ಕೆಐಒಸಿಎಲ್‌ನ 385 ಮಂದಿ ಗುತ್ತಿಗೆ ನೌಕರರ ವಜಾಕ್ಕೆ ಕಂಪೆನಿ ನಿರ್ಧಾರ
ಅ.1ರಂದು ನೌಕರರಿಗೆ ನೋಟೀಸ್ ನೀಡಿರುವ ಕಂಪೆನಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕುದುರೆಮುಖ ಕಬ್ಬಿಣ ಆದಿರು ಕಂಪೆನಿ (ಕೆ.ಐ.ಒ.ಸಿ.ಎಲ್ )ನಲ್ಲಿ ನೇರ ಮತ್ತು ಹೊರಗುತ್ತಿಗೆಯ ದುಡಿಯುತ್ತಿರುವ ದ.ಕ. ಮತ್ತು ಉಡುಪಿ ಜಿಲ್ಲೆಯ 385 ನೌಕರರನ್ನು ಕೈಬಿಡಲು ಕೆ.ಐ.ಒ.ಸಿ.ಎಲ್ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಅ.1ರಂದು ನೌಕರರಿಗೆ ನೋಟೀಸ್ ನೀಡಿರುವ ಕಂಪೆನಿ ಅ.30ರಂದು ನೌಕರಿಯನ್ನು ಅಂತಿಮಗೊಳಿಸು ವಂತೆ ಸೂಚನೆ ನೀಡಿದೆ. ಕಂಪೆನಿಯ ಆರ್ಥಿಕ ಸ್ಥಿತಿ ಕುಸಿಯುತ್ತಿದ್ದು, ಈ ಕಾರಣಕ್ಕಾಗಿ ನೌಕರರನ್ನು ವಜಾ ಗೊಳಿಸುತ್ತಿರು ವುದಾಗಿ ಕೆ.ಐ.ಒ.ಸಿ.ಎಲ್ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.
ಕಂಪೆನಿಯಲ್ಲಿ ನೇರ ಗುತ್ತಿಗೆ ಆಧಾರದಲ್ಲಿ 35 ಮಂದಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ 350 ಮಂದಿ ಕೆಲಸ ನಿರ್ವಹಿಸುತ್ತಿ ದ್ದಾರೆ. ವಜಾಕ್ಕೆ ನೋಟೀಸ್ ಪಡೆದುಕೊಂಡಿರುವ ನೌಕರರ ಪೈಕಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶೇ.90 ನೌಕರರಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ, ಸುಮಾರು 400 ಮಂದಿ ಖಾಯಂ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಂಪೆನಿ ತನ್ನ 400 ಖಾಯಂ ಉದ್ಯೋಗಿಗಳ ಸಂಬಳಕ್ಕಾಗಿ ಪ್ರತೀ ತಿಂಗಳು ಸುಮಾರು 6 ಕೋಟಿ ರೂ.ಗೂ ಅಧಿಕ ಹಣವನ್ನು ವ್ಯಯಿಸುತ್ತಿದ್ದರೆ, ನೇರ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಸಂಬಳಕ್ಕಾಗಿ 1 ಕೋಟಿ ರೂ. ಗೂ ಕಡಿಮೆ ಹಣವನ್ನು ವೆಚ್ಚ ತಗುಲುತ್ತಿದೆ ಎನ್ನಲಾಗಿದೆ.
ಮರು ನೇಮಕಾತಿಗೆ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ
ಕಾರ್ಮಿಕರನ್ನು ತುರ್ತು ವಜಾಗೊಳಿಸಿರುವುದರಿಂದ ಅವರ ಕುಟುಂಬವನ್ನು ಮುನ್ನಡೆಸುವುದು ಬಹಳ ಕಷ್ಟಕರವಾಗುತ್ತದೆ. ಈ ಕೆಲಸವನ್ನು ನಂಬಿ ಕಾರ್ಮಿಕರು ಮನೆ, ವಾಹನ, ಮದುವೆ ಇತರೆ ದೈನಂದಿನ ಚಟುವಟಿಕೆಗಳಿಗಾಗಿ ಬ್ಯಾಂಕುಗಳಿಂದ, ಇತರರಿಂದ ಸಾಲವನ್ನು ಪಡೆದು ಅವನ್ನು ಮರುಪಾವತಿಸಲು ಹಾಗೂ ಕುಟುಂಬದ ನಿರ್ವಹಣೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ನಿರ್ವಹಣೆಗೆ ಈ ಕೆಲಸವನ್ನೇ ಅವಲಂಬಿಸಿರುತ್ತಾರೆ. ಈ ಕೆಲಸವನ್ನೇ ನಂಬಿಕೊಂಡಿರುವ ನೇರ ಹಾಗೂ ಹೊರ ಗುತ್ತಿಗೆ ಕಾರ್ಮಿಕರಿಗೆ ನೀಡಿದ ವಜಾ ನೋಟಿಸನ್ನು ಕೂಡಲೇ ಹಿಂಪಡೆದು ಕಾರ್ಮಿಕರನ್ನು ಕಂಪೆನಿಯಲ್ಲಿ ಮರುನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಧಿಕಾರಿ ಕೆ.ಐ.ಒ.ಸಿ.ಎಲ್ ಅಧಿಕಾರಿಗಳ ಸಭೆ ಕರೆದು ಸ್ಥಳೀಯ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ ಜಿಲ್ಲಾಧಿಕಾರಿ ಯನ್ನು ಆಗ್ರಹಿಸಿದ್ದಾರೆ.