ಜ.16-20: ಗೇರುಕಟ್ಟೆ ಪರಪ್ಪುವಿನಲ್ಲಿ ಉರೂಸ್ ಕಾರ್ಯಕ್ರಮ
ಬೆಳ್ತಂಗಡಿ, ಜ.10: ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮವು ಜ.16ರಿಂದ 20ರವರೆಗೆ ನಡೆಯಲಿದೆ ಎಂದು ಮಸೀದಿಯ ಖತೀಬ್ ತಾಜುದ್ದೀನ್ ಸಖಾಫಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಧ್ಯಕ್ಷತೆಯಲ್ಲಿ ನಡೆಯುವ ಉರೂಸ್ ಪ್ರಯುಕ್ತ ಪ್ರತಿದಿನ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳಿರಲಿವೆ ಎಂದು ಹೇಳಿದರು.
ಜ.16ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಅಸ್ಸೈಯದ್ ಅಬೂಬಕರ್ ಸಿದ್ದೀಕ್ ತಂಙಳ್ ಅಲ್ ಹಾದಿ ಮದನಿ, ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್ ಹಾಗೂ ಇತರರು ಭಾಗವಹಿಸಲಿದ್ದಾರೆ.
ಜ.17ರಂದು ಅಸ್ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ, ರಶೀದ್ ಸಅದಿ ಬೋಳಿಯಾರ್ ಹಾಗೂ ಇತರರು ಭಾಗವಹಿಸಲಿದ್ದಾರೆ.
ಜ.18ರಂದು ಅಸ್ಸೈಯದ್ ಉಮರ್ ಅಸ್ಸಖಾಫ್ ತಂಙಳ್ ಮದನಿ ದುಆಶೀರ್ವಾದ ನೆರವೇರಿಸಲಿದ್ದು, ಡಾ.ಕೋಯ ಕಾಪಾಡ್ ಹಾಗೂ ತಂಡದಿಂದ ಗ್ರಾಂಡ್ ಇಶಾಲ್ ನೈಟ್ ಕಾರ್ಯಕ್ರಮ ನಡೆಯಲಿದೆ.
ಜ.19ರಂದು ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನೀಯಂ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಜ.20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೂರತ್ ತಂಙಳ್ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಸಾಮೂಹಿಕ ಝಿಯಾರತ್ ಕಾರ್ಯಕ್ರಮ ನಡೆಯಲಿದೆ. ಅಸ್ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ದುಆಶೀರ್ವಚನ ನೆರವೇರಿಸಲಿದ್ದಾರೆ. ಮುಸ್ತಫಾ ಸಖಾಫಿ ತೆನ್ನಲ ಮುಖ್ಯ ಭಾಷಣ ಮಾಡಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬರನ್ನು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಬ್ದುಲ್ಲ ಮಾದುಮೂಲೆಯವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಅಬ್ದುಲ್ ಬಶೀರ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ಕರೀಮ್ ಗೇರುಕಟ್ಟೆ, ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕರ್ ಹಾಜಿ, ಉರೂಸ್ ಸಮಿತಿಯ ಉಪಾಧ್ಯಕ್ಷ ಹಾಜಿ ಬಿ.ಕೆ.ರವೂಫ್ ಉಪಸ್ಥಿತರಿದ್ದರು.