ತುಟ್ಟಿಭತ್ತೆ ಜಾರಿಗೆ ಆಗ್ರಹಿಸಿ ಎಐಟಿಯುಸಿ ಹಕ್ಕೊತ್ತಾಯ ಚಳವಳಿ

ಮಂಗಳೂರು, ಜು.18: ಬೀಡಿ ಕಾರ್ಮಿಕರಿಗೆ ಘೋಷಿಸಲಾದ ತುಟ್ಟಿಭತ್ತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಕೆ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ದ.ಕ ಮತ್ತು ಉಡುಪಿ ಜಿಲ್ಲೆಯಾದ್ಯಂತ ಆಗಸ್ಟ್ 1ರವರೆಗೆ ನಡೆಸುವ ಹಕ್ಕೊತ್ತಾಯ ಚಳವಳಿಗೆ ಬೆಂಬಲವಾಗಿ ಮಂಗಳೂರಿನ ಬೀಡಿ ಆ್ಯಂಡ್ ಟೊಬೆಕ್ಕೊ ಲೇಬರ್ ಯೂನಿಯನ್ ವತಿಯಿಂದ ಸುರತ್ಕಲ್‌ನ ಭಾರತ್ ಬೀಡಿ ಮತ್ತು ಕಾನದ ಗಣೇಶ್ ಬೀಡಿ ಸಂಸ್ಥೆಗಳ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ಸಲ್ಲಿಸಿತು.
2015ರ ಎಪ್ರಿಲ್ 1ರಿಂದ 2016ರ ಮಾರ್ಚ್ 31ರವರೆಗೆ ಪ್ರತೀ ಸಾವಿರ ಬೀಡಿಗಳಿಗೆ 12.75 ರೂ. ತುಟ್ಟಿಭತ್ತೆ ಪಾವತಿಸಲು ರಾಜ್ಯ ಸರಕಾರ ಅಧಿ ಸೂಚನೆ ಹೊರಡಿಸಿತ್ತು. ಆದರೆ ಬೀಡಿ ಕೈಗಾರಿಕೆ ನಷ್ಟದಲ್ಲಿದೆ ಎಂದು ಮಾಲಕರ ವಾದಕ್ಕೆ ಸ್ಪಂದಿಸಿದ ಸರಕಾರ ಒಂದು ವರ್ಷದ ಮಟ್ಟಿಗೆ ತುಟ್ಟಿಭತ್ತೆ ಪಾವತಿಸುವುದು ಬೇಡವೆಂದು ವಿನಾಯಿತಿ ನೀಡಿತ್ತು. ಆದರೆ ಕಾರ್ಮಿಕ ಸಂಘಟನೆಯ ಮಧ್ಯ ಪ್ರವೇಶದಿಂದಾಗಿ ವಿನಾಯಿತಿ ನೀಡಿದ ಆದೇಶವನ್ನು ಹಿಂಪಡೆದಿತ್ತು. ಬೀಡಿ ಮಾಲಕರು 2015ರ ಎಪ್ರಿಲ್‌ನಿಂದ 2018ರ ಮಾರ್ಚ್ ವರೆಗಿನ ತುಟ್ಟಿಭತ್ತೆಯನ್ನು ಕಾರ್ಮಿಕರಿಗೆ ಪಾವತಿಸಲಿಲ್ಲ. ಅಲ್ಲದೆ ಮಾಲಕರು ಇದರ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಪಾವತಿಸಲು ಸಾಧ್ಯಲ್ಲವೆಂದು ವಾದಿಸಿದ್ದರು. ನ್ಯಾಯಾಲಯವು ಸರಕಾರದ ಅಧಿಸೂಚನೆಯನ್ನು ಎತ್ತಿ ಹಿಡಿದಿತ್ತು. ಹಾಗಾಗಿ ಬೀಡಿ ಮಾಲಕರು ಮೂರು ವರ್ಷಗಳ ಅವಧಿಗೆ ಪ್ರತೀ ಸಾವಿರ ಬೀಡಿಗಳಿಗೆ 12.75 ರೂ. ಪಾವತಿಸಬೇಕು. 2018ರ ಎಪ್ರಿಲ್ 1ರಿಂದ ಪ್ರತೀ ಸಾವಿರ ಬೀಡಿಗಳ ಮೇಲೆ 210 ರೂ. ಕನಿಷ್ಟ ಕೂಲಿಯನ್ನೂ ಪಾವತಿಸದಿರುವುದರಿಂದ ಪ್ರಸ್ತುತ 39.98 ರೂ.ನಷ್ಟು ಕಡಿಮೆ ಮಜೂರಿಯಿಂದ ಕಾರ್ಮಿಕರು ವಂಚಿತರಾಗಿದ್ದಾರೆ. ಈ ಕನಿಷ್ಟ ಕೂಲಿಯನ್ನೂ ಪಾವತಿಸಲು ಸಾಧ್ಯವಿಲ್ಲವೆಂದು ಮಾಲಕರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಮೂಲಕ ಕೇಳಿಕೊಂಡಿರುವುದು ಖಂಡನೀಯ ಎಂದು ಎಐಟಿಯುಸಿ ಹೇಳಿಕೆಯಲ್ಲಿ ತಿಳಿಸಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಮಾಜಿ ಕಾರ್ಯದರ್ಶಿ ವಿ.ಕುಕ್ಯಾನ್, ಎಸ್‌ಕೆ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಅಧ್ಯಕ್ಷ ವಿ.ಎಸ್. ಬೇರಿಂಜ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಫೆಡರೇಶನ್ ಹಾಗೂ ಯೂನಿಯನ್‌ನ ಪದಾಧಿಕಾರಿಗಳಾದ ಸುಲೋಚನ ಕವತ್ತಾರು, ತಿಮ್ಮಪ್ಪಕಾವೂರು, ಕರುಣಾಕರ್ ಮಾರಿಪಲ್ಲ, ಶಮಿತಾ ಬಿಸಿ ರೋಡ್ ಭಾಗವಹಿಸಿದ್ದರು.