ವಿಟ್ಲ: ಬಂಟ್ವಾಳ ತಾಲೂಕು 6ನೇ ಚುಟುಕು ಸಾಹಿತ್ಯ ಸಮ್ಮೇಳನ ಸಮಾರೋಪ
ವಿಟ್ಲ : ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್, ವಿಠಲ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಪಲಿಮಾರು ಶ್ರೀ ಜನಾರ್ದನ ಪೈ ಸಭಾಂಗಣದ ರವಿವರ್ಮ ಕೃಷ್ಣರಾಜ ಅರಸು ವೇದಿಕೆಯಲ್ಲಿ ಭಾನುವಾರ ನಡೆದ ತಾಲೂಕು ಆರನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ನಡೆಯಿತು.
ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಕೇಂದ್ರ ಕಚೇರಿಯ ಕಾನೂನು ಅಧಿಕಾರಿ, ಸಾಹಿತಿ, ನರಸಿಂಹ ವರ್ಮ ವಿಟ್ಲ ಅರಮನೆ ಮಾತನಾಡಿ, ಚುಟುಕು ಸಾಹಿತ್ಯದ ಇತಿಹಾಸ ಚುಟು ಕಲ್ಲ. ಚುಟುಕು ಸಾಹಿತ್ಯಕ್ಕೆ ಪುರಾಣೇತಿಹಾಸವಿದೆ. ೬ ನೇ ಶತಮಾನದ ಕಪ್ಪೆ ಅರೆಭಟ್ಟನ ಶಾಸನದಲ್ಲಿಯೂ ಸಹ ಚುಟುಕು ಸಾಹಿತ್ಯದ ಬಗ್ಗೆ ಉಲ್ಲೇಖವಿದೆ. ವಚನ ಸಾಹಿತ್ಯ, ದಾಸಸಾಹಿತ್ಯ, ತ್ರಿಪದಿ, ಚೌಪದಿ, ಜಾನಪದ ಸಾಹಿತ್ಯಗಳೆಲ್ಲವೂ ಚುಟುಕುಗಳಾಗಿವೆ. ಅನುಭವದ ಆಧಾರದ ಮೇಲೆ ಚುಟುಕು ಮೂಡುತ್ತವೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ, ಮುಳಿಯ ಶಂಕರಭಟ್ ಮಾತನಾಡಿ ಮಕ್ಕಳು ಸಾಹಿತ್ಯದತ್ತ ಚಿತ್ತ ಹರಿಸುವ ಹೆತ್ತವರ ಕರ್ತವ್ಯ. ಸಾಹಿತ್ಯ ಪ್ರೀತಿ ಮೊಳಗಲಿ. ಮನೆಮನೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳು ನಡೆಯುವ ಅವಶ್ಯಕತೆ ಇದೆ. ಸಾಹಿತ್ಯ ನಮ್ಮದು ಎನ್ನುವ ಅಸ್ಮಿತೆ ನಮ್ಮೆಲ್ಲರಲ್ಲಿ ಮೂಡಬೇಕಾಗಿದೆ. ಇಂತಹ ಸಮ್ಮೇಳನ ನಡೆಸುವ ಆನೆ ಬಲ, ಅಭಿಮಾನ ಅಲ್ಲಲ್ಲಿ ಮೂಡಿಬರಲಿ ಎಂದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ರೈ, ಬಂಟ್ವಾಳ ಹಿದಯ ಫೌಂಡೇಶನ್ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್ ಗೋಳ್ತಮಜಲು ಭಾಗವಹಿಸಿದ್ದರು.
ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜಿ.ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಸ್ವಾಗತ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ, ಉಪಾಧ್ಯಕ್ಷ ಸುದರ್ಶನ ಪಡಿಯಾರ್ ವಿಟ್ಲ ಉಪಸ್ಥಿತರಿದ್ದರು.
ಇದೇ ಸಂದರ್ಭ ವೈದ್ಯಕೀಯ ಕ್ಷೇತ್ರದ ಡಾ.ವಿಶ್ವನಾಥ ನಾಯಕ್, ಡಾ.ಜಯರಾಮ ವಿಶ್ವನಾಥ, ಸಾಹಿತ್ಯ ಕ್ಷೇತ್ರದ ಸವಿತಾ ಎಸ್.ಭಟ್ ಅಡ್ವಾಯಿ, ಶಿಕ್ಷಣ ಕ್ಷೇತ್ರದ ನಾರಾಯಣ ಪೂಜಾರಿ ಎಸ್.ಕೆ, ಯಕ್ಷಗಾನ ರಂಗದ ಸದಾಶಿವ ಶೆಟ್ಟಿ ಸಿದ್ಧಕಟ್ಟೆ, ಕೃಷಿ ಕ್ಷೇತ್ರದ ಚಿದಾನಂದ ಪೆಲತ್ತಿಂಜ, ವಾಸ್ತು ತಜ್ಞ ಕೃಷ್ಣಪ್ಪ ಆಚಾರ್ಯ, ದೈವ ನರ್ತಕ ರಮೇಶ್ ವಗ್ಗ, ಸಾಮಾಜಿಕ ಸೇವಾಕರ್ತ ರಶೀದ್ ವಿಟ್ಲ, ಉದ್ಯಮಿ ಚಾರ್ಲ್ಸ್ ಸಿಕ್ವೇರಾ, ನಿವೃತ್ತ ಯೋಧ ದಯಾನಂದ ಗೌಡ ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ ವರ್ಮ ವಿಟ್ಲ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಯರಾಮ ಪಡ್ರೆ ವಂದಿಸಿದರು. ವಿಂಧ್ಯಾ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಕಾರ್ಯಕ್ರಮದ ಮೊದಲು ಮಕ್ಕಳ ಚುಟುಕು ಗೋಷ್ಠಿ, ವಿಚಾರ ಸಂಕಿರಣ, ಯಕ್ಷಗಾನ ತಾಳಮದ್ದಳೆ, ಹಿರಿಯರ ಚುಟುಕು ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.