ಮಡಿಲ ಮೀಡಿಯಾಗಳಿಗೆ ಸ್ವತಂತ್ರ ಮಾಧ್ಯಮಗಳ ಸಮರ್ಥ ಸವಾಲು- ಧ್ರುವ್ ರಾಠಿ
✍️ಸಂದರ್ಶನ: ಟಿ.ಎ. ಅಮೀರುದ್ದೀನ್
2014ರಲ್ಲಿ ನರೇಂದ್ರ ಮೋದಿ ಅವರು ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣದ ಪ್ರಭಾವದ ವಿರುದ್ಧ ಧ್ವನಿಯೆತ್ತಿದಾಗ, ಯುವಕ ಧ್ರುವ್ ರಾಠಿಗೆ ಅವರ ಮಾತಿನಿಂದ ಭರವಸೆ ಹುಟ್ಟಿತು; ಮೋದಿ ಅವರು ಅಧಿಕಾರಕ್ಕೇರಿದ್ದನ್ನು ಧ್ರುವ್ ಸ್ವಾಗತಿಸಿದರು. ಆದರೆ, ದಿಲ್ಲಿಯಲ್ಲಿ ಸ್ಥಾಪಿಸಿದ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ ಸಂಬಂಧಿಸಿದಂತೆ ಹಿಡಿತ ಸಾಧಿಸುವುದಕ್ಕೆ ಮೋದಿ ಅವರು ಆಮ್ ಆದ್ಮಿ ಪಕ್ಷದೊಟ್ಟಿಗೆ ಕಿತ್ತಾಡಿದಾಗ, ಈ ಭರವಸೆಗಳು ಪೊಳ್ಳು ಎಂದು ಅವರಿಗೆ ಅರಿವಾಯಿತು. ಮುಖ್ಯವಾಹಿನಿಯ ಟಿವಿ ವಾಹಿನಿಗಳು ಮೋದಿ ಮತ್ತು ಬಿಜೆಪಿ ಪರ ಒಲವು ಹೊಂದಿವೆ ಎಂಬುದು ಅರ್ಥವಾದಾಗ ರಾಠಿ ಅವರ ಹತಾಶೆ ಇನ್ನಷ್ಟು ಹೆಚ್ಚಿತು.
ಆದರೆ, ರಾಠಿ ಸಮ್ಮನೆ ಕೂರಲಿಲ್ಲ. ಪ್ರಭಾವಶಾಲಿ ವೀಡಿಯೊಗಳ ಮೂಲಕ ಅಧಿಕಾರಶಾಹಿ ವಿರುದ್ಧ ಹೋರಾಡಲು ನಿರ್ಧರಿಸಿದರು. ಬಿಜೆಪಿಯ ಐಟಿ ಸೆಲ್ ಹೇಗೆ ತಿದ್ದಿದ ಫೋಟೊ, ತಿರುಚಿದ ವೀಡಿಯೊ, ಸುಳ್ಳು ಹೇಳಿಕೆಗಳು ಹಾಗೂ ಹಣ ನೀಡಿ ಬರೆಸಿದ ಪೋಸ್ಟ್ಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ ಸಂಕಥನಗಳನ್ನು ರೂಪಿಸುತ್ತದೆ, ಸುಳ್ಳು ಮಾಹಿತಿಯನ್ನು ಹರಡುತ್ತದೆ ಎಂಬ ವಿವರವುಳ್ಳ ಅವರ ಮೊದಲ ರಾಜಕೀಯ ವೀಡಿಯೊ 2016ರ ಸೆಪ್ಟಂಬರ್ 16ರಂದು ಬಂತು.
ಆನಂತರ ರಾಠಿ ಹಿಂದಿರುಗಿ ನೋಡಲಿಲ್ಲ. ಕಳೆದ 8 ವರ್ಷಗಳಲ್ಲಿ ಅವರು ದೇಶದ ಅತ್ಯಂತ ಪ್ರಭಾವಿ ಯೂಟ್ಯೂಬರ್ ಆಗಿ ಹೊರಹೊಮ್ಮಿದ್ದು, ಬಲಪಂಥೀಯ ಕಾರ್ಯಸೂಚಿ ಹಾಗೂ ಬಿಜೆಪಿಯ ವಿಚ್ಛಿದ್ರಕಾರಿ ರಾಜಕೀಯವನ್ನು ನಿರ್ಭಯವಾಗಿ ಟೀಕಿಸುತ್ತಿದ್ದಾರೆ. ಅವರ ಚಾನೆಲ್ ಚಂದಾದಾರರ ಸಂಖ್ಯೆ 2.5 ಕೋಟಿ ಇದೆ. ಬಹಳಷ್ಟು ಮುಖ್ಯವಾಹಿನಿ ಮಾಧ್ಯಮಗಳ ಪಾಲಿನ ಮರೀಚಿಕೆಯಾಗಿಯೇ ಉಳಿದಿರುವ ಈ ಸಂಖ್ಯೆ, ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
‘ಜನರು ನಿಜವಾಗಿಯೂ ಚಿಂತಿಸುವ ವಿಷಯಗಳನ್ನೇ ನಾನು ಎತ್ತಿಕೊಳ್ಳುತ್ತೇನೆ. ಸಾಂಪ್ರದಾಯಿಕ ಮಾಧ್ಯಮ ಜನರಿಗೆ ಅಗತ್ಯವಿರುವ ವಿಷಯಗಳನ್ನು ಪರಿಗಣಿಸುತ್ತಿಲ್ಲ. ಆದ್ದರಿಂದಲೇ ತುಂಬ ಜನ ನನ್ನ ಕಾರ್ಯಕ್ರಮವನ್ನು ನೋಡಲು ಬರುತ್ತಾರೆ’ ಎಂದು ಅವರು ‘ವಾರ್ತಾಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ‘ಮತ್ತೊಂದು ಕಾರಣವೆಂದರೆ, ಇಂಥ ವಿಷಯಗಳನ್ನು ಪಾರಂಪರಿಕ ಮಾಧ್ಯಮ ಹೇಗೆ ವಿವರಿಸಿದೆ ಎಂಬುದು. ಅವು ಕೆಲವೊಮ್ಮೆ ಕೆಲವೊಂದು ವಿಷಯಗಳನ್ನು ಹಿಗ್ಗಿಸುತ್ತವೆ; ಆದರೆ, ನಾನು ಅವುಗಳನ್ನು ಸಂಕ್ಷಿಪ್ತವಾಗಿ ಹಾಗೂ ಅದರ ತಿರುಳನ್ನು ವಿವರಿಸಲು ಪ್ರಯತ್ನಿಸುತ್ತೇನೆ. ನಾನು ಅವರ ಸಮಯವನ್ನು ವ್ಯರ್ಥಗೊಳಿಸುತ್ತಿಲ್ಲ ಮತ್ತು ನೇರವಾಗಿ ವಿಷಯಕ್ಕೆ ಬರುತ್ತೇನೆ ಎಂಬುದು ಜನರಿಗೆ ಗೊತ್ತಾಗಿದೆ. ಯಾವುದೇ ವಿಷಯದ ಬಗ್ಗೆ ನಾನು ನಾಟಕೀಯತೆ ಇಲ್ಲವೆ ಅಸಂಬದ್ಧತೆಯನ್ನು ಸೃಷ್ಟಿಸುವುದಿಲ್ಲ’ ಎನ್ನುತ್ತಾರೆ ಅವರು.
