ರಸ್ತೆ ಸಂಪರ್ಕ ಕಡಿತ ಹಿನ್ನೆಲೆ: ಮಂಗಳೂರು- ಬೆಂಗಳೂರು ನಡುವೆ 2 ವಿಶೇಷ ರೈಲು
ಸಂಸದ ಬ್ರಿಜೇಶ್ ಚೌಟ ಮನವಿಗೆ ಕೆಲ ಗಂಟೆಗಳಲ್ಲೇ ರೈಲ್ವೆ ಅಧಿಕಾರಿಗಳ ಸ್ಪಂದನ
ಮಂಗಳೂರು, ಜು. 19: ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾ. ಬ್ರಿಜೇಶ ಚೌಟರವರು ಮನವಿ ಸಲ್ಲಿಸಿದ ಕೆಲ ಗಂಟೆಗಳಲ್ಲೇ ಸ್ಪಂದನ ನೀಡಿರುವ ರೈಲ್ವೆ ಅಧಿಕಾರಿಗಳು ಮಂಗಳೂರು-ಬೆಂಗಳೂರು ನಡುವೆ ಎರಡು ವಿಶೇಷ ರೈಲು ಓಡಿಸುವ ಆದೇಶ ಹೊರಡಿಸಿದ್ದಾರೆ.
ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ರೈಲು ಸಂಖ್ಯೆ 06547 ಬೆಂಗಳೂರು ನಗರ ಜಂಕ್ಷನ್ನಿಂದ ಮಂಗಳೂರು ಜಂಕ್ಷನ್ಗೆ 19ರಂದು ಹಾಗೂ ಮಂಗಳೂರು ಜಂಕ್ಷನ್ ನಿಂದ ಯಶವಂತಪುರ ಜಂಕ್ಷನ್ಗೆ ರೈಲು ಸಂಖ್ಯೆ 06548 ಜು.20ರಂದು ತಲಾ ಒಂದು ಟ್ರಿಪ್ ನಂತೆ ಸಂಚರಿಸಲಿದೆ.
ರೈಲು ಸಂಖ್ಯೆ 06549 ಯಶವಂತಪುರ- ಮಂಗಳೂರು ಜಂಕ್ಷನ್ ಗೆ ಹಾಗೂ ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ಜು.21 ಮತ್ತು 22ರಂದು 2 ಟ್ರಿಪ್ ಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.
ರೈಲು ಸಂಖ್ಯೆ 06547 ಬೆಂಗಳೂರು ನಗರ ಜಂಕ್ಷನ್ (ಎಸ್ಬಿಸಿ)ನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್ ನಿಂದ ಮಧ್ಯಾಹ್ನ 1:40ಕ್ಕೆ ಹೊರಟು ರಾತ್ರಿ 11:15ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06549 ಯಶವಂತಪುರದಿಂದ ರಾತ್ರಿ 12.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್ ನಿಂದ 1:40ಕ್ಕೆಹೊರಟು ಯಶವಂತಪುರಕ್ಕೆ ರಾತ್ರಿ 11:15ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ.
ವ್ಯಾಪಕ ಮಳೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿದೆ. ಹಾಗಾಗಿ ಮಂಗಳೂರು ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಆರಂಭಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್ಎಂಗೆ ಪತ್ರ ಬರೆದಿದ್ದರು.
ನಿನ್ನೆಯಿಂದಲೇ ಈ ಬಗ್ಗೆ ರೈಲ್ವೇ ಸಚಿವರು ಹಾಗೂ ಅಧಿಕಾರಿಗಳ ಜತೆ ಮಾತುಕತೆಯಲ್ಲಿ ತೊಡಗಿರುವ ಸಂಸದರು ಇಂದು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ರೈಲು ಅಧಿಕಾರಿಗಳು ಸ್ಪಂದಿಸಿ ವಿಶೇಷ ರೈಲು ಓಡಾಟಕ್ಕೆ ಆದೇಶ ನೀಡಿದ್ದಾರೆ.