ಚುನಾವಣೆ: ಸಂಭ್ರಮ ಸಂಕಟಗಳು
ದೇಶದ ಯಾವುದಾದರೂ ಒಂದು ರಾಜ್ಯದಲ್ಲಿಯಾದರೂ ಒಂದಲ್ಲ ಒಂದು ಚುನಾವಣೆ ನಿತ್ಯ ನಡೆಯುತ್ತಿರುತ್ತದೆ. ಆದರೆ ಇದು ಹಳೆ ಮಾತು. ನಾವು ನಮಗಾಗಿ ನಮಗೋಸ್ಕರ ಆಳುವ ಪ್ರಭುಗಳನ್ನು ಆರಿಸಿಕೊಳ್ಳುವ ಕಾಲ ಪ್ರತೀ ಐದು ವರ್ಷಕ್ಕೊಮ್ಮೆ ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಬ್ಬ ಹೆಬ್ಬಾಗಿಲಿಗೆ ಬರುವ ರೀತಿಯಲ್ಲಿ ಚುನಾವಣೆಗಳು ಬಂದು ಕಾದು ಕುಳಿತ್ತಿರುತ್ತವೆ. ಅದಕ್ಕೆ ನಮ್ಮ ಮಹಾ ಪ್ರಭುಗಳು ‘ಒಂದು ದೇಶ ಒಂದು ಚುನಾವಣೆ’ ಎಂಬ ಹೊಸ ಬೆರಗನ್ನು ಬಿಟ್ಟಿದ್ದಾರೆ. ಇರಲಿ ವೈವಿಧ್ಯಮಯ ದೇಶ, ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ಆಯಾಯ ರಾಜ್ಯಗಳು ವಿವಿಧ ರೀತಿಯ ಹವಾಮಾನ, ಆಚಾರ, ಭಿನ್ನ ಉಡುಪು, ಸಂಸ್ಕೃತಿಗಳ ಹೊಂದಿರುವ ನಮ್ಮ ದೇಶದ ರಾಜಕೀಯ ಹುರಿಯಾಳುಗಳು ಮತ್ತು ನಾವೆಲ್ಲ ಸೇರಿ ಭ್ರಷ್ಟಾಚಾರ ವೆಂಬ ದೊಡ್ಡ ರಾಕ್ಷಸ ನನ್ನು ಬೆಳೆಸಿ ಸಾಕುತ್ತಿದ್ದೇವೆ. ಚುನಾವಣೆ ಬಂತೆಂದರೆ ರಾಜಕೀಯ ನಾಯಕರು ಸದಾ ನೂರಾರು ಕನಸುಗಳನ್ನು ಇಟ್ಟುಕೊಂಡು ತಮ್ಮ ವರಸೆ, ಪ್ರತಾಪ, ಬಿರುದು ಬಾವಲಿಗಳನ್ನು ಇನ್ನೊಬ್ಬರಿಗೆ ಕಾಣುವಂತೆ ಕಂಬ ಕಂಬಗಳ ಮೇಲೆ ಕೈ ಮುಗಿದು ನಿಲ್ಲುವ ಫೋಟೊಗಳು ಪೈಪೋಟಿಗಿಳಿದು ನಿಲ್ಲುತ್ತವೆ.
ದುಡ್ಡಿನ ಒಡೆಯನಿಗೆ, ಜಾತಿ ಪ್ರಾಬಲ್ಯವಿರುವವನಿಗೆ ಮಾತ್ರ ಪಕ್ಷದ ಟಿಕೆಟ್ ಎಂಬುದು ಮೊದಲಿಂದಲೂ ಖಾತ್ರಿಯಾಗಿ ಬಿಟ್ಟಿದೆ. ಯಾವ ನಾಯಕನ ಹಿಂದೆ ಎಷ್ಟು ಜನರಿದ್ದಾರೆ ಎಂಬುದರ ಮೇಲೆ ನಾಯಕ ಟಿಕೆಟ್ ಗಳಿಸುತ್ತಾನೆ. ಹಿಂಬಾಲಕರು ಕಣ್ಣೆದುರಿನ ನಾಯಕನ ಮೇಲೆ ಪದ ಕಟ್ಟಿ ಹಾಡಿ ನಂಬಿಕಸ್ಥ ನಾಯಕನ ಗುಣಗಾನ ಮಾಡುತ್ತಾ ವೇದಿಕೆಗೆ ಸಜ್ಜು ಗೊಳಿಸುವ ವಂದಿ ಮಾಗದರ ಕೂಟವೇ ಇದೆ. ಪ್ರತೀ ಚುನಾವಣೆಗಾಳಿ ಬೀಸುತ್ತಲೇ ವಾತಾವರಣವೇ ಬದಲಾಗುತ್ತದೆ. ಸುದ್ದಿವಾಹಿನಿಗಳು ರೋಚಕವಾಗಿ ಬಿತ್ತರಿಸುವ ಸುದ್ದಿಗಳಿಗೆ ಜನರು ಮರುಳಾಗುತ್ತಾರೆ. ಪ್ರತೀ ಚುನಾವಣೆಗಳುಎದುರಾದಾಗ ಮಾಧ್ಯಮಗಳು ಟೊಂಕ ಕಟ್ಟಿ ನಿಲ್ಲುವಂತೆ ಜಾಗರೂಕರಾಗುತ್ತವೆ. ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿ ಮತದಾರ ಪ್ರಭುಗಳನ್ನು ಹೇಗೆಲ್ಲಾ ಯಾಮಾರಿಸಬಹುದು ಎಂಬುದಕ್ಕೆ ಹಲವು ತಂತ್ರಮಂತ್ರ ಪ್ರತಿ ತಂತ್ರಗಳನ್ನು ಸೇರಿಸಿ ಸಜ್ಜಾಗಿ ಕಾದು ನಿಲ್ಲುತ್ತಾರೆ.ಎಲ್ಲದಕ್ಕೂ ಸೆಟೆದು ನಿಂತುಕೊಳ್ಳುವ ನಾಯಕರು ತಮ್ಮ ಸುತ್ತ ದಂಡನ್ನೇ ಕಟ್ಟಿಕೊಳ್ಳುತ್ತಾರೆ. ಅಲ್ಲಿ ಧನ ಮನ ಮುಡಿಪಾಗುತ್ತದೆ. ಹಣದ ಹೊಳೆಯನ್ನೇ ಹರಿಸಿಬಿಡುತ್ತಾರೆ. ಚುನಾವಣಾ ಆಯೋಗಕ್ಕೆ ಸುಳ್ಳುಲೆಕ್ಕ ಕೊಟ್ಟು ಜೈ ಅನ್ನುತ್ತಾರೆ. ಹಲವು ಯಾತ್ರೆಗಳಾಗಿ, ಧ್ವನಿಗಳು, ಕಾಲ್ನಡಿಗೆ ಹೋರಾಟಗಳು ಜಾತಿಗೊಂದೊಂದು ಸಮಾವೇಶ ಮಾಡುತ್ತಾ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸುವಲ್ಲಿ ಎಲ್ಲಾ ಪಕ್ಷಗಳು ತುದಿಗಾಲಲ್ಲಿ ನಿಂತು ಸುತ್ತಾಡುತ್ತವೆ. ಹೋಗದಿದ್ದ ಕಡೆಯಲ್ಲಿ, ಊರು ಕೇರಿ, ಕೊಳಗೇರಿ, ಸಂಧಿ ಗೊಂದಿ, ಓಣಿ, ಬಯಲು ಕಡೆ ನುಗ್ಗುತ್ತಾರೆ. ಚುನಾವಣಾ ಸಮಯದಲ್ಲಿ ಮಾತ್ರ ಎಲ್ಲಾ ಪಕ್ಷದ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ವಯಸ್ಸನ್ನು ಮೀರಿ ಸುತ್ತಾಟ ಮಾಡುವ ನಾಯಕರು ಪಣ ತೊಟ್ಟಂತೆ, ದಣಿವರಿಯದೆ ತಿರುಗುವ ನಾಯಕರನ್ನು ನೋಡಿದಾಗ ಆಯಸ್ಸು ಮತ್ತು ಹುಮ್ಮಸ್ಸು ರಾಜಕೀಯ ರಂಗದಲ್ಲಿರುವವರೆಗೆ ಮಾತ್ರ ಇದೆಯಾ? ಎಂದೆನಿಸುತ್ತದೆ. ಕೆಲವರು ದಣಿವನ್ನೇ ಕಾಣದೆ ಓಡಾಡುವುದನ್ನು ನೋಡಿದರೆ ದಣಿವರಿಯದ ಕಲಿಗಳು ಇವರು! ಮೈ ಮುರಿದು ದುಡಿಯುವ ಭೂಮಿ ಪುತ್ರರು ಇವರನ್ನು ನೋಡಿ ಒಮ್ಮೊಮ್ಮೆ ಚಕಿತರಾಗುವುದುಂಟು. ಅವರ ಕೆಚ್ಚು ನೋಡಿದಾಗ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಕುಟುಂಬ ರಾಜಕಾರಣ, ಪುತ್ರ ವ್ಯಾಮೋಹ ಮಿತಿ ಮೀರಿದೆ. ಅಳುವುದು ಸಾಮಾನ್ಯವಾಗಿ ಬಿಟ್ಟಿದೆ.
