ಒಲಿದ ಸ್ವರಗಳು
ಹಿರಿಯ ಲೇಖಕ, ಕವಿ ಸುಬ್ಬು ಹೊಲೆಯಾರ್ ದೂರದರ್ಶನ ಚಂದನ ವಾಹಿನಿಯಲ್ಲಿ ೨೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’’ ಕೃತಿಗೆ ಡಾ. ಜಿ.ಎಸ್.ಎಸ್. ಕಾವ್ಯಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ಪ್ರಸಸ್ತಿ, ಪುರಸ್ಕಾರಗಳು ಸಂದಿವೆ.
ಇವರ ಎರಡನೇ ಕಾವ್ಯಸಂಗ್ರಹ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಕೃತಿಯು ೨೦೧೦ನೇ ಸಾಲಿನ ಮುದ್ದಣ ಕಾವ್ಯಪ್ರಶಸ್ತಿಯನ್ನು ಪಡೆದುಕೊಂಡಿದೆ. ೨೦೧೩ನೇ ಸಾಲಿನಲ್ಲಿ ಬುದ್ಧ ಪ್ರಶಸ್ತಿ, ದಲಿತಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ಇವರ ಜೀವನ ಕಥನ ‘ದನ ಕಾಯದವನು’ ‘ಕರಿಯ ಕಣ್ಬಿಟ್ಟ’ ಎಂಬ ಕಲಾತ್ಮಕ ಚಲನಚಿತ್ರವಾಗಿ ಮೂಡಿಬಂದಿದೆ.
ಮಣ್ಣೆ ನೋಯುತ್ತಿದೆ
ಉರಿದು ನಲುಗಿದ ಸಂಜೆ ಆರುತಿದೆ
ಹೂವು
ಹಣ್ಣು
ನೆಲಕ್ಕೆ ಬಿದ್ದ ಗಾಯವೋ
ನೋಡುತ್ತಾ ನಿಂತ
ಗಾಯವೇ ಮಾಯಲಾರದ ಹಳೆ, ಹೊಸ
ಪುರುಷ ಅಹಂ ಮಾಡಿದ ಗಾಯ
ನೋಡುತ್ತಾ ನಿಂತೆ, ನೋಡುತ್ತಾ ನೋಡುತ್ತಾ
ಗಾಯವೇ ನನ್ನ, ನೋಡುತ್ತಿದೆ ಅನ್ನಿಸಿತು
ಸಣ್ಣದಾಗಿ ಭಯದಿಂದ ಬೆವೆತೆ, ಓಡುವ ಮನಸ್ಸು
ಹಾಗೆ ನೋಡಬೇಡಿ ಗಾಯವೇ ಕೈಮುಗಿದು ಪಾರ್ಥಿಸಿದೆ
ನಗಲಾರಂಭಿಸಿತು ಗಾಯ
ನಿಜವೇ ಇದು ಗಾಯ ನಗುತ್ತಿದೆಯೇ ?
