ಎ.19-20: ಶಿವಮೊಗ್ಗದಲ್ಲಿ ಮಲೆನಾಡ ಕಂಬಳ ಕ್ರೀಡೋತ್ಸವ
ಮಂಗಳೂರು: ಎಪ್ರಿಲ್ 19 ಮತ್ತು20 ರಂದು ಮಲೆನಾಡ ಕಂಬಳ ಕ್ರೀಡೋತ್ಸವ ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಜಿಲ್ಲೆಯ ಕಂಬಳ ಸಮಿತಿ, ರೋಟರಿ ಇಂಟರ್ ನ್ಯಾಶನಲ್ ಹಾಗೂ ಶಿವಮೊಗ್ಗ ಕಂಬಳ ಸಮಿತಿ ಇವರ ಸಹಯೋಗದೊಂದಿಗೆ ಆಯೋಜಿಸಿದ ಮಲೆನಾಡ ಕಂಬಳ ಕ್ರೀಡೋತ್ಸವದ ಬಗ್ಗೆ ಸೋಮವಾರ ನಗರದ ಸೆಬಾಸ್ಟಿಯನ್ ಸಭಾಂಗಣದಲ್ಲಿಂದು ಹಮ್ಮಿಕೊಂಡ ಸುದ್ದಿ ಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕರಾವಳಿಯ ಕೃಷಿ ಪ್ರಧಾನ ಜಿಲ್ಲೆಗಳ ಪ್ರಮುಖ ಜಾನಪದ ಕ್ರೀಡೆಯಾದ ಕಂಬಳವನ್ನು ಈ ಬಾರಿ ಶಿವಮೊಗ್ಗದಲ್ಲಿ ಹಮ್ಮಿ ಕೊಳ್ಳಲಾಗಿದೆ. ಕಂಬಳ ದಲ್ಲಿ ಹಿಂದು,ಮುಸ್ಲಿಂ, ಕ್ರೈಸ್ತರು ಎಂಬ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ ಈ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ಮಾದರಿ ಕಂಬಳ ನಡೆಸಲು ಸಹಕಾರ ನೀಡಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಶಿವಮೊಗ್ಗದ ರಾಜಕೀಯ ಮುಖಂಡ ಮಾಜಿ ಸಚಿವ ಕೆ.ಈಶ್ವರಪ್ಪ ಅವರು ಮಲೆನಾಡ ಕಂಬಳ ಕ್ರೀಡೋತ್ಸವ ನಡೆಸಲು ಹೆಚ್ಚಿನ ಮುತುವರ್ಜಿವಹಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್ ಕೋಟ್ಯಾನ್, ರೋಟರಿ ಗವರ್ನರ್ ವಿಕ್ರಮ್ ದತ್ತ್, ಕಂಬಳ ಸಮಿತಿಯ ಸಂಘಟಕರಾದ ಜಗನ್ನಾಥ ಕೋಟೆ,ಪಿ.ಆರ್ .ಶೆಟ್ಟಿ, ಅರುಣ್ ಶೆಟ್ಟಿ,ಮಮತಾ ಶೆಟ್ಟಿ, ಅವಿಲ್ ವೇಗಸ್, ರಾಜಗೋಪಾಲ ರೈ,ಎಲ್ಯಾಸ್ ಸ್ಯಾಂಟ್ಕಿಸ್ ,ಪ್ರಕಾಶ್ ಕಾರಂತ್,ಶಿವಮೊಗ್ಗ ಕಂಬಳ ಸಮಿತಿಯ ಅಧ್ಯಕ್ಷ ಲೋಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.