ಬಾಗಿಲ ಮರೆಯ ನೆರಳು ಮತ್ತು ಹತ್ತು ರೂಪಾಯಿ

ಸುಮಾರು 10 ವರ್ಷದ ಹಿಂದಿನ ವಿಷಯ. ಆಗ ನಾನು ಮಂಗಳೂರಿನ ಪಾಂಡೇಶ್ವರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದೆ. ಚಿಕ್ಕ ಎರಡು ಬೆಡ್ ರೂಂ, ಅಡುಗೆ ಕೋಣೆ, ಒಂದು ಹಾಲ್‌ನ ಮನೆಯದು. ನನ್ನ ಪತ್ನಿ, ಮೂವರು ಮಕ್ಕಳು ಹಾಲ್‌ನಲ್ಲಿ ಮಲಗುತ್ತಿದ್ದರೆ, ನಾನು ಬೆಡ್ ರೂಂನಲ್ಲಿ ಮಲಗುತ್ತಿದ್ದೆ. ಆಗ ನನ್ನ ಮಕ್ಕಳು ಕಾಲೇಜು ಓದುತ್ತಿದ್ದರು. ನನ್ನ ಕೊನೆಯ ಮಗಳು ಮಲಿಕಾ ರಾತ್ರಿ ಮಲಗುವಾಗ ಹೇಳಿದ ಮಾತು ಹೀಗಿತ್ತು:- ಅಪ್ಪಾ, ನೀವು ಕೋಣೆಯಲ್ಲಿ ಒಂಟಿಯಾಗಿ ಮಲಗಬೇಡಿ. ಮಲಗಿದರೂ ಬಾಗಿಲು ಹಾಕಿಕೊಳ್ಳಬೇಡಿ, ಬಾಗಿಲು ಹಾಕಿದರೂ ಒಳಗಿನಿಂದ ಚಿಲಕ ಹಾಕಬೇಡಿ-ಎಂದು. ಮಕ್ಕಳಿಗೆ ತಾಯಿ ಮೇಲೆ ಪ್ರೀತಿ ಜಾಸ್ತಿ, ಆದರೆ ಹೆಣ್ಣು ಮಕ್ಕಳಿಗೆ ತಂದೆಯ ಮೇಲೆ ಪ್ರೀತಿ ಜೊತೆ ಕಾಳಜಿ ಜಾಸ್ತಿ ಇರುತ್ತದೆ ಎಂದು ನನಗೆ ನನ್ನ ತಾಯಿ ಹೇಳಿದ ಮಾತು ನೆನಪಾಗಿ ಅಂದು ನಗು ಬಂದಿತ್ತು. ಆದರೆ ಆನಂತರ ನಡೆದ ಕೆಲವು ಘಟನೆಗಳಿಂದ ಮಲಿಕಾಳ ಅಂದಿನ ಮಾತುಗಳು ನನಗೆ ನೆನಪಿಗೆ ಬಂದಿತ್ತು ಮತ್ತು ಆ ಚಿಕ್ಕ ಪ್ರಾಯದಲ್ಲೇ ಅವಳಿಗಿದ್ದ ಕಾಳಜಿಯ ಬಗ್ಗೆ ಮೆಚ್ಚುಗೆಯಾಗಿತ್ತು.