ಭಾರತದಲ್ಲಿ ಸ್ವತಂತ್ರ ಮಾಧ್ಯಮಗಳ ಭವಿಷ್ಯ, 2024ರ ಚುನಾವಣೆಯಲ್ಲಿ ಬಿಜೆಪಿಯ ಬಲ ಕುಂದಿರುವುದರ ಧನಾತ್ಮಕ ಪರಿಣಾಮಗಳು, ಅವರ ಪ್ರಾದೇಶಿಕ ವಾಹಿನಿ ಯೋಜನೆಯ ಸ್ಥಿತಿಗತಿ, ಹರ್ಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ, ಅವರ ವಿರುದ್ಧದ ಬಲಪಂಥೀಯ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ಗಳ ಆರೋಪಗಳು ಹಾಗೂ ಇತರ ವಿಷಯಗಳ ಕುರಿತು ಈ ಸಂದರ್ಶನದಲ್ಲಿ ಸುದೀರ್ಘವಾಗಿ ಮಾತಾಡಿದ್ದಾರೆ.
ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
► 2014ರ ಲೋಕಸಭೆ ಚುನಾವಣೆಗೆ ಮುನ್ನ ನೀವು ಸರಕಾರವನ್ನು ಬಯಲಿಗೆಳೆಯುವ ಹಲವು ಮಾಹಿತಿಪೂರ್ಣ ವೀಡಿಯೊಗಳನ್ನು ಮಾಡಿದಿರಿ ಮತ್ತು ಅದನ್ನು ಈಗಲೂ ಮುಂದುವರಿಸಿದ್ದೀರಿ. ನಿಮ್ಮ ವೀಡಿಯೊಗಳು ಅಪಾರ ಪರಿಣಾಮವನ್ನೂ ಬೀರುತ್ತವೆ. ಹಲವು ಗಂಭೀರ ವಿಷಯಗಳನ್ನು ‘ಗೋದಿ ಮೀಡಿಯಾ’ ಕೈಗೆತ್ತಿಕೊಳ್ಳುವುದಿಲ್ಲವಾದ್ದರಿಂದ, ‘ನಾನು ಇಂಥ ವೀಡಿಯೊಗಳನ್ನು ಮಾಡಬೇಕಾಗಿದೆ’ ಎಂದು ನೀವು ಹೇಳಿದ್ದೀರಿ. ಆದರೆ, ನೀವು ಯಾವ ರಾಜಕೀಯ ಪಕ್ಷದ ವಿರುದ್ಧ ತೀವ್ರ ಟೀಕೆ ಮಾಡಿ ಅದರ ವೈಫಲ್ಯಗಳನ್ನು ಬಹಿರಂಗಗೊಳಿಸಿದ್ದಿರೋ, ಅದೇ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ. ಇದನ್ನು ನೀವು ಹೇಗೆ ನೋಡುತ್ತೀರಿ? ಸ್ವತಂತ್ರ ಮಾಧ್ಯಮ ವೇದಿಕೆಗಳು ಭಾರತೀಯರನ್ನು ಎಚ್ಚರಿಸುವಲ್ಲಿ ವಿಫಲವಾದವೇ?
► ನಿಜ. ಬಿಜೆಪಿ ಮಿತ್ರಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಆದರೆ, ಸ್ವತಂತ್ರ ಮಾಧ್ಯಮಗಳು ಹಾಗೂ ಜನರ ಬಲದಿಂದಾಗಿ, ಈ ಸಲ ಬಿಜೆಪಿಯ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಬಿಜೆಪಿ 400 + ಸ್ಥಾನಗಳನ್ನು ನಿರೀಕ್ಷಿಸಿತ್ತು; ಆದರೆ, 240ಕ್ಕೆ ಕುಸಿದಿದೆ. ಮಿತ್ರಪಕ್ಷಗಳ ನೆರವಿನಿಂದ ಸರಕಾರವನ್ನು ರಚಿಸಿದೆ. ಅದರಿಂದಾಗಿಯೇ ಅದು ಮುಂಗಾರು ಅಧಿವೇಶನದಲ್ಲಿ ಹಲವು ವಿನಾಶಕಾರಿ ಮಸೂದೆಗಳನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲೂ ಆಗುವುದಿಲ್ಲ ಎಂದು ಆಶಿಸೋಣ. ಉದಾಹರಣೆಗೆ, ಪ್ರಸಾರ ಸೇವೆಗಳ ಮಸೂದೆ. ಮುಂಗಾರು ಅಧಿವೇಶನದಲ್ಲಿ ಅದನ್ನು ಅಂಗೀಕರಿಸಬೇಕೆಂದು ಸರಕಾರ ಯೋಜಿಸಿತ್ತು. ಆದರೆ, ಆನ್ಲೈನ್ ವಿಷಯ ನಿರ್ಮಾಪಕರು, ನಾಗರಿಕ ಹಕ್ಕುಗಳ ಗುಂಪುಗಳು ಹಾಗೂ ಸ್ವತಂತ್ರ ಮಾಧ್ಯಮಗಳ ಪ್ರತಿರೋಧದಿಂದ ಮಸೂದೆಯನ್ನು ಸರಕಾರ ಹಿಂಪಡೆಯಬೇಕಾಗಿ ಬಂದಿತು.
"ವೈಯಕ್ತಿಕವಾಗಿ ನನಗೆ ಅಪರಾಧದ ಬಗ್ಗೆ ಮಾತನಾಡುವುದು ಇಷ್ಟವಾಗುವುದಿಲ್ಲ. ಎರಡನೆಯದಾಗಿ, ಅಪರಾಧದ ಬಗ್ಗೆ ಬಹಳ ಸೂಕ್ಷ್ಮವಾಗಿ ಮಾತನಾಡಬೇಕಾಗುತ್ತದೆ. ಒಂದು ರೀತಿಯಲ್ಲಿ ಅದು ಸಮಾಜದ ನಕಾರಾತ್ಮಕ ಅಂಶಗಳನ್ನು ಎತ್ತಿಹಿಡಿಯಲಿದ್ದು, ಕೆಟ್ಟ ನಿರ್ಧಾರಗಳಿಗೆ ಕಾರಣವಾಗಬಹುದು. ಜನರು ಯಾವುದಕ್ಕೆ ಸಾಮಾನ್ಯವಾಗಿ ಹೆದರುವುದಿಲ್ಲವೋ, ಅದರ ಬಗ್ಗೆ ಆತಂಕವನ್ನು ಸೃಷ್ಟಿಸಲು ಕಾರಣವಾಗಬಹುದು. ಉದಾಹರಣೆಗೆ, ದೇಶದಲ್ಲಿ ಪ್ರತಿದಿನ ಕಾರು ಅಪಘಾತದಿಂದ ಅಧಿಕ ಸಾವು ನೋವು ಸಂಭವಿಸುತ್ತದೆ. ಆದರೆ, ಸುದ್ದಿ ವಾಹಿನಿಗಳು ಈ ಸುದ್ದಿ ಪ್ರಕಟಿಸುವುದಿಲ್ಲ. ಇದರಿಂದಾಗಿ ಕಾರು ಚಾಲನೆಗೆ ಯಾರೂ ಭಯಪಡುವುದಿಲ್ಲ. ಅಪರಾಧ ಸುದ್ದಿಗಳ ಪ್ರಕಟಣೆಯಿಂದ ಜನರ ಮನಸ್ಸಿನಲ್ಲಿ ಭಯ ಸೃಷ್ಟಿಯಾಗಬಹುದು. ಅಪರಾಧ ಆಧರಿತ ಸುದ್ದಿಗಳನ್ನು ಮಾಡುವಾಗ, ಸಮಾಜದ ಮೇಲೆ ಅದರ ಪರಿಣಾಮಗಳನ್ನು ಪರಿಗಣಿಸಬೇಕಾಗುತ್ತದೆ."
