ಒಲಿದ ಸ್ವರಗಳು
ಸುಟ್ಟ ನಾಡಿನಲಿ
ಹಾಡುಹಕ್ಕಿಯೇ
ನೀನು ಅದಾವ ಹಾಡು ಹಾಡುತ್ತಿರುವಿ
ಈ ಬೂದಿಯಾದ ನಾಡಿನಲಿ
ಪಕ್ಕನೆ ಸಿಡಿದೆರಗಿದ ಕ್ರೌರ್ಯ
ಕಾರುವ ಹಗೆಯ ಉರಿ ಹೊಗೆ
ನಿನ್ನ ಸ್ವಪ್ನ ಸೌಧವ ಪುಡಿಗಟ್ಟಿಸಿದ ಬಗೆ
ಇವೆಲ್ಲವ ಕಂಡು
ನಿನ್ನಿರುವಿನ ಅರಿವು ನೀನೇ ಮರೆತಮೇಲೆ
ನಿನ್ನ ಈ ಮೂಕ ಗೀತೆ
ಬಲ್ಲೆ ನಾನು
ಯುದ್ಧವೊಂದು ಕೊಂದು ಹಾಕಿತು
ನಿನ್ನ ಎದೆಯ ಪದವನು
ಅದರ ಲಯ ಗತಿಯನು
ಮತ್ತು ನಿನ್ನ ಕೊಳಲಿಂಪಿನ ಗಾನ ಲಹರಿಯನು
ನಿನ್ನ ಕಣ್ಣೆದುರಲೇ
ಛಿದ್ರಗೊಳಿಸಿತು
ನಿನ್ನ ಕೂಸು ಕಂದಮ್ಮರನು
ಒಡೆದು ಧ್ವಂಸವಾಯಿತು ನಿನ್ನ ಗೂಡು
ಹೂತು ಹೋಯಿತು ನಿನ್ನ ಹಾಡು ಪಾಡು
ಮತ್ತಲ್ಲೇ ಬತ್ತಿಹೋಯಿತು
ನಿನ್ನ ಕಣ್ಣವೆಯೊಳಗಿನ
ಜಾರದೆಯೇ ಉಳಿದ ಹನಿಯು
ಈ ಸುಟ್ಟ ನಾಡಿನಲಿ
ಹಾಡು ಹಕ್ಕಿಯೇ
ನೀನು ನಿನ್ನೀ ಮೂಕಗೀತೆಯಲೀಗ
ಸ್ವರವ ಹೂಡಬೇಕು
ನಿನ್ನ ರಾಗಾಲಾಪದ ಶಿಳ್ಳೆಯು
ಕಹಳೆಯಾಗಿ ಮೊಳಗಬೇಕು
ನೀ ಮೂಕವಾದೆಯಾದರೆ
ಈ ಸರ್ವನಾಶದ
ಸಹಸ್ರ ವರ್ಷಗಳ ತರುವಾಯ
ನಿನ್ನೀ ನಾಡಿಗೆ ಬಾಂಬುಗಳನೆಸೆದು ಸುಟ್ಟ
ಈ ನರ ಸಂತಾನದ
ಅದೆಷ್ಟನೆಯದೋ ಪೀಳಿಗೆಯ
ಕೆಲ ಪಳೆಯುಳಿಕೆಗಳು
ಗುದ್ದಲಿ ಪಿಕಾಸಿಗಳ
ಹಿಡಿದು ಬರು?
****************************************
ಹಳೆಯ ಉಡುಪು
ಇರುಳಿಡೀ ಅವನು
ತನ್ನ ಹೊಸ ಪ್ರೇಯಸಿಗೆ
ತನ್ನ ಹಳೆಯ ಪ್ರೇಮಕವಿತೆಗಳ
ಕೇಳಿಸುತ್ತಲಿದ್ದ
ಯಾರದೋ ಹಳೆಯ ಉಡುಪುಗಳನು
ಇನ್ನಾರದೋ ಮಗುವಿಗಾಗಿ
ಕೈಯೆತ್ತಿ ಕೊಟ್ಟುಬಿಡುವ ಹಾಗೆ
ಅವನು
ಯಾವುದೋ ಮಗುವಿಗೆ
ತನ್ನ ಹರಿದ ಹಳೆಯ ಉಡುಪುಗಳನು
ಹುಮ್ಮಸ್ಸಿನಲಿ ದಾನ ಮಾಡಿ
ಹನಿದುಂಬಿದ ಆ ಕಣ್ಣುಗಳ ಹೊಳಪನು
ತನ್ನ ಕ್ಯಾಮರಾದಲಿ ಸೆರೆಹಿಡಿದ
ಅವನತ್ತ ಹೊರಳುವುದಕ್ಕಿಲ್ಲ
ಹನಿ ಉದುರಿಬಿತ್ತು!
