25ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಪಂದ್ಯ: ಯು.ಟಿ.ಖಾದರ್ ಚಾಲನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ನಡೆಯುವ 25ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಪಂದ್ಯಕ್ಕೆ ಶನಿವಾರ ನಗರದ ನೆಹರೂ ಮೈದಾನ ಫುಟ್‌ಬಾಲ್ ಗ್ರೌಂಡ್‌ನಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಅರೋಗ್ಯಪೂರ್ಣ ಶರೀರಕ್ಕೆ ಆಟೋಟ ಸ್ಪರ್ಧೆಗಳು ಸಹಕರಿಯಾಗಿದ್ದು ಯುವಜನರು ಫುಟ್ಬಾಲ್, ಕಬಡ್ಡಿಯಂತಹ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ದ ಕ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ನಿರಂತರವಾಗಿ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಿ ಯುವಕರನ್ನು ಕ್ರೀಡಾಸಕ್ತಿಗೆ ತೊಡಗಿಸುವ ಕಾರ್ಯ ಅಭಿನಂದನೀಯ ಎಂದರು.
ದ.ಕ ಜಿಲ್ಲಾ ಫುಟ್‌ಬಾಲ್ ಅಧ್ಯಕ್ಷ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಅವರು ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮನಪಾ ಸದಸ್ಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ಸದಸ್ಯ ಅಬ್ದುಲ್ ರವೂಫ್, ಶಂಸುದ್ದೀನ್ ಬಂದರ್, ಕ್ರೀಡೋದ್ಯಮಿ ಶರೀಫ್, ಯು.ಆರ್. ಅಕಾಡೆಮಿ ಸ್ಥಾಪಕಾಧ್ಯಕ್ಷ ಉಮೇಶ್ ಉಚ್ಚಿಲ್, ಯೆನಪೋಯ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಸುಜಿತ್ ಕೆ.ವಿ.ಅಸೋಸಿಯೇಶನ್ ಉಪಾಧ್ಯಕ್ಷ ಬಿ.ಬಿ.ಥೋಮಸ್, ಕಾರ್ಯದರ್ಶಿ ಹುಸೈನ್ ಬೋಳಾರ್, ಖಜಾಂಚಿ ಫಿರೋಜ್ ಉಳ್ಳಾಲ್, ಸದಸ್ಯ ಅಬ್ದುಲ್ ಲತೀಫ್ ಬೆಂಗರೆ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಡ್ರಗ್ಸ್ ವಿರುದ್ಧ ಯುವ ಸಮೂಹ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಥಾ ನಡೆಯಿತು. ನೆಹರೂ ಮೈದಾನದಿಂದ ಆರಂಭವಾಗಿ ಎ.ಬಿ.ಶೆಟ್ಟಿ ವೃತ್ತ, ಹ್ಯಾಮಿಲ್ಟನ್ ರಾವ್ ಆಂಡ್ ರಾವ್ ಸರ್ಕಲ್, ಲೇಡಿಗೋಷನ್, ಕ್ಲಾಕ್ ಟವರ್ ಮೂಲಕವಾಗಿ ನೆಹರೂ ಮೈದಾನದ ವರೆಗೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು.