ಆಧುನಿಕ ಭಾರತವನ್ನು ರೂಪಿಸಿದ ಸುಪ್ರೀಂ ತೀರ್ಪುಗಳು
ಅಮೆರಿಕ, ಇಂಗ್ಲೆಂಡ್, ಯುರೋಪ್ ಗಳಲ್ಲಿ ಜಾರಿಯಲ್ಲಿರುವ ದಯಾಮರಣದ ಸಂಗತಿಗಳು ಹೆಚ್ಚು ಚರ್ಚೆಗೆ ಬಂದದ್ದೇ ಅರುಣಾರ ಪ್ರಕರಣ ನ್ಯಾಯಾಲಯಕ್ಕೆ ಬಂದ ಮೇಲೆ. ಪಿಂಕಿ ವಿರಾನಿ ಪರೋಕ್ಷ ದಯಾಮರಣದ ಮೂಲಕ ಅರುಣಾರಿಗೆ ಕಾನೂನುಬದ್ಧ ಸಾವಿಗೆ ಅವಕಾಶ ಕಲ್ಪಿಸಿಕೊಟ್ಟು ಆಕೆಯ ನಾಲ್ಕು ದಶಕಗಳ ಯಾತನೆಗೆ ಮುಕ್ತಿಕೊಡಬೇಕು ಎಂದು ಸುಪ್ರೀಂ ಕೋರ್ಟ್ನ ಕದ ಬಡಿದಿದ್ದರು. ಆದರೆ, ಕೆಇಎಮ್ ಆಸ್ಪತ್ರೆಯ ಡೀನರು, ಸಿಬ್ಬಂದಿ ಯಾವ ಕಾರಣಕ್ಕೂ ಅರುಣಾರಿಗೆ ದಯಾಮರಣಕ್ಕೆ ಅವಕಾಶ ನೀಡಬಾರದು ಎಂದು ಪ್ರತಿವಾದಿಗಳಾಗಿ ನ್ಯಾಯಾಲಯದ ಮೊರೆಹೋದರು.
ಇದೇ ನವೆಂಬರ್ 26, 2023ಕ್ಕೆ ಭಾರತ ಸಂವಿಧಾನವು ಜಾರಿಯಾಗಿ ೭೩ ವರ್ಷಗಳಾದವು. ಈ ನೆಪದಲ್ಲಿ ಆಧುನಿಕ ಭಾರತದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಘನತೆ, ಮಾನವ ಹಕ್ಕು ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಈ ದೇಶದ ಘನತೆವೆತ್ತ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳ ಮರುನೋಟವೇ ಈ ಲೇಖನ.
ಪ್ರಕರಣ -1: ಬಿಜೋ ಇಮಾನ್ಯುಯೆಲ್ ಮತ್ತು ಇತರರ
ವಿರುದ್ಧ ಕೇರಳ ರಾಜ್ಯ ಮತ್ತು ಇತರರು (ರಾಷ್ಟ್ರಗೀತೆ ಪ್ರಕರಣ)
ಈ ಘಟನೆ ನಡೆದದ್ದು ೧೯೮೬ರಲ್ಲಿ. ಕೇರಳದ ಶಾಲೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಮೂವರು ಶಾಲಾಮಕ್ಕಳು ಶಾಲೆಯ ಬೆಳಗ್ಗಿನ ರಾಷ್ಟ್ರಗೀತೆಯಾದ ‘ಜನ ಗಣ ಮನ’ವನ್ನು ಹೇಳುವ ಸಂದರ್ಭದಲ್ಲಿ ಎಲ್ಲ ಮಕ್ಕಳಂತೆ ಹೇಳದೆ ಮೌನವಾಗಿದ್ದುದು ಹೆಡ್ ಮಾಸ್ತರರ ಗಮನಕ್ಕೆ ಬಂದಿತು. ಕೂಡಲೇ ಹೆಡ್ ಮಾಸ್ತರರು ಮಕ್ಕಳ ಹೆತ್ತವರನ್ನು ಕರೆಸಿ ಮಕ್ಕಳ ದುರ್ವರ್ತನೆಯನ್ನು ಅವರ ಗಮನಕ್ಕೆ ತಂದರು. ಇದಕ್ಕುತ್ತರವಾಗಿ ಆ ಮಕ್ಕಳ ಹೆತ್ತವರು ‘‘ನಾವು ‘ಯಹೋವನ ಸಾಕ್ಷಿಗಳು’ ಪಂಥಕ್ಕೆ ಸೇರಿದವರಾಗಿದ್ದು, ನಮ್ಮ ಪಂಥದ ಪ್ರಾರ್ಥನೆ, ದೈವಿಕ ಆಚರಣೆಗಳನ್ನು ಬಿಟ್ಟು ಉಳಿದವುಗಳನ್ನು ನಾವು ಆಚರಿಸುವುದಿಲ್ಲ’’ ಎಂದರು. ಪೋಷಕರ ಉತ್ತರದಿಂದ ತೃಪ್ತರಾಗದ ಶಾಲೆಯ ಮುಖ್ಯಸ್ಥರು ಆ ಮೂವರು ಮಕ್ಕಳನ್ನು ರಾಷ್ಟ್ರಗೀತೆಯನ್ನು ಹೇಳದ ಕಾರಣಕ್ಕೆ ಶಾಲೆಯಿಂದ ಅಮಾನತು ಮಾಡಿದರು. ಮಕ್ಕಳ ಪೋಷಕರು ಶಾಲೆಯ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಶಿಕ್ಷಣ ಮಂಡಳಿಯೆದುರು ದೂರು ಕೊಂಡೊಯ್ದರು. ಕೇರಳ ಶಿಕ್ಷಣ ಮಂಡಳಿಯು ಶಾಲೆಯ ನಿರ್ಧಾರವನ್ನು ಎತ್ತಿಹಿಡಿಯಿತಲ್ಲದೆ, ಮಕ್ಕಳನ್ನು ಶಾಶ್ವತವಾಗಿ ಶಾಲೆಯಿಂದ ಅಮಾನತು ಮಾಡಿದ ಆದೇಶವನ್ನು ಹೊರಡಿಸಿತು. ಹಟಬಿಡದ ಮಕ್ಕಳ ಹೆತ್ತವರು ಶಾಲೆ ಮತ್ತು ಕೇರಳ ಶಿಕ್ಷಣ ಮಂಡಳಿಯ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಜಿಲ್ಲಾ ನ್ಯಾಯಾಲಯವು ಮಕ್ಕಳ ವಿರುದ್ಧವಾಗಿಯೇ ತೀರ್ಪು ನೀಡಿತು. ಈ ತೀರ್ಪಿನ ವಿರುದ್ಧ ಮಕ್ಕಳ ಹೆತ್ತವರು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಕೇರಳ ಉಚ್ಚ ನ್ಯಾಯಾಲಯವು ಕೂಡಾ ಜಿಲ್ಲಾ ನ್ಯಾಯಾಲಯದ ತೀರ್ಪನ್ನೇ ಅನುಮೋದಿಸಿತು.
ಕಟ್ಟಕಡೆಗೆ ಆ ಮಕ್ಕಳ ಹೆತ್ತವರು ೨೬ ಜುಲೈ, ೧೯೮೬ರಂದು ಕೇರಳ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ ಸದರಿ ಪ್ರಕರಣವು ಬಂದದ್ದು ನ್ಯಾಯಮೂರ್ತಿಗಳಾದ ಓ.ಚಿನ್ನಪ್ಪ ರೆಡ್ಡಿ ಮತ್ತು ಎಮ್.ಎಮ್. ದತ್ ಅವರಿದ್ದ ದ್ವಿಸದಸ್ಯ ಪೀಠಕ್ಕೆ. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯ ಮೂರ್ತಿಗಳಿಗೆ ಮೇಲ್ನೋಟಕ್ಕೆ ಭಾರತ ಸಂವಿಧಾನದ ಆರ್ಟಿಕಲ್ ೧೯(೧)(ಎ) ಮತ್ತು ಆರ್ಟಿಕಲ್ ೨೫(೧) ಶಾಲೆಯಿಂದ ಉಲ್ಲಂಘನೆಯಾಗಿರುವುದು ಕಂಡುಬಂದಿತು. ಸದರಿ ಆರ್ಟಿಕಲ್ಗಳು ಭಾರತದ ಪ್ರತಿಯೊಬ್ಬ ಪ್ರಜೆಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ತನ್ನಿಚ್ಛೆಯ ಧರ್ಮವನ್ನು ಅವಲಂಬಿಸುವ, ಆಚರಿಸುವ ಮತ್ತು ಪ್ರಚಾರಮಾಡುವ ಹಕ್ಕುಗಳನ್ನು ನೀಡಿವೆ.
