Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  4. ಲಂಕೇಶರ ಕಟ್ಟೆಯಲ್ಲಿ ಕಟ್ಟಿದ ಕಟ್ಟೆ...

ಲಂಕೇಶರ ಕಟ್ಟೆಯಲ್ಲಿ ಕಟ್ಟಿದ ಕಟ್ಟೆ ಪುರಾಣ!

ಬಿ. ಚಂದ್ರೇಗೌಡಬಿ. ಚಂದ್ರೇಗೌಡ4 Jan 2024 4:25 PM IST
share
ಲಂಕೇಶರ ಕಟ್ಟೆಯಲ್ಲಿ ಕಟ್ಟಿದ ಕಟ್ಟೆ ಪುರಾಣ!
ಪಿ. ಲಂಕೇಶರ ಕಾಲದ ಲಂಕೇಶ್ ಪತ್ರಿಕೆಯಲ್ಲಿ ‘ಕಟ್ಟೆ ಪುರಾಣ’ ಜನಪ್ರಿಯ ಅಂಕಣದ ಮೂಲಕ ಚಿರಪರಿಚಿತರಾಗಿರುವ ಬಿ. ಚಂದ್ರೇಗೌಡರು ಮಂಡ್ಯ ಜಿಲ್ಲೆಯ ನಾಗಮಂಗಲದವರು. ಪಿ. ಲಂಕೇಶರ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಹಾಗೂ ಅಂಕಣಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಹೊಸ ಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ (ಕಾದಂಬರಿ), ಹಳ್ಳಿಕಾರನ ಅವಸಾನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟಕೋಳಿ, ಕಟ್ಟೆ ಪುರಾಣ ಭಾಗ-೧, ಕಟ್ಟೆ ಪುರಾಣ ಭಾಗ-೨, ಬಾಹುಬಲಿ ಬುಡದಲ್ಲಿ ಜನಸಾಗರ, ನಾವು ನಾಟಕ ಆಡಿದ್ದೂ (ಹಾಸ್ಯ ಸಂಕಲನ) ಅವರ ಕೃತಿಗಳು. ಈ ಲೇಖನದಲ್ಲಿ ‘ಕಟ್ಟೆ ಪುರಾಣ’ ಅಂಕಣ ಬರಹ, ಅದರಲ್ಲಿ ಬರುವ ಗ್ರಾಮೀಣ ಸೊಗಡಿನ ಪಾತ್ರಗಳು ಹುಟ್ಟಿದ ಬಗೆಯನ್ನು ಮತ್ತು ಅದು ನಾಡಿನುದ್ದಕ್ಕೂ ಬೀರಿದ ಪರಿಣಾಮವನ್ನು ನೆನೆದುಕೊಂಡಿದ್ದಾರೆ.


ಲಂಕೇಶ್ ಪತ್ರಿಕೆಗೆ ಸತತವಾಗಿ ಒಂದು ದಶಕ ‘ಹುಬ್ಬಳ್ಳಿಯಾಂವ’ ಕಾಲಂ ಬರೆದ ಪುಂಡಲೀಕ್ ಶೇಟ್, ಬಸ್ ಅಪಘಾತದಲ್ಲಿ ಅಕಾಲ ಮರಣಕ್ಕೆ ತುತ್ತಾದರು. ಇದರಿಂದ ಅಘಾತಗೊಂಡ ಲಂಕೇಶರು, ‘ಈ ಅತಾರ್ಕಿಕ ಸಾವಿಗೆ ನನ್ನ ಉತ್ತರವೆಂದರೆ, ಪುಂಡಲೀಕ್ ಬದುಕಿದ್ದಾನೆ. ಆತ ತೀರಿಕೊಂಡಿಲ್ಲ ಎಂಬ ಸವಾಲು ಎಸೆಯುತ್ತೇನೆ ’ಎಂದು ಬರೆದರು. ಇದಾದ ಕೆಲವು ದಿನಗಳ ನಂತರ ಅವರ ಎದುರು ಕುಳಿತಿದ್ದಾಗ, ‘‘ನೀನು ಆ ತರ ಕಾಲಂ ಟ್ರೈ ಮಾಡಯ್ಯ’’ ಎಂದರು. ಇದಕ್ಕೆ ಕಾರಣ, ನಾನು ಅದಾಗಲೇ ಪತ್ರಿಕೆಗೆ ‘ನಮ್ಮೋರಿಂದ ನಮಿಗೇನೂ ಆಗಕುಲ್ಲ’ ‘ಹೆಣ್ಣು ಅಂದ್ರೆ ಯದಿಗಾರೆಣ್ಣು ಕಣಯ್ಯ’ ಎಂದು ನಮ್ಮವರು ಮಾತನಾಡುವ ವೈಖರಿಯಲ್ಲಿ ಎರಡು ಲೇಖನ ಬರೆದಿದ್ದೆ. ಇದನ್ನು ಗ್ರಹಿಸಿದ್ದ ಲಂಕೇಶರು ನನಗೆ ಅಂತಹ ಸಲಹೆ ಕೊಟ್ಟರು. ಆಗ ಹೆದರಿದ ನಾನು ‘‘ಏ ನನ್ನ ಕೈಲಾಗಲ್ಲ ಸಾರ್, ಪುಂಡಲೀಕ್ ಶೇಟೆಲ್ಲಿ ನಾನೆಲ್ಲಿ , ಅದೆಲ್ಲ ಆಗಲ್ಲ’’ ಎಂದೆ. ಆಗ ಲಂಕೇಶ್ ‘‘ನೋಡಯ್ಯ ಪುಂಡಲೀಕ್ ತರ ನಾನು ಬರಿ ಬಲ್ಲೆ.

ನೀನು ನಿಮ್ಮ ಜನಗಳು ಮಾತಾಡೋ ತರ ಬರಿ. ಎರಡು ವಾರಕ್ಕೊಂದು ಬರದ್ರು ಸಾಕು. ಟ್ರೈ ಮಾಡು’’ ಎಂದರು. ನಾನು ‘ಆಗದಿಲ್ಲ ಸಾರ್’ ಎಂದೆ. ಅವರ ಮುಖದ ಮೇಲೆ ಸಿಟ್ಟು ಅಡರಿತು. ಅಲ್ಲಿಂದ ಎದ್ದು ಬಂದೆ. ನನ್ನ ಹಿಂದೆಯೇ ಅವರ ಪತ್ರವೂ ಬಂತು. ಅದನ್ನು ಓದಿದರೆ ಯಾರಾದರೂ ಬರೆಯಬಹುದು ಲೇಖಕರಾಗಬಹುದು ಎನ್ನುವ ಸ್ಫೂರ್ತಿಕೊಡುವಂತಿತ್ತು. ಕಾಲಂನ ಪಾತ್ರಗಳು, ವಸ್ತುವೆಲ್ಲಾ ಗೋಚರಿಸತೊಡಗಿದವು. ಅದು ಇಂದಿರಾಗಾಂಧಿಯವರು ಪ್ರಧಾನಮಂತ್ರಿಯಾಗಿದ್ದ ಕಾಲ. ಒಂದು ಬರಗಾಲ ಬಂದಿತ್ತು. ನಮ್ಮಪ್ಪ ಒಂದು ಕಾಫಿ ಟೀ ಹೋಟೆಲು ಮಡಗಿದ್ದ. ನಮ್ಮಪ್ಪನ ಹೆಸರು ಬಸವಣ್ಣ , ನಾಟಕ ಆಡುವ ಗೀಳಿನಿಂದ ಜಮೀನು ಮಾರಿಕೊಂಡು ಬಡವನಾಗಿದ್ದ. ಹೋಟೆಲ್ ಮಡಗಿದ ಕಾರಣಕ್ಕೆ ಅವನದ್ದೇ ಆದ ಅನುಭವ ಮಂಟಪ ರೆಡಿಯಾಯ್ತು. ಜನಾನುರಾಗಿಯಾಗಿದ್ದ ಅವನು ಮಡಗಿದ ಹೋಟೆಲಿಗೆ ಊರಿನ ಉತ್ತರಕ್ಕಿದ್ದ ಬಲ್ಲಾವಳ್ಳಿಯಿಂದ ಬೋರೆಗೌಡ, ಬೋಜಣ್ಣ, ಪೂರ್ವಕ್ಕಿದ್ದ ಚನ್ನಾಪುರದಿಂದ ತಮ್ಮಣ್ಣ ಪಾಪಣ್ಣ, ದಕ್ಷಿಣಕ್ಕಿದ್ದ ಕುರುಬನಹಳ್ಳಿಯಿಂದ ಪುಡಸಾಮಿ ಗುಂಡಣ್ಣ ಬೋರೇಗೌಡ, ಪಶ್ಚಿಮಕ್ಕಿರುವ ಚಟ್ಟೇನಹಳ್ಳಿಯಿಂದ ಪಟೇಲರು ರಾಮಣ್ಣ ಇತ್ಯಾದಿ ಕೆಲಸ ಮಾಡದೆ ಮಾತಿನ ಮಲ್ಲರಾಗಿದ್ದ ಎಲ್ಲರೂ ಬಂದು ನಮ್ಮಪ್ಪನ ಹೋಟೆಲಿನಲ್ಲಿ ಕುಳಿತು ಯಾವುದಾದರೂ ವಿಷಯ ತೆಗೆದುಕೊಂಡು ಅಗಿದು ಬಿಸಾಕಿ ಹೋಗತೊಡಗಿದ್ದರು.