ಘಟನೆ ಒಂದು: ಹಿರಿಯ ಸಾಹಿತಿ, ಹಲವಾರು ಕೃತಿಗಳನ್ನು ರಚಿಸಿದ ನನ್ನ ಆತ್ಮೀಯರೊಬ್ಬರು ಮಂಗಳೂರಿನಲ್ಲಿ ವಾಸವಾಗಿದ್ದರು. ಅವರ ಮಕ್ಕಳು ಬೇರೆ ಬೇರೆ ಊರುಗಳಲ್ಲಿ ಉದ್ಯೋಗದಲ್ಲಿದ್ದುದ್ದರಿಂದ ಪತಿ-ಪತ್ನಿ ಇಬ್ಬರೇ ಒಂದು ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಒಂದು ದಿನ ಬೆಳಗ್ಗೆ ಪತ್ನಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗಿ ಬಂದು ಎಷ್ಟು ಬೆಲ್ ಬಾರಿಸಿದಾಗಲೂ, ಕದ ತಟ್ಟಿದಾಗಲೂ ಬಾಗಿಲು ತೆರೆಯಲಿಲ್ಲ. ಭಯವಾಗಿ ತನ್ನ ಪರ್ಸ್‌ನಲ್ಲಿದ್ದ ಚಾವಿಯಿಂದ ಬಾಗಿಲು ತೆರೆದಾಗ ಆ ಹಿರಿಯ ಸಾಹಿತಿ ಹಾಲ್‌ನಲ್ಲಿ ಕವುಚಿ ಬಿದ್ದಿದ್ದರು. ಹೃದಯಾಘಾತವಾಗಿ ಆಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಘಟನೆ ಎರಡು :- ಅವರೊಬ್ಬ ಅಂತರ್‌ರಾಷ್ಟ್ರೀಯ ಮಟ್ಟದ ಯುವ ಉದ್ಯಮಿ. ಜನಾನುರಾಗಿ. ಬಹಳ ಪ್ರಸಿದ್ಧ ವ್ಯಕ್ತಿ. ಕೊಡುಗೈ ದಾನಿ. ಒಂದು ದಿನ ಹೊಟೇಲ್‌ವೊಂದರಲ್ಲಿ ತಂಗಿದ್ದವರು ಮರುದಿನ ಇಡೀ ದಿನ ಬಾಗಿಲು ತೆರೆಯದೆ ಇದ್ದಾಗ, ಹೊಟೇಲ್‌ನವರು ಅವರ ಬಳಿ ಇದ್ದ ಇನ್ನೊಂದು ಚಾವಿಯಿಂದ ಬಾಗಿಲು ತೆರೆದು ನೋಡಿದಾಗ ಆ ವ್ಯಕ್ತಿ ಉಸಿರು ನಿಲ್ಲಿಸಿ ಮಲಗಿದ್ದರು, ಅವರಿಗೆ ಹೃದಯಾಘಾತವಾಗಿತ್ತು.
ಘಟನೆ ಮೂರು:- ಇದು ನನ್ನ ಪಕ್ಕದ ಊರಿನಲ್ಲಿ ನಡೆದ ಘಟನೆ. ಅವರೊಬ್ಬ ಮಸೀದಿಯ ಧರ್ಮ ಗುರುಗಳು. ಮಸೀದಿಯ ಪಕ್ಕದಲ್ಲೇ ವಾಸಿಸಲು ಅವರಿಗೊಂದು ಕೋಣೆಯಿತ್ತು. ರಾತ್ರಿ ಮಸೀದಿಗೆ ಬಂದವರೆಲ್ಲರ ಜೊತೆ ನಗುನಗುತ್ತಾ ಮಾತನಾಡಿ, ಊಟ ಮುಗಿಸಿ ಕೋಣೆಯಲ್ಲಿ ಮಲಗಿದ್ದರು. ಬೆಳಗ್ಗೆ ಕೋಣೆಯ ಬಾಗಿಲು ತೆರೆಯದೇ ಇದ್ದಾಗ ಮಸೀದಿಗೆ ಬಂದಿದ್ದ ಕೆಲವರು ಬಾಗಿಲು ಬಡಿದರೂ ಉತ್ತರ ಬರದಿದ್ದಾಗ ಸಂಶಯಗೊಂಡು ಬಾಗಿಲು ಒಡೆದು ನೋಡಿದರೆ ಗುರುಗಳು ಹೃದಯಾಘಾತದಿಂದ ನೆಲಕ್ಕೊರಗಿದ್ದರು. ಕೋಣೆಯ ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನೋವನ್ನು ಸಹಿಸಲೂ ಆಗದೆ, ಕಿರುಚಿ ಯಾರನ್ನೂ ಕರೆಯಲೂ ಆಗದೆ ಅವರು ಪಟ್ಟ ಕಷ್ಟ , ನೋವು, ಸಂಕಟ, ಒದ್ದಾಟ ಇಡೀ ಕೋಣೆಯಲ್ಲಿ ಕಾಣುತ್ತಿತ್ತು.
