ಶರಣ್ ಪಂಪ್ವೆಲ್ ವಿರುದ್ಧ ಕಾನೂನು ಕ್ರಮಕ್ಕೆ ಸಮಾನ ಮನಸ್ಕರ ಜಂಟಿ ವೇದಿಕೆ ಆಗ್ರಹ
ದಸರಾ ಸಂತೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಖರೀದಿ ಮಾಡದಂತೆ ಕರೆ ನೀಡಿದ ಪ್ರಕರಣ
ಶರಣ್ ಪಂಪ್ವೆಲ್
ಮಂಗಳೂರು, ಅ.17: ನಗರದ ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದಲ್ಲಿ ವ್ಯಾಪಾರ ಮಾಡುತ್ತಿರುವ ಮುಸ್ಲಿಮರಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡದಂತೆ ಕರೆ ನೀಡಿದ ಸಂಘ ಪರಿವಾರದ ಶರಣ್ ಪಂಪ್ವೆಲ್ನನ್ನು ಬಂಧಿಸಿ ಶಾಂತಿ ಕಾಪಾಡಬೇಕು ಎಂದು ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಆಗ್ರಹಿಸಿದೆ.
ಮಂಗಳೂರು ದಸರಾದ ಕೊನೆಯ ದಿನ ಮಾರ್ನಮಿ ಹುಲಿವೇಷ ತಂಡಗಳು ವೇಷ ಕಳಚಲು ಮಂಗಳಾದೇವಿ ದೇವಸ್ಥಾನದ ಉತ್ಸವಕ್ಕೆ ಆಗಮಿಸುವುದು, ಹಿಂದು, ಮುಸ್ಲಿಂ, ಕ್ರೈಸ್ತರು ಅಲ್ಲಿ ಸೇರಿ ಸಂಭ್ರಮಿಸುವುದು ಅನಾದಿ ಕಾಲದಿಂದಲೂ ನಡೆದಕೊಂಡುಬಂದಿದೆ. ಇಂತಹ ದಸರಾ ಉತ್ಸವವನ್ನೇ ಗುರಿಯಾಗಿಸಿ ವಿಎಚ್ಪಿ, ಬಜರಂಗದಳವನ್ನು ಛೂಬಿಟ್ಟು ಮತೀಯ ಸೌಹಾರ್ದವನ್ನು ಕದಡುವ ಕೆಲಸವನ್ನು ಬಹಿರಂವಾಗಿಯೇ ಮಾಡಲಾಗತ್ತದೆ. ಅದರ ಭಾಗವಾಗಿ ಜಾತ್ರೆಯ ಮುಸ್ಲಿಂ ವ್ಯಾಪಾರಿಗಳಿಗೆ ಮಂಗಳಾದೇವಿ ದಸರಾ ಸಂತೆಯಲ್ಲಿ ಅಂಗಡಿ ಮಳಿಗೆ ನೀಡದಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾದರಿಯಲ್ಲಿ ಬೆದರಿಕೆ ಪತ್ರ ನೀಡಲಾಯಿತು.