ನಾನಾಗ ಅವರ ಬಾಯಿ ನೋಡುತ್ತ ಲೋಟ ತೊಳೆಯುತ್ತಿದ್ದೆ. ಮತ್ತು ಒಂದು ನೋಟು ಬುಕ್ಕಿನಲ್ಲಿ ಅವರ ಹೆಸರು ಬರೆದುಕೊಂಡು ಕಾಫಿ ಕುಡಿದ ಸಾಲ ಬರೆದುಕೊಳ್ಳುತ್ತಿದ್ದೆ. ಈ ಬಾಕಿ ಶನಿವಾರ ಅಥವಾ ಸೋಮವಾರ ಸಂಜೆಯಲ್ಲಿ ವಸೂಲಾಗುತ್ತಿತ್ತು. ಈ ಪೈಕಿ ಸೀರ ಎನ್ನುವವನು ಕಡೆಯವರೆಗೂ ಕಾಸುಕೊಡಲೇಯಿಲ್ಲ. ಈತ ಕಟ್ಟೆಪುರಾಣದ ಪಾತ್ರಧಾರಿಯಾದ. ಇವನು ತುಂಬ ಗೌರವ ಕೊಡುತ್ತಿದ್ದ ಊರ ಪಟೇಲರು ಕಾಳ ಮಾವನಾದರು. ಇವರು ಒಳ್ಳೆಯ ತೆಂಗಿನ ತೋಟ ಮತ್ತು ಜಮೀನಿದ್ದರೂ ಬಡತನದಲ್ಲಿ ಬದುಕಿದ್ದರು. ಜೀವಮಾನದಲ್ಲಿ ಒಂದು ಮಸಾಲದೋಸೆ ತಿನ್ನದೆ ಒಳ್ಳೆಯ ಬಟ್ಟೆಯನ್ನು ಹಾಕದೆ ಕಾಲ ಹಾಕಿದ ಇವರು ದೇವೇಗೌಡರ ಅಭಿಮಾನಿಯಾಗಿದ್ದರು. ಸ್ತ್ರೀ ದ್ವೇಶಿಯಾದ ಕಾರಣಕ್ಕೆ ಇಂದಿರಾಗಾಂಧಿ ವಿರೋಧಿಯಾಗಿದ್ದರು. ಈ ಎರಡು ಪಾತ್ರ ಮೋಡಿಯಂತೆ ಹೊಳೆದ ಮೇಲೆ ಹೋಟೆಲ್ ಪಕ್ಕದಲ್ಲೇ ಇದ ದಲಿತರ ಹುಡುಗ ಉಗ್ರಿ ಬಂದು ಸೇರಿಕೊಂಡ. ಇನ್ನು ಜುಮ್ಮಿ ಆಗ ತಾನೆ ಪ್ರಾರಂಭಗೊಂಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದು ಬಂದ ಮಹಿಳೆಯರ ಪ್ರತಿನಿಧಿಯಾದಳು.




