ನೈರುತ್ಯ ರೈಲ್ವೆ: 6,27,014 ಟಿಕೆಟ್ ರಹಿತ ಪ್ರಯಾಣ ಪ್ರಕರಣ ದಾಖಲು, 46.31 ಕೋಟಿ ರೂ. ದಂಡ ಸಂಗ್ರಹ
ಸಾಂದರ್ಭಿಕ ಚಿತ್ರ (PTI)
ಮಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 2023 ರವರೆಗೆ ನೈರುತ್ಯ ರೈಲ್ವೆಯು ಟಿಕೆಟ್ ರಹಿತ ಪ್ರಯಾಣದ 6,27,014 ಪ್ರಕರಣಗಳನ್ನು ದಾಖಲಿಸಿದ್ದು, 46.31 ಕೋಟಿ ರೂ. ದಂಡವನ್ನು ಸಂಗ್ರಹಿಸಿದೆ.
ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 9.95 ಹೆಚ್ಚಳವಾಗಿದೆ. ಇದು ನೈರುತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ದಂಡ ವಸೂಲಿ ದಾಖಲೆಯಾಗಿದೆ.
ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು 3,68,205 ಪ್ರಕರಣಗಳನ್ನು ದಾಖಲಿಸಿ, 28.26 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ ಎಂದು ಪ್ರಕಟನೆ ತಿಳಿಸಿದೆ.
ನೈರುತ್ಯ ರೈಲ್ವೆಯ ಟಿಕೆಟ್ ತಪಾಸಣಾ ಸಿಬ್ಬಂದಿ ಈ ಹಣಕಾಸು ವರ್ಷದಲ್ಲಿ ಅಂದರೆ 2023ರ ಎಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣವನ್ನು ತಡೆಯಲು ಎಕ್ಸ್ಪ್ರೆಸ್, ವಿಶೇಷ ರೈಲುಗಳು ಸೇರಿದಂತೆ ಪ್ರಯಾಣಿಕರ ರೈಲು ಸೇವೆಗಳಲ್ಲಿ ಎಲ್ಲ ಅಧಿಕೃತ ರೈಲು ಬಳಕೆದಾರರಿಗೆ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿಶೇಷ ಟಿಕೆಟ್ ತಪಾಸಣಾ ಕಾರ್ಯವನ್ನು ಸದಾ ನಿಯಮಿತವಾಗಿ ನಡೆಸಲಾಗುತ್ತಿದೆ.
2023 ರ ಡಿಸೆಂಬರ್ ತಿಂಗಳಲ್ಲಿ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ 72041 ಪ್ರಕರಣಗಳನ್ನು ದಾಖಲಿಸಿ 5.13 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ.
ಎ.1 ರಿಂದ ಡಿ. 31 ರವರೆಗೆ ವಿಭಾಗವಾರು ದಂಡ ಸಂಗ್ರಹ ವಿವರ ಇಂತಿವೆ. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು 96790 ಪ್ರಕರಣಗಳನ್ನು ದಾಖಲಿಸಿ 6.36 ಕೋಟಿ ರೂ. ದಂಡವನ್ನು ಸಂಗ್ರಹಿಸಿದೆ. ಬೆಂಗಳೂರು ವಿಭಾಗವು 368205 ಪ್ರಕರಣಗಳನ್ನು ದಾಖಲಿಸಿ 28.26 ಕೋಟಿ ರೂ., ಮೈಸೂರು ವಿಭಾಗವು 100538 ಪ್ರಕರಣಗಳನ್ನು ದಾಖಲಿಸಿ 5.91 ಕೋಟಿ ರೂ., ನೈರುತ್ಯ ರೈಲ್ವೆಯ ಫ್ಲೈಯಿಂಗ್ ಸ್ಕ್ವಾಡ್ (ಕೇಂದ್ರ ಕಚೇರಿ) ವಿಭಾಗವು 61481 ಪ್ರಕರಣಗಳನ್ನು ದಾಖಲಿಸಿ 5.77 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.