ನ್ಯಾಯಮೂರ್ತಿಗಳಾದ ಓ.ಚಿನ್ನಪ್ಪ ರೆಡ್ಡಿಯವರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ದೊಳಗೆ ’ಮೌನವಾಗುಳಿಯುವ ಹಕ್ಕನ್ನು ಕೂಡ ಕೊಡಮಾಡಲ್ಪಟ್ಟಿದೆ. ಸದರಿ ಪ್ರಕರಣದಲ್ಲಿ ಆ ಮೂವರು ಮಕ್ಕಳು ರಾಷ್ಟ್ರಗೀತೆಯನ್ನು ಪ್ರಾರ್ಥಿಸುವ ಸಂದರ್ಭದಲ್ಲಿ ಮೌನವಾಗುಳಿದರೆ ಹೊರತು ರಾಷ್ಟ್ರಗೀತೆಗೆ ಅಗೌರವ ತರುವ ಯಾವುದೇ ಕೃತ್ಯವನ್ನು ಮಾಡಿರುವುದಿಲ್ಲ. ಆ ಮಕ್ಕಳು ಮೌನವಾಗುಳಿದಿರುವುದು ರಾಷ್ಟ್ರಗೀತೆಯ ಪಠಣಕ್ಕೆ ಯಾವುದೇ ಭಂಗ ತಂದಿರುವುದಿಲ್ಲ. ‘ಯಹೋವನ ಸಾಕ್ಷಿಗಳು’ ಪಂಥಕ್ಕೆ ಸೇರಿದ ಈ ಮಕ್ಕಳು ಏಕಕಾಲಕ್ಕೆ ತಮ್ಮ ಧರ್ಮದ ಆಚರಣೆಯೊಂದಿಗೆ ರಾಷ್ಟ್ರಗೀತೆಗೂ ಗೌರವ ತೋರಿದ್ದಾರೆ ಎಂದು ಹೇಳಿದರು. ಅಂತಿಮವಾಗಿ ಇಬ್ಬರು ನ್ಯಾಯಮೂರ್ತಿಗಳು ಮಕ್ಕಳ ಪರವಾಗಿ ತೀರ್ಪು ನೀಡಿ, ಮಕ್ಕಳ ಮೇಲಿನ ಅಮಾನತು ಆದೇಶವನ್ನು ರದ್ದುಮಾಡಿ ಶಾಲೆಯಲ್ಲಿ ಎಂದಿನಂತೆ ಶಾಲಾ ಆಡಳಿತ ಮಂಡಳಿಯು ಕಲಿಕೆಗೆ ಅವಕಾಶ ಕಲ್ಪಿಸುವ ಆದೇಶ ನೀಡಿತು.
(ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಅವಲಂಬನೆ, ಆಚರಣೆ, ಪ್ರಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿದ ಅತ್ಯಂತ ಮಹತ್ವದ ತೀರ್ಪು ಇದಾಗಿದೆ.)
ಪ್ರಕರಣ -2: ತುಕಾರಾಮ್ ಮತ್ತು ಇತರರ ವಿರುದ್ಧ ಮಹಾರಾಷ್ಟ್ರ ರಾಜ್ಯ (ಮಥುರಾ ಅತ್ಯಾಚಾರ ಪ್ರಕರಣ)
ಈ ಪ್ರಕರಣ ನಡೆದದ್ದು ಮಹಾರಾಷ್ಟ್ರದ ದೇಶಿಗಂಜ್ ಎಂಬ ಸಣ್ಣ ಪ್ರದೇಶದಲ್ಲಿ. ಈ ಪ್ರಕರಣದ ಕೇಂದ್ರ ವ್ಯಕ್ತಿ ಹದಿನಾರರ ಬಾಲಕಿ ಮಥುರಾ. ಮಥುರಾ ತನ್ನ ಊರು ದೇಶಿಗಂಜ್ ಸ್ಥಳೀಯ ಯುವಕನೊಂದಿಗೆ ಸಲುಗೆಯಿಂದಿರುವುದನ್ನು ಅನೇಕರು ಕಂಡು ಆ ಯುವಕನ ಮನೆಗೆ ಸುದ್ದಿ ಮುಟ್ಟಿಸಿದರು. ಆ ಹುಡುಗನ ಅಕ್ಕ ತನ್ನ ತಮ್ಮನನ್ನು ಕೇಳಲಾಗಿ ಆತ ತಾನು ಮಥುರಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದನು. ಇದರಿಂದ ಕ್ರುದ್ಧಳಾದ ಆ ಹುಡುಗನ ಅಕ್ಕ ಮಥುರಾಳನ್ನು ಕರೆಸಿ ಬೈದು ತನ್ನ ತಮ್ಮನಿಂದ ದೂರವಿರುವಂತೆ ಎಚ್ಚರಿಕೆ ಕೊಟ್ಟು ಕಳಿಸಿದಳು. ಆದರೆ, ಇದು ಯಾವುದಕ್ಕೂ ಆ ಇಬ್ಬರು ಪ್ರೇಮಿಗಳು ಬಗ್ಗುವುದಿಲ್ಲ. ಕೊನೆಗೆ ಆ ಹುಡುಗನ ಅಕ್ಕ ಮಥುರಾಳ ಮೇಲೆ ಕಳ್ಳತನದ ಆರೋಪ ಹೊರಿಸಿ ಚಂದ್ರಾಪುರ ಜಿಲ್ಲೆಯ ದೇಶಿಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದಳು.
ಪೊಲೀಸರ ಕರೆಯ ಮೇರೆಗೆ ತನಿಖೆಯ ಸಲುವಾಗಿ ಮಥುರಾ ತನ್ನ ಕುಟುಂಬದ ಸದಸ್ಯರೊಂದಿಗೆ ದೇಶಿಗಂಜ್ ಪೊಲೀಸ್ ಠಾಣೆಗೆ ಹೋದಳು. ಮೊದಮೊದಲು ಕಳ್ಳತನದ ಆರೋಪದ ದೂರಿನ ಮೇಲೆ ಮಥುರಾಳನ್ನು ಬೆದರಿಸುವ ಪೊಲೀಸರು, ಆಕೆಯ ಪ್ರೇಮದ ವಿಚಾರವನ್ನು ತಿಳಿದು ಬೇರೆಯೇ ನಾಟಕ ಮಾಡಲು ಶುರುಮಾಡಿದರು. ತಮ್ಮೊಂದಿಗೆ ಲೈಂಗಿಕವಾಗಿ ಸಹಕರಿಸಿದರೆ, ಇವತ್ತೇ ಆಕೆಯ ಗೆಳೆಯನೊಂದಿಗೆ ಠಾಣೆಯಲ್ಲೇ ಮದುವೆ ಮಾಡಿಸುವುದಾಗಿ ತುಕರಾಮ್ ಮತ್ತು ಗಣಪತ್ ಎಂಬಿಬ್ಬರು ಪೊಲೀಸ್ ಪೇದೆಗಳು ಮಥುರಾಗೆ ಆಮಿಷ ಒಡ್ಡಿದರು. ಆ ಆಮಿಷಕ್ಕೆ ಬಲಿಯಾದ ಮಥುರಾ ಠಾಣೆಯಲ್ಲೇ ಪೊಲೀಸರ ‘ಸಮ್ಮತಿ ನೀಡಿಕೆ’ಯ ಅತ್ಯಾಚಾರಕ್ಕೆ ತುತ್ತಾದಳು. ಠಾಣೆಯ ಹೊರಗಿದ್ದ ಆಕೆಯ ಕುಟುಂಬದ ಮಂದಿ ಒಳಗಿನ ಅತ್ಯಾಚಾರವನ್ನು ಕಂಡಕೂಡಲೇ ಇಡೀ ಠಾಣೆಯನ್ನೇ ಛಿದ್ರಮಾಡಿದರು. ನಂತರ ಸದರಿ ಪ್ರಕರಣವು ಚಂದ್ರಾರ್ಪು ಜಿಲ್ಲಾ ಸೆಷನ್ ನ್ಯಾಯಾಲಯಕ್ಕೆ ಬಂದಿತು. ಸದರಿ ಜಿಲ್ಲಾ ನ್ಯಾಯಾಲಯ ಹಾಗೂ ಮಹಾರಾಷ್ಟ್ರ ಉಚ್ಚ ನ್ಯಾಯಾಲಯಗಳೆರಡು ಮಥುರಾ ಪರವಾಗಿಯೇ ತೀರ್ಪು ನೀಡಿತು. ಈ ತೀರ್ಪನ್ನು ಪ್ರಶ್ನಿಸಿ ಅತ್ಯಾಚಾರಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.