ಹೊಸ ಬಟ್ಟೆ ತೊಡುವ
ಬಣ್ಣದ ಕನಸು ಕಾಣುವ
ಹುಡುಗನ ಮೈಗೆ
ಯಾರೋ ಕೊಟ್ಟ ಹಳೆಯುಡುಪು
ಒಂದಾ ಬಿಗಿ ಇಲ್ಲವೇ ದೊಗಲೆ
ಜನ ಅವನ ಕಂಡು ನಕ್ಕರು
ಅವನೂ ನಕ್ಕ
ತನ್ನ ದೌರ್ಭಾಗ್ಯ ಕಂಡು!
ಇಂಥ ದೇಶವೊಂದರ ರಾಜ
ಉಡುಪು ಬದಲಿಸುತ್ತ ಬದಲಿಸುತ್ತ
ಬೆತ್ತಲೇ ಆಗಿಬಿಟ್ಟ!
ಅವನಿಗೆ ಹೇಗೆ ಹೇಳುವುದು
ದೇಶದ ನೆಲ
ಬೆವರ ಘಮಲಿಂದ ಪರಿಮಳಿಸುತ್ತದೆ
ಪೂಸುವ ಅತ್ತರಿನಿಂದಲ್ಲ ಎಂದು!
*********************************************
ತರಗೆಲೆ ಗಾಳಿಗೂ ಭಾರ
ಒಂದು ದಿನ
ಮುಂದೆ ಹೇಗೋ ಏನೋ ಎಂಬ
ಕಳವಳ ಹೊತ್ತು
ದುಸುದುಸು ಏದುಸಿರು ಬಿಡುತ್ತ ನಿಂತ
ಭರ್ತಿ ಒಂಭತ್ತು ತಿಂಗಳು ತುಂಬಿ
ಈಗ ಒಡೆದುಹೋಗುವುದೋ ಎಂಬಂತೆ
ಕೆಳಕ್ಕೆ ಜಗ್ಗಿ ತೂಗುವ ಹೊಟ್ಟೆಯ
ಬಸುರಿಯೊಬ್ಬಳಲಿ ನನ್ನನ್ನೇ ಕಂಡೆ
ಮುದಿಯಳೊಬ್ಬಳು ಹೇಳಹತ್ತಿದ್ದಳು -
‘ಬಿಟ್ಟೂ ಬಿಟ್ಟೂ ಸಣ್ಣ ಸಣ್ಣ ನೋವುಗಳು
ಬಿಟ್ಟೂ ಬಿಡದೆ ಬಂದು ಗುದ್ದುತ್ತವೆ
ಅದರ ಗತಿಯು ತೀವ್ರವಾದಂತೆಲ್ಲ
ಬಂದು ಗುದ್ದುವ ಸಣ್ಣ ಸಣ್ಣ ನೋವುಗಳೂ
ಬೆಳೆದು ಬಲಿಯುತ್ತ
ಬಳಲಿಸುತ್ತ
ಕೊಟ್ಟ ಕೊನೆಗೆ
ನಡು ಮುರಿದು ಕೆಡಹುವಂಥ
ಬಹುದೊಡ್ಡ ನೋವೊಂದು
ಬಂದಪ್ಪಳಿಸಿದ್ದೇ ತಡ
ನೆತ್ತಿಯ ನೀರೊಡೆದು
ಜೀವ ಎರಡಾಗುತ್ತದೆ!’
ಹುಬ್ಬುಗಳನು ಗಂಟುಹಾಕಿ
ಕಣ್ಣುಗಳನು ದೊಡ್ಡಕ್ಕೆ ಅಗಲಿಸಿ ನಾನೆಂದೆ,
‘ಇದು ಸಾವು ಬರುವ ಕ್ರಮವಲ್ಲ ತಾನೇ?’
ಅವಳು ನಕ್ಕಳು
‘ಮರುಳೇ ಇದು ಹುಟ್ಟಿನ ಪ್ರಕ್ರಿಯೆ!’
‘ಒಂದೊಂದೇ ನೋವು ಬಂದಪ್ಪಳಿಸುವಾಗಲೂ
ಸಹಿಸಲು ಆಗುವಂಥದ್ದೇನಿದೆಯೋ ಅದೇ ಬದುಕು
ಸಹನೆ ಸೋತ ಗಳಿಗೆ ಮರಣ!’
ತೀರಾ ಇತ್ತೀಚೆ
‘ಗಹಗಹಿಸಿ ನಗುತ್ತಿದ್ದವನೊಬ್ಬ
ತಟಕ್ಕನೆ ಎದೆಯೊತ್ತಿಹಿಡಿದು
ಮುದ?
