ಎಳೆಗಳು
ಮಂಗಳಾ ಮತ್ತು ಉಷಾ ಇಬ್ಬರೂ ಬ್ಯಾಂಕ್ ಉದ್ಯೋಗಕ್ಕೆ ಜೊತೆಯಲ್ಲೇ ಸೇರಿದ್ದರು. ಅವರಿಬ್ಬರೂ ಒಟ್ಟಿಗೇ ಬ್ಯಾಂಕ್ ಪರೀಕ್ಷೆ ಬರೆದು ಇಂಟರ್‌ವ್ಯೆ ನಂತರ ಆಯ್ಕೆಯಾಗಿದ್ದರು. ಕಾಲೇಜಿನಲ್ಲಿಯೂ ಸಹಪಾಠಿಗಳಾಗಿದ್ದ ಅವರಿಬ್ಬರಿಗೂ ಸ್ವಲ್ಪ ನಿರಾಶೆಯಾದದ್ದು ಬ್ಯಾಂಕಿನಿಂದ ಆರ್ಡರ್ ಬಂದಾಗಲೇ. ಉಷಾಳಿಗೆ ಮುಂಬೈನ ವಿಲೆ ಪಾರ್ಲೆ ಈಸ್ಟ್‌ನಲ್ಲಿದ್ದ ಸರ್ಕಲ್ ಆಫೀಸಿಗೆ ನಿಯುಕ್ತಿಯಾಗಿತ್ತು. ಮಂಗಳಾಗೆ ಬೆಂಗಳೂರಿನ ಹೆಡ್ ಆಫೀಸಿಗೆ ನಿಯುಕ್ತಿಯಾಗಿತ್ತು. ಶಿರಾದ ಹತ್ತಿರದ ಹಳ್ಳಿಯೊಂದರ ಉಷಾಳ ಅಪ್ಪ ಅಮ್ಮ ಅವಳ ವಿದ್ಯಾಭ್ಯಾಸಕ್ಕಾಗಿಯೇ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದರು. ಈ ಸಹಪಾಠಿಗಳಿಬ್ಬರ ಬೆಸುಗೆ ಉಷಾಳ ಅಮ್ಮನ ಕಣ್ಣಿಗಂತೂ ಎರಡು ದೇಹಗಳು ಒಂದೇ ಆತ್ಮವೆಂಬಂತೆ ಕಾಣುತ್ತಿತ್ತು. ನೀವಿಬ್ಬರೂ ಒಬ್ಬನ್ನೇ ಮದ್ವೆ ಆಗ್ತೀರೇನೋ ಕಾಣೆ ಎನ್ನುತ್ತಿದ್ದರು. ಅಷ್ಟರಮಟ್ಟಿಗೆ ಅವರಿಬ್ಬರೂ ಅವಳಿಜವಳಿಯಾಗಿದ್ದರು.
ಬೆಂಗಳೂರಿನ ಆಫೀಸಿನಲ್ಲಿ ಅವರಿವರನ್ನು ಕಂಡು ಹೇಗಾದರೂ ಉಷಾಳನ್ನೂ ಬೆಂಗಳೂರಿಗೆ ಹಾಕಿಸಿಕೊಳ್ಳಲು ಸಾಧ್ಯವೇ ಎಂದು ಪ್ರಯತ್ನಪಟ್ಟಿದ್ದುಂಟು. ಸಿಕ್ಕಿರೋ ಕೆಲಸಕ್ಕೆ ಹೋಗಿ ಜಾಯಿನ್ ಆಗ್ರೀ ಮೊದಲು ಎಂದು ಒಬ್ಬಿಬ್ಬರು ಸ್ವಲ್ಪ ತಮಾಷೆ ಮತ್ತು ರೇಗುವ ದನಿಯಲ್ಲೇ ಹೇಳಿದ್ದರಿಂದ ಆ ಪ್ರಯತ್ನ ನಿಂತುಹೋಗಿತ್ತು. ಇಬ್ಬರೂ ಅವರವರ ಜಾಗಗಳಿಗೆ ಹೋಗಿ ರಿಪೋರ್ಟ್ ಮಾಡಿಕೊಂಡ ಎರಡು ಮೂರು ವಾರಗಳಲ್ಲೇ ಹೊಸದಾಗಿ ಆಯ್ಕೆಯಾದವರಿಗೆ ನಡೆಸುತ್ತಿದ್ದ ಟ್ರೈನಿಂಗ್ ಸೆಂಟರಿನಲ್ಲಿ ಎರಡು ವಾರಗಳ ಕಾಲ ಒಟ್ಟಿಗೆ ಒಂದೇ ರೂಮಿನಲ್ಲಿ ಕಳೆದಿದ್ದರು. ಟ್ರೈನಿಂಗ್ ಬೆಂಗಳೂರಿನಲ್ಲೇ ಇತ್ತು. ಇಬ್ಬರೂ ಕೆಲಸ ಸಿಕ್ಕ ಸಂತೋಷವನ್ನೂ, ಕಾಲೇಜಿನ ದಿನಗಳನ್ನೂ ಭಾರಿ ಖುಷಿಯ ಮೂಡಿನಲ್ಲಿ ರಾತ್ರಿಯಿಡೀ ಮಾತಾಡಿಕೊಳ್ಳುತ್ತಾ ಕಳೆದಿದ್ದರು. ಮಾತಿನ ನಡುನಡುವೆ ಸಹಪಾಠಿ ನೀಲಕಂಠನ ಪ್ರಸ್ತಾಪವಾಗುತ್ತಿತ್ತು. ಆದರೆ ಉಷಾ ಅವನ ಹೆಸರು ತೆಗೆದರೆ ಮಂಗಳಾ ಮಾತು ಮರೆಸುತ್ತಿದ್ದಳು. ಮಂಗಳಾ ಅವನ ಹೆಸರೆತ್ತಿದರೆ ಉಷಾ ಬೇರೆ ಸಂಗ್ತಿಗಳಿಗೆ ಜಾರುತ್ತಿದ್ದಳು. ಟ್ರೈನಿಂಗ್‌ನ ಕೊನೆಯ ದಿನ ಉಷಾ ಮುಂಬೈಗೆ ರಾತ್ರಿ ರೈಲು ಹಿಡಿದಾಗ ರೈಲ್ವೇ ಸ್ಟೇಷನ್ನಿಗೆ ಉಷಾಳ ಅಪ್ಪ ಅಮ್ಮ ಮತ್ತು ಮಂಗಳಾ ಹೋಗಿ, ಕಿಟಕಿಯಿಂದ ಅವಳ ಮುಖ ಕೈ ಕಾಣುವವರೆಗೂ ಕೈಬೀಸಿ ಬೀಳ್ಗೊಂಡಿದ್ದರು.
