ಡಿ.21ರಿಂದ 24: ಎಸ್ ಐಒದಿಂದ ‘ಒಡೆಯೋಣ ನಮ್ಮ ನಡುವಿನ ಗೋಡೆ’ ರಥಯಾತ್ರೆ
ಮಂಗಳೂರು, ಡಿ.18: ರಾಜ್ಯದ ಜಾತ್ಯತೀತ ಪರಂಪರೆಗೆ ಸಮಸ್ಯೆಯಾಗಿರುವ ಗೂಂಡಾಗಿರಿ, ಅನ್ಯಧರ್ಮೀಯರ ವ್ಯಾಪಾರಕ್ಕೆ ಬಹಿಷ್ಕಾರ ಮೊದಲಾದ ದ್ವೇಷ ಪ್ರಕ್ರಿಯೆ ವಿರುದ್ಧ ಎಸ್ ಐಒ (ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್) ವತಿಯಿಂದ ಡಿ.21ರಿಂದ 24ರವರೆಗೆ ದ.ಕ. ಜಿಲ್ಲಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.
ರಥಯಾತ್ರೆಯ ಪೋಸ್ಟರ್ ಅನ್ನು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದ ಎಸ್ ಐಒ ಜಿಲ್ಲಾಧ್ಯಕ್ಷ ಮುಹಮ್ಮದ್ ಆಸಿಫ್, ಎಸ್‌ಐಒದಿಂದ ರಥಯಾತ್ರೆಯ ವೇಳೆ ಬೀದಿ ನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದರು.
ವಿಭಜಕ ಶಕ್ತಿಗಳು ಏನೇ ಮಾಡಿದರೂ, ಅದಕ್ಕೆ ಪ್ರತಿಯಾಗಿ ಜಾತ್ಯತೀತ ಸಮಾಜವಾಗಿ ನಾವು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಎಸ್ ಐಒದಿಂದ ಮಾಡಲಿದ್ದೇವೆ. ದ್ವೇಷದ ವಿನಾಶಕಾರಿ ಪರಿಣಾಮ ದುಃಖಕರವಾಗಿದ್ದು, ಅದರ ಪ್ರಮಾಣ ಮತ್ತು ಪರಿಣಾಮ ಮಾಧ್ಯಮದಿಂದ ಹೆಚ್ಚಾಗುತ್ತಿದೆ. ದ್ವೇಷ ಭಾಷಣ ಸಹಿಷ್ಣುತೆ, ವೈವಿಧ್ಯಕ್ಕೆ ಮಾರಕ ಹಾಗೂ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ. ಆ ನಿಟ್ಟಿನಲ್ಲಿ ಇಂತಹ ದ್ವೇಷದ ಪ್ರಕ್ರಿಯೆಗಳ ವಿರುದ್ಧ ಎಸ್ ಐಒ ಜಾಗೃತಿ ಮೂಡಿಸುವ ಕಾರ್ಯ ಈ ರಥಯಾತ್ರೆಯ ಮೂಲಕ ನಡೆಸಲಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮುಸ್ತಫ, ಶಾಹಿಲ್, ಮುಹಮ್ಮದ್ ಹಯ್ಯಿನ್ ಉಪಸ್ಥಿತರಿದ್ದರು.