ಮಂಗಳೂರು: ಉತ್ತರ ಭಾರತ ಮೂಲದ ವಲಸೆ ಕಾರ್ಮಿಕನ ಥಳಿಸಿ ಹತ್ಯೆ; ಆರೋಪ
► ಕುಡುಪು ಸಮೀಪ ಶವ ಪತ್ತೆ ► ಪೊಲೀಸರಿಂದ ನಿರ್ಲಕ್ಷ್ಯ: ಸಾರ್ವಜನಿಕರ ತೀವ್ರ ಆಕ್ಷೇಪ

ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪ ರವಿವಾರ ಸಂಜೆ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕನೊಬ್ಬನ ಶವ ಪತ್ತೆಯಾಗಿದ್ದು, ಆತನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೃತ್ಯ ನಡೆದು 24 ಗಂಟೆ ಕಳೆದರೂ ಕೂಡ ಪೊಲೀಸರು ಘಟನೆಯನ್ನು ಲಘುವಾಗಿ ಪರಿಗಣಿಸಿ ಪ್ರಾಥಮಿಕ ಮಾಹಿತಿಯನ್ನು ನೀಡಲು ಮೀನಮೇಷ ಎಣಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ.
ರವಿವಾರ ಹಾಡಹಗಲೇ ಈ ಕೃತ್ಯ ನಡೆದಿದ್ದರೂ ಕೂಡ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಘಪರಿವಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.
ರವಿವಾರ ಬೆಳಗ್ಗಿನಿಂದ ಕುಡುಪು ದೇವಸ್ಥಾನ ಸಮೀಪದ ಗದ್ದೆಯಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾ ಗಿತ್ತು. ಅದೇ ಪ್ರದೇಶದಲ್ಲಿ 25ರಿಂದ 30 ವರ್ಷ ವಯಸ್ಸಿನ ಅಪರಿಚಿತ ವಲಸೆ ಕಾರ್ಮಿಕನ ಸಂಜೆ 5 ಗಂಟೆ ವೇಳೆ ಪತ್ತೆಯಾಗಿದೆ. ಆತನನ್ನು 25ರಷ್ಟು ಯುವಕರ ಗುಂಪು ಮರದ ರೀಪು, ಗಿಡಗಂಟಿಯಿಂದ ಮನ ಬಂದಂತೆ ಥಳಿಸಿ ಮುಖಕ್ಕೆ ಕಲ್ಲಿನಿಂದ ಜಜ್ಜಿ ಗುರುತು ಸಿಗದಂತೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮುಖ, ಕೈಕಾಲಿಗೆ ಥಳಿಸಿದ್ದಲ್ಲದೆ ಮರ್ಮಾಂಗಕ್ಕೆ ತುಳಿದು ಮತೀಯ ದ್ವೇಷ ಕಾರಿದ್ದಾರೆ ಎನ್ನಲಾಗಿದೆ. ವಲಸೆ ಕಾರ್ಮಿಕನಿಗೆ ಮನಬಂದಂತೆ ಥಳಿಸುತ್ತಿರುವುದನ್ನು ಕಂಡ ಕೆಲವರು ಸಾಕು ಬಿಡಿ ಎಂದರೂ ಕೂಡ ಆ ಗುಂಪು ಹಲ್ಲೆಯನ್ನು ಮುಂದುವರಿಸಿದೆ. ಇದರಿಂದ ಕೆಲವರು ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ವಲಸೆ ಕಾರ್ಮಿಕ ಪ್ರಾಣ ಬಿಡುತ್ತಲೇ ಕೆಲವರು ಹೆದರಿ ದ್ವಿಚಕ್ರ ವಾಹನವನ್ನೂ ಕೂಡ ಬಿಟ್ಟು ಪರಾರಿಯಾಗಿದ್ದರು ಎಂದು ಹೇಳಲಾಗಿದೆ.
"ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಮೃತಪಟ್ಟ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಆತನ ಗುರುತು ಪತ್ತೆಗಾಗಿ ಪ್ರಯತ್ನ ಸಾಗಿದೆ".