ಆದರೆ, ತನ್ನ ಮೇಲೆ ಅತ್ಯಾಚಾರವಾಗುವ ಸಂದರ್ಭದಲ್ಲಿ ಹದಿನಾರರ ಬಾಲಕಿ ಮಥುರಾ ಅತ್ತು ಕೂಗಿ ಕಿರುಚಿಕೊಳ್ಳದಿರುವುದು ಮತ್ತು ಆಕೆಯ ಮೈಮೇಲೆ ಸಣ್ಣದೊಂದು ತರಚು ಗಾಯವು ಆಗದಿರುವುದು ಅತ್ಯಾಚಾರವೆನ್ನಿಸಿಕೊಳ್ಳುವುದಿಲ್ಲ’ ಎಂದು ತೀರ್ಮಾನಿಸಿ ಆಕೆಯ ಮೇಲೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಎಸಗಿದ ಇಬ್ಬರು ಪೊಲೀಸರನ್ನು ಸುಪ್ರೀಮ್ ಕೋರ್ಟ್ ಖುಲಾಸೆ ಮಾಡಿತು.
ಸದರಿ ಪ್ರಕರಣದ ತೀರ್ಪನ್ನು ಖಂಡಿಸಿ ದಿಲ್ಲಿ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿಗಳು ಹಾಗೂ ಕಾನೂನು ಪ್ರಾಧ್ಯಾಪಕರಾದ ಉಪೇಂದ್ರ ಬಗ್ಗೆ, ರಘುನಾಥ್ ಕೇಲ್ಕರ್, ಲೋತಿಕಾ ಸರಕಾರ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದರು. ಮುಖ್ಯ ನ್ಯಾಯಮೂರ್ತಿಗಳು ತೀರ್ಪು ಮರುಪರಿಶೀಲಿಸಿದ್ದಲ್ಲದೆ, ಅತ್ಯಾಚಾರಕ್ಕೆ ಸಂಬಂಧಿಸಿದ ೧೯೮೩ರ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಗೆ ಹತ್ತಾರು ತಿದ್ದುಪಡಿ ರೂಪದ ಸರ್ಜರಿಗಳಾಗುವಂತೆ ನೋಡಿಕೊಂಡರು.
ಅತ್ಯಾಚಾರಕ್ಕೆ ಸಹಕರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ ಹೆಣ್ಣೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಹಗುರವಾಗಿ ನೋಡುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಪಟ್ಟಭದ್ರ ಶಕ್ತಿಗಳು ಭಯಭೀತ ಸ್ಥಿತಿ ಹಾಗೂ ಪ್ರತಿಕೂಲ ಸಂದರ್ಭಗಳನ್ನು ಸೃಷ್ಟಿಸಿ ಎಸಗಿದ ಲೈಂಗಿಕ ದೌರ್ಜನ್ಯಗಳನ್ನು ಅತ್ಯಾಚಾರವೆಂದೇ ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಭಾರತದ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಗೆ ಹೊಸ ವಿವೇಚನೆ ನೀಡಿದರು. ಸುಪ್ರೀಮ್ ಕೋರ್ಟ್ ಕೂಡ ದಿಕ್ಕುತಪ್ಪಬಲ್ಲದು ಎಂಬುದನ್ನು ದೊಡ್ಡಮಟ್ಟದಲ್ಲಿ ತೋರಿದ ಪ್ರಕರಣವಿದು.
ಪ್ರಕರಣ -3: ಲಕ್ಷ್ಮಿ ವಿರುದ್ಧ ಭಾರತದ ಒಕ್ಕೂಟ
ಭೀಕರ ಆ್ಯಸಿಡ್ ದಾಳಿಗೆ ತುತ್ತಾಗಿ, ಸತ್ತು ಬದುಕಿ ಜರ್ಜರಗೊಂಡ ಹದಿನೈದು ವರ್ಷ ವಯಸ್ಸಿನ ಬಾಲಕಿಯೊಬ್ಬಳು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯ ಮೂಲಕ ಸುಪ್ರೀಮ್ ಕೋರ್ಟ್ನ ಕದ ಬಡಿದ ಪ್ರಕರಣವಿದು.
ಹತ್ತನೇ ತರಗತಿಗೆ ಆಗಷ್ಟೇ ಕಾಲಿಟ್ಟಿದ್ದ ವಿದ್ಯಾರ್ಥಿನಿ ಲಕ್ಷ್ಮಿಗೆ ೩೨ರ ಹರೆಯದ ಸ್ಥಳೀಯ ಪುಂಡನೊಬ್ಬನಿಂದ ನಿತ್ಯ ತನ್ನ ಪ್ರೀತಿಯನ್ನು ಒಪ್ಪಲೇಬೇಕೆನ್ನುವ ಒತ್ತಾಯದ ಮಾನಸಿಕ ಕಿರುಕುಳ ಶುರುವಾಗತೊಡಗಿದವು. ಮೊದಮೊದಲು ಈ ಆರಂಭಿಕ ಹಂತದ ಮಾನಸಿಕ ಕಿರುಕುಳವನ್ನು ಸಹಿಸಿಕೊಂಡು ಹೇಗೋ ಶಾಲೆಗೆ ಹೋಗುತ್ತಿದ್ದ ಲಕ್ಷ್ಮಿಗೆ ಆ ಪುಂಡನಿಂದ ದೈಹಿಕ ಕಿರುಕುಳಗಳು ಹಾಗೂ ಹೊಸಬಗೆಯ ವಿಕೃತಿಗಳು ದಾಳಿಮಾಡಲು ಶುರುವಾದವು. ೨೦೧೩ರ ಒಂದು ನತದೃಷ್ಟ ದಿನ ಆ ಪುಂಡ ಯುವಕ ಲಕ್ಷ್ಮಿಯ ಮೇಲೆ ಲೀಟರುಗಟ್ಟಲೇ ಆ್ಯಸಿಡ್ ಸುರಿದು ಪರಾರಿಯಾಗಿದ್ದ. ಈ ಭೀಕರ ಆ್ಯಸಿಡ್ ದಾಳಿಗೆ ಸಿಕ್ಕಿ ದಗ್ಧಗೊಂಡ ಲಕ್ಷ್ಮಿ ಬದುಕುಳಿದದ್ದೇ ಹೆಚ್ಚು. ಈ ಆ್ಯಸಿಡ್ ದಾಳಿಯಿಂದ ಲಕ್ಷ್ಮಿ ದೈಹಿಕವಾಗಿಯೂ ಮಾನಸಿಕವಾಗಿಯೂ ಸುಟ್ಟುಹೋದಳು.
ಅತ್ಯಾಚಾರಕ್ಕೆ ಸಹಕರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ ಹೆಣ್ಣೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಹಗುರವಾಗಿ ನೋಡುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಪಟ್ಟಭದ್ರ ಶಕ್ತಿಗಳು ಭಯಭೀತ ಸ್ಥಿತಿ ಹಾಗೂ ಪ್ರತಿಕೂಲ ಸಂದರ್ಭಗಳನ್ನು ಸೃಷ್ಟಿಸಿ ಎಸಗಿದ ಲೈಂಗಿಕ ದೌರ್ಜನ್ಯಗಳನ್ನು ಅತ್ಯಾಚಾರವೆಂದೇ ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಭಾರತದ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಗೆ ಹೊಸ ವಿವೇಚನೆ ನೀಡಿದರು. ಸುಪ್ರೀಂ ಕೋರ್ಟ್ ಕೂಡ ದಿಕ್ಕುತಪ್ಪಬಲ್ಲದು ಎಂಬುದನ್ನು ದೊಡ್ಡಮಟ್ಟದಲ್ಲಿ ತೋರಿದ ಪ್ರಕರಣವಿದು.
ತನ್ನ ದುರಂತ ಬದುಕಿನ ಮುಖದೊಂದಿಗೆ ಲಕ್ಷ್ಮಿ ಸುಪ್ರೀಮ್ ಕೋರ್ಟ್ನಲ್ಲಿ ಒಂದಷ್ಟು ಪ್ರಶ್ನೆಗಳೊಂದಿಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿದಳು:
- ಆ್ಯಸಿಡ್ ದಾಳಿಯಂತಹ ಬರ್ಬರ ಕೃತ್ಯಕ್ಕೆ ಈಗ ಜಾರಿಯಲ್ಲಿರುವ ಬರಿಯ ಹತ್ತು ವರ್ಷಗಳ ಶಿಕ್ಷೆ ಸರಿಯೇ?
