ಅಮೆರಿಕದಲ್ಲಿ ಪ್ರಪ್ರಥಮ ಜೈವಿಕ ದಾಳಿ ಮತ್ತು ರಜನೀಶ್ ಕಲ್ಟಿನ ಕೈವಾಡ

ಡೇಲ್ಸ್ ಅಮೆರಿಕದ ಒರೆಗಾನ್ ರಾಜ್ಯದ ವಾಸ್ಕೊ ಕೌಂಟಿಯ ವಾಯವ್ಯಕ್ಕಿರುವ ಒಂದು ಸ್ವಪ್ನ ಸದೃಶ ನಗರ. ಕೊಲಂಬಿಯಾ ನದಿಯ ದಂಡೆಯಲ್ಲಿರುವ ಡೇಲ್ಸ್ ಬಹುತೇಕ ಆ ರಾಜ್ಯದ ದೊಡ್ಡ ನಗರಗಳಲ್ಲಿ ಒಂದು. ಸುಮಾರು 11 ಸಾವಿರದಷ್ಟು ಜನಸಂಖ್ಯೆ ಹೊಂದಿದೆ. 2020ರಲ್ಲಿ ಸಹ ಇದರ ಜನಸಂಖ್ಯೆ ಹದಿನಾರು ಸಾವಿರ ಚಿಲ್ಲರೆ ಎಂದರೆ ಇಲ್ಲಿನ ಜನಸಂಖ್ಯೆಯ ವಿರಳತೆ ನಿಮಗೆ ಅರ್ಥವಾಗಬಹುದು. ಹಾಗಾಗಿ ನಮ್ಮ ದೇಶದ ಲೆಕ್ಕಾಚಾರದಲ್ಲಿ ಇದನ್ನು ಪಟ್ಟಣ ಎಂದರೂ ಸರಿ ಹೋಗುತ್ತದೆ.
ಹಲವು ರೀತಿಯ ಜಲಕ್ರೀಡೆಗಳು, ಪರ್ವತಾರೋಹಣ, ಕೊಳ, ಸರೋವರಗಳು ಹಾಗೂ ಒಳನಾಡು ಬಂದರನ್ನು ಹೊಂದಿರುವ ಇದು ಅಸಂಖ್ಯ ಹೊರಾಂಗಣ ಕ್ರೀಡೆ ಮತ್ತು ಮನರಂಜನಾ ತಾಣಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ಆಪ್ಯಾಯಮಾನ ಹವಾಗುಣ, ಅತ್ಯುತ್ತಮ ಶಾಲೆಗಳು, ಅಪರಾಧ ರಹಿತ ಸಾಮಾಜಿಕ ವಾತಾವರಣದ ಕಾರಣ ಅನೇಕ ಶಾಂತಿಪ್ರಿಯ ಜನರು ತಮ್ಮ ಕುಟುಂಬಗಳನ್ನು ಬೆಳೆಸಲು ಈ ನಗರವನ್ನು ಆಯ್ಕೆಮಾಡಿಕೊಳ್ಳುವುದುಂಟು.
ಡೇವಿಡ್ ಲುಟ್ಜೆನ್ಸ್ ಇಂಥವರರಲ್ಲಿ ಒಬ್ಬ. ಹೆಂಡತಿ ಸ್ಯಾಂಡಿ ಮತ್ತು ಮಕ್ಕಳೊಂದಿಗೆ ಬದುಕಲು ಈ ನಗರವನ್ನು ಆಯ್ಕೆ ಮಾಡಿಕೊಂಡಿದ್ದ. ಇವನೊಂದು ಹೋಟೆಲ್ ನಡೆಸುತ್ತಿದ್ದ. 25ನೇ ಸೆಪ್ಟಂಬರ್ 1984 ರಂದು ಡೇವಿಡ್ ಮತ್ತು ಸ್ಯಾಂಡಿಗೆ ನಿರಂತರ ವಾಂತಿ ಮತ್ತು ಭೇದಿ ಶುರುವಾಯಿತು. ದೇಹದಲ್ಲಿ ದ್ರವಾಂಶದ ತೀವ್ರ ಕೊರತೆಯಾಗಿ ನಿರ್ಜಲನ ಸ್ಥಿತಿ ಸೃಷ್ಟಿಯಾಯಿತು. ಹಾಗೆಯೇ ಇದರ ಮುಂದುವರಿಕೆಯಾಗಿ ಒಂದು ರೀತಿಯ ಸನ್ನಿ ಮುಚ್ಚಿಕೊಂಡಿತು. ಅದು ಜೀವಕ್ಕೆ ಅಪಾಯ ತರುವ ಸ್ಥಿತಿಯಾದ್ದರಿಂದ ಅವರು ಸ್ಥಳೀಯ ಅಸ್ಪತ್ರೆಗೆ ದಾಖಲಾಗಲು ಹೋದರು.
ಆದರೆ, ಆ ಆಸ್ಪತ್ರೆಯಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವ ಇವರು ಒಬ್ಬಂಟಿಗರಾಗಿರಲಿಲ್ಲ. ಈಗಾಗಲೇ ಇದೇ ಸಮಸ್ಯೆಯಿಂದ ಬಳಲುವ ನೂರಾರು ಜನರಿಂದ ಆಸ್ಪತ್ರೆ ಗಿಜಿಗುಡುತ್ತಿತ್ತು. ವಾರ್ಡುಗಳೆಲ್ಲ ಭರ್ತಿಯಾಗಿ ರೋಗಿಗಳನ್ನು ವರಾಂಡ, ರಿಸೆಪ್ಷನ್ ಅಷ್ಟೇಕೆ ಆಸ್ಪತ್ರೆಯ ಕಾಂಪೌಂಡಿನ ಒಳಗೆ ಸಹ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಈ ಸಾಂಕ್ರಾಮಿಕದ ಮೂಲ ಹುಡುಕಲು ಹೋದ ಸೂಕ್ಷ್ಮಜೀವ ವಿಜ್ಞಾನಿಗಳಿಗೆ ಕಂಡಿದ್ದು ಸಾಲ್ಮೊನೆಲಾ ಎಂಬ ಬ್ಯಾಕ್ಟೀರಿಯಾ. ಇವುಗಳು ಮೊಟ್ಟೆ, ಮಾಂಸ, ಕೋಳಿಯ ಉತ್ಪನ್ನಗಳು, ಪಾಶ್ಚೀಕರಿಸಿದ ಹಾಲು, ನೀರು ಮತ್ತು ಪ್ರಾಣಿಗಳ ಸೆಗಣಿಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಬಹಳ ಮುಖ್ಯವಾಗಿ ಸರೀಸೃಪಗಳು ಇದರ ಮೂಲಗಳಾಗಿರುತ್ತವೆ. ಇವು ಮಕ್ಕಳು ಮತ್ತು ವೃದ್ಧ್ದರ ಜೀವಕ್ಕೆ ಅಪಾಯಕಾರಿ. ಆದರೆ ಉಳಿದವರಿಗೆ ಜೀವಾಪಾಯ ತರುವುದು ಅಪರೂಪ.
ಡೇವಿಡ್ ಮತ್ತು ಅವನ ಹೆಂಡತಿ ಮೂರ್ನಾಲ್ಕು ದಿನಗಳಲ್ಲಿ ಇದರಿಂದ ಚೇತರಿಸಿಕೊಂಡರು. ಅವರ ಹೋಟೆಲ್ ಮತ್ತೆ ಎಂದಿನಂತೆ ನಡೆಯಲಾರಂಭಿಸಿತು. ಆದರೆ ಇದಾದ ಹತ್ತು ದಿನಗಳ ನಂತರ ಇದ್ದಕ್ಕಿದ್ದಹಾಗೆ ಇದೇ ಸಾಂಕ್ರಾಮಿಕ ಇಡೀ ನಗರವನ್ನು ಅಪ್ಪಳಿಸಿತು. ಮೊದಲ ದಾಳಿಯಲ್ಲಿ ಎರಡು ಮೂರು ಅಂಕಿಗಳಲ್ಲಿದ್ದ ರೋಗಿಗಳ ಸಂಖ್ಯೆ ಮೂರು ನಾಲ್ಕಂಕಿಗಳನ್ನು ದಾಟಿಬಿಟ್ಟಿತು. ಎಲ್ಲೆಲ್ಲಿ ನೋಡಿದರೂ ಇದೇ ರೋಗಿಗಳು. ನಗರದ ಆಸ್ಪತ್ರೆಗಳು ಸಾಲದಾದವು. ಮೊದಲಿಗೆ ನಗರಾಡಳಿತ, ನಂತರ ಜಿಲ್ಲಾಡಳಿತ ಕೊನೆಗೆ ರಾಜ್ಯಾಡಳಿತಗಳು ಸಹ ಕಂಗಾಲಾದವು. ಸಮರೋಪಾದಿಯಲ್ಲಿ ನಿವಾರಣಾ ಕಾರ್ಯ ಆರಂಭವಾಯಿತು.
ಅತ್ತ, ನಿವಾರಣಾ ಕಾರ್ಯ ಅದರ ಪಾಡಿಗೆ ಅದು ನಡೆಯುತ್ತಿದ್ದರೆ ಇತ್ತ, ನಗರದಲ್ಲಿದ್ದ ಆಹಾರ ಆಧಾರಿತ ಎಲ್ಲಾ ವ್ಯವಹಾರಗಳೂ ಕುಸಿದು ಬಿದ್ದವು. ಇದರಲ್ಲಿ ಡೇವಿಡ್‌ನ ಹೋಟೆಲ್ ಸಹ ಸೇರಿತ್ತು. ಅವನ ನೂರಾರು ಮಂದಿ ಗ್ರಾಹಕರೊಂದಿಗೆ ಹೋಟೆಲ್‌ನಲ್ಲಿದ್ದ ಎಲ್ಲ 13 ಕಾರ್ಮಿಕರೂ ಈ ಸಾಂಕ್ರಾಮಿಕಕ್ಕೆ ತುತ್ತಾದರು. ನಗರದಲ್ಲಿದ್ದ ಇತರ ಹೋಟೆಲುಗಳ ಜೊತೆಯಲ್ಲಿ ಇದೂ ಮುಚ್ಚಿಕೊಂಡಿತು. ಜೊತೆಗೆ ಹುಡ್ ನದಿಯ ಬಳಿ ತೆರೆಯಬೇಕೆಂದಿದ್ದ ಇವನ ಇನ್ನೊಂದು ಹೋಟೆಲಿನ ಯೋಜನೆಯ ಭ್ರೂಣ ಸಹ ಆಕಾರ ತಳೆಯುವ ಮೊದಲೇ ಕೊನೆಯುಸಿರೆಳೆಯಿತು.
ಆದೆಲ್ಲಾ ಸರಿ! ಆದರೆ ಇಂಥದ್ದೊಂದು ಸಾಂಕ್ರಾಮಿಕ ರೋಗ ಹಠಾತ್ತಾಗಿ ಇಡೀ ನಗರವನ್ನು ಆಕ್ರಮಿಸಿದ್ದು ಹೇಗೆ? ಇದು ಅಲ್ಲಿನ ವಿವಿಧ ಹಂತದ ಆಡಳಿತಗಳ ಮುಂದಿದ್ದ ಪ್ರಶ್ನೆ. ಆದರೆ ಇದಕ್ಕೆ ಯಾರ ಬಳಿಯೂ ಉತ್ತರವಿರಲಿಲ್ಲ. ನಗರ ಆರೋಗ್ಯ ವಿಭಾಗ, ‘‘ಅನೇಕ ಸಾರಿ ಹೋಟೆಲ್ ಕಾರ್ಮಿಕರು ಶೌಚಾಲಯ ಬಳಸಿದ ನಂತರ ತಮ್ಮ ಕೈಗಳನ್ನು ಸರಿಯಾಗಿ ತೊಳೆಯದೇ ಹೋದರೂ ಸಹ ಸಾಲ್ಮೆನೆಲಾ ಆಹಾರ ಪದಾರ್ಥಗಳನ್ನು ಸೇರುವುದುಂಟು’’ ಎಂದು ತನ್ನ ಮಿತಿಯಲ್ಲಿ ತಿಳಿದದ್ದನ್ನು ಹೇಳಿತು. ಆದರೆ, ಒಂದು ಹೋಟೆಲಿನಲ್ಲಿ ಹೀಗಾಗಿದ್ದರೆ ಅಥವಾ ಒಂದೇ ಹೋಟೆಲ್‌ನ ಸರಣಿ ಶಾಖೆಗಳಲ್ಲಿ ಮಾತ್ರ ಇದು ಸಂಭವಿಸಿದ್ದರೆ ಅವರ ಮಾತನ್ನು ಒಪ್ಪಬಹುದಿತ್ತು. ಆದರೆ ಒಂದಕ್ಕೊಂದು ಸಂಬಂಧವಿಲ್ಲದ ಪ್ರದೇಶಗಳಲ್ಲಿ ಇದು ವ್ಯಾಪಕವಾಗಿ ಬಾಧಿಸಿದೆ ಎಂದರೆ ಕಾರಣ ಇನ್ನೇನೋ ಇರಬೇಕು ಎಂದು ರಾಜ್ಯದ ಸೂಕ್ಷ್ಮಜೀವ ವಿಜ್ಞಾನಿಗಳು ಅಂದಾಜಿಸಿದರು. ಅಂದಾಜಿಸಿದ್ದೇನೋ ಸರಿ, ಆದರೆ ಅಂತಹ ಮೂಲ ಯಾವುದು? ಅಂತಹ ಯಾವ ಸಾರ್ವತ್ರಿಕ ಮೂಲದಿಂದ ಸಾಲ್ಮೆನೆಲಾ ಇಡೀ ನಗರವನ್ನು ಆವರಿಸಿಕೊಂಡಿರಬಹುದು?!
ಕುಡಿಯುವ ನೀರಿನ ಸರಬರಾಜು ಮೂಲ, ಆಹಾರ ಸರಬರಾಜು ಮೂಲ, ಸಾರ್ವತ್ರಿಕ ಶೌಚ ವ್ಯವಸ್ಥೆಗಳ ಆದಿಯಾಗಿ ಎಲ್ಲಾ ‘ಸಾರ್ವತ್ರಿಕ’ಗಳನ್ನು ಆಮೂಲಾಗ್ರವಾಗಿ ಪರಿಶೀಲನೆಗೆ ಒಳಪಡಿಸಲಾಯಿತು. ಫಲಿತಾಂಶ ಮಾತ್ರ ಶೂನ್ಯ. ಅಲ್ಲೆಲ್ಲೂ ಸಾಲ್ಮೆನೆಲಾ ಪಸರಿಸಿದ ಕುರುಹುಗಳಿಲ್ಲ. ಹಾಗಾದರೆ ಇದು ಹರಡಿದ್ದು ಎಲ್ಲಿಂದ?
ಈ ನಡುವೆ ಸಾಮಾನ್ಯ ವಿಚಾರಣೆಯ ಹೊತ್ತಿನಲ್ಲಿ ಡೇವಿಡ್ ತನ್ನ ಹೋಟೆಲ್‌ನಲ್ಲಿ ಸಲಾಡ್ ತಿಂದನಂತರ ನನಗೆ ಹೀಗಾಯಿತು ಎಂದು ಹೇಳಿದ. ಅವನ ಹೆಂಡತಿಯ ಹೇಳಿಕೆಯೂ ಅದೇ ಆಗಿತ್ತು. ಇದೇ ಜಾಡಿನಲ್ಲಿ ಈ ಹೋಟೆಲಿನ ಇತರ ಗ್ರಾಹಕರು ಮತ್ತು ಇತರ ಹೋಟೆಲ್‌ಗಳ ಗ್ರಾಹಕರನ್ನು ವಿಚಾರಿಸಲಾಗಿ ಹೆಚ್ಚು ಕಡಿಮೆ ಎಲ್ಲರ ಮಾತುಗಳೂ ಡೇವಿಡ್‌ನ ಮಾತುಗಳನ್ನು ಹೊಂದುತ್ತಿದ್ದವು. ಕೆಲವು ಕಡೆ ಆಲೂಗೆಡ್ಡೆ ಸಲಾಡ್, ಕೆಲವು ಕಡೆ ತರಕಾರಿ ಸಲಾಡ್ ಮತ್ತು ಕೆಲವು ಕಡೆ ಮೊಟ್ಟೆ ಮಿಶ್ರಿತ ಸಲಾಡ್ ಗಳನ್ನು ತಿಂದ ಎಲ್ಲರೂ ಸಾರಾಸಗಟಾಗಿ ಬಾಧಿತರಾಗಿದ್ದರು. ಹಾಗಾದರೆ, ಈ ಸಲಾಡ್ ನಲ್ಲಿ ಆ ಸಾಲ್ಮೆನೆಲಾ ಸೇರಿದ್ದಾದರೂ ಹೇಗೆ? ಇದು ಆಕಸ್ಮಿಕವೋ? ಇಲ್ಲಾ ಉದ್ದೇಶಪೂರ್ವಕ ಪಿತೂರಿಯೋ?.
ಈ ಹಿನ್ನೆಲೆಯ ವಿವರಗಳನ್ನು ಕೇಳಿದ ಓರೆಗಾನ್ ಸ್ಟೇಟ್ ಹೆಲ್ತ್ ಲ್ಯಾಬಿನ ನಿರ್ದೇಶಕ ಡಾ. ಮೈಕ್ ಸ್ಕೀಲ್ಸ್ ತನ್ನ ಲ್ಯಾಬಿನಲ್ಲಿ ನಗರದ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದ್ದ ಬ್ಯಾಕ್ಟೀರಿಯಾ ಮಾದರಿಗಳನ್ನು ಪರೀಕ್ಷಿಸಿದಾಗ ಅವರಿಗೆ ಕಂಡಿದ್ದು ಒಂದು ಸಾಲ್ಮೆನೆಲಾ ಜಾತಿಯ, ಆದರೆ ಈ ಜಾತಿಯಲ್ಲಿ ಕೇವಲ ಶೇಕಡಾ 2 ರಷ್ಟು ಮಾತ್ರ ಇರುವ ಅಪರೂಪ ಪಂಗಡದ ಸಾಲ್ಮೆನೆಲಾ! ಅದೃಷ್ಟವಶಾತ್ ಇದು ಆಂಟಿ ಬಯೋಟಿಕ್ ಗಳಿಗೆ ಪ್ರತಿರೋಧ ಹೊಂದಿಲ್ಲದ ಬ್ಯಾಕ್ಟೀರಿಯಾ ಎಂದು ಮೈಕ್ ಸ್ಕೀಲ್ಸ್ ಹೇಳಿದರು.
ಇದೆಲ್ಲಾ ಮುಗಿಯುತ್ತಾ ಬಂತು, ಪರಿಸ್ಥಿತಿ ನಿಧಾನವಾಗಿ ನಿಯಂತ್ರಣಕ್ಕೆ ಬರುವ ಹೊತ್ತಿಗೆ ಎರಡು ತಿಂಗಳುಗಳು ಕಳೆದು ಹೋದವು. ಆ ಹೊತ್ತಿಗೆ ಓರೆಗಾನ್ ರಾಜ್ಯಾಡಳಿತ ಈ ಸಾಂಕ್ರಾಮಿಕ ಸ್ಫೋಟದ ಕುರಿತಂತೆ ಒಂದು ಅಧಿಕೃತ ವರದಿಯನ್ನು ಬಿಡುಗಡೆ ಮಾಡಿತು. ಆದರಲ್ಲಿ ‘‘ಈ ಸಾಂಕ್ರಾಮಿಕ ಸ್ಫೋಟಕ್ಕೆ ಹೋಟೆಲ್‌ಗಳು ಮತ್ತು ಅಲ್ಲಿನ ನೌಕರರ ನೈರ್ಮಲ್ಯದ ಕೊರತೆಯೇ ಕಾರಣ’’ ಎಂದು ಹೇಳಿತ್ತು.
ವಿಪರ್ಯಾಸವೆಂದರೆ ಈ ಹೇಳಿಕೆಯನ್ನು ಸ್ವತಃ ಇಲಾಖೆಯ ಅಧಿಕಾರಿಗಳೇ ತಳ್ಳಿಹಾಕಿದರು. ಅಂದರೆ, ‘ಕಾರಣ ಇದಲ್ಲ’ ಎಂದು ಎಲ್ಲರಿಗೂ ಗೊತ್ತು!. ಆದರೆ ನಿಜವಾದ ಕಾರಣ ಏನೆಂದು ಯಾರಿಗೂ ಗೊತ್ತಿರಲಿಲ್ಲ!! ಈ ವರದಿಯನ್ನು ಓದಿದ ಅನೇಕ ತಿಳುವಳಿಕೆಯುಳ್ಳ ಜನ ಮತ್ತು ಅಧಿಕಾರಿಗಳು ನಕ್ಕರು, ಮತ್ತೆ ಕೆಲವರು ಅತ್ತರು. ಇನ್ನೂ ಕೆಲವರು ಮೌನವಹಿಸಿದರು. ಅಂತಿಮವಾಗಿ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ‘‘ಸದ್ಯಕ್ಕೆ ನಮಗೆ ಹೇಳಲು ಇಷ್ಟೇ ಸಾಧ್ಯವಿರುವುದು’’ ಎಂದರು. ಮಾಧ್ಯಮಗಳ ಮುಂದೆ ಅಥವಾ ಸಾರ್ವಜನಿಕವಾಗಿ ಇದಕ್ಕೂ ಮಿಗಿಲಾದ ಏನನ್ನೂ ಹೇಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದು ಅರ್ಥವಾಗುವವರಿಗೆ ಆಗಿತ್ತು! ಆಗದವರಿಗೆ ಇಲ್ಲ!!.
