ಕಳೆದ 50 ವರ್ಷಗಳಲ್ಲಿ ಕರ್ನಾಟಕಕ್ಕೆ ಒದಗಿದ ಹೊಸ ಸಾಂಸ್ಕೃತಿಕ ಅನುಭವಗಳು
69ವರ್ಷಗಳ ಹಿಂದೆ ಕನ್ನಡ ಭಾಷಿಕರು 20 ಆಡಳಿತಗಳಲ್ಲಿ ಹಂಚಿಹೋಗಿದ್ದರು. ಅವುಗಳಲ್ಲಿ ಕೆಲವನ್ನು ನೆನಪಿಸಿಕೊಳ್ಳುವುದಾದರೆ, ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ, ಮುಂಬೈ ಸಂಸ್ಥಾನ, ಕೊಡಗು, ಹೈದರಾಬಾದ್ ಸಂಸ್ಥಾನ, ರಾಮದುರ್ಗ, ಸಾಂಗ್ಲಿ, ಮೀರಜ್, ಕುರುಂದವಾಡ, ಜಮಖಂಡಿ, ಮುಧೋಳ, ಸಂಡೂರು ಮತ್ತಿತರ ಸಂಸ್ಥಾನಗಳು. ಈ ಬೇರೆ ಬೇರೆ ಆಡಳಿತಗಳಿಗೆ ಒಳಪಟ್ಟ ಕನ್ನಡಿಗರ ಸ್ಥಿತಿ ತೀರ ದಯನೀಯವಾಗಿತ್ತು. ಕನ್ನಡವು ಸಾರ್ವಜನಿಕ ಕ್ಷೇತ್ರದಿಂದ ಬಹುತೇಕ ಕಾಣೆಯಾಗಿತ್ತು. 1937ರ ಹೊತ್ತಿಗೆ ಭಾರತದ ಕೇಂದ್ರ ಶಾಸನಸಭೆಯಲ್ಲಿ ಬ್ರಿಟಿಷ್ ಕರ್ನಾಟಕದ ಒಟ್ಟು 68 ಲಕ್ಷ ಕನ್ನಡಿಗರ ಪ್ರತಿನಿಧಿಯಾಗಿ ಇದ್ದವನು ಒಬ್ಬನೇ ಕನ್ನಡಿಗ. ಇಂಥ ಪರಿಸ್ಥಿತಿಯಲ್ಲಿ ಕರ್ನಾಟಕ ಏಕೀಕರಣ ಚಳವಳಿ ಹುಟ್ಟಿಕೊಂಡು, ಚದುರಿ ಹೋಗಿದ್ದ ಕನ್ನಡಿಗರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು. 1956ರ ನವೆಂಬರ್ ಒಂದರಂದು ಮೈಸೂರು ರಾಜ್ಯ ಉದಯವಾಯಿತು. ಈ ಹೊಸ ರಾಜ್ಯಕ್ಕೆ 1973ರ ನವೆಂಬರ್ 1ರಂದು ‘ಕರ್ನಾಟಕ’ ಎಂದು ಮರುನಾಮಕರಣವಾಯಿತು. ಕರ್ನಾಟಕಕ್ಕೆ ಹೊಸ ಹೆಸರು ಬಂದು ಇದೀಗ 50 ವರ್ಷಗಳು ಕಳೆದಿವೆ. ಈ 50 ವರ್ಷಗಳ ಅವಧಿಯಲ್ಲಿ ಕರ್ನಾಟಕವನ್ನು ಪ್ರಭಾವಿಸಿದ ಕೆಲವು ಮುಖ್ಯ ಘಟನೆಗಳನ್ನು ಪ್ರಸಕ್ತ ಲೇಖನದಲ್ಲಿ ನೆನಪಿಸಿಕೊಳ್ಳಲಾಗಿದೆ.
ಕುವೆಂಪು ಅವರು ಕರ್ನಾಟಕವನ್ನು ‘ಸರ್ವಜನಾಂಗದ ಶಾಂತಿಯ ತೋಟ’ವೆಂದು ಬಹಳ ಸಮರ್ಪಕವಾಗಿ ಕರೆದರು. ಚಾರಿತ್ರಿಕವಾಗಿ ಕರ್ನಾಟಕ-ಕನ್ನಡವು ಎಲ್ಲರನ್ನೂ ಮತ್ತು ಎಲ್ಲ ಅನುಭವಗಳನ್ನೂ ಒಳಗೊಂಡೇ ಬೆಳೆದಿದೆ. ಉತ್ತರ ದೇಶದ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರಬಾಹು ಭಟಾರರು ಜೈನ ಧರ್ಮವನ್ನು ಕರ್ನಾಟಕಕ್ಕೆ ತಂದರು. ಮುಂದೆ ಕರ್ನಾಟಕವು ಜಿನ ಧರ್ಮದ ಆಡುಂಬೊಲಂ ಆಗಿ ಕನ್ನಡಕ್ಕೆ ಪಂಪ, ಪೊನ್ನ, ರನ್ನ, ನಾಗಚಂದ್ರ, ಜನ್ನ ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟಿತು. ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳಲ್ಲಿ ವಾಸಿಸಿ, ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ವಚನ ಚಳವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸಲಿಲ್ಲ. 1,500 ವರ್ಷಗಳಷ್ಟು ಹಿಂದೆಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಮುಂದೆ ಬಿಜಾಪುರದಿಂದ ನಾಡನ್ನು ಆಳಿದರು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಕೆಲಸ ಮಾಡುತ್ತಾ ಉದಾರವಾದಿ ಮಾನವೀಯತೆಯ ನೆಲೆಗಳನ್ನು ಕಲಿಸಿದರು. 19-20ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗಳಿಗೆ ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ನಾಟಕ, ಭಾವಗೀತೆ ಮೊದಲಾದ ಅನೇಕ ಪ್ರಕಾರಗಳನ್ನು ಬೆಳೆಯಿಸಿಕೊಂಡಿತು. ನವ್ಯ ಸಾಹಿತ್ಯವೂ ಒಂಟಿತನ, ನಿರಾಶೆ ಮೊದಲಾದ ಯುರೋಪಿನ ಹಲವು ಅನುಭವಗಳನ್ನು ಕನ್ನಡಕ್ಕೆ ತಂದಿತ್ತಿತು. ಹೀಗೆ ಎಲ್ಲರನ್ನೂ ಒಳಗೊಳ್ಳುತ್ತಾ ಕರ್ನಾಟಕವು ಬೆಳೆದಿದೆ.