- ಕ್ರಿಮಿನಲ್ಗಳಿಗೆ, ರೂಢಿಗತ ಅಪರಾಧಿಗಳಿಗೆ ಇಷ್ಟು ಸುಲಭವಾಗಿ ಆ್ಯಸಿಡ್ ದೊರಕುತ್ತಿದೆಯಲ್ಲ, ಇದರ ಮೇಲೆ ಯಾವುದೇ ನಿಯಂತ್ರಣ ಹೇರಲು ಸಾಧ್ಯವಿಲ್ಲವೇ?
- ಸಂಪೂರ್ಣವಾಗಿ ಆ್ಯಸಿಡ್ ಮಾರಾಟವನ್ನು ನಿಷೇಧಮಾಡಲು ಸಾಧ್ಯವಿಲ್ಲವೇ?
- ಆ್ಯಸಿಡ್ ದಾಳಿಗೆ ಸಿಲುಕಿ ಬದುಕುಳಿದ ಬಲಿಪಶುಗಳಿಗೆ ಸರಿಯಾದದ್ದೊಂದು ಸಾಂತ್ವನ ಕೇಂದ್ರವೇ ಈ ದೇಶದಲ್ಲಿ ಇಲ್ಲವಲ್ಲ ಯಾಕೇ?
- ಆ್ಯಸಿಡ್ ದಾಳಿ ಎಸಗಿದ ಅಪರಾಧಿಗಳಿಗೆ ಮರಣದಂಡನೆಯಂತಹ ಶಿಕ್ಷೆ ವಿಧಿಸ ಬಾರದೇಕೇ?
- ಆ್ಯಸಿಡ್ ದಾಳಿಗೆ ತುತ್ತಾದ ಸಂದರ್ಭ ಹಾಗೂ ನಂತರದ ದಿನಗಳ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರಕಾರವೇ ನೋಡಿಕೊಳ್ಳಬೇಕಲ್ಲವೇ?
- ಆ್ಯಸಿಡ್ ದಾಳಿಗೆ ಸಿಕ್ಕಿ ನೊಂದ ಲಕ್ಷ್ಮಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹಾಗೂ ಆಕೆ ಕೇಳಿದ ಪ್ರಶ್ನೆಗಳು ಸುಪ್ರೀಮ್ ಕೋರ್ಟ್ನಲ್ಲಿ ದೊಡ್ಡ ತಲ್ಲಣ ವನ್ನು ಉಂಟುಮಾಡಿತ್ತು. ಇದರಿಂದಾಗಿ ೧೮೬೦ರ ಭಾರತ ದಂಡ ಸಂಹಿತೆಗೆ ತುರ್ತಿನ ತಿದ್ದುಪಡಿಗಳಾದವು:
- ಕಲಂ 326 ಅ ಹೊಸದಾಗಿ ಸೇರ್ಪಡೆಗೊಂಡಿತು.
- ಶಿಕ್ಷೆಯ ಅವಧಿ ಹತ್ತು ವರ್ಷಗಳಿಂದ ಜೀವಾವಧಿಗೆ ವಿಸ್ತರಿಸಿತು.
- ಆ್ಯಸಿಡ್ ದಾಳಿಗೆ ತುತ್ತಾದ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಆರೋಪಿ/ಅಪರಾಧಿಯೇ ಭರಿಸಬೇಕು.
- ಆ್ಯಸಿಡ್ ದಾಳಿಗೆ ತುತ್ತಾದ ವ್ಯಕ್ತಿ ಒಂದೊಮ್ಮೆ ಮರಣ ಹೊಂದಿದರೆ, ಶಿಕ್ಷೆಯನ್ನು ಜೀವಾವಧಿಯಿಂದ ಮರಣದಂಡನೆಗೂ ಗುರಿಯಾಗಿಸಬಹುದು.
- ಆ್ಯಸಿಡ್ ಕೊಳ್ಳುವ-ಮಾರುವವರ ಮೇಲೆ ಕೇಂದ್ರ/ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ನಿಗಾವಹಿಸುವುದು.
- 1860ರ ಭಾರತ ದಂಡ ಸಂಹಿತೆಯ ಕಲಂ 320 ರಲ್ಲಿ ಆ್ಯಸಿಡ್ ದಾಳಿಯಿಂದ ಉಂಟಾದ ಕೃತ್ಯಗಳನ್ನು ತೀವ್ರಗಾಯವೆಂದೇ ಪರಿಗಣಿಸುವುದು.
ಪ್ರಕರಣ -4: ಅರುಣಾ ರಾಮಚಂದ್ರ ಶಾನಭಾಗವಿರುವ ಭಾರತದ ಒಕ್ಕೂಟ ಮತ್ತು ಇತರರು
ಅರುಣಾ ರಾಮಚಂದ್ರ ಶಾನಭಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹಳದಿಪುರ ದವರು. ೨೫ ನವೆಂಬರ್ ೧೯೭೩ರಂದು, ಮುಂಬೈನ ಪರೇಲ್ನ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಮ್) ಆಸ್ಪತ್ರೆಯಲ್ಲಿ ಅರುಣಾ ಜೂನಿಯರ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ, ಸೋಹನ್ ಲಾಲ್ ಎಂಬ ಯುವ ವಾರ್ಡ್ ಬಾಯ್ನಿಂದ ತೀವ್ರವಾದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದರು. ಅರುಣಾ ಅವರನ್ನು ಅತ್ಯಾಚಾರ ಮಾಡುವ ಸಂದರ್ಭದಲ್ಲಿ ಸೋಹನ್ ಲಾಲ್ ಅವರ ಕುತ್ತಿಗೆಗೆ ನಾಯಿ ಕತ್ತಿಗೆ ಹಾಕುವ ಚೈನನ್ನು ಬಿಗಿಯಾಗಿ ಕಟ್ಟಿ ಅತ್ಯಾಚಾರವೆಸಗಿದ್ದನು. ಈ ಬರ್ಬರ ಅತ್ಯಾಚಾರದಿಂದಾಗಿ ಮತ್ತು ಕತ್ತಿಗೆ ಬಿಗಿಯಾದ ಚೈನ್ ಕಟ್ಟಲ್ಪಟ್ಟಿದ್ದರಿಂದಾಗಿ ಅರುಣಾ ಅವರ ಮೆದುಳಿಗೆ ಆಕ್ಸಿಜನ್ ತಲುಪದೆ ಮೆದುಳು ನಿಷ್ಕ್ರಿಯಗೊಂಡು ಅವರು cervical cord injury, brain stem contusion ಮತ್ತು cortical blindnessಗೂ ತುತ್ತಾದರು. ಈ ಸಂದರ್ಭದಲ್ಲಿ ಅರುಣಾ ಅವರಿಗೆ ೨೫ ವರ್ಷಗಳಾಗಿದ್ದು, ಕೆಇಎಮ್ ಆಸ್ಪತ್ರೆಯ ವೈದ್ಯರೊಬ್ಬರೊಂದಿಗೆ ನಿಶ್ಚಿತಾರ್ಥ ಕೂಡ ಆಗಿತ್ತು.
ಮರುದಿನ
ಬೆಳಗ್ಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅರುಣಾರ ಸ್ಥಿತಿಕಂಡು ಆಸ್ಪತ್ರೆಯ ಇತರ ಸಿಬ್ಬಂದಿಗೂ ಹಾಗೂ ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದರು. ನ್ಯಾಯಾಲಯಕ್ಕೆ ಅರುಣಾರ ಮೇಲಿನ ಅತ್ಯಾಚಾರದ ಯಾವ ಕುರುಹುಗಳು, ಸಾಕ್ಷ್ಯಾಧಾರಗಳು ಸಿಗದೆ ಸೋಹನ್ ಲಾಲನನ್ನು ಹಲ್ಲೆ, ಆಕ್ರಮಣ, ದರೋಡೆ ನಡೆಸಿದ್ದಕ್ಕೆ ಕೇವಲ ಏಳು ವರ್ಷಗಳ ಶಿಕ್ಷೆಗಷ್ಟೇ ಗುರಿಪಡಿಸಲಾಯಿತು.
