ಡಿ.30: ಹಜ್ ಎರಡನೇ ಕಂತು ಪಾವತಿಗೆ ಕಾಲಾವಕಾಶ ವಿಸ್ತರಣೆ
ಮಂಗಳೂರು, ಡಿ.16: ಭಾರತ ಸರಕಾರದ ಹಜ್ ಸಮಿತಿ ಮೂಲಕ 2025ರಲ್ಲಿ ಪವಿತ್ರ ಹಜ್ ಯಾತ್ರೆಗೆ ತೆರಳಲು ಈಗಾಗಲೇ ಮೊದಲು ಕಂತು ಪಾವತಿಸಿದವರಿಗೆ ಎರಡನೇ ಕಂತು 1,42,000 ರೂ. ಪಾವತಿಸಲು ಕಾಲಾವಕಾಶವನ್ನು ಹಜ್ ಕಮಿಟಿ ಆಫ ಇಂಡಿಯಾ ಡಿ.30ರ ತನಕ ವಿಸ್ತರಿಸಿದೆ.
ವೇಟಿಂಗ್ ಲೀಸ್ಟ್ನಲ್ಲಿ ಆಯ್ಕೆಯಾದವರಿಗೆ ಇದೇ ವೇಳೆ ಮೊದಲ ಹಾಗೂ ಎರಡನೇ ಕಂತು ಒಟ್ಟು 2,72,300 ರೂ.ಗಳನ್ನು ಪಾವತಿಸಲು ಡಿ.30ರ ತನಕ ಕಾಲಾವಕಾಶ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಅವಕಾಶ ಪಡೆದು ಮೊದಲ ಕಂತು ಪಾವತಿಸಿದವರಿಗೆ ಎರಡನೇ ಕಂತು ಪಾವತಿಸಲು ಹಾಗೂ ವೇಟಿಂಗ್ ಲೀಸ್ಟ್ನಲ್ಲಿದ್ದವರಿಗೆ ಈ ಮೊದಲು ಕಂತು ಪಾವತಿ ಸಲು ಡಿ.16 ತನಕ ಅವಕಾಶ ನೀಡಲಾಗಿತ್ತು. ಹಜ್ ಯಾತ್ರಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಇದೀಗ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಹಜ್ ಕಮಿಟಿಯ ಸಿಇಒ ನಝೀಮ್ ಅಹ್ಮದ್ ಎ ಅವರು ಡಿ.16ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇದೀಗ ನಿಗದಿತ ದಿನಾಂಕದೊಳಗೆ ಕಂತನ್ನು ಸಂಬಂಧಪಟ್ಟವರು ಪಾವತಿಸಬೇಕಾಗಿದೆ. ಹಣ ಪಾವತಿಸಿದ ಬಳಿಕ ಅಗತ್ಯದ ದಾಖಲೆಪತ್ರಗಳನ್ನು ರಾಜ್ಯ ಹಜ್ ಕಮಿಟಿಗೆ ಸಲ್ಲಿಸಲು 2025, ಜನವರಿ 1ರ ತನಕ ಅವಕಾಶ ನೀಡಿದೆ ಎಂದು ರಾಜ್ಯ ಹಜ್ ಕಮಿಟಿಯ ಸದಸ್ಯ ಸಯ್ಯದ್ ಅಶ್ರಫ್ ತಂಙಳ್ ಆದೂರು ಮಾಹಿತಿ ನೀಡಿದ್ದಾರೆ.