► ಸ್ವತಂತ್ರ ಮಾಧ್ಯಮಗಳಿಗೆ ಬಂದ ಪ್ರತಿಕ್ರಿಯೆಯನ್ನು ಪರಿಗಣಿಸಿದರೆ, ಬಿಜೆಪಿಯ ಸ್ಥಾನಗಳು ಕಡಿಮೆಯಾಗಿದ್ದೇ ಅವುಗಳ ದೊಡ್ಡ ಸಾಧನೆಯಾಯಿತೇ?
► ಸ್ವತಂತ್ರ ಮಾಧ್ಯಮಗಳು ಯಾರ ವಿರುದ್ಧ ಹೋರಾಡುತ್ತಿವೆ ಎಂಬುದನ್ನು ನೋಡಿ. ಎಲ್ಲ ಸಂಸ್ಥೆಗಳು ಸರಕಾರದ ನಿಯಂತ್ರಣದಲ್ಲಿವೆ. ಅದು ಪ್ರತಿಪಕ್ಷಗಳ ಮುಖಂಡರನ್ನು ಜೈಲಿಗೆ ತಳ್ಳಿದೆ, ವಿರೋಧ ಪಕ್ಷಗಳಿಗೆ ಹಣಕಾಸು ನೆರವು ಸ್ಥಗಿತ ಗೊಳಿಸಿದೆ. ಇಡೀ ಮಾಧ್ಯಮ ಬಿಜೆಪಿಯ ನಿಯಂತ್ರಣದಲ್ಲಿದೆ. ಇದರಿಂದಾಗಿ, ಬಿಜೆಪಿ ಬಲವನ್ನು 400ರಿಂದ 240ಕ್ಕೆ ಇಳಿಸಿದ್ದು ದೊಡ್ಡ ಸಾಧನೆ ಎನ್ನಬೇಕಾಗುತ್ತದೆ.
► ನಾನು ಗಮನಿಸಿದ್ದೇನೆಂದರೆ, ಬಲಪಂಥೀಯ ವ್ಯವಸ್ಥೆಯ ಸುಳ್ಳು ಸಂಕಥನಗಳಿಗೆ ಜನರು ಬಲಿಪಶು ಆಗುವುದನ್ನು ತಡೆಯುವಲ್ಲಿ ಹೆಚ್ಚಿನ ಸ್ವತಂತ್ರ ಮಾಧ್ಯಮಗಳು ವಿಫಲವಾಗಿವೆ. ಕೆಲವು ಸ್ವತಂತ್ರ ಮಾಧ್ಯಮಗಳ ವಿಷಯ ಊಹಿಸಿದಂತೆಯೇ ಇರುತ್ತದೆ. ಇದನ್ನು ನೀವು ಒಪ್ಪುತ್ತೀರಾ? ಧ್ರುವ್ ರಾಠಿ ಕೂಡ ಇಂಥ ಸಮಸ್ಯೆ ಎದುರಿಸುತ್ತಾರಾ?
ಭಾರತದಲ್ಲಿರುವ ಸ್ವತಂತ್ರ ಮಾಧ್ಯಮಗಳು ಊಹಿಸಿದಂಥದ್ದೇ ವಿಷಯವನ್ನು ನೀಡುತ್ತವೆ ಎಂದು ನಾನು ಭಾವಿಸುವುದಿಲ್ಲ. ಉದಾಹರಣೆಗೆ, ಸ್ಕ್ರಾಲ್ ಮತ್ತು ನ್ಯೂಸ್ಲಾಂಡ್ರಿ ಹಲವು ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತ ಇರುತ್ತವೆ ಮತ್ತು ಹಲವು ವಿಶಿಷ್ಟ ವರದಿಗಳನ್ನು ಪ್ರಕಟಿಸುತ್ತಿರುತ್ತವೆ. ಆ ಜಾಲತಾಣಗಳ ವಿಷಯದಲ್ಲಿ ಯಾವಾಗಲೂ ಏನಾದರೂ ವಿಶಿಷ್ಟವಾದದ್ದು ಇರುತ್ತದೆ.
ಅದೇ ರೀತಿ ನಾನು ಆಯ್ಕೆ ಮಾಡಿಕೊಳ್ಳುವ ವಿಷಯ ಜನರು ಆ ಕುರಿತು ಏನೆಂದು ಭಾವಿಸಿರುತ್ತಾರೆ ಎಂಬುದರ ಮೇಲೆ ಗಮನ ಹರಿಸುತ್ತದೆ. ಸಮೂಹದ ಎಲ್ಲ ಕಡೆಯ ಜನರೂ ನನ್ನ ವೀಡಿಯೊಗಳನ್ನು ವೀಕ್ಷಿಸುತ್ತಾರೆ. ಇಲ್ಲವಾದಲ್ಲಿ 2.5 ಕೋಟಿ ಚಂದಾ ದಾರರನ್ನು ಗಳಿಸುವುದು ಬಹಳ ಕಷ್ಟ. ಅದೊಂದು ಭಾರೀ ದೊಡ್ಡಸಂಖ್ಯೆ.
► ನೀವು ಪತ್ರಕರ್ತರಲ್ಲ. ‘ಯೂಟ್ಯೂಬ್ ಎಜುಕೇಟರ್’ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೀರಿ. ಆದರೆ, ವೀಕ್ಷಕರ ಸಂಖ್ಯೆಯನ್ನು ಪರಿಗಣಿಸಿದರೆ, ನಿಮ್ಮ ಯೂಟ್ಯೂಬ್ ಚಾನೆಲ್ ಪಾರಂಪರಿಕ ಮಾಧ್ಯಮವನ್ನು ಮಣಿಸಿದೆ. ಇದಕ್ಕೆ ಕಾರಣ ಏನು?
► ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ನಾನು ಏನೇ ಹೇಳಿದರೂ, ಅದು ನನ್ನ ಅಂದಾಜು ಅಥವಾ ನನ್ನ ಆಲೋಚನೆ ಆಗಿರುವ ಸಾಧ್ಯತೆ ಇರುತ್ತದೆ. ನನ್ನ ಆಲೋಚನೆ ಪ್ರಕಾರ, ಇದಕ್ಕೆ ಒಂದು ಕಾರಣ, ವಿಷಯಗಳ ಆಯ್ಕೆ ಇರಬಹುದು. ಜನರಿಗೆ ಯಾವ ವಿಷಯದ ಬಗ್ಗೆ ಗಂಭೀರ ಕಾಳಜಿ ಇರುತ್ತದೋ ಅಂಥ ವಿಷಯಗಳನ್ನು ನಾನು ಎತ್ತಿಕೊಳ್ಳುತ್ತೇನೆ. ಇದರಿಂದಾಗಿಯೇ ಜನರು ನನ್ನ ವೀಡಿಯೊಗಳನ್ನು ಭಾರೀ ಸಂಖ್ಯೆಯಲ್ಲಿ ನೋಡುತ್ತಾರೆ. ಎರಡನೆಯ ಕಾರಣವೆಂದರೆ, ಇಂಥ ವಿಷಯಗಳನ್ನು ಪಾರಂಪರಿಕ ಮಾಧ್ಯಮ ಹೇಗೆ ಪರಿಗಣಿಸುತ್ತದೆ ಎಂಬುದು. ಅವು ಕೆಲವೊಮ್ಮೆ ಕೆಲವೊಂದು ವಿಷಯಗಳನ್ನು ಹಿಗ್ಗಿಸುತ್ತವೆ ಮತ್ತು ಲಂಬಿಸುತ್ತವೆ; ಆದರೆ, ನಾನು ಅವುಗಳನ್ನು ಸಂಕ್ಷಿಪ್ತವಾಗಿ ಹಾಗೂ ಅದರ ತಿರುಳನ್ನು ವಿವರಿಸಲು ಪ್ರಯತ್ನಿಸುತ್ತೇನೆ. ನಾನು ಸಮಯವನ್ನು ವ್ಯರ್ಥಗೊಳಿಸುತ್ತಿಲ್ಲ ಮತ್ತು ನೇರವಾಗಿ ವಿಷಯಕ್ಕೆ ಬರುತ್ತೇನೆ ಎಂದು ಜನರಿಗೆ ಗೊತ್ತಾಗಿದೆ. ನಾನು ಯಾವುದೇ ವಿಷಯದ ಬಗ್ಗೆ ನಾಟಕೀಯತೆ ಇಲ್ಲವೇ ಅಸಂಬದ್ಧತೆಯನ್ನು ಸೃಷ್ಟಿಸುವುದಿಲ್ಲ.
► ಸರಕಾರ ಇನ್ನಷ್ಟು ನಿಯಂತ್ರಣಗಳನ್ನು ತರುತ್ತಿರುವ ಸನ್ನಿವೇಶದಲ್ಲಿ ದೇಶದಲ್ಲಿ ಸ್ವತಂತ್ರ ಮಾಧ್ಯಮಗಳ ಪರಿಸ್ಥಿತಿ ಭವಿಷ್ಯದಲ್ಲಿ ಏನಾಗಬಹುದು?
► ಸ್ವತಂತ್ರ ಮಾಧ್ಯಮಗಳು ಎಂದಿನಂತೆಯೇ ಪ್ರಬಲವಾಗಿರುತ್ತವೆ ಎಂದು ಆಶಿಸುತ್ತೇನೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಾವು ಹಲವು ನಿಯಂತ್ರಣ ಯತ್ನಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈಗ 2024ರ ಚುನಾವಣೆಗೆ ಮುನ್ನ ಇದ್ದುದಕ್ಕಿಂತ ಸ್ವಲ್ಪ ಹೆಚ್ಚು ಸ್ವಾತಂತ್ರ್ಯ ಇದೆ ಎಂದು ನನಗೆ ಅನಿಸುತ್ತದೆ.
► ಉಸಿರು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸ್ವತಂತ್ರ ಮಾಧ್ಯಮಗಳಿಗೆ ನಿಮ್ಮ ಸಲಹೆ ಏನು?
► ಪರ್ಯಾಯ ಮಾಧ್ಯಮಗಳು ತಮ್ಮಂಥದ್ದೇ ಸಂಸ್ಥೆಗಳೊಂದಿಗೆ ಸಹಯೋಗಕ್ಕೆ ಮುಂದಾಗಬೇಕು. ಒಂಟಿಯಾಗಿ ಕೆಲಸ ಮಾಡುವ ಬದಲು ಒಟ್ಟಾಗಿ, ಹೊಸ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಯಾವಾಗಲೂ ಸರಿಯಾದ ಮಾರ್ಗ. ಇದರಿಂದ ಅವುಗಳಿಗೆ ಬಲ, ಸಂಪನ್ಮೂಲಗಳು ಹಾಗೂ ಸಂಖ್ಯೆ ಲಭ್ಯವಾಗಲಿದ್ದು, ಪಾರಂಪರಿಕ ಮಾಧ್ಯಮಕ್ಕೆ ಸವಾಲು ಎಸೆಯಬಹುದು. ಉದಾಹರಣೆಯೆಂದರೆ, ಎಲ್ಲರೂ ಒಟ್ಟಾಗಿ ಸ್ಥಳೀಯ ಮಟ್ಟದಲ್ಲಿ ವರದಿಗಾರರ ಜಾಲವನ್ನು ರೂಪಿಸಿಕೊಂಡು, ಜನರು ಹಾಗೂ ರಾಜಕಾರಣಿಗಳಿಂದ ಪ್ರತಿಕ್ರಿಯೆ ಪಡೆಯಬಹುದು. ಇದರಿಂದ ಎಎನ್ಐ ಮತ್ತು ಪಿಟಿಐ ನಂಥ ಸರಕಾರದ ನಿಯಂತ್ರಣದಲ್ಲಿರುವ ಸುದ್ದಿ ಸಂಸ್ಥೆಗಳ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಬಹುದು.
► ಹಲವು ಪ್ರಾದೇಶಿಕ ಮಾಧ್ಯಮಗಳು ‘ಮಡಿಲ ಮಾಧ್ಯಮ’ ಶೈಲಿಯನ್ನು ಅನುಸರಿಸುತ್ತಿವೆ. ಇದು ಕರ್ನಾಟಕದಲ್ಲಿ ಕಣ್ಣಿಗೆ ಹೊಡೆದಂತೆ ಕಾಣಿಸುತ್ತಿದೆ. ಪ್ರಾದೇಶಿಕ ಮಟ್ಟದಲ್ಲಿಯೂ ನಿಮ್ಮಂಥ ಸ್ವತಂತ್ರ ಮಾಧ್ಯಮಗಳು ಒಂದು ಪರ್ಯಾಯ ಎಂದು ನೀವು ಭಾವಿಸುತ್ತೀರಾ?
► ಪ್ರಾದೇಶಿಕ ಮಟ್ಟದಲ್ಲಿ ಸ್ವತಂತ್ರ ಮಾಧ್ಯಮಗಳು ಖಂಡಿತವಾಗಿಯೂ ಒಂದು ಪರ್ಯಾಯ. ಮಡಿಲ ಮಾಧ್ಯಮದ ಹಿಂದಿನ ಜನರನ್ನು ಬಯಲಿಗೆಳೆಯಬೇಕಿದೆ. ಅರ್ನಾಬ್ ಗೋಸ್ವಾಮಿಯಂಥವರು ಗಂಭೀರ ವಿಷಯಗಳ ಸುತ್ತ ನಾಟಕೀಯತೆಯನ್ನು ಹೆಣೆದರೆ, ಸ್ವತಂತ್ರ ಸುದ್ದಿ ನಿರೂಪಕರು ಗಂಭೀರ ವಿಷಯಗಳ ಕುರಿತು ಕಾರ್ಯಕ್ರಮ ರೂಪಿಸಿ ಅವರನ್ನು ಅಣಕಿಸಬೇಕಾಗುತ್ತದೆ.
