ಎ.18-20: ವಿಶ್ವ ಕೊಂಕಣಿ ಕೇಂದ್ರದಲ್ಲಿ ಸನಿವಾಸಿ ರಂಗ ತರಬೇತಿ ಕಾರ್ಯಾಗಾರ
ಮಂಗಳೂರು, ಎ.18: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 5 ರಿಂದ 9 ನೆಯ ತರಗತಿಯ ಕೊಂಕಣಿ ವಿದ್ಯಾರ್ಥಿಗಳಿಗಾಗಿ 3 ದಿವಸಗಳ ಉಚಿತ ಸನಿವಾಸಿ ರಂಗತರಬೇತಿ ಕಾರ್ಯಾಗಾರ ಎ 18 ರಿಂದ 20ರ ತನಕ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಎ. 18ರಂದು ಬೆಳಗ್ಗೆ 9:30ಕ್ಕೆ ಮಾಸ್ಟರ್ ಅಂಕುಶ ಭಟ್ ಅವರು ಉದ್ಘಾಟಿಸಲಿರುವರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಈ ಕಾರ್ಯಾಗಾರದಲ್ಲಿ ಮಕ್ಕಳಿಗೆ ಅನೇಕ ರೀತಿಯ ರಂಗಚಟುವಟಿಕೆಗಳು, ಸಂಗೀತದ ಜೊತೆ ನಾಟಕ ದೃಶ್ಯ ಕಟ್ಟುವಿಕೆ, ಪಾತ್ರ ಪೋಷಣಾ ಕ್ರಮ, ರಂಗ ಅಭ್ಯಾಸ, ಹಾಗೂ ಸಂಗೀತ, ನೃತ್ಯ ಕಲಿಕೆ, ದೃಶ್ಯ ಸಂಭಾಷಣೆ, ಹಾವ ಭಾವ ಅಭ್ಯಾಸ, ಸಂಭಾಷಣೆ, ಪಾತ್ರ ಹೊಂದಾಣಿಕೆ ಅಭ್ಯಾಸ, ಸ್ವರಾಭ್ಯಾಸ, ಕೋಲಾಟ, ಭಜನೆ, ವ್ಯಾಯಾಮ, ಧ್ಯಾನ ಮೊದಲಾದ ಹಲವಾರು ವಿಷಯಗಳಲ್ಲಿ ತರಬೇತಿಯನ್ನು ನೀಡಲಿರುವರು.
ಎ.20ರಂದು ಸಂಜೆ 3: 30ಕ್ಕೆ ರಂಗತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ಹೆಸರಾಂತ ರಂಗ ಕಲಾವಿದ ಎಚ್ ಸತೀಶ್ ನಾಯಕ ಭಾಗವಹಿಸಲಿರುವರು. ಈ ಸಂಧರ್ಭದಲ್ಲಿ ಮಕ್ಕಳ 3 ದಿವಸಗಳ ಅಭ್ಯಾಸದ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.