ನಲಿ ನಲಿ ಕಾಗೆ ಕೆಂಗುಡೆ ರಾಜ
ಮಕ್ಕಳ ನಾಟಕ
ರಂಗ ಪಠ್ಯ: ಐಕೆ ಬೊಳುವಾರು
ಮೂಲ ಕತೆ : ಗಿಜುಭಾ ವಧೇಕಾ (ಗುಜರಾತೀ ಕತೆಗಾರ)
ಹಾಡುಗಳು : ಶ್ರೀಮತಿ ವನಜಾ ಜೋಶಿ
***
ಪಾತ್ರಗಳು : ಕಾಗೆ, ರಾಜ, ಸೈನಿಕ, ದೂತ, ಮಂತ್ರಿ, ನಿರೂಪಕರು, ಹಾಡುಗಾರರು, ಮೇಳದವರು
ಸಂದರ್ಭ - 1
ಹಾಡುಗಾರರು ಪ್ರವೇಶಿಸಿ ಹಾಡು ಆರಂಭಿಸುತ್ತಾರೆ
ರಾಜನೊಬ್ಬ ಆಳುತಿದ್ದ
ತೇಜ ಭರಿತ ತಾನು ಎನುತ
ಮೋಜಿನಿಂದ ದಿನವ ಕಳೆದು
ಬಾಳುತಿದ್ದನು//
ಕಾಗೆಯೊಂದು ಗೂಡು ಕಟ್ಟಿ
ಬೀಗುತಿರುತ ನಿತ್ಯವಲ್ಲಿ
ಕೂಗಿಕೊಂಡು ಎಲ್ಲ ಕಡೆಗು ಹೋಗುತಿದ್ದಿತು//
(ಮೆರವಣಿಗೆಯೊಂದು ಪ್ರವೇಶಿಸುತ್ತದೆ. ಮೇಳದವರು ಸಂಗೀತಗಾರರಾಗಿ ಜೊತೆ ಸೇರುತ್ತಾರೆ. ಮೆರವಣಿಗೆಯಲ್ಲಿ ಅಲಂಕೃತ ರಾಜನಿದ್ದಾನೆ. ಆನೆಯಿದೆ,ಸೈನಿಕರು, ಸೇವಕರು, ಊರವರು ಮುಂತಾಗಿ ಹಲವರಿದ್ದಾರೆ.)
ಸೈನಿಕ - ಕೇಳಿರಿ ಕೇಳಿರಿ... ಊರ ಪರವೂರ ಜನರೆಲ್ಲರೂ ಕಿವಿಗೊಟ್ಟು ಕೇಳಿರಿ. ನಮ್ಮ ನಾಡಿನ ಮಹಾರಾಜರು ನಾಡಿನ ಪ್ರಜೆಗಳ ಪ್ರಗತಿಗಾಗಿ ‘ನಗರ ಸಂಚಾರ’ ಕಾರ್ಯಕ್ರಮ ಆಯೋಜಿಸಿದ್ದಾರೆ. ಮಹಾರಾಜರ ಅರಮನೆಯ ಪಟ್ಟದಾನೆಯ ಕೈಗೆ ಹೂ ಹಾರವೊಂದನ್ನು ಕೊಡಲಾಗಿದೆ. ಆ ಹೂ ಹಾರ ಯಾರ ಕೊರಳನ್ನು ಅಲಂಕರಿಸುವುದೋ ಅಥವಾ ವಿಜಯ ಮಾಲೆಯನ್ನು ಕೊಡಿಸುವುದೋ ಅವರಿಗೆ ‘ರಾಜ್ಯ ಪುರಸ್ಕಾರ ಪಾರಿತೋಷಕ’ ನೀಡಿ ಗೌರವಿಸಲಾಗುವುದು. ಎಲ್ಲರೂ ತಮ್ಮ ಅರ್ಹತೆ ಮತ್ತು ಅದೃಷ್ಟವನ್ನು ಪರೀಕ್ಷಿಸಬಹುದು ಕೇಳಿರಿ ಕೇಳಿರಿ .. ಇನ್ನೊಮ್ಮೆ ಇಂತಹ ಅವಕಾಶ ಸಿಗಲಾರದು ಕೇಳಿರಿ.. ಕೇಳಿರಿ ..
( ಜನರೆಲ್ಲರೂ ಗುಂಪಾಗಿ ಸೈನಿಕರ ಡಂಗುರವನ್ನು ಆಲಿಸುತ್ತಾರೆ. ಸೈನಿಕರು ಡಂಗುರ ನಿರೂಪಿಸುವ ಬೇರೆ ಬೇರೆ ಸ್ಥಳಗಳಲ್ಲಿ ಅವರ ಜೊತೆ ಚಲಿಸಿ ತಮ್ಮ ತಮ್ಮೊಳಗೆ ಚರ್ಚಿಸಿ ತಾವೇ ರಾಜ್ಯ ಪುರಸ್ಕಾರಕ್ಕೆ ಅರ್ಹರು ಎಂಬಂತೆ ನಟಿಸುತ್ತಾರೆ. ಆನೆ ಮೆರವಣಿಗೆ ಮುನ್ನಡೆಯುತ್ತದೆ)
ಹಾಡುಗಾರರು ಹಾಡುತ್ತಾರೆ
ಆನೆ ಯಾರ ಕೊರಳಿನಲ್ಲಿ
ಪುಷ್ಪ ಹಾರ ತೊಡರಿಸುವುದೋ
ಅವರೇ ರಾಜ್ಯ ಪುರಸ್ಕಾರಕ್ಕೆ
ಪಾತ್ರರು - ಸತ್ಪಾತ್ರರು
( ಆನೆ ಚಲಿಸುತ್ತದೆ. ಊರಿನ ಜನ ತಮ್ಮ ಕೊರಳುಗಳನ್ನು ಆನೆಯ ಬಳಿ ಸಾಗಿ ಒಡ್ಡುತ್ತಾರೆ. ಆನೆ ಒಬ್ಬೊಬ್ಬರನ್ನೂ ಪರೀಕ್ಷಿಸುತ್ತಾ ಮುಂದೆ ಚಲಿಸುತ್ತದೆ. ಹಾಡುಗಾರರು ಸಂಗೀತ ನಿಲ್ಲಿಸಿ ತಮ್ಮ ಕೊರಳುಗಳನ್ನು ಚಾಚುತ್ತಾರೆ. ಆನೆ ನಿರಾಕರಿಸಿ ಮುಂದೆ ಚಲಿಸುತ್ತದೆ.)
ಹಾಡುಗಾರರು ಹಾಡುತ್ತಾರೆ
ಕಾಗೆಯೊಂದು ಗೂಡುಕಟ್ಟಿ
ಬೀಗುತಿರುತ ನಿತ್ಯವಲ್ಲಿ
ಕೂಗಿಕೊಂಡು ಎಲ್ಲ ಕಡೆಗು
ಹೋಗುತಿದ್ದಿತು
(ಆನೆ ಕಾಗೆಯ ಕಡೆ ಚಲಿಸಿದೆ. ಕಾಗೆ ‘ಅಯ್ಯೋ ಆನೆ ಅಯ್ಯೋ ಆನೆ’ ಎಂದು ಹೆದರಿ ಓಡತೊಡಗುತ್ತದೆ. ಆನೆ ಅಟ್ಟಿಸಿಕೊಂಡು ಹೋಗುತ್ತದೆ. ಉಳಿದವರೂ ಆನೆಯ ಹಿಂದೆ ಓಡತೊಡಗುತ್ತಾರೆ. ಜನರ ಕೈಯಲ್ಲಿ ಬಣ್ಣ ಬಣ್ಣದ ಟವೆಲ್, ಬಕೆಟ್‌ಗಳು ಪರಿಕರಗಳಾಗಿ ಕಾಣಿಸುತ್ತವೆ. ಆನೆ ಕೋಪದಿಂದ ಹಿಂದಕ್ಕೆ ಚಲಿಸಿ ಮಹಾರಾಜನ ಕೊರಳಿಗೇ ಹಾರ ಹಾಕಿ ನಿಷ್ಕ್ರಮಿಸುತ್ತದೆ.)