ಉಷಾ ಮುಂಬೈ ನಿವಾಸಿಯೇ ಆಗಿಬಿಟ್ಟಿದ್ದರೂ ಬೆಂಗಳೂರಿಗೆ ಬರುವ ಆಸೆಯನ್ನು ಮರೆತಿರಲಿಲ್ಲ. ಅವಳು ಅಲ್ಲಿರುತ್ತಾ, ಮಂಗಳಾ ಬೆಂಗಳೂರಿನಲ್ಲೇ ಇರುತ್ತಾ ಏಳೆಂಟು ವರ್ಷಗಳೇ ಕಳೆದಿವೆ. ಫೋನು, ವಾಟ್ಸ್‌ಆಪ್‌ಗಳಲ್ಲಿ ಸಂಪರ್ಕದಲ್ಲಿದ್ದರೂ ಕ್ರಮೇಣ ಕಡಿಮೆಯಾಗಿ ಆನಂತರ ನಿಂತೇ ಹೋದಂತಾಗಿತ್ತು. ಈಗ ಇದ್ದಕ್ಕಿದ್ದಂತೆ ಉಷಾಳಿಗೆ ಬೆಂಗಳೂರು ಆಫೀಸಿಗೇ ವರ್ಗವಾಗಿತ್ತು. ಈ ಸುದ್ದಿ ಗೆಳತಿ ಮಂಗಳಾಗೆ ಅತೀವ ಖುಷಿ ನೀಡಿತು. ಅವಳ ಬರುವನ್ನು ಎದುರು ನೋಡತೊಡಗಿದಳು. ಉಷಾ ಮುಂಬೈಗೆ ಹೋದಮೇಲೆ ಅವರ ಅಪ್ಪ ಅಮ್ಮ ಬಾಡಿಗೆ ಮನೆ ಖಾಲಿ ಮಾಡಿ ತಮ್ಮ ಊರಿಗೆ ಹಿಂತಿರುಗಿದ್ದರು. ಮಂಗಳಾ, ‘ನೀನು ಬಂದ ಕೂಡಲೆ ಅವರಿವರ ಮನೆಗಳಲ್ಲೋ, ಹೊಟೆಲಿನಲ್ಲೋ ಇರುವುದು ಬೇಡ, ನಾನು ಒಬ್ಬಳೇ ಇರೋದ್ರಿಂದ ನೀನು ಆರಾಮಾಗಿ ನಮ್ಮನೆಲೇ ಇರು. ಆಮೇಲೆ ನೋಡೋಣಂತೆ’ ಎಂದು ವಾಯ್ಸ್ ಮೆಸೇಜ್ ಕಳಿಸಿದಳು. ಉಷಾ ಕೂಡ ವಾಯ್ಸ್ ಮೆಸೇಜಲ್ಲಿ ‘ಆಗಲಿ’ ಎಂದು ಅವಳ ರೈಲು ಬೆಂಗಳೂರು ತಲುಪುವ ತಾರೀಖು ಸಮಯವನ್ನು ತಿಳಿಸಿದಳು.
*******
ಉಷಾ ಓಲಾ ಮಾಡಿಕೊಂಡು ಮನೆ ಮುಂದೆ ಮುಂಜಾನೆ ಇಳಿಯುವ ಹೊತ್ತಿಗೆ ಸರಿಯಾಗಿ ಮಂಗಳಾ ಕಾಫಿ ಡಿಕಾಕ್ಷನ್ ಹಾಕಿ ಬಾಗಿಲು ತೆರಕೊಂಡು ಕುರ್ಚಿಮೇಲೆ ಕುಳಿತು ಮೊಬೈಲ್ನಲ್ಲಿ ಮಗ್ನಳಾಗಿದ್ದಳು. ಅವಳ ಸೂಟ್‌ಕೇಸಗಳು ಇತರೆ ಚೀಲಗಳನ್ನು ಒಳಗೆ ತಂದಿಟ್ಟರು. ಓಲಾದವನಿಗೆ ದುಡ್ಡುಕೊಟ್ಟು ಒಳಗೆ ಬಂದ ಉಷಾ ಮಂಗಳಾಳನ್ನು ಗಾಢವಾಗಿ ಅಪ್ಪಿಕೊಂಡಳು.
‘ಗ್ರೇಟ್ ಕಣೆ ಉಷಾ, ಏನ್ ಕರಾಮತ್ ಮಾಡ್ದೆ. ಇದ್ದಕ್ಕಿದ್ದಂಗೆ ಟ್ರ್ಯಾನ್ಸ್‌ಫರ್ ತಗೊಂಡಿದೀಯಾ!’
‘ಮೊದ್ಲು ಒಂದು ಕಪ್ ಬಿಸಿ ಬಿಸಿ ಕಾಫಿ ಕೊಡು, ಎಲ್ಲ ಹೇಳ್ತೀನಿ. ಫೋನಲ್ಲಿ ಎಲ್ಲಾ ಹೇಳಕಾಗ್ಲಿಲ್ಲ.’
‘ಅಯ್ಯೊ ಮಾರಾಯ್ತಿ ನಾನು ರಾತ್ರಿಯಿಡೀ ನಿದ್ದೆನೇ ಮಾಡಿಲ್ಲ. ಬೆಳಿಗ್ಗೇನೇ ಎದ್ದು ಡಿಕಾಕ್ಷನ್ ಹಾಕಿ ರಡಿಯಾಗಿಟ್ಟಿದ್ದೀನಿ, ಕೂತ್ಕೋ ಬಂದೆ..’ ಎಂದು ಮಂಗಳಾ ಅಡಿಗೆಮನೆ ಕಡೆ ನಡೆದಳು. ಉಷಾ ಕೂಡ ಅವಳ ಹಿಂದೆಯೇ ಹೋದಳು.
ದೊಡ್ಡ ಪಿಂಗಾಣಿ ಮಗ್‌ಗಳಲ್ಲಿ ಕಾಫಿ, ಚಿಕ್ಕ ತಟ್ಟೆಯೊಂದರಲ್ಲಿ ಬಿಸ್ಕತ್ತುಗಳನ್ನು ಪೇರಿಸಿಕೊಂಡು ಬಂದ ಗೆಳತಿಯರು ಬೆತ್ತದ ಕುರ್ಚಿಗಳಲ್ಲಿ ಕುಳಿತರು.
‘ಈಗ ಹೇಳು ಏನ್ ಕರಾಮತ್ತು ಮಾಡ್ದೆ?’
