ಆಯುಷ್ ಕೋರ್ಸ್ ಶುಲ್ಕ ಹೆಚ್ಚಳಕ್ಕೆ ಎಐಡಿಎಸ್‌ಒ ಖಂಡನೆ
ಮಂಗಳೂರು: ಆಯುಷ್ ಕೋರ್ಸ್ ಶುಲ್ಕವನ್ನು ಏಕಾಏಕಿ ಶೇ. ೨೫ರಷ್ಟು ಹೆಚ್ಚಿಸಿರುವ ರಾಜ್ಯ ಸರಕಾರದ ನಡೆಯನ್ನು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.
ಕೊರೋನದ ನೆಪವೊಡ್ಡಿ ಕಳೆದ 5 ವರ್ಷಗಳಿಂದ ಶುಲ್ಕಹೆಚ್ಚಳ ವಾಗಿಲ್ಲವೆಂದು, ಈ ವರ್ಷ ಶುಲ್ಕ ಹೆಚ್ಚಿಸಬೇಕೆಂದು ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳು ಸರಕಾರಕ್ಕೆ ಮನವಿ ಸಲ್ಲಿಸಿದ ಮೇರೆಗೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದೆ. ಸರಕಾರದ ಈ ನಡೆ ಖಂಡನೀಯ. ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ಬರುವ ಕೋರ್ಸ್ ಶುಲ್ಕವನ್ನು 60,000ದಿಂದ 75,000 ರೂ.ಗೆ ಏರಿಸಲಾಗಿದೆ. ಈ ರೀತಿ ಹೆಚ್ಚಿಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣದ ಕನಸಿಗೆ ತಣ್ಣೀರೆ ರಚಿರುವುದು ಸರಕಾರದ ವಿದ್ಯಾರ್ಥಿ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ.
ಈಗಾಗಲೇ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಸಾಮಾನ್ಯರಿಗೆ ಇದು ಗಾಯದ ಮೇಲೆ ಬರೆ ಎಳೆದಂತಿದೆ. ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ನೆರವಾಗಬೇಕಾದ ಸರಕಾರವು, ಖಾಸಗಿ ಲಾಬಿಗೆ ಮಣಿದು ಶುಲ್ಕವನ್ನು ಹೆಚ್ಚಿಸಿರುವುದು ಅಕ್ಷಮ್ಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರಕಾರ ತಕ್ಷಣ ಇದನ್ನು ವಾಪಸ್ ಪಡೆಯಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅಜಯ್ ಕಾಮತ್ ಒತ್ತಾಯಿಸಿದ್ದಾರೆ.