ರಾಜ - ನಮ್ಮ ಈ ರಾಜ್ಯದಲ್ಲಿ ರಾಜ್ಯ ಪುರಸ್ಕಾರಕ್ಕೆ ಒಬ್ಬರೂ ಅರ್ಹರಿಲ್ಲವೇ? ಆನೆ ಮತ್ತೊಮ್ಮೆ ನನ್ನ ಕೊರಳಿಗೇ ಹಾರಾರ್ಪಣೆ ಮಾಡಿದೆ. ಹಾಗಾಗಿ ನಾನು ಮಾತ್ರ ನಿಜವಾದ ಅರ್ಹ ಎಂಬುದು ಎಲ್ಲರಿಗೂ ಮನದಟ್ಟಾಗಬೇಕು. ಅದಕ್ಕಾಗಿ ನಿಮ್ಮೆಲ್ಲರ ಪ್ರೀತಿಗೆ ನಾನೂ ಆಭಾರ ಸಲ್ಲಿಸುತ್ತಿದ್ದೇನೆ. ಇನ್ನು ಮುಂದೆ ನಮ್ಮದು ಸುಖಿ ಸಮಾನತೆಯ ರಾಜ್ಯ. ಇಲ್ಲಿ ಎಲ್ಲರೂ ಸಹನಶೀಲರಾಗಬೇಕು. ಸಹನಾ ಭವತು ಸಹನಾ ಭುನಕ್ತು.
(ನಿಷ್ಕ್ರಮಣ)
ಸಂದರ್ಭ -2
ಹಾಡುಗಾರರು ಹಾಡುತ್ತಾರೆ
ಹಳ್ಳಿಯೆಂದ ಮೇಲೆ ಅಲ್ಲಿ
ಹಳ್ಳಕೋಡು ಮರವು ಗಿಡವು
ಬಳ್ಳಿಯೆಲ್ಲ ಬೆಳೆದು ಬಹಳ
ಸೊಗಸು ಇದ್ದಿತು //
ಪುಟ್ಟ ಕಾಗೆ ಹರುಷದಿಂದ
ದಿತೃತನವ ತೋರುತಿತ್ತು
ಕಷ್ಟಗಳನು ದೂರಕಟ್ಟಿ
ಬಾಳುತಿದ್ದಿತು //
(ರಾಜ ಮತ್ತು ಪರಿವಾರ ಪ್ರವೇಶಿಸಿದೆ.ರಂಗದಲ್ಲಿರುವ ಎಲ್ಲ ನಟ ನಟಿಯರು ಬಾಗಿ ನಮಸ್ಕರಿಸುತ್ತಾರೆ. ಮಲಗಿದ್ದ ದನ, ಹಂದಿಗಳೂ ಎದ್ದು ನಿಲ್ಲುತ್ತವೆ. ಆದರೆ ಕಾಗೆ ಮಾತ್ರ ತನ್ನ ಕೆಲಸ ಕಾರ್ಯಗಳಲ್ಲಿ ಮಗ್ನವಾಗಿದೆ. ಗೂಡಿನ ಬಳಿಯ ನೆಲವನ್ನು ಸ್ವಚ್ಛಗೊಳಿಸುವ ದುಡಿಮೆಯಲ್ಲಿ ನಿರತವಾಗಿದೆ.)
ರಾಜ- (ಕೋಪದಿಂದ) ಏನಿದು? ನನ್ನಂತಹ ರಾಜ್ಯ ಪುರಸ್ಕಾರ ವಿಜೇತ ಮಹಾರಾಜ ಪ್ರಜೆಗಳನ್ನು ನೋಡಬೇಕೆಂದು ಅರಮನೆ ಬಿಟ್ಟು ಬರುತ್ತಿರಬೇಕಾದರೆ .... ಎಲ್ಲ ನಾಗರಿಕರೂ ಎದ್ದು ನಿಂತು ಗೌರವ ಸಲ್ಲಿಸುತ್ತಿರಬೇಕಾದರೆ ಇದ್ಯಾರು? ನಾನು ಬಂದಿರುವುದನ್ನೂ ಗಮನಿಸದೆ ಏನೋ ಬಿಟ್ಟಿ ಕೆಲಸ ಮಾಡುತ್ತಿದೆಯಲ್ಲ.
ಕ್ಷುದ್ರ ಪಕ್ಷಿ ...
ಹೇಯ್ ಕ್ಷುದ್ರ ಪಕ್ಷಿ .....ನಿನ್ನನ್ನೇ ಕೇಳುತ್ತಿರುವುದು.
ರಾಜನಿಗೆ ಗೌರವ ಕೊಡಬೇಕೆಂಬ ಅಲ್ಪ ಜ್ಞಾನವೂ ನಿನ್ನಲ್ಲಿಲ್ಲದೆ ಹೋಯಿತೇ?
ಕಾಗೆ- ಮಹಾರಾಜರಿಗೆ ವಂದನೆಗಳು. ಮೊದಲನೆಯದಾಗಿ ನಾನು ಕ್ಷುದ್ರ ಪಕ್ಷಿ ಅಲ್ಲ . ನಾನೊಂದು ಸಾಮಾನ್ಯ ಕಾಗೆ ಹಕ್ಕಿ. ನನ್ನ ಕೆಲಸವನ್ನು ನಾನು ನಿಷ್ಠೆಯಿಂದ ಮಾಡುತ್ತಿದ್ದೇನೆ. ನಿಮ್ಮ ಕೆಲಸವನ್ನೂ ನೀವು ಹಾಗೆ ಮಾಡಿದರೆ ಒಳಿತಲ್ಲವೇ?
ರಾಜ - ಏನು? ನನಗೇ ಎದುರು ಮಾತನಾಡುತ್ತೀಯ? ಎಂತಹ ಉದ್ಧಟತನ ! ಎಷ್ಟು ಧೈರ್ಯ ನಿನಗೆ ..!?
ಕಾಗೆ - ಎದುರು ಎಲ್ಲಿ ಮಹಾರಾಜ ... ಇಲ್ಲಿ ಸೈಡ್‌ವಿಂಗ್‌ನ ಹತ್ತಿರ ಇದ್ದೇನಲ್ಲ
ರಾಜ - ಮತ್ತೆ ಅಧಿಕ ಪ್ರಸಂಗ..... ನಾನು .... ನನ್ನನ್ನು ಕೆಂಗುಡೆ ರಾಜ ...ಕೋಪಿಷ್ಠ ರಾಜ ಎಂದು ಮೊದಲು ಕರೆದು ಮೂದಲಿಸಿದವನು ನೀನೇ ಅಲ್ಲವೇ? ನಿನ್ನನ್ನು ...
ಕಾಗೆ - ಹಾಗೆ ಜನರು ಹೇಳುತ್ತಾರೆ ಎಂದಾದರೆ ನನ್ನನ್ಯಾಕೆ ಬೊಟ್ಟು ಮಾಡುತ್ತೀರಿ ಮಹಾರಾಜ? .... ನನ್ನನ್ನು ನನ್ನಷ್ಟಕ್ಕೆ ಇರಲು ಬಿಡಿ..