ಆದರೆ ಸ್ಥಳೀಯ ಆಡಳಿತಕ್ಕೆ ಈ ಮುಜುಗರದಿಂದ ಬಿಡುಗಡೆಯಾಗಬೇಕಿತ್ತು. ಅವರು ಈವರೆಗೂ ಹೇಳಿದ್ದು ಸತ್ಯವಲ್ಲ ಎಂದು ಅವರಿಗೂ ಗೊತ್ತು. ಹಾಗಾಗಿ ನಿಜ ಮೂಲವನ್ನು ಅವರು ಪತ್ತೆಮಾಡಬೇಕಿತ್ತು. ಪ್ರಯತ್ನ ಮುಂದುವರಿದಂತೆ ಇನ್ನಾವ ರೀತಿಯಲ್ಲಿಯೂ ಇಂಥದ್ದೊಂದು ಕ್ಷೋಭೆ ಹಠಾತ್ತಾಗಿ ಹೀಗೆ ಸ್ಫೋಟಗೊಳ್ಳಲು ಸಾಧ್ಯವಿಲ್ಲ ಎಂದು ಅವರ ತನಿಖೆಯಿಂದ ಗೊತ್ತಾದ ನಂತರ, ಅವರ ಮುಂದೆ ಉಳಿದಿದ್ದು ಅದೇ ಪ್ರದೇಶದಲ್ಲಿ ತಳಊರಿ ಕುಳಿತಿದ್ದ ರಜನೀಶ್ ಆಶ್ರಮ ಮತ್ತು ಅಲ್ಲಿನ ಸಾವಿರಾರು ಭಕ್ತ ವೃಂದದ ಕರಾಮತ್ತುಗಳು. ಈ ಭಕ್ತ ವೃಂದ ತಮ್ಮನ್ನು ‘ರಜನೀಶೀಗಳು’ ಎಂದು ಕರೆದುಕೊಳ್ಳುತ್ತಿದ್ದರು. ಆದರೆ, ಸ್ಥಳೀಯರು ಮ್ಯಾಡ್ ಕಲ್ಟ್, ತಿಕ್ಕಲು ಭಕ್ತಾದಿಗಳು, ಹುಚ್ಚು ಕರ್ಮಠರು ಇತ್ಯಾದಿ, ಇತ್ಯಾದಿಯಾಗಿ ಕರೆಯುತ್ತಿದ್ದರು.
ಇದು ಕೇವಲ ಸಂದೇಹ ಮಾತ್ರ ಆಗಿರಲಿಲ್ಲ. ಸ್ಥಳೀಯರ ಆಪಾದನೆ ಸಹ ಆಗಿತ್ತು. ರಜನೀಶೀಗಳ ನಡೆ ನುಡಿಗಳು ಸ್ಥಳೀಯರ ಹಿತಾಸಕ್ತಿಗೆ ವಿರುದ್ಧವಾಗಿವೆ ಮತ್ತು ಹಾನಿಕಾರಕವಾಗಿವೆ ಎಂಬುದು ಸ್ಥಳೀಯರ ಆಪಾದನೆಯಾಗಿತ್ತು. ಅವರ ಅನೇಕ ಕೃತ್ಯಗಳಿಗೆ ಸಂಬಂಧಿಸಿದಂತೆ ರಜನೀಶೀ ಕಲ್ಟಿನ ಮೇಲೆ ಜನರಿಗೆ ತೀವ್ರವಾದ ಅಸಮಾಧಾನವಿತ್ತು. ವಿಸ್ತರಿಸುತ್ತಲೇ ಇದ್ದ ಅವರ ಆಶ್ರಮದ ಬೇಲಿ ಸ್ಥಳೀಯರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಸ್ಥಳೀಯ ರಾಜಕಾರಣಿಗಳಿಗೂ ಕಲ್ಟಿನ ಮುಖಂಡರಿಗೂ ಅನೇಕ ಬಾರಿ ತಿಕ್ಕಾಟಗಳಾಗಿದ್ದವು.
ಒಂದು ವರ್ಷದ ಹಿಂದೆ ಈ ಒಳ ಬೆಂಕಿಗೆ ಪೆಟ್ರೋಲ್ ಸುರಿದಂತೆ ಈ ಕಲ್ಟಿನ ಪರಮೋಚ್ಚ ನಾಯಕಿ ಮಾ ಆನಂದ ಶೀಲಾ ಎಂಬವರು ‘‘ನಾವು ಯಾವುದೇ ಬೆಲೆತೆತ್ತಾದರೂ ಸರಿ ಒರೆಗಾನ್‌ನಲ್ಲಿ ನೆಲೆಕಟ್ಟಲು ಬಂದಿದ್ದೇವೆ. ಅದಕ್ಕಾಗಿ ರಕ್ತ ಚೆಲ್ಲಬೇಕಾದ ಅಗತ್ಯವಿದ್ದರೆ, ಅದಕ್ಕೂ ನಾವು ಸಿದ್ಧ್ದರಿದ್ದೇವೆ.’’ ಎಂದು ಹೇಳಿದ್ದಳು.
1981, ಆಗ ನಾವು ಕೃಷಿ ಸಮುದಾಯವೊಂದನ್ನು ಕಟ್ಟಲು ಇಲ್ಲಿಗೆ ಬಂದಿದ್ದೇವೆ? ಎಂದು ಆಚಾರ್ಯ ರಜನೀಶ್ ಹೇಳಿದ್ದರು. ಇದಾದ ಎರಡು ವರ್ಷಗಳಲ್ಲಿ ಸುಮಾರು 64,000 ಎಕರೆ ಅಂದರೆ 100 ಚ.ಮೈಲಿ ಅಥವಾ 260 ಚ.ಕಿ.ಮೀ. ಭೂಮಿಯನ್ನು ಖರೀದಿಸಿದ್ದರು. ಇದರ ಬೆಲೆ ಸುಮಾರು 30 ಮಿಲಿಯನ್ ಡಾಲರ್ ಆಗಿತ್ತು (ಅಂದಾಜು ರೂ. 2,486,674,500). ಆಂಟೆಲೋಪ್ ಪಟ್ಟಣಕ್ಕೆ ಹೊಂದಿಕೊಂಡಿದ್ದ ಈ ಜಾಗವನ್ನು ಬಿಗ್ ಮ್ಯಾಡಿ ರ್ಯಾಂಚ್ ಎಂದು ಕರೆಯುತ್ತಿದ್ದರು. ಈ ಪ್ರದೇಶಕ್ಕೆ ರಜನೀಶ್ ಪುರಂ ಎಂದು ಹೆಸರಿಡಲಾಗಿತ್ತು.
ಈ ವಿಸ್ತಾರವಾದ ರ್ಯಾಂಚಿನೊಳಗೆ ಆವರದೇ ಆದ ಒಂದು ಸಾಮ್ರಾಜ್ಯವನ್ನು ನಿರ್ಮಿಸಲಾಗಿತ್ತು. ಸಾವಯವ ಕೃಷಿಯ ರೈತರ ಸಮುದಾಯವೊಂದನ್ನು ನಿರ್ಮಿಸುತ್ತೇವೆ ಎಂದು ಘೋಷಿಸಿಕೊಂಡಿದ್ದ ಈ ರಜನೀಶೀಗಳು ಅಲ್ಲಿ ಆವರದೇ ಆಸ್ಪತ್ರೆ, ಪೋಸ್ಟಾಫೀಸ್, ಸುಸಜ್ಜಿತ ಶಾಲೆ, ಧ್ಯಾನ ಕೇಂದ್ರಗಳೇ ಮೊದಲಾಗಿ ಸುಮಾರು 1,000 ಜನರಿಗೆ ಅಗತ್ಯವಾದ ಸುಸಜ್ಜಿತ ವಸತಿ ಸಮುಚ್ಚಯದ ಜೊತೆಗೆ ರಜನೀಶ್ ಏರ್ ವೇಸ್ ಹೆಸರಿನ ವಿಮಾನ ನಿಲ್ದಾಣವನ್ನು ಸಹ ನಿರ್ಮಿಸಿಕೊಂಡಿದ್ದರು.
ಸಾವಿರಾರು ಜನ ವೈದ್ಯರು, ಲೆಕ್ಕಿಗರು, ವಕೀಲರು ಮೊದಲಾದ ವೃತ್ತಿಪರರು ತಮ್ಮ ವೃತ್ತಿಗಳಿಗೆಲ್ಲಾ ಎಳ್ಳು ನೀರು ಬಿಟ್ಟು ಇಲ್ಲಿ ಬೆಳಗ್ಗೆ ಸಾವಯವ ಬಿಸ್ಕೆಟ್ ಮಾಡುತ್ತಾ ಮಧ್ಯಾಹ್ನ ಆಲೂಗೆಡ್ಡೆ ಕೀಳುತ್ತಿದ್ದರು, ಸಂಜೆ ಹೊತ್ತು ಧ್ಯಾನವನ್ನೂ ಮಾಡುತ್ತಿದ್ದರು. ಪ್ರತಿದಿನ ಆಚಾರ್ಯ ರಜನೀಶ್ ತಮ್ಮ 80 ರೋಲ್ಸ್ ರಾಯ್ಸ್ ಕಾರುಗಳ ಪೈಕಿ ಒಂದರಲ್ಲಿ ರಜನೀಶ್ ಪುರಂ ಮತ್ತು ಹೊರಗಿನ ಪಟ್ಟಣ ಪ್ರದಕ್ಷಿಣೆಗೆ ಹೋಗುತ್ತಿದ್ದರು. ಧ್ಯಾನದ ಉಪಯೋಗಗಳು ಮತ್ತು ಮುಕ್ತ ಪ್ರೇಮದ ಬಗ್ಗೆ ಆಚಾರ್ಯರು ಬೋಧನೆ ಮಾಡುತ್ತಿದ್ದರು. ಒಂದು ಪ್ರಕಟಿತ ವರದಿಯ ಪ್ರಕಾರ ಜಗತ್ತಿನಲ್ಲಿಯೇ ಅತಿಹೆಚ್ಚು ಲೈಂಗಿಕ ಸಹಯೋಗಿಗಳನ್ನು ಹೊಂದಿದ್ದ ಆಚಾರ್ಯರು ಇವರು ಎಂಬುದು ಸ್ಥಳೀಯರ ತಿಳುವಳಿಕೆಯಾಗಿತ್ತು.
