ಹಣದ ಕೋಠಿಯೊಳಗೆ ಎದೆ ಮಿಡಿತದ ಸದ್ದು
38 ವರ್ಷಗಳ ಕಾಲ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿದ್ದವನಿಗೆ ನೆನಪುಗಳಿಗೇನೂ ಬರವಿಲ್ಲ. ಉಳಿದೆಲ್ಲ ವೃತ್ತಿಗಳಂತೇ ಬ್ಯಾಂಕಿನಲ್ಲೂ ಬದುಕಿನ ನಾನಾ ಬಗೆಯ ಅನುಭವಗಳಾಗುತ್ತವೆ. ಬ್ಯಾಂಕಿನಲ್ಲಿ ಹಣವೇ ಮುಖ್ಯ ವ್ಯವಹಾರವಾದ್ದರಿಂದ ಇಲ್ಲಿ ಮಾನವೀಯ ಸಂಬಂಧಗಳೂ ಹಣಕ್ಕಷ್ಟೇ ಸೀಮಿತ. ನನ್ನ ಸೇವಾವಧಿಯಲ್ಲಿ 15-20 ವರ್ಷ ಶಾಖಾ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸಿದ್ದೆ.. ಬ್ಯಾಂಕಿನಾಚೆಗಿನ ನನ್ನ ಸಾಹಿತ್ಯ, ಕಲೆ, ರಂಗಭೂಮಿ,
ಸಂಗೀತ ಕ್ಷೇತ್ರಗಳ ನಿರಂತರ ಒಡನಾಟದಿಂದಾಗಿ, ಬ್ಯಾಂಕಿನಲ್ಲೂ ಹಣದ ವ್ಯವಹಾರದಾಚೆಗೂ ಮಾನವೀಯ ತುಡಿತಕ್ಕಾಗಿ ಹಂಬಲಿಸಿದವನು ನಾನು. ಅಂತಹ ತುಡಿತಗಳ ಕಾರಣದಿಂದಾಗಿ ದಕ್ಕಿದ ಒಂದೆರಡು ವಿಶಿಷ್ಟ ನೆನಪುಗಳ ಮೆಲುಕು ಇಲ್ಲಿದೆ.
1. ಹೊಲ ಮೇಯಲೆತ್ನಿಸಿದ ಬೇಲಿ
ಆ ನಗರ ಶಾಖೆಯೊಂದರ ಮುಖ್ಯಸ್ಥನಾಗಿದ್ದೆ. ಸ್ಥಳೀಯ ಮಿಲಿಟರಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ತೀರಾ ಬಡ ಕುಟುಂಬದ ಜಾನಕಿ ಎಂಬವರಿಗೆ ಹೊಸದಾಗಿ ಮನೆ ಕಟ್ಟಲು 10 ಲಕ್ಷ ರೂ. ಸಾಲ ಮಂಜೂರು ಮಾಡಿದ್ದೆ.ಆಕೆಯ ವಯಸ್ಸು 54 ಆಗಿದ್ದರಿಂದ ಆಕೆಯ ಮಗನನ್ನೂ ಸಾಲದ ಖಾತೆಗೆ ಜಂಟಿಯಾಗಿ ಸೇರಿಸಿದ್ದೆ. ಸಾಧಾರಣವಾಗಿ ಮನೆ ಸಾಲ ಮಂಜೂರು ಮಾಡುವಾಗ ಗೃಹಸಾಲವಿಮೆ ಮಾಡಿಸಲು ಬ್ಯಾಂಕ್ ಜೊತೆ ಟೈ ಅಪ್ ಇರುವ ವಿಮಾ ಕಂಪೆನಿಯವರು ಒತ್ತಾಯಿಸುತ್ತಾರೆ. ಅದೇ ರೀತಿ ಈ ಜಾನಕಿಯವರಿಗೂ ಗೃಹ ವಿಮೆ ಮಾಡಲಾಯಿತು. ವಿಮೆ ಕಂತು ವರ್ಷಕ್ಕೆ 25,000 ರೂ.ನಂತೆ 5ವರ್ಷ ಪಾವತಿಸಬೇಕು. ಅದನ್ನೂ ಸಾಲದ ಮೊತ್ತಕ್ಕೆ ಸೇರಿಸಲಾಗುತ್ತದೆ. ಸಾಲ ಮರು ಪಾವತಿ ಅವಧಿಯಲ್ಲಿ ಸಾಲಗಾರರೇನಾದರೂ ತೀರಿಕೊಂಡರೆ ಬಾಕಿ ಉಳಿದ ಸಾಲದ ಮೊತ್ತವನ್ನು ವಿಮಾ ಕಂಪೆನಿಯೇ ಭರಿಸುತ್ತದೆ.ಸರಿ, ಜಾನಕಿಯವರು ಮನೆ ಕಟ್ಟಲು ಆರಂಭಿಸಿದರು. 7-8 ತಿಂಗಳೊಳಗೆ ನಿರ್ಮಾಣದ ಪ್ರಗತಿಯನ್ನಾಧರಿಸಿ ಹಂತ ಹಂತವಾಗಿ ಸಾಲವನ್ನೂ ಬಿಡುಗಡೆ ಮಾಡಿದ್ದಾಯ್ತು.