ವಾಟಿಸ್ಸೆ ಕೂಡ ನಮ್ಮ ಹೋಟೆಲಿನ ಪಕ್ಕದ ಮನೆಯವನು. ಅವನ ಹೆಸರಿನ ಬದಲಿಗೆ ವಾಟಿಸ್ಸೆ ಎಂದು ಕರೆದಿದ್ದರಿಂದ ಅವನೇನು ತಕಾರರು ತೆಗೆಯಲಿಲ್ಲ. ಇನ್ನು ನಮ್ಮಪ್ಪನ ಬದಲಿಗೆ ನಮ್ಮಣ್ಣ ಹೋಟೆಲ್ ಚಿಕ್ಕಣ್ಣ ನಾದ. ಆಗಿನ ಬೆಳಗೇ ಸಂಭ್ರಮವುಂಟು ಮಾಡುತ್ತಿತ್ತು. ಊರಿಗೆ ಯಾರೇ ಬಂದರೂ ಹೋಟೆಲಿಗೆ ಬಂದು ಹೋಗುತ್ತಿದ್ದರು. ತಮಿಳುನಾಡಿನಿಂದ ಬಂದ ಕೂಲಿ ಕಾರ್ಮಿಕರು, ಆಂಧ್ರದಿಂದ ಬರುವ ಕಲ್ಲು ಒಡ್ಡರು, ಗೊಂಬೆರಾಮರು, ಹೆಳವರು, ಹಕ್ಕಿಪಕ್ಕರು, ಬುಡು ಬುಡುಕೆಯವರು ಹೀಗೆ ಯಾರೇ ಬಂದರು ತಮ್ಮ ಬದುಕಿನ ಬದಲಾವಣೆಯನ್ನು ಅಳೆದು ಸುರಿದು ಹಂಚಿಕೊಂಡು ಹೋಗುತ್ತಿದ್ದರು. ಅದು ಮಾತಿನಿಂದಲೇ ಸುಖಪಡುವ ಕಾಲವಾಗಿತ್ತು. ಅಲ್ಲಿಗೆ ಬರುವ ಊರ ಜನ ಕೃಷಿಕರಾಗಿದ್ದರಿಂದ ಬೇಸಾಯ ದನ ಕರು, ಆಡು, ಕುರಿ ಜಾತ್ರೆ ವಿಷಯಗಳು ಪ್ರಧಾನವಾಗಿರುತ್ತಿದ್ದವು. ರಾಜಕಾರಣವೂ ಬಂದು ಹೋಗಿತ್ತಿತ್ತು. ಆದರೆ ಅವೆಲ್ಲಾ ಅಂದಾಜಿನ ಸುಳ್ಳು ಮಾತುಗಳಿಂದ ಕೂಡಿರುತ್ತಿದ್ದವು ಎಂಬುದು ನನಗೆ ಹೊಳೆಯಲು ಬಹು ದಿನಗಳಾದವು. ಆಗ ನಮ್ಮ ಪಟೇಲರು ಆಡಿದ ಮಾತೊಂದು ಇನ್ನೂ ನಗುತರಿಸುತ್ತೆ. ಆಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗುವುದರಲ್ಲಿತ್ತು. ನಮ್ಮೂರ ಪಟೇಲರು ‘‘ಆ ಇಂದ್ರಾಗಾಂಧಿ ಇಲ್ಲಿಗಂಟ ಎಲ್ಲೊ ಕೂತಿದ್ದು ಈಗ ಬಂದವುಳೆ, ‘ಪಾಕಿಸ್ತಾನದ ಸಾಬರು ಮ್ಯಾಲಬಿದ್ದವುರೆ ಸೈನ್ಯ ಕಳಿಸಿಕೊಡಿ’ ಅಂತ ನಮ್ಮ ಮಾರಾಜರ ಕೇಳಕ್ಕೆ’’ ಎಂದರು. ಆಗ ಸೀರ ‘ನಾಚಿಗಾಗದಿಲವೆ’ ಎಂದು ಪಟೇಲರ ಮಾತಿಗೆ ಇಂಬು ಕೊಟ್ಟಿದ್ದ. ಇಂತಹ ಸಂಗತಿಗಳು ಕಟ್ಟೆಪುರಾಣವನ್ನು ಬರೆಸಿದವು. ಪಟೇಲರ ತಿಳಿವಳಿಕೆಯಲ್ಲಿ ಜಯ ಚಾಮರಾಜೇಂದ್ರ ಒಡೆಯರ್ ಇನ್ನು ರಾಜರಾಗಿದ್ದು, ನಿಜಲಿಂಗಪ್ಪ ಮಂತ್ರಿಯಾಗಿದ್ದರು. ಇಲ್ಲಿನ ಮೇಟಿಯೇ ಹೀಗಿದ್ದ ಮೇಲೆ ಇನ್ನ ಉಳಿದವರ ಬಗ್ಗೆ ಹೇಳುವಂತಿಲ್ಲ.