1982ರಲ್ಲಿ ಅಂಟೆಲೋಪ್ ಸಮೀಪದಲ್ಲಿದ್ದ ಪುಟ್ಟ ಪಟ್ಟಣವೊಂದರ ಸಿಟಿ ಕೌನ್ಸಿಲ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಸಿಟಿ ಕೌನ್ಸಿಲ್ ಮತ್ತು ಅಲ್ಲಿನ ಶಾಲೆಯ ಆಡಳಿತ ಮಂಡಳಿಯ ಮೇಲೆ ಅಧಿಕಾರ ಹಿಡಿದರು. ಇದು ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿತು. ಇದಾದ ನಂತರ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ನೇರವಾಗಿ ಡೇಲ್ಸ್ ನಗರದ ಮೇಲೆ ಅಧಿಕಾರ ಹಿಡಿಯಲು ಸಜ್ಜಾದರು. ಅದಕ್ಕೆ ಪೂರಕವಾಗಿ ತಮ್ಮ ಅಭ್ಯರ್ಥಿಗಳ ರೂಪದಲ್ಲಿ ರಜನೀಶಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿತ್ತು.
ಈಗಾಗಲೇ ಸಾಂಕ್ರಾಮಿಕದಿಂದ ಬಳಲಿದ್ದ ಡೇಲ್ಸ್ ಜನತೆಗೆ ರಜನೀಶಿಗಳ ಮೇಲೆ ಬಲವಾದ ಗುಮಾನಿ ಇದ್ದ ಕಾರಣ ಈ ಬಾರಿ ಇನ್ನೇನಾಗುತ್ತದೋ ಎಂದು ಗಾಬರಿಬಿದ್ದರು. ಇದು ಅಲ್ಲಿನ ಜನರ ಗುಮಾನಿಯಾಗಿತ್ತೇ ವಿನಃ ಅದಕ್ಕೆ ಸಾಕ್ಷ್ಯಾಧಾರಗಳು ಇರಲಿಲ್ಲ. ಆರೋಗ್ಯ ಇಲಾಖೆಗೂ ವೈಜ್ಞಾನಿಕವಾಗಿ ದೃಢಪಟ್ಟಿರಲಿಲ್ಲ. ಹಾಗಾಗಿ, ಕೆಲವರು ಯಾರೋ ಕಿಡಿಗೇಡಿಗಳು ರಜನೀಶರ ಮೇಲೆ ಗೂಬೆ ಕೂರಿಸಲು ಇದನ್ನು ಮಾಡಿರುವ ಸಾಧ್ಯತೆಯೂ ಇದೆ ಎಂದು ವಾದಿಸುತ್ತಿದ್ದರು.
ಈ ಇಡೀ ಪರಿಕಲ್ಪನೆಯ ಸಂಸ್ಥಾಪಕ, ಆಶ್ರಮದ ಒಡೆಯ, ಇಲ್ಲಿನ ವ್ಯವಸ್ಥೆಯ ಪ್ರಧಾನ ನಾಯಕ ಮೂಲತಃ ಆಚಾರ್ಯ ರಜನೀಶ್ ಆಗಿದ್ದರು. ಸಾಮಾಜಿಕ ಮತ್ತು ಮಾರುಕಟ್ಟೆ ಮನ್ನಣೆ ಇದ್ದದ್ದು ಸಹ ರಜನೀಶ್‌ಗೆ ಮಾತ್ರ. ಆದರೆ ಇಲ್ಲಿನ ಇಡೀ ವ್ಯವಸ್ಥೆಯ ಅಧಿನಾಯಕಿಯಾಗಿ ಆಡಳಿತದ ಮುಂಚೂಣಿಯಲ್ಲಿದ್ದವಳು ಮಾ ಶೀಲಾ ಆನಂದ್. ಉಳಿದಂತೆ ರಜನೀಶ್ ಇಲ್ಲಿ ಉತ್ಸವಮೂರ್ತಿ ಮಾತ್ರ. ಇದು ಅಲ್ಲಿನ ಸ್ಥಳೀಯ ಜನ, ಆಡಳಿತ ಅಷ್ಟೇಕೆ ಬಹುತೇಕ ರಜನೀಶಿಗಳಿಗೆ ಸಹ ತಿಳಿದ ಸಂಗತಿಯಾಗಿತ್ತು.
ಭಗವಾನರು ನನಗೆ 60 ರೋಲ್ಸ್ ರಾಯ್ಸ್ ಕಾರುಗಳು ಬೇಕೆಂದರೆ ಮಾ ಶೀಲಾ ತಂದು ನಿಲ್ಲಿಸುತ್ತಾಳೆ! ನನಗೆ ರಾತ್ರಿಗೆ ಒಬ್ಬಳು ಅಥವಾ ಇಂಥದ್ದೇ ಸಹಯೋಗಿನಿ ಬೇಕೆಂದರೆ ಮಾ ಶೀಲಾ ತಂದೊದಗಿಸುತ್ತಾಳೆ. ನನಗೆ ಹಾರಲು ಒಂದು ಜೆಟ್ ವಿಮಾನ ಬೇಕೆಂದರೆ 5 ಜೆಟ್ ತಂದು ನಿಲ್ಲಿಸುತ್ತಾಳೆ. ಅವರ ಹೆಸರಿನಲ್ಲಿ ವಿಮಾನ ನಿಲ್ದಾಣವನ್ನೇ ನಿರ್ಮಿಸುತ್ತಾಳೆ. ಭಗವಾನರಿಗೆ ಇನ್ನೇನು ಬೇಕು?! ಭಗವಾನರು ಬಯಸಿದ್ದೆಲ್ಲಾ ಕ್ಷಣಾರ್ಧದಲ್ಲಿ ಪ್ರತ್ಯಕ್ಷವಾಗುತ್ತದೆ.
ಈ ಮಾಯಾಮಂತ್ರಗಳ ಮಹಾ ಸೂತ್ರಧಾರಿಣಿ ಮಾತ್ರ ಮಾ ಶೀಲಾ ಆಗಿರುತ್ತಾಳೆ. ಅವಳ ಸನ್ನೆ ಇಲ್ಲದೆ ಇಲ್ಲೊಂದು ಹುಲ್ಲು ಕಡ್ಡಿಯೂ ಅಲುಗುವುದಿಲ್ಲ?! ಏಕೆಂದರೆ ಇಲ್ಲಿನ ಭಗವಾನರ ಆತ್ಮ ಮಾ ಶೀಲಾ ನಿಯಂತ್ರಣದಲ್ಲಿತ್ತು. ಅದಕ್ಕೆ ಬುನಾದಿಯಾಗಿ ಭಗವಾನರು ‘‘ ನೀನು ಎಲ್ಲದರ ಮೇಲೆ ನಿಯಂತ್ರಣ ಇಟ್ಟುಕೋ! ನೀನು ಅವನ್ನೆಲ್ಲಾ ಹೇಗೆ ಸಾಧಿಸುತ್ತೀಯ ಎಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’’ ಎಂದಿದ್ದರಂತೆ.
ಈ ನಡುವೆ ರಜನೀಶರ ವಲಸೆ ನಿಯಮಗಳಲ್ಲಿ ಆಗಿರುವ ಹೇರಾಫೇರಿಗಳ ಬಗ್ಗೆ ತನಿಖೆ ನಡೆಯುತ್ತಿತ್ತು. ಜೊತೆ ಜೊತೆಗೆ ರಜನೀಶಿಗಳ ಕಲ್ಟಿನ ಒಳಗೇ ನಾಯಕತ್ವದ ಒಳಗುದಿ ಜ್ವಾಲಾಮುಖಿಯ ರೂಪ ತಾಳುತ್ತಿತ್ತು. ಇದು ಆಗಾಗ ಉನ್ನತ ಹಂತದ ರಜನೀಶಿಗಳ ನಡುವೆ ನಡೆಯುತ್ತಿದ್ದ ಭೀಕರ ವಾಗ್ವಾದ, ಕಿತ್ತಾಟ ಅಸಹನೀಯ ಭಿನ್ನಾಭಿಪ್ರಾಯಗಳ ಮೂಲಕ ಹೊರ ಚೆಲ್ಲುತ್ತಿತ್ತು. ಇದಕ್ಕೆ ಪ್ರತಿಯಾಗಿ ಮಾ ಶೀಲಾ ‘‘ ನೀವು ನನ್ನನ್ನು ನಂಬುವುದು, ಹಿಂಬಾಲಿಸುವುದು ಒಳಿತು. ಯಾವುದೇ ತರಲೆಗಳನ್ನು ಮಾಡಬೇಡಿ. ಏಕೆಂದರೆ ನಾನು ಹುಲಿ’’ ಎಂದು ಹೇಳುತ್ತಿದ್ದಳು.
ಮಾಜಿ ಪ್ರಾಸಿಕ್ಯೂಟರ್ ರಾಬರ್ಟ್ ಹ್ಯಾಮಿಲ್ಟನ್ ಪ್ರಕಾರ ಈ ಮಾ ಶೀಲಾಳ ಗುಂಪನ್ನು ‘ಹಾಲಿವುಡ್ ಬಣ’ ಎಂದು ಜನರು ಗುರುತಿಸುತ್ತಿದ್ದರು. ಏಕೆಂದರೆ ಶೀಲಾಳ ಹಿನ್ನೆಲೆ ಕಾರಣವಾಗಿತ್ತು. ಇದೊಂದು ಶ್ರೀಮಂತ ಬಣ. ಈಕೆಯ ಮಾಜಿ ಪತಿ ಒಬ್ಬ ಹಾಲಿವುಡ್ ಸಿನೆಮಾಗಳ ನಿರ್ಮಾಪಕರಾಗಿದ್ದರು. ಅವರ ಬಳಿ ಹಣವಿದ್ದಿತ್ತು. ಹಾಗಾಗಿ ಅವಳ ಹಿಂದೆ ಇಂಥದ್ದೇ ಶ್ರೀಮಂತರ ಗುಂಪುಗಳಿದ್ದವು. ಇವರಿಗೆ ಮಾ ಶೀಲಾಳ ಕಾರಣದಿಂದ ರಜನೀಶರೊಂದಿಗೆ ಸುಲಭ ಮತ್ತು ನೇರ ಸಂಪರ್ಕವಿತ್ತು. ಈ ಎಲ್ಲ ಕಾರಣಗಳಿಂದ ಈ ಗುಂಪು ಒಂದು ವಿಭ್ರಾಂತಿಯ ಸ್ಥಿತಿಯಲ್ಲಿತ್ತು.
ಇಲ್ಲಿನ ಒಳಗುಂಪುಗಳ ನಡುವೆ ಹೋರಾಟವಿದ್ದಿದ್ದು ಆಚಾರ್ಯರ ಮೇಲೆ ನಿಯಂತ್ರಣ ಸಾಧಿಸುವ ಶಕ್ತಿಯ ಸಾಮರ್ಥ್ಯಗಳ ಬಗ್ಗೆ. ಯಾರಿಗೆ ಇದು ಹೆಚ್ಚೆಚ್ಚು ಸಾಧ್ಯವಾಗುತ್ತದೋ ಅವರು ಇಡೀ ಗುಂಪಿನ ಮೊದಲ ಶ್ರೇಣಿಯ ನಾಯಕರಾಗುತ್ತಿದ್ದರು. ಈ ಒಳ ಗುಂಪುಗಾರಿಕೆಯ ಬಗ್ಗೆ ನಿರಂತರವಾಗಿ ನಿಗಾ ಇಟ್ಟಿದ್ದ ಲೆ್ ಜಾಯಿಸ್ ಎಂಬ ಸ್ಥಳೀಯ ಪತ್ರಕರ್ತ ಕೆಲವು ಮಾಜಿ ಅನುಯಾಯಿಗಳು ಹೇಳಿದ್ದ ರಹಸ್ಯಗಳನ್ನು ಸಹ ವರದಿ ಮಾಡಿದ್ದ.