ಹಾಡುಗಾರರು ಹಾಡುತ್ತಾರೆ
ಹರುಷವೊಂದ ತೊರೆಯೆನೆನುತ
ಗರುವದಿಂದ ಬಾಳುತಿರಲು
ಪರಮ ದುಷ್ಟ ರಾಜ ಮಾತ್ರ
ಕೋಪಗೊಂಡನು
ದೊಡ್ಡ ಶಿಕ್ಷೆ ಕೊಡಲು ಬಯಸಿ
ಹೆಡ್ಡ ರಾಜ ಕಾಗೆಯನ್ನು
ದೊಡ್ಡ ಗುಂಡಿಗೆಸೆದು ಬಿಡಲು
ಆಜ್ಞೆ ಮಾಡಿದ//
ರಾಜ- ಯಾರಲ್ಲಿ? ಈ ಕೂಡಲೇ ಆ ಕಾಗೆಯನ್ನು ಎತ್ತಿ ಅಲ್ಲೊಂದು ಬಾವಿ ಕಾಣಿಸ್ತಾ ಇದೆಯಲ್ಲಾ... ಅದರ ಸುತ್ತಲೂ ಕೆಸರು ತುಂಬಿದ ಮಣ್ಣಿನ ರಾಶಿ ಇರುವ ಹಾಳು ಗುಂಡಿಯೊಂದು ಇದೆಯಲ್ಲಾ... ಅದರ ಮೇಲೆ ಬಿಸಾಡಿ ಬನ್ನಿ. ... ಈ ಕಾಗೆಗೆ ಇದುವೇ ಸರಿಯಾದ ಶಿಕ್ಷೆ. ಈ ಕಾಗೆ ಆ ಕೆಸರು ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡು ಮೇಲೆ ಬರಲು ಸಾಧ್ಯವಾಗದೇ ಅಲ್ಲಿಯೇ ಸತ್ತು ಹೋಗಲಿ. ಸತ್ತು ಸುಖವನ್ನು ಅನುಭವಿಸಲಿ.
ನಿರೂಪಣಾ ದೃಶ್ಯ: ರಾಜಭಟರು ರಾಜ ಹೇಳಿದ ಹಾಗೆ ಆ ಕಾಗೆಯನ್ನು ಎತ್ತಿ ಮಣ್ಣಿನ ರಾಶಿಯ ಕೆಸರು ಗುಂಡಿಯ ಒಳಗೆ ಬಿಸಾಡಿ ಬಿಟ್ಟರು.
ಆದರೆ ನಮ್ಮ ಕಾಗೆ.... ಮಣ್ಣಿನ ಕೆಸರಿನಲ್ಲಿ ಬಿದ್ದ ಕಾಗೆ ಅಲ್ಲಿಂದಲೇ ಸಂತಸದ ಹಾಡು ಹಾಡತೊಡಗಿತು.
ಹಾಡುಗಾರರು ಹಾಡುತ್ತಾರೆ:
ಕೊಸರಿಕೊಂಡು ಹೋಗದಂತೆ
ಕೆಸರು ಮಣ್ಣಿಗಿಳಿಸಿ ಬನ್ನಿ
ಕಸುವ ಕಳೆದು ಸಾಯಲೆಂದು
ಹೇಳಿ ಬಿಟ್ಟನು.
ಕಾಗೆ- ಓಹ್ ಎಷ್ಟು ಚಂದ ಇದು
ಚಂದವೋ ಚಂದ
ಚೆನ್ನಾಗಿದೆ, ಭಾರೀ ಚೆನ್ನಾಗಿದೆ
ನಾನು ಈ ಇಳಿಜಾರಿನಲ್ಲಿ ಜಾರಲು ಕಲಿಯುವೆ
ಸ್ಕೇಟಿಂಗ್ ಕಲಿಯುವೆ
ಜಾರುಬಂಡಿ ಆಟ ಆಡುವೆ
ಚಂದವೋ ಚಂದ
ಚೆನ್ನಾಗಿದೆ, ಭಾರೀ ಚೆನ್ನಾಗಿದೆ
ಓ ನನ್ನ ಪ್ರೀತಿಯ ಸ್ನೇಹಿತರೇ
ಈ ಸಂತಸ ನನ್ನದು.... ಈ ಸಂತಸ ನನ್ನದು....
ಹಾಡುಗಾರರು ಹಾಡುತ್ತಾರೆ
ಹಾರಿ ಮೇಲೆ ಕೆಳಗೆ ಭರದಿ
ಜಾರುಬಂಡಿ ಯಾಟವಾಡ್ದೆ
ಕೂರಲೇಕೆ ಸುಮ್ಮನೆನುತ
ಆಡತೊಡಗಿತು.//
ನಿರೂಪಣಾ ದೃಶ್ಯಾಭಿನಯ: ಕಾಗೆಯ ಸಂತಸದ ಹಾಡು ಕೇಳಿ ಕಾಗೆಗೆ ಸ್ವಲ್ಪವೂ ಬೇಸರವಾಗದ್ದನ್ನು ನೋಡಿ ರಾಜ ಮತ್ತು ಅವನ ಸೇವಕರಿಗೆ ಅಚ್ಚರಿಯಾಯಿತು. ಕೆಸರಿನಲ್ಲಿ ಮುಳುಗಿದ ಕಾಗೆ ಸಂತಸದಲ್ಲಿರುವುದನ್ನು ನೋಡಿ ರಾಜ ಮತ್ತು ಅವರ ಪರಿವಾರದವರಿಗೆ ಪರಮಾಶ್ಚರ್ಯವಾಯಿತು.
ರಾಜನಿಗೆ ಕೋಪ ಇಮ್ಮಡಿಯಾಯಿತು.
ರಾಜ: ಯಾರಲ್ಲಿ ? ಈ ಕೂಡಲೇ ಆ ಕಾಗೆಯನ್ನು ಎತ್ತಿ ಬಾವಿಯ ಒಳಕ್ಕೆ ಆಳಕ್ಕೆ ತಳ್ಳಿಬಿಡಿ. ಅದು ಅಲ್ಲಿಯೇ ಮುಳುಗಿ ಮುಳುಗಿ ಸಾಯಲಿ.
ಹಾಡುಗಾರರು ಹಾಡುತ್ತಾರೆ
ಹಾರಿ ಮೇಲೆ ಕೆಳಗೆ ಭರದಿ
ಜಾರು ಬಂಡಿ ಯಾಟವಾಡ್ದೆ
ಕೂರಲೇಕೆ ಸುಮ್ಮನೆನುತ
ಆಡತೊಡಗಿತು. ಆಟ ಆಡತೊಡಗಿತು.
ಜೋರು ದನಿಯ ಕಾಕನಾಯಕ
ಜಾರು ಬಂಡಿಯಾಟ ಚೆಂದ
ಕೇರಿ ಬಳಗದವರು ಬನ್ನಿ ಬನ್ನಿ
ಬನ್ನಿರೆಂದು ಕೂಗಿತು.
ಹಾಡುಗಾರರು ರಾಗ ಬದಲಾಯಿಸಿ ಹಾಡುತ್ತಾರೆ.
ಮುನಿದ ದೊರೆಯು ಬಿಡೆನು ನಿನ್ನಾ
ಎನುತ ಮತ್ತೆ ಹಿಡಿದು ಹೊಡೆದು
ಕೊನೆಗೆ ಬಾವಿಗೆಸೆದು ಬಿಡಲು ಹೇಳಿ ಬಿಟ್ಟನು//
ಕಾಗೆಯನ್ನು ಹಿಡಿದ ಭಟರು
ಕೂಗದಿರಲು ಅದಕೆ ಹೇಳಿ
ವೇಗವಾಗಿ ಬಾವಿಗೆಸೆದು
ಬಂದು ಬಿಟ್ಟರು..//
ಹೊತ್ತು ಕಳೆಯದಂತೆ ಭಟರು
ಗತ್ತಿನಿಂದ ಬಾವಿಗೆಸೆಯೆ
ಸತ್ತು ಸುಖವ ಪಡಲಿ ಎನುತ
ರಾಜ ನಕ್ಕನು - ಗಹ ಗಹಿಸಿ ನಕ್ಕನು.