‘ಅದಕ್ಕಿಂತ ಮೊದ್ಲು ಇಲ್ಲಿ ಕೇಳು, ನಮ್ಮಮ್ಮ ಯಾವಾಗಲೂ ಹೇಳ್ತಿರಲಿಲ್ಲವಾ? ನಾವಿಬ್ಬರೂ ಒಬ್ಬನ್ನೇ ಮದ್ವೆ ಆಗೋದೂಂತ!’ ಎಂದು ಜೋರಾಗಿ ನಗತೊಡಗಿದಳು, ಈಗ ನಮ್ಮಪ್ಪ ಅಮ್ಮ ಒಬ್ಬನನ್ನು ನೋಡಿ ಫೈನಲೈಸ್ ಮಾಡಿದ್ದಾರೆ. ಅವನು, ಅವ್ರ ಅಕ್ಕ ಭಾವ ಎಲ್ಲರೂ ಮುಂಬೈಗೂ ಬಂದಿದ್ದರು. ನಾನಂತೂ ಒಪ್ಪಿಕೊಂಡಿದೀನಿ. ಈಗ ನೀನು ಒಪ್ರೋಬೇಕು ಅಷ್ಟೇ!’ ಎಂದು ಮಂಗಳಾಳ ಎರಡೂ ಭುಜಗಳ ಮೇಲೆ ಕೈಹಾಕಿ ಇನ್ನಷ್ಟು ಜೋರಾಗಿ ನಗತೊಡಗಿದಳು. ಮಂಗಳಾ ಕೂಡ ನಕ್ಕುನಕ್ಕು ಉಷಾಳ ಅಮ್ಮನ ಮಾತುಗಳನ್ನು ನೆನಪಿಸಿಕೊಂಡು, ‘ಒಳ್ಳೇ ನಿಮ್ಮಮ್ಮಾ...ಕಣೇ! ನೀನೇನು ತಮಾಷೆ ಮಾಡ್ತಾ ಇದೀಯೋ, ಏನ್ಸಮಾಚಾರ’ ಎಂದಳು. ಉಷಾ ನಡೆದ ಸಂಗತಿಗಳನ್ನು ಹೇಳಿದಳು. ಹುಡುಗ ದೂರದ ನೆಂಟ. ತುಮಕೂರಿನಲ್ಲಿ ಇಂಜಿನಿಯರಿಂಗ್ ಕಾಲೇಜಲ್ಲಿ ಲೆಕ್ಚರರ್. ಮದುವೆ ವಿಷಯವನ್ನ ಬ್ಯಾಂಕ್‌ನ ಡೆಪ್ಯೂಟಿ ಮ್ಯಾನೇಜರ್‌ಗೆ ಹೇಳಿದಾಗ ಅವರು ಮೇಲಧಿಕಾರಿ ಜೊತೆ ಮಾತಾಡಿ ಈ
ಟ್ರ್ಯಾನ್ಸ್‌ಫರಿಗೆ ಕಾರಣವಾಗಿದ್ದನ್ನೆಲ್ಲಾ ಸಂಕ್ಷಿಪ್ತವಾಗಿ ಒಪ್ಪಿಸಿದಳು. ಮಂಗಳಾಗೂ ಮನಸ್ಸಿನ ಆಳದಿಂದ ಸಂತೋಷವಾಯಿತು. ಮತ್ತೊಮ್ಮೆ ಪ್ರೀತಿಯಿಂದ ಅಪ್ಪಿಕೊಂಡು, ‘ಕಂಗ್ರಾಚುಲೇಶನ್ಸ್ ಕಣೆ ಉಷಾ, ಐಯಾಮ್ ಸೋ ಹ್ಯಾಪೀ..’ ಅಂದಳು. ಇಬ್ಬರೂ ಕುಡಿದು ಮುಗಿಸಿದ್ದ ಕಾಫಿ ಮಗ್‌ಗಳನ್ನು ಹಿಡಿದು ಅಡಿಗೆ ಮನೆ ಕಡೆ ನಡೆದರು. ಮಂಗಳಾ ಸಿಂಕ್‌ನಲ್ಲಿದ್ದ ಒಂದೆರಡು ಪಾತ್ರೆ, ಕಾಫಿ ಮಗ್‌ಗಳನ್ನು ತೊಳೆಯತೊಡಗಿದಳು. ಉಷಾ ಹೊಸದಾಗಿ ಕೊಂಡಂತಿದ್ದ ಫ್ರಿಜ್ಜಿನ ಬಾಗಿಲನ್ನೊಮ್ಮೆ ತೆಗೆದು ಇಣುಕಿನೋಡಿ ಮುಚ್ಚಿದಳು.
‘ನೀನು ಇವತ್ತು ರೆಸ್ಟ್ ಮಾಡು, ನಾನು ಲಂಚ್ ಟೈಂಗೆ ಬಂದುಬಿಡ್ತೀನಿ,’ ಅಂದಳು ಮಂಗಳಾ.
‘ನೋ ವೇ, ನಾನು ಜಾಯ್ನಿಂಗ್ ಟೈಂ ಎಲ್ಲಾ ಮದ್ವೆಗೆ ಉಳಿಸಿಟ್ಟುಕೊಬೇಕು. ಇವತ್ತೇ ರಿಪೋರ್ಟ್ ಮಾಡ್ಕೊಂಡುಬಿಡ್ತೀನಿ,’
‘ಗ್ರೇಟ್! ಸ್ವಲ್ಪ ನೀನೂ ಹೆಲ್ಪ್ ಮಾಡು. ಬೇಗ್ಬೇಗ ಒಂದು ಉಪ್ಪಿಟ್ಟು ಮಾಡಿ, ರಡಿಯಾಗಿ ಹೊರಟ್ಬಿಡೋಣ. ರಾತ್ರಿಗೆ ಎಲ್ಲಾದ್ರೂ ಒಳ್ಳೆ ಹೊಟೆಲಿಗೆ ಊಟಕ್ಕೆ ಹೋಗಣ. ತುಂಬಾ ಮಾತಾಡ್ಬೇಕು ಕಣೆ, ಎಷ್ಟು ವರ್ಷ ಆಯ್ತು ನಾವು ಕೂತ್ಕಂಡು ಹರಟೆ ಕೊಚ್ಚಿ,’ ಎನ್ನುತ್ತಾ ಮಂಗಳಾ ಲಗುಬಗೆಯಿಂದ ಮನೆತುಂಬಾ ಓಡಾಡತೊಡಗಿದಳು. ಉಷಾಳ ಸಮಾನುಗಳನ್ನ ಅವಳಿಗಾಗಿ ರೆಡಿಮಾಡಿದ್ದ ರೂಮಿನಲ್ಲಿಟ್ಟಳು.