ಕಾಲಂ ಶುರುವಾದ ನಂತರ ಸೀರ ತನ್ನ ಹೆಸರು ಲಂಕೇಶ್ ಪತ್ರಿಕೆಯಲ್ಲಿ ಬಂದಿದೆ ಎಂದು ಗೊತ್ತಾಗಿ ಶಾಸಕ ಚಲುವರಾಯಸ್ವಾಮಿ ಬಳಿ ಹೋಗಿ ‘‘ನಮ್ಮ ಚಂದ್ರ ಲಂಕೇಶ್ ಪೇಪ್ರಲಿ ನನ್ನ ಮ್ಯಾಲೆ ಏನೇನೂ ಬರಿತಾ ಅವುನಂತೆ ವಸಿ ಹೇಳಿ’’ ಎಂದು ದೂರು ಹೇಳಿದ್ದ. ಅವರು ಅವನ ಕೈಗೊಂದಿಷ್ಟು ದುಡ್ಡು ಕೊಟ್ಟು ಕಳಿಸಿದ್ದರು. ನಾನೇ ಸಿಕ್ಕಾಗ ಸಮಾಧಾನ ಮಾಡಿ, ಕೈಗೊಂದಿಷ್ಟು ಕಾಸು ಕೊಟ್ಟೆ. ಮುಂದೆ ನಾನು ಸಿಕ್ಕಾಗಲೆಲ್ಲ ಕೊಡಬೇಕಾಯ್ತು. ಆಗ ಕೊಟ್ಟೆ ಚೀಲದ ರೇಟು ಜಾಸ್ತಿಯಿರಲಿಲ್ಲ. ಇನ್ನು ಉಗ್ರಿ ನಮ್ಮ ತಾಲೂಕಿನ ಮಾಜಿ ಸಚಿವರಾದ ಎಚ್.ಟಿ. ಕೃಷ್ಣಪ್ಪನವರ ಬಳಿಹೋಗಿ ‘‘ಸಾ... ಚಂದ್ರಣ್ಣ ನನ್ನ ಮ್ಯಾಲೆ ಏನೇನೂ ಬರಿತಾ ಅವುನೆ, ನಿಲ್ಸಕ್ಕೇಳಿ’’ ಎಂದು ದೂರು ಹೇಳಿದ್ದ. ಕೃಷ್ಣಪ್ಪನವರೂ ಕಟ್ಟೆ ಪುರಾಣ ಓದುತ್ತಿದ್ದರಿಂದ, ‘‘ಅವುರು ನಿನ್ನ ಹೆಸರು ಬಳಿಸಿಗಂಡವುರೆ ಅಷ್ಟೆ. ಆ ಪಾತ್ರ ಅವುರೆ ಕಣಯ್ಯ’’ ಎಂದು ಹಲವು ಉದಾಹರಣೆಕೊಟ್ಟು ಕಳಿಸಿದ್ದರು. ನಮ್ಮಪ್ಪ ತೀರಿ ಹೋಗಿ ನಮ್ಮಣ್ಣ ಹೋಟೆಲ್ ಮಾಲಕನಾದ ಮೇಲೆ ನಾವು ಪಾಲಾಗಿ ನಾನು ಎರಡನೇ ಅಣ್ಣನ ಜೊತೆಯಿದ್ದೆ. ಆಗ ಹೋಟೆಲ್ ಚಿಕ್ಕಣ್ಣನ ಬಗ್ಗೆ ಲಂಕೇಶ್ ಪತ್ರಿಕೆಯಲ್ಲಿ ಏನೋ ಬಂದಿದೆ ಎಂದು ಗೊತ್ತಾಗಿ, ಮನೆಯ ಬಳಿಗೆ ಬಂದು ಬೈದು ಹೋಗಿದ್ದ. ನಮ್ಮವ್ವ ಕಾಗದ ಹಾಕಿಸಿ ‘‘ಜ್ವತೆಲಿ ಹುಟ್ಟಿದೋರ ಮ್ಯಾಲೆ ಬರದಿದ್ದಿಯಂತಲ್ಲಾ ಇದು ನ್ಯಾಯವೆ, ಇಲ್ಲಿ ವಳ್ಳೆ ಜನಗಳಿಲ್ಲ . ಏನ್ನೂ ಬರಿಬ್ಯಾಡ’’ ಎಂದು ಹೇಳಿ ಕೊಂಡಿದ್ದಳು. ಇನ್ನ ವಾಟಿಸ್ಸೆ ಕಡೆಯಿಂದ ಯಾವ ತಕರಾರಿರಲಿಲ್ಲ . ಏಕೆಂದರೆ ಅವನ ಹೆಸರಿರಲಿಲ್ಲ, ನಾನೇ ಆ ಹೆಸರು ಕೊಟ್ಟಿದ್ದೆ. ಇದನ್ನೂ ಗ್ರಹಿಸಿದ್ದ ನಟರಾಜ್ ಹುಳಿಯಾರ್ ‘‘ನಿನ್ನ ಕಾಲಂ ನೋಡಿದ್ರೆ ‘ನೀನು ನ್ಯಟ್ಟಗಿದ್ದಾಗ ಉಗ್ರೀ. ಕುಡದಾಗ ವಾಟಿಸ್ಸೆ ’ ಅಲ್ಲವೇ’’ ಎಂದು ನಗಾಡಿದ್ದರು. ಜುಮ್ಮಿ ನನ್ನೊಳಗೇ ರೂಪುಗೊಂಡಿದ್ದರಿಂದ ಅವಳ ತಕರಾರಿರಲಿಲ್ಲ.

ಕಟ್ಟೆ ಪುರಾಣದ ‘ಕ್ಯಾತಿ’ ನನ್ನ ಅರಿವಿಗೆ ಬಂದಿದ್ದು, ಇದಕ್ಕೆ ಪತ್ರಿಕಾ ಅಕಾಡಮಿ ಪ್ರಶಸ್ತಿ ಬಂದಾಗ. ಆಗ ನಿಜಕ್ಕೂ ನನಗೆ ಇಂತಹ ಕಾಲಂಗೂ ಪ್ರಶಸ್ತಿ ಬರುತ್ತಾ ಎಂದು ಆಶ್ಚರ್ಯ ಮತ್ತು ಖುಷಿಯಾಯ್ತು. ಆಗ ನನ್ನ ಬಗ್ಗೆ ಒಂದು ಟಿಪ್ಪಣಿ ಬರೆದ ಲಂಕೇಶ್ ‘ಈ ಪ್ರಶಸ್ತಿಯಿಂದ ಚಂದ್ರೇಗೌಡನಿಗೆ ಆಗಿರುವ ಸಂತೋಷ ನನಗೂ ಆಗಿದೆ’ ಎಂದಿದ್ದರು. ಕಟ್ಟೆ ಪುರಾಣವನ್ನು ತುಂಬಾ ಮೆಚ್ಚಿ ಕೊಂಡಿದ್ದ ಎಂ. ಪಿ. ಪ್ರಕಾಶ್ ಫೋನು ಮಾಡಿ ‘ಕಾಳ ಮಾವ, ಜುಮ್ಮಿ ಏನಂತರೆ ಗೌಡ್ರೆ’ ಎಂದು ಕೇಳುತ್ತಿದ್ದರು. ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲರು ಕಟ್ಟೆ ಪುರಾಣದ ಬಗ್ಗೆ ಕುತೂಹಲಗೊಂಡು ಯಾರಿಂದಲೋ ಓದಿಸಿ ಕೇಳುತ್ತಿದ್ದರೆಂದು ಮಹಿಮಾ ಪಟೇಲ್ ಸಿಕ್ಕಿದಾಗ ಹೇಳಿದ್ದರು. ಇನ್ನ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಮಾನೋಲ್ಲಾಸದಿಂದ ದೂರವಿದ್ದು ಅಪ್ಪಟ ರಾಜಕಾರಣಿಯಾದ ದೇವೇಗೌಡರು ಕಟ್ಟೆ ಪುರಾಣ ಗಮನಿಸಿದರೋ ಇಲ್ಲವೋ ಗೊತ್ತಾಗಲಿಲ್ಲ. ಪಟೇಲರು ಶಿವಮೊಗ್ಗಕ್ಕೆ ಬಂದಾಗ ಎಂ.