ದ.ಕ. ಕರಡು ಮತದಾರರ ಪಟ್ಟಿಯಲ್ಲಿ 17,85,835 ಮತದಾರರು; ಮಹಿಳಾ ಮತದಾರರ ಅನುಪಾತ ಅಧಿಕ: ಮುಲ್ಲೈ ಮುಗಿಲನ್
ಮಂಗಳೂರು, ಅ. 30: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ಧಗೊಳಿಸಲಾಗಿರುವ ಕರಡು ಮತದಾರರ ಪಟ್ಟಿಯಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 17,85,835 ಮತದಾರರಿದ್ದಾರೆ. ಮಹಿಳಾ ಮತದಾರರ ಅನುಪಾತವು 1000: 1045 ಆಗಿದ್ದು, ಇದು ರಾಜ್ಯದ ಇತರ ಎಲ್ಲಾ ಜಿಲ್ಲೆಗಳಿಗಿಂತ ಅಧಿಕವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಕರಡು ಮತದಾರರ ಮಾಹಿತಿಯನ್ನು ಅವರು ನೀಡಿದರು.
ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 8,73,389 ಪುರುಷರು ,9,12,369 ಮಹಿಳಾ ಮತದಾರರು ಹಾಗೂ 77 ಮಂಗಳಮುಖಿ ಮತದಾರರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 17,37,688 ಮತದಾರರಿದ್ದರು. ನ. 18 ಮತ್ತು ನ.19, ಡಿ. 2 ಮತ್ತು ಡಿ. 3ರಂದು ಮತದಾರರ ವಿಶೇಷ ನೋಂದಣಿ ನಡೆಯಲಿದ್ದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕಳೆದ ಬಾರಿಯಿಂದ ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೊಸತಾಗಿ ಹೆಸರು ಸೇರ್ಪಡೆಗೆ ನಾಲ್ಕು ಅರ್ಹತಾ ದಿನಗಳನ್ನು ಗುರುತಿಸಿದ್ದು, ಅದರಂತೆ ಜನವರಿ, ಎಪ್ರಿಲ್, ಜುಲೈ ಹಾಗೂ ಅಕ್ಟೋಬರ್‌ತಿಂಗಳ 1ನೆ ತಾರೀಕಿಗೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕರಡು ಮತದಾರರ ಪಟ್ಟಿಗಳನ್ನು ಎಲ್ಲಾ ಮತಗಟ್ಟೆ, ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಲ್ಲಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಸೇರ್ಪಡೆಗೆ, ಮೃತರಾದವರ ಹೆಸರು ಪಟ್ಟಿಯಿಂದ ತೆಗೆದು ಹಾಕಲು ಹಾಗೂ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 9ರವರೆಗೆ ಅವಕಾಶವಿರಲಿದೆ. ಮತದಾರರ ಪಟ್ಟಿ ಪರಿಶೀಲನೆಗೆ ದ.ಕ. ಜಿಲ್ಲೆಗೆ ಐಎಎಸ್ ಅಧಿಕಾರಿ ಡಾ. ಮಮತಾ ಬಿ.ಆರ್. ಅವರನ್ನು ಪರಿಶೀಲನಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
18 ವರ್ಷ ಪೂರೈಸಿದ ಹೊ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ನಮೂನೆ 6, ಅನಿವಾಸಿ ಭಾರತೀಯರು ಹೆಸರು ಸೇರ್ಪಡೆಗೆ ನಮೂನೆ 6ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ 7, ದೋಷ ಸರಿಪಡಿಸಲು ನಮೂನೆ 8, ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಅಥವಾ ಇತರ ನಿಗದಿತ ದಾಖಲೆ ಜೋಡಣೆಗೆ ನಮೂನೆ 6ಬಿಯಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ಮತಗಟ್ಟೆ ಅಧಿಕಾರಿ ಅಥವಾ ವೆಬ್ ಪೋರ್ಟಲ್ *ceokarnataka.kar.nic.in <http://ceokarnataka.kar.nic.in/>
*<https://voters.eci.gov.in/>
*Voters Helpline App
*www.dk.nic.in <http://www.dk.nic.in/> ಗೆ ಭೇಟಿ ನೀಡಬಹುದು.
ಮಂಗಳೂರು ನಗರ ದಕ್ಷಿಣದಲ್ಲಿ ಮಹಿಳಾ ಅನುಪಾತ ಅಧಿಕ
ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 117936 ಪುರುಷರು ಹಾಗೂ 128681 ಮಹಿಳಾ ಮತದಾರರಿದ್ದು, ಇಲ್ಲಿ ಮಹಿಳಾ ಮತದಾರರ ಅನುಪಾತ 1000: 1091 ಇದೆ. ಬೆಳ್ತಂಗಡಿಯಲ್ಲಿ ಮಹಿಳಾ ಅನುಪಾತ 1011, ಮೂಡಬಿದ್ರೆಯಲ್ಲಿ 1069, ಮಂಗಳೂರು ನಗರ ಉತ್ತರದಲ್ಲಿ 1061, ಮಂಗಳೂರು 1036, ಬಂಟ್ವಾಳ 1033, ಪುತ್ತೂರು 1028 ಹಾಗೂ ಸುಳ್ಯದಲ್ಲಿ ಮಹಿಳಾ ಮತದಾರರ ಅನುಪಾತ 1022 ಇದೆ.