ರಾಜ - ಯಾರಲ್ಲಿ ? ಈ ಕೂಡಲೇ ಆ ಕಾಗೆಯನ್ನು ಎತ್ತಿ ಬಾವಿಯ ಒಳಕ್ಕೆ ತಳ್ಳಿಬಿಡಿ.
ಅದು ಅಲ್ಲಿಯೇ ಮುಳುಗಿ ಸಾಯಲಿ.
ನಿರೂಪಣಾ ದೃಶ್ಯಾಭಿನಯ - ರಾಜ ಭಟರು ರಾಜ ಹೇಳಿದ ಹಾಗೆ ಆ ಕಾಗೆಯನ್ನು
ಎತ್ತಿ ಬಾವಿಯ ಒಳಕ್ಕೆ ತಳ್ಳಿಬಿಟ್ಟರು.
ನಮ್ಮ ಕಾಗೆ ಆ ಬಾವಿಯ ನೀರಿನಲ್ಲಿ ಈಜತೊಡಗಿತು.
ಈಜುತ್ತಲೇ ಆನಂದದ ಹಾಡು ಹಾಡತೊಡಗಿತು.
ಹಾಡುಗಾರರು ಹಾಡುತ್ತಾರೆ
ಖುಷಿಯ ಬಾಳ ಗುರಿಯು ಎನುವ
ನಶೆಯ ಹೊತ್ತ ಕಾಗೆ ಮತ್ತೆ
ಕೋಪದಿಂದ ಹರುಷಗೀತೆ
ಹಾಡತೊಡಗಿತು
ಎಷ್ಟು ಚಂದ ಹೊಸತು ಜಾಗ
ನಷ್ಟವಿಲ್ಲ ಈಜು ಕಲಿವೆ
ಕಷ್ಟವಿಲ್ಲಿ ಕಾಣದಿಲ್ಲಿ
ಎನುತ ಹಾಡಿತು//
ಕಾಗೆ- ಓಹ್ ಎಷ್ಟು ಚಂದ ಇದು
ಚಂದವೋ ಚಂದ
ಚೆನ್ನಾಗಿದೆ ಭಾರೀ ಚೆನ್ನಾಗಿದೆ
ನಾನು ಈ ಬಾವಿ ನೀರಿನಲ್ಲಿಯೇ ಈಜು ಕಲಿಯುವೆ
ಮುಳುಗಿ ಏಳಲು ಕಲಿಯುವೆ
ಸ್ವಿಮ್ಮಿಂಗ್ ಕಲಿಯುವೆ
ಮೀನಿನಂತೆ ತೇಲುವೆ. ಕಪ್ಪೆಯಂತೆ ಮುಳುಗುವೆ
ಆಮೆಯಂತೆ ಹರಿದಾಡುವೆ
ಚಂದವೋ ಚಂದ
ಚೆನ್ನಾಗಿದೆ ಭಾರೀ ಚೆನ್ನಾಗಿದೆ
ಓ ನನ್ನ ಪ್ರೀತಿಯ ಸ್ನೇಹಿತರೇ
ಈ ಆನಂದ ನನ್ನದು ಈ ಆನಂದ ನನ್ನದು.
ರಾಜ- ರಾಜನಿಗೆ ಈಗ ಕೋಪ ಇಮ್ಮಡಿಯಾಯಿತು ಮುಮ್ಮುಡಿಯಾಯಿತು. ಅವನು ಕೋಪದಿಂದ ತನ್ನ ಸೇವಕರಿಗೆ ಆಜ್ಞೆ ಮಾಡಿದ.
ನಿರೂಪಣೆಯ ಮಾತುಗಳನ್ನೂ ರಾಜನೇ ಹೇಳುತ್ತಾನೆ.
ಸ್ವಲ್ಪ ಹೊತ್ತು ನಿಲ್ಲಿ. ಈ ಕಾಗೆಯ ನಾಟಕಕ್ಕೆ ಸರಿಯಾದ ರಂಗ ವೇದಿಕೆ ಹುಡುಕೋಣ. ಇದರೊಂದಿಗೆ ಮಾತನಾಡುತ್ತಾ ಕುಳಿತರೆ ನಮ್ಮ ‘ಮನೆ ಕೆಲಸ’ ಬಾಕಿ ಆದೀತು. ನಮ್ಮ ಯುವರಾಜನಿಗೆ ಮದುವೆ ಮಾಡಿಸುವ ಜವಾಬ್ದಾರಿಯೂ ನನ್ನ ಮೇಲಿದೆ
ಹೋಗಿ... ಸುತ್ತಮುತ್ತಲ ರಾಜ್ಯಗಳಿಗೆ ಭೇಟಿ ನೀಡಿ ನಮ್ಮ ಯುವರಾಜನಿಗೆ ಅನುರೂಪಳಾದ ಮದುಮಗಳನ್ನು ಹುಡುಕಿ ತನ್ನಿ ಹೊರಡಿ...
(ನಿಷ್ಕ್ರಮಣ)
ಸಂದರ್ಭ-3
ಹಾಡುಗಾರರು ಹಾಡುತ್ತಾರೆ. ಹಾಡು ಜನಪದರಾಗಕ್ಕೆ ಬದಲಾಗಿದೆ
ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡಿ ಮದುವೆ ಮಂಟಪದೊಳು
ಸಕಲ ಕಾರ್ಯವ-ಸಕಲಕಾರ್ಯವ-ನೋಡಿ
(ವಿದೂಷಕನ ವೇಷ ಧರಿಸಿದ ದೂತ ಪಾತ್ರಧಾರಿ ಪ್ರವೇಶಿಸುತ್ತಾನೆ)
(ರಂಗದಲ್ಲಿ ರಾಜನ ಆಸ್ಥಾನ ನಿರ್ಮಾಣವಾಗಿದೆ. ರಾಜ, ಮಂತ್ರಿ, ಸೇನಾಧಿಪತಿ, ಸೈನಿಕರು ಪ್ರವೇಶಿಸಿದ್ದಾರೆ)
ದೂತ- ಪ್ರಭೂ... ಮಕ್ಕಳು... ಮಕ್ಕಳು ಎಲ್ಲಿ ನೋಡಿದರೂ ಮಕ್ಕಳು... ಸಣ್ಣ ಸಣ್ಣ ಮಕ್ಕಳು... ಚಿಕ್ಕ ಚಿಕ್ಕ ಮಕ್ಕಳು... ದೊಡ್ಡ ದೊಡ್ಡ ಮಕ್ಕಳು... ಪುಟ್ಟ ಪುಟ್ಟ ಮಕ್ಕಳು... ಎಷ್ಟು ಚಂದ... ಎಷ್ಟು ಚಂದ...
ರಾಜ- ಅದಿರಲಿ. ಹೋದ ಕೆಲಸವೇನಾಯ್ತು?
ದೂತ- ಅದುವೇ ಮಹಾಪ್ರಭೂ... ಮಕ್ಕಳು ಬರೇ ಮಕ್ಕಳು... ಚಂದ ಚಂದದ ಮಕ್ಕಳು... ಅವರು ಆಟ ಆಡ್ತಾ ಇದ್ರೇ... ಅವರು ಸಾಲಾಗಿ ಹೋಗ್ತಾ ಇದ್ರೇ... ಅವರು ಗುಂಪು ಗುಂಪಾಗಿ ಕುಳಿತುಕೊಂಡೇ ಇದ್ರೇ...
ರಾಜ- ಅವರು ಕುಳಿತುಕೊಂಡೇ ಇರಲಿ. ಹೋದ ಕೆಲಸ ಏನಾಯಿತು?
ದೂತ- ಅದನ್ನೇ ಹೇಳುತ್ತಿದ್ದೆ ಮಹಾಪ್ರಭೂ...