ಇನ್ನೇನು ಕೊನೇ ಹಂತದ ಬಾಕಿ ಉಳಿದ ಸಾಲದ ಮೊತ್ತ ಬಿಡುಗಡೆ ಮಾಡಬೇಕೆನ್ನುವಷ್ಟರಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ಜಾನಕಿಯವರು ಹೃದಯಾಘಾತದಿಂದ ತೀರಿಕೊಂಡರು. ಅಮ್ಮನ ಸಾವಿನ ಸುದ್ದಿ ಹೊತ್ತು ತಂದ, ದಿನಕೂಲಿ ಕೆಲಸ ಮಾಡುತ್ತಿದ್ದ, ಕೇವಲ 10 ನೇ ತರಗತಿ ಓದಿದ್ದ ಮಗ, ಇನ್ನು ಮುಂದೆ ಏನು ಗತಿ ಎಂದು ನೋವಿನಿಂದಲೇ ಪ್ರಶ್ನಿಸಿದ. ನಾನು ದಾಖಲೆಗಳನ್ನೆಲ್ಲ ಪರಿಶೀಲಿಸಿ, ಜಾನಕಿಯವರು ಗೃಹಸಾಲ ವಿಮೆ ಮಾಡಿಸಿದ್ದು ಮೊದಲ ವರ್ಷದ ಕಂತು ಕೂಡಾ ಕಟ್ಟಿರುವುದರಿಂದ ವಿಮಾ ಕಂಪೆನಿಯೇ ಸಾಲ ತೀರಿಸಬಹುದು,ಪ್ರಯತ್ನಿಸೋಣ ಎಂದು ಹೇಳಿದೆ. ವಿಮೆ ಮಾಡಿಸಿರುವ ಸಂಗತಿ ಮಗನಿಗೆ ಗೊತ್ತಿರಲಿಲ್ಲ ಅನಿಸುತ್ತದೆ. ಹೌದಾ ಸರ್,ಹೇಗಾದ್ರೂ ಸಾಲ ತೀರಿಸುವಂತಾಗಲಿ. ನನ್ನಿಂದಂತೂ ಸಾಲ ತೀರಿಸುವುದು ಸಾಧ್ಯವಿಲ್ಲ. ಒಂದು ವೇಳೆ ವಿಮಾ ಮೊತ್ತ ಬಾರದಿದ್ದರೆ ಅಮ್ಮನ ಪ್ರಾವಿಡೆಂಟ್ ಫಂಡ್ ಗ್ರಾಚ್ಯೂಯಿಟಿ ಮೊತ್ತವೇ ಗತಿ,ಆದರೆ ಅದೂ ಸಾಲಲಿಕ್ಕಿಲ್ಲ ಎಂದು ಹೇಳಿದ. ಯಾವುದಕ್ಕೂ ಅಮ್ಮನ ಡೆತ್ ಸರ್ಟಿಫಿಕೇಟ್, ಪೋಸ್ಟ್ ಮಾರ್ಟಮ್, ವೈದ್ಯಕೀಯ ರಿಪೋರ್ಟ್ ಇತ್ಯಾದಿ ತೆಗೆದುಕೊಂಡು ಬಾ, ವಿಮಾ ಕಂಪೆನಿಗೆ ಪತ್ರ ಬರೀತೀನಿ ಅಂದೆ. ಆಗಲಿ ಎನ್ನುತ್ತ ಒಂದು ವಾರದಲ್ಲಿ ಅದೆಲ್ಲವನ್ನೂ ಸಿದ್ಧಪಡಿಸಿ ತಂದುಕೊಟ್ಟ. ಆ ಎಲ್ಲ ದಾಖಲೆಗಳೊಂದಿಗೆ ವಿಮಾಕಂಪೆನಿಗೆ ಪತ್ರ ಬರೆದು, ತಡವಾಗದಿರಲಿ ಎಂದು ಆತನ ಮೂಲಕವೇ ವಿಮಾ ಕಂಪೆನಿಗೆ ಕಳಿಸಿ ಕೊಟ್ಟೆ. ತಿಂಗಳಾದರೂ ವಿಮಾ ಕಂಪೆನಿಯಿಂದಲೂ ಯಾವ ಪತ್ರವೂ ಬರಲಿಲ್ಲ. ಆ ಮೇಲೆ ನಾನೂ ಆ ವಿಚಾರ ಮರೆತು ಬಿಟ್ಟೆ.
ಕೆಲ ದಿನಗಳ ನಂತರ ಮಗ ಬ್ಯಾಂಕಿಗೆ ಬಂದಾಗ, ವಿಮೆಯ ನೆನಪಾಗಿ ಏನಾಯ್ತು? ‘ವಿಮಾ ಕಂಪೆನಿಗೆ ಹೋಗಿದ್ದಿಯಾ, ಏನಂದ್ರು?’ ಅಂತ ಕೇಳಿದೆ. ‘ಹ್ಞೂಂ..ಮೊನ್ನೆ ಹೋಗಿದ್ದೆ ಸರ್. ವಿಮೆ ಏನೂ ಬರುವುದಿಲ್ಲವಂತೆ, ಕಟ್ಟಿದ ಒಂದು ಕಂತು ಮಾತ್ರ ನಿನ್ನ ಅಕೌಂಟಿಗೆ ಹಾಕಿದ್ದೇವೆ ಎಂದು ಹೇಳಿದ್ದಾರೆ.ಅದನ್ನೇ ಡ್ರಾ ಮಾಡೋಕೆ ಬಂದೆ’ ಅಂದ. ನನಗೆ ಆಶ್ಚರ್ಯವಾಯ್ತು. ವಿಮೆ ಸೆಟಲ್ ಮಾಡಿ ಅಂತ ಪತ್ರ ಬರೆದಿದ್ದು ನಾನು. ಅವರು ಅದನ್ನು ಪತ್ರ ಮೂಲಕ ತಿಳಿಸಬೇಕಾದ್ದು ಶಾಖಾ ಮುಖ್ಯಸ್ಥನಾದ ನನಗೆ. ಅದು ಬಿಟ್ಟು ಜಾನಕಿಯವರ ಮಗನಿಗೆ ನೇರವಾಗಿ ಸಂಪರ್ಕಿಸಿ ಕಟ್ಟಿದ ಕಂತನ್ನು ಮಾತ್ರ ಹಿಂದಿರುಗಿಸಿ ಯಾಕೆ ಕೈ ತೊಳೆದುಕೊಂಡರು? ನನಗ್ಯಾಕೋ ಇದರಲ್ಲಿ ಏನೋ ಮೋಸವಾಗಿದೆ ಅನ್ನಿಸಿತು. ಹೆಚ್ಚು ಓದಿಲ್ಲದ ಮಗನ ಅಜ್ಞಾನವನ್ನು ದುರುಪಯೋಗಪಡಿಸಿಕೊಂಡು ವಿಮಾ ಮೊತ್ತ ನೀಡದಂತೇ ವಿಮಾಕಂಪೆನಿ ಸಂಚು ಹೂಡಿರಬಹುದೇನೋ ಅನ್ನಿಸಿತು. ತಕ್ಷಣವೇ ವಿಮಾ ಕಂಪೆನಿಯ ಪ್ರತಿನಿಧಿಗೆ ಫೋನ್ ಮಾಡಿ ವಿವರ ತಿಳಿಸಿ ಯಾಕೆ ವಿಮಾ ಮೊತ್ತ ತಿರಸ್ಕೃತವಾಗಿದೆ ಎಂದು ವಿಚಾರಿಸಿದೆ. ಕೇಳಿ ಹೇಳ್ತೇನೆ ಅಂದ. ಎರಡು ದಿನವಾದರೂ ಉತ್ತರ ಬಾರದ್ದರಿಂದ ನಾನೇ ಆ ವಿಮಾ ಕಂಪೆನಿಯ ಮ್ಯಾನೇಜರರಿಗೆ ಫೋನ್ ಮಾಡಿ ಕೇಳಿದೆ. ಇಲ್ಲ ಸರ್, ಆಕೆಯ ಮೆಡಿಕಲ್ ರಿಪೋರ್ಟ್ನಲ್ಲಿ ಪ್ರಾಬ್ಲಮ್ ಇರೋದ್ರಿಂದ ನಮ್ಮ ಹೆಡ್ ಆಫೀಸಿನ ಸೆಟಲ್ಮೆಂಟ್ ವಿಭಾಗದವರು ವಿಮೆ ರಿಜೆಕ್ಟ್ ಮಾಡಿದ್ದಾರೆ ಎಂದರು. ಏನು ಸಮಸ್ಯೆ ಇತ್ತು ರಿಪೋರ್ಟಿನಲ್ಲಿ ಅಂತ ಕೇಳಿದ್ರೆ ಗೊತ್ತಿಲ್ಲ ಅಂದರು. ಆಯ್ತು, ವಿಮೆ ಸೆಟಲ್ ಮಾಡಿ ಅಂತ ಪತ್ರ ಬರೆದ ನನಗೆ ಅದೆಲ್ಲ ಕಾರಣ ತಿಳಿಸಿ ಪತ್ರ ಬರೀಬೇಕಿತ್ತಲ್ಲ,ಯಾಕೆ ತಿಳಿಸಲಿಲ್ಲ ಅಂತ ಕೇಳಿದ್ದಕ್ಕೆ? ಅದೆಲ್ಲ ನಂಗೊತ್ತಿಲ್ಲ? ಅಂದ. ಸರಿ,ನೇರವಾಗಿ ವಿಮಾ ಕಂಪೆನಿಯ ಹೆಡ್ಡಾಫೀಸಿಗೇ ಫೋನ್ ಮಾಡಿ ಕೇಳಿದರೆ, ಆಕೆಗೆ ಮೊದಲೇ ಹೃದಯ ಸಂಬಂಧೀ ಕಾಯಿಲೆ ಇತ್ತು. ಆ ವಿವರ ಮುಚ್ಚಿಟ್ಟಿದ್ರು ಹಾಗಾಗಿ ತಿರಸ್ಕೃತವಾಗಿದೆ. ಅಂದ್ರು. ಅಷ್ಟಕ್ಕೇ ಬಿಡಲಿಲ್ಲ ನಾನು.
‘‘ನಿಮಗೆ ಹೇಗೆ ಗೊತ್ತಾಯ್ತು?’’ ಕೇಳಿದೆ.
‘‘ಅವರ ಮೆಡಿಕಲ್ ರಿಪೋರ್ಟಿನಲ್ಲಿದೆ’’
‘‘ಅವರ ಮೆಡಿಕಲ್ ರಿಪೋರ್ಟಿನಲ್ಲಿ ಈಗ ಹೃದಯಾಘಾತದಿಂದ ತೀರಿಕೊಂಡಿದ್ದಾರೆ ಅಂತಷ್ಟೇ ಬರೆದಿದ್ದಾರಲ್ಲ?’’
‘‘ಇಲ್ಲ,ನಾವು ಆಸ್ಪತ್ರೆಯವರನ್ನು ವಿಚಾರಿಸಿದ್ದೇವೆ’’
‘‘ ವಿಚಾರಿಸಿದ್ದರೆ, ಅವರು ಕೊಟ್ಟ ಉತ್ತರದ ದಾಖಲೆ ಇದೆಯಾ ನಿಮ್ಹತ್ರ?’’
‘‘ ಇಲ್ಲ, ಫೋನಿನಲ್ಲಿ ವಿಚಾರಿಸಿದ್ದು!’’
‘‘ಮೊದಲೇ ಹೃದಯ ಸಂಬಂಧೀ ಕಾಯಿಲೆ ಇತ್ತೆಂಬುದಕ್ಕೆ ಲಿಖಿತ ಪುರಾವೆ ಇಲ್ಲದೆ ಹೇಗೆ ವಿಮೆ ತಿರಸ್ಕರಿಸಿದ್ರಿ?’’
‘‘ ಇಲ್ಲ,ಇಲ್ಲ, ಮಗನಲ್ಲೂ ಈ ಬಗ್ಗೆ ಕೇಳಿದ್ದೆವು’’
‘‘ಮಗ ಏನು ಡಾಕ್ಟರಾ ಅಭಿಪ್ರಾಯ ಕೇಳೋಕೆ?’’ ನಾನೂ ಬಿಡದೆ ದಬಾಯಿಸಿದೆ.
‘‘ಅದಿರಲಿ, ನೀವು ವಿಮೆ ಮಾಡಿಸುವ ಮೊದಲು ಮೆಡಿಕಲ್ ಟೆಸ್ಟ್ ಮಾಡಿಸಿದ ರಿಪೋರ್ಟ್ ಇದೆಯಾ?’’ ಕೇಳಿದೆ.
‘‘ಇಲ್ಲ, ಮೊದಲು ಟೆಸ್ಟ್ ಮಾಡಿಸಿಲ್ಲ’’
‘‘ಮಾಡಿಸಬೇಕಿತ್ತಲ್ವಾ? ಆಗ ಮಾಡಿಸಿದ್ರೆ,ಆಕೆಗೆ ಯಾವುದಾದರೂ ಗಂಭೀರ ತೊಂದರೆ ಇದ್ದಿದ್ರೆ ಗೊತ್ತಾಗ್ತಿತ್ತಲ್ಲ. ಆಗ ವಿಮೆನೇ ಮಾಡ್ತಿರಲಿಲ್ಲ ನೀವು ಅಲ್ವಾ?’’