ಈ ಮಾಜಿ ಅನುಯಾಯಿಗಳ ಪ್ರಕಾರ ಈಗಿನ ಪ್ರಬಲ ಗುಂಪು ಕೆಲವು ಸ್ಥಳೀಯ ರಾಜಕೀಯ ನಾಯಕರನ್ನು, ವಿರೋಧಿ ಗುಂಪಿನ ಕೆಲವು ಸದಸ್ಯರನ್ನು ಮತ್ತು ಅಮೆರಿಕದ ಅಟಾರ್ನಿಯನ್ನು ಜೊತೆಗೆ ನನ್ನನ್ನು ಸಹ ಹತ್ಯೆ ಮಾಡಿಸಲು ಯೋಜನೆಯೊಂದನ್ನು ರೂಪಿಸಿತ್ತು ಎಂಬ ರಹಸ್ಯವನ್ನು ಸ್ವತಃ ಲೆ್ ಜಾಯಿಸ್ ಪತ್ರಿಕೆಯಲ್ಲಿ ಬರೆದಿದ್ದ. ಅಂದಿಗೆ ಅದು ಅವರ ಗುಂಪಿಗೆ ಸಾಧ್ಯವೂ ಇತ್ತು. ಆದರೆ ತನ್ನ ಪಾಲಿಗೆ ಅದು ವಿಲಕ್ಷಣ ಸಂಗತಿಯಾಗಿತ್ತು ಎಂದು ಲೆ್ ಜಾಯಿಸ್ ಹೇಳಿಕೊಂಡಿದ್ದ.
ಆದರೆ ಈ ನಡುವೆ ಇನ್ನೂ ಕೆಲವು ವಿಲಕ್ಷಣ ಸಂಗತಿಗಳು ಘಟಿಸಿದವು. ಈ ಸಾಲ್ಮೆನೆಲಾ ವಿಸ್ಫೋಟದ ಒಂದು ವರ್ಷದ ನಂತರ ಮಾ ಶೀಲಾ ಮತ್ತು ಆಶ್ರಮದ ಕ್ಲಿನಿಕ್‌ನ ಮುಖ್ಯಸ್ಥೆಯಾಗಿದ್ದ ಪೂಜಾ ಎಂಬ ನರ್ಸ್ ಯುರೋಪಿಗೆ ಓಡಿ ಹೋದರು. ಆ ನಂತರದಲ್ಲಿ ಹೊರಬಿದ್ದ ಅಧಿಕೃತ ವರದಿಯ ಪ್ರಕಾರ ಕ್ಲಿನಿಕ್‌ನ ಮುಖ್ಯಸ್ಥೆ ಪೂಜಾ ಈ ಸಾಲ್ಮೆನೆಲಾ ಗಳ ವಿವಿಧ ಆವೃತ್ತಿಗಳ ಅಭಿವೃದ್ಧಿಯ ಅಪಾಯಕಾರಿ ಪ್ರಯತ್ನಗಳನ್ನು ನಡೆಸಿರುವುದು ಖಚಿತವಾಗಿತ್ತು.
ಆನಂತರ, ರಜನೀಶ್ ಅವರನ್ನು ತೊರೆದಿರುವ ಹೇಳಿಕೆ ನೀಡಿದರು. ‘‘ಅವರು ಈ ಕ್ಯಾಂಪಸನ್ನು ಸರ್ವಾಧಿಕಾರಿಯ ಯಾತನಾ ಶಿಬಿರವನ್ನಾಗಿ ಪರಿವರ್ತಿಸಿದ್ದರು’’ ಎಂದೂ ಹೇಳಿದ್ದರು.
ಇದಾದ ನಂತರದಲ್ಲಿ ಆಶ್ರಮ ಮತ್ತು ರಜನೀಶರ ವೈಯಕ್ತಿಕ ಭದ್ರತೆಯನ್ನು ಹೆಚ್ಚಿಸಲಾಯಿತು. ರಜನೀಶರು ಆಶ್ರಮದ ಒಳಗೆ ಅಥವಾ ಹೊರಗೆ ಸಂಚರಿಸುವಾಗ ಅವರ ಕಾರಿನ ಹಿಂದೆ ಮುಂದೆ ಆಯುಧ ಸನ್ನದ್ಧ ಸುರಕ್ಷಾ ಸಿಬ್ಬಂದಿಯನ್ನು ಹೊತ್ತಿದ್ದ ಎಸ್ ಯು ವಿಗಳು ಸನದ್ಧ್ದವಾಗಿದ್ದವು. ಅಷ್ಟೇ ಸರ್ವಸಜ್ಜಿತವಾಗಿದ್ದ ಲಿಮೋಸಿನ್ (ಚಾಲಕ, ಮಾಲಕ ಮತ್ತು ರಕ್ಷಣಾ ಸಿಬ್ಬಂದಿಗೆ ಪ್ರತ್ಯೇಕ ವಿಭಾಗಗಳಿರುವ ಕಾರು) ಬುಲೆಟ್ ಪ್ರೂಫ್ ಕಾರು ರಜನೀಶರ ಸುರಕ್ಷತೆಯ ಹೊಣೆ ಹೊತ್ತಿತ್ತು.
1985ರ ಅಕ್ಟೋಬರ್‌ನಲ್ಲಿ ಫೆಡರಲ್ ಗ್ರಾಂಡ್ ಜ್ಯೂರಿ ರಜನೀಶರ ಮೇಲೆ ವೀಸಾ ಅರ್ಜಿಯಲ್ಲಿ ಸುಳ್ಳು ಹೇಳಿರುವ ಬಗ್ಗೆ ಅಧಿಕೃತ ಆಪಾದನೆ ಹೊರಿಸಿ 35 ಪುಟಗಳ ಆಪಾದನಾ ಪಟ್ಟಿಯನ್ನು ಸಲ್ಲಿಸಿದರು. ಇದರಲ್ಲಿ ಈ ಅವರ ಗುಂಪಿನ ಸದಸ್ಯರು ಅಮೆರಿಕದಲ್ಲಿಯೇ ಉಳಿಯುವ ಸಲುವಾಗಿ ಹುಸಿ ವಿವಾಹಗಳ ದಾಖಲೆಗಳನ್ನು ಸೃಷ್ಟಿಸಿ, ಸಲ್ಲಿಸಿರುವ ಆಪಾದನೆಗಳೂ ಇದ್ದವು.
ಇವುಗಳಿಗೆ ಅಗತ್ಯವಾದ ದಾಖಲೆಗಳ ಹುಡುಕಾಟಕ್ಕಾಗಿ ಆಶ್ರಮದ ಮೇಲೆ ದಾಳಿ ಮಾಡಲು ತನಿಖಾಧಿಕಾರಿಗಳೇನೋ ನಿರ್ಣಯಿಸಿದರು. ಆದರೆ ಅವರು ಒಳಗೆ ಹೋಗಲು ಭಯಪಡುತ್ತಿದ್ದರು. ಮೊದಲಿಗೆ ಆ ಕಲ್ಟಿನ ಸದಸ್ಯರಿಂದ ಸಂಭವಿಸಬಹುದಾದ ಆಕ್ರಮಣ ಮತ್ತು ಸಾಂಕ್ರಾಮಿಕ ದಾಳಿಯ ಭಯ ಅವರನ್ನು ಕಾಡುತ್ತಿತ್ತು. ಕೊನೆಗೆ ಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕ್ ಸ್ಕೀಲ್ಸ್ ಅವರನ್ನು ಮುಂದೆ ಹೋಗುವಂತೆ ವ್ಯವಸ್ಥೆ ಮಾಡಿದ ತನಿಖಾ ತಂಡ ದಾಳಿಗೆ ಮೊದಲಾಯಿತು.
ಒಬ್ಬ ಸೂಕ್ಷ್ಮಜೀವಿ ವಿಜ್ಞಾನಿಯಾಗಿ ಈ ದಾಳಿಯ ಮುಂದಾಳತ್ವವಹಿಸಿ ಆಶ್ರಮ ಪ್ರವೇಶ ಮಾಡುತ್ತಿರುವುದು ಮೈಕ್ ಸ್ಕೀಲ್ಸ್ ಅವರಿಗೆ ಒಂದು ರೋಚಕ ಅನುಭವವಾಗಿತ್ತು. ಯಾವುದೇ ಆಕ್ರಮಣ ಅಥವಾ ಪ್ರತಿರೋಧವಿಲ್ಲದೆ ಆಶ್ರಮವನ್ನು ಪರಿಶೀಲಿಸಲಾಯಿತು. ಆದರೆ ಅಲ್ಲಿದ್ದ ಒಂದು ಸಣ್ಣ ಪ್ರಯೋಗಾಲಯವು ಮತ್ತಾವುದೇ ಪ್ರತಿಷ್ಠಿತ ಪ್ರಯೋಗಾಲಯದಷ್ಟೇ ಸುಸಜ್ಜಿತವಾಗಿರುವುದನ್ನು ಕಂಡು ಮೈಕ್ ಸ್ಕೀಲ್ಸ್ ಅವರಿಗೆ ಪರಮಾಶ್ಚರ್ಯವಾಯಿತು.
ತನಿಖೆಯಲ್ಲಿ ಸಾಲ್ಮೆನೆಲಾ ಟೈಫಿಮೂರಿಯಮ್ ನ ವಿವಿಧ ಹಂತದ ಹಲವು ಪ್ರಯೋಗಗಳ ಕುರುಹುಗಳು ಸಿಕ್ಕವು. ಅವರಿಗೆ ನೀಡಲಾಗಿದ್ದ ಸೂಚನೆಯ ಪ್ರಕಾರ ಅವೆಲ್ಲವನ್ನೂ ಮೈಕ್ ಸ್ಕೀಲ್ಸ್ ವಶಕ್ಕೆ ಪಡೆದರು. ಸಾಲ್ಮೆನೆಲಾ ವಿಸ್ಫೋಟದ ತನಿಖೆಗೆ ಅವುಗಳು ಪ್ರಮುಖ ಸಾಕ್ಷ್ಯಾಧಾರಗಳಾಗಿದ್ದವು.