ಪಿ. ಪ್ರಕಾಶ್ ಕರೆದುಕೊಂಡು ಹೋಗಿ ಪರಿಚಯಿಸಿದರು. ಆಗ ಕೈ ನೀಡಿದ ಪಟೇಲರು ‘‘ಅಲಲೆ ಚೆನ್ನಾಗಿ ಬರಿತಿ ಕಣಯ್ಯ ನೀನು’’ ಎಂದು ಮೆಚ್ಚುಗೆ ಸೂಚಿಸಿದರು. ಈ ಪುರಾಣದ ಖ್ಯಾತಿ ಅರಿವಿಗೆ ಬಂದದ್ದು ನಾನು ಎಲ್ಲೇ ಹೋದರೂ ಕಟ್ಟ್ಟೆ ಪುರಾಣದ ಮುಖಾಂತರವೇ ಗುರುತಿಸುತ್ತಿದ್ದಾಗ. ಅದು ಹಾಸ್ಯದ ಕಾಲಂ ಆದ್ದರಿಂದ ಎಲ್ಲರೂ ನಗುತ್ತಲೇ ಪರಿಚಯಿಸಿಗೊಳ್ಳುತ್ತಿದ್ದರು. ಇದರ ಜನಪ್ರಿಯತೆ ಜಾಸ್ತಿಯಾದಾಗ, ಇದನ್ನೇ ನಾಟಕ ಮಾಡಿದರೆ ಹೇಗೆ ಅನ್ನಿಸಿತು. ಶಿವಮೊಗ್ಗದ ಉತ್ಸಾಹಿ ಗೆಳೆಯರೆಲ್ಲಾ ಸೇರಿಕೊಂಡು ಒತ್ತಾಯಿಸಿ ನಾಟಕ ಬರೆಸಿದರು. ಕಾಲಂನ ಕೆಲವು ಪ್ರಸಂಗದ ಜೊತೆಗೆ ಹೊಸದಾಗಿ ಒಂದೆರಡು ದೃಶ್ಯ ಮತ್ತು ಪಾತ್ರ ಸೇರಿಸಿ ನಾಟಕ ಬರೆದು ಒಂದು ರೀಡಿಂಗ್ ಕೊಟ್ಟಾಗ ಎದುರಿದ್ದ ಕಲಾವಿದರು ತಮ್ಮ ತಮ್ಮ ಪಾತ್ರ ಯಾವುದೆಂದು ಗುರುತಿಸಿ ತಾವೇ ನಿರ್ವಹಿಸತೊಡಗಿದರು. ಕಾಳ ಮಾವನಿಗೆ ಎಸ್. ಆರ್. ಗಿರೀಶ್, ಸೀರನಾಗಿ ಈರಣ್ಣ ಬೆಳ್ಳುಳ್ಳಿ, ವಾಟಿಸ್ಸೆಯಾಗಿ ಕಲಾವಿದ ಸಾಸ್ವೆಹಳ್ಳಿ ಸತೀಶ್, ಕಲಕಪ್ಪ ಮಾಸ್ತರು ಮತ್ತು ಅಧಿಕಾರಿಯಾಗಿ ರಾಜಕುಮಾರ್ ಕಾಯಂ ಕಲಾವಿದರಾದರು. ಇನ್ನುಳಿದ ಪಾತ್ರಗಳನ್ನು ಯಾರಾದರೂ ಮಾಡಬಹುದಿತ್ತು. ಇದರಲ್ಲಿ ನಾಟಕ ಮೇಷ್ಟು ನಾನು ಮಾಡಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ಹರಿಕುಮಾರ್ ಲಕ್ಕನ ಪಾತ್ರ ಮಾಡಿ ಆ ಸಣ್ಣ ಪಾತ್ರಕ್ಕಾಗಿ ನಾಡಿನ ಮೂಲೆ ಮೂಲೆಗೂ ಬಂದಿದ್ದು ಒಂದು ದಾಖಲೆ. ಈ ನಾಟಕಕ್ಕೆ ಎಲ್ಲ ಕಡೆಯಿಂದಲೂ ಬೇಡಿಕೆ ಬರತೊಡಗಿತು. ಆದರೆ ನೈಸರ್ಗಿಕವಾಗಿಯೇ ಇದರ ನಿಲುಗಡೆಗೆ ಸಂಚು ನಡೆದಂತೆ ಕೊರೋನಾಕ್ಕೆ ಇಬ್ಬರು ಬಲಿಯಾದರು. ಇನ್ನ ನಾಟಕ ಮುಗಿದ ಕೂಡಲೇ ಹೊಟ್ಟೆ ತುಂಬಾ ಕುಡಿದು ಹಣ್ಣಾಗುತ್ತಿದ್ದ ಕಾಳಮಾವ ಮತ್ತು ಸೀರಮಾವ ಕೊನೆಯುಸಿರೆಳೆದರು.

