ಒಲಿದ ಸ್ವರಗಳು
ಗುಂಡು ಮತ್ತು ಗುಂಡಿಗೆ
ಬಂದೂಕದ ಗುಂಡಿಗೆ
ಬಲಿಯಾಗುವುದಕ್ಕೂ ಬೇಕು
ಗುಂಡಿಗೆ
ಇರಬೇಕು ಎದೆ, ಪ್ರಶ್ನಿಸಲು
ಪ್ರಭುತ್ವವನ್ನು, ಎಲ್ಲಿದೆ
ಸೂರು, ಅನ್ನದ ಕೂಳು
ಕುಡಿಯುವ ನೀರು
ಮಕ್ಕಳಿಗೆ ಶಾಲೆ
ಬಡವರಿಗೆ ಚಿಕಿತ್ಸೆ
ನಡೆದಾಡಲು ರಸ್ತೆ
ಬಸ್ಸು, ಕರೆಂಟು . . .
ಬಂದೂಕದ ಗುಂಡಿಗೆ
ಬಲಿಯಾಗಲು ಬೇಕಿಲ್ಲ
ಕುದಿಯದ, ಸಿಡಿಯದ
ದನಿಯೆತ್ತದ, ದಮನಿತರ
ಪರ ಸೆಟೆದು ನಿಲ್ಲದ
ಕೈ ಕಾಲು , ಮೂಳೆ ಮಾಂಸದ
ತಡಿಕೆ
ಇದ್ದರೆ ಸಾಕು, ಪ್ರಶ್ನಿಸುವ
ಗುಂಡಿಗೆ!
****
ಕ್ರಿಕೆಟ್ ಮತ್ತು
ಯುದ್ಧ
ಕ್ರಿಕೆಟ್ ಮತ್ತು ಯುದ್ಧಕ್ಕೆ
ದೊಡ್ಡ ವ್ಯತ್ಯಾಸವೇನಿಲ್ಲ
ಎರಡು ದೇಶ, ಎರಡು ತಂಡ
ತಂಡಕ್ಕೆ ಮುಖಂಡ, ಒಂದಿಷ್ಟು ಆಟಗಾರರು
ಇದ್ದರೆ ಸಾಕು ಒಂದು ಮೈದಾನ
ಘೋಷಿಸಬಹುದು
ಪಂದ್ಯ ಅಥವಾ ಯುದ್ಧ
ಯಾವ ತಂಡ ಟಾಸ್ ಗೆಲ್ಲುವುದೊ
ಅವರಿಗೆ ಮೊದಲ ಬ್ಯಾಟಿಂಗ್
ಉರುಳುತಿರಲು ಒಂದೊಂದು ವಿಕೆಟ್
ಸಿಡಿಯುತ್ತವೆ ಪಟಾಕಿ ಹಾದಿಬೀದಿ
ಕ್ರಿಕೆಟ್ ಮತ್ತು ಯುದ್ಧಕ್ಕೆ
ದೊಡ್ಡ ವ್ಯತ್ಯಾಸವೇನಿಲ್ಲ
ಬೌಂಡರಿ, ಸಿಕ್ಸರ್ ಬಾರಿಸುವಾಗ
ನರ್ತಿಸುತ್ತಾರೆ ಚಿಯರ್ ಲೀಡರ್
ಪರಿಣತರಿಂದ ಕಾಮೆಂಟರಿ
ಯಾರು ಗೆಲ್ಲಬಹುದು,
ಯಾರು ಸೋಲಬಹುದು
ಊರೆಲ್ಲಾ ಬೆಟ್ಟಿಂಗ್
ಕ್ರಿಕೆಟ್ ಮತ್ತು ಯುದ್ಧಕ್ಕೆ
ದೊಡ್ಡ ವ್ಯತ್ಯಾಸವೇನೂ ಇಲ್ಲ
ಕ್ರಿಕೆಟಲ್ಲಿ ವಿಕೆಟ್ ಗಳು ಮಾತ್ರ ಉರುಳುತ್ತವೆ
ಯುದ್ಧದಲ್ಲಿ ಜೀವಗಳೂ!
****
ಯುದ್ಧವಿಲ್ಲದ ದೇಶದಲ್ಲಿ
ಯುದ್ಧವಾಗಿಬಿಡಲಿ ಒಮ್ಮೆ
ಕೊನೆಗೊಳ್ಳಲಿ ಎಲ್ಲ ಆತಂಕಗಳು.
ಇನ್ನೆಷ್ಟು ದಿನ ಬದುಕುವುದು ಹೀಗೆ
ಅಂಗೈಯಲ್ಲಿ ಹಿಡಿದು ಜೀವ
ಯುದ್ಧವಿಲ್ಲದ ದೇಶದಲ್ಲೂ
ಯುದ್ಧಕೈದಿಯಂತೆ?
ಯುದ್ಧವಿಲ್ಲದ ದೇಶದಲ್ಲಿದ್ದೂ ನಾನು
ಸೇವಿಸುವಂತಿಲ್ಲ ನನ್ನಿಷ್ಟದ ಆಹಾರ
ಧರಿಸುವಂತಿಲ್ಲ ನನ್ನಿಷ್ಟದ ಉಡುಗೆ
ಹಂಚಿಕೊಳ್ಳುವಂತಿಲ್ಲ ನನ್ನ ವಿಚಾರ
ಮದುವೆಯಾಗುವಂತೆಯೂ ಇಲ್ಲ, ಹುಡುಗಿಯನ್ನು
ನನ್ನಿಷ್ಟದ
ತೊಲಗಾಚೆ ದೇಶದ್ರೋಹಿ ಎನ್ನುತ್ತಾರೆ
ಯುದ್ಧವಿಲ್ಲದ ದೇಶದಲ್ಲಿ
ಇನ್ನೆಷ್ಟು ದಿನ ಬದುಕುವುದು ಹೀಗೆ
ಅಂಗೈಯಲ್ಲಿ ಹಿಡಿದು ಜೀವ
ಯುದ್ಧ ಕೈದಿಯಂತೆ!
ಯುದ್ಧವಾಗಿಯೇ ಬಿಡಲಿ ಒಮ್ಮೆ
ಕೊನೆಗೊಳ್ಳಲಿ ಎಲ್ಲ ಆತಂಕಗಳು
ದೇಶಭಕ್ತಿಯ ನೆಪದಲ್ಲಾದರೂ
ಗಡಿಯಾಚೆಗಿನ ಗುಂಡಿಗೆ
ಬಿಡುಗಡೆಗೊಳ್ಳಲಿ ಅಂಗೈಯಲ್ಲಿನ ಜೀವ
ಹೊರಡಲಿ ಟ್ರೇನು ಮತ್ತೊಮ್ಮೆ
ದೇಶ ಬಿಟ್ಟು, ದೇಹ ಬಿಟ್ಟು.