-ಅನುಪಮ್ ಅಗ್ರವಾಲ್, ಪೊಲೀಸ್ ಆಯುಕ್ತರು, ಮಂಗಳೂರು ನಗರ
"ಮಂಗಳೂರು ಹೊರವಲಯದ ಕುಡುಪುವಿನಲ್ಲಿ ರವಿವಾರ ಸಂಜೆ ಕ್ರಿಕೆಟ್ ಆಡುತ್ತಿದ್ದ ಗುಂಪೊಂದು ಅಲ್ಲಿದ್ದ ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆಗೈದಿರುವ ಕುರಿತು ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿದೆ. ರಾಜ್ಯ ಸರಕಾರ ಈ ಕುರಿತು ಗಮನಹರಿಸಬೇಕು. ಖುದ್ದು ಮುಖ್ಯಮಂತ್ರಿಗಳು ಈ ಗುಂಪು ಹಲ್ಲೆ, ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉತ್ತಮ ಅಧಿಕಾರಿಗಳ ತಂಡವನ್ನು ತನಿಖೆಗೆ ನೇಮಿಸಬೇಕು".
-ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ, ಸಿಪಿಎಂ ದ.ಕ. ಜಿಲ್ಲೆ
"ವಲಸೆ ಕಾರ್ಮಿಕನನ್ನು ಆತನ ಧರ್ಮದ ಗುರುತಿನ ಕಾರಣಕ್ಕೆ ಕಲ್ಲು, ದೊಣ್ಣೆ, ಬ್ಯಾಟುಗಳಿಂದ ಅಲ್ಲಿದ್ದ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದೆ ಎಂಬ ಆರೋಪ ಬಂದಿದೆ. ಈ ಕೃತ್ಯ ಖಂಡನೀಯ. ಪೊಲೀಸರು ನಿಷ್ಪಕ್ಷವಾಗಿ ಮತ್ತು ಗಂಭೀರವಾಗಿ ಈ ಪ್ರಕರಣವನ್ನು ತನಿಖೆ ನಡೆಸಬೇಕು. ವಿಶೇಷ ತನಿಖಾ ತಂಡವನ್ನು ರಚಿಸಿ ಅಮೂಲಾಗ್ರ ತನಿಖೆ ನಡೆಸಬೇಕು. ಸತ್ಯ ಹೊರಗೆ ಬರಬೇಕು".
-ಕೆ.ಕೆ.ಶಾಹುಲ್ ಹಮೀದ್, ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ
"ವಲಸೆ ಕಾರ್ಮಿಕನನ್ನು ಮುಸ್ಲಿಮ್ ಎಂಬ ಕಾರಣಕ್ಕೆ ಸಂಘ ಪರಿವಾರ ಮತ್ತು ಸ್ಥಳೀಯ ಮಾಜಿ ಕಾರ್ಪೊರೇಟರ್ ಅವರ ಪತಿ ಸೇರಿ ಗುಂಪು ಹತ್ಯೆಗೆದ್ದಿದ್ದಾರೆ. ತಪ್ಪಿತಸ್ಥರ ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಬೇಕು".
ಕೆ.ಅಶ್ರಫ್, ಮಾಜಿ ಮೇಯರ್, ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
"ಸ್ಥಳೀಯರು ಹೇಳುವ ಪ್ರಕಾರ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ವೇಳೆ ವಲಸೆ ಕಾರ್ಮಿಕ ಕ್ರೀಡಾಂಗಣ ದೊಳಗೆ ಪ್ರವೇಶಿಸಿದಾಗ ಸಂಘಟಕರು ಅಥವಾ ಯಾರೋ ಆಕ್ಷೇಪಿಸಿದಾಗ ಅಲ್ಲಿ ಗಲಾಟೆಯಾಗಿದೆ. ಆತನ ಮೇಲೆ 10ರಿಂದ 20 ಜನರ ತಂಡ ಹಲ್ಲೆ ನಡೆಸಿದೆ. ಇದರಿಂದ ಆತ ಮೃತಪಟ್ಟಿದ್ದಾನೆ. ಹಲ್ಲೆ ನಡೆಸಿದವರು ಯಾರೆಂದು ಕ್ರಿಕೆಟ್ ಮ್ಯಾಚ್ ನೋಡಲು ಹೋದವರಲ್ಲಿ ಮಾಹಿತಿ ಇರುತ್ತದೆ. ಆರೋಪಿಗಳ ಹೆಸರುಗಳು ಸ್ಥಳೀಯರ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ಮೃತಪಟ್ಟ ವ್ಯಕ್ತಿ ಹೊರ ರಾಜ್ಯದವನು. ಅವನ ಗುರುತು ಪತ್ತೆಯಾಗಿಲ್ಲ. ಹೊರ ರಾಜ್ಯಗಳಿಂದ ಎಷ್ಟೋ ಜನರು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ. ಅವರಿಗೆ ಭದ್ರತೆ ಇಲ್ಲ. ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಿದರೆ ಹೇಗೆ? ಹೊರ ರಾಜ್ಯಗಳಿಂದ ಬಂದವರು ನಮ್ಮಂತೆ ಹೊಟ್ಟೆಪಾಡಿಗಾಗಿ ಕೆಲಸ ಮಾಡುವವರು. ಅವರನ್ನು ಮಾನವೀಯತೆಯಿಂದ ನೋಡಬೇಕು. ಅವರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಅಪರಿಚಿತ ವ್ವಕ್ತಿಯ ಸಾವಿನ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಒಂದು ವೇಳೆ ಆತನ ಕೊಲೆಯಾಗಿದ್ದರೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು ಮತ್ತು ತಪ್ಪಿತಸ್ಥರಿಗೆ ಕಾನೂನಡಿ ಸೂಕ್ತ ಶಿಕ್ಷೆಯಾಗಲು ಪೊಲೀಸ್ ಇಲಾಖೆ, ಸರಕಾರ ಕ್ರಮ ಕೈಗೊಳ್ಳಬೇಕು".
- ಲಾರೆನ್ಸ್ ಡಿಸೋಜ, ಅಧ್ಯಕ್ಷರು, ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ
ಅಪರಿಚಿತ ವ್ಯಕ್ತಿಯ ಸಾವಿನ ಬಗ್ಗೆ ಅನುಮಾನ: ಲುಕ್ ಔಟ್ ನೋಟಿಸ್ ಎ.27ರ ಸಂಜೆ 5:30ಕ್ಕೆ ಸಂತೋಷ್ ಯಾನೆ ನಟೇಶ್ ಕುಮಾರ್‌ರೊಂದಿಗೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಹಿಂಬದಿಯಲ್ಲಿರುವ ಮೈದಾನದ ಕಡೆಗೆ ಹೋಗುವ ಮಣ್ಣು ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅಂಗಾತ ಬಿದ್ದುಕೊಂಡಿದ್ದು, ಈ ವ್ಯಕ್ತಿಯ ಬಳಿ ಹೋದಾಗ ಮೃತಪಟ್ಟಿರುವುದು ಕಂಡು ಬಂದಿದೆ. ಸುಮಾರು 25ರಿಂದ 30 ವರ್ಷ ವಯಸ್ಸಿನ ಈ ವ್ಯಕ್ತಿಯು ರವಿವಾರ ಮಧ್ಯಾಹ್ನ 2:30ರಿಂದ ಸಂಜೆ 5:30ರ ಮಧ್ಯೆ ಮೃತಪಟ್ಟಿರಬಹುದು. ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಮೈಮೇಲೆ ಶರ್ಟ್ ಇಲ್ಲ ಈ ವ್ಯಕ್ತಿಯ ಮೈಮೇಲೆ ಅಲ್ಲಲ್ಲಿ ಮಣ್ಣು ಅಂಟಿಕೊಂಡಿದೆ. ಎದೆಯಿಂದ ಸ್ವಲ್ಪ ಮೇಲ್ಗಡೆ ಭುಜದ ಬಳಿ, ಕಾಲಿನ ಬೆರಳಿನ ಬಳಿ, ತುಟಿಯಲ್ಲಿ, ಬಲಕಣ್ಣಿನ ಕೆಳಗಡೆ ಅಲ್ಲಲ್ಲಿ ತರಚಿದ ಗಾಯಗಳು ಕಂಡುಬಂದಿದೆ. ಈ ವ್ಯಕ್ತಿಯು ಯಾವುದೋ ನಶೆಯಲ್ಲಿ ಬಿದ್ದು ಗಾಯಗಳುಂಟಾಗಿ ಅಥವಾ ಯಾರೊಂದಿಗೋ ಗಲಾಟೆ, ಉರುಡಾಟದಿಂದ ಗಾಯಗೊಂಡು ಸ್ಥಳದಲ್ಲಿ ಬಿದ್ದು ಮೃತಪಟ್ಟಿರ ಬಹುದು. ಈ ವ್ಯಕ್ತಿನ ಸಾವಿನ ಬಗ್ಗೆ ಅನುಮಾನ ಉಂಟಾಗುತ್ತಿದೆ ಎಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಹೊರಡಿಸಿದ ಲುಕ್ ಔಟ್ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. |