"ಪರ್ಯಾಯ ಮಾಧ್ಯಮಗಳು ತಮ್ಮಂಥದ್ದೇ ಸಂಸ್ಥೆಗಳೊಂದಿಗೆ ಸಹಯೋಗಕ್ಕೆ ಮುಂದಾಗಬೇಕು. ಒಂಟಿಯಾಗಿ ಕೆಲಸ ಮಾಡುವ ಬದಲು ಒಟ್ಟಾಗಿ, ಹೊಸ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಯಾವಾಗಲೂ ಸರಿಯಾದ ಮಾರ್ಗ. ಇದರಿಂದ ಅವುಗಳಿಗೆ ಬಲ, ಸಂಪನ್ಮೂಲಗಳು ಹಾಗೂ ಸಂಖ್ಯೆ ಲಭ್ಯವಾಗಲಿದ್ದು, ಪಾರಂಪರಿಕ ಮಾಧ್ಯಮಕ್ಕೆ ಸವಾಲು ಎಸೆಯಬಹುದು. ಉದಾಹರಣೆಯೆಂದರೆ, ಎಲ್ಲರೂ ಒಟ್ಟಾಗಿ ಸ್ಥಳೀಯ ಮಟ್ಟದಲ್ಲಿ ವರದಿಗಾರರ ಜಾಲವನ್ನು ರೂಪಿಸಿಕೊಂಡು, ಜನರು ಹಾಗೂ ರಾಜಕಾರಣಿಗಳಿಂದ ಪ್ರತಿಕ್ರಿಯೆ ಪಡೆಯಬಹುದು. ಇದರಿಂದ ಎಎನ್ಐ ಮತ್ತು ಪಿಟಿಐ ನಂಥ ಸರಕಾರದ ನಿಯಂತ್ರಣದಲ್ಲಿರುವ ಸುದ್ದಿ ಸಂಸ್ಥೆಗಳ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಬಹುದು."
► ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಆಲೋಚನೆ ಇದೆಯೇ?
► ನಾನು ಕೆಲವು ಪ್ರಾದೇಶಿಕ ಭಾಷಾ ಚಾನೆಲ್ಗಳನ್ನು ಆರಂಭಿಸಿದೆ. ಆದರೆ, ಪ್ರಾದೇಶಿಕ ಭಾಷೆಗಳಲ್ಲಿ ನನ್ನ ಉಚ್ಚಾರಣೆ ಉತ್ತಮವಾಗಿಲ್ಲದ ಕಾರಣ ಅವು ಯಶಸ್ವಿಯಾಗಲಿಲ್ಲ. ನನ್ನ ಉಚ್ಚಾರಣೆಯ ಸಮಸ್ಯೆಯಿಂದಾಗಿ ಹಲವು ಹಾಸ್ಯ ಚಟಾಕಿಗಳು ಹಾಗೂ ಉಲ್ಲೇಖಗಳು ಸ್ಪಷ್ಟವಾಗಿ ಜನರನ್ನು ತಲುಪಲಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಹಿಡಿತ ಇರುವವರು ಮಾಡಿದರೆ ಒಳ್ಳೆಯದು.
► ಪ್ರಾದೇಶಿಕ ಭಾಷೆಗಳಲ್ಲಿ ವಿಷಯ ರೂಪಿಸುವವರಿಗೆ ನೀವು ಮಾರ್ಗದರ್ಶನ ಮಾಡುತ್ತೀರಾ?
► ಖಂಡಿತವಾಗಿಯೂ. ನಿಜವಾದ ಆಸಕ್ತಿಯಿರುವ ವಿಷಯ ನಿರೂಪಕರಿಗೆ ಸಂತೋಷ ದಿಂದ ಮಾರ್ಗದರ್ಶನ ಮಾಡುತ್ತೇನೆ.
► ಇತ್ತೀಚೆಗೆ ನಿಮ್ಮ ರಾಜ್ಯ ಹರ್ಯಾಣದಲ್ಲಿ ನಡೆದ ಚುನಾವಣೆಯಲ್ಲಿ ರೈತ ಚಳವಳಿ ಹಾಗೂ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯ ನಡುವೆಯೂ, ಬಿಜೆಪಿ ಗೆಲುವು ಸಾಧಿಸಿದೆ. ಈ ಫಲಿತಾಂಶ ನಿರಂಕುಶ ಪ್ರಭುತ್ವದೆಡೆಗೆ ಚಲಿಸುತ್ತಿರುವ ಸೂಚನೆಯೇ?
ಅಲ್ಲ. ಹರ್ಯಾಣದ ಫಲಿತಾಂಶ ಅನಿರೀಕ್ಷಿತವಾಗಿತ್ತು. ಕಾಂಗ್ರೆಸ್ ನಾಯಕರು ಅತಿಯಾದ ಆತ್ಮವಿಶ್ವಾಸದಿಂದ ತೆಗೆದುಕೊಂಡ ಹಲವು ತಪ್ಪು ನಿರ್ಧಾರಗಳು ಈ ಫಲಿತಾಂಶಕ್ಕೆ ಕಾರಣ. ಆದರೆ, ಈ ಫಲಿತಾಂಶ ನಾವು ನಿರಂಕುಶ ಆಡಳಿತದೆಡೆಗೆ ನಡೆಯುತ್ತಿರುವ ಸೂಚನೆಯಲ್ಲ. ನೀವು ಫಲಿತಾಂಶದ ಅಧ್ಯಯನ ಮಾಡಿದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ ಗಳಿಕೆ ಪ್ರಮಾಣದ ವ್ಯತ್ಯಾಸ ಶೇ.1 ಕ್ಕಿಂತ ಕಡಿಮೆ ಇರುವುದನ್ನು ನೋಡಬಹುದು. ಇನ್ನೊಂದೆಡೆ, ಇತರ ರಾಜಕೀಯ ಪಕ್ಷಗಳಿಗೆ ಶೇ.10 ರಿಂದ ಶೇ.15ರಷ್ಟು ಮತಗಳು ಹೋಗಿವೆ. ಕಾಂಗ್ರೆಸ್ ಸೋಲಿಗೆ ಅದರ ಕೆಟ್ಟ ಕಾರ್ಯತಂತ್ರ ಮತ್ತು ತಪ್ಪು ನಿರ್ಧಾರಗಳು ಕಾರಣ. ಕಾಂಗ್ರೆಸ್ನಲ್ಲಿನ ಒಳಜಗಳ ಕೂಡ ಈ ಫಲಿತಾಂಶಕ್ಕೆ ತನ್ನ ಪಾಲನ್ನು ನೀಡಿದೆ.
► ನಿಮ್ಮ ವೀಡಿಯೊಗಳಲ್ಲಿ ಅಪರಾಧ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಪರಿಗಣಿಸುತ್ತಿಲ್ಲ ಎಂದು ನೀವು ಸಂದರ್ಶನವೊಂದರಲ್ಲಿ ಹೇಳಿದ್ದೀರಿ. ಇಂಥ ಪ್ರಜ್ಞಾಪೂರ್ವಕ ನಿರ್ಧಾರದ ಹಿಂದಿನ ಕಾರಣವೇನು?
ಇದಕ್ಕೆ ಹಲವು ಕಾರಣಗಳಿವೆ. ಮೊದಲಿಗೆ, ವೈಯಕ್ತಿಕವಾಗಿ ನನಗೆ ಅಪರಾಧದ ಬಗ್ಗೆ ಮಾತನಾಡುವುದು ಇಷ್ಟವಾಗುವುದಿಲ್ಲ. ಎರಡನೆಯದಾಗಿ, ಅಪರಾಧದ ಬಗ್ಗೆ ಬಹಳ ಸೂಕ್ಷ್ಮವಾಗಿ ಮಾತನಾಡಬೇಕಾಗುತ್ತದೆ. ಒಂದು ರೀತಿಯಲ್ಲಿ ಅದು ಸಮಾಜದ ನಕಾರಾತ್ಮಕ ಅಂಶಗಳನ್ನು ಎತ್ತಿಹಿಡಿಯಲಿದ್ದು, ಕೆಟ್ಟ ನಿರ್ಧಾರಗಳಿಗೆ ಕಾರಣವಾಗಬಹುದು. ಜನರು ಯಾವುದಕ್ಕೆ ಸಾಮಾನ್ಯವಾಗಿ ಹೆದರುವುದಿಲ್ಲವೋ, ಅದರ ಬಗ್ಗೆ ಆತಂಕವನ್ನು ಸೃಷ್ಟಿಸಲು ಕಾರಣವಾಗಬಹುದು.