ಅರುಣಾ ಒಟ್ಟು ೪೨ ವರ್ಷಗಳ ಕಾಲ ವೆಜಿಟೇಟಿವ್ ಸ್ಥಿತಿ ತಲುಪಿ ಕೆಇಎಮ್ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದರು. ಅರುಣಾ ತಮ್ಮ ೬೧ನೆಯ ವಯಸ್ಸಿನಲ್ಲಿ ಕೋಮಾದಲ್ಲಿದ್ದಾಗ ಅವರ ಕುರಿತು ಲೇಖಕಿ ಪಿಂಕಿ ವಿರಾನಿ ಪುಸ್ತಕವೊಂದನ್ನು ಹೊರತಂದರು. ಮುಂದೆ ಇದೇ ಪಿಂಕಿ ವಿರಾನಿ ಅರುಣಾರಿಗೆ ಕಾನೂನುಬದ್ಧವಾಗಿ ದಯಾಮರಣ ನೀಡುವಂತೆ ನ್ಯಾಯಾಲಯದ ಮೊರೆಹೋದರು.
ಅಮೆರಿಕ, ಇಂಗ್ಲೆಂಡ್, ಯುರೋಪ್ಗಳಲ್ಲಿ ಜಾರಿಯಲ್ಲಿರುವ ದಯಾಮರಣದ ಸಂಗತಿಗಳು ಹೆಚ್ಚು ಚರ್ಚೆಗೆ ಬಂದದ್ದೇ ಅರುಣಾರ ಪ್ರಕರಣ ನ್ಯಾಯಾಲಯಕ್ಕೆ ಬಂದ ಮೇಲೆಯೇ. ಪಿಂಕಿ ವಿರಾನಿ ಪರೋಕ್ಷ ದಯಾಮರಣದ ಮೂಲಕ ಅರುಣಾರಿಗೆ ಕಾನೂನುಬದ್ಧ ಸಾವಿಗೆ ಅವಕಾಶ ಕಲ್ಪಿಸಿಕೊಟ್ಟು ಆಕೆಯ ನಾಲ್ಕು ದಶಕಗಳ ಯಾತನೆಗೆ ಮುಕ್ತಿಕೊಡಬೇಕು ಎಂದು ಸುಪ್ರೀಮ್ ಕೋರ್ಟ್ನ ಕದ ಬಡಿದಿದ್ದರು. ಆದರೆ, ಕೆಇಎಮ್ ಆಸ್ಪತ್ರೆಯ ಡೀನರು, ಸಿಬ್ಬಂದಿ ಯಾವ ಕಾರಣಕ್ಕೂ ಅರುಣಾರಿಗೆ ದಯಾಮರಣಕ್ಕೆ ಅವಕಾಶ ನೀಡಬಾರದು ಎಂದು ಪ್ರತಿವಾದಿಗಳಾಗಿ ನ್ಯಾಯಾಲಯದ ಮೊರೆಹೋದರು. ಅರುಣಾರ ಆರೈಕೆ, ಮುತುವರ್ಜಿಯ ವಿಚಾರದಲ್ಲಿ ಇಡೀ ಆಸ್ಪತ್ರೆಯೇ ಅವರ ಬೆನ್ನಿಗೆ ನಿಂತಿದೆ. ಆಸ್ಪತ್ರೆಯ ದಾದಿಯರು, ವೈದ್ಯರು ಪಾಳಿಯಲ್ಲಿ ಅರುಣಾರ ಆರೈಕೆ ಮಾಡುತ್ತಿದ್ದಾರೆ. ಅರುಣಾರ ಆರೈಕೆಯ ವಿಚಾರದಲ್ಲಿ ಯಾರಿಗೂ ಹೊರೆ ಅನ್ನಿಸಿಲ್ಲ. ಹೀಗಿರುವಾಗ ಪಿಂಕಿ ವಿರಾನಿಯವರ ದಯಾಮರಣದ ವಾದವೇ ಅಸಮಂಜಸ ಮತ್ತು ಅಸಾಂವಿಧಾನಿಕ ಎಂದು ಹೇಳಿದರು.
ಸದರಿ ಪ್ರಕರಣದ ನ್ಯಾಯಾಧೀಶರಾಗಿದ್ದವರು ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಾಟ್ಜು ಮತ್ತು ಗ್ಯಾನ್ ಸುಧಾ ಮಿಶ್ರಾ ‘ಭಾರತ ಸಂವಿಧಾನದ ಆರ್ಟಿಕಲ್ ೨೧ ವ್ಯಕ್ತಿಯೊಬ್ಬನ ಜೀವಿಸುವ ಹಾಗೂ ವ್ಯಕ್ತಿಗತ ಸ್ವಾತಂತ್ರ್ಯದ ಹಕ್ಕುಗಳ ಕುರಿತು ವಿವೇಚಿಸುತ್ತದೆ. ನಮ್ಮ ಸಂವಿಧಾನವು ಜೀವಿಸುವ ಹಕ್ಕುಗಳನ್ನು ಅನುಮೋದಿಸುತ್ತದೆಯೇ ಹೊರತು ಸಾಯುವ ಹಕ್ಕುಗಳನ್ನಲ್ಲ. ಇದಲ್ಲದೆ ಭಾರತೀಯ ದಂಡ ಸಂಹಿತೆಯ ಕಲಂ ೩೦೬ ಆತ್ಮಹತ್ಯೆಗೆ ಪ್ರಚೋದನೆ ನೀಡುವ, ಕಲಂ ೩೦೯ ಆತ್ಮಹತ್ಯೆಗೆ ಪ್ರಯತ್ನಿಸುವ ಕೃತ್ಯಗಳು ಶಿಕ್ಷಾರ್ಹ ಎನ್ನುತ್ತದೆ. ನೇರ ಅಥವಾ ಪರೋಕ್ಷ ದಯಾಮರಣದಿಂದ ವ್ಯಕ್ತಿಯೊಬ್ಬನ ಜೀವ ತೆಗೆಯುವುದು ಅಮಾನವೀಯ ಮತ್ತು ಸಂವಿಧಾನ ವಿರೋಧಿ ಕೃತ್ಯ..’ ಎಂದು ಈ ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
(ಆರುಣಾ ಶಾನಭಾಗರ ಪರವಾಗಿ ಲೇಖಕಿ ಪಿಂಕಿ ವಿರಾನಿಯವರು ದಯಾಮರಣ ಕೋರಿ ಸುಪ್ರೀಮ್ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಯಿತು. ಅರುಣಾ ಅವರು ೨೦೧೫ರಲ್ಲಿ ತಮ್ಮ ೬೭ನೆಯ ವಯಸ್ಸಿನಲ್ಲಿ ಮಹಾರಾಷ್ಟ್ರದ ಕೆಇಎಮ್ ಆಸ್ಪತ್ರೆಯಲ್ಲಿ ನಿಧನರಾದರು.)
ಪ್ರಕರಣ -5: ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್ ಮತ್ತು ಇತರರ ವಿರುದ್ಧ
ಕೇರಳ ರಾಜ್ಯ ಮತ್ತು ಇತರರು ಕೇರಳದ ಪಥನಮ್ತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದ್ದು, ಇದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ಭಕ್ತಾದಿಗಳನ್ನು ಹೊಂದಿದೆ. ಸದರಿ ದೇವಸ್ಥಾನದ ಆಡಳಿತ ಮಂಡಳಿಯು ಮುಟ್ಟು ಮೈಲಿಗೆಯ ಕಾರಣ ಒಡ್ಡಿ ಮಹಿಳೆಯರಿಗೆ ಪ್ರವೇಶವನ್ನು ಅನೇಕ ವರ್ಷಗಳಿಂದ ನಿರಾಕರಿಸುತ್ತಾ ಬಂದಿದೆ. ದೇವಸ್ಥಾನದ ಆಡಳಿತ ಮಂಡಳಿಯ ಈ ನಡೆಯನ್ನು ಅಮಾನವೀಯ ಎಂದು ಪರಿಗಣಿಸಿ ಕೇರಳದ ಐವರು ಮಹಿಳಾ ವಕೀಲರು ಅನೇಕ ಮಹಿಳಾ ಹೋರಾಟಗಾರರೊಂದಿಗೆ ದೇವಸ್ಥಾನ ಪ್ರವೇಶಿಸಲು ಮುಂದಾದರು. ಈ ಸಂದರ್ಭದಲ್ಲಿ ಅವರ ಮೇಲೆ ದೇವಸ್ಥಾನದ ಆಡಳಿತ ಮಂಡಳಿಯ ಅನೇಕರು ಹಲ್ಲೆ ನಡೆಸಿದರು. ದೈಹಿಕ, ಮಾನಸಿಕ ಕಿರುಕುಳಕ್ಕೂ ಅವರು ಮುಂದಾದರು. ಈ ಸಂದರ್ಭದಲ್ಲಿ ಕೇರಳದ ರಾಜ್ಯ ಸರಕಾರವು ಕೂಡಾ ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿಯೇ ನಿಂತು ನೇರ ತನ್ನ ಸ್ತ್ರೀವಿರೋಧಿ ಧೋರಣೆಯನ್ನು ದೊಡ್ಡಮಟ್ಟದಲ್ಲಿಯೇ ತೋರಿತು.