ರಾಜ- ಮಹಾಪ್ರಭು ಅಲ್ಲಿ , ಪ್ರಜಾ ಪ್ರಭು ಇಲ್ಲಿ ಪ್ರಜೆಯೇ ಪ್ರಭು. ಪ್ರಭುತ್ವ... ಪ್ರಜಾಪ್ರಭುತ್ವ. ಹೋದ ಕೆಲಸದ ಕುರಿತು ಮಾತನಾಡು.
ದೂತ- ಹೋದ ಕೆಲಸದ ಬಗ್ಗೆ ಇಲ್ಲೇ ಇದ್ದವರು ಏನಾದರೂ ಹೇಳಬರುತ್ತದೆಯೇ? ಸರಿಯಾಗಿಯೇ ಹೇಳಬೇಕು.
ರಾಜ- ಹೇಳು... ಒಮ್ಮೆ ಹೇಳು... ಬೇಗ ಹೇಳು...
ದೂತ - ಯಾವ ಊರಿಗೆ ಹೋದರೂ ಮಕ್ಕಳು. ನಾವು ಎಲ್ಲಿ ನೋಡಿದರೂ ಮಕ್ಕಳು... ಎಷ್ಟು ಚಂದ... ಮಕ್ಕಳು ಅಂದ್ರೆ ಹೀಗಿರಬೇಕು... ಎಷ್ಟು ಸಂತೋಷ ಆಗ್ತದೆ...
ರಾಜ- ಬೇರೆಯವರ ಮಕ್ಕಳು ಹಾಳಾಗಿ ಹೋಗಲಿ. ನಮ್ಮ ಮಕ್ಕಳ ಬಗ್ಗೆ ಹೇಳು.
ದೂತ- ನಿಮ್ಮ ಮಕ್ಕಳ ಬಗ್ಗೆಯೇ ಹೇಳುತ್ತಿದ್ದೇನೆ. ಪ್ರಭೂ ಅವರಿಗೇ... ಅವರಿಗೆ ಈಗಾಗಲೇ ಹೆಮ್ಮಕ್ಕಳನ್ನು ನೋಡಿ ಬಂದಿದ್ದೇವೆ. ಈಗಲೇ ಮದುವೆಯ ಸಿದ್ಧತೆ ಮಾಡುವುದು ಒಳ್ಳೆಯದು. ತಡ ಮಾಡಿದರೆ ತಪ್ಪಾದೀತು. ಕೂಡಲೇ ಮದುವೆಗೆ ವ್ಯವಸ್ಥೆ ಮಾಡಬೇಕು.
ರಾಜ-ಎಲ್ಲಿ...? ಊರಿಡೀ ಡಂಗುರ ಸಾರಿಸಲು ಹೇಳಿ. ಊರಿಡೀ ಅಲಂಕಾರ ಮಾಡಿ. ಇಂತಹ ಮದುವೆ ಈ ಹಿಂದೆ ಎಲ್ಲಿಯೂ ಮುಂದೆಯೂ ನಡೆಯಕೂಡದು ಹ್ಞೂಂ... ಅಂ... ಬಾನಿನೆತ್ತರ ಹಾರಾಡಬೇಕು ಮದುವೆ ಸಂಭ್ರಮ...
ಸೈನಿಕ - (ಹಾಡುಗಾರರಿಂದ ತಾಳ ಪಡೆದು ಡಂಗುರ ಸಾರುತ್ತಾನೆ)
ಕೇಳಿರಿ... ಕೇಳಿರಿ... ನಮ್ಮ ಮಹಾರಾಜರ ಸುಪುತ್ರ ಯುವರಾಜರ ಮದುವೆ ಅತ್ಯಂತ ಸಂಭ್ರಮದಿಂದ ಜರಗಲಿದೆ. ಎಲ್ಲರೂ ಮದುವೆ ಸಮಾರಂಭಕ್ಕೆ ದಿನ ಮುಂಚಿತವಾಗಿ ಬಂದು ಊಟೋಪಚಾರಗಳನ್ನು ಸ್ವೀಕರಿಸಿ ವಧೂ ಬರರಿಗೆ ಆಶೀರ್ವಾದ ಮಾಡಬೇಕಾಗಿ ನಮ್ಮ ಮಹಾರಾಜರು ಹೇಳಿಕೆ ನೀಡಿದ್ದಾರೇ...
ಆಶೀರ್ವಾದವೇ ಉಡುಗೊರೆ ಬನ್ನಿರಿ... ಬನ್ನಿರಿ...
(ನಿಷ್ಕ್ರಮಣ)
ಸಂದರ್ಭ-4
ನಿರೂಪಣಾ ದೃಶ್ಯ- ಯುವರಾಜರ ಮದುವೆ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ನಡೆದರೂ ಕಾಗೆಯ ಮೇಲಿನ ಕೋಪ ಮಹಾರಾಜರಿಗೆ ಸ್ವಲ್ಪವೂ ಕಮ್ಮಿಯಾಗಲಿಲ್ಲ.
ರಾಜ- ಈ ಕಾಗೆಗೆ ಕೊಟ್ಟ ಶಿಕ್ಷೆ ಕಮ್ಮಿಯಾಗಿದೆ. ಆ ಕಾಗೆಯನ್ನು ಈ ಕೂಡಲೇ ಎತ್ತಿಕೊಂಡು ಹೋಗಿ ದಟ್ಟವಾಗಿ ಬೆಳೆದ ಮುಳ್ಳು ಕಂಟಿಗಳ ರಾಶಿಯ ಮೇಲೆ ಎಸೆದು ಬನ್ನಿ... ಆಗ ಅದಕ್ಕೆ ಬುದ್ಧಿ ಬರುತ್ತದೆ.
ಹಾಡುಗಾರರು ಹಾಡುತ್ತಾರೆ
ಸುಮ್ಮನಿರದು ಒಮ್ಮೆ ಕೂಡ
ಕಮ್ಮಿಯಾಯ್ತು ಶಿಕ್ಷೆ ಇದಕೆ
ಹೆಮ್ಮೆ ಪಡುವ ಇದನು ಕೊಲ್ಲಿರೆಂದು ಹೇಳಿದ
ಹಾಗು ಹೀಗು ಕೋಪಗೊಂಡು
ಕಾಗೆ ಮೇಲೆ ಮುನಿಸಿನಿಂದ
ಸಾಗ ಹಾಕಿ ದೂರ ಇದನು
ಎಂದು ಕೂಗಿದ
ಮುಳ್ಳು ರಾಶಿ ಮೇಲೆ ಹಾಕಿ
ಕಳ್ಳ ಕಾಗೆ ಸಾಯಲಿಲ್ಲ
ತಳ್ಳಿ ಬಿಡಿ ಕೊಂದು ಬಿಡಿ
ರಾಜ ಗುಡುಗಿದ //
ನಿರೂಪಣಾ ದೃಶ್ಯ : ಆದರೆ ನಮ್ಮ ಕಾಗೆ ಮುಳ್ಳಿನ ರಾಶಿಯಲ್ಲಿ ಬಿದ್ದ ಕಾಗೆ ಅಲ್ಲಿಂದಲೇ ಸಂತೋಷದ ಹಾಡು ಹಾಡತೊಡಗಿತು.
ಕಾಗೆ - ಓಹ್ ಎಷ್ಟು ಚಂದ ಇದು.
ಚಂದವೋ ಚಂದ
ಚೆನ್ನಾಗಿದೆ ಭಾರೀ ಚೆನ್ನಾಗಿದೆ.
ನಾನು ಇಲ್ಲಿಯೇ ಈ ಮುಳ್ಳುಗಳಿಂದಲೇ
ನನ್ನ ಕಿವಿಗಳನ್ನು ಚುಚ್ಚಿಕೊಳ್ಳುವೆ.
ಆ ಬಳಿಕ ಚಂದದ ಕಿವಿಯುಂಗುರಗಳನ್ನು
ಅದಕ್ಕೆ ಜೋಡಿಸುವೆ.