ಅಂದು ಆಕಾಶವಾಣಿ ಸುದ್ದಿಗೆ ಜನ ಕಿವಿಗೊಡುತ್ತಿದ್ದವರು ಇಂದು ಬ್ರೇಕಿಂಗ್ ಸುದ್ದಿಗೆ ಕಿವಿಗಳ ಕೊಟ್ಟು ಕೇಳುವ ಜನ ಅದದೇ ಸುದ್ದಿ ಮತ್ತೆ ಮತ್ತೆ ತೋರಿಸಿದ್ದನ್ನೇ ಮಗುಚಿ ತೋರಿಸುವ ಕರಾಮತ್ತು ! ಅಬ್ಬಾ ದೃಶ್ಯ ಮಾಧ್ಯಮಗಳ ರೋಚಕತೆ, ವೈಭವೀಕರಣ ತಪ್ಪುತಪ್ಪು ಕನ್ನಡ ಬೆಪ್ಪಾಗಿ ಒಪ್ಪಿಸುವ ನಟಿ ಮಣಿಯರು, ದಡ್ಡ ನಿರೂಪಕಿಯರು, ಭಾಷಾ ಕೌಶಲ ವಿಲ್ಲದ ಅಂದಾಗಾತಿಯರು, ವಯ್ಯಾರದಿಂದ ಬೀಗುವ ಸುದ್ದಿ ಓದುವ ವಾರ್ತಾವಾಚಕಿಯರು, ಮಾಧ್ಯಮಗಳಲ್ಲಂತೂ ಟಿ.ಆರ್.ಪಿ. ಇಲ್ಲದೆ ಕಾರ್ಯಕ್ರಮಗಳೇ ಇಲ್ಲ ಎನ್ನುವಂತಾಗಿದೆ. ಅರಚಾಡುವ ಡಿಬೆಟ್‌ಗಳು, ಕಂಗ್ಲಿಷ್ ಭಾಷೆಯ ಮೆರೆದಾಟ, ಕನ್ನಡ ಭಾಷೆ ನಿತ್ಯವೂ ಕೊಲ್ಲುವ ವಾರ್ತಾ ವಾಚಕಿಯರಿಗೆ, ರಿಯಾಲಿಟಿ ಶೋ ನಡೆಸುವ ನಟಿ ಮಣಿಯರಿಗೆ ಇನ್ನಾದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಲಿಸಬೇಕು.
ಸುದ್ದಿ ವಾಹಿನಗಳಲ್ಲಿ ಬ್ರೇಕಿಂಗ್ ಸುದ್ದಿಗಳ ಸಂತೆಯೇ ದಿನಪೂರ ಬಿತ್ತರವಾಗುತ್ತದೆ. ನಿಜವಾಗಿಯೂ ಮಾಧ್ಯಮ ಮಿತ್ರರು ರಾಜಕಾರಣಿಗಳ ಮುಖದ ಮುಂದೆ ಮೈಕ್ ಹಿಡಿದು ಬಾಯಿ ಬಿಡಿಸುತ್ತಾರೋ ಅಥವಾ ಮೈಕ್ ಕಂಡರೆ ಅವರಿಗೆ ಬಾಯಿ ಬಿಡಬೇಕು ಅನ್ನಿಸುತ್ತದೆಯೋ ಆ ಮರ್ಮವನ್ನು ಅರಿತವರೇ ಹೇಳಬೇಕು. ಮಾತಿನ ತೆವಲು, ಮಾತಿನ ಮಾತಾಪುಗಳನ್ನು ಕೇಳುವುದೇ ಚಂದ. ಉಚಿತ ಮನರಂಜನೆಗೆ ಹೇಳಿ ಮಾಡಿಸಿದ ನಾಯಕರು ಕೆಲವರು! ಮಾತಿಗೆ ಸವಾಲು,ಪ್ರತಿ ಸವಾಲು ಅಬ್ಬಾ ಸತ್ಯ ಹರಿಶ್ಚಂದ್ರನ ಹಾದಿ ತುಳಿದಂತೆ ಮಾತನಾಡುವ ಕರಾಮತ್ತು ಮಾತ್ರ ಜನರನ್ನು ನಿಬ್ಬೆರಗು ಗೊಳಿಸುತ್ತದೆ.ಆಡಿದ ಮಾತನ್ನು ಹೇಳಿಯೇ ಇಲ್ಲ ಎಂದು ವಾದಿಸಿ ಗೆಲ್ಲುವ ಚಮತ್ಕಾರವನ್ನು ಕಲಿತದ್ದಾದರೂ ಎಲ್ಲಿ? ಕೇಳಬೇಕು. ಸಾವಿರಾರು ಜನರು ಸೇರುವ ಸಮಾವೇಶದಲ್ಲಿ ಮಾತುಕತೆ, ಬಿರುಸುನಡೆಗಳು, ಜೈಕಾರ, ಚಪ್ಪಾಳೆಗಳ ಕಲರವ, ತಳಿರು ತೋರಣಗಳಿಂದ ಅಲಂಕೃತವಾಗುವ ಊರಗಲ ಸಭಾ ಮಂಟಪಗಳು ಕಂಡಾಗ ರೊಕ್ಕದ ಗಿಡವೇನಾದರೂ ಇದೆಯೇ ಇವರ ಬಳಿ ಎಂದು ಅನಿಸಿದರೆ ಅಚ್ಚರಿ ಇಲ್ಲ. ಮೈಕಾಸುರ ನೆಂಬ ದೊಡ್ಡ ಬಾಯಿಯ ದೊಡ್ಡಣ್ಣ! ಆಹಾ ಒಂದೇ ಎರಡೇ, ರಾಜಕೀಯ ಸಮಾವೇಶಗಳೇ ಹಾಗೆ ತುಂಬಿದ ಜಾತ್ರೆಗಳ ಹಾಗೆ ಕಂಗೊಳಿಸುತ್ತವೆ. ತುಂಡುಡುಗರಿಂದ ಮುದುಕರ ವರೆಗೆ ಹುಮ್ಮಸ್ಸಿನಿಂದ ಓಡಾಡುವ ಚೈತನ್ಯ ನೋಡಿದರೆ ಹಬ್ಬಗಳು ಕಣ್ಣು ಮುಂದೆ ಬರುತ್ತವೆ. ದೇವರ ಉತ್ಸವ ಮೂರ್ತಿ ಯಂತೆ ಮೆರೆಸುವ, ಕುಣಿದು ಕುಪ್ಪಳಿಸುವ, ತಮಟೆ ನಗಾರಿಗಳ ಡೊಳ್ಳು, ಕಂಸಾಳೆ ಝಲಕ್ ಗಳು ನಾಯಕರ ಶಕ್ತಿಯನ್ನು ಬೆಂಬಲಿಸುವ ಜನರಿಗೆ ನೂರ್ಮಡಿ ಶಕ್ತಿ ಇಮ್ಮಡಿಸುತ್ತವೆ. ಜಾತ್ರೆಯ ಗೌಜು ಗದ್ದಲದಂತೆ ಅನ್ನ ಸಂತರ್ಪಣೆ,ಮೇರುಬಿರಿಯಾನಿ, ಬಸ್ ಇಳಿಯುವ ಮುನ್ನ ಲೆಕ್ಕ ಚುಕ್ತಾ ಮಾಡಿ ಮತದಾರರಿಗೆ ಮತ್ತೆ ನಾಳೆ ಇನ್ನೊಂದು ಪಕ್ಷದ ಸಮಾವೇಶಕ್ಕೂ ಹೀಗೆ ಬನ್ನಿ ಎಂದು ಹೇಳುವುದನ್ನು ಮರೆಯುವುದಿಲ್ಲ. ಎಲ್ಲವೂ ನಡೆಯುತ್ತದೆ. ಹೇಳಿಕೊಟ್ಟ ರೀತಿಯಲ್ಲಿಯೇ. ದೂರದಿಂದಲೇ ನಾಯಕನ ಕಂಡ ಭಕ್ತ ಮತದಾರ ಪ್ರಭುಗಳಿಗೆ ಕೈ ಬೀಸಿ ಮುಂದೆ ಕೊಡುವ ವರವಾಗ್ದಾನದ ಝರಿ ಭೋರ್ಗರೆಯುತ್ತದೆ. ಗಾಳಿ ಬಂದಾಗ ತೂರುವಂತೆ ಜನರೂ ತೂರಾಡುತ್ತಾರೆ. ವೇದಿಕೆ ಮೇಲೆ ತುಂಬಿ ತುಳುಕುವ ಕಾರ್ಯಕರ್ತರು, ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ದೇಹದ ಒಂದು ಪಾರ್ಶ್ವ ವಾದರೂ ಬಿತ್ತರವಾಗಲಿ ಎಂದು ಸದಾ ನಾಯಕರ ಹಿಂದೆ ನಿಂತಿರುವ ಹಿಂಬಾಲಕರು, ವೇದಿಕೆಯ ಮೇಲೆ ದೀಪ ಬೆಳಗುವ ವೇಳೆಗೆ ಸರಿಯಾಗಿ ಕಡ್ಡಿ ಗೀರಲು ಕಾದಿರುವ ಮರಿ ನಾಯಕರು, ಬರೆದುಕೊಟ್ಟಷ್ಟನ್ನೇ ಓದಿ ಹೇಳುವ ಪ್ರಾಮಾಣಿಕರು, ಸ್ವಾಗತ ಎಂದು ಮೈಕ್ ಮುಂದೆ ನಿಂತು ಭಾಷಣವನ್ನೇ ಬಿಗಿಯುವ ಮೈ ಮರೆಯುವ ನಾಯಕರು, ಅಬ್ಬಾ ಚುನಾವಣೆಗಳು ಬಂದರೆ ಎಷ್ಟೊಂದು ದೃಶ್ಯಗಳು ಕಣ್ಣಿಗೆ ಮುದ ನೀಡುತ್ತವೆ. ಇದು ಕೆಲವರಿಗೆ ಮನರಂಜನೆ, ಇನ್ನು ಕೆಲವರಿಗೆ ಸಂಕಟ.
ಚುನಾವಣೆ ಬಂದರೆ ಜೀವನದಲ್ಲಿ ಒಮ್ಮೆಯೂ ನಡೆಯದೇ ಇರುವವರು ನಡೆಯಲು ತಾಲೀಮು ಮಾಡುತ್ತಾ ಈ ಸಂದರ್ಭದಲ್ಲಿ ನಡೆಯುತ್ತಾರೆ. ಎಲ್ಲವೂ ನಾಳೆಗಾಗಿ ಅಧಿಕಾರದ ರುಚಿಗಾಗಿ. ಗೆದ್ದರೆ ಅಧಿಕಾರ, ಸೋತರೆ ಖರ್ಚಿಲ್ಲದೆ ಬೊಜ್ಜು ಕರಗುವುದು. ‘‘ಚುನಾವಣೆಗಳು ಬಂದರೆ ಬೊಜ್ಜು ಕರಗುತ್ತದೆ. ಜೋಬು ಖಾಲಿಯಾಗುತ್ತದೆ’’ ಎಂಬುದು ಹಿರಿಯ ರಾಜಕೀಯ ನಾಯಕರೆಲ್ಲರ ಉವಾಚ. ಚುನಾವಣೆ ಕಾಲದಲ್ಲಿ ನಾಯಕರು ನಡೆದು ನಡೆದು ಸುಸ್ತಾದರೆ, ಕೆಲವರು ಬಿಸಿಲಿಗೆ ಮುಖ ಒಡ್ಡಿ ಅರಳಿದ ಹೂವು ಬಾಡಿ ಮುದುರುವಂತೆ, ಮುದುಕರಂತೆ, ಕರಿ ಮಡಕೆಯಂತೆ ಆಗುತ್ತಾರೆ. ಹೈರಾಣಾಗಿ ರಾತ್ರಿ ನಿದ್ದೆ ಬಾರದಿರುವಾಗ ಇವೆಲ್ಲ ಬೇಕಿತ್ತಾ? ಎಂದು ಒಂದು ಕ್ಷಣ ಅನಿಸಿದರೂ ರಾತ್ರಿ ಕಳೆದು ಬೆಳಕಾದಾಗ ಅದೇ ಹೊಸ ಹುಮ್ಮಸ್ಸು ಚಿಗುರಿ ಹೊಸ ದಿನಕ್ಕಾಗಿ ನಾಳೆಯ ನಾಡಿಗೆ ಮಾತ್ರ ಅಧಿಕಾರದ ಗದ್ದುಗೆ ಕರೆಯುತ್ತಿರುತ್ತದೆ!