ಮುಟ್ಟು ಎಂಬುದು ಹೆಣ್ಣಿನ ದೈಹಿಕ ರಚನೆಯ ಮೇಲೆ ನಿಂತಿರುವ ಬಯೋಲಾಜಿಕಲ್ ಫ್ಯಾಕ್ಟರ್ ಆಗಿದೆ. ಹೆಣ್ಣಿನ ದೇಹ ಪ್ರಕೃತಿ ಹಾಗೂ ಶಾರೀರಿಕ ಬೆಳವಣಿಗೆಯ ಆಧಾರದ ಮೇಲೆ ಹೆಣ್ಣಿನ ಮುಟ್ಟನ್ನು ವೈಜ್ಞಾನಿಕವಾಗಿ ನೋಡಬೇಕು. ಇನ್ನೂ ಮಡಿ ಮೈಲಿಗೆಯ ಕಾರಣದ ಮೇಲೆ ಹೆಣ್ಣಿನ ದೇವಸ್ಥಾನ ಪ್ರವೇಶವನ್ನು ನಿರಾಕರಿಸುವುದು ಲಿಂಗ ತಾರತಮ್ಯವಲ್ಲದೇ ಮತ್ತೇನೂ ಅಲ್ಲ. ಮಡಿ ಮೈಲಿಗೆಗೆ ಮನ್ನಣೆ ನೀಡುವುದಾದರೆ ಭಾರತದ ಒಂದೇ ಒಂದು ದೇವಸ್ಥಾನಕ್ಕೂ ಯಾವ ಹೆಣ್ಣು ಪ್ರವೇಶ ಪಡೆಯಲಾರಳು.
ಮುಟ್ಟು ಮೈಲಿಗೆ ಹಾಗೂ ಹೆಣ್ತನದ ಕಾರಣವೊಡ್ಡಿ ದೇವಾಲಯ ಪ್ರವೇಶಕ್ಕೆ ತಡೆಯೊಡ್ಡುವುದು ಅಮಾನವೀಯ ಹಾಗೂ ಆಸಾಂವಿಧಾನಿಕ ಎಂದು ಪರಿಭಾವಿಸಿದ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್ನ ವಕೀಲರು ಕೇರಳ ರಾಜ್ಯ ಸರಕಾರದ ವಿರುದ್ಧ ಸುಪ್ರೀಮ್ ಕೋರ್ಟ್ನಲ್ಲಿ ದಾವೆ ಹೂಡಿದರು.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಆರ್.ಎಫ್. ನಾರಿಮನ್, ಡಿ.ವೈ.ಚಂದ್ರಚೂಡ್, ಎ.ಎ.ಖಾನ್ವಿಲ್ಕರ್, ಇಂದೂ ಮಲ್ಹೋತ್ರಾರನ್ನು ಒಳಗೊಂಡ ಸುಪ್ರೀಮ್ ಕೋರ್ಟ್ನ ಪಂಚ ಸದಸ್ಯ ಪೀಠವು ತನ್ನ ಅಂತಿಮ ನಿರ್ಣಯವನ್ನು ನೀಡಿತು. ಈ ಐವರು ನ್ಯಾಯಾಧೀಶರಲ್ಲಿ ನಾಲ್ಕು ಮಂದಿ ಮಹಿಳೆಯರ ದೇವಸ್ಥಾನ ಪ್ರವೇಶದ ಪರವಾಗಿದ್ದರೆ, ಒಬ್ಬರು ವಿರುದ್ಧವಾಗಿದ್ದರು. ಆ ತೀರ್ಪಿನ ಸಾರ ಹೀಗಿದೆ:
ಹೆಣ್ಣು, ಹೆಣ್ತನ, ಮುಟ್ಟು, ಮೈಲಿಗೆಯ ಕಾರಣದ ಮೇಲೆ ಮಹಿಳೆಯರ ದೇವಸ್ಥಾನ ಪ್ರವೇಶವನ್ನು ನಿರಾಕರಿಸುವುದು ಭಾರತ ಸಂವಿಧಾನದ ಆರ್ಟಿಕಲ್ಗಳಾದ ೧೪, ೧೫, ೧೯(೧), ೨೧, ೨೫, ೨೫(೧) ಮತ್ತು ೨೬ರ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರತಿವಾದಿಗಳಾದ ಕೇರಳ ರಾಜ್ಯ ಸರಕಾರ ಹಾಗೂ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯು ೧೯೬೫ರ ಕೇರಳ ಹಿಂದೂ ಪ್ಲೇಸ್ ಆಫ್ ಪಬ್ಲಿಕ್ ವರ್ಷಿಪ್ ಕಾಯ್ದೆಯ ಆಧಾರದ ಮೇಲೆ ಮಹಿಳೆಯರ ದೇವಸ್ಥಾನ ಪ್ರವೇಶ ನಿರಾಕರಣೆ ಸಾಂವಿಧಾನಿಕ ಹಾಗೂ ಮಾನವಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿರುವುದು ಅತ್ಯಂತ ಆಘಾತಕಾರಿ ಮತ್ತು ಅಮಾನವೀಯವಾದುದು.
ಮುಟ್ಟು ಎಂಬುದು ಹೆಣ್ಣಿನ ದೈಹಿಕ ರಚನೆಯ ಮೇಲೆ ನಿಂತಿರುವ ಬಯೋಲಾಜಿಕಲ್ ಫ್ಯಾಕ್ಟರ್ ಆಗಿದೆ. ಹೆಣ್ಣಿನ ದೇಹ ಪ್ರಕೃತಿ ಹಾಗೂ ಶಾರೀರಿಕ ಬೆಳವಣಿಗೆಯ ಆಧಾರದ ಮೇಲೆ ಹೆಣ್ಣಿನ ಮುಟ್ಟನ್ನು ವೈಜ್ಞಾನಿಕವಾಗಿ ನೋಡಬೇಕು. ಇನ್ನೂ ಮಡಿ ಮೈಲಿಗೆಯ ಕಾರಣದ ಮೇಲೆ ಹೆಣ್ಣಿನ ದೇವಸ್ಥಾನ ಪ್ರವೇಶವನ್ನು ನಿರಾಕರಿಸುವುದು ಲಿಂಗ ತಾರತಮ್ಯವಲ್ಲದೇ ಮತ್ತೇನೂ ಅಲ್ಲ. ಮಡಿ ಮೈಲಿಗೆಗೆ ಮನ್ನಣೆ ನೀಡುವುದಾದರೆ ಭಾರತದ ಒಂದೇ ಒಂದು ದೇವಸ್ಥಾನಕ್ಕೂ ಯಾವ ಹೆಣ್ಣು ಪ್ರವೇಶ ಪಡೆಯಲಾರಳು.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶ ನಿರಾಕರಣೆ ಕೇರಳ ರಾಜ್ಯ ಸರಕಾರದ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು ಎಸಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.
ಈ ಐವರು ನ್ಯಾಯಾಧೀಶರ ಪೀಠದಲ್ಲಿದ್ದ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮಾತ್ರ ‘ತೀವ್ರ ಧಾರ್ಮಿಕ ಭಾವನೆ, ಧಾರ್ಮಿಕ ಆಚರಣೆ, ದೇವಾಲಯ ಪ್ರವೇಶದಂತಹ ಅತಿಸೂಕ್ಷ್ಮ ವಿಚಾರಗಳಲ್ಲಿ ನ್ಯಾಯಾಲಯವು ಯಾವುದೇ ಹಸ್ತಕ್ಷೇಪ ಮಾಡದೆ ದೂರವಿರು ವುದೇ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.