ಕಳೆದ 50 ವರ್ಷಗಳಲ್ಲಿ ಬಹಳ ಮುಖ್ಯವಾಗಿ ಕಾಣಿಸಿಕೊಂಡಿದ್ದು ಬಂಡಾಯ ದಲಿತ ಸಾಹಿತ್ಯ ಚಳವಳಿ. ಈ ಚಳವಳಿಗೆ ಸ್ಥೂಲವಾಗಿ ಎಡಪಂಥೀಯ ಸಿದ್ಧಾಂತಗಳು ಪ್ರೇರಣೆ ನೀಡಿದವು. ಕಾರಣ, ಆರ್ಥಿಕ ಅಸಮಾನತೆ, ಜಾತಿಯ ತಾರತಮ್ಯ, ಧಾರ್ಮಿಕ ಮೂಲಭೂತವಾದ ಇತ್ಯಾದಿಗಳನ್ನೆಲ್ಲ ವಿರೋಧಿಸುವ ಚಿಂತನೆ ಬೆಳೆಯಿತು. ಇದಕ್ಕೆ ಪೂರಕವಾಗಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿಯೆತ್ತಿದ್ದ ಬುದ್ಧ್ದ, ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಲೋಹಿಯಾ, ಫುಲೆ, ನಾರಾಯಣಗುರು, ಪೆರಿಯಾರ್ ಮೊದಲಾದವರೆಲ್ಲ ದೊಡ್ಡ ಮಟ್ಟದಲ್ಲಿ ಕನ್ನಡದೊಳಕ್ಕೆ ಬಂದರು.
ಮಾರ್ಕ್ಸ್ವಾದ, ಲೋಹಿಯಾವಾದ ಮತ್ತು ಅಂಬೇಡ್ಕರ್ ವಾದಗಳ ಕುರಿತು ಹಿಂದೆಂದಿಗಿಂತಲೂ ಹೆಚ್ಚು ಚರ್ಚೆಗಳು ನಡೆದುವು, ಪುಸ್ತಕಗಳೂ ಪ್ರಕಟವಾದುವು. 1970ರ ದಶಕದಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ನಾವೆಲ್ಲ ಕೇಳುತ್ತಿದ್ದ ಪ್ರಮುಖ ಪ್ರಶ್ನೆಗಳೆಂದರೆ-
1. ಭಾರತೀಯ ಸಮಾಜದಲ್ಲಿ ಅಸಮಾನತೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುವ ಅಂಶಗಳು ಯಾವುವು?
2. ದಲಿತರನ್ನು ಮತ್ತು ಶೂದ್ರರನ್ನು ಸಂಪೂರ್ಣವಾಗಿ ನಿರಾಯುಧರನ್ನಾಗಿಸುವ ತಂತ್ರಗಳು ಯಾವುವು?
3. ಅಧಿಕಾರ ಸ್ಥಾನಗಳನ್ನು ಶೂದ್ರರು ಮತ್ತು ದಲಿತರು ಕೂಡಾ ಹೊಂದಲು ಏನು ಮಾಡಬೇಕು?
4. ಶಿಕ್ಷಣದಿಂದ ವಂಚಿತರಾದ ಶೂದ್ರರು ಮತ್ತು ದಲಿತರಿಗೆ ಶಿಕ್ಷಣ ದೊರೆಯುವಂತೆ ಮಾಡುವ ಬಗೆ ಹೇಗೆ?
5. ಶೂದ್ರರು ಮತ್ತು ದಲಿತರಿಗೆ ಆಸ್ತಿಯ ಹಕ್ಕು ದೊರೆಯುವುದು ಹೇಗೆ?
6. ಅಲ್ಪ ಸಂಖ್ಯಾತರು ಈ ದೇಶದವರೇ ಅಲ್ಲವೇ?
7. ಮಹಿಳೆಯರು ಸಬಲೀಕರಣಗೊಳ್ಳಲು ಏನು ಮಾಡಬೇಕು?
ಇಂಥ ಹಲವು ಪ್ರಶ್ನೆಗಳು ಕರ್ನಾಟಕದಾದ್ಯಂತ ಪ್ರತಿಧ್ವನಿಸಿದ್ದು ಕಳೆದ 50 ವರ್ಷಗಳಲ್ಲಿ ಎಂಬುದು ಗಮನಾರ್ಹ. ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಕಾಳೇಗೌಡ ನಾಗವಾರ, ಅರವಿಂದ ಮಾಲಗತ್ತಿ, ಬರಗೂರು, ಕುಂ. ವೀರಭದ್ರಪ್ಪ, ಚಂದ್ರಶೇಖರ ಪಾಟೀಲ ಮೊದಲಾದವರು ಇವುಗಳ ಬಗ್ಗೆ ನಿರಂತರವಾಗಿ ಬರೆದರು. ಹಿಂದೆ ಗಾಂಧಿ ಅನುಯಾಯಿಗಳಾಗಿದ್ದು ದಲಿತೋದ್ಧಾರದಂತಹ ಜನಪರ ಕೆಲಸಗಳನ್ನು ಮಾಡಿದ್ದ ಗೋಪಾಲಸ್ವಾಮಿ ಅಯ್ಯರ್, ತಗಡೂರ್ ರಾಮಚಂದ್ರರಾಯರು, ಕುದ್ಮಲ್ ರಂಗರಾಯರು, ಕಾಕಾ ಕಾರ್ಖಾನಿಸ್, ಹರ್ಡೇಕರ್ ಮಂಜಪ್ಪ, ಕಾರ್ನಾಡ್ ಸದಾಶಿವರಾವ್, ಸಿ.