ಇನ್ನು ಸಮಾವೇಶದಲ್ಲಿ ನೋಡುಗರಿಗೆ, ಕೇಳುಗರಿಗೆ ಒಂದು ನವೀನತೆಯ ಹೊಸ ಭಾಷೆ, ಭಾಷಣ, ಆಕ್ರೋಶದ ನುಡಿಗಳು, ಕೀಳು ಮಾತುಗಳು, ಟೀಕೆಗಳು, ಬೈಗುಳಗಳು ಕೇಳುವುದೇ ಸೊಗಸು. ಇವುಗಳನ್ನೆಲ್ಲ ನೋಡುತ್ತ್ತಿದ್ದರೆ ಚುನಾವಣೆಗಳು ಹಬ್ಬದಂತೆ ಬಂದು ಹೋಗುವುದು ಕೂಡ ಜಾನಪದದ ಭಾಗವಾಗುತ್ತಿವೆ. ಲಕ್ಷಾಂತರ ಜನರ ಮುಂದೆ ಭಾಷಣ ಮಾಡುತ್ತ ಜನರನ್ನು ಮಂತ್ರ ಮುಗ್ಧರನ್ನಾಗಿ ಮಾಡುವ ನಾಯಕರು ತಮ್ಮ ಹಾವ ಭಾವಗಳಿಂದಲೇ ಸುದ್ದಿಯಾಗುತ್ತಾರೆ. ಶೂರರೂ ಆಗುತ್ತಾರೆ. ಮಾತಿನಿಂದಲೇ ಮನವ ಗೆಲ್ಲುವ ನಾಯಕ ಮಣಿಗಳು ಸಾಹಿತ್ಯದ ಚೂರು ಪಾರು ಉದುರಿಸಿ ವಚನದ ಉಯ್ಯಾಲೆಯಲ್ಲಿ ಜನರನ್ನು ತೇಲಿಸಿ ಕೇಕೆ, ಚಪ್ಪಾಳೆಗಳು ಮಗ್ಗಲು ಬದಲಾಯಿಸುತ್ತವೆ. ಸಮಾವೇಶಗಳಲ್ಲಿ ಪಲಾವ್, ತಿಂಡಿಗಾಗಿ ಕಿತ್ತಾಟ, ಕರೆದುಕೊಂಡು ಬಂದ ಬಸ್ ಮಿಸ್ಸಾಗಿ ಪರೆದಾಡುವ ಅಲೆದಾಟವೂ ಒಂದಾಗಿರುತ್ತದೆ. ಸಮಾವೇಶಕ್ಕೆ ಬಂದ ಕೆಲವು ಬುದ್ಧಿವಂತರು ಯಾವಾಗಲೂ ಒಂದು ಕೆಲಸಕ್ಕೆ ಹೋಗಿ ಎರಡು ಕೆಲಸಗಳನ್ನು ಮುಗಿಸಿಕೊಂಡು ಬರುವ ಹಳ್ಳಿಯ ಕಿಲಾಡಿ ಕಿಟ್ಟಪ್ಪಗಳು ಜಾತಿ ಸಮಾವೇಶಕ್ಕೆಂದು ಬಂದು ತನ್ನ ಅಳಿಯ, ಮಗಳನ್ನು ನೋಡಿ ಕೊಂಡು ಬಸ್ ಊರು ಕಡೆ ಹೊರಡುವ ಟೈಮಿಗೆ ಹಾಜರಾಗಿ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನು ಮುಗಿಸಿ ಜೈ ಕಾರ ಹಾಕಿ ಹೊರಡುವ ನಮ್ಮ ಜನಪದರ ಬುದ್ಧಿವಂತಿಕೆ, ಸಂದರ್ಭವನ್ನು ಸದುಪಯೋಗ ಮಾಡಿಕೊಳ್ಳುವ ಕೌಶಲ್ಯ ಅಸಾಧಾರಣವಾದುದು. ನಮ್ಮೂರಿನ ಬೋರಮ್ಮ ಹಲವು ವರ್ಷಗಳಿಂದ ಯಾವುದೇ ರಾಜಕೀಯ ಸಮಾವೇಶಗಳಿಗೆ ತಪ್ಪದೇ ಹೋಗುತ್ತಾಳೆ. ಯಾವ ಪಕ್ಷವಾದರೂ ಭೇದ ಇಲ್ಲ. ಸಮಾನವಾಗಿ ನೋಡುತ್ತಾಳೆ. ಪಟ್ಟಣದಲ್ಲಿ ಸಮಾವೇಶ ನಡೆಯುವ ಕಾರಣ ಅಲ್ಲಿಗೆ ಹೋದಾಗೆಲ್ಲ ಅಬ್ದುಲ್ಲಾನ ಹತ್ತಿರ ಹೋಗಿ ತನ್ನ ಅರಳೇ ಕಾಯಿ ಮಾರಿ ದುಡ್ಡು ಪಡೆದು ಬರುವ ಕರಾಮತ್ತು ಮಾತ್ರ ಹಳೆಯದು ಎಂಬುದನ್ನು ಆ ಊರಿನ ಚಿಕ್ಕ ಮಕ್ಕಳಾದಿಯಾಗಿ ಎಲ್ಲರಿಗೂ ತಿಳಿದಿರುವ ಸತ್ಯ. ಹಾಗಾಗಿ ಬೋರಮ್ಮ ಹೊರಟಳು ಎಂದರೆ ಊರಿನ ಇನ್ನಿಬ್ಬರು ಅರಳೆ ಕಾಯಿ ತುಂಬಿದ ಚೀಲಕೊಟ್ಟು ‘ನಮ್ಮದೂ ಮಾರಿ ಬಾ’ ಬರುವಾಗ ‘ಬರೀ ಕೈಲಿ ಮಾತ್ರ ಬರಬೇಡ’ ಎಂದು ಹೇಳುವುದನ್ನು ಮರೆಯುವುದಿಲ್ಲ.
ಹೀಗೆ ಬಂದವರು ನಾಯಕ ಮಣಿಗಳಿಗೆ ನಾವೂ ಬುದ್ಧಿವಂತರು ಎಂದು ತೋರಿಸುತ್ತಾರೆ.ಮತದಾರ ಪ್ರಭುಗಳು ಒಂದೊಂದು ಸಾರಿ ಹೀಗೆ ಮಾಡುತ್ತಾರೆಂದು ಭಾವಿಸಬೇಕಿಲ್ಲ. ಎಲ್ಲಾ ಕಾಲದಲ್ಲಿಯೂ ಒಂದು ಕೆಲಸದಿಂದ ಇನ್ನೊಂದು ಕೆಲಸವನ್ನು ಸುಲಭವಾಗಿ ಮಾಡುವ ಬುದ್ಧಿವಂತಿಕೆ ಹಳ್ಳಿ ಮುಗ್ಧ್ದ ಜನರಲ್ಲಿ ಈಗಲೂ ಇದೆ. ಕೊನೆಗೆ ಹೋಗಿ ಗುಂಪಿನಲ್ಲಿ ಗೋವಿಂದ ಎಂದರೆ ಮುಗಿಯಿತು.
ಅಧಿಕಾರವೇ ಹಾಗೆ, ಗದ್ದುಗೆಯ ರುಚಿ ಹತ್ತಿಸಿಕೊಂಡ ರಾಜ ಪ್ರಭುಗಳು ಸದಾ ಅಧಿಕಾರದಲ್ಲಿ ಇರುವುದನ್ನೇ ಬಯಸುತ್ತಾರೆ. ಮತದಾರ ಪ್ರಭುಗಳಿಲ್ಲದೆ ಪ್ರಜಾಪ್ರಭುತ್ವ ಸೌಂದರ್ಯಕ್ಕೆ ಅರ್ಥವಿರುವುದಿಲ್ಲ. ಅದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭಾಚುನಾವಣೆವರೆಗೂ ಗ್ರಾಮೀಣಜನರು ಮಾತ್ರ ಭಾಗಿಯಾಗುತ್ತಲೇ ಇರುತ್ತಾರೆ.ನಗರದ ನಾವೀನ್ಯತೆಯ ಸೋಗಿಗರು ಮಾತ್ರ ಆರಾಮದಾಯಕವಾಗಿಯೇ ಇದ್ದು ಇನ್ನೆಲ್ಲೋ ಮೋಜು, ಮಸ್ತಿಯಕಡೆ ಓಡುತ್ತಾರೆ.ನೂರು ಕಷ್ಟಗಳಿದ್ದರೂ ಮತಹಾಕಲು ನಿಷ್ಠೆ ತೋರುವ ಜನರು ಸಂಯಮಿಗಳು ಅಷ್ಟೇ ಅಲ್ಲ, ಚುನಾವಣೆ ಸಮಯದಲ್ಲಿ ನಾಯಕರ ಮೇಲೆ ತೋರುವ ಕರುಣಾಮಯಿಗಳು.
