ರಾಜ್ಯ ಸರಕಾರಕ್ಕೆ ನೂರು ದಿನಗಳ ಸಂಭ್ರಮ: ದ.ಕ.ಜಿಲ್ಲೆಯಲ್ಲಿ ‘ಗ್ಯಾರಂಟಿ’ ಯೋಜನೆಗೆ ಉತ್ತಮ ಸ್ಪಂದನ
ಮಂಗಳೂರು, ಆ.28: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಸೋಮವಾರಕ್ಕೆ (ಆ.28) 100 ದಿನ ಪೂರೈಸಿದೆ. ಸರಕಾರದ ಗ್ಯಾರಂಟಿ ಯೋಜನೆಗೆ ದ.ಕ.ಜಿಲ್ಲೆಯಲ್ಲೂ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದ್ದು, ಜಿಲ್ಲಾಡಳಿತವು ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿಯ ಪ್ರಯೋಜನವನ್ನು ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
ಜಿಲ್ಲೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯ ಜೂ.11 ರಂದು ಜಾರಿಗೆ ಬಂದಿದ್ದು, ಅಂದಿನಿಂದ ಈವರೆಗೆ 1,02,83,000 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. 34,06,52,000 ರೂ.ಮೌಲ್ಯದ ಶೂನ್ಯ ಟಿಕೆಟ್ ಗಳನ್ನು ವಿತರಿಸಲಾಗಿದೆ.
ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಇನ್ನೊಂದು ಗ್ಯಾರಂಟಿ ಯೋಜನೆಯಾದ ಪ್ರತೀ ಕುಟುಂಬದ ಮನೆಯ ಯಜಮಾನಿಗೆ ಮಾಸಿಕ 2000 ರೂ. ನೀಡುವ ‘ಗೃಹಲಕ್ಷ್ಮಿ’ಗೆ ಜಿಲ್ಲೆಯ ಅರ್ಹ 3,99,022 ಕುಟುಂಬಗಳ ಪೈಕಿ ಈವರೆಗೆ 3,05,358 ಮಂದಿ ಹೆಸರು ನೋಂದಾಯಿಸಿದ್ದಾರೆ. ಯೋಜನೆಯ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ಪಾವತಿಯಾಗಲಿದೆ.
ರಾಜ್ಯದ ಪ್ರತೀ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ಯೋಜನೆಯಡಿ ಜಿಲ್ಲೆಯ ಅರ್ಹ 5.59 ಲಕ್ಷ ವಿದ್ಯುತ್ ಬಳಕೆಯ ಗ್ರಾಹಕರ ಪೈಕಿ ಈವರೆಗೆ 3.53 ಲಕ್ಷ ಗ್ರಾಹಕರಿಗೆ ಸಹಾಯಧನದ ಬಿಲ್ಲನ್ನು ವಿತರಿಸುವ ಮೂಲಕ ಅಂದಾಜು 21.61 ಕೋ.ರೂ.ಗಳ ಮೊತ್ತದ ಬಿಲ್ಲಿನ ವಿನಾಯಿತಿ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಂತ್ಯೋದಯ 15,520 ಹಾಗೂ 1,97,200 ಬಿಪಿಎಲ್ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆಜಿಯಂತೆ ಅಕ್ಕಿ ವಿತರಿಸುವ ಬದಲು ನೇರ ನಗದು ವರ್ಗಾವಣೆಯಡಿ 30.03 ಕೋ.ರೂ. ಅನುದಾನವನ್ನು ರಾಜ್ಯ ಸರಕಾರ ಪಾವತಿಸಿದೆ.
"ಹಣವಿಲ್ಲದೆ ಪರದಾಡುವ ಮಧ್ಯಮ ವರ್ಗದ ಜನರಿಗೆ ಶಕ್ತಿ ಯೋಜನೆಯು ಉಪಯುಕ್ತವಾಗಿದೆ. ಸರಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ತುಂಬಾ ಸಂತೋಷವಾಯಿತು".
-ಮೇರಿ, ಉಜಿರೆ ಗಾಂಧಿಬೈಲು
"ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಕುಟುಂಬವನ್ನು ನಿಭಾಯಿಸುವುದು ಮಹಿಳೆಯರಿಗೆ ಅತ್ಯಂತ ಸವಾಲಿನ ಸಂಗತಿಯಾಗಿವೆ.ಈ ವೇಳೆ ಗೃಹಲಕ್ಷ್ಮಿ ಮೂಲಕ ಮನೆ ಯಜಮಾನಿಗೆ 2,000 ರೂ. ನೀಡುವುದು ಹೆಚ್ಚು ಪ್ರಯೋಜನ ವಾಗಲಿದೆ. ಅನೇಕ ಮನೆಗಳಲ್ಲಿ ದುಡಿಯಲು ಶಕ್ತಿಯಿಲ್ಲದ, ಅನಾರೋಗ್ಯ ಪೀಡಿತ ಹಿರಿಯರಿಗೆ ಈ ಯೋಜನೆ ನೆರವಾಗಲಿದೆ".
ಪ್ರೇಮಲತಾ, ಶಕ್ತಿನಗರ
"ನನ್ನ ಮನೆಗೆ ಪ್ರತೀ ತಿಂಗಳು 800ರಿಂದ 900 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಪ್ರಸ್ತುತ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿದ ನಂತರ ಈ ತಿಂಗಳಲ್ಲಿ ಶೂನ್ಯ ವಿದ್ಯುತ್ ಬಿಲ್ ಬಂದಿವೆ. ಖಾಸಗಿ ಸಂಸ್ಥೆಯಲ್ಲಿ ಕಡಿಮೆ ವೇತನಕ್ಕೆ ದುಡಿಯುವ ನಮಗೆ ವಿದ್ಯುತ್ ಬಿಲ್‌ನ ಈ ಉಳಿತಾಯದ ಮೊತ್ತ ಹೆಚ್ಚುವರಿ ಬೋನಸ್ ರೂಪದಲ್ಲಿ ದೊರೆತಂತಾಗಿದೆ."
ವಿಜಯ ದೀಪಾ, ಜಪ್ಪಿನಮೊಗರು