ಆರ್.ರೆಡ್ಡಿ ಮೊದಲಾದವರೂ ಚರ್ಚೆಗಳಲ್ಲಿ ಮುನ್ನೆಲೆಗೆ ಬಂದರು. ಇದೆಲ್ಲದರ ಪರಿಣಾಮವೆಂಬಂತೆ, ಮೀಸಲಾತಿಗೆ ಸಂಬಂಧಿಸಿದ ಹೋರಾಟಗಳು ಹುಟ್ಟಿಕೊಂಡವು. 1969ರಲ್ಲಿ, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ನೇತೃತ್ವದಲ್ಲಿ ಎಲ್.ಜಿ. ಹಾವನೂರರು ಮಂಡಿಸಿದ ವರದಿಯ ಜಾರಿಗಾಗಿ 1969ರ ಅಂಬೇಡ್ಕರ್ ದಿನದಂದು (ಎಪ್ರಿಲ್ 14) ದೊಡ್ಡ ಆಂದೋಲನ ನಡೆಯಿತು. ಇದು ಕಾರಣವಾಗಿ ದಲಿತಪರ ಚಿಂತಕರೆಲ್ಲ ಒಂದುಗೂಡುವಂತಾಯಿತು. ಮುಂದೆ 1973ರಲ್ಲಿ ನಡೆದ ಬೂಸಾ ಪ್ರಕರಣ ಕೂಡಾ ನಾಡಿನ ಜನರನ್ನು ಬಡಿದೆಬ್ಬಿಸಿತು. ನುರಿತ ರಾಜಕಾರಣಿಯೂ, ಮಂತ್ರಿಗಳೂ ಆಗಿದ್ದ ಬಸವಲಿಂಗಪ್ಪನವರು ದಲಿತರು ತಲೆ ಮೇಲೆ ಹೇಲು ಹೊರುವುದನ್ನು ನಿಷೇಧಿಸಿದರು. ಆ ಕಾಲಕ್ಕೆ ಇವೇನೂ ಸಣ್ಣ ಘಟನೆಗಳಾಗಿರಲಿಲ್ಲ. ಇಂಥ ಘಟನೆಗಳ ಜೊತೆಗೆ ದೇವರು, ಧರ್ಮ, ಜಾತಿಗಳ ವಿರುದ್ಧ ಕರ್ನಾಟಕದ ಯುವಜನತೆ ಬಲವಾದ ಕೂಗೆಬ್ಬಿಸಿತು. ಪರಿಣಾಮವಾಗಿ 1973 ರ ಆಗಸ್ಟ್ 25-26ರಂದು ಮೈಸೂರಿನಲ್ಲಿ ಚಾರಿತ್ರಿಕವಾದ ಜಾತಿವಿನಾಶ ಸಮ್ಮೇಳನ ನಡೆಯಿತು. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮದಾಸ್, ಶ್ರಿಕೃಷ್ಣ ಆಲನಹಳ್ಳಿ, ದೇವನೂರ ಮಹಾದೇವ, ಸಿದ್ದಲಿಂಗಯ್ಯ ಮೊದಲಾದವರೆಲ್ಲ ಈ ಸಮ್ಮೇಳನದಲ್ಲಿ ಪಾಲ್ಗೊಂಡಾಗ ಕರ್ನಾಟಕದಾದ್ಯಂತ ಒಂದು ಬಗೆಯ ರೋಮಾಂಚನ ಉಂಟಾಯಿತು. ಅನೇಕ ಕಡೆಗಳಲ್ಲಿ ಅಂತರ್ಜಾತಿ ಮದುವೆಗಳೂ ನಡೆದುವು. ಬಹುಮಟ್ಟಿಗೆ ಇದೇ ಜನಗಳು ಮುಂದೆ 1974ರ ಎಪ್ರಿಲ್ 20 ಮತ್ತು 21ರಂದು ಮೈಸೂರಿನಲ್ಲಿ ‘ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ ನಡೆಸಿದಾಗ ವಿದ್ಯಾರ್ಥಿಯಾಗಿದ್ದ ನಾನೂ ಭಾಗವಹಿಸಿದ್ದೆ. ಈ ಹಂತದಲ್ಲಿ ಶೂದ್ರ ಪ್ರಜ್ಞೆ ಸ್ವಾಭಿಮಾನದ ಸಂಕೇತವಾಯಿತು. ಆ ಸಮ್ಮೇಳನದಲ್ಲಿ ಕುವೆಂಪುರವರು ಮಾಡಿದ ಉದ್ಘಾಟನಾ ಭಾಷಣ ಅನೇಕರ ರಕ್ತವನ್ನು ಬೆಚ್ಚಗಾಗಿಸಿತು. ‘ಕನ್ನಡ ಸಾಹಿತ್ಯದಲ್ಲಿರುವುದೆಲ್ಲ ಬೂಸಾ’ ಎಂದು ಘೋಷಿಸಿದ ಬಸವಲಿಂಗಪ್ಪನವರು ಆ ಕಾರಣಕ್ಕಾಗಿ ತಮ್ಮ ಮಂತ್ರಿ ಪದವಿಯನ್ನು ಕಳೆದುಕೊಂಡರೂ, ಸ್ವಸ್ಥಚಿತ್ತರಾಗಿ ಕುಳಿತಿದ್ದ ಸಾಂಪ್ರದಾಯಿಕ ಸಾಹಿತಿಗಳ ಚಿತ್ತವನ್ನು ಕೆಡಿಸುವುದರಲ್ಲಿ ಯಶಸ್ವಿಯಾದರು. ಜಡವಾಗಿದ್ದ ಸಾಹಿತಿಗಳ ಸಮುದಾಯ ಮೈಕೊಡವಿ ನಿಲ್ಲುವಂತಾಯಿತು.