ಆನಂತರ ಅದಕ್ಕೆ ಲೋಲಾಕುಗಳನ್ನು
ತೂಗಿಸುವೆ. ತೂಗಿಸಿ ತೂಗಾಡಿಸುವೆ.
ಚಂದವೋ ಚಂದ.
ಚೆನ್ನಾಗಿದೆ. ಭಾರೀ ಚೆನ್ನಾಗಿದೆ
ಓ ನನ್ನ ಪ್ರೀತಿಯ ಸ್ನೇಹಿತರೇ
ಈ ಸಂತೋಷ ನನ್ನದು. ಈ ಸಂತೋಷ ನನ್ನದು.
ಹಾಡುಗಾರ ಹಾಡುತ್ತಾರೆ
ಮುಳ್ಳು ರಾಶಿ ಮೇಲೆ ಹಾಕಿ
ಕಳ್ಳ ಕಾಗೆ ಸಾಯಲಿಲ್ಲ
ತಳ್ಳಿ ಬಿಡಿ. ಕೊಂದು ಬಿಡಿ
ರಾಜ ಗುಡುಗಿದ//
ಚುಚ್ಚಿಕೊಂಡು ಕಿವಿಯ ಬೇಗ
ಹಚ್ಚಿಕೊಳುವೆ ಚಿಕ್ಕಾ ಟಿಕ್ಕಿ
ಮೆಚ್ಚಿಬಿಡುವರೆಲ್ಲ ನನ್ನ
ಎಂದು ಹಾಡಿತು//
ಬೀಗಿ ಬಿಡುವೆ ಜಂಭದಿಂದ
ಕೂಗಲಾರೆ ದುಃಖ ಪಡುತ
ಹಾದಿಯನ್ನು ತೂಗಿ ಬಿಡುವೆ
ಎಂದು ಹೇಳಿತು//
ನಿರೂಪಣೆಯ ದೃಶ್ಯ : ರಾಜನಿಗೆ ಈಗ ಕೋಪ ಇಮ್ಮಡಿಯಾಯಿತು
ಮುಮ್ಮಡಿಯಾಯಿತು. ಅವನು ಆ ಕೂಡಲೇ ಕೋಪದಿಂದ
ತನ್ನ ಭಟರಿಗೆ ಆಜ್ಞೆ ಮಾಡಿದ.
ರಾಜ - ಎಲ್ಲಿ ? ಯಾರಲ್ಲಿ ....ಈ ಕೂಡಲೇ ಆ ಕಾಗೆಯನ್ನು
ಎತ್ತಿಕೊಂಡು ಹೋಗಿ ಬಿಸಿ ಹಾಲಿನ ಪಾತ್ರೆಗೆ ಸುರಿದು ಬಿಡಿ.
ಅದು ಅಲ್ಲಿಯೇ ಬೆಂದು ಹಾಳಾಗಿ ಹೋಗಲಿ.
ಹಾಡುಗರರು ಹಾಡುತ್ತಾರೆ
ಕುದಿವ ಹಾಲಿನಲ್ಲಿ ಹಾಕಿ
ಹದದಿ ಬೇಯುತಿರಲು ಬೇಗ
ಮದವು ಅಳಿದು ಬಿಡಲಿಯೆಂದ
ಮಹಾರಾಜನು //
ಹಠವ ಬಿಡದ ರಾಜನಾಗ
ಕಠಿಣ ಶಿಕ್ಷೆಯಾಗಲೆಂದು
ಕುಟಿಲ ಬುದ್ಧಿ ತೋರಿ ತನ್ನ
ಮೇರೆ ಮೀರಿದ
ರಾಜ - ಓಹ್... ನನಗೆ ಬರುತ್ತಿರುವ ಕೋಪಕ್ಕೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಮಂತ್ರಿಗಳೇ ಹೊರಡಿ ಮಾರು ವೇಷದಲ್ಲಿ ಹೊರಡಿ. ನನಗೆ ನಮ್ಮ ರಾಜ್ಯದ ಪ್ರಜೆಗಳ ಆಡು ಪಾಡುಗಳನ್ನು ವ್ಯಾಪಾರವಹಿವಾಟುಗಳನ್ನು ಮಾರುವೇಷದಲ್ಲಿ ನೋಡಬೇಕೆಂಬ ಬಯಕೆಯಾಗಿದೆ. ಯಾರಾದರೂ ನಮ್ಮನ್ನು ಗುರುತು ಹಿಡಿದು ರಾಜ್ಯವನ್ನೇ ಮಾರುವವರು ಇನ್ನೇನು ಮಾರುತ್ತಾರೋ ಎಂದು ಮಾರುದ್ದದ ದೂರು ನೀಡಿದರೂ ನಾನು ಬೇಸರಿಸಲಾರೆ. ಬನ್ನಿ ಹೊರಡೋಣ.
(ನಿಷ್ಕ್ರಮಣ )
ಸಂದರ್ಭ -5
(ರಾಜ ಮತ್ತು ಮಂತ್ರಿ ಮಾರುವೇಷದಲ್ಲಿ ರಸ್ತೆ ಸಂಚಾರ ಹೊರಟಿದ್ದಾರೆ)
ರಾಜ - ಮಂತ್ರಿಗಳೇ ನೀವು ಯಾವಾಗಲೂ ಹೇಳುತ್ತಲೇ ಇರುತ್ತೀರಿ. ನಮ್ಮ ನಾಡಿನ ಎಲ್ಲ ಪ್ರಜೆಗಳೂ ಕ್ಷೇಮವಾಗಿದ್ದಾರೆ. ಕಾಲಕಾಲಕ್ಕೆ ಮಳೆ ಬೆಳೆ ಎಲ್ಲವೂ ಚೆನ್ನಾಗಿ ಬರುತ್ತಿದೆ. ಜನರು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ.
ಮಂತ್ರಿ- ಹೌದು ಮಹಾಪ್ರಭೂ ..
ರಾಜ - ಮಹಾ ಅಲ್ಲ ಪ್ರಜಾಪ್ರಭೂ... ಪ್ರಭುತ್ಯ .. ಪ್ರಜಾ ಪ್ರಭುತ್ವ.. ಹೇಳಿ ಮಂತ್ರಿಗಳೇ.. ನನಗೇನೂ ಇದು ಸತ್ಯವಲ್ಲ ಎಂದೆನಿಸುತ್ತಿದೆ. ಜನರು ತಮ್ಮ ತಮ್ಮೊಳಗೇ ಏನೇನೋ ಹಪಹಪಿಸುತ್ತಿದ್ದಾರೆ, ಅಲವತ್ತುಗೊಳ್ಳುತ್ತಿದ್ದಾರೆ. ನನಗಂತೂ ರಾತ್ರಿ ನಿದ್ದೆಯೇ ಬೀಳುವುದಿಲ್ಲ. ಬಿದ್ದರೂ ಕೆಟ್ಟ ಕೆಟ್ಟ ಕನಸುಗಳೇ ಬೀಳುತ್ತವೆ.
ಮಂತ್ರಿ- ಕನಸುಗಳು ನಿಜವಲ್ಲವಲ್ಲ.. ಹಾಗೇನೂ ಇರಲಾರದು.
ರಾಜ - ಇದೇನು ಮಂತ್ರಿಗಳೇ ಸ್ವಲ್ಪ ಸ್ವಲ್ಪ ಕತ್ತಲಾಗಿದೆ. ಅಷ್ಟೇ ಜನರು ಇಷ್ಟು ಬೇಗ ಮನೆಗಳ ಬಾಗಿಲು ಹಾಕಿಕೊಂಡು ನಿದ್ರೆ ಮಾಡುತ್ತಿದ್ದಾರೆಯೇ? ರಸ್ತೆಯಲ್ಲಿ ಜನಸಂಚಾರವೇ ಇಲ್ಲ
ಮಂತ್ರಿ - ಅದು ...ಜನರು ಹಗಲಿಡೀ ಕಷ್ಟಪಟ್ಟು ಕೆಲಸ ಮಾಡುವುದರಿಂದ ದಣಿವಾಗಿ ಬೇಗ ನಿದ್ರಿಸಿರಬಹುದು. ಅಗತ್ಯಗಳಿಲ್ಲದೆ ರಸ್ತೆ ಸುತ್ತುವ ಅಗತ್ಯವಾದರೂ ಏನು?
