ನ.26ರಂದು ಬೃಹತ್ ಕಾಲ್ನಡಿಗೆ ಜಾಥಾ, ಕೂಳೂರು ಸೇತುವೆಯ ಬಳಿ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ
ಸುರತ್ಕಲ್: ನಂತೂರು - ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ದುರವಸ್ಥೆಯ ವಿರುದ್ಧ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಸಮಾಧಾನ ವ್ಯಕ್ತ ಪಡಿಸಿದ್ದು, ನ.26ರಂದು ಬೃಹತ್ ಮಟ್ಟದ ಕಾಲ್ನಡಿಗೆ ಜಾಥಾ ಮತ್ತು ಕೂಳೂರು ಸೇತುವೆಯ ಬಳಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ.
ಮಂಗಳವಾರ ಕುಳಾಯಿ ಮಹಿಳಾ ಮಂಡಲದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ನಂತೂರು - ಮುಕ್ಕ ವರೆಗಿನ ರಾಷ್ಟ್ರೀಯ ಹೆದ್ದಾರಿ ಪೂರ್ಣ ಪ್ರಮಾಣದ ದುರಸ್ತಿಗೊಳಿಸುವುದು, ಕೆಪಿಟಿ ಮತ್ತು ನಂತೂರಿ ನಲ್ಲಿ ಕಾಲಮಿತಿಯೊಳಗಾಗಿ ಮೇಲ್ಸೇತುವೆ ನಿರ್ಮಿಸುವುದು, ಕೂಳೂರು ಸೇತುವೆಯನ್ನು ಶೀಘ್ರ ಪೂರ್ಣಗೊಳಿಸುವುದು, ವ್ಯವಸ್ಥಿತ ರೀತಿಯಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣ, ಸೂಕ್ತ ರೀತಿಯಲ್ಲಿ ಬೀದಿದೀಪಗಳ ಅಳವಡಿಕೆ ಮತ್ತು ನಿರ್ವಹಣೆ ಮಾಡುವುದು, ವೈಜ್ಞಾನಿಕ ರೀತಿಯಲ್ಲಿ ಚರಂಡಿಗಳ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ನ.26ರಂದು ಕೂಳೂರು ಸೇತುವೆ ಬಳಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿ ನಡೆಸಲು ನಿರ್ಧರಿಸಲಾಯಿತು.
ಹೆದ್ದಾರಿಯ ಕೆಲವೆಡೆ ಬೀದಿದೀಪಗಳು ಉರಿದರೆ ಇನ್ನು ಕೆಲವೆಡೆ ಉರಿಯುತ್ತಿಲ್ಲ ಎಂದು ಸಭೆಯಲ್ಲಿದ್ದವರು ಅಸಮಾಧಾನ ಹೇಳಿಕೊಂಡರು, ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿ ಸಿರುವ ಬೀದಿ ದೀಪಗಳ ಅಳವಡಿಕೆ ಮತ್ತು ನಿರ್ವಹಣೆ ಮನಪಾಕ್ಕೆ ವಹಿಸಲಾಗಿದೆ. ಹಾಗಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ಸೂಕ್ತ ನಿರ್ವಹಣೆ ಬಗ್ಗೆ ಮಹಾನಗರ ಪಾಲಿಕೆಗೆ ಲಿಖಿತ ದೂರು ನೀಡುವುದಾಗಿ ಸಭೆ ನಿರ್ಣಯಿಸಿತು.
ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ನಂತೂರಿನಿಂದ ಮುಕ್ಕವರೆಗಿನ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸಿ ಹಲವು ವರ್ಷಗಳಿಂದ ಸಂದಿವೆ. ಮಳೆಗಾಲಕ್ಕೆ ಬಿದ್ದಿರುವ ಮಾರಣಾಂತಿಕ ಗುಂಡಿಗಳನ್ನು ಕಳಪೆಯಾಗಿ ತೇಪೆ ಹಾಕಲಾಗುತ್ತಿದೆ. ಈ ರಸ್ತೆಯ ಇಂದಿನ ದುಸ್ಥಿತಿ ವಾಹನ ಸಂಚಾರಕ್ಕೆ ಜನ ಭಯ ಪಡುವಂತಾಗಿದೆ. ಅಪಘಾತಕ್ಕೆ ಕುಖ್ಯಾತ ರಸ್ತೆಯಾಗಿ ಮಾರ್ಪಟ್ಟಿದೆ. ಕುಸಿಯುವ ಭೀತಿ ಎದುರಿಸುತ್ತಿರುವ ಕೂಳೂರು ಹಳೆಯ ಸೇತುವೆಗೆ ಬದಲಿಯಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಐದು ವರ್ಷಗಳ ತರುವಾಯವೂ ಕುಂಟುತ್ತಾ ಸಾಗುತ್ತಿದ್ದು, ಸದ್ಯ ಕಾಮಗಾರಿಯನ್ನೇ ಸ್ಥಗಿಸಗೊಳಿ ಸಲಾಗಿದೆ. ನಂತೂರು ಮತ್ತು ಕೆಪಿಟಿ ಜಂಕ್ಷನ್ ದಾಟುವುದೆಂದರೆ ವಾಹನ ಸವಾರರ ಪಾಲಿಗೆ ಯಮಯಾತನೆಯಾಗಿದೆ. ದಿನನಿತ್ಯ ಟ್ರಾಫಿಕ್ ಜಾಮ್, ಅಪಘಾತ, ಸಾವು ನೋವು ಇಲ್ಲಿ ಸಂಭವಿಸುತ್ತಿವೆ. ಬಹಳ ತಡವಾಗಿ ನಂತೂರಿನಲ್ಲಿ ಫ್ಲೈ ಓವರ್ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಇದು ಇನ್ನೊಂದು ಪಂಪ್ ವೆಲ್ ಮೇಲ್ಸೇತುವೆಯಂತಾಗದಿರಲು ಎಚ್ಚರ ವಹಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಬೃಹತ್ ಕಾಲ್ನಡಿಗೆ ಜಾಥ ಮತ್ತು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಂಜಿ ಹೆಗ್ಡೆ ಅವರು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಗಳಿಂದಾಗುತ್ತಿರುವ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟಗಳು ನಡೆಸುವುದು ಅಗತ್ಯ. ಇಲ್ಲಿನ ಚುನಾಯಿತ ಶಾಸಕರು ಯಾರೂ ಮಾತನಾಡುತ್ತಿಲ್ಲ. ಕಷ್ಟ ಕಾರ್ಪರ್ಣ್ಯಗಳ ಬಗ್ಗೆ ಮಾತನಾಡುವುದುದಿಲ್ಲ. ಅವಕಾಶಗಳು ಸಿಕ್ಕಾಗಲೆಲ್ಲಾ ಜನರ ನಡುವೆ ಕೋಮು ಭಾವನೆ ಕೆರಳಿಸುವ ಮಾತುಗಳನ್ನಷ್ಟೇ ಆಡುತ್ತಿದ್ದಾರೆ. ಈ ಹೋರಾಟ ಚಳವಳಿಯಾಗಿ ಮುಂದು ವರಿಯಬೇಕಿದೆ. ಅದಕ್ಕಾಗಿ ಸಮಾನ ಮನಸ್ಕರು, ಸ್ವಾಥ್ಯ ಸಮಾಜ ಬಯಸುವ ಎಲ್ಲರೂ ಟೋಲ್ ಗೇಟ್ ಹೋರಾಟದ ವೇಳೆ ಕೈಜೋಡಿಸಿದಂತೆ ಹೆದ್ದಾರಿ ವಿರುದ್ಧದ ಹೋರಾಟಗಳಿಗೂ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿಯ ಜೊತೆ ಸಹಕರಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಉಪಮೇಯರ್ ಗಳಾದ ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ದಲಿತ ನಾಯಕರಾದ ಎಂ ದೇವದಾಸ್, ಹೋರಾಟ ಸಮಿತಿಯ ಸಹ ಸಂಚಾಲಕರಾದ ವೈ ರಾಘವೇಂದ್ರ ರಾವ್, ಬಿ ಕೆ ಇಮ್ತಿಯಾಝ್, ಮೂಸಬ್ಬ ಪಕ್ಷಿಕೆರೆ, ರಮೇಶ್ ಟಿ ಎನ್, ಸದಾಶಿವ ಶೆಟ್ಟಿ, ರಾಜೇಶ್ ಕುಳಾಯಿ, ದಲಿತ ಸಂಘಟನೆಗಳ ಸುಧಾಕರ ಪಡುಬಿದ್ರೆ, ರಘು ಎಕ್ಕಾರು, ಕೃಷ್ಣ ತಣ್ಣೀರುಬಾವಿ, ಮುಸ್ಲಿಂ ಐಕ್ಯತಾ ವೇದಿಕೆಯ ಆಶ್ರಫ್ ಬದ್ರಿಯ, ಅದ್ದು ಕೃಷ್ಣಾಪುರ, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಡಿವೈಎಫ್ಐ ನ ಮಕ್ಸೂದ್ ಬಿ ಕೆ, ಪ್ರಮೀಳಾ ಕೆ, ಮಹಿಳಾ ಕಾಂಗ್ರೆಸ್ ನ ಶಶಿಕಲಾ, ಹೋರಾಟ ಸಮಿತಿಯ ಪ್ರಮುಖರಾದ ಆನಂದ ಅಮೀನ್, ಹರೀಶ್ ಪೇಜಾವರ, ಅಬೂಬಕ್ಕರ್ ಬಾವ, ಆಶಾ ಬೋಳೂರು, ಗಂಗಾಧರ ಬಂಜನ್ ಶಮೀರ್ ಕಾಟಿಪಳ್ಳ, ಸಲೀಂ ಶ್ಯಾಡೋ ಸೇರಿದಂತೆ ಹಲವು ಸಂಘಟನೆ ಗಳ ಪ್ರಮುಖರು ಹಾಜರಿದ್ದರು. ಶ್ರೀನಾಥ್ ಕುಲಾಲ್ ಸ್ವಾಗತಿಸಿದರು.