********
ಅವರಿಬ್ಬರೂ ಆಫೀಸಿಗೆ ಬಂದಾಗ ಅಷ್ಟೊತ್ತಿಗಾಗಲೆ ಬಂದಿದ್ದ ಕೆಲವರು ಮಂಗಳಾ ಜೊತೆಗೆ ಹೊಸದಾಗಿ ಬಂದವಳನ್ನು ನೋಡಿ ಯಾರೋ ಹೊಸಬರು ಅಂದುಕೊಳ್ಳುತ್ತಿದ್ದಂತೆಯೇ ಮಂಗಳಾ ಮುಂದೆ ಬಂದು ಅವರಿಗೆ ಉಷಾಳನ್ನು ಪರಿಚಯಿಸಿದಳು. ಸ್ವಲ್ಪ ಹೊತ್ತು ಅವರಿವರನ್ನು ಪರಿಚಯ ಮಾಡಿಕೊಟ್ಟ ನಂತರ ಉಷಾ ರಿಪೋರ್ಟ್ ಮಾಡಿಕೊಳ್ಳಬೇಕಾಗಿದ್ದ ಆಫೀಸರ್‌ನ ಚೇಂಬರಿಗೆ ಕರೆದುಕೊಂಡು ಹೋದಳು. ಅವತ್ತಿನ ಟಪಾಲು ನೋಡುತ್ತಿದ್ದ ಆಫೀಸರ್ ತಲೆಯೆತ್ತಿ ಇಬ್ಬರನ್ನೂ ನೋಡಿ ಕುಳಿತುಕೊಳ್ಳಲು ಸೂಚಿಸಿದರು. ಕುಳಿತುಕೊಳ್ಳುತ್ತಿದ್ದ ಮಂಗಳಾಳ ದೃಷ್ಟಿ ಆಫೀಸರ್ ಕೈಯಲ್ಲಿದ್ದ ‘ಗೃಹ ಪ್ರವೇಶ ಆಹ್ವಾನ ಪತ್ರಿಕೆ’ಯ ಮೇಲೆ ಬಿತ್ತು. ಅದನ್ನು ಗಮನಿಸಿದ ಆಫೀಸರ್,
‘ನೋಡಿ, ನನ್ನ ಫ್ರೆಂಡ್ ಒಬ್ಬರು ಎಷ್ಟು ಚೆನ್ನಾಗಿ ಹೊಸಮನೆ ಗೃಹಪ್ರವೇಶದ ಪತ್ರಿಕೆ ಮಾಡ್ಸಿದಾರೆ,’ ಎನ್ನುತ್ತಾ ಅದನ್ನು ಮಂಗಳಾ ಕಡೆಗೆ ಸರಿಸಿದರು. ಅದನ್ನು ಕೈಗೆತ್ತಿಕೊಳ್ಳುತ್ತಲೇ, ಉಷಾ ರಿಪೋರ್ಟ್ ಮಾಡಿಕೊಳ್ಳೊದಕ್ಕೆ ಬಂದಿರುವುದನ್ನು ತಿಳಿಸಿ ಆಹ್ವಾನ ಪತ್ರಿಕೆಯ ಮೇಲೆ ಕಣ್ಣಾಡಿಸತೊಡಗಿದಳು. ಒಂದು ಸುಂದರವಾದ ಮನೆಯುಳ್ಳ ಚಿತ್ರವಿತ್ತು. ಸುತ್ತಲೂ ಬಣ್ಣಗಳಲ್ಲಿ ಅಚ್ಚಾಗಿದ್ದ ಬಳ್ಳಿ, ಬಳ್ಳಿಯಲ್ಲಿ ಮೊಗ್ಗು, ಹೂವುಗಳಿದ್ದ ಸೊಗಸಾದ ಚಿತ್ರ. ನೋಡಿದ ಕೂಡಲೆ ಯಾರನ್ನಾದರೂ ಆಕರ್ಷಿಸುವಂತಹ ಡಿಸೈನಿನ ಅಕ್ಷರಗಳಲ್ಲಿ ಪತ್ರಿಕೆ ಪ್ರಿಂಟಾಗಿತ್ತು. ಕೆಲವೇ ಸಾಲುಗಳಲ್ಲಿ ತುಂಬ ಕಾವ್ಯಾತ್ಮಕವಾಗಿದ್ದ ಬರಹದ ಕೊನೆಯಲ್ಲಿ ‘ನಿಮ್ಮನೆಯೇ ನಮ್ಮನೆ ಬನ್ನಿ ಸುಮ್ಮನೆ! ಎಂದಿತ್ತು. ಅದರ ಕೆಳಗೆ ‘ಶ್ರೀಮತಿ ಸೌಭಾಗ್ಯ ಮತ್ತು ಕೆಳಮನೆ ನೀಲಕಂಠ’ ಎಂಬುದನ್ನು ನೋಡಿದ ಮಂಗಳೆಗೆ ಕೆಲವು ಕ್ಷಣಗಳ ಕಾಲ ತನ್ನ ದೃಷ್ಟಿಯನ್ನು ಅಲುಗಿಸಲು ಸಾಧ್ಯವೇ ಆಗಲಿಲ್ಲ. ‘ಕೆಳಮನೆ ನೀಲಕಂಠ’ ಎಂಬುದನ್ನು ಮತ್ತೆ ಮತ್ತೆ ಓದಿಕೊಂಡಳು. ಅವಳಿಗೆ ಒಂದು ಕ್ಷಣ ಏನೂ ತೋಚದೆ ತಲೆಸುತ್ತುವಂತಾಯಿತು. ಆಫೀಸರ್ ಮುಖವನ್ನೊಮ್ಮೆ ನೋಡಿದಳು. ಅವರು ಆವೇಳೆಗಾಗಲೆ ತಮ್ಮ ಸಹಾಯಕರನ್ನು ಕರೆಯಿಸಿ ಉಷಾಳ ಜಾಯ್ನಿಂಗ್ ರಿಪೋರ್ಟನ್ನು ಟೈಪ್ ಮಾಡಿಸಿ ಉಷಾಳ ಸಹಿಯನ್ನು ಪಡೆಯುತ್ತಿದ್ದರು! ಅಷ್ಟೂ ಹೊತ್ತು ತಾನು ಆ ಜಾಗದಲ್ಲಿ ಇರಲಿಲ್ಲವೇನೋ ಎಂಬಂತೆ ಆಹ್ವಾನ ಪತ್ರಿಕೆಯಲ್ಲಿ ಮಗ್ನಳಾಗಿದ್ದ ಅವಳು, ‘ಸರ್, ಕೆಳಮನೆ ನೀಲಕಂಠ ಅವರು ನಿಮಗೆ ಗೊತ್ತಾ?’ ಎನ್ನುತ್ತಾ ಪತ್ರಿಕೆಯಲ್ಲಿ ನೀಲಕಂಠನ ಹೆಸರಿದ್ದಲ್ಲಿಗೆ ತನ್ನ ತೋರು ಬೆರಳಿಟ್ಟು ಉಷಾಳ ಕಡೆಗೆ ಸರಿಸಿದಳು. ಆಫೀಸರ್, ‘ನನ್ನ ಕ್ಲೋಸ್ ಫ್ರೆಂಡು ಅವರು. ನಮ್ಮೂರಿನವರೇ. ತುಂಬಾ ಫೇಮಸ್ ರೈಟರ್. ತುಂಬಾ ಬರೀತಿರ್ತಾರೆ. ನೀವು ಕೇಳಿದೀರಾ ಅವ್ರ ಹೆಸರ್ನಾ?’ ಅಂದರು, ಮಂಗಳಾ ಉಷಾಳ ಕಡೆಗೆ ತಿರುಗುತ್ತಾ ನಿಧಾನವಾಗಿ, ‘ಸರ್, ಅವರು ನಮ್ಮಿಬ್ಬರಿಗೂ ಕ್ಲಾಸ್‌ಮೇಟ್ ಸರ್,’ ಅಂದಳು. ಗೃಹಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಈಗ ತೀವ್ರವಾಗಿ ತಲ್ಲೀನಳಾಗಿದ್ದವಳು ಉಷಾ. ಆಫೀಸರ್, ‘ಹೌದೇನ್ರೀ! ನೀವೆಲ್ಲ ಕ್ಲಾಸ್‌ಮೇಟ್ಸಾ!! ಗ್ರೇಟ್... ಅವನು ತುಂಬಾ ರೆವೆಲ್ಯೂಷ್ನರಿ ಮನ್ಷ ಅಲ್ವಾ? ವೆರಿ ಬೋಲ್ಡ್ ಪರ‌್ಸನ್. ಕಾರ್ಡ್ ತುಂಬ ಚೆನ್ನಾಗಿ ಮಾಡ್ಸಿದಾರೆ ಅಲ್ವೇನ್ರೀ ಉಷಾ....ಎನಿವೇ ವೆಲ್ಕಂ ಟು ಅವರ್ ಆಫೀಸ್. ಚೆನ್ನಾಗಿ ಕೆಲ್ಸ ಮಾಡಿ. ಆಫೀಸ್ ಏಓ ಅವ್ರನ್ನ ಕಾಣಿ, ಅವ್ರ ನಿಮ್ಮ ಜಾಗ ಎಲ್ಲ ವ್ಯವಸ್ಥೆ ಮಾಡ್ತಾರೆ,’ ಅಂದರು. ಉಷಾ ನಿಧಾನವಾಗಿ ಪತ್ರಿಕೆಯನ್ನೇ ನೋಡುತ್ತ ಅದನ್ನು ಆಫೀಸರ್ ಮುಂದಿಟ್ಟು ಎದ್ದಳು.