ರಾಜ - ಅಲ್ಲಿ ನೋಡಿ ಕಿಟಕಿ ಬಾಗಿಲುಗಳ ಸಂದಿಯಿಂದ ಸಣ್ಣ ಮಿಣುಕು ಹುಳಗಳು ನೀಡುವ ಬೆಳಕು ಕಾಣಿಸುತ್ತದೆಯಲ್ಲ. ಮನೆಯೊಳಗೆ ಏನು ನಡೆಯುತ್ತಿದೆ? ನಮ್ಮ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ ಜನರೂ ನಮ್ಮ ಅಧಿಕಾರವನ್ನು ಕಸಿದುಕೊಳ್ಳುವ ತಂತ್ರಗಳನ್ನು ಹೂಡುತ್ತಿರಬಹುದೇ?
ಮಂತ್ರಿ- ಇಲ್ಲ ಮಹಾರಾಜ,ಅದು ಇವತ್ತಿನ ಮಕ್ಕಳು ಮತ್ತು ಯುವಜನರು ಮಾಹಿತಿ ನೋಡುತ್ತಿರಬೇಕು.ಅದಕ್ಕೆ ಅವರಿಗೆ ಬೆಳಕು ಮಿಂಚಿದರೆ ಸಾಕು, ಅವರು ನೆಟ್ಟನೋಟವನ್ನು ಬದಲಿಸದೆ ನೋಡುತ್ತಿರುತ್ತಾರೆ. ಹೆಚ್ಚೆಂದರೆ ಮಾಹಿತಿಗಳನ್ನು ಇನ್ನೊಬ್ಬರಿಗೆ ಮುಂದೂಡಿಯಾರು ಅಷ್ಟೆ. ಅದಕ್ಕೆ ಭಯಪಡಬೇಕಾಗಿಲ್ಲ.
ರಾಜ - ನನಗೆ ಭಯವೇನು ಇಲ್ಲ ...ಆದರೂ...
ಮಂತ್ರಿ - ಯಾಕೆ ಪ್ರಭೂ ನಿಮಗೆ ಇಂತಹ ಕೆಟ್ಟ ಯೋಚನೆಗಳೇ ಬರುತ್ತಿವೆ? ಹಾಗೇನೂ ಬರಬಾರದು.
ರಾಜ - ಇಲ್ಲ ಮಂತ್ರಿಗಳೇ .. ನನಗೀಗ ಕೆಲವು ದಿನಗಳಿಂದ ರಾತ್ರಿ ನಿದ್ದೆಯೇ ಬರುತ್ತಿಲ್ಲ. ಏನಾದರೂ ಸ್ವಲ್ಪ ನಿದ್ದೆ ಹತ್ತಿತು ಎಂದಾದರೆ ಭಯ ಹುಟ್ಟಿಸುವ ಕನಸುಗಳು ಬೀಳುತ್ತವೆ. ಜನರು ತಮ್ಮ ಹಕ್ಕುಗಳ ಕುರಿತಾಗಿ ಹಕ್ಕೊತ್ತಾಯ ಮಂಡಿಸಿದ ಹಾಗೆ.. ನೀರು ಕೊಡಿ -ಆಹಾರ ಕೊಡಿ - ಉದ್ಯೋಗಕೊಡಿ.. ಶಿಕ್ಷಣ ಕೊಡಿ.. ಎಂದು ಘೋಷಣೆ ಕೂಗುತ್ತಾ ರಸ್ತೆಗಿಳಿದು ಮೆರವಣಿಗೆ ನಡೆಸಿದ ಹಾಗೆ ಅರಮನೆಯ ಗೋಪುರಕ್ಕೆ ದೊಡ್ಡ ರಣಹದ್ದೊಂದು ಬಂದು ಢಿಕ್ಕಿ ಹೊಡೆದ ಹಾಗೆ ... ಊರಿನ ಜನರು ಗುಂಪು ಗುಂಪಾಗಿ ತಮ್ಮ ತಮ್ಮೊಳಗೆ ಹೊಡೆದಾಟ ಮಾಡಿಕೊಳ್ಳುತ್ತಿರುವ ಹಾಗೆ ... ನನಗೆ ಭಯವಾಗುತ್ತಿದೆ. ಅದೇ ಭಯದಲ್ಲಿ ಜೋರಾಗಿ ಕಿರುಚಬೇಕು ಎಂದೆನಿಸುತ್ತದೆ. ಆದರೆ ಧ್ವನಿಯೇ ಹೊರಡುವುದಿಲ್ಲ. ಮಂತ್ರಿಗಳೇ ಭಯ ಎಂದರೆ ಏನೆಂದು ತಿಳಿದಿರದ ನನಗೆ ಮೊಟ್ಟ ಮೊದಲ ಬಾರಿಗೆ ಭಯವಾಗುತ್ತಿದೆ. ಈ ಭಯ ಉತ್ಪಾದನೆಗೆ ಆ ಕಾಗೆ ಕಾರಣವಾಗಿರಬಹುದೇ?
ಈ ನಡುವೆ ಆ ಕಾಗೆಯೊಂದು ನಗುತ್ತಾ ನಗುತ್ತಾ ನೆಮ್ಮದಿಯಿಂದ ಇದೆ. ನನ್ನ ನೆಮ್ಮದಿ ಮಾತ್ರ ನಾಶವಾಗುತ್ತಲೇ ಹೋಗಿದೆ.
- (ನಿಷ್ಕ್ರಮಣ)-
ಸಂದರ್ಭ-6
ಹಾಡುಗಾರರು ಹಾಡುತ್ತಾರೆ
ಹಠವ ಬಿಡದ ರಾಜನಾಗ
ಕಠಿಣ ಶಿಕ್ಷೆಯಾಗಲೆಂದು
ಕುಟಿಲ ಬುದ್ಧಿ ತೋರಿ ತನ್ನ
ಮೇರೆ ಮೀರಿದೆ
ಕಾಗೆ- ಓಹ್ ಎಷ್ಟು ಚಂದ ಇದು
ಚಂದವೋ ಚಂದ
ಚೆನ್ನಾಗಿದೆ. ಭಾರೀ ಚೆನ್ನಾಗಿದೆ.
ನಾನು ಇಲ್ಲಿಯೇ ಇದ್ದು ಈ ಹಾಲನ್ನು ಕುಡಿಯುವೆ.
ಹಾಲಿನಿಂದ ತಯಾರಿಸಿದ ಬಗೆ ಬಗೆಯ
ತಿಂಡಿ ತಿನಿಸುಗಳನ್ನು ತಿನ್ನುವೆ
ಚಂದವೋ ಚಂದ
ಚೆನ್ನಾಗಿದೆ ಭಾರೀ ಚೆನ್ನಾಗಿದೆ.
ಈ ನೆಮ್ಮದಿ ನನ್ನದು. ಈ ನೆಮ್ಮದಿ ನನ್ನದು.
ನಿರೂಪಣೆಯ ದೃಶ್ಯಾಭಿನಯ : ಈ ಬಾರಿ ರಾಜನಿಗೆ ಭಾರೀ ಕೋಪ ಉಂಟಾಯಿತು. ರಾಜನ ಕೋಪ ಏರುತ್ತಲೇ ಹೋಯಿತು.. ಅವನು ಆ ಕೋಪದಲ್ಲಿ...