(ನ್ಯಾಯಾಲಯದ ತೀರ್ಪು ಹೆಣ್ಣಿನ ಪರವಾಗಿ ಬಂದರೂ ಕೂಡ ಇವತ್ತಿಗೂ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರವೇಶದ ಕುರಿತು ಕೇರಳ ರಾಜ್ಯ ಸರಕಾರವು ಯಾವುದೇ ಇಚ್ಛಾಶಕ್ತಿ ತೋರದೆ ಯಥಾಸ್ಥಿತಿಯನ್ನು ಮುಂದುವರಿಸುತ್ತಾ ಪ್ರಕರಣವನ್ನು ಇನ್ನಷ್ಟು ಜಟಿಲ ಮಾಡಿದೆ. ಇದು ಭಾರತದ ಲಿಖಿತ ಸಂವಿಧಾನದ ಎದುರು ಸಾಂಪ್ರದಾಯಿಕ ಅಲಿಖಿತ ಸಂವಿಧಾನವು ತೋರುತ್ತಿರುವ ದರ್ಪದಂತೆ ಕಾಣುತ್ತಿದೆ.)
ಪ್ರಕರಣ -6: ಗಜೇಂದ್ರ ಶರ್ಮಾ ವಿರುದ್ಧ ಭಾರತದ ಒಕ್ಕೂಟ ಮತ್ತು ಇತರರು
ಈ ಪ್ರಕರಣದ ವಾದಿಯಾದ ಗಜೇಂದ್ರ ಶರ್ಮಾ ಐಸಿಐಸಿಐ ಬ್ಯಾಂಕಿನಿಂದ ೩೭,೪೮,೦೦೦ ರೂ.ಗಳನ್ನು ಹೋಮ್ ಲೋನ್ ರೂಪದಲ್ಲಿ ಸಾಲವಾಗಿ ಪಡೆದಿದ್ದರು. ಸಣ್ಣದೊಂದು ಅಂಗಡಿ ನಡೆಸುತ್ತಾ ಬದುಕನ್ನು, ಬ್ಯಾಂಕಿನ ಲೋನನ್ನು ಸರಿದೂಗಿಸುತ್ತಿದ್ದ ಗಜೇಂದ್ರ ಶರ್ಮಾರ ಬದುಕಿಗೆ ಚಂಡಮಾರುತವೆಂಬುದು ಕೋವಿಡ್-೧೯ರ ಹೆಸರಿನಲ್ಲಿ ಬಂದು ಅಪ್ಪಳಿಸಿತು. ಇಡೀ ಜಗತ್ತನ್ನೇ ನಡುಗಿಸಿದ ಕೋವಿಡ್-೧೯ ಗಜೇಂದ್ರ ಶರ್ಮಾರ ಬದುಕಿಗೂ ಕೊಳ್ಳಿ ಇಟ್ಟಿತು. ಇತ್ತ ಬದುಕು ನಡೆಸಲಾಗದೆ, ಅತ್ತ ಹೋಮ್ ಲೋನ್ ತೀರಿಸಲಾಗದೆ ಗಜೇಂದ್ರ ಶರ್ಮಾ ಅಕ್ಷರಶಃ ಬೀದಿಗೆ ಬಿದ್ದರು. ಇತ್ತ ಹೋಮ್ ಲೋನ್ ಬಡ್ಡಿಯು ಬೆಳೆಯುತ್ತಾ ಹೋಯಿತು. ಅದೇ ಹೊತ್ತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸದೊಂದು ಅಧಿಸೂಚನೆ ಹೊರಡಿಸಿತು. ಯಾವುದೇ ಬಗೆಯ ಬೃಹತ್ ಮೊತ್ತದ ಬ್ಯಾಂಕ್ ಲೋನ್ಗಳನ್ನು ತಕ್ಷಣವೇ ತೀರಿಸಬೇಕಿಲ್ಲ. ಇಎಮ್ಐ ಕಂತುಗಳಿಗೆ ಆರ್ಬಿಐ Moratorium ಹೆಸರಿನ ವಿನಾಯಿತಿ ನೀಡಿತು. ಇದೊಂದು ರೀತಿ ಬೀಸೋ ದೊಣ್ಣೆಯಿಂದ ಪಾರಾಗುವ ಸ್ಥಿತಿಯಂತೆ ಅನೇಕರಿಗೆ ಕಂಡಿತು. ಆದರೆ, ಆರ್ಬಿಐ Moratorium ಕೆಲವು ಷರತ್ತುಗಳನ್ನು ಸೇರಿಸಿತ್ತು. ಈಗ ವಿನಾಯಿತಿಗೊಳಪಟ್ಟಿರುವ ಅವಧಿಯ ಇಎಮ್ಐ ಕಂತಿನ ಬಡ್ಡಿದುಡ್ಡನ್ನು ಮುಂದೆ Moratorium ನಂತರದ ಅವಧಿಯಲ್ಲಿ ತಪ್ಪದೇ ಕಟ್ಟಬೇಕು ಎಂಬುದು ಆ ಷರತ್ತಗಳಲ್ಲೊಂದು.
ಈ ಷರತ್ತುಗಳನ್ನು ಪ್ರಶ್ನಿಸಿ ಗಜೇಂದ್ರ ಶರ್ಮಾ ಸುಪ್ರೀಮ್ ಕೋರ್ಟ್ನ ಮೊರೆಹೋದರು. ಈ ಪ್ರಕರಣದ ತೀರ್ಪು ನೀಡಿದ್ದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ ಮತ್ತು ಎಮ್.ಆರ್.ಪಾಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ. ‘‘ಕೋವಿಡ್-೧೯ ಭಾರತೀಯರ ಆರೋಗ್ಯ ಮತ್ತು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಭೀಕರ ಪರಿಣಾಮವನ್ನು ಉಂಟುಮಾಡಿತು. ಇಂಥ ಸಂದರ್ಭದಲ್ಲಿ ದೇಶವನ್ನು ಆರ್ಥಿಕವಾಗಿ ದಿವಾಳಿಯಾಗದಂತೆ ಮುನ್ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ಜನರ ಆರೋಗ್ಯ ಮತ್ತು ಹಣಕಾಸು ಸ್ಥಿತಿಯನ್ನು ಸುಸ್ಥಿಯಲ್ಲಿಡುವುದು ಸರಕಾರದ ಕೆಲಸ. ಕೋವಿಡ್-೧೯ರಂತಹ ಪರಿಸ್ಥಿತಿಯಲ್ಲಿ ಆಡಳಿತ ಯಂತ್ರವು ಕುಸಿದಾಗ ಸರಕಾರವು ಅನಿವಾರ್ಯವಾಗಿ ನೈಸರ್ಗಿಕ ನ್ಯಾಯದೆಡೆಗೆ ವಾಲಬೇಕಿದೆ. ನೈಸರ್ಗಿಕ ನ್ಯಾಯ ತತ್ವವು ಸಾಂವಿಧಾನಿಕ ನೈತಿಕತೆಯ ಮೇಲೆ ನಿಂತಿರುವಂತಹದ್ದು. ಆರ್ಬಿಐನ Moratorium ಷರತ್ತುಗಳು ಮರುಪರಿಶೀಲನೆಗೆ ಒಳಪಡಲೇಬೇಕಿದೆ. ಭಾರತ ಸಂವಿಧಾನದ ಆರ್ಟಿಕಲ್ ೨೧ ವ್ಯಕ್ತಿಯೊಬ್ಬನ ಜೀವಿಸುವ ಹಾಗೂ ಆತನ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ಕುರಿತು ವಿವೇಚನೆ ನೀಡುತ್ತದೆ. ಆರೋಗ್ಯ, ಹಣಕಾಸು -ಎರಡರಿಂದಲೂ ಛಿದ್ರಗೊಂಡು ಬದುಕಿನ ಮೇಲೆ ಭರವಸೆ ಕಳೆದುಕೊಂಡ ವ್ಯಕ್ತಿಗಳಿಗೆ ಸರಕಾರವು ಆಸರೆಯಾಗಿ ನಿಲ್ಲಬೇಕಿದೆ. ಆದರೆ ಆರ್ಬಿಐನ Moratorium ಷರತ್ತುಗಳು ವ್ಯಕ್ತಿಯೊಬ್ಬನ ಬದುಕಿನ ಭರವಸೆಗಳನ್ನೇ ಕಸಿದುಕೊಳ್ಳತೊಡಗಿದೆ’’ -ಎಂದು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ತನ್ನ ನಿಲುವು ವ್ಯಕ್ತಪಡಿಸಿತು.