ದಲಿತರಲ್ಲಿ ಉಂಟಾದ ಎಚ್ಚರದ ಪರಿಣಾಮವಾಗಿ 1974ರಲ್ಲಿ ಭದ್ರಾವತಿಯಲ್ಲಿ ‘ದಲಿತ ಸಂಘರ್ಷ ಸಮಿತಿ’ ರೂಪುಗೊಂಡಿತು. ಮುಂದೆ ಇದು ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ಯಾಗಿ ಬೆಳೆದು ದಲಿತರ ಸಂರಕ್ಷಣೆಗೆ ಕಟಿಬದ್ಧವಾಯಿತು. ದಲಿತ ಬರಹಗಾರರ ಯುವ ಸಂಘಟನೆ ಕರ್ನಾಟಕದಾದ್ಯಂತ ಕ್ಷಿಪ್ರವಾಗಿ ಪಸರಿಸಿಕೊಂಡು ದಲಿತರ ಮೇಲಾಗುವ ದೌರ್ಜನ್ಯಗಳ ವಿರುದ್ಧ ಎತ್ತಿದ ಸ್ವರ ಅಸಾಧಾರಣವಾದುದು. ಮುಂದೆ ಇದು ‘ದಲಿತ ವಿದ್ಯಾರ್ಥಿ ಒಕ್ಕೂಟ’, ‘ದಲಿತ ಮಹಿಳಾ ಒಕ್ಕೂಟ’, ‘ದಲಿತ ಕಲಾ ಮಂಡಳಿ’, ‘ದಲಿತ ನೌಕರರ ಒಕ್ಕೂಟ’, ‘ದಲಿತ ವೈದ್ಯ ಒಕ್ಕೂಟ’ವೇ ಮೊದಲಾದ ಹಲವು ಸಹ-ಸಂಘಟನೆಗಳನ್ನು ಕಟ್ಟಿ ಬೆಳೆಸಿತು. ಈ ಬೆಳವಣಿಗೆಗಳು ದಲಿತ ಸಾಹಿತ್ಯವನ್ನು ಗಟ್ಟಿಯಾಗಿ ಬೆಳೆಸಿದ್ದಲ್ಲದೆ, ಬೀದಿಬೀದಿಯಲ್ಲಿ ದಲಿತರ ಸ್ವರ ಕೇಳಿಸುವಂತೆ ಮಾಡಿತು. ಸಾಹಿತ್ಯಕ್ಕೆ ತಮಟೆಯ ಧ್ವನಿ ಸೇರಿಕೊಂಡಿತು. ಈ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಗೆ ‘ದಲಿತ ಸಂಘರ್ಷ ಸಮಿತಿ’ ಹೊಸ ಆಯಾಮ ನೀಡಿತು. ಸಿದ್ದಲಿಂಗಯ್ಯನವರ ಕವಿತೆಗಳು ಬೀದಿಗಳಲ್ಲಿ, ಗೋಡೆಗಳಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಂಡಿತು.
1970ರ ದಶಕದಲ್ಲಿ ಕಾಂಗ್ರೆಸ್ ಸರಕಾರ ಭೂ ಮಸೂದೆಯನ್ನು ಜಾರಿಗೆ ತಂದಿತು. ಕರ್ನಾಟಕದಲ್ಲಿ ಅದು ದೇವರಾಜ ಅರಸರ ಮುಂದಾಳತ್ವದಲ್ಲಿ ಸಾಕಷ್ಟು ಯಶಸ್ವಿಯಾಯಿತು. ಅನೇಕ ಭೂರಹಿತರಿಗೆ ಭೂಮಿ ದೊರೆಯಿತು. ಅದು ಕೆಳವರ್ಗದ ಜನರಲ್ಲಿ ಮೂಡಿಸಿದ ಸ್ವಾಭಿಮಾನವು ಚಾರಿತ್ರಿಕವಾದದು. ಜಮೀನು ಸಂಬಂಧದಲ್ಲಾದ ಬದಲಾವಣೆಗಳು ಕರ್ನಾಟಕದ ಸಾಮಾಜಿಕ ಜೀವನದ ಮೇಲೂ ಗಾಢ ಪರಿಣಾಮಗಳನ್ನು ಬೀರಿತು. ಬಡವರನ್ನು ಕೇಂದ್ರದಲ್ಲಿರಿಸಿಕೊಂಡು ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದ ಎಡ ಪಕ್ಷಗಳು ಭೂಸುಧಾರಣೆಯ ನಂತರ ನೆಲೆ ಕಳೆದುಕೊಂಡವು. ಕಾನೂನಿನ ಬಲದಿಂದ ಉಳುವ ನೆಲವನ್ನು ತನ್ನದಾಗಿಸಿಕೊಂಡ ಬಡವರು, ನಿಧಾನವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಾರಂಭಿಸಿದರು. ಕ್ರಿಸ್ತ ಶಕ 2000ರ ಹೊತ್ತಿಗೆ ವಿದ್ಯೆ ಪಡೆದು ಉದ್ಯೋಗಕ್ಕೆ ಸಿದ್ಧರಾದ ಈ ಹೊಸ ತಲೆಮಾರಿನ ಹುಡುಗರು ಭೂಸುಧಾರಣೆಯ ನೇರವಾದ ಫಲ ಎಂಬುದನ್ನು ಗುರುತಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಹೀಗೆ ಹುಟ್ಟಿಕೊಂಡ ಉದೀಯಮಾನ ಮಧ್ಯಮ ವರ್ಗವನ್ನು ಬಲಪಂಥೀಯ ರಾಜಕಾರಣ ಸುಲಭವಾಗಿ ಮುಂದೆ ಆಕ್ರಮಿಸಿಕೊಂಡಿತು.
ಭೂ ಮಸೂದೆ ಜಾರಿಯಾಗುತ್ತಲೇ ಪ್ರಬಲವಾಗಿದ್ದ ಭೂಮಾಲಕ ವ್ಯವಸ್ಥೆ ಶಿಥಿಲವಾಯಿತು. ಅದರ ಜಾಗದಲ್ಲಿ ಹೋಟೆಲ್ ಉದ್ಯಮ, ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಮುಕ್ತ ಮಾರುಕಟ್ಟೆ, ರಸ್ತೆ ಸಾರಿಗೆಯ ಖಾಸಗೀಕರಣ - ಮೊದಲಾದ ಹೊಸ ಬಗೆಯ ವ್ಯವಹಾರಗಳು ಅರಂಭಗೊಂಡವು. ಇದರಲ್ಲಿ ತಳವರ್ಗದವರೂ ಕಾಣಿಸಿಕೊಂಡರು. ಭೂಮಸೂದೆಯಿಂದ ಯಾವ ರೀತಿಯ ಪ್ರಯೋಜನವೂ ಆಗದ ಸಾಮಾನ್ಯ ದಲಿತರು
(ಅವರು ಒಕ್ಕಲುತನದ ಹೊರಗೇ ಇದ್ದು, ದಿನಕೂಲಿಗಳಾಗಿದ್ದುದರಿಂದ ಅವರಲ್ಲಿ ಯಾವ ಭೂ ಸಂಬಂಧಿ ದಾಖಲೆಗಳೇ ಇರಲಿಲ್ಲ) ಮಾತ್ರ ಈ ಸ್ಥಿತ್ಯಂತರಗಳಿಂದ ಹೊರಗೇ ಇದ್ದರು. ಆದರೆ ಸುಶಿಕ್ಷಿತ ದಲಿತರು ಸಂಘಟಿತರಾದರು. ಈ ಎಲ್ಲಾ ಘಟನೆಗಳು ಆ ಕಾಲದ ಜನಜೀವನದ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು. ಕೋಮುವಾದಕ್ಕೆ ಅಲ್ಲಿ ಎಡೆಯೇ ಇರಲಿಲ್ಲ.
1975ರ ಜೂನ್ 25ರಂದು ಜಾರಿಗೆ ಬಂದ ತುರ್ತುಪರಿಸ್ಥಿತಿಯಿಂದಾಗಿ ಕರ್ನಾಟಕದ ಕೆಲವು ಬರಹಗಾರರು ಮತ್ತು ಕಲಾವಿದರು ಬೀದಿಗಿಳಿಯಬೇಕಾಯಿತು. ಬಂಡಾಯದ ಮುಂಚೂಣಿಯ ಲೇಖಕ ಚಂದ್ರಶೇಖರ ಪಾಟೀಲರು ಸೆರೆಮನೆ ಸೇರಿದರು. ಇಂಥ ಘಟನೆಗಳು ಸಾಹಿತಿಗಳ ಮೈ ಚಳಿ ಬಿಡಿಸಿದ್ದಂತೂ ನಿಜ. ಲೇಖಕರು ತಮಗೆ ರಾಜಕೀಯ ಕಾಳಜಿ ಅಗತ್ಯ ಮತ್ತು ಅನಿವಾರ್ಯ ಎಂದು ಭಾವಿಸಲು ಆರಂಭಿಸಿದರು. ಇವೆಲ್ಲವುಗಳ ನಡುವೆ 1976, ಮಾರ್ಚ್ 10ರಂದು ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನ ನಡೆದು ಅದಕ್ಕೆ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾದರು. ಸಮ್ಮೇಳನದಲ್ಲಿ ‘ದಲಿತ ಸಾಹಿತ್ಯ’ದ ಬಗ್ಗೆ ಪ್ರತ್ಯೇಕ ಗೋಷ್ಠಿಯನ್ನಿಡಲು ಕನ್ನಡ ಸಾಹಿತ್ಯ ಪರಿಷತ್ತು ಒಪ್ಪದೇ ಇದ್ದುದರಿಂದ ಬಂಡಾಯ ದಲಿತ ಸಾಹಿತಿಗಳೆಲ್ಲರೂ ಪ್ರತ್ಯೇಕವಾಗಿ ಸಮ್ಮೇಳನ ನಡೆಸಲು ನಿರ್ಧರಿಸಿದರು. ಅದುವರೆಗೆ ಬೇರೆ ಬೇರೆ ಕಾರಣಗಳಿಂದ ಲೇಖಕರಲ್ಲಿ ಬೆಳೆದು ಬಂದಿದ್ದ ಅಸಮಾಧಾನ ಸ್ಫೋಟಗೊಳ್ಳಲು ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ಒಂದು ನೆವವಾಯಿತು. ಬೆಂಗಳೂರಲ್ಲಿ ನಡೆದ ಪರ್ಯಾಯ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಮುಂದೆ ಬಂಡಾಯ ಸಾಹಿತ್ಯ ಸಮ್ಮೇಳನಗಳು ಪ್ರತೀ ವರ್ಷವೂ ರಾಜ್ಯದ ಬೇರೆ ಬೇರೆ ಕಡೆ ನಡೆದುವು. ಹೆಚ್ಚಿನವರು ಸಾಹಿತ್ಯ ಪರಿಷತ್ತಿಗೆ ಬಹಿಷ್ಕಾರ ಹಾಕಿದರು. ‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಘೋಷಣೆಯು ಎಲ್ಲೆಡೆಯೂ ಮೊಳಗಿತು. ಕ್ರಾಂತಿಕಾರಿ ಕವಿಗಳ ಕವಿತೆಗಳೂ ಕನ್ನಡಕ್ಕೆ ಅನುವಾದಗೊಂಡವು.