ನಗುತ್ತಾ ನಗುತ್ತಾ ನಗು ಸಣ್ಣದಾಗುತ್ತಾ ಹೋಯಿತು
ನೋವು ನನ್ನೊಳಗೆ ಮುಳ್ಳು ಅಳ್ಳಾಡಿಸಿದ ಹಾಗೆ
ಪಾರ್ಥಿಸಿದೆ ಮಂಡಿಯೂರಿ
ಗಾಯ ಅಳಲಾರಂಭಿಸಿತು ಎಷ್ಟು ಸಣ್ಣಗೆ
ಅಂದರೆ ಇಡೀ ಲೋಕ ತಲ್ಲೆಣಿಸುವ ಹಾಗೆ
ಪಾರ್ಥಿಸಿದೆ ನೆಲಕ್ಕೆ ತಲೆಯಿಟ್ಟ
ಕ್ಷಣ ಬಿಟ್ಟು ತಲೆ ಎತ್ತಿ ನೋಡಿದ
ನಾನೇ ಗಾಯದ ಗುರುತಾಗಿದ್ದ
ಎಲ್ಲಾ ನೋಡಿ ನಕ್ಕಂತೆ ಅತ್ತಂತೆ
ಓಡಿಸಿಕೊಂಡು ಬಂದಂತೆ
ಓಡುತ್ತಿದ್ದೇನೆ ಗಾಯದ ಉರಿ ತಾಳಲಾರದ
ಕತ್ತಲೆಯಿಂದ ಬೆಳಕಿನಿಂದ ಆಚೆಯಿಲ್ಲದ ಕಡೆ
ದೀಪ ಹಿಡಿದವಳು
ಬೆಂಕಿಯೂ ಹೌದು ಗೆಳೆಯ
ಹಾಲು ಕುಡಿಸಿದವಳ ಎದೆ ಹಾಲಾಹಲವಾಗಿದೆ
ಕ್ಷಮೆಯ ಶಬ್ದ ಸುಟ್ಟುಹೋಗಿದೆ
ಹಾಡ ಹೇಳುತ್ತಿದ್ದಾಳೆ
ಮೀಸೆ ಎಂಬುದು ಬರೀ ಕೂದಲು ಕಣಯ್ಯ
ಹಾಗೆ ತಿರುಗಿಸಬೇಡ ಬೆರಳಿಗೆ ನೋವಾಗುತ್ತದೆ.
ಆಕೆ ಉಫ್ ಎಂದು ಉರುಬಿದರೆ ಸಾಕು
ಗಾಯಕ್ಕೆ ಲೋಕದ ನೋವೆ ಮಾಯವಾಗುತ್ತದೆ
ನೊಂದರೆ ಮಣ್ಣು ನೋಯುವ ಹಾಗೆ
ಅವಳ ಜೀವ ನೋಯುತ್ತದೆ.
ನಾನು ನಿಂತಿದ್ದೇನೆ ನೆಲ ನಡೆಸುತ್ತಿದೆ
ನೆನಪಾಗುತ್ತೆ ಕಸಗುಡಿಸುವಾಗ್ಲೆಲ್ಲಾ
ಹುಟ್ಟುತ್ತಲೇ ಕಸವಾದ ನಾನು
ಪೊರಕೆಯೂ ಆದೆ
ಹೊಚ್ಚ ಹೊಸಬಳೆಂದರೆ ನೀನೆ ತಾಯಿ
ಏಕೆ ಒಂಟಿಯಾಗಿ ನಿಂತಿರುವೆ
ಶುರು ಮಾಡಿದ್ದೇನೆ ಈಗ ತಾನೆ
ಹೀಗಲ್ಲ ಹೀಗೆ ಅಂತ
ಇಷ್ಟಕ್ಕೆ ಬೆಚ್ಚಿಬಿದ್ದರೆ ಹೇಗೆ
ನನ್ನ ಇತಿಹಾಸ ನನ್ನ ನಾಲಿಗೆ ಮೇಲಿದೆ
ಹಣೆ ಬರಹ ಬರೆದ ದೇವರಿಗೆ
ಕನ್ನಡ ಬರದದ್ದು ಒಳ್ಳೆಯದೇ ಆಯಿತು
ನೆಲವನ್ನು ಮುಚ್ಚಿಡಲು
ಅಂಗಿ ಗುಂಡಿಗಳನ್ನು ಬಿಚ್ಚುವ ಶೂರರ ನೋಡಿದ್ದೇನೆ
