ಪಿಡಬ್ಲ್ಯೂಡಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಆರೋಪ: ಬಂದ್ ಮಾಡಿದ್ದ ಬಜ್ಪೆ ಹೆದ್ದಾರಿ ತೆರವು
ಬಜ್ಪೆ: ಇಲ್ಲಿನ ಅವೆಜ್ಞಾನಿಕ ಕಾಮಗಾರಿಯಿಂದಾಗಿ ಬಂದ್ ಮಾಡಲಾಗಿದ್ದ ಪೇಟೆಯ ಮುಖ್ಯ ರಸ್ತೆಯನ್ನು ಬಜ್ಪೆ ನಾಗರಿಕರ ಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಜ್ಪೆ ನಾಗರಿಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, ಬಜ್ಪೆ ಚೆಕ್ ಪೋಸ್ಟ್ ನಿಂದ ನಿಸರ್ಗ ಹೋಟೆಲ್ ವರೆಗೆ ವಾಹನಗಳು ಮುಕ್ತವಾಗಿ ಓಡಾಡದಂತರ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಮಣ್ಣು, ಕಲ್ಲುಗಳನ್ನು ರಾಶಿ ಹಾಕಿ ಬಂದ್ ಮಾಡಿದ್ದರು.
ಬಂದ್ ಮಾಡಿರುವ ರಸ್ತೆಯನ್ನು ತೆರವು ಗೊಳಿಸಿ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡುವಂತೆ ನೂರಾರು ಬಾರಿ ಸಾರ್ವಜನಿಕರು ಪಟ್ಟಣ ಪಂಚಾಯತ್, ಪಿಡಬ್ಲ್ಯೂಡಿ ಇಲಾಖೆಗೆ ಮನವಿಗಳನ್ನು ಸಲ್ಲಿಸಿ ಒತ್ತಾಯಿಸಿದ್ದರು. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಪಿಡಬ್ಲ್ಯೂಡಿ ಅಧಿಕಾರಿಗಳು ಅರ್ಧಂಬರ್ಧ ಕಾಮಗಾರಿಗಳನ್ನು ನಡೆಸಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದೆ ತಡೆ ಹಿಡಿದಿದ್ದರು. ಸಾರ್ವಜನಿಕರ ಮನವಿಯ ಮೇರೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯು ಬಜ್ಪೆ ಪ.ಪಂ.ಮತ್ತು ಪಿಡಬ್ಲ್ಯೂ ಇಲಾಖೆಗೆ ಮನವಿ ಸಲ್ಲಿಸಿತ್ತು. ಅದಕ್ಕೂ ಅಧಿಕಾರಿಗಳು ಬಗ್ಗದೇ ಇದ್ದಾಗ ಸೋಮವಾರ ನಾಗರಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನೇರ ಕಾರ್ಯಾಚರಣೆಗೆ ಇಳಿಯ ಬೇಕಾಯಿತು. ವೇದಿಕೆ ಜೊತೆ ಜೋಡಿಸಿದ ಸಾರ್ವಜನಿಕರು ಸಹಕಾರ ನೀಡಿದರೆ, ಜೆಸಿಬಿಗಳ ಮೂಲಕ ಬಂದ್ ಮಾಡಿದ್ದ ರಸ್ತೆಗಳನ್ನು ತೆರವು ಗೊಳಿಸಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಸಿರಾಜ್ ಬಜ್ಪೆ ಹೇಳಿದರು.
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಈ ಕ್ರಮವನ್ನು ಬಜ್ಪೆಯ ನಾಗರೀಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.