ಬಂಡಾಯ ದಲಿತ ಚಳವಳಿಯ ಸಂದರ್ಭದಲ್ಲಿ ಹೋರಾಟಗಾರರು ಕೆಲವು ಮಹತ್ವದ ಪತ್ರಿಕೆಗಳನ್ನು ಪ್ರಕಟಿಸುತ್ತಾ ಜನರನ್ನು ತಲುಪಲು ಪ್ರಯತ್ನಿಸಿದರು. ಮುಖ್ಯವಾಹಿನಿಯ ಪತ್ರಿಕೆಗಳೂ ಚಳವಳಿಯ ಬಗೆಗೆ ಮೃದು ಧೋರಣೆಯನ್ನಿಟ್ಟುಕೊಂಡಿದ್ದರಿಂದ ಸುದ್ದಿ ಪ್ರಸರಣಕ್ಕೇನೂ ತೊಂದರೆ ಇರಲಿಲ್ಲ. ಆದರೆ ಪ್ರಖರ ವೈಚಾರಿಕತೆಯ ಲೇಖನಗಳನ್ನು ಪ್ರಕಟಿಸಲು ಅವು ಹಿಂದೇಟು ಹಾಕುತ್ತಿದ್ದವು. ಅಂತಹ ಸಂದರ್ಭದಲ್ಲಿ ಲೇಖಕರ ಬೆಂಬಲಕ್ಕೆ ನಿಂತದ್ದು ಚಂದ್ರಶೇಖರ ಪಾಟೀಲರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ‘ಸಂಕ್ರಮಣ’ ಮಾಸಿಕ. ಆರ್. ಜಿ. ಹಳ್ಳಿ ನಾಗರಾಜರ ಸಂಪಾದಕತ್ವದ ‘ಅನ್ವೇಷಣೆ’ ದ್ವೈಮಾಸಿಕವು ನವ್ಯೋತ್ತರ ಸಾಹಿತ್ಯದ ದಾಖಲಾತಿಗೆಂದೇ ಹುಟ್ಟಿಕೊಂಡ ಪತ್ರಿಕೆ. ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದ ‘ಮುಂಗಾರು’ ದೈನಿಕವು ಬಂಡಾಯ ದಲಿತ ಚಳವಳಿ ಮತ್ತು ಸಾಹಿತ್ಯವನ್ನು ನಿರಂತರವಾಗಿ ಪೋಷಿಸಿಕೊಂಡು ಬಂತು. ಇವುಗಳ ಜೊತೆಗೆ ಬಂಡಾಯ ಸಾಹಿತ್ಯ ಸಂಘಟನೆಯ ಮುಖವಾಣಿಯಾಗಿದ್ದ ‘ಬಂಡಾಯ ಸಾಹಿತ್ಯ’, ದಲಿತರ ಧ್ವನಿಯಾಗಿದ್ದ ‘ಪಂಚಮ’ ಮತ್ತು ‘ಹೊಸದಿಕ್ಕು’ ಪತ್ರಿಕೆಗಳು, ಸಮುದಾಯದ ಮುಖವಾಣಿಯಾಗಿದ್ದ ‘ಸಮುದಾಯ ವಾರ್ತಾಪತ್ರ’, ಕಮ್ಯೂನಿಸ್ಟ್ ಪಕ್ಷಗಳ ಪತ್ರಿಕೆಗಳಾಗಿರುವ ‘ಕೆಂಬಾವುಟ’ ಮತ್ತು ‘ಐಕ್ಯರಂಗ’ಗಳು ಜನಪರ ಚಳವಳಿಗಳಿಗೆ ಪ್ರಮುಖ ಒತ್ತಾಸೆ ನೀಡಿವೆ.
ತೆಲುಗಿನಲ್ಲಿ 1965ರಿಂದೀಚೆಗೆ ಪ್ರಬಲವಾಗಿ ಕಾಣಿಸಿಕೊಂಡ ದಿಗಂಬರ ಕಾವ್ಯ, ಮರಾಠಿ ದಲಿತ ಸಾಹಿತ್ಯ, ಹಿಂದಿಯ ಜನವಾದಿ ಸಾಹಿತ್ಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗುತ್ತಿದ್ದ ‘ಕಪ್ಪುಸಾಹಿತ್ಯ’ವು ಕನ್ನಡದಲ್ಲಿಯೂ ಕಾಣಿಸಿಕೊಂಡಿತು. ಹೀಗೆ ಕಳೆದ 50 ವರ್ಷಗಳಲ್ಲಿ ನಮಗೆಲ್ಲ ಬಗೆ ಬಗೆಯ ಸಾಹಿತ್ಯ ಓದಲು ಸಿಗುತ್ತಿತ್ತು. ಚಳವಳಿಗಾರರು ಮಾತಾಡಲೂ ಸಿಗುತ್ತಿದ್ದರು. ಸಾಮಾಜಿಕ ವಾತಾವರಣವೂ ಇಂದಿನಂತಿರದೆ ಮುಕ್ತವಾಗಿತ್ತು. ಆ ಕಾಲದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣಗಳು ನಮಗೆ ಪ್ರಶ್ನಿಸುವುದನ್ನು ಕಲಿಸಿದುವು. ಇತಿಹಾಸವನ್ನು ಹೊಸದಾಗಿ ನೋಡಲು ಹೇಳಿಕೊಟ್ಟವು. ನಾವೆಲ್ಲ ನಮ್ಮದೇ ರೀತಿಗಳಲ್ಲಿ ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸತೊಡಗಿದೆವು. ಮಾನವೀಯ ಸಂಬಂಧಗಳಿಗೆ ಒತ್ತು ನೀಡತೊಡಗಿದೆವು. ಮುಕ್ತ ಚಿಂತನೆಗೆ ಮತ್ತು ವಿಮರ್ಶೆಗೆ ಸಾಕಷ್ಟು ಅವಕಾಶವಿತ್ತು. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ಹೆಚ್ಚಿಸಲು ಲೇಖಕರು ಕೆಲಸ ಮಾಡಬೇಕೆಂದು ನಾವೆಲ್ಲಾ ಭಾವಿಸಿದ್ದೆವು. ಇದು ಕಳೆದ 50 ವರ್ಷಗಳ ದೊಡ್ಡ ಸಾಧನೆಗಳ್ಲೊಂದು.