ಉದಾಹರಣೆಗೆ, ದೇಶದಲ್ಲಿ ಪ್ರತಿದಿನ ಕಾರು ಅಪಘಾತದಿಂದ ಅಧಿಕ ಸಾವು ನೋವು ಸಂಭವಿಸುತ್ತದೆ. ಆದರೆ, ಸುದ್ದಿ ವಾಹಿನಿಗಳು ಈ ಸುದ್ದಿ ಪ್ರಕಟಿಸುವುದಿಲ್ಲ. ಇದರಿಂದಾಗಿ ಕಾರು ಚಾಲನೆಗೆ ಯಾರೂ ಭಯಪಡುವುದಿಲ್ಲ. ಅಪರಾಧ ಸುದ್ದಿಗಳ ಪ್ರಕಟಣೆಯಿಂದ ಜನರ ಮನಸ್ಸಿನಲ್ಲಿ ಭಯ ಸೃಷ್ಟಿಯಾಗಬಹುದು. ಅಪರಾಧ ಆಧರಿತ ಸುದ್ದಿಗಳನ್ನು ಮಾಡುವಾಗ, ಸಮಾಜದ ಮೇಲೆ ಅದರ ಪರಿಣಾಮಗಳನ್ನು ಪರಿಗಣಿಸಬೇಕಾಗುತ್ತದೆ.
► ನಾನು ಈ ಪ್ರಶ್ನೆ ಕೇಳಲು ಕಾರಣವೇನೆಂದರೆ, ಅಪರಾಧ ಎನ್ನುವುದು ನಮ್ಮ ಸಮಾಜದ ಭಾಗವಾಗಿ ಬಿಟ್ಟಿದೆ. ದೇಶದಲ್ಲಿ ಗುಂಪು ಹತ್ಯೆ ಹಾಗೂ ಅಂಥ ಹಿಂಸೆಯನ್ನು ನೋಡುತ್ತಿದ್ದೇವೆ. ಇಂಥ ಸನ್ನಿವೇಶದಲ್ಲಿ ಅಪರಾಧ ವಿಷಯವನ್ನು ಪರಿಗಣಿಸದೆ ಇರುವುದು ಸರಿಯೇ?
ನಾನು ಅಪರಾಧ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿಲ್ಲ. ಹೌದು. ಗುಂಪು ಹತ್ಯೆ ಒಂದು ಸಮಸ್ಯೆ; ಅಪರಾಧಿಗಳು ರಾಜಕೀಯ ಸೇರುತ್ತಿರುವುದು ಇನ್ನೊಂದು ದೊಡ್ಡಸಮಸ್ಯೆ. ನಾನು ಅಂಥದ್ದರ ಬಗ್ಗೆ ಮಾತನಾಡುತ್ತೇನೆ. ನಾನು ಅಪರಾಧ ವಿಷಯವನ್ನು ಪರಿಗಣಿಸುವುದಿಲ್ಲ ಎಂದು ಹೇಳುತ್ತಿರುವುದರ ಅರ್ಥ, ನಾನು ವ್ಯಕ್ತಿಯೊಬ್ಬನ ಅಪರಾಧ ಕೃತ್ಯಗಳ ಬಗ್ಗೆ ವಿವರವಾಗಿ ಮಾತನಾಡುವುದಿಲ್ಲ. ಅಂಕಿಅಂಶ ಆಧರಿತ ವಿಷಯಗಳ ಬಗ್ಗೆ ನಾನು ಸಾಕಷ್ಟನ್ನು ಹೇಳುತ್ತೇನೆ. ದ್ವೇಷಾಪರಾಧದ ಹೆಚ್ಚಳ ಹಾಗೂ ಅಪರಾಧಿಗಳು ರಾಜಕೀಯ ಪಕ್ಷಗಳನ್ನು ಸೇರುತ್ತಿರುವ ಬಗ್ಗೆ ಮಾತನಾಡುತ್ತೇನೆ. ಅಪರಾಧ ಸುದ್ದಿ ಪ್ರಕಟಣೆ ಹಾಗೂ ಅಪರಾಧದ ವೈಭವೀಕರಣದ ನಡುವೆ ಸೂಕ್ಷ್ಮವಾದ ತೆಳು ಗೆರೆ ಇದೆ. ಗ್ಯಾಂಗ್ಸ್ಟರ್ ಸುದ್ದಿ ಅಥವಾ ಬೇರೆ ಸುದ್ದಿ ಇರುವಾಗ, ಪಾರಂಪರಿಕ ಮಾಧ್ಯಮ ಅದರ ಸುತ್ತ ಸಂಚಲನವನ್ನು ಸೃಷ್ಟಿಸುತ್ತದೆ. ಗ್ಯಾಂಗ್ಸ್ಟರ್ಗಳನ್ನು ಹೀರೋಗಳಂತೆ ಚಿತ್ರಿಸಲಾಗುತ್ತದೆ. ಬಾಲಿವುಡ್ ಸಿನೆಮಾಗಳಲ್ಲೂ ಕೆಲವೊಮ್ಮೆ ಈ ಕೆಲಸ ನಡೆಯುತ್ತದೆ. ಚಲನಚಿತ್ರ ನಿರ್ಮಿಸಿ, ಗ್ಯಾಂಗ್ಸ್ಟರ್ಗಳನ್ನು ಆಕಾಶಕ್ಕೇರಿಸುತ್ತವೆ. ಜನರು ಗ್ಯಾಂಗ್ಸ್ಟರ್ಗಳು ನಮ್ಮ ಸಮಾಜದಲ್ಲಿನ ಹೀರೋಗಳು ಎಂದು ಭಾವಿಸುವ ಸಾಧ್ಯತೆ ಇದೆ.
► ದೇಶದ ಶಿಕ್ಷಣ ವ್ಯವಸ್ಥೆ ಶಸ್ತ್ರೀಕರಣಗೊಳ್ಳುತ್ತಿರುವುದರಿಂದ, ಶೈಕ್ಷಣಿಕ ವೀಡಿಯೊ ಚಟುವಟಿಕೆಗಳು ಪ್ರಭಾವಶಾಲಿ ಪರ್ಯಾಯ ಆಗಬಹುದೇ?