ನನಗೆ ಗೊತ್ತು ಅವರು ನನ್ನ ಹೆದರಿಸಲು ಹಾಗೆ ಮಾಡುತ್ತಿದ್ದಾರೆಂದು
ಅವರ ತೊಳು ತೊಡೆಗಳು ಹಿಗ್ಗಿವೆಯೆಂದು
ನಾನು ಜಗ್ಗುವುದಿಲ್ಲ
ಕರಳು ಹಿಡಿದ ಲೇಖನಿ ಬೆರಳುಗಳ ನಡುವೆ ಈಗ
ಬೆಂಕಿ ಆರಿದ ಇಜ್ಜಲು ನನ್ನ ಆತ್ಮ
ಪ್ರಾಮಾಣಿಕನಲ್ಲ ನಿಮ್ಮ ಹಾಲಿನಷ್ಟು
ಈಗ ಈ ಕ್ಷಣ ಗಾಳಿ ಬೀಸುತ್ತಲ್ಲಾ ಹಾಗೆ ನಾನು
ಅಗಳದ ಮೇಲೆ ಅಗುಳವಿಟ್ಟರೆ ಕಟ್ಟಡವಲ್ಲ ಗೆಳೆಯ
ಹನಿ ಹನಿಯಾಗಿ ಹಳ್ಳದಂತೆ
ನೀರಬಣ್ಣದ ಗಂಟು ಅವಳಿಗಲ್ಲದ
ಇನ್ನಾರಿಗೆ ಗೊತ್ತಿದೆ ಅದಕ್ಕೆ ಅವಳ ಹೆಸರು ಗಂಗೆ
ವಿಷಯಕ್ಕೆ ಬರುತ್ತೇನೆ ಆ ಅಲ್ಲಮ
ಈ ಬೇಂದ್ರೆ ದೇವನೂರಿನ ಕುವೆಂಪು
ಕವಿತೆಯನ್ನೇ ನುಂಗಿ ನೀರು ಕುಡಿದ ನೆರೋಡ
ಎಂಥ ಚೆಂದದ ಕಾವ್ಯಲೋಕದಲ್ಲಿ
ಅವಳ ಬೆರಳ ತುದಿಯ ಬೆಂಕಿ ಆರಿಲ್ಲ
ಗಾಯದ ನೋವೂ ನಿಂತಿಲ್ಲ ನರಸಿಂಹಸ್ವಾಮಿಯವರೇ ?
ದುಮು ದುಮುಗುಡುತ್ತಿರುವ ಅವಳೆದೆಯೋ
ಕುದಿ ಕುದಿಯುವ ನೆಲವೋ
ಕಾಲಿಡಲಾಗುತ್ತಿಲ್ಲ ಅವನ ಕಣ್ಣ ಊರಿಗೆ
ಕಾಯಲಾರೆಯಾ ಕಾಲವೇ
ನಿನ್ನ ತುಟಿಯ ಮೇಲೆ ಇಷ್ಟೊಂದು ನದಿಗಳು ಹರಿಯುತ್ತಿಲ್ಲ!
ಸುಡು ಸುಡು ನೆಲಕ್ಕೆ
ಒಂದು ಮುತ್ತು ಕೊಡೊಲೋ ಅಥವಾ
ನೆಲಪಾದಕ್ಕೆ ಒಂದು ಚೆಮ್ಮಾಳಿಗೆ ಹೊಲೆಯಲೋ
ಲೋಕದ ನೆತ್ತಿಯ ಕಣ್ಣ ತಂಪಾಗಿಸಲು
ಮುಗಿಲೇ ಮುರಿದು ಬೀಳುವಂತೆ
ಮಳೆ ಬರಲಿ ಹರಿಯಲಿ ಅಲ್ಲಿ ನೀರ ಹಾಡಿನ ಹೊಳೆ
ಉಳಿಯಲಿ ಒಂದೇ ಒಂದು ಮುಗುಳ್ನಗೆ
ಸಾಕು ಈ ಲೋಕ ಉಳಿಯಲಿ
ನಾನು ನಿಂತಿದ್ದೇನೆ ನೆಲವೇ ನಡೆಸುತ್ತಿದೆ
ಅಂತ ತಿಳಿದ ದಿನ ನೀವೂ ನಾನು ಎಲ್ಲರೂ ಎಲ್ಲವೂ