ಪ್ರಕರಣ -7: ಮನೀಷ್ ಗೋಯಲ್ ವಿರುದ್ಧ ರೋಹಿಣಿ ಗೋಯಲ್
ಈ ಪ್ರಕರಣಕ್ಕೂ ಮುನ್ನ ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ದಂಪತಿ ಕಡ್ಡಾಯವಾಗಿ ಆರು ತಿಂಗಳ ವೇಟಿಂಗ್ ಪೀರಿಯಡ್ಡನ್ನು ಮುಗಿಸಲೇಬೇಕಿತ್ತು. ಆರು ತಿಂಗಳಿಗೂ ಮುನ್ನ ದೇಶದ ಯಾವುದೇ ನ್ಯಾಯಾಲಯವು ವಿಚ್ಛೇದನಕ್ಕಾಗಿ ಬಂದ ಪ್ರಕರಣಗಳನ್ನು ತುರ್ತು ನಿರ್ಣಯಿಸುವಂತಿರಲಿಲ್ಲ. ಆದರೆ, ನ್ಯಾಯಮೂರ್ತಿಗಳಾದ ಆಫ್ಲಾಬ್ ಆಲಂ ಮತ್ತು ಡಾ.ಬಿ.ಎಸ್. ಚೌಹಾಣ್ ಅವರನ್ನು ಒಳಗೊಂಡ ಸುಪ್ರೀಮ್ ಕೋರ್ಟ್ನ ದ್ವಿಸದಸದ್ಯ ಪೀಠವು ‘ದಂಪತಿ ಪರಸ್ಪರ ಒಪ್ಪಿ ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಬಂದರೆ ಅಂತಹ ಪ್ರಕರಣಗಳನ್ನು ಆರು ತಿಂಗಳ ವೇಟಿಂಗ್ ಅವಧಿಯವರೆಗೂ ಕಾಯದೆ ಅದಕ್ಕೂ ಮುನ್ನವೇ ಪ್ರಕರಣವನ್ನು ಇತ್ಯರ್ಥಪಡಿಸಬಹುದು’ ಎಂದು ಆದೇಶ ನೀಡಿತು.
ಮುಂದುವರಿದು ಇದೇ ನ್ಯಾಯಾಧೀಶರು ಭಾರತೀಯ ಸಮಾಜವು ಅದರಲ್ಲೂ ಮಧ್ಯಮ ವರ್ಗದ ಬಡ ಕುಟುಂಬಗಳು ಕೌಟುಂಬಿಕ ನ್ಯಾಯಾಲಯಗಳನ್ನು, ವಿವಾಹ ವಿಚ್ಛೇದನವನ್ನು ಶಾಪದಂತೆಯೂ, ನರಕದಂತೆಯೂ ನೋಡುತ್ತಿದೆ. ಆದರೆ ಇಂತಹ ಅಭಿಪ್ರಾಯಗಳು ಜನಸಾಮಾನ್ಯರಲ್ಲಿ ಹೇಗೆ ಮತ್ತು ಯಾಕೆ ಮೂಡಿದವೋ ಗೊತ್ತಿಲ್ಲ. ವಿವಾಹ ವಿಚ್ಛೇದನವೆಂದು ಕೋರಿ ಬಂದ ದಂಪತಿಗೆ ಬಿಡುಗಡೆಯನ್ನು, ಮರುಜನ್ಮವನ್ನು ನೀಡಬಹುದು. ಅದರಲ್ಲೂ ಪತಿ, ಪತ್ನಿ ಇಬ್ಬರು ಪರಸ್ಪರ ಒಪ್ಪಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಗಳಿಗೆ ಬಂದರೆ ಅದನ್ನು ಅತ್ಯಂತ ಶೀಘ್ರವಾಗಿ (ಆರು ತಿಂಗಳ ವೇಟಿಂಗ್ ಪೀರಿಯಡ್ವರೆಗೂ ಕಾಯದೆ) ಇತ್ಯರ್ಥಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಕರಣ -8: ಕೃಷ್ಣಂದು ಹಾರ್ಲ್ದಾ ವಿರುದ್ಧ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮತ್ತು ಇತರರು
ಇದು ಶೈಕ್ಷಣಿಕ ಮೀಸಲಾತಿ ನೀಡಿಕೆ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡಿದ ಅತ್ಯಂತ ಮಹತ್ವದ ಪ್ರಕರಣವಾಗಿದೆ.
ವಾದಿಯು ‘ತನಗೆ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಡಿ ಒಳಪಡುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಮಾನ್ಯ ಅಭ್ಯರ್ಥಿ ಪಟ್ಟಿಯಡಿ ಸೀಟು ಪಡೆಯಲು ಸಾಧ್ಯವಾಗದ ಕಾರಣ, ನನ್ನ ಹಿಂದುಳಿದ ವರ್ಗದ ಕೋಟಾದ/ಮೀಸಲಾತಿ ಆಧಾರದ ಮೇಲೆ ಸೀಟು ನೀಡುವುದು ಹೆಚ್ಚು ಸಮಂಜಸವು, ಸಾಂವಿಧಾನಿಕವು ಆಗಿದೆ. ಕರ್ನಾಟಕಕ್ಕೆ ಸೇರಿರದ ವಿದ್ಯಾರ್ಥಿಯಾಗಿರುವ ನನಗೆ ಕರ್ನಾಟಕದ ಮೀಸಲಾತಿ ನೀತಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಅಡ್ಡಿಯುಂಟುಮಾಡಿವೆ. ಹೀಗಾಗಿ ನನಗೆ ಉನ್ನತ ಶಿಕ್ಷಣ ಪಡೆಯುವ ನ್ಯಾಯ ಕೊಡಿಸಿ’ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದನು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ.ಎಲ್.ಮಂಜುನಾಥ್ ಮತ್ತು ಬಿ.ವಿ.ನಾಗರತ್ನಾ ಅವರುಗಳಿದ್ದ ದ್ವಿಸದಸ್ಯ ಪೀಠವು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಮಹಿಳೆ, ಅಂಗವಿಕಲ, ಕನ್ನಡ ಮಾಧ್ಯಮ, ಪ್ರಾಜೆಕ್ಟ್ ಡಿಸ್-ಪ್ಲೇಸ್ಟ್ ಪರ್ಸನ್, ಇವೇ ಮೊದಲಾದವರ ಕುರಿತು ಕರ್ನಾಟಕ ರಾಜ್ಯ ಸರಕಾರವು ಕಾಲ ಕಾಲಕ್ಕೆ ಜಾರಿಮಾಡಿರುವ ಮೀಸಲಾತಿ ಕುರಿತ ಆದೇಶ, ನೀತಿ, ನಿಯಮ, ಕಾಯ್ದೆಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆಯೇ ಹೊರತು ಅನ್ಯರಾಜ್ಯದ ವಿದ್ಯಾರ್ಥಿಗಳಿಗಲ್ಲ. ಅದರಲ್ಲೂ ವೃತ್ತಿಪರ ಶೈಕ್ಷಣಿಕ ಕೋರ್ಸ್ಗಳ ಸೀಟುಗಳನ್ನು ಮೀಸಲಾತಿಯಡಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಹಂಚಿಕೆಯಾಗುವ ನೀತಿಗಳನ್ನು ಸಂಬಂಧಪಟ್ಟ ರಾಜ್ಯ ಸರಕಾರಗಳು ರೂಪಿಸುತ್ತವೆ. ಹೀಗಿರುವಾಗ ಅನ್ಯರಾಜ್ಯದ ವಿದ್ಯಾರ್ಥಿಗಳು ತಮ್ಮ ಮೀಸಲಾತಿಯ ಹಕ್ಕುಗಳನ್ನು ತಮ್ಮ ರಾಜ್ಯಗಳಲ್ಲಿ ಚಲಾಯಿಸುವುದು ಹೆಚ್ಚು ಸಾಂವಿಧಾನಿಕ ನಡೆಯಾಗಿದೆ. ಇನ್ನು ಸಾಮಾನ್ಯ ಸೀಟು ಹಂಚಿಕೆಯನ್ನು ಯಾರೂ ಬೇಕಾದರೂ ಪಡೆಯಬಹುದಾಗಿರುವುದರಿಂದ ಇಲ್ಲಿ ಮೀಸಲಾತಿ ನೀತಿಗಳು ಅನ್ವಯಿಸುವುದಿಲ್ಲ. ತಮ್ಮ ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವುದು ಕೂಡ ರಾಜ್ಯ ಸರಕಾರಗಳ ಸಾಂವಿಧಾನಿಕ ನಡೆಯಾಗಿದೆ ಎಂದು ಅಭಿಪ್ರಾಯಪಟ್ಟಿತು.