ಪಿಲಿಕುಲ ಮೃಗಾಲಯದಲ್ಲಿ ಹುಲಿಗಳ ವಂಶಾಭಿವೃದ್ಧಿ: ರಾಣಿ ಹುಲಿಗೆ 2 ಮರಿಗಳ ಜನನ
ಮಂಗಳೂರು: ಪಿಲಿಕುಲ ಜೈವಿಕ ಉದ್ಯಾನವದಲ್ಲಿ ಹುಲಿಗಳ ವಂಶಾಭಿವೃದ್ಧಿಯಾಗಿದ್ದು, 14 ವರ್ಷದ ರಾಣಿ ಹುಲಿ ಎರಡು ಮರಿಗಳಿಗೆ ಜನನ ನೀಡಿದೆ. ರಾಣಿ ಹುಲಿ 2016ರಲ್ಲಿ ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿತ್ತು. ನಂತರ 2021ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಇದೀಗ ಡಿ. 20ರಂದು ರಾತ್ರಿ ಎರಡು ಮರಿಗಳಿಗೆ ಜನ್ಮ ನೀಡಿದೆ.
ಈ ಮೂಲಕ ಇದೀಗ ಪಿಲಿಕುಲ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ 10ಕ್ಕೇರಿದೆ. ಪ್ರಸ್ತುತ ಮೃಗಾಲಯದಲ್ಲಿ ನಾಲ್ಕು ಗಂಡು ಹಾಗೂ ನಾಲ್ಕು ಹೆಣ್ಣು ಹುಲಿಗಳಿದ್ದು, ಹೊಸತಾಗಿ ಜನಿಸಿದ ಮರಿಗಳ ಲಿಂಗವನ್ನು ಎರಡು ತಿಂಗಳ ಗುರುತಿಸಲಾಗುತ್ತದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತಾಯಿ ಹಾಗೂ ಮರಿಗಳು ಆರೋಗ್ಯವಾಗಿದ್ದು, ಮೃಗಾಲಯದ ಅಧಿಕಾರಿಗಳು ವಿಶೇಷ ಗಮನ ಹರಿಸುತ್ತಿದ್ದಾರೆ. ರಾಣಿ ಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಬನ್ನೇರುಘಟ್ಟ ಮೃಗಾಲಯದಿಂದ ತರಲಾಗಿದ್ದು, ಪಿಲಿಕುಲ ಮೃಗಾಲಯ ದಿಂದ ಒಂದು ಗಂಡು ಹುಲಿಯನ್ನು ನೀಡಲಾಗಿತ್ತು.
ರಾಣಿಗೆ ಅಗತ್ಯ ಆಹಾರ ಮತ್ತು ಪೂರಕ ಆಹಾರ ನೀಡಲು ಕ್ರಮ ವಹಿಸಲಾಗಿದೆ. ಹುಲಿ ಮರಿಗಳಿಗೆ ಒಂದೂವರೆ ತಿಂಗಳ ನಂತರ ರೋಗ ನಿರೋಧಕ ಲಸಿಕೆ ನೀಡಲಾಗುತತದೆ. ಆವರೆಗೆ ಮರಿಗಳ ಆರೋಗ್ಯವು ಅತೀ ಸೂಕ್ಷ್ಮವಾಗಿದ್ದು, ನಿಗಾ ವಹಿಸಬೇಕಾಗಿದೆ.