‘‘ಹೌದು’’
‘‘ಮೊದಲು ಮೆಡಿಕಲ್ ಟೆಸ್ಟ್ ಮಾಡಿಸದೆ, ವಿಮೆ ಮಾಡಿಸಿದ್ದು ನಿಮ್ಮ ತಪ್ಪು. ಈಗ ಏನೂ ತಿಳಿಯದ ಮಗನಿಗೆ ಏನೇನೋ ಹೇಳಿ ಯಾಮಾರಿಸಿ ವಿಮೆ ಸೆಟಲ್ ಮಾಡದೆ ಮೋಸ ಮಾಡ್ತಿದ್ದೀರಿ’’ ಎಂದು ನಾನೂ ದೊಡ್ಡ ದನಿಯಲ್ಲಿ ಕೂಗಾಡಿದೆ. ‘‘ಈಗೇನು ವಿಮೆ ಮೊತ್ತ ಬಿಡುಗಡೆ ಮಾಡ್ತೀರೋ ಇಲ್ವೋ?’’ ಕೇಳಿದೆ.
‘‘ಆಗಲ್ಲ ಸರ್’’ ಅಂತ ಫೋನಿಟ್ಟ.
ಆಗಲೇ ತೀರ್ಮಾನಿಸಿದೆ, ಯಾವ ಕಾರಣಕ್ಕೂ ವಿಮಾ ಕಂಪೆನಿಯವರನ್ನು ಬಿಡಬಾರದೆಂದು. ಎಲ್ಲವನ್ನೂ ವಿವರಿಸಿ ಮೇಲಧಿಕಾರಿಗಳಿಗೆ ವಿವರವಾದ ಪತ್ರ ಬರೆದೆ. ‘ಈ ವಿಮೆ ಸೆಟಲ್ ಆಗುವವರೆಗೂ, ನಮ್ಮ ಶಾಖೆಯಿಂದ ಯಾವ ವಿಮಾ ಪ್ರೊಪೋಸಲನ್ನೂ ಕ್ಯಾನ್ವಾಸ್ ಮಾಡೋದಿಲ್ಲ’ ಅಂತ ಹೇಳಿಯೂ ಬಿಟ್ಟೆ. ನಮ್ಮ ಮೇಲಧಿಕಾರಿಗಳೂ ವಿಮಾ ಕಂಪೆನಿ ಜೊತೆ ಮಾತಾಡಿದರೂ ಉಪಯೋಗ ವಾಗಲಿಲ್ಲ. ನಂತರ ನಾನೇ ಸ್ವತಃ ಜಾನಕಿ ಕೆಲಸ ಮಾಡುತ್ತಿದ್ದ ಮಿಲಿಟರಿ ಆಸ್ಪತ್ರೆಗೆ ಹೋಗಿ ಸಂಬಂಧಪಟ್ಟ ವೈದ್ಯರೊಂದಿಗೆ ಮಾತಾಡಿದೆ. ಆಕೆಯ ವೈದ್ಯಕೀಯ ದಾಖಲೆ ಮತ್ತೊಮ್ಮೆ ಪರಿಶೀಲಿಸುವಂತೆ ವಿನಂತಿಸಿದೆ.
ಅವರು ಆಕೆಯ ಮೆಡಿಕಲ್ ಹಿಸ್ಟರಿ ಪರಿಶೀಲಿಸಿ, ‘ಆಕೆಗೆ ಸಣ್ಣಪುಟ್ಟ ಜ್ವರ ಕೆಮ್ಮು ಮೈಕೈ ನೋವು ಬಿಟ್ಟರೆ ಯಾವ ಹೃದಯ ಸಂಬಂಧೀ ಕಾಯಿಲೆಯೂ ಇರಲಿಲ್ಲ’ ಎಂದು ಹೇಳಿದರು.
‘‘ಅರೇ,ಹಾಗಾದರೆ ವಿಮಾ ಕಂಪೆನಿಯವರು ನಿಮಗೆ ಫೋನ್ ಮಾಡಿ ಕೇಳಿದಾಗ ಆಕೆಗೆ ಹಿಂದೆ ಸಮಸ್ಯೆ ಇತ್ತು ಅಂತ ಹೇಳಿದ್ಯಾಕೆ?’’ ಕೇಳಿದೆ.
‘‘ಇಲ್ಲ, ನಮಗೆ ಯಾವ ವಿಮಾ ಕಂಪೆನಿಯವರೂ ಫೋನ್ ಮಾಡಿಲ್ಲ. ಅಷ್ಟಕ್ಕೂ ಇದು ಮಿಲಿಟರಿ ಆಸ್ಪತ್ರೆ,ಯಾವುದೋ ಸರಕಾರಿ ಅಥವಾ ಪ್ರೈವೇಟ್ ಆಸ್ಪತ್ರೆಯಲ್ಲ. ಹಾಗೆಲ್ಲ ಫೋನಿನಲ್ಲಿ ಉತ್ತರಿಸುವುದಿಲ್ಲ. ಅಧಿಕೃತವಾಗಿ ಪತ್ರ ಬರೆದರೆ ಮಾತ್ರ ಉತ್ತರಿಸುತ್ತೇವೆ. ಅದೂ ಅಲ್ಲದೆ ಆಕೆ ನಮ್ಮಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ನಮ್ಮ ಸಿಬ್ಬಂದಿ. ಆಕೆಯ ಬಗ್ಗೆ ಇಲ್ಲಿ ಎಲ್ಲರಿಗೂ ಗೊತ್ತಿದೆ’’ ಎಂದರು.
ಸರಿ, ಎಂದು ಅವರಿಂದ ಆಕೆಯ ಮೆಡಿಕಲ್ ದಾಖಲೆಯ ಪ್ರತಿಗಳನ್ನು ಪಡೆದು ಕೊಂಡು ವಾಪಸ್ ಬಂದೆ. ವಿಮಾ ಕಂಪೆನಿ ಮೋಸ ಮಾಡಿರೋದಂತೂ ಖಾತ್ರಿಯಾಯ್ತು.
ಈಗ ಎಲ್ಲ ವಿವರಗಳೊಂದಿಗೆ ನೇರವಾಗಿ ನಮ್ಮ ಜನರಲ್ ಮ್ಯಾನೇಜರರಿಗೇ ಪತ್ರ ಬರೆದೆ. ಆಮೇಲೆ, ಒಂದು ದಿನ ನೇರವಾಗಿ ಭೇಟಿ ಮಾಡಿ ಏನೇನು ನಡೆಯಿತು ಎಂಬುದನ್ನೆಲ್ಲ ಎಳೆ ಎಳೆಯಾಗಿ ಬಿಡಿಸಿ ಹೇಳಿ, ಆಕೆಯ ಸಾವಿನ ನಂತರ ಆಕೆಯ ಮಗನಿಗೆ ಹೇಗೆ ಮೋಸ ಮಾಡಿದರು ಎಂಬುದನ್ನು ದಾಖಲೆ ಸಹಿತ ಮನವರಿಕೆ ಮಾಡಿದೆ. ಆಗಲೇ ಏಳೆಂಟು ತಿಂಗಳು ಕಳೆದಿತ್ತು.ನನ್ನ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿದ ಜನರಲ್ ಮ್ಯಾನೇಜರ್ ಆಕೆಯ ಬಗ್ಗೆ ನಾನು ತೋರಿಸಿದ ಕಾಳಜಿಗಾಗಿ ಅಭಿನಂದಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು.