ಮಾಧ್ಯಮದವರು ಮಾತ್ರ ಚುನಾವಣಾ ಕುಲುಮೆಯ ಕಾವನ್ನು ಏರಿಸುವಂತೆ ಟೀ ಹೋಟೆಲ್‌ನಲ್ಲಿಯೂ ಅದೇ ಚರ್ಚೆ, ಮಿಲಿಟರಿ ಹೋಟೆಲ್‌ನಲ್ಲಿ ಅದೇ ಚುನಾವಣಾ ಚರ್ಚೆಗೆ ಗಮ್ಮತ್ತಿರುತ್ತದೆ. ಚುನಾವಣೆಗಳು ಬಹುಜನರು ಕೂಡಿ ನಡೆಸುವ ಇಂದು ಪ್ರಜಾಪ್ರಭುತ್ವದ ಸೌಂದರ್ಯ. ಈ ಸೌಂದರ್ಯದ ಚರ್ಯೆಯಲ್ಲಿ ಅದೆಷ್ಟು ಹೊಸ ತನಗಳು ಕಣ್ಣಿಗೆ ಕಾಣುತ್ತವೆ ಎಂದರೆ ಕೆಲವು ರೋಚಕವಾಗಿರುತ್ತವೆ. ಅದೇಕೋ ಕೆಲ ಅಭ್ಯರ್ಥಿಗಳು ಭಾರೀ ಜನಸ್ತೋಮ ನೋಡಿ ಅಳುವುದುಂಟು. ಅಳುವುದು ಈಗೀಗ ಕಡ್ಡಾಯವಾಗಿ ಬಿಟ್ಟಿದೆ. ತುಂಬಿದ ಜನರನ್ನು ನೋಡಿ ಮಂಕು ಬಡಿದು, ಭಾವುಕರಾಗಿ ಗೋಳೋ ಎಂದು ಅತ್ತು ದೊಡ್ಡ ಟವೆಲ್‌ನಲ್ಲಿ ಮುಖ, ಮುಸುಡಿಯನ್ನೆಲ್ಲ ಒರೆಸಿಕೊಳ್ಳುವ ಪರಿ ನೋಡಬೇಕು. ಅದು ನಿಜವಾ? ಗೊತ್ತಿಲ್ಲ ಬಲ್ಲವರು ಹೇಳಬೇಕು.ಹಾಗೆ ಅತ್ತಾಗೆಲ್ಲ ಹಿಂದಿನಿಂದ ಯಾರಾದರೊಬ್ಬರು ಕೇಕೆ ಹಾಕಿ ಸಂಭ್ರಮಿಸುವುದು ಮಾಮೂಲಿಯಾಗಿ ಬಿಟ್ಟಿದೆ.
ಉದ್ದುದ್ದ ಸ್ವಾಗತ ಬಿಗಿಯುವ ರಾಜಕಾರಣಿಗಳಿಗೆ ಕೇಳುಗ ದೊರೆಯೊಬ್ಬ ಹಿಂದಿನಿಂದ ‘ಸಾಕು ನಿಲ್ಲಿಸಪ್ಪೋ’ ಎಂದು ಕೀರಲು ಧ್ವನಿಯಲ್ಲಿ ಕೂಗಿದ ಮೇಲೆ ಅವನಿಗೆ ಎಚ್ಚರವಾಗುವುದು. ಎಲ್ಲರೂ ಪ್ರಧಾನ ಭಾಷಣ ಮಾಡುವವರರನ್ನು ಕಾತುರದಿಂದ ಕಾಯುತ್ತಿರುತ್ತಾರೆ. ನಮ್ಮ ಊರಿಂದ ಕೆಲವು ಗುಂಪುಗಳು ಹಲವು ವರ್ಷಗಳಿಂದ ರಾಜಕೀಯ ಸಮಾವೇಶಗಳಿಗೆ ಕರೆದಾಗೆಲ್ಲ ಹೋಗುತ್ತಾರೆ. ಅವರಿಗೆ ರಾಜಕೀಯ ಪಕ್ಷಗಳಲ್ಲಿ ಭೇದಗಳು ಇಲ್ಲ. ಕೂಲಿ ಕೊಟ್ಟರೆ ಕೆಲಸ ಮಾಡಲು ಎಲ್ಲಾದರೇನು ಎಂಬುದು ಅವರ ವಾದ. ಹೇಳಿಕೊಟ್ಟದ್ದನ್ನು ಚೆನ್ನಾಗಿ ಪಾಲಿಸುವ, ಕೊಟ್ಟಷ್ಟು ದುಡ್ಡು ತೆಗೆದುಕೊಂಡು ಮಾನವಾಗಿ ಬದುಕುತ್ತಿದ್ದೇವೆ ಎಂದು ಘೋಷಿಸಿಕೊಳ್ಳುತ್ತಾರೆ. ಚುನಾವಣಾ ನೋಟಿಫಿಕೇಶನ್ ಬಂದ ಮೇಲಂತೂ ಊರಿನಲ್ಲಿ ಪಡ್ಡೆ ಹುಡುಗರು ಪ್ರಚಾರದಲ್ಲಿ ತೊಡಗಲು ಪಟ್ಟಣಕ್ಕೆ ಜಾಗ ಖಾಲಿ ಮಾಡುತ್ತಾರೆ.ಮೂರು ಹೊತ್ತು ಊಟ, ಬೀಡಿ ಬೆಂಕಿ ಪಟ್ಟಣ ಕೊಟ್ಟರೆ ಎಲ್ಲಿಗಾದರೂ ಬರುವೆ ಎಂದು ಹೇಳುವ ಹರೆಯದ ಹುಡುಗರು ಓಡಾಡದ ಜಾಗವಿಲ್ಲ ಮಾಡದ ಕಸುಬಿಲ್ಲ. ಇಂತಹವರು ಎಲ್ಲಾ ಕಡೆ ಸಲ್ಲುತ್ತಾರೆ.ಹೋದ ಗಂಡನ ಬಗ್ಗೆ ಹಿಡಿ ಶಾಪಹಾಕುತ್ತಾ ಬಾಗಿಲು ಕಾಯುವ ಅವನ ಹೆಂಡತಿ ಗಂಡ ಕಬಾಬ್, ಗೋಬಿ ಮಂಚೂರಿ ಹಿಡಿದುಕೊಂಡು ಮನೆಗೆ ಬಂದಾಗ ಇದ್ದ ಕೋಪವೆಲ್ಲ ಜರ್ ಅಂತ ಜಾರಿಹೋಗುತ್ತದೆ. ಒಟ್ಟಿನಲ್ಲಿ ತುಂಡು ಕೆಲಸಗಳಿಗೆ ತುಂಡುಡುಗರು ಆಯಾಯ ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಂಡು ಬಂಡಿ ನೂಕುವ ಕಾಲವಿದು.