ಚೇಂಬರ್‌ನಿಂದ ಹೊರಗೆ ಬಂದ ಮೇಲೆ ಮಂಗಳಾ ಅತ್ಯಾಶ್ಚರ್ಯದಿಂದ, ‘ಮನೇ ಕಟ್ಸಿಬಿಟ್ಟಿದಾನಲ್ಲೇ ಉಷಾ!’ ಅಂದಳು. ಅವಳ ಮಾತು ಉಷಾಳಿಗೆ ಕೇಳಿಸಿತೊ ಇಲ್ಲವೋ, ಅವಳು ಏನೋ ಯೋಚಿಸುತ್ತಿರುವಂತೆ ಕಂಡಳು. ಗೃಹಪ್ರವೇಶದ ಕಾರ್ಡ್ ನೋಡಿದ ಗಳಿಗೆಯಿಂದ ಅವರಿಬ್ಬರಲ್ಲಿ ಏನೋ ತಳಮಳ ಶುರುವಾಗಿತ್ತು. ಇಬ್ಬರೂ ಖಿನ್ನತೆಯ ದಾರಿಯಲ್ಲಿ ನಿಧಾನವಾಗಿ ಹೆಜ್ಜೆಯಿಡತೊಡಗಿದಂತೆ ಕಾಣತೊಡಗಿದರು. ಇಬ್ಬರ ಮನಸ್ಸಿನಲ್ಲೂ ಮೂಡಿದ ಎಂಥದೋ ತುಮುಲ ಅವರ ಮುಖದ ಮೇಲೆ ಮೆಲ್ಲನೆ ಹರಡಿಕೊಳ್ಳತೊಡಗಿತು. ಮಂಗಳಾ ಅನ್ಯಮನಸ್ಕಳಾಗಿ ತನ್ನ ಕೆಲಸದ ಸೀಟಿನೆಡೆಗೆ ನಡೆದಳು. ಉಷಾ ಏಓ ರೂಮಿನ ಕಡೆಗೆ ಹೋದಳು. ಅವರಿಬ್ಬರೂ ಆಫೀಸಿನಲ್ಲಿ ಹೆಚ್ಚೇನೂ ಕೆಲಸ ಮಾಡಲಿಲ್ಲ. ಆಫೀಸಿನ ಸಿಬ್ಬಂದಿ ಒಂದು ಜಾಗದಲ್ಲಿ ಉಷಾಳ ಕೆಲಸದ ಟೇಬಲ್, ಕಂಪ್ಯೂಟರ್ ಇತ್ಯಾದಿ ಸಿದ್ಧಗೊಳಿಸಿಕೊಟ್ಟರು.
*******
ಆಟೋ ಹಿಡಿದು ಮನೆಗೆ ಹೊರಟ ಅವರಿಬ್ಬರೂ ಪರಸ್ಪರ ಯಾವ ಮಾತನ್ನೂ ಆಡಲಿಲ್ಲ. ಇನ್ನೇನು ಮನೆ ಸಿಕ್ಕಿತು ಅನ್ನುವಷ್ಟರಲ್ಲಿ ಉಷಾ ತನ್ನಷ್ಟಕ್ಕೆ ತಾನೇ ಹೇಳಿಕೊಂಡಳೊ ಎಂಬಷ್ಟು ಮೆಲುದನಿಯಲ್ಲಿ, ‘ನನ್ನ ತುಂಬಾ ಹಚ್ಚಿಕೊಂಬಿಟ್ಟಿದ್ದ ನೀಲಕಂಠ,’ ಅಂದಳು. ಸರಕ್ಕನೆ ಅವಳೆಡೆಗೆ ಕತ್ತು ಹೊರಳಿಸಿ ಮಂಗಳಾ ನೋಡಿದಾಗ ಉಷಾ ದಿಟ್ಟಿಸುತ್ತಾ ಹೊರಗೆ ನೋಡುತ್ತಿದ್ದಳು. ಮನೆ ಬೀಗ ತೆಗೆದು ಒಳಗೆ ಬಂದ ಅವರಿಬ್ಬರು ಯಾವ ಮಾತೂ ಆಡದೆ ಮೌನವಾಗಿ ಕುರ್ಚಿಗಳಲ್ಲಿ ಕುಳಿತರು.
‘ನೀಲಕಂಠ ನಿನ್ನ ತುಂಬಾ ಹಚ್ಚಿಕೊಂಡಿದ್ನಾ?’
‘ಹೂಂ... ನಾನು ಹಾಡೋದನ್ನಂತೂ ತುಂಬ ಇಷ್ಟಪಡ್ತಿದ್ದ. ಯಾವಾಗ ಮೀಟ್ ಮಾಡಿದ್ರೂ ಹಾಡು ಹೇಳೂಂತ ತುಂಬ ಬಲವಂತ ಮಾಡ್ತಿದ್ದ.’
‘ಇನ್ನೇನು ಮಾಡ್ತಿದ್ದ?’
‘ಅವನಿಗೆ ಓ ನನ್ನ ಚೇತನ, ಆಗು ನೀ ಅನಿಕೇತನ... ತುಂಬ ಇಷ್ಟವಾಗ್ತಿತ್ತು. ತಿರಗಾತಿರಗಾ ಅದನ್ನೇ ಹಾಡು ಅಂತಿದ್ದ. ಎದುರಿಗಿದ್ದ ಟೇಬಲ್ ಮೇಲಿದ್ದ ಪುಟ್ಟ ಗಡಿಯಾರವನ್ನೇ ದಿಟ್ಟಿಸಿ ನೋಡುತ್ತಾ ಉಷಾ ಮುಂದುವರಿಸಿದಳು, ‘ನಾನು ಯಾವಾಗ ಅದನ್ನ ಹಾಡಿದ್ರೂ ಎದ್ದುಬಂದವ್ನೇ ಇಲ್ಲಿಗೆ ತಲೆಯಿಟ್ಟುಕೊಂಡು ಕಣ್ಣು ಮುಚ್ಚಿಕೊಂಡು....’ ಎನ್ನುವಷ್ಟರಲ್ಲಿ ಮಾತು ಮುಂದುವರಿಸಲಾಗದಂತೆ ಅವಳ ಗಂಟಲು ಉಬ್ಬಿತು, ಕಣ್ಣುಗಳು ತುಂಬಿಕೊಂಡವು. ಎದ್ದುನಿಂತ ಅವಳು ದಡದಡನೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು. ಉಷಾ ‘ಇಲ್ಲಿಗೆ ತಲೆಯಿಟ್ಟುಕೊಂಡು’ ಅನ್ನುವುದನ್ನು ಹೇಳುವಾಗ ತನ್ನೆರಡೂ ಕೈಗಳನ್ನ ತನ್ನ ಎದೆಯ ಕಡೆಗೆ ತೋರಿಸಿಕೊಂಡದ್ದನ್ನು ಕಂಡ ಮಂಗಳಾ ಆ ಕ್ಷಣದಲ್ಲೇ ಎದ್ದು ತನ್ನ ರೂಮಿನಕಡೆಗೆ ಹೆಜ್ಜೆಹಾಕತೊಡಗಿದ್ದಳು.