ಮರುದಿನ, ವಿಮಾ ಕಂಪೆನಿಯ ಮುಖ್ಯಸ್ಥರನ್ನು ಬರಹೇಳಿದರು. ನಾನು ಒದಗಿಸಿದ ದಾಖಲೆಗಳೊಂದಿಗೆ ವಿಮಾ ಕಂಪೆನಿಯ ಮುಖ್ಯಸ್ಥರೊಂದಿಗೆ ಸುದೀರ್ಘ ಚರ್ಚೆಯ ನಂತರ, ವಿಮಾ ಕಂಪೆನಿಯವರು ವಿಮೆ ಸೆಟಲ್ ಮಾಡಲು ತಾರ್ಕಿಕ ಅನುಮತಿ ನೀಡಿದರು. ಅದಾದ ನಂತರವೂ ಆ ದಾಖಲೆ, ಈ ದಾಖಲೆ ಅಂತ ವಿಮಾ ಕಂಪೆನಿಯವರು ಮತ್ತೆ 2-3 ತಿಂಗಳು ತಳ್ಳಿದರು. ನಾನಂತೂ ಬೆನ್ನು ಬಿಡದ ನಕ್ಷತ್ರಿಕನಂತೇ ವಿಮಾ ಕಂಪೆನಿಯವರ ಹಿಂದೆ ಬಿದ್ದೆ. ಕೊನೆಯ ಅಸ್ತ್ರವಾಗಿ, ವಿಮಾ ನ್ಯಾಯ ಮಂಡಳಿಗೆ ದೂರು ದಾಖಲಿಸುವ ಬೆದರಿಕೆಯೊಡ್ಡಿ ಮಾದರಿ ದೂರು ಪತ್ರವೊಂದನ್ನು ತೋರಿಸಿದ ಮೇಲೆ, ಬೇರೆ ದಾರಿಯಿಲ್ಲದೆ, ವಿಮಾ ಮೊತ್ತ ಸೆಟಲ್ ಮಾಡಲೇ ಬೇಕಾಯಿತು. ಜಾನಕಿಯ ಸಾಲವಿದ್ದುದು 10 ಲಕ್ಷ. ಬಡ್ಡಿ ಸೇರಿ 12 ಲಕ್ಷದ ಹತ್ತಿರ ಬಾಕಿಯಾಗಿತ್ತು. ಎಲ್ಲವನ್ನೂ ಸೇರಿಸಿ ಒಂದು ವರ್ಷದ ಬಡ್ಡಿ ಸಹಿತ 13 ಲಕ್ಷದ ಚೆಕ್ ವಿಮಾ ಕಂಪೆನಿಯಿಂದ ಬಂದಾಗ ಜಾನಕಿಯ ಮಗ ಮಾತ್ರವಲ್ಲ ನಾನೂ ಅಕ್ಷರಶಃ ಅತ್ತುಬಿಟ್ಟೆ.. ಜಾನಕಿಯವರ ಗೃಹ ಸಾಲ ಪೂರ್ತಿ ಚುಕ್ತಾ ಮಾಡಿ ಉಳಿದ ದುಡ್ಡು ಮಗನ ಖಾತೆಗೆ ಹಾಕಿದ ದಿನ ಮಗ ನನ್ನ ಕಾಲಿಗೆ ಬೀಳಲು ಬಂದ. ಅದೃಷ್ಟವಶಾತ್ ಅಮ್ಮ ವಿಮೆ ಮಾಡಿಸಿದ್ದರಿಂದ ಸಾಲದ ಬಾಧೆಯಿಲ್ಲದೆ ಮನೆ ನಿಮ್ಮ ಪಾಲಿಗೆ ಉಳಿದಿದೆ. ಯಾವ ಕಾರಣಕ್ಕೂ ಈ ಮನೆ ಮಾರಕೂಡದು. ಹಾಗೆಂದು ಮಾತು ಕೊಡು ಅಂದೆ. ‘‘ಆಗಲಿ ಸರ್’’ ಎನ್ನುತ್ತಾ ಮತ್ತೊಮ್ಮೆ ಕಣ್ಣೀರಾದ.
2. ನಿಯಮಾವಳಿಯನ್ನು ಪಕ್ಕಕ್ಕಿಟ್ಟಾಗ..!!
ಅದೊಂದು ನಗರ ಶಾಖೆಯ ವ್ಯವಸ್ಥಾಪಕನಾಗಿದ್ದಾಗ, ಒಂದು ದಿನ ಮಧ್ಯಾಹ್ನ, ಕೌಂಟರಿನಲ್ಲಿ ಹೆಂಗಸೊಬ್ಬರು ಗೋಗರೆಯುವುದು ಕೇಳಿಸಿತು. ಛೇಂಬರಿನಿಂದ ಹೊರಬಂದು ನೋಡಿದರೆ ಮಧ್ಯವಯಸ್ಕ ಹೆಂಗಸು ಅಳುವುದು, ಜತೆಗಿದ್ದ ಗಂಡ ಸಮಾಧಾನಿಸುವುದು ಕಾಣಿಸಿತು.ಛೇಂಬರಿಗೆ ಕರೆದು ಮಾತನಾಡಿಸಿದೆ. ವಿಷಯವಿಷ್ಟು:
ಆಕೆಯ ವೃದ್ಧತಾಯಿ 6-7 ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆ ನೀಡಿದ ಸರಕಾರಿ ಆಸ್ಪತ್ರೆ ವೈದ್ಯರು ಕೈಚೆಲ್ಲಿ ವಾಪಸ್ ಕರಕೊಂಡು ಹೋಗಲು ಹೇಳಿದ್ದಾರೆ. ಮನೆಗೆ ಕರೆತಂದು ತಿಂಗಳಾಗಿದೆ. ಆಕೆಯ ಗಂಡ ಆಟೋ ಡ್ರೈವರ್. ದುಡಿದ ಹಣವೆಲ್ಲ ವೃದ್ಧೆಯ ಚಿಕಿತ್ಸೆಗೆ ಖರ್ಚಾಗಿದೆ. ವೃದ್ಧೆಯ (ತೀರಿಕೊಂಡ ಗಂಡನ ) ಪಿಂಚಣಿ ಹಣ 7-8 ತಿಂಗಳಿಂದ ಡ್ರಾ ಮಾಡುವುದಕ್ಕೇ ಆಗಿಲ್ಲ. ವೈದ್ಯರ ಪತ್ರ ತಂದು ವೃದ್ಧೆಯ ಪಿಂಚಣಿ ಡ್ರಾ ಮಾಡಿಕೊಡಿ ಎಂದು ಕೌಂಟರಿನಲ್ಲಿ ಗೋಗರೆದಿದ್ದಾರೆ. ವೃದ್ಧೆ ಅನಕ್ಷರಸ್ಥೆಯಾದ್ದರಿಂದ ಆಕೆಯನ್ನೇ ಕರೆತರಬೇಕೆಂದು ಕೌಂಟರಿನಲ್ಲಿ ಹೇಳುತ್ತಿದ್ದಾರೆ. ಕರೆ ತರುವ ಸ್ಥಿತಿಯಲ್ಲಿ ಇಲ್ಲವೆಂದು ಈಕೆ ಹೇಳುತ್ತಿದ್ದಾರೆ.