ರಾಜ - ಹೋಗೀ... ಇದನ್ನು ಬೆಲ್ಲ ಸಕ್ಕರೆಯ ಬಿಸಿ ಪಾಕದಲ್ಲಿ ಸುರಿದು ಬಿಡಿ... ಅಲ್ಲಿರುವ ಇರುವೆ-ಹುಳಗಳು ಈ ಕಾಗೆಯನ್ನು ಕಚ್ಚಿ ಚುಚ್ಚಿ ತಿಂದು ಬಿಡಲಿ.
ನಿರೂಪಣೆಯ ದೃಶ್ಯಾಭಿನಯ : ಆದರೆ ನಮ್ಮ ಕಾಗೆ ಸಕ್ಕರೆ-ಬೆಲ್ಲದ ಪಾಕದಲ್ಲಿ ಬಿದ್ದ ಕಾಗೆ ದೊಡ್ಡ ಬಾಣಲೆಯಲ್ಲಿ ಬಿದ್ದ ಕಾಗೆ ಅಲ್ಲಿಯೇ ತನ್ನ ಸಡಗರದ ಹಾಡನ್ನು ಹಾಡತೊಡಗಿತು
ಹಾಡುಗಾರರು ಹಾಡುತ್ತಾರೆ
ಬೆಲ್ಲ ಪಾಕದಲ್ಲಿ ಇಕ್ಕಿ
ಕೊಲ್ಲಬೇಕು ಬಹಳ ಬೇಗ
ಸೊಲ್ಲು ಮತ್ತೆ ಕೇಳದಂತೆ
ಮಾಡಿರೆಂದನು
ಇರುವೆ ಇದರ ಕಚ್ಚಿ ಬಿಡಲಿ
ಇದರ ಇರುವೆ ಇಲ್ಲದಿರಲಿ
ಸೊರಗಿ ಸೊರಗಿ ಸಾಯಲಿ
ಇರವು ಇಲ್ಲದಂತೆ ಮಾಡಿ
ಎಂದು ಗುಡುಗಿದ
ಕಾಗೆ- ಓಹ್ ಎಷ್ಟು ಚಂದ ಇದು
ಚಂದವೋ ಚಂದ
ಚೆನ್ನಾಗಿದೆ. ಭಾರೀ ಚೆನ್ನಾಗಿದೆ
ಈಗ ನನಗೆ ಉಳಿದುಕೊಳ್ಳಲು ಒಂದು ಮನೆ.
ಆ ಮನೆಗೊಂದು ಮಾಡು ಸಿಕ್ಕಿದ ಹಾಗೆ ಆಯಿತು.
ಅದನ್ನು ಹೇಗೆ ಮಾಡಬಹುದು?
ಎಂದು ನಾನು ಕಲಿಯುವೆ.
ಅದು ಅಷ್ಟು ಕಷ್ಟವೇನೂ ಇಲ್ಲ.
ಅದಕ್ಕೆ ತುಂಬ ಸಮಯವೂ ಬೇಡ
ಹಾಗಾಗಿ
ಓ ನನ್ನ ಒಲವಿನ ಗೆಳೆಯರೇ
ಈ ಸಡಗರ ನನ್ನದು. ಈ ಸಡಗರ ನನ್ನದು
ಹಾಡುಗಾರರು ಹಾಡುತ್ತಾರೆ
ಪಾಕದಲ್ಲಿ ಬಿದ್ದ ಕಾಗೆ
ಸಾಕು ಎನಿಸುವಷ್ಟು ಸವಿದು
ಬೇಕೆ ನಿಮಗೆ ಬನ್ನು ಬೇಗ
ಎಂದು ಹೇಳಿತು
ಕಾಗೆ ಹರುಷ ಕಂಡು ದೊರೆಯು
ಕೂಗಿಕೊಂಡ ಬೆರಗಿನಿಂದ
ಭೋಗದಿಂದ ಫಲವು ಇಲ್ಲ
ಎಂದು ಅರಚಿದ//
ಕೂತು ಬಿಟ್ಟ ಚಿಂತೆಯಲ್ಲಿ
ಸೋತು ಹೋದ ರಾಜನೀಗ
ಮಾತು ಮರೆತು ಬೆರಗಿನಿಂದ
ಮೌನವಾದನು//
ನಿರೂಪಣೆಯ ಮಾತು : ಕೋಪಿಷ್ಠ ರಾಜ... ಕೆಂಗುಡೆ ರಾಜ... ತನ್ನ ಕೋಪದಿಂದಲೇ ತಾನೇ ಸೋತು ಹೋದ.
ರಾಜ- ಓಹ್ ನನ್ನಿಂದ ಈ ಕಾಗೆಯನ್ನು ಸೋಲಿಸಲು ಸಾಧ್ಯವಿಲ್ಲ. ಈ ಕಾಗೆಗೆ ಕೋಪ ಬರುವುದೇ ಇಲ್ಲ. ಯಾವಾಗಲೂ ಸಂತಸದಿಂದ ಬಾಳಿ ಬದುಕುವುದನ್ನು ಕಲಿಯುತ್ತದೆ. ನೆಮ್ಮದಿಯಿಂದ ಬಾಳುವುದನ್ನು ಕಲಿಯುತ್ತದೆ ಮತ್ತು ಆನಂದದಿಂದ ಬಾಳುತ್ತದೆ. ಅದನ್ನು ಅದರಷ್ಟಕ್ಕೇ ಬಿಟ್ಟು ಬಿಡಿರಿ. ಅಂತಹವರನ್ನು ಅವರಷ್ಟಕ್ಕೇ ಬಿಟ್ಟು ಬಿಡಿರಿ
ಹಾಡುಗಾರರು ಹಾಡುತ್ತಾರೆ
ಮೆರೆಯುತ್ತಿದ್ದ ಗರುವ ಎಲ್ಲಾ
ಕರಗಿ ಹೋಯಿತೆನಲು ರಾಜ
ಮರಳಿ ನಾಚಿ ಹೋಗುತ್ತಿದ್ದ ಮುನ್ನಿನಂತೆಯೇ//
ನಿರೂಪಣೆಯ ದೃಶ್ಯಾಭಿನಯ :
ಹಾಗಾಗಿ ನಮ್ಮ ಕಾಗೆ ಸ್ವತಂತ್ರವಾಯಿತು.
ಆ ಬಳಿಕ ಸಂತಸದ ಹಾಡು ಹಾಡುತ್ತಾ
ಊರಿನ ಉದ್ದಗಲಕ್ಕೂ ಹಾರಾಡತೊಡಗಿತು.
ನೀವೂ ಆ ಸಡಗರದ ಹಾಡಿನಲ್ಲಿ ಸೇರಿಕೊಳ್ಳಿರಿ..
ಮತ್ತು ನಾವು ನೀವು ಒಟ್ಟಾಗಿ ಸೇರಿ ಹರುಷದ ನಲಿವಿನಲ್ಲಿ
ಹಿಗ್ಗು ನೆಮ್ಮದಿಯೊಂದಿಗೆ ಬಾಳುವಂತಾಗಲಿ.
ಹಾಡುಗಾರರು ಆಶಯದ ಹಾಡು ಹಾಡುತ್ತಾರೆ.
ಕೇಳುಗರೂ ಹಾಡುಗಾರರೊಂದಿಗೆ ಧ್ವನಿ ಸೇರಿಸುತ್ತಾರೆ.
ಭೇದವೇಕೆ ಬಾಳಿನಲ್ಲಿ
ಮೋದದಿಂದ ನಡೆಯಬೇಕು
ತೇದ ಗಂಧವಿರಲು ಸನಿಹ
ಸುಖದ ಬಟ್ಟಲು
ನಾಕು ದಿನದ ಬಾಳಿನಲ್ಲಿ
ತೂಕವಿರಲಿ ಮಾತುಗಳಲಿ ನಾಕವನ್ನೂ
ಕಾಣಬಹುದು ತಿಳಿಯಿರೆಲ್ಲರೂ //
ಮುಕ್ತಾಯ