ರೋಗಿಗಳ ಆರೈಕೆಯ ಜೊತೆಗೆ ಕುಟುಂಬಸ್ಥರ ವಿಶ್ವಾಸ ಅಗತ್ಯ : ಡಾ.ಸತೀಶ್ ಕುಮಾರ್ ಭಂಡಾರಿ
ಕೊಣಾಜೆ: ವೈದ್ಯರು ರೋಗಿಗಳ ಆರೈಕೆಗಳ ಜೊತೆಗೆ ಅವರ ಕುಟುಂಬಸ್ಥರ ಜೊತೆಗೆ ವಿಶ್ವಾಸವಿರಿಸಿ ಸಮಸ್ಯೆಗಳನ್ನು ಪರಿಹರಿಸುವಂತಹ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮಾಡಬೇಕಿದೆ ಎಂದು ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯದ ಐಎಸ್‌ಆರ್ ಹಾಗೂ ಸಿಆರ್‌ಎಲ್ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಅವರು ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮತ್ತು ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸಿ ಕಾಲೇಜು ಆಶ್ರಯದಲ್ಲಿ ಸೆ.17 ರಿಂದ 25ರ ವರೆಗೆ ನಡೆಯಲಿರುವ ರೋಗಿಗಳ ಸುರಕ್ಷತಾ ಹಾಗೂ 3ನೇ ರಾಷ್ಟ್ರಮಟ್ಟದ ಔಷಧಗಳ ಎಚ್ಚರಿಕೆ ಕುರಿತ ಒಂದು ವಾರದ ನಿರಂತರ ಕಾರ್ಯಕ್ರಮವನ್ನು ಆಸ್ಪತ್ರೆಯ ಗ್ಲಾಸ್ ಹೌಸ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.
ರೋಗಿಗಳ ಆರೈಕೆಯ ಜೊತೆಗೆ ಅವರ ಕುಟುಂಬಸ್ಥರೊಂದಿಗೆ ಆಸ್ಪತ್ರೆ ಆಡಳಿತ ಹಾಗೂ ವೈದ್ಯರು ವಿಶ್ವಾಸ ಇರಿಸುವ ಕಾರ್ಯಗಳನ್ನು ಮಾಡಬೇಕಿದೆ. ವೈದ್ಯರ ವಿರುದ್ಧ ದಾವೆ, ಆರೋಪಗಳು ಹೆಚ್ಚಾಗಿ ರೋಗಿಗಳ ಹಾಗೂ ಅವರ ಕುಟುಂಬ ಸ್ಥರಿಗೆ ಅರಿವಿಲ್ಲದೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ವಿಚಾರಗಳನ್ನು ಪಾರದರ್ಶಕವಾಗಿ ರೋಗಿಗಳ ಕುಟುಂಬ ಸ್ಥರ ಅರಿವಿಗೆ ತರುವ ಮೂಲಕ ಸಮಸ್ಯೆಗಳ ಪರಿಹಾರ ಸಾಧ್ಯ. ಆಸ್ಪತ್ರೆ ನಿಯಮಾವಳಿಗಳ ಹಾಗೂ ವೈದ್ಯರಿಗೆ ಇರುವ ಕಾನೂನು ಚೌಕಟ್ಟಿನ ನೀತಿಗಳ ಅರಿವು ಮೂಡಿಸುವ ಅಗತ್ಯತೆ ಇದೆ. ರೋಗಿ ಜೊತೆಗೆ ಸ್ನೇಹದೊಂದಿಗೆ ಕಾರ್ಯ ನಿರ್ವಹಿಸುವ ಅಗತ್ಯತೆ ಇಡೀ ಆಸ್ಪತ್ರೆಯ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭ ವೈಸ್ ಡೀನ್ ಗಳಾದ ಡಾ.ಜೆ.ಪಿ ಶೆಟ್ಟಿ, ಡಾ.ಅಮೃತ್ ಮಿರಾಜ್ಕರ್, ಅನೆಸ್ತೀಷಿಯಾ ವಿಭಾಗ ಮುಖ್ಯಸ್ಥ ಡಾ. ಶ್ರೀಪಾದ್ ಮೆಹಂದಲೆ, ನರ್ಸಿಂಗ್ ವಿಭಾಗದ ಅಧೀಕ್ಷಕಿ ಲೆ| ಎಲಿಜಬೆತ್, ಫಾರ್ಮಸಿ ಕಾಲೇಜಿನ ಡಾ| ಉದಯ್ ಉಪಸ್ಥಿತರಿದ್ದರು.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್ ಶೆಟ್ಟಿ ಸ್ವಾಗತಿಸಿದರು. ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಯಸ್ ಶಾಸ್ತ್ರಿ ವಂದಿಸಿದರು. ರಂಝಿಯಾ ನಿರೂಪಿಸಿದರು.