ಆಕೆ ಅಳುತ್ತ ‘‘ಹೇಗಾದರೂ ಸಹಾಯ ಮಾಡಿ, ಮನೆಯಲ್ಲಿ ಊಟಕ್ಕೂ ತೊಂದರೆ
ಯಾಗಿದೆ’’ ಎಂದು ಅಂಗಲಾಚುತ್ತಿದ್ದಾರೆ. ‘‘ಸರಿಯಮ್ಮ, ನಾನೇ ಬರ್ತೇನೆ, ಮನೆ ಎಷ್ಟು ದೂರವಿದೆ?’’ ಅಂತ ಕೇಳಿದೆ.
ಸುಮಾರು 20-25 ಕಿ.ಮೀ. ಅಂದರು. ನಮ್ಮ ಆಟೋದಲ್ಲೇ ಕರಕೊಂಡು ಹೋಗಿ ವಾಪಸ್ ಬಿಡ್ತೇವೆ ಅಂದರು.
‘‘ಸರಿ’’ ಎಂದು ವಿತ್ ಡ್ರಾವಲ್ ಸ್ಲಿಪ್, ಸ್ಟ್ಯಾಂಪ್ ಪ್ಯಾಡ್ ಇತ್ಯಾದಿ ತೊಗೊಂಡು ಅವರೊಂದಿಗೆ ಆಟೋದಲ್ಲಿ ಹೊರಟೆ.
ಹೋಗುತ್ತ ದಾರಿಯಲ್ಲಿ ಇನ್ನಷ್ಟು ವಿಚಾರ ತಿಳಿಯಿತು. ವೃದ್ಧೆಗೆ ಈ ಮಗಳಲ್ಲದೆ ಇನ್ನಿಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರೂ ಸರಕಾರಿ ನೌಕರಿಯಲ್ಲಿದ್ದಾರೆ. ಒಬ್ಬಾತ ಬೇರೆ ಊರಲ್ಲಿದ್ದಾನೆ. ಇನ್ನೊಬ್ಬಾತ ಇದೇ ಊರಲ್ಲಿ ತಂದೆ ಕಟ್ಟಿದ ಮನೆಯಲ್ಲಿದ್ದಾನೆ. ಆತನಿಗೆ ಉದ್ಯೋಗ ದೊರೆತದ್ದು ಕೂಡ ತಂದೆ ಸರ್ವೀಸಿನಲ್ಲಿದ್ದಾಗಲೇ ತೀರಿಕೊಂಡ ಮೇಲೆ, ಅನುಕಂಪದ ಆಧಾರದಲ್ಲಿ.
ಇಬ್ಬರು ಗಂಡು ಮಕ್ಕಳ ಸಮಾನ ‘ಗುಣ’ವೆಂದರೆ, ಇಬ್ಬರೂ ಕಾಯಿಲೆ ಬಿದ್ದ ವೃದ್ಧ ಅಮ್ಮನನ್ನು ಮನೆಯಿಂದಾಚೆಗೆ ಹಾಕಿದ್ದಾರೆ. ಹಾಗಾಗಿ ಮಗಳ ಮನೆಯಲ್ಲಿದ್ದಾರೆ. ಅಳಿಯ ಆಟೋ ಡ್ರೈವರ್ ಆದರೂ ತನ್ನ ಶಕ್ತಿ ಮೀರಿ ಅತ್ತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಅತ್ತೆಯ ಆರೋಗ್ಯ ಉಲ್ಬಣಗೊಂಡ ಮೇಲೆ ದುಡಿದ ಹಣವೆಲ್ಲ ಚಿಕಿತ್ಸೆಗೇ ಖರ್ಚಾಗಿ ಬರಿಗೈಲಿ ನಿಂತಿದ್ದಾರೆ.
ಮನೆ ತಲುಪಿದೆವು. ಅದೊಂದು ಚಿಕ್ಕ ಸಿಮೆಂಟ್ ಶೀಟಿನ ಮನೆ. ಪುಟ್ಟ ಜಗುಲಿಯಲ್ಲೇ ಹರಕು ಮಂಚದಲ್ಲಿ ಅಜ್ಜಿ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿದ್ದರು. ಆಗೀಗ ಕೈಕಾಲು ಅಲುಗಾಟ ಮಾತ್ರ.