ಜಾಗತೀಕರಣದ ಪ್ರವೇಶ ಮತ್ತು ಭಾಷೆಗಳ ಅವಸಾನ:
1990ರ ದಶಕದ ಆನಂತರದ ಎರಡು ಪ್ರಮುಖ ಘಟನೆಗಳೆಂದರೆ, ಭಾರತದ ಮಾರುಕಟ್ಟೆಯು ಜಾಗತೀಕರಣಗೊಳ್ಳುವುದರ ಜೊತೆಗೆ ಬಂಡವಾಳವಾದ ಮತ್ತೆ ಚಿಗಿತುಕೊಂಡದ್ದು ಮತ್ತು ಬಾಬರಿ ಮಸೀದಿ ಧ್ವಂಸ ಪ್ರಕರಣದೊಂದಿಗೆ ಕೋಮುವಾದ ಎಗ್ಗಿಲ್ಲದೆ ಬೆಳೆದದ್ದು. ಬಂಡವಾಳವಾದ ಮತ್ತು ಕೋಮುವಾದ ಕೈಜೋಡಿಸಿಕೊಂಡು ಬೆಳೆದದ್ದರಿಂದ ಅವುಗಳು ಒಡ್ಡಿದ ಸವಾಲುಗಳನ್ನು ಇದಿರಿಸುವುದು ಸುಲಭವಾಗಿರಲಿಲ್ಲ. ಈ ಹಂತದಲ್ಲಿ ಭಾರತದ ಸಂವಿಧಾನದ ಮುಖ್ಯ ಆಶಯಗಳನ್ನು ಗೌಣಗೊಳಿಸಲಾಯಿತು, ರಾಜಕೀಯದೊಂದಿಗೆ ಧರ್ಮ ಬೆರೆತುಕೊಂಡಿತು ಮತ್ತು ಜನಗಳ ನಡುವೆ ದ್ವೇಷ ಹೆಚ್ಚಿತು. ಇತಿಹಾಸವನ್ನು ತಿರುಚಲಾಯಿತು. ಗಾಂಧಿ, ನೆಹರೂ ಅಂಥವರನ್ನೇ ಅವಮಾನಿಸುವಂಥ ಕೆಲಸಗಳು ನಡೆದುವು. ಇಂಥ ಬೆಳವಣಿಗೆಗಳ ನಡುವೆ ಭಾಷೆ ಕೂಡಾ ಪತನಮುಖಿಯಾಗಿ ತನ್ನ ಸೃಜನಶೀಲತೆಯನ್ನು ಕಳೆದುಕೊಂಡಿತು. ಬಹುತೇಕ ಲೇಖಕರು ಸಮಕಾಲೀನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸುವ ಗೋಜಿಗೇ ಹೋಗಲಿಲ್ಲ. ಮಧ್ಯಮ ವರ್ಗದವರು ಮೌನಕ್ಕೆ ಶರಣಾದರು. ಇದೇ ಅವಕಾಶವನ್ನು ಬಳಸಿಕೊಂಡ ಬಲಪಂಥೀಯರು ಮತ್ತು ಬಂಡವಾಳಶಾಹಿಗಳು ಭಾಷಾ ಅಧ್ಯಯನವನ್ನು ‘ಅನುತ್ಪಾದಕ’ ಎಂದು ಪ್ರಚಾರ ಮಾಡಿದರು. ಜನರೂ ಅದನ್ನು ನಂಬಿ ಭಾಷಾ ಕಲಿಕೆಯಿಂದ ದೂರ ಹೋಗಲಾರಂಭಿಸಿದರು. ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದು ಇಲ್ಲವೇ ವಿದೇಶಗಳಿಗೆ ಕಳಿಸಿಕೊಡುವುದು ಮುಖ್ಯ ಎಂದು ಬಹುತೇಕ ಎಲ್ಲರೂ ನಂಬಿದರು. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ 21ನೇ ಶತಮಾನದ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಯಿತು. ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಮಾಧ್ಯಮಗಳು ಕೂಡಾ ಭಾಷೆಗಳನ್ನು ಕೀಳುಮಟ್ಟದ ಸುಳ್ಳುಗಳ ಪ್ರಚಾರಕ್ಕೆ ಬಳಸಿದವು. ಇದರ ಒಟ್ಟು ಪರಿಣಾಮವೋ ಎಂಬಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾಷಾಧ್ಯಯನ ಕಳೆಗುಂದಿತು.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಳುವ ಶಕ್ತಿಶಾಲಿ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ‘ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು’ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕನ್ನಡಿಗರೂ ದೊಡ್ಡ ಸಂಖ್ಯೆಯಲ್ಲಿ ಈ ಬೆಳವಣಿಗೆಯನ್ನು ಒಪ್ಪಿಕೊಂಡರು. ಇದರಿಂದಾದ ಬಹಳ ದೊಡ್ಡ ಅಪಾಯವೆಂದರೆ, ಸಜೀವವಾಗಿದ್ದ ಕನ್ನಡ ಕುಸಿಯಲು ಆರಂಭಿಸಿದ್ದು. ಸಾವಿರಾರು ಸಂಖ್ಯೆಯಲ್ಲಿ ಕನ್ನಡ ಶಾಲೆಗಳು ಮುಚ್ಚಿ ಹೋದವು. ಅದಕ್ಕೆ ರೋದಿಸುವವರೂ ಕಾಣದಂತಹ ಪರಿಸ್ಥಿತಿ ಉಂಟಾಯಿತು. ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಯಿದ್ದರೂ ಜನರು ಅವುಗಳ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು. ಕನ್ನಡವೂ ಸೇರಿದಂತೆ, ಅನೇಕ ಸಣ್ಣ ಭಾಷೆಗಳನ್ನಾಡುವ ಜನರಲ್ಲಿ ಇವತ್ತು ತಮ್ಮ ಮಾತೃ ಭಾಷೆಗಳ ಬಗೆಗೆ ಅಭಿಮಾನ ಕಡಿಮೆಯಾಗಿದೆ. ಇಂಗ್ಲಿಷಿನ ಮೇಲೆ ಮೋಹ ಹೆಚ್ಚಾಗಿದೆ.
