ಇಸ್ರೇಲ್ ಬಾಂಬ್ ದಾಳಿಗೆ 51 ಫೆಲಸ್ತೀನಿಯನ್ನರು ಬಲಿ
Photo: twitter.com/Bernadotte22
ಗಾಝಾ: ಹಮಾಸ್ ಸಂಘಟನೆಯ ನಿರ್ಮೂಲನೆಗೆ ಪಣತೊಟ್ಟಿರುವ ಇಸ್ರೇಲ್, ಗಾಝಾ ಪ್ರದೇಶದ ಮಘಾಝಿ ಶಿಬಿರದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 51 ಮಂದಿ ಫೆಲಸ್ತೀನಿಯನ್ನರು ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಜತೆಗೆ ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 60 ಮಂದಿ ಒತ್ತೆಯಾಳುಗಳು ನಾಪತ್ತೆಯಾಗಿದ್ದಾರೆ.
ಈ ಪೈಕಿ 23 ಮಂದಿ ಇಸ್ರೇಲಿ ಒತ್ತೆಯಾಳುಗಳ ದೇಹಗಳು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿವೆ ಎಂದು ಹಮಾಸ್ ವಕ್ತಾರ ಅಬು ಉಬೈದಾ ಟೆಲೆಗ್ರಾಂ ಖಾತೆಯ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಈ ಮಧ್ಯೆ ಟರ್ಕಿಯ ಸೇನೆ ಉತ್ತರ ಇರಾಕ್ ಮೇಲೆ ಶನಿವಾರ ಸಂಜೆ ದಾಳಿ ನಡೆಸಿದ್ದು, 15 ಕುರ್ದಿಶ್ ನೆಲೆಗಳನ್ನು ನಾಶಪಡಿಸಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ. ಹಲವು ಮಂದಿ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಇಸ್ರೇಲ್ ಸೇನೆ ಮೂರು ವಾರಗಳಿಂದ ಗಾಜಾ ಪ್ರದೇಶವನ್ನು ಸುತ್ತುವರಿದಿದ್ದು, 23 ಲಕ್ಷ ಮಂದಿ ಇರುವ ಪ್ರದೇಶದ ಮೇಲೆ ಸೇನಾ ಕಾರ್ಯಾಚರಣೆ ನಡೆಸುತ್ತಿದೆ.
ಇಸ್ರೇಲ್ ದಾಳಿಯಲ್ಲಿ ಇದುವರೆಗೆ 9488 ಮಂದಿ ಫೆಲಸ್ತೀನಿಯನ್ನರು ಮೃತಪಟ್ಟಿದ್ದು, ಈ ಪೈಕಿ 3900 ಮಕ್ಕಳು ಹಾಗೂ 150 ಮಂದಿ ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ ಎಂದು ಹಮಾಸ್ ವಿವರಿಸಿದೆ. ಗಾಝಾದ ಮಘಾಝಿ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಬಹುತೇಕ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 51 ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಫೆಲಸ್ತೀನ್ ಸುದ್ದಿಸಂಸ್ಥೆ ವರದಿ ಮಾಡಿದೆ.