ಈ ದಾಳಿಯ ನಂತರದ ಕೆಲವೇ ದಿನಗಳಲ್ಲಿ ರಜನೀಶ್ ತಮ್ಮ ಖಾಸಗಿ ಜೆಟ್ ಹತ್ತಿ ಅಮೆರಿಕ ತೊರೆಯಲು ಹೊರಟರು. ಅವರನ್ನು ವಲಸೆ ಅಕ್ರಮದ ಆಪಾದನೆಯ ಮೇಲೆ ಉತ್ತರ ಕರೋಲಿನದಲ್ಲಿ ಬಂಧಿಸಲಾಯಿತು.
ಆದೇ ಸಮಯಕ್ಕೆ ಆಶ್ರಮದ ಲ್ಯಾಬಿನಿಂದ ವಶಪಡಿಸಿಕೊಳ್ಳಲಾಗಿದ್ದ ಕುರುಹುಗಳನ್ನು ಪರೀಕ್ಷಿಸಿದ ವರದಿಗಳು ಸಹ ಹೊರಬಂದಿದ್ದವು. ಅವು ಸಾಲ್ಮನೆಲಾ ವಿಕೃತೀಕರಣದ ಇಡೀ ಚಿತ್ರಣವನ್ನು ವಿಜ್ಞಾನಿಗಳ ಮುಂದಿಟ್ಟಿದ್ದವು. ಅವು ಡೇಲ್ಸ್ ನ ಸಾಲ್ಮೆನೆಲಾ ವಿಸ್ಫೋಟದಲ್ಲಿ ಸಂಗ್ರಹಿಸಲಾಗಿದ್ದ ಮಾದರಿಯನ್ನು ತದ್ವತ್ತಾಗಿ ಹೋಲುತ್ತಿದ್ದವು.
ಆದರೆ ಈಗ ತನಿಖಾ ತಂಡ ಮತ್ತು ಸ್ಥಳೀಯ ಆಡಳಿತದ ಮುಂದೆ ಇದ್ದ ಪ್ರಶ್ನೆ ಎಂದರೆ ಏಕೆ ಈ ರಜನೀಶ್ ಎಂಬ ಸಂತ ಡೇಲ್ಸ್ ಎಂಬ ಸಣ್ಣ ಊರಿನ ಜನರಿಗೆ ಸಾಮೂಹಿಕವಾಗಿ ವಿಷವುಣಿಸಲು ಹೊರಟಿದ್ದರು ಎಂಬುದು!! ಈ ವಿಷವಿಕ್ಕುನ ಕ್ರಿಯೆಯಲ್ಲಿ ರಜನೀಶರ ಕೈವಾಡವಿತ್ತೇ? ಈ ಪ್ರಯತ್ನಗಳ ಅರಿವು ಅವರಿಗಿತ್ತೇ? ಅಥವಾ ಅವರ ಕಣ್ಣಳತೆಯೊಳಗೆ ಇನ್ನಾರೋ ಇವೆಲ್ಲವನ್ನು ಮಾಡಿದ್ದರೋ ಎಂಬುದು ಸಹ ಅವರಿಗೆ ತಿಳಿಯಬೇಕಿತ್ತು. ಇದರಿಂದಾಗಿ ತನಿಖೆಯ ಫಲಿತಾಂಶದಲ್ಲಿ ಅಗಾಧ ವ್ಯತ್ಯಾಸಗಳಾಗುತ್ತಿದ್ದವು.
ಇದಾದ ನಂತರದಲ್ಲಿ ತನಿಖಾ ತಂಡ ಮತ್ತೆ ಮತ್ತೆ ಆಶ್ರಮವನ್ನು ತನಿಖೆಗೆ ಒಳಪಡಿಸಿತು. ಆಗ ಸಿಕ್ಕ ವಿವರಗಳು ತಂಡವನ್ನು ಬೆಚ್ಚಿ ಬೀಳಿಸಿದವು. ಈ ಸಾಮೂಹಿಕ ವಿಷವಿಕ್ಕುವ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಒಂದು ತಂಡವನ್ನು ರೂಪಿಸಲಾಗಿತ್ತು. ಇದರೊಂದಿಗೆ ತನಿಖಾ ತಂಡ ಮತ್ತೊಂದು ವಿಲಕ್ಷಣ ಸಂಗತಿ ಎಂದರೆ ಮಾ ಶೀಲಾಳ ಸೂಚನೆಯ ಮೇರೆಗೆ ಇಡೀ ಊರಿನಲ್ಲಿದ್ದ ಸಾರ್ವ ಜನಿಕ ಟೆಲಿಫೋನುಗಳನ್ನು ಟ್ಯಾಪ್ ಮಾಡಲಾಗಿತ್ತು. ಪ್ರತೀ ಫೋನಿನಲ್ಲಿ ನಡೆಯುವ ಸಂಭಾಷಣೆಯನ್ನು ಪ್ರತ್ಯೇಕವಾಗಿ ಧ್ವನಿ ಮುದ್ರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.
ಅಂತಹ ಸಾವಿರಾರು ಧ್ವನಿಮುದ್ರಿತ ಟೇಪುಗಳ ದೊಡ್ಡ ದಾಸ್ತಾನನ್ನು ವಶಪಡಿಸಿಕೊಂಡ ತಂಡ ಹೌಹಾರಿತು. ಏಕೆಂದರೆ ವೈರುಗಳ ಮೂಲಕ ಇಷ್ಟೊಂದು ಫೋನುಗಳನ್ನು ಒಂದಕ್ಕೊಂದು ಸಂಪರ್ಕಿಸಿ, ಅವುಗಳನ್ನು ಧ್ವನಿ ಮುದ್ರಿಸಿಕೊಳ್ಳುವ ಕೃತ್ಯ ಇಡೀ ಅಮೆರಿಕದಲ್ಲಿಯೇ ಪ್ರಪ್ರಥಮವಾಗಿತ್ತು. ಇದು ಅಲ್ಲಿನ ಕಾನೂನಿನ ಪ್ರಕಾರ ಕಾನೂನು ಬಾಹಿರವಾಗಿತ್ತು.
ಈ ಮೂಲಕ ಇಡೀ ಊರಿನ ಜನರೊಂದಿಗೆ ತಮ್ಮದೇ ಆಶ್ರಮ ವಾಸಿಗಳ ಪ್ರತೀ ಚಲನ ವಲನದ ಮೇಲೆ ಮಾ ಶೀಲಾ ನಿಯಂತ್ರಣ ಹೊಂದಿದ್ದಳು. ಈ ಮಾತು ಕತೆಗಳನ್ನು ಆಧರಿಸಿ ಆಶ್ರಮದೊಳಗಿದ್ದ ಎಲ್ಲ ಗುಂಪುಗಳ ನಡೆ ನುಡಿಗಳು ಅವಳ ಗಮನಕ್ಕೆ ಬರುತ್ತಿದ್ದವು. ಇವುಗಳನ್ನು ಆಧರಿಸಿ ಅವರ ಮುಂದಿನ ನಡೆಯನ್ನು ರಹಸ್ಯ ಸ್ಥಳದಲ್ಲಿದ್ದ ಅವಳ ದುಂಡಾಕಾರದ ಹಾಸಿಗೆಯ ಮೇಲೆ ಕುಳಿತು ಅವಳ ಗುಪ್ತ ತಂಡ ತೀರ್ಮಾನ ಮಾಡುತ್ತಿತ್ತು. ಆದರೆ ಈ ಕಾನೂನು ಬಾಹಿರ ಕೆಲಸ ಊರವರಿಗಿರಲಿ ಬಹುತೇಕ ಆಶ್ರಮವಾಸಿಗಳಿಗೇ ತಿಳಿದಿರಲಿಲ್ಲ.
ಮುಂದುವರಿದ ತನಿಖೆಯಲ್ಲಿ ತೆರೆದುಕೊಳ್ಳುತ್ತಿದ್ದ ಮಾ ಶೀಲಾಳ ರಹಸ್ಯಗಳನ್ನು ಅರಗಿಸಿಕೊಳ್ಳುವ ಕೌಶಲ್ಯವಾಗಲೀ, ಸಂಪನ್ಮೂಲಗಳಾಗಲೀ ಇಲ್ಲದ ಸ್ಥಳೀಯ ತನಿಖಾ ಸಂಸ್ಥೆ ಅಂತಿಮವಾಗಿ ಎಫ್ ಬಿ ಐ ಸಹಾಯ ಕೋರಿತು.ಇದು ಬಹುತೇಕ ಅಂತರ್‌ರಾಷ್ಟ್ರೀಯ ಮಟ್ಟದ ವಿಷಯವಾದ್ದರಿಂದ ಈ ತನಿಖೆಯ ಮೇಲೆ ಮೊದಲಿನಿಂದಲೂ ಎಫ್ ಬಿ ಐ ಒಂದು ಕಣ್ಣಿಟ್ಟಿತ್ತು.
ಮಾ ಶೀಲಾಳ ಒಂದು ಖಾಸಗಿ ದಿವಾನಾಖಾನೆಯ ಪುಸ್ತಕಗಳ ಶೆಲ್ಫನ್ನು ಅಲುಗಾಡಿಸಿದ ತನಿಖೆದಾರರಿಗೆ ಇನ್ನೊಂದು ಪರಮಾಶ್ಚರ್ಯ ಕಾದಿತ್ತು. ಅಲ್ಲಿದ್ದ ಹಲವು ಪುಸ್ತಕದ ಶೆಲ್ಫುಗಳ ನಡುವಿನ ಒಂದು ಶೆಲ್ಫು ಇವರ ಒರಟು ತಳ್ಳಾಟಕ್ಕೆ ತೆರೆದುಕೊಂಡಿತು. ತೆರೆದ ಬಾಗಿಲಿನ ಹಿಂದೆ ತನಿಖೆದಾರರು ಕಣ್ಣಾಡಿಸಿದಾಗ ಅಲ್ಲಿ ಹಲವು ಸುರಂಗಮಾರ್ಗಗಳು ಕಂಡವು. ಇಂತಹ ಹಲವು ಸುರಂಗ ಮಾರ್ಗಗಳು ಆ ರಹಸ್ಯ ಕೊಠಡಿಯ ಒಳಗೆ ಇದ್ದವು. ಇವು ಅವರ ಜನರು ಅಗತ್ಯ ಬಿದ್ದಾಗ ತಪ್ಪಿಸಿಕೊಂಡು ಹೋಗಲು ನಿರ್ಮಿಸಿದ ಸುರಂಗಗಳಾಗಿದ್ದವು.
ತನಿಖೆಯನ್ನು ಮುಂದುವರಿಸಿದಾಗ ಅವರಿಗೆ ದೇಸೀ ಮಾದರಿಯ ಬಾಂಬುಗಳನ್ನು ತಯಾರಿಸುವ ಮಾರ್ಗದರ್ಶಿ ಕೈಪಿಡಿಗಳು ದೊರೆತವು. ಹಾಗೆಯೇ ಜೈವಿಕ ಭಯೋತ್ಪಾದನೆಗೆ ಬೇಕಾದ ಪರಿಕರಗಳು ಮತ್ತು ಮಾರ್ಗದರ್ಶಿಗಳು ದೊರೆತವು.