ಘಟನೆ ನಾಲ್ಕು :- ಎರಡು ತಿಂಗಳ ಹಿಂದೆ ನಾನು ಬೆಂಗಳೂರಿಗೆ ಹೋಗಿದ್ದೆ. ಬೆಳಗ್ಗೆ ಹೊಟೇಲ್‌ನಲ್ಲಿ ತಿಂಡಿ ತಿಂದು ನಾನು ವಾಸವಾಗಿದ್ದ ಲಾಡ್ಜ್‌ನ ಕೋಣೆಗೆ ಹೋಗಬೇಕಾದರೆ ಪಕ್ಕದ ಲಾಡ್ಜ್ ಮುಂದೆ ಜನ ಸೇರಿರುವುದು ಕಂಡಿತು. ಮಾಧ್ಯಮದವರ ವಾಹನಗಳು ಅಲ್ಲಿ ನಿಂತಿದ್ದವು. ವರದಿಗಾರರು ಮೈಕ್, ಕ್ಯಾಮರಾ ಹಿಡಿದು ಮಾತನಾಡುವುದು ಕಾಣಿಸಿತು. ಏನಿರಬಹುದು ಎಂದು ಕುತೂಹಲದಿಂದ ಹತ್ತಿರ ಹೋಗಿ ಅಲ್ಲಿ ನಿಂತಿದ್ದ ಒಬ್ಬರಲ್ಲಿ ಕೇಳಿದೆ-ಪಕ್ಕದ ಜಿಲ್ಲೆಯ ಉನ್ನತ ಹುದ್ದೆಯಲ್ಲಿರುವ ರಾಜ್ಯ ಸರಕಾರದ ಅಧಿಕಾರಿಯೊಬ್ಬರು ಈ ಲಾಡ್ಜ್‌ನಲ್ಲಿ ಕೋಣೆ ಪಡೆದಿದ್ದರಂತೆ. ಅಂದು ಬೆಳಗ್ಗೆ ಆ ಅಧಿಕಾರಿಯ ಜೊತೆ ಬೆಂಗಳೂರಿನ ಅಧಿಕಾರಿಗಳಿಗೆ ಮೀಟಿಂಗ್ ಇತ್ತಂತೆ. ಮಧ್ಯಾಹ್ನವಾದರೂ ರೂಂನಲ್ಲಿದ್ದ ಈ ಅಧಿಕಾರಿ ಬರಲಿಲ್ಲ. ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಸಂಶಯಗೊಂಡು ಕೋಣೆಗೆ ಬಂದು ಬಾಗಿಲು ಬಡಿದರೆ ಬಾಗಿಲು ತೆರೆಯಲಿಲ್ಲ. ಆಗ ಲಾಡ್ಜ್‌ನವರ ನೆರವಿನೊಂದಿಗೆ ಪೊಲೀಸರನ್ನು ಕರೆಸಿ ಬಾಗಿಲು ತೆಗೆದು ನೋಡಿದರೆ, ಆ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟಿದ್ದು ಕಂಡು ಬಂತಂತೆ-ಎಂದರು.
ಸರಕಾರಿ ಉದ್ಯೋಗದಲ್ಲಿರುವ ನನ್ನ ಆತ್ಮೀಯ ಗೆಳೆಯನಿಗೆ ಇತ್ತೀಚೆಗೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗವಾಯಿತು. ಬೆಂಗಳೂರಿಗೆ ಹೋಗುವ ಮುನ್ನ ಅವರು ನನ್ನ ಬಳಿ ಬಂದಿದ್ದರು. ‘ಬೆಂಗಳೂರಿನಲ್ಲಿ ಎಲ್ಲಿ ಮನೆ ಮಾಡಿದ್ದೀರಿ’ ಕೇಳಿದೆ.‘ಇಲ್ಲ, ಮನೆ ಮಾಡಿಲ್ಲ, ಹೋಗಿ ಹುಡುಕಬೇಕು. ಇಲ್ಲದಿದ್ದರೆ ಎಲ್ಲಿಯಾದರೂ ಒಂದು ಚಿಕ್ಕ ಹೊಟೇಲ್‌ನಲ್ಲಿ ಸದ್ಯಕ್ಕೆ ಒಂದು ಕೋಣೆ ಮಾಡುವುದು’ ಎಂದರು. ‘ಒಂಟಿಯಾಗಿ ವಾಸಿಸಬೇಡಿ. ಮನೆ ಸಿಗುವ ತನಕ ಯಾರಾದರೂ ಗೆಳೆಯರ ಮನೆಯಲ್ಲಿಯೋ, ಬಂಧುಗಳ ಮನೆಯಲ್ಲಿಯೋ ಇರಿ. ಅನಿವಾರ್ಯ ಸಂದರ್ಭ ಹೊರತು ಒಂಟಿಯಾಗಿ ವಾಸಿಸುವುದು ಸರಿಯಲ್ಲ. ಜೊತೆಯಲ್ಲಿ ಯಾರಾದರೂ ಒಬ್ಬರು ಇರಲಿ’ ಎಂದೆ. ಅವರು ನಕ್ಕು ಸುಮ್ಮನಾದರು. ನಂತರ ಅವರು ಮನೆ ಮಾಡಲಿಲ್ಲ. ಹೊಟೇಲ್‌ನ ಒಂದು ಪುಟ್ಟ ಕೋಣೆಯಲ್ಲಿ ವಾಸವಾಗಿದ್ದರು. ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಊರಿಗೆ ಬಂದು ಹೋಗುತ್ತಿದ್ದರು. ಮಂಗಳೂರಿಗೆ ಬಂದಾಗಲೆಲ್ಲಾ ನನ್ನನ್ನು ಭೇಟಿಯಾಗುತ್ತಿದ್ದರು.