ತಾಲೂಕು, ಹೋಬಳಿ,ಊರು ಕೇರಿಗಳಲ್ಲಿ ನಿಲ್ಲಿಸುವ ಫ್ಲೆಕ್ಸ್ ಬ್ಯಾನರ್‌ಗಳನ್ನು ಬಿಚ್ಚಲ್ಲು ರಾತ್ರಿಯಾಗುವುದನ್ನೇ ಕಾಯುವ ಕೆಲವರು ಅವುಗಳನ್ನು ಬಹು ಬಳಕೆಯಾಗಿ ಬಳಸುವ ಜಾಣ್ಮೆ ಮಾತ್ರ ಹಿರಿದು. ಹುಲ್ಲು ಮೆದೆಗಳನ್ನು ಮುಚ್ಚಲು, ತರಕಾರಿ ಮಾರಲು ತಾತ್ಕಾಲಿಕವಾಗಿ ನೆರಳು ಮಾಡಲು, ಗುಡ್ಡೆ ಬಾಡು ಪಾಲು ಹಾಕಲು, ಚಳಿಗಾಲದಲ್ಲಿ ಹೊದ್ದು, ಹಾಸು ಮಲಗಲು, ಇಸ್ಪೀಟ್ ಆಡಲು ಬಳಕೆಯಾಗುತ್ತಿರುವುದರಿಂದ ಅವುಗಳ ಮೇಲೆ ಕಣ್ಣು ನೆಟ್ಟಾಗಿನಿಂದಲೂ ಕಳಚುವವರೆಗೂ ಇದ್ದೇ ಇರುತ್ತದೆ.
ಉತ್ತರ ಕರ್ನಾಟಕದ ಕೆಲವು ಕಡೆ ಮೆಣಸಿನ ಕಾಯಿ ಒಣಗಿಸಲು ಈ ಬ್ಯಾನರ್‌ಗಳನ್ನು ಹಾಸಿರುವುದನ್ನು ನೋಡಿದ್ದೇನೆ. ವಾರಕ್ಕೊಮ್ಮೆ ಮೇಕೆ ಕಟ್ ಮಾಡುವ ಮರಿಯಪ್ಪ ಹೇಗೋ ಪೇಟೆ ಕಡೆ ಹೋದಾಗೆಲ್ಲ ಇಂತಹ ಬ್ಯಾನರ್ ತಂದು ಸ್ಟಾಕ್ ಮಾಡಿಟ್ಟು ಕೊಂಡು ಸುಲಭವಾಗಿ ಚರ್ಮ ಸುಲಿದು ಹಾಸಿದ ಬ್ಯಾನರ್ ಮೇಲೆ ಬಾಡನ್ನು ಗುಡ್ಡೆ ಹಾಕಿ ಆ ದಿನದ ವ್ಯಾಪಾರದಲ್ಲಿ ತಲ್ಲೀನನಾಗುತ್ತಾನೆ. ಒಮ್ಮೆ ಸಮುದ್ರದ ದಂಡೆಯಲ್ಲಿ ಕುಳಿತ ತಾಯಂದಿರು ಹಾಸಿದ ಬ್ಯಾನರ್ ಮೇಲೆ ಮೀನುಗಳು ಬಿಳುಚಿಕೊಂಡು ಬಿದ್ದಿದ್ದವು. ಆದರೂ ಅದರ ಒಳಗೆ ಇದ್ದ ರಾಜಕೀಯ ಮುಖಂಡರ ಕತ್ತಿನ ವರೆಗಿನ ಫೋಟೊ ಕಾಣುತ್ತಿತ್ತು. ಆಕೆ ‘ಸಸ್ತಾ ಸಸ್ತಾ ಬನ್ನಿ ಅಣ್ಣ ’ ಎಂದು ಕೂಗುತ್ತಿದ್ದುದನ್ನು ಕಂಡಿರುವೆ.
ಚುನಾವಣೆ ಬಂತೆಂದರೆ ಪುಕ್ಕಟೆಯಾಗಿ ವಿತರಿಸುವ ಸಾಮಾನು ಸರಂಜಿಗಳು ಅಷ್ಟೇ ಅಲ್ಲ ಉಚಿತ ಸಾಮೂಹಿಕ ವಿವಾಹ ಮಾಡಿಸಿ ಗಂಡ ಹೆಂಡತಿ ಮಾಡಿಸಿದ ಭಾಗ್ಯವಂತರನ್ನು ದಂಪತಿಗಳು ಮರೆಯುತ್ತಾರೆಯೇ? ಬಾಡೂಟ, ಬಿರಿಯಾನಿ, ಕುಕ್ಕರ್, ಸೀರೆ, ಬಳೆ, ರವಿಕೆ ಕಣ, ವಾಚು, ಮೊಬೈಲ್, ಅಬ್ಬಾ ಕೋಳಿ ಕೊಟ್ಟು ಮತದಾರರನ್ನು ಬೆರಗು ಗೊಳಿಸುವ ನಾಯಕ ಮಣಿಗಳು ಅದೆಷ್ಟು ಬುದ್ಧಿವಂತರು.ಕೆಲವು ಮತದಾರರು ಬಂದಷ್ಟೇ ಭಾಗ್ಯ ಎಂದು ತಿಳಿದು ಕೊಡುವವರನ್ನು ಬ್ಯಾಡ ಎನ್ನದೇ ಸ್ವೀಕಾರ ಮಾಡುವ ದೊಡ್ಡ ಗುಣವಂತರಲ್ಲವೇ!ನಮ್ಮ ಬಯಲು ಸೀಮೆಯ ಕಡೆಯ ನಾಯಕರೊಬ್ಬರು ಚುನಾವಣೆಯ ಮುನ್ನಾ ದಿನವೇ ಹೆಣ್ಣು ಮಕ್ಕಳಿಗೆ ಮೂಗುಬೊಟ್ಟು, ಕೈಗೆ ಉಂಗುರ ಕೊಟ್ಟು ಕ್ಷೇತ್ರದ ಜನರೆಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದುಬಿಟ್ಟ ಘಟನೆ ಹಳೆಯದು.ಊರಿಗೆ ಒಂದು ದೇವಾಲಯಕ್ಕೆ ಬೇಕಾದ ಜೀರ್ಣೋದ್ಧಾರದ ಖರ್ಚು ಕೊಟ್ಟು ದೇವರನ್ನೇ ಗುತ್ತಿಗೆ ತೆಗೆದುಕೊಳ್ಳುವ ನಮ್ಮ ನಾಯಕರು ದೇವರನ್ನು ಬಿಡದೇ ತನ್ನ ಸಂಗಡಕ್ಕೆ ಆಹ್ವಾನಿಸುತ್ತಾರೆ. ಈಗ ಗುತ್ತಿಗೆದಾರರದ್ದೇ ಸದ್ದು, ನಮ್ಮನ್ನು ದುಡ್ಡಿಗಾಗಿ ಪೀಡಿಸುತ್ತಾರೆ ಅಲ್ಲಲ್ಲ! ಪೀಕುತ್ತಾರೆ ಎಂಬುದೇ ನಿತ್ಯದ ವಚನ. ಆಳುವ ಪ್ರಭುಗಳು ಮೀಸೆ ಮಣ್ಣಾಗಿ ಜಟ್ಟಿ ಕೆಳಗೆ ಬಿದ್ದರೂ ಆಧಾರ ಕೇಳುತ್ತಾ ಆಸರೆಯಾಗಬೇಕಾದವರೆ ಹಾರಾಡುವ ಹಕ್ಕಿಯೊಳಗೆ ಕೂತು ಹುಡುಗಾಟಿಕೆ ಆಡುವುದು ಮಾತ್ರ ಮಕ್ಕಳಾಟವಾ?