ಇವರ ಪೈಕಿ ನಾನು ಊರಿನಿಂದ ಎತ್ತಿಕೊಂಡಿದ್ದ ಪಾತ್ರವಾದ ವಾಟಿಸ್ಸೆ ಕುಡಿಯುವುದನ್ನು ಬಿಟ್ಟು ದಶಕವಾಯ್ತು. ಅವನ ಮಗಳನ್ನು ಮದುವೆಯಾದ ಹುಡುಗ ಊಟಿಯವನು. ‘‘ನೀವು ಒಂದನಿ ಡ್ರಿಂಕ್ಸ್ ಮುಟ್ಟಿದರೆ ಪರಿಣಾಮ ಕೆಟ್ಟದಾಗಿರುತ್ತದೆ’’ ಎಂದು ಎಚ್ಚರಿಸಿದ. ತನ್ನ ಕುಡಿತಕ್ಕೂ ಮಗಳ ಭವಿಷ್ಯಕ್ಕೂ ಸಂಬಂಧ ಗ್ರಹಿಸಿದ ವಾಟಿಸ್ಸೆ ಒಂದೇ ಒಂದನಿಯನ್ನ ಮುಟ್ಟದೇ ಹೊಸ ಮನುಷ್ಯನಾಗಿ ರೂಪುಗೊಂಡು ಈತನೀಗ ಊರಲ್ಲಿ ಒಬ್ಬ ಗೌರವಾನ್ವಿತ ಪ್ರಜೆ- ಒಂದು ಕಾಲದಲ್ಲಿ ಈತನಿಗೆ ಹೊಡೆಯದವರೇ ಇಲ್ಲ ಮತ್ತು ಕಾಸುಕೊಡದೇ ಇರುವವರೇ ಇಲ್ಲ. ನನ್ನ ಕಣ್ಮುಂದೆ ಹೊಸ ಜನ್ಮ ಪಡೆದಂತೆ ಈಗ ಎಲ್ಲರಿಗೂ ಬೇಕಾದ ವ್ಯಕ್ತಿ. ತನ್ನ ಒಂದೇ ಮಾತಿನಿಂದ ವಾಟಿಸ್ಸೆಯನ್ನು ಬದಲಾಯಿಸಿದೆ. ಆತನ ಅಳಿಯನನ್ನ ನೋಡಬೇಕೆಂದು ಊಟಿಗೆ ಹೋಗಿ ನೋಡಿಬಂದೆ. ಈಗ ಕಟ್ಟೆ ಪುರಾಣದ ನಿಜವಾದ ಪಾತ್ರಧಾರಿಗಳಾದ ಕಾಳ-ಸೀರ, ಹೋಟೆಲ್ ಚಿಕ್ಕಣ್ಣ ಈ ಪಾತ್ರಗಳನ್ನು ರಂಗದ ಮೇಲೆ ಅಭಿನಯಿಸಿದ ಗಿರೀಶ್-ಈರಣ್ಣ, ನವಿಲೇಶ್ ಮತ್ತು ಮೈನಾಸು ಯಾರು ಇಲ್ಲ. ಹೀಗೆ ಇತಿಹಾಸ ಸೇರಿಹೋದ ಕಟ್ಟೆಪುರಾಣದ ಮರುಸೃಷ್ಠಿ ಕಷ್ಟ. ಕಾಲ ಸರಿದಿದೆ. ನಮ್ಮೆದುರು ದುರ್ದಿನಗಳಿವೆ ಅನ್ನಿಸತೊಡಗಿದೆ.

share
ಬಿ. ಚಂದ್ರೇಗೌಡ
ಬಿ. ಚಂದ್ರೇಗೌಡ
Next Story
X