ಬೆಳಿಗ್ಗೆ ಹರ್ಷದಿಂದ ತೊನೆದಾಡುತ್ತಿದ್ದ ಇಬ್ಬರೂ ಗೆಳತಿಯರು ಸಂಜೆ ತಮ್ಮ ರೂಮುಗಳಲ್ಲಿ ಗಾಢ ನೆನಪುಗಳಲ್ಲಿ ಹುದುಗಿ ಹೋದರು.
ರೂಮಿಗೆ ಬಂದ ಉಷಾ ಹಾಸಿಗೆಯಲ್ಲಿ ಉರುಳಿದಳು. ನೀಲಕಂಠನ ಮುಖ ಎದುರಿಗೆ ಬಂತು. ಸದಾ ಕೆದರಿದಂತಿರುತ್ತಿದ್ದ ಅವನ ಗುಂಗುರು ಕೂದಲು ಅವನ ಮುಖದ ಬಣ್ಣದ ಜೊತೆಗೆ ಸ್ಫರ್ದೆಗಿಳಿದಂತಿರುತ್ತಿತ್ತು. ಕಡೆದಿಟ್ಟ ಕಪ್ಪಶಿಲೆಯಂತಿದ್ದ ನೀಲಕಂಠನ ಕಪ್ಪು ಬಣ್ಣವೇ ಎಲ್ಲಕ್ಕಿಂತ ಮೊದಲು ಉಷಾಳನ್ನು ಸೆಳೆದದ್ದು. ಕಾಲೇಜಿಗೆ ಸೇರಿದ ಮೊದಲ ವರ್ಷದಿಂದಲೇ ಅವನು ಉಷಾಳ ಆಕರ್ಷಣೆಯ ಹುಡುಗನಾಗಿದ್ದ. ತಡವಾಗಿ ಪರಿಚಯವಾದರೂ ಕಾಲೇಜಿನ ಕಾರ್ಯಕ್ರಗಳಲ್ಲಿ ಹಾಡುತ್ತಿದ್ದ ಅವಳನ್ನು ನೀಲಕಂಠ ಮೆಚ್ಚಿದ್ದ. ಅವರಿಬ್ಬರ ಸ್ನೇಹ ಅವಳು ಅವನಿಗಾಗಿಯೇ ಏಕಾಂತದಲ್ಲಿ ಹಾಡುತ್ತಿದ್ದ ಗಳಿಗೆಗಳಲ್ಲಿ ಅವಳ ಎದೆಗೆ ತನ್ನ ತಲೆಯೊರಗಿಸಿ ಕಣ್ಣುಮುಚ್ಚಿ ಧ್ಯಾನಿಸುತ್ತಾ ಮಲಗಿ ನಿದ್ರೆಹೋಗಿಬಿಡುವಷ್ಟು ಬೆಳೆದುಬಿಟ್ಟಿತ್ತು. ಅವನು ಮಲಗಿರುವ ಅಷ್ಟೂಹೊತ್ತು ಅವಳು ಅವನ ಗುಂಗುರುಗೂದಲಿನ ತಲೆಯಲ್ಲಿ ತನ್ನ ಬೆರಳುಗಳನ್ನು ಸಾವಧಾನವಾಗಿ ಆಡಿಸುತ್ತಲೇ ಇರುತ್ತಿದ್ದಳು. ಕಾಲೇಜಿನಲ್ಲಿ ಓದಿನ ಕಡೆಗಷ್ಟೇ ಗಮನಕೊಡದೆ, ಇನ್ನಿತರ ಹಲವು ಚಟುವಟಿಕೆಗಳಲ್ಲಿ ಅವನ ಆಸಕ್ತಿ ಹೆಚ್ಚಾಗಿತ್ತು. ಮುಷ್ಕರ, ಧರಣಿ ಇತ್ಯಾದಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಿದ್ದ. ಯಾವುದೇ ಕಾಲೇಜಿನ ಚರ್ಚಾಸ್ಫರ್ಧೆಗಳಿಗೆ ಹೋದರೂ ಶೀಲ್ಡ್‌ಗಳನ್ನು ಹೊಡೆದುಕೊಂಡು ಬರುತ್ತಿದ್ದ.
ಉಷಾಳಿಗೆ ತನ್ನ ಮೈ ಬಿಸಿಯಾದಂತೆನಿಸಿತು. ಎದ್ದು ಫ್ಯಾನ್ ಹಾಕಿ ಮತ್ತೆ ಹಾಸಿಗೆಯಲ್ಲಿ ಉರುಳಿದಳು.
