ಸಾರ್ವಜನಿಕ ರಂಗದ ಉದ್ದಿಮೆಗಳಿಂದ ಶೇ.4 ಖರೀದಿ ಮೀಸಲು: ಕೋಕಿಲ
ಮಂಗಳೂರು: ಸಾರ್ವಜನಿಕ ರಂಗದ ಉದ್ದಿಮೆಗಳು ಶೇ.4ರಷ್ಟು ಖರೀದಿಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಉದ್ಯಮಿಗಳಿಂದ ಮಾಡಬೇಕು ಎಂಬ ನಿಯಮವಿದ್ದು, ಗುರಿ ಸಾಧಿಸಲು ಎಸ್ಸಿ ಮತ್ತು ಎಸ್ಟಿ ಉದ್ಯಮಿಗಳು ಸಹಕರಿಸ ಬೇಕು ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಎಸ್ಸಿ, ಎಸ್ಟಿ ಹಬ್ ಬೆಂಗಳೂರು ಕೇಂದ್ರದ ಮುಖ್ಯಸ್ಥೆ ಕೋಕಿಲ ಎ. ಹೇಳಿದ್ದಾರೆ.
ಅವರು ನಗರದ ಉರ್ವ ಗಾಂಧಿನಗರದ ಸೇವಾಕೇಂದ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಎಸ್ಸಿಎಸ್ಟಿ ಹಬ್ ಮತ್ತು ಎಂಆರ್ಪಿಎಲ್ ಸಹಯೋಗದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಒಂದು ತಿಂಗಳ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಂಆರ್ಪಿಎಲ್ನಂತಹ ಬೃಹತ್ ಉದ್ದಿಮೆಗಳು ವಾರ್ಷಿಕ ಕೋಟ್ಯಾಂತರ ರೂಪಾಯಿ ಖರೀದಿ ನಡೆಸುತ್ತವೆ. ಇಂತಹ ಉದ್ಯಮಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಎಸ್ಸಿ ಮತ್ತು ಎಸ್ಟಿ ಉದ್ಯಮಿಗಳು ಮುಂದಾಗಬೇಕು. ಹಲವು ಸಾರ್ವಜನಿಕ ರಂಗದ ಉದ್ದಿಮೆಗಳಿಗೆ ಸರಕಾರ ನಿಗದಿ ಪಡಿಸಿದ ಗುರಿ ಸಾಧಿಸಲು ಸಾಧ್ಯ ವಾಗುತ್ತಿಲ್ಲ. ಆದುದರಿಂದ ಇತ್ತ ಗಮನ ಹರಿಸಬೇಕು. ಮಹಿಳೆಯಲ್ಲಿ 4ನೇ3 ರಷ್ಟು ಮೀಸಲಾತಿ ಕೂಡ ಇದೆ ಎಂದು ಕೋಕಿಲ ಅವರು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರು ಮೋಹನಾಂಗಯ್ಯ ಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸ್ವಉದ್ಯೋಗ ಮತ್ತು ಉದ್ದಿಮೆಗಳ ಸ್ಥಾಪಿಸಲು ಸರಕಾರದಿಂದ ದೊರೆಯುವ ಸಾಲ ಸಹಾಯಧನಗಳ ಮಾಹಿತಿ ನೀಡಿದ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಅಧಿಕಾರಿಗಳಾದ ಸುಜಾತ ಮತ್ತು ಗೀತಾ ಅವರು ಬ್ಯಾಂಕ್ ಸಾಲ ಪಡೆಯಲು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಹಾಯ ಮಾಡುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ), ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್, ನ್ಯಾಶನಲ್ ಎಸ್ಸಿ, ಎಸ್ಟಿ ಹಬ್ ಬೆಂಗಳೂರು, ಎಂಆರ್ಪಿಎಲ್ ಅಧಿಕಾರಿ ಡಾ.ರುಡಾಲ್ಪ್ ನೋರೋಹ್ಹಾ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಕಾರ್ಯಕ್ರಮ ಸಂಘಟಕರಾದ ವಸಂತಿ, ತರಬೇತಿ ಸಂಯೋಜಕಿ ಸೌಮ್ಯಶ್ರೀ ಉಪಸ್ಥಿತರಿದ್ದರು.