ಮಗಳು ‘ಅವ್ವಾ ಮ್ಯಾನೇಜ್ರು ಬಂದವ್ರೆ’ ಅಂತ ಕಿವಿಯಲ್ಲಿ ಜೋರಾಗಿ ಹೇಳಿದಾಗ ಒಮ್ಮೆ ಕಣ್ಣುಬಿಟ್ಟು ನೋಡಿದರು. ನನಗಷ್ಟೇ ಸಾಕಿತ್ತು. ಕೈಹಿಡಿದು ವಿತ್ ಡ್ರಾವಲ್ ಸ್ಲಿಪ್ಪಿನ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡೆ. ಯಾವುದಕ್ಕೂ ಇರಲಿ ಎಂದು ನನ್ನ ಮೊಬೈಲ್ ಅಳಿಯನ ಕೈಗೆ ಕೊಟ್ಟು ಅಜ್ಜಿ ಕಾಣುವಂತೆ ಹೆಬ್ಬೆಟ್ಟು ಒತ್ತುವುದರ ಫೋಟೊ ತೆಗೆಯಲು ಹೇಳಿದೆ.(ನಮ್ಮ ದಾಖಲೆಗಾಗಿ) ಪುಣ್ಯಕ್ಕೆ ಫೋಟೊದಲ್ಲಿ ಅಜ್ಜಿ ಅರೆಗಣ್ಣು ತೆರೆದಿದ್ದರು.
ನಾನು ಹೊರಡುವಾಗ ಒಮ್ಮೆ ಅಜ್ಜಿ ಕೈ ಎತ್ತಲು ಪ್ರಯತ್ನಿಸಿದರು ಅಷ್ಟೇ.. ಮತ್ತೆ ಆಟೋದಲ್ಲಿ ಬ್ಯಾಂಕಿಗೆ ಹೊರಟೆವು. ಇನ್ನೇನು ಬ್ಯಾಂಕ್ ಹತ್ರ ಬರುತ್ತಿದೆ ಅನ್ನುವಷ್ಟರಲ್ಲಿ ಜೊತೆಯಲ್ಲಿದ್ದ ಮಗಳ ಫೋನ್ ರಿಂಗಣಿಸಿತು. ಆ ಕಡೆಯಿಂದ ಅಜ್ಜಿ ಈಗ ತಾನೇ ತೀರಿಕೊಂಡರು ಅನ್ನುವ ಸುದ್ದಿ!!
ಒಮ್ಮೆಗೇ ದಿಗ್ಭ್ರಮೆಯಾಯಿತು ನನಗೆ. ಒಂದು ಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ. ಮಗಳು ಅಳುತ್ತ ನನ್ನ ಕಾಲು ಹಿಡಿಯಲು ಬಂದರು.‘‘ಸಾರ್, ನಮ್ಮ ಕೈಲಿ ಬಿಡಿಗಾಸೂ ಇಲ್ಲ. ಈಗ ಮಣ್ಣು ಮಾಡುವುದಕ್ಕಾದರೂ ಅಮ್ಮನ ಪಿಂಚಣಿ ಕೊಡಿಸಿಕೊಡಿ’’ ಎಂದು ಅಳಲಾರಂಭಿಸಿದರು. ನನಗೂ ದು:ಖ ತಡೆಯಲಾಗಲಿಲ್ಲ. ಏನಾದರೂ ಮಾಡೋಣವೆಂದೆ.
ನನಗೋ ಧರ್ಮ ಸಂಕಟ.
ನಿಯಮ ಪ್ರಕಾರ, ವ್ಯಕ್ತಿ ಸತ್ತಮೇಲೆ ಅವರ ಖಾತೆಯಿಂದ ದುಡ್ಡು ತೆಗೆಯುವಂತಿಲ್ಲ. ಹಾಗಂತ,ಈ ಅಜ್ಜಿಯ ವಿಚಾರದಲ್ಲಿ ನಿಯಮ ಪಾಲನೆ ಮಾಡಲು ಹೋದರೆ ಖಾತೆಯಲ್ಲಿರುವ ಸುಮಾರು ರೂ. 42,000/- ಮೊತ್ತವನ್ನು ಕಾನೂನುಬದ್ಧ ಹಕ್ಕುದಾರರಾದ ಗಂಡುಮಕ್ಕಳು ದೋಚುತ್ತಾರೆ.
ಅಜ್ಜಿಗಾಗಿ, ಆಕೆಯನ್ನು ನೋಡಿಕೊಳ್ಳುತ್ತಿರುವ ಮಗಳಿಗಾಗಿ ನಿಯಮಾವಳಿ ಪಕ್ಕಕ್ಕಿಡಲು ತೀರ್ಮಾನಿಸಿದೆ. ಬ್ಯಾಂಕಿನಲ್ಲಿ ಅಜ್ಜಿ ತೀರಿಕೊಂಡ ವಿಚಾರ ಯಾರಲ್ಲೂ ಹೇಳಕೂಡದೆಂದು ಮಗಳು ಅಳಿಯ ಇಬ್ಬರಿಗೂ ಹೇಳಿದೆ. ಹಾಗಿದ್ದರೆ ಮಾತ್ರ ದುಡ್ಡು ಕೊಡಿಸುತ್ತೇನೆ ಎಂದೆ. ಸರಿ ಎಂದರು. ಬ್ಯಾಂಕಿನಲ್ಲಿ ಮಗಳ ಸಹಿಯನ್ನೂ ಸಾಕ್ಷಿಯಾಗಿ ಪಡೆದು ಖಾತೆಯಲ್ಲಿದ್ದ ಅಷ್ಟೂ ಹಣವನ್ನು ಡ್ರಾ ಮಾಡಿ ಆಕೆಯ ಕೈಗಿತ್ತೆ..!!
ಹಾಗೇ, ಗಂಡು ಮಕ್ಕಳು ಬಂದು ಕೇಳಿದರೆ ‘‘ಮ್ಯಾನೇಜರ್ ಮನೆಗೆ ಬರುವಾಗಲೇ ದುಡ್ಡನ್ನು ತೆಗೆದುಕೊಂಡೇ ಬಂದಿದ್ದರು. ಹೆಬ್ಬೆಟ್ಟು ಹಾಕಿಸಿದ ಕೂಡಲೇ ಇಲ್ಲೇ ದುಡ್ಡುಕೊಟ್ಟರು’’ ಅಂತ ಹೇಳಬೇಕೆಂದು ಹೇಳಿಕೊಟ್ಟೆ. ಯಾಕೆಂದರೆ, ‘ಆಕೆ ಬದುಕಿದ್ದಾಗಲೇ ದುಡ್ಡು ಡ್ರಾ ಮಾಡಿದ್ದರು’ ಅಂತ ಸಾಬೀತು ಮಾಡಲು ನನಗಿದ್ದ ಮಾರ್ಗ ಅದೊಂದೇ ಆಗಿತ್ತು..! 3-4ದಿನ ಬಿಟ್ಟು ಬ್ಯಾಂಕಿಗೆ ಬಂದು ಅಜ್ಜಿಯ ಡೆತ್ ಸರ್ಟಿಫಿಕೇಟ್ ಕೊಡಲು ಹೇಳಿದೆ.
