಸಾಗದಿದ್ದರೂ ಆಕೆಯೊಡನೆ ಕೂರುವುದು ಒಂದು ಮಜಬೂತಾದ ಅನುಭೂತಿಯಾಗಿ ಆಕೆಯ ಗಾಳದ ದಾರ ಕಡಲಿಗೆ ಇಳಿದಿರುವ ಭಾಗವನ್ನೇ ನೋಡತೊಡಗಿದೆ. ಹೊತ್ತು ಕಳೆಯಿತು. ಬೀಟ್ ಪೊಲೀಸರ ಸೀಟಿ ಸದ್ದಿಗೆ ಪ್ರೇಮಿಗಳು ಎದ್ದುಹೋದರೆ, ಕಲ್ಲಂಗಡಿಯ ಹುಡುಗ ಅಂಗಡಿಯನ್ನು ಮಡಚಿಡಲು ಶುರು ಮಾಡಿದ. ಮಕ್ಕಳೆಲ್ಲವೂ ಒಬ್ಬೊಬ್ಬರಾಗಿ ಕರಗಿ ಹೋಗುತ್ತಿದ್ದುದು ಕಡಲ ನೋಡುತ್ತಲೇ ನನಗೆ ಕಾಣಿಸುತ್ತಿತ್ತು.
ಕಲ್ಲಂಗಡಿಯ ಹುಡುಗ ತನ್ನ ಆಟೋದಲ್ಲಿ ಎಲ್ಲವನ್ನೂ ತುಂಬಿಸಿ ಮುಖ್ಯರಸ್ತೆಗೆ ಇಳಿದು ತನ್ನ ಮನೆಯ ಜಾಡು ಹಿಡಿದ. ಪ್ರೇಮಿಗಳು, ಮಕ್ಕಳು-ಪೋಷಕರು ತಮ್ಮ ತಮ್ಮ ಮನೆಗೆ.. ಮಧ್ಯವಯಸ್ಕ ಕುಡುಕ ಎದ್ದು ಹಳೆಯ ಬಸ್ಸ್ಟಾಂಡಿನ ಪೊದೆಯಂತಿರುವ ಜಾಗದಲ್ಲಿ ಪೇಪರುಗಳನ್ನು ಬಿಡಿಸಿ ಮೈಯೊಡ್ಡಿಕೊಂಡ.
ಮರಳು, ಮರಗಳು ಕಡ ಪಡೆದ ಹೊನ್ನಿನ ಲೇಪಗಳನ್ನು ಮರಳಿಸಿ ರಾತ್ರಿಯ ನೀಲಿ ಬೆಳಕಿಗೆ ಕಾದವು. ಮುದುಕಿ ಕಡಲನ್ನೇ ದಿಟ್ಟಿಸುತ್ತಿದ್ದಾಳೆ. ನಾನೂ.. ಆಕೆ ನನ್ನನ್ನು, ನನ್ನ ಕತೆಯನ್ನು ಓದುತ್ತಿದ್ದಾಳೆ.. ಒಂದೊಂದಾಗಿ ಆಕೆ ಪುಟ ತಿರುವಿದಂತೆ ನನ್ನ ನೆನಪುಗಳು ಎಚ್ಚರಗೊಂಡವು. ಹಿಂದೆಂದೂ ಇಲ್ಲದಂತೆ.. ಆ ನೆನಪುಗಳು ಕೇವಲ ನೆನಪಾಗದೆ, ಅದರ ನೋವು, ಅದರ ಖುಷಿ, ಶೂನ್ಯತೆಗಳನ್ನು ನಾನು ಮತ್ತೊಮ್ಮೆ ಬದುಕುತ್ತಿದ್ದಂತೆ ಅನಿಸಿತು. ನೋವಿನಲ್ಲಿ-ಖುಷಿಯಲ್ಲಿ ಕಣ್ಣೀರು ಹರಿಯಿತು. ಆಕೆ ಓದುತ್ತಿದ್ದಾಳೆ, ಯಾವ ಭಾವವೂ ಇಲ್ಲದೆ. ಆಕೆಯ ಕೈಯಿಂದ ಬೀಡಿ ಪಡೆದಷ್ಟರವರೆಗೆ ನನ್ನ ಬದುಕಿನ ಎಲ್ಲವನ್ನೂ ಆಕೆ ಓದಿಕೊಂಡಳು. ಇದೆಲ್ಲವನ್ನೂ ನಾನು ನೋಡುತ್ತಲೇ ಇದ್ದೆ, ಗಾಳದ ದಾರ ಕಡಲಿಗೆ ಇಳಿಯುತ್ತಿರುವುದನ್ನು ದಿಟ್ಟಿಸುತ್ತಲೇ..
ನಾವು ಬಿಡಿ ಬಿಡಿಯಾಗಿ, ಬೇರೆ ಬೇರೆಯಾಗಿ ನೋಡುವುದನ್ನು ಆಕೆ ನೋಡುತ್ತಲೇ ಇದ್ದಳು ಕೇವಲ ಒಂದಾಗಿ.