► ಇದೆಲ್ಲವನ್ನೂ ಎದುರಿಸಲು ನಿಜವಾದ ಶಿಕ್ಷಣ ಅತ್ಯುತ್ತಮ ಮಾರ್ಗ ಎಂದುಕೊಂಡಿದ್ದೇನೆ. ನಿಜವಾದ ಶಿಕ್ಷಣ ಜನರ ಮನಸ್ಸನ್ನು ಮುಕ್ತಗೊಳಿಸುತ್ತದೆ ಹಾಗೂ ವಿವಿಧ ದೃಷ್ಟಿಕೋನಗಳಿಂದ ನೋಡಲು ನೆರವಾಗುತ್ತದೆ ಮತ್ತು ವಿಮರ್ಶಾತ್ಮಕವಾಗಿ ಆಲೋಚಿಸುವಂತೆ ಮಾಡುತ್ತದೆ. ಆಳುವವರು ಶಿಕ್ಷಣದ ಶಸ್ತ್ರೀಕರಣಕ್ಕೆ ಪ್ರಯತ್ನಿಸಿದಾಗ, ಅವರು ಜನರು ಯೋಚಿಸುವ ರೀತಿಯನ್ನು ಸಂಕುಚಿತಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ ಮತ್ತು ನಿರ್ದಿಷ್ಟ ರೀತಿಯಲ್ಲೇ ಯೋಚಿಸುವಂತೆ ಮಾಡುತ್ತಿರುತ್ತಾರೆ; ಜನರು ಆಕ್ರೋಶಗೊಳ್ಳುವಂತೆ ಅಥವಾ ಅವರಲ್ಲಿ ನಕಾರಾತ್ಮಕ ಭಾವನೆಗಳು ಮೂಡುವಂತೆ ಪ್ರಯತ್ನಿಸುತ್ತಿರುತ್ತಾರೆ. ನಿಜವಾದ ಶಿಕ್ಷಣದಿಂದ ಇದನ್ನು ಎದುರಿಸಬಹುದು; ಆಗ ಜನರು ಯಾವುದೇ ವಿಷಯದ ಹಲವು ಮಗ್ಗುಲುಗಳನ್ನು ನೋಡುತ್ತಾರೆ ಮತ್ತು ವಿಮರ್ಶಾತ್ಮಕವಾಗಿ ಆಲೋಚಿಸುತ್ತಾರೆ.
► ಸರಕಾರ ಪಠ್ಯಪುಸ್ತಕದಲ್ಲಿನ ವಿಷಯಗಳನ್ನು ತನ್ನ ಅಗತ್ಯಕ್ಕೆ ಅನುಗುಣವಾಗಿ ತಿದ್ದುತ್ತಿದೆ. ಇಂಥ ಸನ್ನಿವೇಶ ಇರುವಾಗ, ಶೈಕ್ಷಣಿಕ ವಿಷಯಗಳು ಪರಿವರ್ತನೆಗೆ ನೆರವಾಗುವಂತೆ ಮಾಡುವುದು ಹೇಗೆ?
► ಅದರ ಬಗ್ಗೆ ಮಾತನಾಡಲು ಶುರು ಮಾಡಬೇಕು. ಉದಾಹರಣೆಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಜೀವವಿಕಾಸಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದ ದಿನ, ನಾನು ಈ ಕುರಿತ ಹಲವು ವೀಡಿಯೊಗಳನ್ನು ಮಾಡಲು ನಿರ್ಧರಿಸಿದೆ. ಬಹಳಷ್ಟು ಜನ ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೊಂದಿದ್ದರು. ಸರಕಾರ ಪಠ್ಯಕ್ರಮದಿಂದ ಈ ವಿಷಯಗಳನ್ನು ತೆಗೆದುಹಾಕುತ್ತಿದೆ ಎನ್ನುವುದು ಅವರಲ್ಲಿ ಒಂದಿಷ್ಟನ್ನು ಕಲಿಯುವ ಕುತೂಹಲ ಹುಟ್ಟಿಸಿತ್ತು.
► ನಿಮ್ಮ ಮೊದಲ ವೀಡಿಯೊ ವಾಟರ್ ಪಾರ್ಕ್ ಬಗ್ಗೆ ಇತ್ತು. ಮೊದಲ ರಾಜಕೀಯ ವೀಡಿಯೊವನ್ನು 2016ರಲ್ಲಿ ಮಾಡಿದಿರಿ. ಕೇವಲ 8 ವರ್ಷಗಳಲ್ಲಿ ದೇಶದ ಅತಿ ಪ್ರಸಿದ್ಧ ರಾಜಕೀಯ ವೀಡಿಯೊ ನಿರ್ಮಾಪಕ ಎಂಬ ಕೀರ್ತಿ ಗಳಿಸಿದ್ದೀರಿ. ಈ ಪ್ರಯಾಣ ನಿಮ್ಮ ರಾಜಕೀಯ ನಂಬಿಕೆಗಳನ್ನು ಬದಲಿಸಿದೆಯೇ?
► ಈ ಪ್ರಯಾಣವು ನನ್ನ ದೃಷ್ಟಿಕೋನಗಳನ್ನು ಬದಲಿಸಿದೆ ಮತ್ತು ವಿಷಯಗಳ ಕುರಿತು ನನ್ನ ಆಲೋಚನೆ, ಸಿದ್ಧಾಂತ ಹಾಗೂ ಪರಿಕಲ್ಪನೆಗಳನ್ನು ಪ್ರಬುದ್ಧಗೊಳಿಸಿದೆ. ಅದು ಯಾವಾಗಲೂ ಸ್ಥಿತ್ಯಂತರ ಪ್ರಕ್ರಿಯೆಯಾಗಿದೆ. ಕಾಲಕ್ರಮೇಣ ವಿವಿಧ ವಿಷಯಗಳ ಬಗ್ಗೆ ನನ್ನ ಆಲೋಚನೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಅದು ಅನುಭವದೊಟ್ಟಿಗೆ ಬದಲಾಗುತ್ತದೆ.
► ನಿಮ್ಮ ಅಭಿಮಾನಿಗಳು ಅಧಿಕಾರಸ್ಥರೊಂದಿಗೆ ಸೇರಿಕೊಂಡು ತಮ್ಮ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಇನ್ಫ್ಲುಯೆನ್ಸರ್ಗಳು ದೂರುತ್ತಾರೆ. ಈ ಆರೋಪಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಧ್ರುವ್ ರಾಠಿ ಅವರಿಗೆ ಫ್ಯಾನ್ ಕ್ಲಬ್ ಇದೆಯೇ?