ನಾನು ಊಹಿಸಿದಂತೇ, ನಾಲ್ಕನೇ ದಿನ ಇಬ್ಬರು ಗಂಡು ಮಕ್ಕಳೂ ಬ್ಯಾಂಕಿಗೆ ಬಂದು, ಅಮ್ಮ ತೀರಿಕೊಂಡರೆಂದೂ, ತಾವು ಆಕೆಯ ನ್ಯಾಯಬದ್ಧ ಹಕ್ಕುದಾರರೆಂದೂ, ಆಕೆಯ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಸಬೇಕೆಂದೂ ಅರ್ಜಿ ಕೊಟ್ಟರು. ‘‘ಖಾತೆಯಲ್ಲಿ 100 ರೂ. ಮಾತ್ರ ಇದೆ’’ ಎಂದೆ.
ಉಳಿದ ದುಡ್ಡು ಯಾರು ತೆಗೆದರು ಅಂತ ತಗಾದೆ ಶುರು ಮಾಡಿದ ತಕ್ಷಣ, ‘‘ನಾಲ್ಕು ದಿನಗಳ ಹಿಂದೆ ಮಗಳು ಬಂದು ಹೇಳಿದ್ದಕ್ಕೆ ನಾನೇ ಪೂರ್ತಿ ಮೊತ್ತ ತೆಗೆದುಕೊಂಡು ಹೋಗಿ ಹೆಬ್ಬೆಟ್ಟು ಹಾಕಿಸಿ ಅಲ್ಲೇ ದುಡ್ಡು ಕೊಟ್ಟು ಬಂದೆ’’ ಎಂದು ಹೇಳಿ ಸಾಕ್ಷಿಯಾಗಿ ಮೊಬೈಲಿನಲ್ಲಿದ್ದ ಫೋಟೋ ತೋರಿಸಿದೆ.ಅದರಲ್ಲಿ ಸಮಯವೂ ದಾಖಲಾಗಿದ್ದರಿಂದ ಅವರು ನಂಬಲೇ ಬೇಕಿತ್ತು..!!
‘‘ನೀವು ವಾಪಸ್ ಬಂದ ನಂತರ ತೀರಿಕೊಂಡರು ಸಾರ್’’ ಅಂದರು.
ಓಹ್..ಹೌದಾ? ಎಂದು ಅಮಾಯಕನಂತೆ ಲೊಚಗುಟ್ಟಿದೆ..!!
ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಹತಾಶೆಯಿಂದ ಹಿಂದಿರುಗಿದರು.
ಹದಿನೈದು ದಿನಗಳ ನಂತರ ಮಗಳು ಅಳಿಯ ಬ್ಯಾಂಕಿಗೆ ಬಂದು,ಗಂಡು ಮಕ್ಕಳು ಆಮೇಲೆ ಬಂದು ಉಳಿದ ಹಣಕ್ಕಾಗಿ ಪೀಡಿಸಿದರು ಎಂದೂ, ಹಣವೆಲ್ಲ ಅಮ್ಮನ ಉತ್ತರ ಕ್ರಿಯೆಗೆ ಖರ್ಚಾಯಿತೆಂದು ಹೇಳಿದರೆಂದೂ,ಆಗ ನೆಂಟರಿಷ್ಟರೆಲ್ಲ ಇದ್ದುದರಿಂದ ಹೆಚ್ಚೇನೂ ಗಲಾಟೆಯಾಗಲಿಲ್ಲವೆಂದೂ ಹೇಳಿ, ನಿಮ್ಮ ಉಪಕಾರವನ್ನು ಜೀವನ ಪೂರ್ತಿ ಮರೆಯುವುದಿಲ್ಲವೆಂದು ಮತ್ತೊಮ್ಮೆ ಅಳುತ್ತ ಹೇಳಿ ಹಿಂದಿರುಗಿದರು.
ಆ ಅಜ್ಜಿಯ ನೆಮ್ಮದಿಯ ಸಾವಿಗಾಗಿ, ಆಕೆಯ ಆರೈಕೆಯಲ್ಲೇ ಹಣ್ಣಾದ ಮಗಳಿಗಾಗಿ ಕಾನೂನನ್ನು ಕೊಂಚವೇ ಬದಿಗೆ ಸರಿಸಿದ್ದರಲ್ಲಿ ನನಗ್ಯಾವ ತಪ್ಪೂ ಕಾಣಲಿಲ್ಲ. ಹಾಗೆಂದು,ಎಲ್ಲ ಸಂದರ್ಭದಲ್ಲಿ ಕಾನೂನು ದಾಟಲು ಸಾಧ್ಯವಿಲ್ಲ. ವೃತ್ತಿ ಬದುಕಿನಲ್ಲಿ ಇಂತಹ ಹಲವು ಘಟನೆಗಳು ಎದುರಾದಾಗ, ಅಸಹಾಯಕನಾಗಿದ್ದುಂಟು.
ಆಗೆಲ್ಲ ಮಾನಸಿಕವಾಗಿ ವಿಲಿವಿಲಿ ಒದ್ದಾಡಿದ್ದೇನೆ.
ಆದರೆ, ಯಾವುದೇ ಶಾಖೆಗೆ ಮುಖ್ಯಸ್ಥನಾಗಿ ವರ್ಗವಾಗಿ ಹೋದಾಗಲೂ, ನಾನು ಸಿಬ್ಬಂದಿಗೆಲ್ಲ ಹೇಳುವ ಮಾತೊಂದುಂಟು:
‘‘ಬ್ಯಾಂಕಿನ ನಿಯಮಾವಳಿ,ಕಾನೂನು ಕಟ್ಟಳೆಗಳೆಲ್ಲ ಗ್ರಾಹಕರ ಕೈಹಿಡಿದು ನಡೆಸುವ ಊರುಗೋಲುಗಳಾಗಬೇಕೇ ಹೊರತು,ಹೆದರಿಸಿ ಓಡಿಸುವ ಬಾರುಕೋಲಾಗಬಾರದು’’
ಬಹುಶಃ ವೃತ್ತಿ ಬದುಕಿನ ಸಾರ್ಥಕ್ಯದ ಕ್ಷಣಗಳೆಂದರೆ ಇಂತಹ ಘಟನೆಗಳೇ ಇರಬೇಕು!!