ಬೀಡಿ ಕಾರ್ಮಿಕರ ತುಟ್ಟಿಭತ್ತೆ ಜಾರಿಗೊಳಿಸಲು ಎಐಟಿಯುಸಿ ಮನವಿ

ಮಂಗಳೂರು, ಜು.23: ರಾಜ್ಯದ ಬೀಡಿ ಕಾರ್ಮಿಕರಿಗೆ 2015ರಿಂದ 2018ರವರೆಗಿನ ಪ್ರತೀ ಸಾವಿರ ಬೀಡಿಗಳ ಮೇಲೆ ಪಾವತಿಸಬೇಕಾದ 12.75 ರೂ. ತುಟ್ಟಿಭತ್ತೆಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಎಐಟಿಯುಸಿ ನೇತೃತ್ವದ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್‌ನ ಮುಖಂಡರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ಗೆ ಮನವಿ ಸಲ್ಲಿಸಿದ್ದಾರೆ.
ತುಟ್ಟಿ ಭತ್ತೆ ಪಾವತಿಸಲು ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದರೂ ಕೂಡ ಬೀಡಿ ಕಂಪೆನಿಗಳ ಮಾಲಕರು ಜಾರಿ ಮಾಡದೆ ಸಂಧಾನ ಮಾತುಕತೆಗಾಗಿ ಸರಕಾರವನ್ನು ಒತ್ತಾಯಿಸುತ್ತಿರುವುದು ಖಂಡನೀಯ. 2018ರಿಂದ ಜಾರಿ ಮಾಡಬೇಕಾದ 210 ರೂ. ಕನಿಷ್ಟ ಕೂಲಿಯನ್ನೂ ನೀಡದೆ ಪ್ರತೀ ಸಾವಿರ ಬೀಡಿಗಳ ಮೇಲೆ 39.98 ರೂ. ನೀಡದೆ ಬೀಡಿ ಮಾಲಕರು ವಂಚಿಸುತ್ತಿರುವುದು ಖಂಡನೀಯ. ಸರಕಾರ ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಬ. ಶೇಖರ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ವಿ. ರಾವ್, ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ. ಕುಕ್ಯಾನ್, ಎಸ್‌ಕೆ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಿ.ಎಸ್.ಬೇರಿಂಜ, ಎಐಟಿಯುಸಿ ಜಿಲ್ಲಾ ಜೊತೆ ಕಾರ್ಯದರ್ಶಿ ಎಂ. ಕರುಣಾಕರ್ ನಿಯೋಗದಲ್ಲಿದ್ದರು.