ನಾನು ಈಗಾಗಲೇ ಹೇಳಿರುವಂತೆ, ಭಾಷೆಗಳ ಸಾವಿನ ಕತೆ ಆರಂಭವಾದದ್ದು ಕಳೆದ ಶತಮಾನದ ತೊಂಭತ್ತರ ದಶಕದಲ್ಲಿ. ಜಾಗತೀಕರಣವು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಮಾರ್ಪಡಿಸಿತು. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಜಗತ್ತನ್ನು ಆಮೂಲಾಗ್ರವಾಗಿ ಬದಲಾಯಿಸಿತು. ಮೇಲಿನ ಪರಿಭಾಷೆಗಳು ಮೂಲತಃ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿವೆಯಾದರೂ ಇಂದು ಅವು ನಮ್ಮ ಸಮಾಜವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿವೆ. ಅದೇ ಪ್ರಕಾರ ಅವು ನಮ್ಮ ಶಿಕ್ಷಣ ಕ್ಷೇತ್ರವನ್ನೂ ಆಮೂಲಾಗ್ರವಾಗಿ ಬದಲಾಯಿಸಲು ಒತ್ತಾಯಿಸಿವೆ. ಪರಿಣಾಮವಾಗಿ ಶಿಕ್ಷಣದ ಅಂತರ್ರಾಷ್ಟ್ರೀಯಕರಣ ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ವಿಶ್ವದ ಕುರಿತಾದ ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ ಈ ಅಂತರ್ರಾಷ್ಟ್ರೀಯಕರಣ ಪ್ರಕ್ರಿಯೆ ಅಗತ್ಯ ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಇದನ್ನು ಕಾರ್ಪೊರೇಟ್ ವಲಯ ಬಲವಾಗಿ ಬೆಂಬಲಿಸಿದೆ. ಪರಿಣಾಮವಾಗಿ ಶಿಕ್ಷಣದ ಖಾಸಗೀಕರಣವನ್ನು ತಡೆಯದಾದೆವು. ಸರಕಾರಗಳು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುತ್ತಿದ್ದಂತೆ ಖಾಸಗಿ ಶಾಲೆಗಳು, ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳು ತಲೆ ಎತ್ತಲಾರಂಭಿಸಿವೆ. ಇಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಯೇ ಅಪ್ರಸ್ತುತವಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ, ದೇಶೀಯ ಮತ್ತು ವಿದೇಶೀಯ ವಿದ್ಯಾನಿಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಇವತ್ತು ಜನಪ್ರಿಯವಾಗಿವೆ. ಹೀಗಾಗಿ, ಇಂದು ಶಿಕ್ಷಣವು ಒಂದು ರಾಜ್ಯದ, ಒಂದು ವಿಶ್ವವಿದ್ಯಾನಿಲಯದ ಅಥವಾ ಒಂದು ದೇಶದ ಗಡಿಗೆ ಸೀಮಿತವಾಗಿ ಉಳಿದಿಲ್ಲ. ಶಿಕ್ಷಣವು ಇದೀಗ ‘ಸೀಮಾತೀತ’ವಾಗುತ್ತಿದೆ. ಶಿಕ್ಷಣದ ಅಂತರ್ರಾಷ್ಟ್ರೀಕರಣದ ಪ್ರಕ್ರಿಯೆಯು ಸ್ಥಳೀಯ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳೆಲ್ಲ ಮರೆಸಿ, ‘ವಾಸನೆ, ಬಣ್ಣ ರಹಿತವಾದ’ ಏಕರೂಪದ ವ್ಯವಸ್ಥೆಯೊಂದನ್ನು ಆಗು ಮಾಡುತ್ತಿದೆ. ಇವುಗಳ ಪರಿಣಾಮವೋ ಎಂಬಂತೆ ನಿಂತ ನೆಲದ ಬಗ್ಗೆ ಗೌರವವಿಲ್ಲದ, ಮಣ್ಣಿನ ವಾಸನೆಯ ಅರಿವಿಲ್ಲದ ಅಂತರ್ರಾಷ್ಟ್ರೀಯ ಪ್ರಜೆಗಳು ನಿರ್ಮಾಣವಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ಮುಖ್ಯವಾಗಿ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಹೊಸದಾಗಿ ಯೋಚಿಸಬೇಕಾಗಿದೆ.
ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆ ಬರುವಂತೆ ಅಧ್ಯಾಪಕ ಮಾಡಬೇಕು, ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಾಹಿತ್ಯದ ಪಠ್ಯಗಳನ್ನು, ವಿಮರ್ಶಾತ್ಮಕ ಮತ್ತು ಕ್ರಿಯಾತ್ಮಕ ರೀತಿಯಲ್ಲಿ ರೂಪಿಸುವ ಜವಾಬ್ದಾರಿ ಅಧ್ಯಾಪಕನದು ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ, ಒಬ್ಬ ಕುವೆಂಪುವನ್ನು ಓದುವುದೆಂದರೆ ಅದಕ್ಕೆ ಪೂರ್ವಭಾವಿಯಾಗಿ ಮೂಲ ಪಠ್ಯಗಳನ್ನು ಓದುವುದು, ಅವುಗಳ ಬಗ್ಗೆ ಚರ್ಚಿಸುವುದು, ವಿಚಾರ ವಿಮರ್ಶೆ ಮಾಡುವುದು ಮತ್ತು ಕೊನೆಯಲ್ಲಿ ಅವರ ಬಗ್ಗೆ ವಿಸ್ತಾರವಾಗಿ ಒಂದು ಪ್ರಬಂಧವನ್ನು ಬರೆಯುವುದು. ಮಾನವಿಕಗಳಲ್ಲಿ ಅದು ವಿಶೇಷವಾಗಿ ವಿದ್ಯಾರ್ಥಿಯೊಬ್ಬನ/ಳ ಪ್ರಶ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸಿ, ಅಲೋಚನೆಗೆ ಅವಕಾಶ ಮಾಡಿಕೊಡುತ್ತದೆ. ಪ್ರತಿಕ್ರಿಯೆ ಮತ್ತು ಸಮರ್ಥನೆಯ ಆನಂತರ ತರ್ಕಬದ್ಧವಾದ ಪ್ರಬಂಧವೊಂದನ್ನು ರಚಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಇದು ಕಲಿಯುವವನ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತವೆ.
ಆದರೆ ಇವತ್ತಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳು ಯಾಂತ್ರಿಕವಾಗಿದ್ದು ಸಾಹಿತ್ಯ ಕೃತಿಯ ಓದುವ ಖುಷಿಯನ್ನೇ ಕಸಿದುಕೊಂಡಿವೆ. ಉನ್ನತ ಶಿಕ್ಷಣವು ನಮ್ಮನ್ನು ತತ್ವಶಾಸ್ತ್ರದ ಆಶ್ಚರ್ಯಕರ ಜಗತ್ತಿಗೆ ಕರೆದೊಯ್ಯಬೇಕು. ಅಲ್ಲಿ ಸರಿ ತಪ್ಪಿನ ಪ್ರಶ್ನೆಯೇ ಇಲ್ಲ. ಇಂಥ ಸಂದರ್ಭದಲ್ಲಿ ನಾವು ನಮ್ಮ ಪಠ್ಯಗಳನ್ನು ಹೊಸದಾಗಿ ಓದಲು ಮತ್ತು ಪಾಠಮಾಡಲು ಕಲಿಯುತ್ತಿದ್ದೇವೆಯೇ? ಎಂಬ ಪ್ರಶ್ನೆಯೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.