ನ.26ರಂದು ಪರಾರಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಗ್ರಾಮಸ್ಥರ ನಿರ್ಧಾರ
ಗುರುಪುರ: ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲೆ ಮೇಲ್ಮನೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸ ಲಾದ ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಆಗ್ರಹಿಸಿ ನ.26ರಂದು ಉಳಾಯಿಬೆಟ್ಟಿಗೆ ಸಂಪರ್ಕ ಕಲ್ಪಿಸುವ ಪರಾರಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಉಳಾಯಿಬೆಟ್ಟು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಕಿರು ಸೇತುವೆಯಲ್ಲಿ ಘನ ವಾಹನ ನಿಷೇಧದ ಬಳಿಕ ಈ ಭಾಗದ ಶಾಲಾ ಕಾಲೇಜು, ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ಧರ ಸಹಿತ ಸಾರ್ವಜನಿಕರು ಒಂದೆರಡು ಕಿಮೀ ಅಂತರದ ಪ್ರದೇಶವನ್ನು 7ರಿಂದ 8ಕಿಮೀ ಸುತ್ತಿ ಪ್ರಯಣಿಸಬೇಕಾದ ಸ್ಥಿತಿಇದೆ. ಇನ್ನು ಸಮಯ ಮತ್ತು ಹೆಚ್ಚಿನ ಹಣವೂ ನಷ್ಟವಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ಹಾರಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಕಿರು ಸೇತುವೆ ದುರಸ್ತಿಯಾಗುವ ವರೆಗೆ ಸಾರ್ವಜನಿಕರ ಸಂಚಾರಕ್ಕೆ ಪೂರಕವಾಗುವಂತೆ ಪರ್ಯಾಯ ವಾಗಿ ತಾತ್ಕಾಲಿಕ ಮಣ್ಣಿ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ನಾಗರೀಕರು ನ.13ರಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಆಡಳಿಯ ಯಂತ್ರ, ಪಿಡಬ್ಲ್ಯೂಡಿ ಎಇ ಶ್ರೀಕಾಂತ್ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆಯನ್ನು ನಡೆಸಿತ್ತು. ಮಣ್ಣಿನ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದ ಅಧಿಕಾರಿ, ನ.16ರೊಳಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು.
ದುರಸ್ತಿ ಕಾಂಗಾರಿ ಮತ್ತು ಪರ್ಯಾಯ ಮಣ್ಣಿನ ರಸ್ತೆ ಕಾಮಗಾರಿಯ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಮನಪಾ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಜೊತೆಗೆ ತಾತ್ಕಾಲಿಕ ರಸ್ತೆ ನಿರ್ಮಾಣದ ಖರ್ಚಿನ ಅಂದಾಜು ಪಟ್ಟಿ ತಯಾರಿಸಲೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಈ ವರೆಗೂ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಜೊತೆಗೆ ಕಾಮಗಾರಿಯ ಮುನ್ಸೂಚನೆಯೂ ಇಲ್ಲ ಎಂದು ಆರೋಪಿಸಿರುವ ನಾಗರೀಕರು ನ.26ರಂದು ಉಳಾಯಿಬೆಟ್ಟಿಗೆ ಸಂಪರ್ಕ ಕಲ್ಪಿಸುವ ಪರಾರಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
"ಉಳಾಯಿಬೆಟ್ಟು ಕಿರು ಸೇತುವೆ ಶಿಥಿಲಗೊಂಡಿದೆ, ಯಾವುದೇ ಘನವಃನ ಸಂಚರಿಸಬಾರದೆಂದು ಶಾಲೆ ಕಾಲೇಜುಗಳ ವಾಹನ ಸರಕಾರಿ ಬಸ್ ಗಳ ಸಂಚಾರಕ್ಕೂ ಅಧಿಕಾರಿಗಳು ನಿರ್ಬಂಧ ಹೇರಿರುವ ಬಳಿಕವೂ 3-4 ಯೂನಿಟ್ ಭಾರದ ಸರಕು ಹೊತ್ತ ಘನ ವಾಹನಗಳು ಯಾವುದೇ ಆತಂಕವಿಲ್ಲದೆ ಸಂಚರಿಸುತ್ತಿವೆ. ಅಧಿಕಾರಗಳು ಯಾವ ಮಾನದಂಡದ ಮೇಲೆ ಘನವಾಹನ ನಿಷೇಧಿಸಿದ್ದಾರೆ ಎಂದು ಸ್ಪಷ್ಟ ಪಡಿಸಬೇಕು. ಇನ್ನೊಂದೆಡೆ ಘನ ವಾಹನ ಸಂಚಾರ ನಿಷೇಧಕ್ಕಾಗಿ ಸೇತುವೆಯ ಎರಡೂ ಕಡೆ ನಿರ್ಮಾಣ ಮಾಡಲಾಗಿರುವ ಕಮಾನುಗಳ ಪೈಕಿ ಒಂದು ನಜ್ಜುಗುಜ್ಜಾಗಿದೆ. ಘನವಾಹನಗಳ ಸಂಚಾರವೇ ನಿರ್ಬಂಧವಾಗಿರುವ ಮೇಲೆ ಸೇತುವೆ ಮೇಲಿನ ಕಮಾನು ನಜ್ಜುಗುಜ್ಜಾಗಿರುವುದು ಹೇಗೆ? ಈ ಬಗ್ಗೆ ತನಿಖೆಯಾಗಬೇಕು".
-ಹರಿಕೇಶ್ ಶೆಟ್ಟಿ, ಅಧ್ಯಕ್ಷರು, ಉಳಾಯಿಬೆಟ್ಟು ಗ್ರಾಮ ಪಂಚಾಯತ್