ಅಲೋಶಿಯಸ್‌ಗೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 58ನೆ ಸ್ಥಾನ: ಫಾ. ಡಾ. ಪ್ರವೀಣ್ ಮಾರ್ಟಿಸ್
"ಹೊಸ ಕೋರ್ಸ್‌ಗಳ ಆರಂಭಕ್ಕೆ ಚಿಂತನೆ"
ಮಂಗಳೂರು: ಪ್ರಸಕ್ತ ಸಾಲಿನಲ್ಲಿ ವಿವಿಯಾಗಿ ಉನ್ನತೀಕರಣಗೊಂಡಿರುವ ನಗರದ ಸಂತ ಅಲೋಶಿಯಸ್ ಕಾಲೇಜು ಭಾರತ ಸರಕಾರದ ಶಿಕ್ಷಣ ಸಚಿವಾಲಯ ನಡೆಸಿದ ಎನ್‌ಐಆರ್‌ಎಫ್ (ನ್ಯಾಷನಲ್ ಇನ್‌ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಮಿಂಗ್) ಸಮೀಕ್ಷೆ ಮತ್ತು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಲ್ಲಿ 58ನೆ ಸ್ಥಾನವನ್ನು ಗಳಿಸಿದೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್, ದೇಶದ 47,000 ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು 58ನೆ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಇದೀಗ ವಿಶ್ವವಿದ್ಯಾನಿಲಯವಾಗಿ ಪರಿಗಣಿಸಲ್ಪಟ್ಟಿರುವ ಸಂಸ್ಥೆಯಲ್ಲಿ ಸ್ಕೂಲ್ ಆಫ್ ಎಜುಕೇಶನ್, ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ವೃತ್ತಿಪರ ಕಾರ್ಯಕ್ರಮಗಳನ್ನು ಅಳವಡಿಸಲು ಚಿಂತಿಸಲಾಗಿದೆ. ಈ ಮೂಲಕ ಆರ್ಥಿಕವಾಗಿ ಬಡ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಕಡಿಮೆ ಶುಲ್ಕದ ಉನ್ನತ ಶಿಕ್ಷಣ ನೀಡಲು ಸಂಸ್ಥೆ ಕಟಿಬದ್ಧವಾಗಿದೆ ಎಂದರು.
ಭಾರತ ಸರಕಾರದ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ಎನ್‌ಐಆರ್‌ಎಫ್ ಸಮೀಕ್ಷೆಯು ಸಂಸ್ಥೆಯಲ್ಲಿ ನೀಡುವ ಶಿಕ್ಷಣದ ಗುಣಮಟ್ಟ ಮತ್ತು ವಿಮರ್ಶಾತ್ಮಕ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. ಇದಕಕಾಗಿ ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶಗಳು, ಗ್ರಹಿಕೆ, ಸಾಮಾಜಿಕ ಕಾಳಜಿ ಮತ್ತು ಒಳಗೊಳ್ಳುವಿಕೆ ಮೊದಲಾದ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.
ಸಂಸ್ಥೆಯು ಕಳೆದ ವರ್ಷ ಈ ಸಮೀಕ್ಷೆಯಲ್ಲಿ 80ನೆ ಸಆ್ನ ಪಡೆದಿತ್ತು. ಇಂದು ವಿಶ್ವವಿದ್ಯಾನಿಲಯವೆಂದು ಪರಿಗಣಿಸಲ್ಪಟ್ಟಿರುವ ಸಂಸ್ಥೆಯು ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. 145 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಗೆ ದೊರಕಿರುವ ಈ ಶ್ರೇಯಾಂಕ ಸಂಸ್ಥೆಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳ ಉನ್ನತ ಮಟ್ಟದ ಸಾಧನೆಗೆ ಸಾಕ್ಷಿ ಎಂದವರು ಹೇಳಿದರು.
ಕಾಲೇಜಿನ ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್ ಮಾತನಾಡಿ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವು ತನ್ನ ದಾಖಲಾತಿಯನು ಗಣನೀಯ ಸಂಖ್ಯೆಯಲ್ಲಿ ಹೆಚ್ಚಿಸಲು ಯೋಜಿಸಿದೆ. ಇದರಿಂದ ಪ್ರಾದೇಶಿಕ, ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ಯಾರ್ಥಗಳನ್ನು ಆಕರ್ಷಿಸಿ ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸುವ ಧ್ಯೇಯವನ್ನು ಹೊಂದಿದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಸಂತ ಅಲೋಶಿಯಸ್ ವಿವಿಯ ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್, ಐಕ್ಯೂಎಸಿ ಸಂಯೋಜಕ ಸೋನಲ್ ಲೋಬೋ, ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಕಲಾ ಉಪಸ್ಥಿತರಿದ್ದರು.