► ನನಗೆ ಯಾವುದೇ ಫ್ಯಾನ್ ಕ್ಲಬ್ ಇಲ್ಲ. ನನ್ನ ಅಭಿಮಾನಿಗಳನ್ನು ನಾನು ಅಭಿಮಾನಿಗಳು ಎಂದು ಕೂಡ ಕರೆಯುವುದಿಲ್ಲ. ನನಗೆ ಅವರು ನನ್ನ ಚಂದಾದಾರರು. ನಾನು ಅವರನ್ನು ಸಂಘಟಿಸಲು ಅಥವಾ ಯಾರ ಮೇಲಾದರೂ ದಾಳಿ ನಡೆಸುವಂತೆ ಮಾಡಲು ಅಥವಾ ನಿಶ್ಚಿತ ಗುರಿಯೊಂದಿಗೆ ಆನ್ಲೈನ್ನಲ್ಲಿ ಯಾರನ್ನಾದರೂ ದ್ವೇಷಿಸುವಂತೆ ಮಾಡಲು ಎಂದಿಗೂ ಪ್ರಯತ್ನಿಸಿಲ್ಲ. ನಾನು ಈ ಬಗ್ಗೆ ಬಹಳ ಎಚ್ಚರದಿಂದ ಇದ್ದೇನೆ. ಬಲಪಂಥೀಯ ಇನ್ಫ್ಲುಯೆನ್ಸರ್ಗಳು ಆಸಕ್ತಿಕರ ಆಟ ಆಡುತ್ತಾರೆ. ಅವರು ನಿಮ್ಮ ಮೇಲೆ ದಾಳಿ ನಡೆಸುತ್ತಾರೆ ಮತ್ತು ಅದೇ ಹೊತ್ತಿನಲ್ಲಿ ತಾವು ಬಲಿಪಶುಗಳು ಎಂದು ನಾಟಕ ಆಡುತ್ತಾರೆ. ನನ್ನನ್ನು ನೇಣಿಗೆ ಹಾಕಬೇಕು ಎಂದೇ ಹೇಳಿದವನೊಬ್ಬ ಇದ್ದ. ಆತ ಒಂದು ವೀಡಿಯೊ ಮಾಡಿದ್ದ. ಈಗ ಆತನ ಚಾನೆಲ್ ಅನ್ನು ನಿರ್ಬಂಧಿಸಿರಬೇಕು ಎಂದು ನಾನು ಅಂದುಕೊಂಡಿದ್ದೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಕ್ಕೆ ನನ್ನನ್ನು ನೇಣಿಗೆ ಹಾಕಬೇಕು ಎಂದು ಹೇಳಿದ್ದ. ಆ ವೀಡಿಯೊ ಬಳಿಕ ಯೂಟ್ಯೂಬ್ ಆತನಿಗೆ ನಿರ್ಬಂಧ ವಿಧಿಸಿತು. ಆನಂತರ ತಾನು ಬಲಿಪಶು; ತನ್ನನ್ನು ಗುರಿಯಾಗಿಸಿಕೊಂಡು ಹೇಗೆ ದಾಳಿ ನಡೆಸಲಾಗಿದೆ ನೋಡಿ ಎಂದು ಹೇಳಲಾರಂಭಿಸಿದ. ತಾನು ಯೂಟ್ಯೂಬ್ ನಿಯಮಗಳಿಗೆ ವಿರುದ್ಧವಾಗಿ ಪೋಸ್ಟ್ ಮಾಡಿದ್ದೇನೆ ಎಂಬುದನ್ನು ಆತ ಗಮನಿಸಲಿಲ್ಲ. ಬಲಪಂಥೀಯರು ನಿಯಮ-ನೀತಿಗಳನ್ನು ಅನುಸರಿಸುವುದಿಲ್ಲ ಹಾಗೂ ಆನಂತರ ತಮ್ಮನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಗೋಳಾಡುತ್ತಾರೆ.
► ಇಂಥ ಆರೋಪಗಳು ಬಂದಾಗ ನೀವು ಹೇಗೆ ನಿಮ್ಮ ಲಕ್ಷ್ಯ ತಪ್ಪದಂತೆ ನೋಡಿಕೊಳ್ಳುವಿರಿ?
► ಸಾಮಾಜಿಕ ಮಾಧ್ಯಮದಲ್ಲಿರುವ ಬಲಪಂಥೀಯ ಇನ್ಫ್ಲುಯೆನ್ಸರ್ಗಳು ಮತ್ತು ಅವರ ಹಿಂಬಾಲಕರು ನನ್ನ ಮೇಲೆ ಸಾಕಷ್ಟು ವೈಯಕ್ತಿಕ ಆರೋಪ ಮಾಡುತ್ತಾರೆ; ಆದರೆ, ನಾನು ಆ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಅವರು ಮಾಡುವ ಸೈದ್ಧಾಂತಿಕ ವಾದದ ಮೇಲೆ ಹೆಚ್ಚು ಗಮನ ಹರಿಸುತ್ತೇನೆ; ನನ್ನ ವೀಡಿಯೊಗಳಲ್ಲಿ ಅವರ ಹೆಸರು ಉಲ್ಲೇಖಿಸದೆ, ಪ್ರತಿವಾದ ಮಾಡುತ್ತೇನೆ. ಮತ್ತು ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಜಾಣ್ಮೆ ಜನರಿಗೆ ಇದೆ.
► ನೀವು ಯಾವಾಗಲೂ ನಿಮ್ಮ ಶೋನಲ್ಲಿ ಕ್ರೂ ನೆಕ್ ಟಿ ಶರ್ಟ್ ಧರಿಸಲು ಕಾರಣವೇನು? ಯಾವಾಗಲೂ ‘ನಮಸ್ಕಾರ್ ದೋಸ್ತೋ’ ಎಂದು ಪ್ರಾರಂಭಿಸುವುದು ಏಕೆ?
►‘ನಮಸ್ಕಾರ್ ದೋಸ್ತೋ’ ಎನ್ನುವುದು ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಬಳಸುವಂಥದ್ದು. ಹಾಗಾಗಿ ನನ್ನ ವೀಡಿಯೊಗಳಲ್ಲಿ ನಾನು ಅದನ್ನು ಬಹಳ ಪ್ರಾಸಂಗಿಕವಾಗಿ ಬಳಸಲು ಶುರು ಮಾಡಿದೆ. ಅದು ಪೂರ್ವಯೋಜಿತವಾದದ್ದಲ್ಲ. ಆದರೆ, ಅದು ಈಗ ಟ್ರೆಂಡ್ ಆಗಿಬಿಟ್ಟಿದೆ. ಜನ ಅದರೊಂದಿಗೆ ನನ್ನನ್ನು ಗುರುತಿಸುತ್ತಾರೆ; ಹೀಗಾಗಿ ನಾನು ಅದನ್ನು ಮುಂದುವರಿಸಿದ್ದೇನೆ. ಅದಕ್ಕೂ ಮೋದಿ ಅವರ ನಮಸ್ಕಾರಕ್ಕೂ ಸಂಬಂಧವಿಲ್ಲ.
ಕ್ರೂ ನೆಕ್ ಟಿ ಶರ್ಟ್ನದ್ದೂ ಅದೇ ಕಥೆ. ನಾನು ಸರಳವಾದ ಟಿ ಶರ್ಟ್ ಧರಿಸಲು ಇಷ್ಟಪಡುತ್ತೇನೆ; ಏಕೆಂದರೆ, ಪ್ರತಿದಿನ ಯಾವ ಬಟ್ಟೆ ಧರಿಸುವುದು ಎಂಬ ಬಗ್ಗೆ ಚಿಂತಿಸಲು ಇಚ್ಛಿಸುವುದಿಲ್ಲ. ನನ್ನ ವಾರ್ಡ್ರೋಬ್ ಬಹಳ ಸರಳವಾಗಿದೆ. ಅದೊಂದು ಸಮಯ ಉಳಿಸುವ ತಂತ್ರ.
► ಕರ್ನಾಟಕದಲ್ಲಿ 22 ವರ್ಷಗಳಿಂದ ನಿರ್ಭೀತ ಪತ್ರಿಕೋದ್ಯಮದಲ್ಲಿ ತೊಡಗಿಸಿ ಕೊಂಡಿರುವ ‘ವಾರ್ತಾಭಾರತಿ’ ಓದುಗರಿಗೆ ನಿಮ್ಮ ಸಂದೇಶವೇನು?
ನಿಮ್ಮ ಪತ್ರಿಕಾ ವೃತ್ತಿಯನ್ನು ಹೀಗೇ ಮುಂದುವರಿಸಿ ಮತ್ತು ಅಧಿಕಾರಸ್ಥರನ್ನು ಪ್ರಶ್ನಿಸುತ್ತಾ ಮುನ್ನಡೆಯಿರಿ.