ತಾನು ಯಾಕೆ ಅವನನ್ನು ಕಳಕೊಂಡುಬಿಟ್ಟೆ ಎಂಬ ಪ್ರಶ್ನೆ ಅವಳ ಮನಸ್ಸಿಗೆ ಬಂತು. ಕಾಲೇಜಿನ ಅಂತಿಮ ವರ್ಷದ ಕೊನೆಕೊನೆಯ ತಿಂಗಳುಗಳಲ್ಲಿ ಅವಳು ತೀವ್ರವಾದ ಚಿಂತೆಯಲ್ಲಿ ತೊಡಗಿದ್ದ ದಿನಗಳು ನೆನಪಾದವು. ಎಷ್ಟೋ ದಿನ ಊಟ ಬಿಟ್ಟಿದ್ದಳು. ‘ನಾನು ನಿನ್ನ ಮದ್ವೆ ಆಗ್ಬೇಕು’, ಅಂತ ಇವತ್ತು ಅವನನ್ನ ಕೇಳಿಯೇ ಬಿಡಬೇಕೂಂತ ನೂರಾರು ಸಲ ತೀರ್ಮಾನ ಮಾಡಿಕೊಂಡಿದ್ದಳು. ಒಂದು ದಿನವೂ ತಾನು ತನ್ನ ಮನಸ್ಸಿನಲ್ಲಿದ್ದದನ್ನ ಹೇಳಲಿಲ್ಲ; ಹೇಳಿಬಿಡಬೇಕಾಗಿತ್ತು, ಎಂದು ಈಗ ಪರಿತಪಿಸಿದಳು. ತನ್ನನ್ನು ತಡೆದದ್ದು ಏನು, ಯಾರು? ಎಂದು ಯೋಚಿಸಿದಳು. ಮನೆ ನೆನಪಾಯಿತು. ಸದಾ ಮಡಿ, ಪೂಜೆ, ಹೋಮಹವನಾದಿಗಳಲ್ಲಿ ಮುಳುಗಿರುತ್ತಿದ್ದ ಕುಟುಂಬ. ತನ್ನೊಳಗಿನ ಆಸೆಯನ್ನ ಮನೆಯಲ್ಲಿ ಯಾರಬಳಿಯಾದರೂ ಹೇಳಿಕೊಳ್ಳಬೇಕೆಂಬ ಆಲೋಚನೆ ಕೂಡ ಮನಸ್ಸಿನಲ್ಲಿ ಸುಳಿಯದಿರುವಂಥ ಕಟ್ಟುಪಾಡಿನ ಪಂಜರದಲ್ಲಿದ್ದೆನಲ್ಲ. ಧೈರ್ಯಮಾಡಿ ಮನೆಯಲ್ಲಿ ಹೇಳಿಯೇಬಿಡಬೇಕಾಗಿತ್ತು ಎಂದುಕೊಂಡಳು. ಮರುಗಳಿಗೆಯಲ್ಲೇ, ಹಾಗೆ ಮಾಡಿದ್ದಿದ್ದರೆ ನಾನು ಇಲ್ಲಿಯವರೆಗೆ ಬದುಕಿರುತ್ತಿದ್ದೆನೆ ಎಂಬ ಪ್ರಶ್ನೆ ಎದುರಾಯಿತು. ನೀಳವಾದ ನಿಟ್ಟುಸಿರು ಬಿಟ್ಟಳು. ಅಕಸ್ಮಾತ್ ನೀಲಕಂಠನ್ನೇ, ‘ನನ್ನನ್ನ ಎಲ್ಲಿಗಾದರೂ ಕರ್ಕೊಂಡು ಹೋಗು, ನಾನು ನಿನ್ನ ಜೊತೆ ಎಲ್ಲಿ ಬೇಕಾದರೂ ಜೀವನ ಮಾಡ್ತೀನಿ, ಗುಡಿಸಿಲಾದ್ರೂ ಸೈ’, ಅಂತ ಕೇಳಿದ್ದಿದ್ದರೆ ಅವನು ನಿಜವಾಗಲೂ ಮದುವೆ ಮಾಡ್ಕೋತಿರಲಿಲ್ಲವಾ? ಅಂದುಕೊಳ್ಳುತ್ತಾ ಬಾಗಿಲು ತೆರೆದು ಹಾಲಿಗೆ ಬಂದು ಕುಳಿತಳು.
*******
ಉಷಾ, ‘ಇಲ್ಲಿಗೆ ತಲೆಯಿಟ್ಟುಕೊಂಡು’ ಅನ್ನುವುದನ್ನು ಹೇಳುವಾಗ ತನ್ನೆರಡೂ ಕೈಗಳನ್ನು ತನ್ನ ಎದೆಯ ಕಡೆಗೆ ತೋರಿಸಿಕೊಂಡದ್ದನ್ನು ಕಂಡ ಮಂಗಳಾ ಆ ಕ್ಷಣದಲ್ಲೇ ಎದ್ದು ನಿಂತು ತನ್ನ ರೂಮಿನಕಡೆಗೆ ಹೆಜ್ಜೆ ಹಾಕಿದ್ದಳಲ್ಲವೇ. ಒಳಹೊಕ್ಕವಳೇ ಬಾಗಿಲನ್ನು ಸಪ್ಪಳವಾಗುವಂತೆ ಸ್ವಲ್ಪ ಜೋರಾಗಿಯೇ ಮುಚ್ಚಿ ಮಂಚದ ಪಕ್ಕವಿದ್ದ ಕುರ್ಚಿಯಲ್ಲಿ ಕುಳಿತು ಎರಡೂ ಕೈಗಳಿಂದ ತನ್ನ ಮುಖವನ್ನು ಮುಚ್ಚಿಕೊಂಡು ವೇಗವಾಗಿ ಉಸಿರಾಡತೊಡಗಿದಳು. ಸಾಮಾನ್ಯವಾಗಿ ಭಾವುಕಳಾಗದ ಮಂಗಳಾಗೆ ಅಳು ಬಂತು. ಅಳಬಾರದು ಎಂದು ಮನಸ್ಸನ್ನು ಗಟ್ಟಿಮಾಡಿಕೊಳ್ಳಲು
ಯತ್ನಿಸಿದಳು. ಆದರೆ ಅತ್ತಳು. ಅವಳ ಎರಡೂ ಅಂಗೈಗಳು ಒದ್ದೆಯಾದವು. ಅವಳು ಅವನನ್ನು ನೀಲಿ ಎಂದು ಕರೆಯುತ್ತಿದ್ದಳು. ನೀಲಿ ಯಾವಾಗ ಕರೆದರೂ ಅವನು ಮಾಡುತ್ತಿದ್ದ ಧರಣಿ, ಮುಷ್ಕರ, ಮೆರವಣಿಗೆಗಳಿಗೆ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದವಳು ಮಂಗಳಾ ಒಬ್ಬಳೇ. ಹಣೆಗೆ ಇಲ್ಲ ತೋಳಿಗೆ ಕಪ್ಪುಬಣ್ಣದ ರಿಬ್ಬನ್ ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಾ ಅವನ ಜೊತೆಗೆ ಎಲ್ಲಿಗೆ ಕರೆದರೂ ಹೋಗುತ್ತಿದ್ದ ದಿನಗಳು
ನೆನಪಾದವು. ಆ ದೃಶ್ಯಗಳು ಈಗ ಅವಳ ಕಣ್ಣಮುಂದೆ ಸಾಲು ಸಾಲಾಗಿ ಮೆರವಣಿಗೆ ಮಾಡತೊಡಗಿದವು. ತಕ್ಷಣ ಎದ್ದವಳೇ ಕಪಾಟಿನ ಅಡಿಯಲ್ಲಿದ್ದ ರಟ್ಟಿನ ಪೆಟ್ಟಿಗೆಯನ್ನು ಹೊರತೆಗೆದು ಅಲ್ಲೇ ನೆಲದಮೇಲೆ ಕುಳಿತು ಅದರಲ್ಲಿದ್ದ ಮೂರ್ನಾಲ್ಕು ಡೈರಿಗಳನ್ನು ತೆಗೆದಳು. ಕಾಲೇಜಿನ ದಿನಗಳಲ್ಲಿ ದಿನಚರಿ ಬರೆಯುವ ಅಭ್ಯಾಸ ಅವಳಿಗಿತ್ತು. ಯಾವತ್ತು, ಎಲ್ಲಿ, ಯಾಕೆ ಧರಣಿ, ಪ್ರತಿಭಟನೆ, ಮೌನ ಮೆರವಣಿಗೆ ಇತ್ಯಾದಿಗಳನ್ನು ಅವಳು ಡೈರಿಯಲ್ಲಿ ಬರೆಯುತ್ತಿದ್ದಳು. ಅವಳಿಗೆ ಚೆನ್ನಾಗಿ ನೆನಪಿತ್ತು. ಕಾಲೇಜಿನ ಅಂತಿಮ ವರ್ಷದ ಕೊನೇ ದಿನಗಳಲ್ಲಿ ನೀಲಿ ಒಂದು ದಿನ ಮಂಗಳೆಯನ್ನು ಕರೆದು, ‘ಕ್ಯಾಂಟೀನಿಗೆ ಹೋಗೋಣ ಬಾ, ನಿನ್ನತ್ರ ಏನೋ ಮಾತಾಡ್ಬೇಕು,’ ಅಂದಿದ್ದ. ಕ್ಯಾಂಟೀನಿನಲ್ಲಿ ಅವರಿಬ್ಬರೂ ಯಾವಾಗಲೂ ಕುಳಿತುಕೊಳ್ಳುತ್ತಿದ್ದ ಮೂಲೆಯ ಟೇಬಲ್‌ನಲ್ಲಿ ಕುಳಿತಿದ್ದರು. ಆದಿನ ಅವನು ತನ್ನ ಕಣ್ಣುಗಳನ್ನು ದಿಟ್ಟಿಸಿ ನೋಡಿದಂತೆ ಎಂದೂ ನೋಡಿರಲಿಲ್ಲ. ತನ್ನ ಕೈಯನ್ನು ಹಿಡಿದು, ‘ನಾವಿಬ್ಬರೂ ಮದ್ವೆ
ಆಗನಾ!’ ಅಂದುಬಿಟ್ಟ! ಆಗಿನ ಅವನ ನೋಟ, ಅವನ ಕಪ್ಪಾದ ರೂಪಸೌಂದರ್ಯ ದಿವ್ಯವೆನಿಸುತ್ತಿತ್ತು. ಎಷ್ಟೋ ಹೊತ್ತು ಅವರಿಬ್ಬರೂ ಯಾವ ಮಾತುಕತೆಯೂ ಇಲ್ಲದೆ ಕುಳಿತಿದ್ದರು. ಅವಳೂ ಅವನ ಕೈಗಳನ್ನು ತುಂಬ ಗಟ್ಟಿಯಾಗಿ ಹಿಡಿದಿದ್ದ ನೆನಪು ಮನಸ್ಸಿನ ಆಳದಿಂದ ನುಗ್ಗಿಬಂತು.