ಜಿಲ್ಲಾಡಳಿತದ ಮಧ್ಯಪ್ರವೇಶದ ನಂತರ ಆ ಪ್ರಯತ್ನ ವಿಫಲಗೊಂಡು ಹಿನ್ನಡೆ ಅನುಭವಿಸಿ ನಂತರ ಮಂಗಳಾ ದೇವಿ ದೇವಸ್ಥಾನದ ಮುಂಭಾಗದ ನಗರ ಪಾಲಿಕೆ ಜಾಗದಲ್ಲಿ ಹಾಕಲಾದ ವ್ಯಾಪಾರದ ಸ್ಟಾಲ್ಗಳಲ್ಲಿ ಹಿಂದೂ ವ್ಯಾಪಾರಿಗಳ ಮಳಿಗೆಗಳನ್ನು ಹುಡುಕಿ ಬಲವಂತವಾಗಿ ಕೇಸರಿ ಧ್ವಜ ಕಟ್ಟುವ, ಆ ಮೂಲಕ ಮುಸ್ಲಿಂ ವ್ಯಾಪಾರಿಗಳನ್ನು ಪ್ರತ್ಯೇಕಿಸುವ, ಕೇಸರಿ ಬಾವುಟ ಕಟ್ಟಿರುವ ಮಳಿಗೆಗಳಲ್ಲಿ ಮಾತ್ರ ಹಿಂದುಗಳು ಖರೀದಿ ನಡೆಸುವಂತೆ, ಮುಸ್ಲಿಂ ಸಂತೆ ವ್ಯಾಪಾರಿ ಗಳೊಂದಿಗೆ ವ್ಯಾಪಾರ ನಡೆಸದೆ ಬಹಿಷ್ಕಾರ ಹಾಕುವಂತೆ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಬಜರಂಗ ದಳದ ಮುಖಂಡರು ಬಹಿರಂಗ ಕರೆ ನೀಡಿರುವುದನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕಿದೆ. ತಕ್ಷಣ ಪ್ರಕರಣ ದಾಖಲಿಸಿ ಶರಣ್ ಪಂಪ್ವೆಲ್ ಮತ್ತವರ ಜೊತೆಗಾರರಾದ ಕ್ರಿಮಿನಲ್ ಗುಂಪುನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಮುಂದಿನ ಲೋಕಸಭೆ ಚುನಾವಣೆಯ ಸಿದ್ಧತೆಯ ಭಾಗವಾಗಿ ಈ ಎಲ್ಲಾ ಘಟನೆಗಳು ನಡೆಯುತ್ತಿವೆ. ಶರಣ್ ಪಂಪ್ವೆಲ್ ಸಹಿತ ಬಜರಂಗ ದಳದ ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಬಿಜೆಪಿ ಮತೀಯ ಉದ್ವಿಗ್ನತೆ ಕೆರಳಿಸಲು, ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣಕ್ಕೆ ಮುಂದಾಗಿದೆ. ಸೌಹಾರ್ದಕ್ಕೆ ಮಾದರಿಯಾಗಿರುವ ಮಂಗಳಾದೇವಿ ದೇವಳದ ದಸರಾದಲ್ಲಿ ಯಶಸ್ಸು ಕಂಡರೆ ಮುಂದಿನ ಚುನಾವಣೆಯವರೆಗೆ ಎಲ್ಲಾ ಧಾರ್ಮಿಕ, ಸಾಂಸ್ಕ್ರತಿಕ ಉತ್ಸವಗಳಲ್ಲಿ ಈ ಮಾದರಿಯನ್ನು ಬಿಜೆಪಿ ಅನುಸರಿಸುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಶಾಂತಿ ಕಾಪಾಡಲು ಮುಂದಾಗಬೇಕು. ಐಕ್ಯತೆ, ಸೌಹಾರ್ದ ಪರಂಪರೆ ಎತ್ತಿ ಹಿಡಿಯಬೇಕು ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಮಿತಿಯ ಸದಸ್ಯರಾದ ಕೆ.ಯಾದವ ಶೆಟ್ಟಿ, ಯಶವಂತ ಮರೋಳಿ, ಎಂ. ದೇವದಾಸ್, ದಿನೇಶ್ ಹೆಗ್ಡೆ ಉಳೆಪಾಡಿ, ಎಂಜಿ ಹೆಗ್ಡೆ, ಮಂಜುಳಾ ನಾಯಕ್, ಸುನಿಲ್ ಕುಮಾರ್ ಬಜಾಲ್, ರಘು ಕೆ. ಎಕ್ಕಾರು, ವಾಸುದೇವ ಉಚ್ಚಿಲ, ಮುಹಮ್ಮದ್ ಕುಂಜತ್ತಬೈಲ್, ಸಂತೋಷ್ ಬಜಾಲ್, ಸೀತಾರಾಮ ಬೇರಿಂಜೆ, ಕೃಷ್ಣ ತಣ್ಣೀರುಬಾವಿ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.