ಇಲ್ಲಿ ಸಾಲ್ಮನೆಲಾವನ್ನು ಆಂತರಿಕ ನಿಯಂತ್ರಣಕ್ಕೆ ಬದಲಾಗಿ ಬಾಹ್ಯ ನಿಯಂತ್ರಣಕ್ಕೆ ಬಳಸಲಾಗಿತ್ತು. ಅದರಲ್ಲೂ ರಾಜಕೀಯ ಮತ್ತು ಆಡಳಿತಾತ್ಮಕ ಆಧಿಕಾರ ನಿಯಂತ್ರಣ ಅವರ ಉದ್ದೇಶವಾಗಿತ್ತು ಎಂಬುದು ಅವರ ಸಾಲ್ಮನೆಲಾ ದಾಳಿಯ ಸಂದರ್ಭಗಳನ್ನು ನೋಡಿದರೆ ಕಾಣಬಹುದಿತ್ತು. ಅಂತಿಮವಾಗಿ ವಾಸ್ಕೋ ಕೌಂಟಿಯ ಅಧಿಕಾರ ಹಿಡಿಯುವುದು ಇವರ ಪ್ರಾಥಮಿಕ ಆದ್ಯತೆಯಾಗಿತ್ತು. ಇಂಥದ್ದೇ ಅರ್ಥ ಬರುವ ಪ್ರಶ್ನೆಯೊಂದನ್ನು ಸ್ಥಳೀಯ ಆಡಳಿತ ಮಂಡಳಿಯ ಚುನಾವಣೆಯ ಹೊತ್ತಿನಲ್ಲಿ ಮಾ ಶೀಲಾಳಿಗೆ ಸ್ಥಳೀಯ ಪತ್ರಕರ್ತನೊಬ್ಬ ಕೇಳಿದಾಗ?, ‘‘ಹೌದು ನೀನು ಅಂದುಕೊಂಡಿರುವುದು ಸರಿ. ಅದು ಏಕಾಗಬಾರದು?’’ ಎಂದು ಮಾ ಶೀಲಾ ಉತ್ತರಿಸಿದ್ದಳು.
ಆ ಚುನಾವಣೆಯ ಹೊತ್ತಿನಲ್ಲಿ ನಡೆದ ಸಾಲ್ಮನೆಲಾ ದಾಳಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಾದಲ್ಲಿ, ಸ್ಥಳೀಯ ಮತದಾರರನ್ನು ಮತಗಟ್ಟೆಗಳಿಗೆ ಬಾರದಂತೆ ಮಾಡಲು ಆವರನ್ನು ಅಸ್ವಸ್ಥಗೊಳಿಸುವುದು ಈ ಸಾಲ್ಮನೆಲಾ ದಾಳಿಯ ಪ್ರಮುಖ ಉದ್ದೇಶವಾಗಿತ್ತು ಎಂದು ಕೆಲವು ಸಾಮಾಜಿಕ ಮತ್ತು ರಾಜಕೀಯ ಪಂಡಿತರು ವ್ಯಾಖ್ಯಾನ ಮಾಡಿದ್ದರು. ಅಲ್ಲಿನ ವಾಸ್ತವಿಕ ಲೆಕ್ಕಾಚಾರದಂತೆ, ಸ್ಥಳೀಯರು ಮತದಾನಕ್ಕೆ ಬಾರದೇ ಹೋದಲ್ಲಿ, ಈಗಾಗಲೇ ಆಂಟೆಲೋಪ್‌ನಲ್ಲಿ ನೆಲೆಯೂರಿರುವ ರಜನೀಶಿಗಳು ಮತ್ತು ಇವರ ಪ್ರಭಾವಕ್ಕೆ ಒಳಗಾಗಿರುವ ಸ್ಥಳೀಯರು ಶೇಕಡಾ ನೂರು ಮತದಾನ ಮಾಡಿದಲ್ಲಿ ಮಾ ಶೀಲಾಳ ಉದ್ದೇಶ ಖಚಿತವಾಗಿ ಈಡೇರುತ್ತಿತ್ತು. ಹಾಗಾಗಿ ಸ್ಥಳೀಯ ಮತದಾರರನ್ನು ಮತಗಟ್ಟೆಯಿಂದ ದೂರ ಉಳಿಸಲು ಈ ಸಾಲ್ಮನೆಲಾ ಪ್ರಯೋಗ ಮಾಡಲಾಗಿತ್ತು ಎಂಬುದು ತನಿಖೆಯಿಂದ ಖಚಿತವಾದ ಸಂಗತಿಯಾಗಿತ್ತು.
ಆದರೆ ಈ ಚುನಾವಣೆಗೂ ಬಹು ಮುಂಚಿತವಾಗಿ ಅಂದರೆ ಸೆಪ್ಟಂಬರ್ ತಿಂಗಳಿನಲ್ಲಿ ಈ ದಾಳಿ ನಡೆದಿದ್ದೇಕೆ ಎಂಬ ಪ್ರಶ್ನೆಗೆ ಕೆಲವು ನಿಷ್ಪಕ್ಷಪಾತಿ ರಜನೀಶಿಗಳು ಹೇಳಿದ್ದೆಂದರೆ, ಅದೊಂದು ಪೂರ್ವ ಪ್ರಯೋಗ ಅಥವಾ ರಿಹರ್ಸಲ್ ಆಗಿತ್ತು ಎಂದು. ಆದರೆ ಅದೂ ಮೊಟ್ಟ ಮೊದಲ ಪ್ರಯೋಗವೇನೂ ಆಗಿರಲಿಲ್ಲ. ಅದಕ್ಕೂ ಮುಂಚೆಯೇ ಇಂತಹ ಸಣ್ಣ ಪುಟ್ಟ ಪ್ರಯೋಗಗಳು ನಡೆದಿದ್ದವು ಎಂದು ಹೇಳಿದ್ದರು.
ಆಗಿ ಹೋಗಿದ್ದ ಘಟನಾ ಕ್ರಮಗಳನ್ನು ಜೋಡಿಸಿ ನೋಡಿದಾಗ ಮತ್ತು ಅವುಗಳನ್ನು ಕುರಿತು ಜನಾಭಿಪ್ರಾಯ ಪಡೆದಾಗ ತೆರೆದುಕೊಂಡ ರಹಸ್ಯಗಳು ಇನ್ನಷ್ಟು ಭಯ ಜನಕವಾಗಿದ್ದವು. ಮಾ ಶೀಲಾಳ ಆದೇಶದ ಮೇರೆಗೆ ಅವಳ ತಂಡದ ರಹಸ್ಯ ಸದಸ್ಯರು ತಮ್ಮ ಕಲ್ಟಿನ ಕೆಂಪು ಬಣ್ಣದ ಮೇಲುಡುಗೆಯನ್ನು ಕಳಚಿ, ಜನಸಾಮಾನ್ಯರ ವೇಷದಲ್ಲಿ ಕೈಯಲ್ಲೊಂದು ಸ್ಪ್ರೇಯರ್ ಹಿಡಿದು ಇಡೀ ನಗರದ ಮನೆ ಬಾಗಿಲುಗಳ ಹಿಡಿಗಳಿಗೆ ಸಿಂಪಡಿಸಿ ಬಂದಿದ್ದರು. ಅದರಲ್ಲಿ ಸಾಲ್ಮನೆಲಾ ಮಿಶ್ರಣದ ದ್ರಾವಣ ಇತ್ತು. ಆದರೆ ಅದು ಜನರ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ನಂತರದ ಹಂತದಲ್ಲಿ ಆಗಸ್ಟ್ ತಿಂಗಳಿನಲ್ಲಿಯೇ ಇದಕ್ಕಿಂತ ಹೆಚ್ಚು ಸಾಂದ್ರತೆಯ ವಿಕೃತ ಸಾಲ್ಮನೆಲಾ ಇರುವ ದ್ರಾವಣವನ್ನು ಮಾರುಕಟ್ಟೆಗಳು ಮತ್ತು ಮಾಲುಗಳಲ್ಲಿ ಸಿಂಪಡಿಸಿ ಬಂದಿದ್ದರು. ಆದರೆ ಅದೂ ಸಹ ಇವರು ನಿರೀಕ್ಷಿಸಿದ್ದ ಮಟ್ಟಿಗೆ ಪರಿಣಾಮಕಾರಿ ಆಗಿರಲಿಲ್ಲ.
ಅಂತಿಮವಾಗಿ ಸೆಪ್ಟಂಬರ್ ತಿಂಗಳು ಚುನಾವಣೆಗೆ ಸಮೀಪದ ದಿನಾಂಕವನ್ನು ಆರಿಸಿಕೊಂಡ ಆ ಗುಂಪು ಮತ್ತೂ ಸುಧಾರಿತ ಸಾಲ್ಮನೆಲಾ ಮಿಶ್ರಣವನ್ನು ಆಯ್ದ ಹತ್ತು ಸಲಾಡ್ ಬಾರುಗಳ ಆಹಾರದ ಮೇಲೆ ಸಿಂಪರಣೆ ಮಾಡಿ ಬಂದರು. ಈ ಪ್ರಯೋಗದಲ್ಲಿ ನಗರದ ಸುಮಾರು 700 ಜನರು ಪ್ರಭಾವಿತರಾಗಿ ಆಸ್ಪತ್ರೆ ಸೇರಿದರು. ಇದರ ಮುಂದುವರಿದ ಭಾಗವಾಗಿ ಡೇಲ್ಸ್ ನಗರದ ಕುಡಿಯುವ ನೀರಿನ ಮೂಲ ಸಂಗ್ರಹಾಗಾರಕ್ಕೆ ಇದೇ ವಿಶಪ್ರಾಶನ ಮಾಡುವ ಪ್ರಯತ್ನ ಮಾಡಲಾಗಿತ್ತು ಎಂಬ ಸುದ್ದಿಯನ್ನು ಆಧರಿಸಿ ಮಾಡಿದ ತನಿಖೆಯಲ್ಲಿ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಲಿಲ್ಲ. ಆದರೆ ಅಂಥದ್ದೊಂದು ಪ್ರಯತ್ನ ನಡೆದಿರುವುದು ಖಚಿತವಾಗಿತ್ತು. ಆವರೆಗಿನ ತನಿಖೆಯಲ್ಲಿ ಕಂಡು ಬಂದಿರುವಂತೆ ಇಂತಹ ಪ್ರಯತ್ನಗಳಲ್ಲಿ ನಿರತವಾಗಿರುವ ಒಂದೇ ಒಂದು ಗುಂಪೆಂದರೆ ಅದು ಮಾ ಶೀಲಾಳ ರಹಸ್ಯ ತಂಡವಾಗಿತ್ತು ಎಂಬುದಲ್ಲಿ ಯಾವುದೇ ಸಂದೇಹವಿರಲಿಲ್ಲ.