: ಸಾವಿನ ಸುದ್ದಿ
ಯಾರದ್ದೇ ಸಾವಿನ ಸುದ್ದಿಯನು
ಕೊಡಬೇಡಿ ನನಗೆ
ಇದ್ದುಕೊಳ್ಳಲಿ ಅವರು ಜೀವಂತವಾಗಿ
ನನ್ನೆದೆಯ ಯಾವುದೋ ಮೂಲೆಯಲಿ
ಅದೆಷ್ಟೋ ಜನ
ಹೇಗೆ ಹೇಗೆಲ್ಲಾ ಸತ್ತು ಹೋದರು
ನನ್ನ ಒಳಗೆ
ಅವರು
ಈ ಭೂಮಿಯ ಮೇಲೆ
ಇನ್ನೂ ಜೀವಂತವಾಗಿ
ಇರುವಾಗಲೂ!
ಹುಟ್ಟಿದಂದಿನಿಂದಲೂ
ಕ್ಷಣ ಕ್ಷಣವೂ
ಸಾಯುತ್ತಲಿದ್ದ ಅವನು
ಮಹಾ ಸುಳ್ಳು ಬುರುಕ
ಅದನ್ನೇ
ಬದುಕು ಎನ್ನುತ್ತಾನೆ
ಕೊಂದು ಹಾಕಿದ್ದೇನೆ
ಅವರಂತೆಯೇ
ಅದೆಷ್ಟೋ ಸಲ ನನ್ನನ್ನೇ ನಾನು
ಆದರೂ
ಯಾರಾದರೊಬ್ಬರ ಪ್ರೇಮ
ಜೀವ ತುಂಬಿಬಿಡುತ್ತದೆ
ನನ್ನೊಳಗೆ!
ಈ ಅಪರಾತ್ರಿಯಲಿ
ಸತ್ತವರನೂ ಸಾಯಬಡಿಯಲು
ಹೊಂಚಿ ಕೂತಿದ್ದಾರೆ ಮಂದಿ
ಆದರಿಲ್ಲಿ
ಸತ್ತಂಥವರೂ
ಭರವಸೆಯಿಂದ ಕಾಯುವುದು
ಜೀವವೂಡುವ
ದೇವತೆಗಳ ಹಾದಿ
**********************************
ಉಚಿತವೆಲ್ಲಿ?
ಯುದ್ಧಕಾಲದಲಿ
ಯುದ್ಧದ್ದೇ ಮಾತು
ಯುದ್ಧ ಮುಗಿದ ಬಳಿಕ
ಮಾತೆಲ್ಲವೂ
ಸೋಲು ಗೆಲುವಿನದು
ನೀನು ಯೋಚಿಸಿ ಹೇಳು
ಯುದ್ಧಕಾಲವೋ
ಯುದ್ಧ ಮುಗಿದ ಬಳಿಕವೋ
ಯುದ್ಧಭೂಮಿಯಿಂದ
ಅಪಹರಣಕ್ಕೆ ಒಳಗಾಗುವ
ಹೆಣ್ಣುಗಳ ಮಾತು
ಎಂದಾದರೂ
ಎತ್ತಬಹುದೇ ಎಂದು!
ಬೆಳಕಿನ ಹಂಗು
ಈಗೀಗ ಎಲ್ಲದರ ಹಾಗೆಯೇ
ಬೆಳಕಿಗೂ
ಹೊಳಪಿನ ಮೋಹ
ತಲೆಗೇರಿರಬಹುದು
ಹಗಲಾಯಿತೆಂದರೆ
ಅದು ಸ್ಪರ್ಧೆಗೆ ಬಿದ್ದಂತೆ
ಹೊತ್ತಿ ಉರಿಯುತ್ತ
ಹೊಳೆಯತೊಡಗುವುದು
ಹೊದ್ದು ಮಲಗಬೇಕಿದ್ದ ಇರುಳುಗಳೂ
ಬೆಳಕಿನ ತಲುಬಿಗೆ ಜೋತುಬಿದ್ದು
ಹೊಳಪನುಟ್ಟು
ಎದ್ದೆದ್ದು ಬೊಬ್ಬಿರಿದು
ಕುಣಿಯಹತ್ತುವವು
ಬೆಳಗಬೇಕಾದ ಬೆಳಕೇ
ಸುಡಲು ಹವಣಿಸುವುದನು ಕಂಡ ಮೇಲೆ
ಇಳಿಸಂಜೆಯಾದರೂ ತಣಿಯಲು ಒಲ್ಲದ ಮೇಲೆ
ಇರುಳ ಬಯಲಿನಲಿ ಓಡುತ್ತ
ಕತ್ತಲ ಮೂಲೆಗಾಗಿ ಹುಡುಕ ಹತ್ತಿದ್ದೇನೆ
ಮತ್ತಲ್ಲಿ ಮುಖ ಹುದುಗಿಸಿ
ತಣ್ಣಗೆ ವಿರಮಿಸುತ್ತೇನೆ
ಎದೆಗೂಡಿನ ಖಾಲಿಯಲಿ
ತುಂಬಲೊಲ್ಲದ,
ತುಸುವಾದರೂ ತಣುಪೆರೆಯದ
ಆ ಬೆಳಕಿನ ಹಂಗಾದರೂ ಏಕೆ ಬೇಕು ನನಗೆ?