ಚುನಾವಣಾ ಹುರಿಯಾಳುಗಳ ಮನೆಗಳೋ, ಭೂತ ಬಂಗಲೆಯಂತೆ ಏಕರೆಗಟ್ಟಲೆಯಲ್ಲಿ ಚಾಚಿಕೊಂಡಿರುತ್ತವೆ. ಐಟಿ, ಈ.ಡಿ.ಗೆ ಸಿಕ್ಕಿ ಜೈಲಲ್ಲಿ ನರಳುವಾಗ ಕಟ್ಟಿದ ಮನೆಗಳು ನೆನಪಾಗಿ ಕಾಡುತ್ತವೆ. ಹಣದ ಕಪಾಟು, ಬೇನಾಮಿ ಆಸ್ತಿ, ಸುಳ್ಳುಲೆಕ್ಕ, ಅಕ್ರಮವನ್ನೇ ಮನೆ ದೇವರಂತೆ ನಂಬುವ ಕೆಲವರು ಚುನಾವಣೆಯಲ್ಲಿ ಮಾಡಿದ ಖರ್ಚನ್ನು ವಸೂಲಿ ಮಾಡದೇ ಬಿಡಲಾರರು. ಮಂತ್ರಿಯಾದರಂತೂ ಅದರ ಕತೆಯೇ ಬೇರೆ? ಒಂದು ತಲೆ ಮಾರಿಗೆ ಆಗುವಷ್ಟು ಹಣವನ್ನು ಮಾಡುವ ನಮ್ಮ ನಾಯಕರು ಪ್ರಜಾಪ್ರಭುತ್ವದ ಬಗ್ಗೆ, ಸತ್ಯದ ಬಗ್ಗೆ ಭಾಷಣವನ್ನು ಬಿಗಿಯಾಗಿಯೇ ಮಾಡುತ್ತಾರೆ. ಸೇವೆ, ಸೇವಕ ಎನ್ನುವುದು ನಾಟಕವಾಗಿದೆ. ಹಣ ಮಾಡಿ, ಹಣ ಖರ್ಚುಮಾಡಿ ಗೆಲ್ಲುವುದೇ ಚುನಾವಣಾ ರಾಜಕಾರಣವಾಗಿ ಬಿಟ್ಟಿದೆ. ಯಾವುದೇ ಪಕ್ಷಗಳು ನೈತಿಕತೆಯನ್ನು ಉಳಿಸಿಕೊಂಡಿಲ್ಲ.
ಎಲ್ಲಾ ಕಾಲದಲ್ಲಿಯೂ ನಾಯಕರ ಘೋಷಣೆಗಳ ಭೋರ್ಗರೆತ ನಿಲ್ಲುವುದಿಲ್ಲ. ಜನರತ್ತ ಕೈ ಬೀಸಿ ಮರುಳು ಮಾಡುವುದನ್ನು ಮರೆಯುವುದಿಲ್ಲ. ‘ಯಾರು ಏನು ಬರೆದು ಕೊಳ್ಳಲಿ ನಾನು ಮಾತ್ರ ಅಂಜುವುದಿಲ್ಲ’ ‘ಅಂಜದ ಗಂಡುಗಳು ಹುಂಜದ ತುಂಡುಗಳು’ ಎನ್ನುವಂತೆ ಲಜ್ಜೆಗೇಡಿ ನಾಯಕರಿಗೆ ಭಯವಿಲ್ಲ. ಬಡವರ ಮಕ್ಕಳ ಬಡತನವ ಬಂಡವಾಳ ಮಾಡಿಕೊಂಡು ‘ಹಾಸುಂಡ ಎಲೆಯನ್ನು ಬೀಸಿ ಒಗೆವಂತೆ’ ಜನರನ್ನು ಬಿಸಾಡುತ್ತಾರೆ ಎಂಬುದು ಮಾತ್ರ ನಿಜ. ಚುನಾವಣೆ ಎಷ್ಟೊಂದು ವೈವಿಧ್ಯ! ಚುನಾವಣೆ ಬಂತೆಂದರೆ ಕರ್ತವ್ಯ ನಿರತ ಅಧಿಕಾರಿಗಳಿಗೆ ನಿದ್ದೆ ಹತ್ತುವುದಿಲ್ಲ. ಯಾಕಾದರೂ ಈ ಚುನಾವಣೆ ಬರುತ್ತವೋ ಎಂದು ಶಪಿಸುತ್ತಲೇ ಕರ್ತವ್ಯಕ್ಕೆ ಹಾಜರಾಗುವ ಅವರು ಪಾಠ ಹೇಳಿಕೊಡುವ ಶಿಕ್ಷಕರ ಶಿಕ್ಷೆಯಂತೆ ಸ್ವೀಕಾರ ಮಾಡುತ್ತಾರೆ. ವಾರಗಟ್ಟಲೆ ಟ್ರೈನಿಂಗ್ ಮುಗಿಸಿ ಚುನಾವಣೆ ಎಂಬ ಮಾರಿ ಹಬ್ಬದ ದಿನ ಬಂದೇ ಬಿಡುತ್ತದೆ. ಬೇರೊಂದು ಊರಲ್ಲಿ ಹೋಗಿ ದಿನ ತುಂಬಿಸುವುದು ನೆನೆಸಿಕೊಂಡರೆ ಸೀತೆ ಕಾಡಿಗೆ ಹೋದಾಗಿನ ನೆನಪು ಒತ್ತರಿಸಿಕೊಂಡು ಬರುತ್ತದೆಂದು ನನ್ನ ಬಾಲ್ಯದ ಶಾಲೆಯ ಮೇಡಂ ಒಬ್ಬರು ಹೇಳುತ್ತಿದ್ದುದು ನೆನಪು. ಚುನಾವಣೆ ಕರ್ತವ್ಯಕ್ಕೆ ಹೋಗಿ ಕರ್ತವ್ಯ ಮುಗಿಸಿ ಸಂಬಂಧ ಪಟ್ಟವರಿಗೆ ಪರಿಕರಗಳನ್ನು ಒಪ್ಪಿಸಿ ಉಳಿದದ್ದನ್ನು ವಾಪಸು ಕೊಡದೇ ತನ್ನ ಬ್ಯಾಗಿನಲ್ಲಿ(ಪೆನ್ನು, ಪೆನ್ಸಿಲ್, ಸ್ಕೇಲ್, ರಬ್ಬರ್, ಇಂಕ್ ಪ್ಯಾಡ್, ಪೇಪರ್, stuplour) ಇಟ್ಟು ತನ್ನ ಮಕ್ಕಳಿಗೆ ಕಾಣಿಕೆಯಂತೆ ತಂದು ಕೊಡುವ ಮೇಸ್ಟ್ರುಗಳು ಸರಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ. ಕೆಲವರು ಮಹಾ ಸುಳ್ಳನ್ನೇ ಹೇಳಿ ನಂಬಿಸಿ ತಪ್ಪಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುವ ಪರಿ ಬೆರಗು ಹುಟ್ಟಿಸುತ್ತದೆ. ನನಗೆ ಯಾವುದೋ ಮಹಾ ಕಾಯಿಲೆ ಎಂದೋ, ಕಾಲು ಉಳುಕಿದೆ ಎಂದೋ, ಮಡದಿಗೆ ಹುಷಾರಿಲ್ಲವೆಂದೋ, ವಿಪರೀತ ಮಕ್ಕಳು ನಮಗೆ ಸಂಭಾಳಿಸಲು ನಾನು ಮನೆಯಲ್ಲಿ ಇರಲೇ ಬೇಕು ಎಂತಲೋ ಏನೇನೋ ಸಬೂಬು ಹೇಳಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಮಹಾ ಸಾಹಸ ಮಾಡುತ್ತಾರೆ. ಇನ್ನು ಕೆಲವರು ಪರಿಚಯ ಆಧಾರದ ಮೇಲೆ ಕರ್ತವ್ಯ ರದ್ದು ಮಾಡಿಸಿಕೊಂಡು ಆರಾಮವಾಗಿರುತ್ತಾರೆ. ಅಬ್ಬಾ ಈ ಅಧಿಕಾರಿಶಾಹಿಯ ವರ್ತನೆಗಳನ್ನು ನೋಡಬೇಕು! ಸರಕಾರಿ ಕೆಲಸ ಸಿಗುವ ಮುನ್ನ ಒಂದು ಕತೆಯಾದರೆ, ಸಿಕ್ಕ ಮೇಲೆ ಎಲ್ಲವೂ ಲೆಕ್ಕಾಚಾರ! ಗೆದ್ದವರ ಮೇಲಾಟ, ಚೀರಾಟ, ಕಳೆದುಕೊಂಡ ಹಣ, ಸಂಗ್ರಹಿಸಿದ ನೋಟು, ಸೋತವರು ಸೊರಗಿ ಮತ್ತೆ ಮುಂದಿನ ಚುನಾವಣೆಗೆ ಸಜ್ಜುಗೊಳ್ಳುವ ಪರಿ ಮಾತ್ರ ಬೆರಗು ಹುಟ್ಟಿಸುತ್ತದೆ. ತೆವಲು ಕಡಿಮೆಯಾಗುವುದಿಲ್ಲ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಜಂಪಿಂಗ್ ಸ್ಟಾರ್ ಆಗುವುದು ಉಂಟು. ಬಹುತೇಕರಿಗೆ ತತ್ವ, ಸಿದ್ಧಾಂತ, ಬದ್ಧತೆ ಯಾವುದೂ ಇಲ್ಲ. ಅರೆ ತಿಳುವಳಿಕೆ ಹಣದ ವಹಿವಾಟಿನಲ್ಲಿ ಪೂರಾ ತಿಳುವಳಿಕೆ. ಇಂತಹವರು ಎಲ್ಲೂ ಸಲ್ಲದಿದ್ದಾಗ ರಾಜಕಾರಣ ಇವರಿಗೆ ಹೊಂದುತ್ತದೆ.