ಅದೇದಿನ ರಾತ್ರಿ ಮಂಗಳಾ ಡೈರಿಯಲ್ಲಿ ಬರೆದಿದ್ದನ್ನೇ ಈಗ ಹುಡುಕಿದ್ದು. ಅವಳಿಗೆ ಚೆನ್ನಾಗಿ ನೆನಪಿತ್ತು. ಅದು ತೆಳು ಹಸಿರು ಬಣ್ಣದ ಡೈರಿ, ಹೌದು ತೆಳು ಹಸಿರು ಬಣ್ಣದ ಡೈರಿ. ಅಂದು ಅವಳು ಬರೆದಿದ್ದ ಪುಟ ಸಿಕ್ಕಿತು. ಎರೆಡೆರಡು ಬಾರಿ ಓದಿಕೊಂಡಳು. ಅದನ್ನು ಕೈಯಲ್ಲಿ ಹಿಡಿದು ನಿಧಾನವಾಗಿ ರೂಮಿನ ಬಾಗಿಲು ತೆರೆದು ಹಾಲಿಗೆ ಬಂದಳು. ಅಲ್ಲಿ ಉಷಾ ಕುಳಿತಿದ್ದಳು.
**********
‘ಉಷಾ ಅವನು ನಿನ್ನ ಹಾಡು ಕೇಳ್ತಾ ಸುಮ್ಮನೆ ಮಲಗಿರ್ತಿದ್ನಾ?
‘ಹೂಂ...’
‘ಅವನು ನಿನ್ನ ಮದ್ವೆ ಆಗ್ತೀನಿ ಅಂದಿದ್ನಾ?’
‘ಇಲ್ಲ...’
‘ನೀನು ಅವನ್ನ ಮದ್ವೆ ಆಗಬೇಕು ಅನ್ನಕಂಡಿದ್ಯಾ?’
‘ಹೂಂ...’
‘ಯಾಕೆ ಆಗಲಿಲ್ಲ?’
‘ಆಗಲಿಲ್ಲ ಅಷ್ಟೆ..’ ಎನ್ನುತ್ತ ಮಂಗಳಾ ಕಡೆಗೆ ನೋಡಿದಳು. ಅವರಿಬ್ಬರ ಕಣ್ಣುಗಳ ಸುತ್ತಲಿನ ತೇವ ಲೈಟಿನ ಬೆಳಕಿಗೆ ಹೊಳೆಯುತ್ತಿತ್ತು. ಮಂಗಳಾ ಕೈಲಿದ್ದ ಡೈರಿಯಲ್ಲಿ ತಾನು ಬರೆದಿದ್ದ ಪುಟವನ್ನು ತೋರಿಸಿ, ‘ಇದು ನಾನು ಎಷ್ಟೋ ವರ್ಷಗಳ ಹಿಂದೆ ಬರೆದಿದ್ದೆ...’ ಎಂದು ಉಷಾಳಿಗೆ ಕೊಟ್ಟಳು. ಆ ಪುಟದಲ್ಲಿ ಮಂಗಳಾ ಹೀಗೆ ಬರೆದಿದ್ದಳು: ನೀಲಿ ಇವತ್ತು ಕ್ಯಾಂಟೀನಲ್ಲಿ ಮದ್ವೆ ಆಗನಾ ಅಂತ ಹೇಳಿದ್ದು ಕೇಳಿ ಆಶ್ಚರ್ಯ ಆಯ್ತು. ತುಂಬ ಖುಷಿ ಆಯ್ತು. ನಂಗೇನೂ ಮಾತೇ ಬರಲಿಲ್ಲ. ಅವನನ್ನ ಮದ್ವೆ ಆಗಬೇಕೂಂತ ಆಸೆ ಆಗುತ್ತೆ. ಆದ್ರೆ ಈ ಮನುಷ್ಯ ಯಾವಾಗ ನೋಡಿದ್ರೂ ಪ್ರತಿಭಟನೆ, ಮುಷ್ಕರಾಂತ ಅವರಿವರ ಜೊತೆ ತಿರುಗುತಾನೆ. ಇವನು ಮದುವೆ ಆಗಿ, ಮನೆ ಮಾಡಿ ಎಲ್ರೂ ಸಂಸಾರ ಮಾಡಿದಂಗೆ ಮಾಡ್ತಾನಾ ಅನ್ಸುತ್ತೆ... ಇದೆಲ್ಲ ಆಗಿಹೋಗೋ ಕೆಲಸ ಅಲ್ಲ. ತಿರಗಾ ಅವನೇನಾದ್ರೂ ಕೇಳಿದ್ರೆ ಏನಂತ ಹೇಳಬೇಕೋ... ಗೊತ್ತಿಲ್ಲ. ಅದನ್ನು ಓದಿ ಉಷಾ ಡೈರಿಯನ್ನು ಟೀಪಾಯ್ ಮೇಲಿಟ್ಟಳು.
ಅವರಿಬ್ಬರೂ ರಾತ್ರಿಯೂಟವನ್ನು ಮರೆತು ನೀಲಕಂಠನೊಡಗಿನ ತಮ್ಮ ತಮ್ಮ ಸ್ನೇಹ ಮತ್ತು ಸ್ನೇಹದಾಚೆಗಿನ ಎಳೆಗಳನ್ನು ಸುತ್ತಿಕೊಳ್ಳುತ್ತಿದ್ದರು.