ಜೈವಿಕ ಆಯುಧ ಸನ್ನದ್ಧರಾಗಿದ್ದ ಎಲ್ಲ ರಜನೀಶಿಗಳು ಚುನಾವಣೆಯಲ್ಲಿ ಇನ್ನಿಲ್ಲದಂತೆ ನೆಲ ಕಚ್ಚಿದರು. ಅಷ್ಟು ಹೊತ್ತಿಗೆ ಸೂಕ್ತ ಸಾಕ್ಷ್ಯಾಧಾರಗಳಿಂದ ಸನ್ನದ್ಧ್ದರಾಗಿದ್ದ ಸ್ಥಳೀಯ ಪೊಲೀಸರು ಆಹಾರ ಕಲಬೆರಕೆ ಮತ್ತು ಜೈವಿಕ ದಾಳಿಯ ಆರೋಪ ಹೊರಿಸಿ ಮಾ ಶೀಲಾ ಮತ್ತು ಪೂಜಾಳ ವಿರುದ್ಧ ಮೊಕದ್ದಮೆ ಹೂಡಿದರು. ಈ ಪಿತೂರಿ ಮತ್ತು ಅಪರಾಧದಲ್ಲಿ ಇಬ್ಬರೂ ಪಾಲುದಾರರಾಗಿದ್ದರು. ಇದನ್ನು ಆಧರಿಸಿ ಎಫ್‌ಬಿಐ ಮಾ ಶೀಲಾಳನ್ನು ಹಸ್ತಾಂತರಿಸುವಂತೆ ಯೂರೋಪಿನ ಮೇಲೆ ಒತ್ತಡ ಹೇರಿತು. ಅಂತಿಮವಾಗಿ ಇಬ್ಬರನ್ನೂ ಅಮೆರಿಕಗೆ ಹಸ್ತಾಂತರಿಸಲಾಯಿತು.
ಸ್ಥಳೀಯ ಕೋರ್ಟಿನಲ್ಲಿ ನಡೆದ ವಿಚಾರಣೆಯ ನಂತರ ಇಬ್ಬರಿಗೂ ಮೂರು ವರ್ಷಗಳ ಜೈಲು ಶಿಕ್ಷೆಯಾಗಿ, ಅವರನ್ನು ಫೆಡರಲ್ ಜೈಲಿನಲ್ಲಿರಿಸಲಾಯಿತು. ಶಿಕ್ಷೆ ಮುಗಿದ ಕೂಡಲೇ ಇಬ್ಬರೂ ಅಮೆರಿಕ ತೊರೆದು ಸ್ವಿಟ್ಸರ್‌ಲ್ಯಾಂಡ್ ಸೇರಿದರು. ಅಲ್ಲಿನ ರಾಜ್ಯ ಸರಕಾರ ಇವರಿಬ್ಬರ ಮೇಲೆ ವಿವಿಧ ರೀತಿಯಲ್ಲಿ ಪಿತೂರಿ ಮಾಡಿದ ಆರೋಪಗಳನ್ನು ಹೊರಿಸಿ ರಾಜ್ಯದ ಉನ್ನತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಸಿದ್ಧತೆಯಲ್ಲಿತ್ತು. ಇದರ ಸುಳಿವಿದ್ದ ಇಬ್ಬರೂ ತುರ್ತಾಗಿ ಅಲ್ಲಿಂದ ಪಲಾಯನ ಮಾಡಿದರು. ಸದ್ಯಕ್ಕೆ ಮಾ ಶೀಲಾ ವೃದ್ಧಾಪ್ಯ ತಲುಪಿದ್ದು ಒಂದು ನರ್ಸಿಂಗ್ ಹೋಮ್ ನಡೆಸುತ್ತಿರುವ ಸುದ್ದಿ ಇದೆ.
ಈ ನಡುವೆ ನಡೆದ ವಿವಿಧ ಕೋನಗಳ ತನಿಖೆಯಲ್ಲಿಯೂ ಈ ಇಡೀ ಪಿತೂರಿಯಲ್ಲಿ ಎಲ್ಲಿಯೂ ರಜನೀಶರ ಪ್ರಭಾವ ಇಲ್ಲವೇ ಹಸ್ತಕ್ಷೇಪವಿದ್ದ ಆಧಾರಗಳಿರಲಿಲ್ಲ. ಬಹುತೇಕ ಇದು ಅವರ ಕಣ್ಣ ರೆಪ್ಪೆಯ ಕೆಳಗೆ ಅವರ ಕಣ್ಣಿಗೆ ಬೀಳದಂತೆ ಸೃಷ್ಟಿಸಿದ ನಿಗೂಢ ವಿಷ ಸರ್ಪವಾಗಿತ್ತು. ಹಾಗಾಗಿ ರಜನೀಶರನ್ನು ಈ ಮೊಕದ್ದೆಮೆಯಿಂದ ಹೊರಗಿಡಲಾಯಿತು. ಆದರೆ ಅವರ ವಿರುದ್ಧ ವಲಸೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಯಿತು ಮತ್ತು ಅದರ ಆಧಾರದ ಮೇಲೆ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಯಿತು. 1990ರಲ್ಲಿ ಅವರು ಭಾರತದಲ್ಲಿ ನಿಧನರಾದರು.
ಉಪಸಂಹಾರ
ಇವೆಲ್ಲ ಆದ ನಂತರದಲ್ಲಿ ಅಮೆರಿಕ ತನ್ನ ವಿರುದ್ಧ ನಡೆದ ಈ ಮೊಟ್ಟ ಮೊದಲ ಜೈವಿಕ ಪಿತೂರಿಯ ಕುರಿತು ವಿಜ್ಞಾನಿಗಳಿಂದ ಆಳವಾದ ತನಿಖೆ ಮಾಡಿಸಿತು. ಇದರ ವರದಿಗಳೂ ಹೊರಬಂದವು. ಆದರೆ ಈ ವರದಿಯನ್ನು ಸಾರ್ವಜನಿಕಗೊಳಿಸದಂತೆ ಕೇಂದ್ರೀಯ ರೋಗ ನಿಯಂತ್ರಣ ಪ್ರಾಧಿಕಾರ ಸರಕಾರವನ್ನು ಕೋರಿತು. ಇದನ್ನೇ ಮಾದರಿಯಾಗಿಟ್ಟುಕೊಂಡು ಅನೇಕ ಕಿಡಿಗೇಡಿಗಳು ಇದನ್ನು ನಕಲು ಮಾಡುವ ಸಾಧ್ಯತೆಗಳನ್ನು ಆಧರಿಸಿ ಕೇಂದ್ರ ಈ ಸಲಹೆ ನೀಡಿತ್ತು. ಹಾಗಾಗಿ ಇದನ್ನು ತಡೆ ಹಿಡಿಯಲಾಯಿತು.
ಇದಾದ ಕೆಲವೇ ವರ್ಷಗಳಲ್ಲಿ ಇಂತಹ ಜೈವಿಕ ದಾಳಿಗಳು ಅಮೆರಿಕ ಮಾತ್ರವಲ್ಲ ಇತರೆ ದೇಶಗಳಲ್ಲಿಯೂ ಮರುಕಳಿಸಿದವು. ಇವುಗಳ ಪ್ರಮಾಣ ಹೆಚ್ಚಿದಾಗ ಇವುಗಳನ್ನು ನಿಯಂತ್ರಿಸುವುದು ಹೇಗೆ ಎಂಬುದಕ್ಕೆ ಮಾದರಿಯಾಗಿ ಈ ವರದಿಯನ್ನು ಗಮನಿಸಬೇಕು ಎಂಬ ಆಶಾವಾದದೊಂದಿಗೆ 1997ರಲ್ಲಿ ಅಂದರೆ ಘಟನೆ ನಡೆದ 13 ವರ್ಷಗಳ ನಂತರ ಅಮೆರಿಕ ಸರಕಾರ ಈ ವರದಿಯನ್ನು ಸಾರ್ವಜನಿಕಗೊಳಿಸಿತು.
ಜಗತ್ತಿನಲ್ಲಿ ವಿವಿಧ ಸಿದ್ಧಾಂತ, ತತ್ವ, ಆಲೋಚನಾ ಕ್ರಮಗಳು ನಿರಂತರವಾಗಿ ಟಿಸಿಲೊಡೆಯುತ್ತಲೇ ಇರುತ್ತವೆ. ಅನೇಕವು ಅವುಗಳ ಯೋಗ್ಯತೆ, ಕ್ರಿಯಾಶೀಲತೆ, ಜನರ ಒಳಗೊಳ್ಳುವಿಕೆ/ಬೆಂಬಲ, ಪ್ರಸ್ತುತತೆ ಇತ್ಯಾದಿಗಳನ್ನು ಆಧರಿಸಿ ಕೆಲವೊಮ್ಮೆ ಉಚ್ಚ್ರಾಯ ಸ್ಥಿತಿ ತಲುಪುತ್ತವೆ. ಹಾಗೆಯೇ ಯಾವುದೋ ಒಂದು ಹಂತದ ಉನ್ನತಿ/ಪರಮೋನ್ನತಿಯ ನಂತರ ಕೆಲವು ಬಾರಿ ಅವರ ಕಣ್ಣ ಮುಂದೆಯೇ, ಸ್ವತಃ ಅವರ ಪಾದದ ಕೆಳಗಿನಿಂದಲೇ ಬಿರುಕು ಆರಂಭವಾಗಿ ಅವನತಿಯತ್ತ ಇಳಿದು ನುಚ್ಚುನೂರಾಗಿ ಹೋಗುತ್ತವೆ. ಕೆಲವು ಅವುಗಳ ಸೃಷ್ಟಿಕರ್ತನ ನಂತರದಲ್ಲಿ ಸಂಭವಿಸುತ್ತವೆ. ಕೆಲವು ಸಿದ್ಧಾಂತ ತತ್ವಗಳ ಪ್ರಭಾವ ಸಂಸ್ಥಾಪಕನ ನಂತರವೂ ಬಲವಾಗಿ ಉಳಿಯಬಹುದು. ಆದರೆ ದಿಕ್ಕು ದೆಸೆಗಳು ಬದಲಾಗುವುದಂತೂ ಸತ್ಯ. ಬುದ್ಧತ್ವವೇ ಇದಕ್ಕೆ ಹೊರತಾಗಿಲ್ಲ ಎನ್ನುವುದಾದರೆ?.! ನಮ್ಮ ಚಿಂತನೆಯ ದಿಕ್ಕು ದೆಸೆಗಳು ಏನಾಗಿರಬೇಕು ಎಂಬುದು ಅಂತಿಮವಾಗಿ ನಮ್ಮನ್ನೇ ಆಧರಿಸಿದೆಯಲ್ಲವೇ!?
(ವಿವಿಧ ಮೂಲಗಳಿಂದ)