ಅನುಚಿತವಾಗಿ ವರ್ತಿಸಿದ ಆರೋಪ: ಕಾರ್ಪೊರೇಟರ್ ವಿರುದ್ಧ ಕ್ರಮಕ್ಕೆ ಡಿವೈಎಫ್‌ಐ ಒತ್ತಾಯ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಉರ್ವಸ್ಟೋರ್ ಸುಂಕದಕಟ್ಟೆಯ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ದೀರ್ಘ ಕಾಲದಿಂದ ಅನುಭವಿಸುತ್ತಿದ್ದಾರೆ. ಅದನ್ನು ಪರಿಹರಿಸಬೇಕಾದ ಸ್ಥಳೀಯ ಕಾರ್ಪೊರೇಟರ್ ತನ್ನ ಜವಾಬ್ದಾರಿಯನ್ನು ಮರೆತು ನಾಗರಿಕರ ಮೇಲೆಯೇ ಎಗರಾಡಿ ಅಸಂಬದ್ಧ ಮಾತುಗಳನ್ನಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಡಿವೈಎಫ್‌ಐ ನೇತೃತ್ವದಲ್ಲಿ ಮನಪಾ ಮೇಯರ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ತಲೆದೋರಿದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕೆಂದು ಮನಪಾ ಮೇಯರ್, ಆಯುಕ್ತರು, ಶಾಸಕರಿಗೆ ಮನವಿ ಮಾಡಿದ್ದೇ ಅಪರಾಧ ಎಂಬಂತೆ ಪ್ರತಿ ಮನೆಗೆ ಹೋಗಿ ನೀರಿನ ಸಂಪರ್ಕ ಕಡಿತಗೊಳಿಸುವೆ, ದಲಿತರಿಗೆ ನೀಡಿದ ಸವಲತ್ತುಗಳನ್ನು ನಿಲ್ಲಿಸುವೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿರುವುದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್‌ಐ ಒತ್ತಾಯಿಸಿದೆ.
ಸಿಪಿಎಂ ಜಿಲ್ಲಾ ಮುಖಂಡ ಸುನಿಲ್ ಕುಮಾರ್ ಬಜಾಲ್, ಡಿವೈಎಫ್‌ಐ ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ಪ್ರಶಾಂತ್ ಎಂ.ಬಿ, ಪ್ರದೀಪ್, ಸುಖೇಶ್, ಪ್ರಶಾಂತ್ ಆಚಾರ್ಯ, ಸ್ಥಳೀಯ ಹಿರಿಯ ನಾಗರಿಕರಾದ ಪದ್ಮನಾಭ ಕುಲಾಲ್, ತಮ್ಮಣ್ಣ ಮಬೆನ್, ಗಂಗಾಧರ್, ರಾಮ ಪೂಜಾರಿ, ಕುಶಲ, ದಿವ್ಯಾ, ಶಿಲ್ಪಾ, ಸುರೇಖಾ, ವಂದನಾ, ನಾಗವೇಣಿ, ಸರೋಜಾ, ನೆಬಿಸಾ ಬಾನು, ಸೂಕ್ಷ್ಮ ಮತ್ತಿತರರು ನಿಯೋಗದಲ್ಲಿದ್ದರು.