ಇತ್ತೀಚೆಗೆ ಅವರು ಬಂದಾಗ ಒಂದು ಘಟನೆ ಹೇಳಿದರು. ಅವರು ವಾಸವಾಗಿರುವ ಲಾಡ್ಜ್‌ನಲ್ಲಿ ಹಲವಾರು ಜನ ರೂಂ ಮಾಡಿಕೊಂಡಿದ್ದರಂತೆ. ಹೆಚ್ಚಿನವರು ದೂರದೂರಿನ, ಬೇರೆ ರಾಜ್ಯಗಳ ವ್ಯಾಪಾರಿಗಳು. ತಿಂಗಳಿಗೊಮ್ಮೆಯೋ, ಎರಡು ತಿಂಗಳಿಗೊಮ್ಮೆಯೋ ಊರಿಗೆ ಹೋಗುವವರು. ಹೆಚ್ಚಿನ ಕೋಣೆಗಳಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಕಡಿಮೆ ಬಾಡಿಗೆ, ಶುಚಿತ್ವ ಇರುವುದರಿಂದ, ಹೆಚ್ಚು ದಿನ ವಾಸ ಮಾಡಬೇಕಾಗುವುದರಿಂದ ಅನೇಕ ಮಧ್ಯಮ ವರ್ಗದವರು ಈ ಲಾಡ್ಜನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ. ನನ್ನ ಗೆಳೆಯ ಕೂಡಾ ಆ ಲಾಡ್ಜ್‌ನಲ್ಲಿ ವಾಸವಾಗಿದ್ದರು. ಆ ಲಾಡ್ಜ್ ನ ಎಲ್ಲ ಕೋಣೆಗಳು ಯಾವಾಗಲೂ ತುಂಬಿರುತ್ತಿತ್ತಂತೆ. ಪ್ರತೀ ದಿನ ಬೆಳಗ್ಗೆ ಎದ್ದು ಎಲ್ಲರೂ ಅವರವರ ಉದ್ಯೋಗ, ವ್ಯಾಪಾರ, ಕೆಲಸಕ್ಕೆ ಹೋಗುತ್ತಿದ್ದುದರಿಂದ ಪರಸ್ಪರ ಪರಿಚಯ ಯಾರಿಗೂ ಇರಲಿಲ್ಲ. ಒಮ್ಮೊಮ್ಮೆ ಎದುರು ಸಿಕ್ಕಾಗ ಮಂದಹಾಸ ಬೀರುತ್ತಿದ್ದರು ಅಷ್ಟೇ. ಮಾತು ಕೂಡಾ ಆಡುತ್ತಿರಲಿಲ್ಲ. ಒಂದು ದಿನ ಸಂಜೆ ಅವರು ಆಫೀಸ್‌ನಿಂದ ಲಾಡ್ಜ್‌ಗೆ ಬಂದಾಗ ಅವರ ಪಕ್ಕದ ಕೋಣೆಯ ಮುಂದೆ ಪೊಲೀಸರೂ, ಜನರೂ ಸೇರಿದ್ದರಂತೆ. ಏನೋ ಗಲಾಟೆ ಆಗಿರಬೇಕು ಎಂದು ಅವರು ತನ್ನ ಕೋಣೆಯ ಎದುರು ಬಂದಾಗ ಪೊಲೀಸರು ಆ ಕೋಣೆಯ ಬಾಗಿಲನ್ನು ತೆಗೆದರು. ಆಗಲೇ ‘ಘಂ’ ಎಂದು ಅಸಹ್ಯ ವಾಸನೆ ಮೂಗಿಗೆ ಬಡಿದು ಅವರಿಗೆ ವಾಕರಿಕೆ ಬಂದಂತಾಯಿತು. ಮೂಗು ಮುಚ್ಚಿ ಒಳಗೆ ಇಣುಕಿ ನೋಡಿದಾಗ ಆ ಕೋಣೆಯಲ್ಲಿ ವಾಸವಾಗಿದ್ದ ವ್ಯಕ್ತಿ ಶವವಾಗಿ ಮಲಗಿದ್ದ. 2-3 ದಿನಗಳಾದರೂ ಆಗಿರುವುದರಿಂದ ಮೃತ ದೇಹ ಕೊಳೆತು ಹೋಗಿತ್ತು. ಅಸಹ್ಯ ವಾಸನೆ ಹರಡಿತ್ತು. ಈ ವಾಸನೆಯಿಂದಾಗಿಯೇ ಹೊಟೇಲ್‌ನವರು ಪೊಲೀಸರನ್ನು ಕರೆಸಿ ಬಾಗಿಲು ತೆರೆದಿದ್ದರಂತೆ. ವಾಸನೆ ಸಹಿಸಲಾಗದೇ ಬಳಿಕ ಅವರು ಅಗರ್ ಬತ್ತಿಯನ್ನು ತಂದು ಕೋಣೆಯಲ್ಲಿ ಉರಿಸಿದರಂತೆ. ಆದರೂ ವಾಸನೆ ಕಡಿಮೆಯಾಗಲಿಲ್ಲ. ಮೃತ ದೇಹವನ್ನು ಸಾಗಿಸಿ ಕೋಣೆಯನ್ನು ಪಿನಾಯಿಲ್ ಹಾಕಿ ತೊಳೆದ ಮೇಲೆ ವಾಸನೆ ಕಡಿಮೆಯಾಯಿತು. ಆನಂತರ 2-3 ದಿನ ನನಗೆ ಸರಿಯಾಗಿ ಊಟ ಮಾಡಲೂ ಸಾಧ್ಯವಾಗಲಿಲ್ಲ. ನನ್ನ ದೇಹದಿಂದಲೇ ಆ ವಾಸನೆ ಬಂದಂತೆ ಭಾಸವಾಗುತ್ತಿತ್ತು ಎಂದರು ಗೆಳೆಯ.
ಆನಂತರ ಗೆಳೆಯ ಹೇಳಿದರು:- ಅಷ್ಟರ ತನಕ ಕೋಣೆಯಲ್ಲಿ ಒಬ್ಬನೇ ಮಲಗಲು ನನಗೆ ಭಯವಾಗುತ್ತಿರಲಿಲ್ಲ. ಬಳಿಕ ರಾತ್ರಿಯಾಗುತ್ತಲೇ ನನ್ನನ್ನು ಭಯ ಆವರಿಸಿ ಬಿಡುತ್ತಿತ್ತು. ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ. ನಿವೃತ್ತಿ ಹೊಂದಲು ಇನ್ನು ಆರು ತಿಂಗಳು ಮಾತ್ರ ಇದೆ. ಆಗ ನಾನು ಒಂದು ತೀರ್ಮಾನಕ್ಕೆ ಬಂದೆ. ಅಂದು ರೂಂ ಬಾಯಿಯನ್ನು ಕರೆದು ನಾಳೆಯಿಂದ ಪ್ರತೀ ದಿನ ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಬಂದು ನನ್ನನ್ನು ಎಬ್ಬಿಸಬೇಕು ಮತ್ತು ಆಗಲೇ ನನ್ನಿಂದ 10 ರೂಪಾಯಿ ತೆಗೆದುಕೊಂಡು ಹೋಗಬೇಕು. ಆ 10 ರೂಪಾಯಿ ನಿನಗೆ. ಒಂದು ದಿನವೂ ತಪ್ಪಬಾರದು. ಅದೂ ಸರಿಯಾಗಿ 6 ಗಂಟೆಗೇ ಆಗಬೇಕು ಎಂದೆ. ಆತ ಸಂತೋಷದಿಂದ ಒಪ್ಪಿದ. ಆನಂತರ ಪ್ರತೀ ದಿನ 6ಗಂಟೆಗೆ ಸರಿಯಾಗಿ ಬಂದು ಆತ ನನ್ನ ಕೋಣೆಯ ಕದ ತಟ್ಟುತ್ತಾನೆ. ನನ್ನನ್ನು ಎಬ್ಬಿಸಿ ನನ್ನಿಂದ 10 ರೂಪಾಯಿ ತೆಗೆದುಕೊಂಡು ಹೋಗುತ್ತಾನೆ. ಎಚ್ಚರವಿದ್ದರೂ ನಾನು 6 ಗಂಟೆಯ ಮೊದಲು ಬಾಗಿಲು ತೆಗೆಯುವುದಿಲ್ಲ. ಯಾಕೆಂದರೆ ನಾನು ಬಾಗಿಲು ತೆರೆದದ್ದು ನೋಡಿದರೆ ಆತ ಮರುದಿನ ಬರದಿದ್ದರೆ ಎಂಬ ಭಯ.