ವಯಸ್ಸು ಮೀರುತ್ತಿದ್ದರೂ ‘ರಂಗ ಬಿಡದ ಚಿರ ಯುವಕ’ರಂತೆ ಬೀಳುವ ವಯಸ್ಸಲ್ಲಿ ನಡೆದಾಡುವ ನಾಯಕ ಮಣಿಗಳು ಸದಾ ರಾಜಕೀಯವನ್ನೇ ಚಿಂತಿಸುತ್ತಾರೆ.
ಗೆದ್ದವನು ಗೆದ್ದ ಸೋತವನು ಸೋತ, ಅಲ್ಲಿಗೆ ಮುಗಿಯುವುದಿಲ್ಲ. ದಿನದ ಬಂಡಿ ಓಡುವುದಿಲ್ಲ ದಿನಗಳು ಕಳೆಯುತ್ತಿವೆ ವರುಷಗಳು ಉರುಳುತ್ತಿವೆ. ಹೊಸಮುಖಗಳು ಹಳೆ ಮುಖ ಕೂಡಿ ಮತ್ತೆ ಐದು ವರ್ಷ ಉರುಳುತ್ತದೆ. ಪ್ರಜೆಗಳು ಪ್ರಭುಗಳನ್ನು ನೋಡಿ ನಿಬ್ಬೆರಗಾಗುತ್ತಲೇ ಇರುತ್ತಾರೆ! ಯಾರೇ ಬಂದರೂ ರಾಗಿ ಬೀಸುವುದು ತಪ್ಪಿದ್ದಲ್ಲ ಎಂಬ ಹಳೆ ಗಾದೆ ಮಾತು ಎಲ್ಲವನ್ನೂ ಎಚ್ಚರಿಸುತ್ತದೆ. ಜಾತಿ, ಧರ್ಮ, ಒಳ ಜಾತಿ, ಮೀಸಲು ನಿರಂತರ ನಡೆಯುತ್ತದೆ. ಹಣ ಮಾಡುವವನು ನಿರತನಾಗುತ್ತಾನೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಪ್ರಾಮಾಣಿಕತೆ ಎನ್ನುವುದು ಬಾಯಲ್ಲಿ ಮಾತ್ರ ಉಳಿದಿದೆ. ಹಣ ಹಂಚದೆ ಗೆಲ್ಲುವುದು ಸಾಧ್ಯವಾ? ನಾವು ಪಾಲುದಾರರು ಅಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಭ್ರಷ್ಟವಾದರೆ ಕಾಯುವವರು ಯಾರು? ಬೇಲಿಯೇ ಎದ್ದು ಹೊಲವನ್ನು ಮೇಯುವುದಾದರೆ ಇನ್ನೆಲ್ಲಿಯ ರಕ್ಷಣೆ? ಚುನಾವಣಾ ಸುಗ್ಗಿಯ ಪರ್ವಕಾಲದಲ್ಲಿ ಹಣವು ಹೆಣವು ಸುದ್ದಿಯಾಗುತ್ತಲೇ ಇರುತ್ತದೆ. ಕರ್ತವ್ಯ ಸಾಕಾಗಿದೆ. ಹಲ್ಲಿಲ್ಲದ ಆಯೋಗಗಳು ಎಲ್ಲಿ ಅಂತ ನೋಡುತ್ತಾರೆ. ವ್ಯವಸ್ಥೆ ಬುಡ ಮೇಲಾಗಿದೆ. ಗಾಂಧಿ, ಅಂಬೇಡ್ಕರ್, ಬಸವಣ್ಣರನ್ನು ಎಲ್ಲಾ ಪಕ್ಷದ ನಾಯಕರು ಗುಣಗಾನ ಮಾಡುತ್ತಾರೆ.ಆದರೆ ಆಚರಣೆಯಲ್ಲಿ ಇಲ್ಲ. ದುರಂತ ಅಲ್ಲವೇ? ಕೋಮುವಾದ ನಿಲ್ಲುತ್ತಿಲ್ಲ. ಭ್ರಷ್ಟಾಚಾರಕ್ಕೆ ಕೊನೆಯಿಲ್ಲ. ಆಳುವ ಅಧಿಕಾರಸ್ಥರು ಸಮಯಕ್ಕೆ ತಕ್ಕ ಹೊಸ ಹುನ್ನಾರವನ್ನು ಬಿತ್ತುತ್ತಾ ನಕಲಿ ಆಟಗಳನ್ನು ಆಡುತ್ತಲೇ ಮುಂದೆ ಬಂದಿದ್ದಾರೆ.ಪಕ್ಷ ಬಿಡುವುದು, ಸೇರುವುದು ಸಾಮಾನ್ಯವಾಗಿ ಬಿಟ್ಟಿದೆ. ನೈತಿಕತೆ ಪಾತಾಳಕ್ಕೆ ಇಳಿದಿದೆ. ಭಾರತದ ರಾಜಕಾರಣ ಭ್ರಷ್ಟಾಚಾರದಿಂದ ಕಂಗೊಳಿಸುತ್ತಿದೆ. ತೋಳ್ಬಲ, ಧನ ಬಲ, ಜಾತಿ ಬಲ ಮತ್ತಷ್ಟು ಪ್ರಬಲವಾಗುತ್ತಿರುವ ಹೊತ್ತಿನಲ್ಲಿ ರಾಜಕೀಯ ಮತ್ತು ರಾಜಕಾರಣವನ್ನು ಮತ್ತೊಮ್ಮೆ ಎಲ್ಲರೂ ಕೂಡಿ ಸರಿ ಪಡಿಸಬೇಕಿದೆ.