ಒಂದು ದಿನ ನಾನು ಬೆಳಗ್ಗೆದ್ದು ಕುಡಿಯಲು ನೀರು ತರಲೆಂದು 6 ಗಂಟೆಯ ಮೊದಲೇ ಹೊರಗೆ ಹೋಗಿದ್ದೆ. ಹಿಂದಿರುಗಿ ಬರುವಾಗ 6 ಗಂಟೆ ಕಳೆದು 5 ನಿಮಿಷ ತಡವಾಗಿತ್ತು. ಬಾಗಿಲಿಗೆ ಬೀಗ ಹಾಕಿದರೂ, ನಾನು ಒಳಗೆ ಇಲ್ಲ ಎಂದು ತಿಳಿದಿದ್ದರೂ ಆತ ಕೋಣೆಯ ಮುಂದೆ ನಿಂತು ಕಾಯುತ್ತಿದ್ದ. ನನಗಾಗಿ ಅಲ್ಲ ನಾನು ಕೊಡುವ 10 ರೂಪಾಯಿಗಾಗಿ ಮಾತ್ರ. ಅಂದಿನಿಂದ ಆತ ಪ್ರತೀ ದಿನ ಬರುತ್ತಾನೆ ಎಂಬ ಧೈರ್ಯ ನನಗೆ ಬಂದಿತ್ತು.
ನನಗೆ ಸಾಯುವ ಬಗ್ಗೆ ಭಯವಿಲ್ಲ. ಇಂದಲ್ಲಾ ನಾಳೆ ಸಾಯಲೇಬೇಕು. ಇಲ್ಲಿ ಸಾವು ಮಾತ್ರ ಸತ್ಯ. ಆದರೆ ಸತ್ತ ಮೇಲೆ ಮೃತ ದೇಹ ಕೊಳೆತು, ಕೊನೆಯ ದರ್ಶನಕ್ಕೆ ಬರುವ ಬಂಧುಗಳು, ಗೆಳೆಯರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಆ ಅಸಹ್ಯ ವಾಸನೆಯನ್ನು ಸಹಿಸಿಕೊಳ್ಳುವುದುಂಟಲ್ಲ್ಲಾ ಅದನ್ನು ನನ್ನಿಂದ ಊಹಿಸಲೂ ಸಾಧ್ಯವಾಗುತ್ತಿಲ್ಲ. ಹೆಂಡತಿ, ಮಕ್ಕಳು, ತಂದೆ, ತಾಯಿ ಮೂಗು ಹಿಡಿದುಕೊಂಡು ಮೃತದೇಹದ ಬಳಿ ನಿಲ್ಲುವ ಸ್ಥಿತಿ ಉಂಟಲ್ಲಾ ಅದು ಯಾರಿಗೂ ಬರಬಾರದು. ಅದಕ್ಕಾಗಿಯೇ ನಾನು ಪ್ರತೀ ದಿನ ರೂಂ ಬಾಯ್‌ಗೆ ಹತ್ತು ರೂಪಾಯಿ ಕೊಡುತ್ತಿದ್ದುದು. ಮೃತದೇಹದ ಆ ಕೆಟ್ಟ ವಾಸನೆ ನನ್ನನ್ನು ಅಷ್ಟೊಂದು ನಡುಗಿಸಿಬಿಟ್ಟಿತ್ತು ಎಂದರು.